ನಾನೆಂಬ ಪರಿಮಳದ ಹಾದಿಯಲಿ: ನೀನೊಬ್ಬಳು ಗಂಡಾಗಿ ಹುಟ್ಟಿದ್ರೆ ನನ್ನ ಎದೆ ಬೇಯುತಿತ್ತು

‘ನಮ್ಮ ಏರಿಯಾ ಪೂರ್ತಿ ವಿದ್ವಾಂಸರು, ಮಠಾಧಿಪತಿಗಳು, ಸಂಸ್ಕೃತ ಪಂಡಿತರು ಇದ್ದರು. ನಾನು ಶಾಲೆಗೆ ಹೋಗುವ ಹೊತ್ತಿಗೆ ಕಾಣಿಸಿಕೊಂಡರೆ ಸರಕ್ಕನೇ ಒಳಗೆ ಹೋಗಿಬಿಡುವುದು, ನಾನು ಹೊರಬಿದ್ದ ಮೇಲೆ ನಡೆದು ಹೋದಲ್ಲೆಲ್ಲ ನೀರು ಉಗ್ಗುವದು, ಏನಾದರೂ ಕುಡಿಯಲು ಕೊಟ್ಟರೆ ಲೋಟ ತೊಳೆದಿಡಲು ಹೇಳುವುದು, ಊಟಕ್ಕೆ ಕುಳಿತರೆ ನೋಡಿ ಪಂಕ್ತಿ ಬದಲಾಯಿಸುವದು, ನನಗೊಬ್ಬಳಿಗೇ ದೂರದಿಂದ ಬಡಿಸುವುದು, ಪ್ರತ್ಯೇಕವಾಗಿ ಎಲೆ ಹಾಕುವುದು...’ ಕೃಷ್ಣಾ ಕೌಲಗಿ

ನಾನೆಂಬ ಪರಿಮಳದ ಹಾದಿಯಲಿ: ನೀನೊಬ್ಬಳು ಗಂಡಾಗಿ ಹುಟ್ಟಿದ್ರೆ ನನ್ನ ಎದೆ ಬೇಯುತಿತ್ತು
Follow us
|

Updated on:Feb 05, 2021 | 4:29 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಧಾರವಾಡದ ಮಾಳಮಡ್ಡಿಯ ಕೆ. ಇ. ಬೋರ್ಡ್​ ಹೈಸ್ಕೂಲಿನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿದ್ದ ಕೃಷ್ಣಾ ಕೌಲಗಿ ಅವರು ಸಾಕಷ್ಟನ್ನು ಒಳಗಿಟ್ಟುಕೊಂಡು ಒಂದಿಷ್ಟನ್ನೇ ನಿಮ್ಮ ಮುಂದಿಲ್ಲಿ ಬಿಚ್ಚಿಟ್ಟಿದ್ದಾರೆ.

‘ನೀನೊಬ್ಬಳು ಗಂಡಾಗಿ ಹುಟ್ಟಿದ್ರೆ ನನ್ನ ಎದೆ ಬೇಯುತಿತ್ತು.’ ಇದು ನನ್ನನ್ನು ಕುರಿತು ನಮ್ಮಪ್ಪ ಸದಾ ಹೇಳುವ ಮಾತಾಗಿತ್ತು. ಕಾರಣ ಇಷ್ಟೇ ಆಲಯವನ್ನು ಬಯಲಾಗಿ, ಬಯಲನ್ನು ಆಲಯವನ್ನಾಗಿ ಮಾಡಿಕೊಂಡು ಯಾವುದನ್ನೂ ಗಂಭೀರವಾಗಿ ಪರಿಗಣಿಸದೇ  ನಾನೇ ನಾನಾಗಿ ನನ್ನದೇ ಜಗತ್ತಿನಲ್ಲಿ ನನಗೆ ಬೇಕಾದಂತೆ ಬದುಕಿದ ನನ್ನ ರೀತಿ.

ಅದಕ್ಕೆ ಕಾರಣವಿತ್ತು. ನಮ್ಮಪ್ಪನ ಹನ್ನೆರಡು ಮಕ್ಕಳಲ್ಲಿ ಐದು ಹೋಗಿ ಉಳಿದ ಏಳರಲ್ಲಿ ಮಧ್ಯಮಳು ನಾನು. ಹಿರಿಯ ಮಗಳ ಜವಾಬ್ದಾರಿಯೂ ಇರಲಿಲ್ಲ. ಚಿಕ್ಕವಳೆಂಬ ಪ್ರೀತಿ ಅಕ್ಕರಾಸ್ಥೆಯೂ ಸಿಗಲಿಲ್ಲ. ಆಟದಲ್ಲಿ ‘ಹಾಲುಂಡಿ’ ಅಂತಾರಲ್ಲಾ, ಥೇಟ್ ಹಾಗೆಯೇ ‘ಲೆಕ್ಕಕ್ಕುಂಟು ಆಟಕ್ಕಿಲ್ಲ’ ಎಂಬ ರೀತಿ. ಇದು ನನಗೆ ವರದಾನವಾಯಿತು. ಪುಟ್ಟ ಹಳ್ಳಿಯಲ್ಲಿ ‘ಇದು ನನ್ನದು ಅದು ಅವರದು’ ಎಂದಿರುವದಿಲ್ಲ. ಎಲ್ಲವೂ ಎಲ್ಲರದೂ ಎಂಬಂತಿರುವುದೇ ಹೆಚ್ಚು. ಹಚ್ಚಗಿದ್ದಲ್ಲಿ ಮೇದು, ಬೆಚ್ಚಗಿದ್ದಲ್ಲಿ ಮಲಗಿ ಗೆಳತಿಯರ ಮನೆಗಳಲ್ಲೇ  ಬಾಲ್ಯ ಕಳೆದ ಅಪರೂಪದ ಭಾಗ್ಯ ನನ್ನದು. ಬಹಳಷ್ಟು ಹುಡುಗ-ಹುಡುಗಿಯರು ಹಾಗೇ ಇದ್ದರು ಎಂಬಂತೆ  ನೆನಪು ನನ್ನದು.

ಹೈಸ್ಕೂಲ್ ಮುಗಿಸಿ ಓದಲೆಂದು ಧಾರವಾಡದ ನೆಲಕ್ಕೆ ಬಂದರೂ ಅದೂ ‘ಹಳೆಯ ಧಾರವಾಡ’ ಹೊಸಯಲ್ಲಾಪುರ. ‘ಹೊಸ’ ಎಂಬುದು ಹೆಸರಿನಲ್ಲಷ್ಟೇ… ಉಳಿದಂತೆ ಎಲ್ಲವೂ ಹಳೆಯದೇ. ಹೀಗಾಗಿ ಪಟ್ಟಣಕ್ಕೆ ಬಂದರೂ ಹಳ್ಳಿ ಹೃದಯ. ಹೇಗೋ ವರ್ಷವರ್ಷವೂ ಪಾಸಾಗಿ ಪದವಿ ಪಡೆದೆ. ವರ್ಷವೆನ್ನುವಷ್ಟರಲ್ಲಿ ಮದುವೆಯೂ ಆಯಿತು. ಆ ನಂತರ ಶುರುವಾಯಿತು ನೋಡಿ ‘ಯುದ್ಧ ಪರ್ವ’. ಅಲ್ಲಿಯವರೆಗಿನ ಸುಖದ ಲೆಕ್ಕವಿಟ್ಟು  ಸುಂಕ ಬೇಡತೊಡಗಿತು ಬದುಕು. ಅದೂ ಇಪ್ಪತೈದರ ಯುವತಿ ಭರಿಸಲಾರದಷ್ಟು. ಮದುವೆಯಾದ ಎರಡು ವರ್ಷಕ್ಕೇನೇ ನನ್ನವರಿಗೆ ಹೃದಯಾಘಾತವಾಯ್ತು. ಆಗ ವೈದ್ಯಕೀಯ ಸೌಲಭ್ಯಗಳು ಅಷ್ಟಾಗಿ

ಇರಲಿಲ್ಲ. ಸಾಧ್ಯವಿದ್ದ ಎಲ್ಲಾ ಉಪಚಾರವಾದರೂ ಆಗಾಗ ಅವರಿಗೆ ತೊಂದರೆಯಾಗುತ್ತಲೇ ಇದ್ದು ನಾನು ಮೂವತ್ತಾರು ದಾಟುತ್ತಲೇ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಹೋದವರ ಮುಖ ನಾನು, ನನ್ನ ಮಕ್ಕಳು  ತಿರುಗಿ ನೋಡಲಾಗಲೇ ಇಲ್ಲ. ಮುಂಬೈಯಿಂದ ಪಾರ್ಥಿವಶರೀರ  ಧಾರವಾಡಕ್ಕೆ ತರಲು ಇದ್ದ ಕಾನೂನಿನ ಅಡಚಣಿಯಿಂದಾಗಿ ಸ್ಟೇಷನ್ನಲ್ಲಿ ಅವರನ್ನು ಬೀಳ್ಕೊಟ್ಟ ಗಳಿಗೆಯೇ, ಭೇಟಿಯೇ ಅಂತಿಮವಾಯ್ತು. ಏಳು, ಒಂಬತ್ತು, ಹನ್ನೆರಡು ವಯಸ್ಸಿನ ಮೂರು ಮಕ್ಕಳು. ನನ್ನವರು ಒಬ್ಬನೇ ಮಗನಾಗಿದ್ದು, ಅತ್ತೆ, ಮಾವ ಆಗಲೇ ತೀರಿಕೊಂಡಾಗಿತ್ತು. ಹಳೆಯ ದೊಡ್ಡ ಮನೆ, ನೌಕರಿ, ಮನೆಗೆ ಬಂದು ಹೋಗುವವರು, ಆಕಸ್ಮಿಕವಾಗಿ ಬರುವ ಆಪತ್ತು ಅಡಚಣೆಗಳು ಏನೇನೆಲ್ಲಾ ಸಂಭಾಳಿಸಬೇಕಾದ ಜವಾಬ್ದಾರಿ ಹೆಗಲಿಗೆ. ತವರುಮನೆಯ ಪೂರ್ಣ ಸಹಕಾರ ಇದ್ದರೂ ಅವರೆಲ್ಲರಿಗೂ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ, ಧಾವಂತ ಇದ್ದುದರಿಂದ ನಾನೇ ಅತಿ ಅವಶ್ಯವಿದ್ದಾಗ ಮಾತ್ರ ಅವರ ನೆರವು ಪಡೆಯುತ್ತಿದ್ದೆ.

ಇತ್ತ ಎರಡು ವರ್ಷಗಳ ಹಿಂದಷ್ಟೇ ಸಿಕ್ಕ ನೌಕರಿ. ಅದರ ಹೊಣೆಗಾರಿಕೆಯನ್ನು ನಿರ್ಲಕ್ಷಿಸುವಂತಿಲ್ಲ. ಇದೆಲ್ಲ ಸಂಭಾಳಿಸುವ ಒತ್ತಡದಲ್ಲಿ ನನ್ನ ಅಭಿಲಾಷೆ ಭಾವನೆಗಳು ನನ್ನನ್ನು ದೈಹಿಕವಾಗಿ, ಮಾನಸಿಕವಾಗಿ ಹಣ್ಣಾಗಿಸುತ್ತಿದ್ದವು. ನನಗೆ ಸೋಲಕೂಡದೆಂಬ ಹಟ. ಈ ಇಬ್ಬಂದಿ ನಿಲುವಿನಲ್ಲೂ ನನ್ನ ಆಪ್ತರು, ಸಹೋದ್ಯೋಗಿಗಳ ಸಹಕಾರದಿಂದ ದಿನಗಳು ಕಳೆಯುತ್ತಾ ಹೋಗುತ್ತಿದ್ದರೂ ಎಲ್ಲೋ ಒಂದು ತಲ್ಲಣ, ಏನೋ ತಕರಾರು, ಆರ್ಥಿಕ ಅಡಚಣಿಗಳಿಂದಾಗಿ ಮನಸ್ಸು ಅಸ್ಥಿರವಾಗುತ್ತಿತ್ತು. ಅಲ್ಲದೇ ನನ್ನ ಮಕ್ಕಳ ಮೇಲಿನ ಇತರರ ಅನುಕಂಪ ಅವರ ಆತ್ಮವಿಶ್ವಾಸಕ್ಕೆ, ವ್ಯಕ್ತಿತ್ವ ವಿಕಸನಕ್ಕೆ ಅಡ್ಡಿಯಾಗಕೂಡದು ಎಂಬ ಆಂತರಿಕ ಎಚ್ಚರಿಕೆ ಸದಾ ನನ್ನನ್ನು ಪೀಡಿಸುತ್ತಿತ್ತು. ಅದೇ ಕಾರಣಕ್ಕೆ ನಂತರ ಹತ್ತು ವರ್ಷಗಳ ಕಾಲ ನನ್ನ ತವರು ಮನೆಗೆ ನಾನು ಹೋಗಲೇಯಿಲ್ಲ. ಅವರೇ ಆಗಾಗ ಬಂದು ನಮ್ಮಲ್ಲಿದ್ದು  ಹೋಗುತಿದ್ದುದುಂಟು.

ಆದರೆ ಸಂಪೂರ್ಣವಾಗಿ ಬದಲಾದದ್ದು ನನ್ನ ಸುತ್ತಮುತ್ತಲಿನ ಪರಿಸರದಲ್ಲಿ. ಯಾವುದಕ್ಕೆ ಹೆದರಿ ತವರು ಮನೆಯಿಂದ ದೂರವಾಗಿದ್ದೆನೋ, ಅದು ಪೆಡಂಭೂತವಾಗಿ ನನ್ನನ್ನು ಆವರಿಸಿಕೊಂಡಿತ್ತು. ನಮ್ಮ ಪೂರಾ ಏರಿಯಾ ಕರ್ಮಠ ಬ್ರಾಹ್ಮಣರಿಂದ ತುಂಬಿತ್ತು. ಅದರಲ್ಲಿ ವಿದ್ವಾಂಸರು, ಮಠಾಧಿಪತಿಗಳು, ಸಂಸ್ಕೃತ ಪಂಡಿತರು ಇದ್ದು  ಹಳೆಯ ನಡಾವಳಿಗಳನ್ನು ಚಾಚೂ ತಪ್ಪದೇ ಸ್ವತಃ ಆಚರಿಸುತ್ತಿದ್ದುದರಿಂದ ಯಾರೂ ಎಷ್ಟೇ ಹಿಂಸೆಯಾದರೂ ಅದನ್ನು ಮೀರುವ ಧೈರ್ಯ ಮಾಡುತ್ತಿರಲಿಲ್ಲ. ನನ್ನವರು ಹೋದ ಮೇಲೇ ನನ್ನ ದರ್ಜೆ ದಿಢೀರನೆ ಕೆಳಗಿಳಿಯಿತು. ನಾನು ಶಾಲೆಗೆ ಹೋಗುವ ಹೊತ್ತಿಗೆ ಕಾಣಿಸಿಕೊಂಡರೆ ಸರಕ್ಕನೇ ಒಳಗೆ ಹೋಗಿ ಬಿಡುವುದು, ನಾನು ಹೊರಬಿದ್ದ ಮೇಲೆ ನಡೆದು ಹೋದಲ್ಲೆಲ್ಲ ನೀರು ಉಗ್ಗುವದು, ಏನಾದರೂ ಕುಡಿಯಲು ಕೊಟ್ಟರೆ ಲೋಟ ತೊಳೆದಿಡಲು ಹೇಳುವುದು, ಎಲ್ಲರೂ ಕುಳಿತಾಗ ಆಮಂತ್ರಣ ಕೊಡುವುದಾದರೆ ನನ್ನೊಬ್ಬಳನ್ನೇ ಬಿಡುವುದು, ಊಟಕ್ಕೆ ಕುಳಿತರೆ ನೋಡಿ ಪಂಕ್ತಿ ಬದಲಾಯಿಸುವದು, ನನಗೊಬ್ಬಳಿಗೇ ದೂರದಿಂದ ಬಡಿಸುವುದು, ಪ್ರತ್ಯೇಕವಾಗಿ ಎಲೆ ಹಾಕುವುದು, ಇಂಥವನ್ನು ಕೆಲ ಕಾಲ ಸಹಿಸಿಕೊಂಡು  ಕ್ರಮೇಣ ಅಂಥ ಪ್ರಸಂಗಗಳೇ ಬರೆದಂತೆ ಜಾಗ್ರತೆ ವಹಿಸತೊಡಗಿದೆ. ಅಂಥ ದಿನಗಳಲ್ಲಿ ಮನೆ ಬೇಗ ಬಿಟ್ಟು ಅಲ್ಲಿಲ್ಲಿ ಗೆಳತಿಯರ ಮನೆಯಲ್ಲಿದ್ದು ತಡವಾಗಿ ಮನೆಗೆ ಬರತೊಡಗಿದೆ.

ಎರಡು ಕಾರಣಗಳಿಂದ ನಾನು ಪ್ರತಿಭಟಿಸಲಾರದವಳಾಗಿದ್ದೆ. ಒಂದು, ಅವರೆಲ್ಲರೂ ಇರುವುದೇ ಹಾಗಿತ್ತು. ಸ್ವಂತಕ್ಕೂ ಅವರು ಆಯ್ದುಕೊಂಡ ದಾರಿ ಅದು. ನನಗಿಂತ ಚಿಕ್ಕ ವಿಧವೆಯರೂ ತಲೆ ಬೋಳಿಸಿಕೊಂಡು, ಕೆಂಪು ಸೀರೆಯುಟ್ಟು, ಶುಭ ಪ್ರಸಂಗಗಳಲ್ಲಿ ಕತ್ತಲು ಕೋಣೆ ಸೇರುತ್ತಿದ್ದರು. ಎಷ್ಟೇ ಕಷ್ಟವಾಗಲೀ ನಾಲಿಗೆ ಕಚ್ಚಿ ಮೌನವಾಗಿಯೇ ಅನುಭವಿಸುತ್ತಿದ್ದರು. ಇಲ್ಲದಿದ್ದರೆ ಯಾವುದೋ ಮಠ, ಗುಡಿ ಸೇರಿ ದೇವರ ಸೇವೆಗೆ ನಿಂತು ಬಿಡುತ್ತಿದ್ದರು. ಬಾಡಿಗೆ ಮನೆಯಾಗಿದ್ದರೆ ನಾನೂ ಮನೆ ಬದಲಿಸಬಹುದಿತ್ತು. ಸ್ವಂತದ್ದಾದ್ದರಿಂದ ಆ ಆಯ್ಕೆಯೂ ಇರಲಿಲ್ಲ. ಅಲ್ಲದೇ ಇಬ್ಬರು ಚಿಕ್ಕ ಹೆಣ್ಣುಮಕ್ಕಳು, ನಾನು ಬೆಳಗಿನಿಂದ ಸಂಜೆಯವರೆಗೂ ಹೊರಗಿರಬೇಕಾದ್ದರಿಂದ ಇಲ್ಲದ ಅಪಾಯ ಮೈಮೇಲೆ ಎಳೆದುಕೊಳ್ಳುವ ಹಾಗೂ ಇರಲಿಲ್ಲ. ಅಂದಿನಿಂದ ನಾನೇ ಎದುರಿಗೆ ಬರುವವರನ್ನು, ಮಡಿ ಎಂದು ಒದ್ದಾಡುವವರನ್ನು, ಔತಣ, ಸಮಾರಂಭದ ಆಮಂತ್ರಣಗಳನ್ನು ಪ್ರಜ್ಞಾಪೂರ್ವಕವಾಗಿ ತಪ್ಪಿಸಿಕೊಂಡು ನೆಮ್ಮದಿ ಪಡೆಯತೊಡಗಿದೆ. ಸಲ್ಲದ ನೆವಗಳ ಆಧಾರಗಳು ನನ್ನನ್ನು ಆ ಹೊತ್ತಿಗೆ ಅಪಾಯದಿಂದ ಪಾರು ಮಾಡಲು ಸಹಾಯಕವಾಗುತ್ತಿದ್ದುದೂ ಇತ್ತು. ಬಹುಶಃ ಅನೇಕರಿಗೆ ನಾನು ಮಾಡುವ ಉಪಾಯದ ಸುಳಿವಿತ್ತು. ಆದರೆ ಅದು ಅನಿವಾರ್ಯವೂ ಆಗಿದ್ದರಿಂದ ಎಲ್ಲರೂ ಜಾಣ ಕುರುಡು, ಜಾಣ ಕಿವುಡನ್ನು ತೋರಿಸಿ ರಾತ್ರಿಗೆಂದು ಊಟ ಕಳುಹಿಸಿಕೊಡುವ ಮಧ್ಯಮ ದಾರಿ ಕಂಡುಕೊಂಡರು.

ಇತ್ತ ಆರ್ಥಿಕ ಸ್ಥಿತಿ ಚಿಂತಾಜನಕ ಅಲ್ಲದಿದ್ದರೂ ಆಕಸ್ಮಿಕವಾಗಿ ಬರುವ ಹೆಚ್ಚಿನ ಖರ್ಚುಗಳಿಗೆ  ಹೊಂದಿಸುವ ಕಷ್ಟ ತಪ್ಪುತ್ತಿರಲಿಲ್ಲ. ಅಲ್ಲಿಲ್ಲಿ ಪಡೆಯುವ ಕೈ ಸಾಲಗಳ ಕಿರಿಕಿರಿಯನ್ನು ತಪ್ಪಿಸಲು ಒಂದು ವ್ಯವಸ್ಥೆ ಮಾಡಲೇಬೇಕಾಗಿ ಬಂದುದು ಮಗನ ಎಸ್​ಎಸ್​ಎಲ್​ಸಿ ಮುಗಿದಾಗ. ಜಾಣನಾಗಿದ್ದ ಅವನನ್ನು ಹಣದ ಅಡಚಣೆ ಮುಂದೆ ಮಾಡಿ ಸಾದಾ ಏನಾದರೂ ಕಲಿಸಿದರೆ ಜೀವನವಿಡೀ ನೌಕರಿಗೆ ಒದ್ದಾಡಬೇಕಾಗಿತ್ತು. ಅಲ್ಲದೇ ಗಂಡು ದಿಕ್ಕಿಲ್ಲದ ಮನೆಯ ಪರಿಸ್ಥಿತಿಯ ಪ್ರಯೋಜನ ಪಡೆದು ರೈತರೂ ಆಟವಾಡತೊಡಗಿದಾಗ ಹೊಲವನ್ನು ಕಳೆದುಕೊಂಡಾದರೂ ಮಗನನ್ನು ಓದಿಸುವ ಮನಸ್ಸಿಲ್ಲದ ನಿರ್ಧಾರ ತೆಗೆದುಕೊಳ್ಳುವ ಸಂಕಟವನ್ನೂ ಅನುಭವಿಸಬೇಕಾಯಿತು.

ಇನ್ನೊಂದು ಕಡೆ ಶಾಲೆಗೆ ಸಂಬಂಧಿತ ಸಮಸ್ಯೆಗಳೇ ಬೇರೆ ರೀತಿಯವು. ಶಾಲೆಯಲ್ಲಿ ಹೆಚ್ಚಿನ ವರ್ಗಗಳನ್ನು ತೆಗೆದುಕೊಳ್ಳುವ  ಸಮಯ ಬಂದು ಮನೆಗೆ ಬರುವುದು ತಡವಾದಾಗ ನನ್ನ ಸಹೋದ್ಯೋಗಿಗಳು ಗಾಡಿಯ ಮೇಲೆ ಮನೆಗೆ ಬಿಡುವುದಾಗಿ ತಾವಾಗಿಯೇ ಬಂದು ಕೇಳುವಷ್ಟು ಸಹೃದಯರಿದ್ದರೂ ನಾನೇ ಅನುಮಾನಿಸುತ್ತಿದ್ದುದು ನನಗೆ  ಚೆನ್ನಾಗಿ ನೆನಪಿದೆ. ಕೆಲವು ಕೊಳಕು ಮನಸ್ಸುಗಳ, ಅಪಕ್ವ ಹುಡುಗ ಬುದ್ಧಿಯ ಮಾತು ಹಾಗೂ ಕೃತಿಗಳಿಂದಾಗಿ ಏನಾದರೂ ಸುದ್ದಿ ಹಬ್ಬಿದ್ದೇ ಆದರೆ ನನ್ನ ಇಬ್ಬರು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಕಂಟಕವಾದೀತೆಂಬ ಅಧೀರತೆ ನನ್ನನ್ನು ಸದಾ ಕಾಡುತ್ತಲೇ ಇತ್ತು. ಸ್ತ್ರೀ ಸ್ವಾತಂತ್ರ್ಯ, ಸಮಾನತೆಯ ಮಾತುಗಳು, ಭಾಷಣಗಳು ಆಗಲೇ ಶುರುವಾಗಿದ್ದರೂ ಅವು ವೇದಿಕೆಯ ಅಲಂಕಾರಿಕ ಭಾಷೆಗಳಾಗಿಯೇ ಕೊನೆಯವರೆಗೂ ಉಳಿಯುವುದಕ್ಕೆ  ಮಾತ್ರ, ನೆಮ್ಮದಿಯ ಬದುಕಿಗಲ್ಲ ಎಂದೆನಿಸುವ ಹಿನ್ನೆಲೆ, ವಾತಾವರಣ ನನ್ನದಾಗಿದ್ದೂ ಒಂದು ಕಾರಣವಾಗಿರಲಿಕ್ಕೂ ಸಾಕು. ಹೀಗೆ ಹುಟ್ಟಿದ್ದು, ಬೆಳೆದಿದ್ದು, ಬಂದು ಇಳಿದಿದ್ದು, ಬದುಕು ಕಲಿಸಿದ್ದು, ಮುಂದೆ ಬರಬಹುದಾದದ್ದು ಎಲ್ಲವೂ ಒಂದಕ್ಕೊಂದು ಸಂಬಂಧವಿಲ್ಲದ ಕಾರಣ, ಚೆನ್ನಾಗಿ ಬದುಕಿದರೆ, ಮದುವೆಯಾಗಿ, ನೌಕರಿ ಸಿಕ್ಕು ಮಕ್ಕಳು ನೆಲೆಗೊಂಡರೆ, ನನಗೊಂದು ಆಧಾರವಾಗಿ ಪೆನ್ಶನ್ ಬರತೊಡಗಿದರೆ ಸಾಕೆಂಬುದು ನನ್ನ ಅತ್ಯಂತ ಪ್ರಾಮಾಣಿಕ ಆಶೆಯಾಗಿತ್ತು.

ಬಹುಶಃ ಅದಕ್ಕಾಗಿಯೇ ಇರಬೇಕು ಬಂದ ಅಡಚಣಿಗಳನ್ನೆಲ್ಲ ಎದುರಿಸಿ, ಮಕ್ಕಳೂ ತಮ್ಮ ಮಿತಿಯನ್ನು ಅರಿತು ನಡೆದುಕೊಂಡ ಕಾರಣ ಇಂದು ನಿನ್ನೆಯದೆಲ್ಲ ಒಂದು ಅನುಭವದ ಮೂಸೆಗಳಾಗಿ ಬದುಕನ್ನೇ ರೂಪಿಸಿದ ಸುಂದರ ಅಚ್ಚುಗಳಾಗಿ ಕಾಣುತ್ತಿವೆ. ಮಕ್ಕಳು ಬಹುರಾಷ್ಟ್ರೀಯ ಕಂಪೆನಿ ಮತ್ತು ಕೇಂದ್ರ ಸರ್ಕಾರದಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ನಾನೀಗ ತಿಟ್ಟು ಹತ್ತಿ ತಿರುಗಿ ನೋಡಿದರೆ ಕಾಣುವುದು ಕಷ್ಟಗಳಲ್ಲ. ಕೇವಲ ಒಲವು ಸ್ನೇಹ ಪ್ರೇಮ.

ನನ್ನಾತ

ಹೊರಗಿನಿಂದ ಬಂದೊಡನೆ ಮುಗುಳುನಗೆಯನೆ ಬೀರಿ ಕಣ್ಣ ಕೊನೆಯಲಿ ಕೆಣಕಿ ಕರೆಯುವಾತ ಮರುಗಿದರೆ ಕೊರಗಿದರೆ ಸುಳ್ಳು ಬೆದರಿಕೆ ಹಾಕಿ ಸಂತೈಸಿ ಎದೆಗೊತ್ತಿ ಮರೆಸುವಾತ

ಜೀವ ಜಂಗಮನಂತೆ ಭಾವಪರಿಧಿಯ ದಾಟಿ ನೋವಗೆದ್ದವನಂತೆ ಕಾಣುವಾತ ದುರಿತ ದುಮ್ಮಾನಗಳ ಸರಿಸಮಕೂ ಅನುಭವಿಸಿ ನಿನ್ನೊಡನೆ ನಾನೆಂದು ತೋರಿದಾತ

ನಕ್ಕುನಗಿಸುವ ಗಳಿಗೆ ಸಿಕ್ಕಾಗ ಕಳೆಯದಲೆ ಮಕ್ಕಳಲಿ ಮಗುವಾಗಿ ನಲಿಯುವಾತ ಚಿಕ್ಕದಾದರೂ ಬದುಕು ಚೊಕ್ಕವಾಗಿರಲೆಂದು ಗಳಿಗೆ ಗಳಿಗೆಗೂ ಬಿಡದೆ ಉಲಿಯುವಾತ

ನನ್ನ ನಿನ್ನಯ ನಂಟು ಬಿಡಿಸಲಾರದ ಗಂಟು ಎಂದೆಲ್ಲ ಕಿವಿಯಲ್ಲಿ ಕದ್ದು ನುಡಿದಾತ ನಂಟಿನೆಳೆ ಹರಿದಿಟ್ಟು ಒಂಟಿ ಬದುಕಿಗೆ ಬಿಟ್ಟು ಸದ್ದು ಗದ್ದಲವಿಲದೆ ಎದ್ದು ನಡೆದಾತ

***

ಪರಿಚಯ: ಕೃಷ್ಣಾ ಕೌಲಗಿಯವರು ಈತನಕ ಮುನ್ನೂರು ರೇಡಿಯೋ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ‘ಚೌಚೌಪದಿ’, ‘ಆಣೆಕಲ್ಲುಗಳು’ ಕವನ ಸಂಕಲನಗಳು, ‘ನೀರಮೇಲೆ ಅಲೆಯ ಉಂಗುರ’ ಲಘುಬರಹಗಳ ಸಂಕಲನ ಪ್ರಕಟಗೊಂಡಿದೆ. ‘ತುಂತುರು ಇಲ್ಲಿ ನೀರ ಹಾಡು’ ಲಘುಬರಹಗಳ ಸಂಕಲನ ಸದ್ಯದಲ್ಲೇ ಪ್ರಕಟಗೊಳ್ಳಲಿದೆ.

Published On - 3:12 pm, Fri, 5 February 21