Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?

Bitcoin ಬಿಟ್​ಕಾಯಿನ್​ ಎಂದರೇನು? ಇದರ ಮೌಲ್ಯ ಹೆಚ್ಚುತ್ತಿರುವದೇಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿರುತ್ತದೆ. ಆ ಪ್ರಶ್ನೆಗೆ ಟಿವಿ9 ಡಿಜಿಟಲ್​ ಲೈವ್​ನಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಲಾಯಿತು.

Tv9 Digital Live | ಬಿಟ್​ ಕಾಯಿನ್​ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್​ ಕರೆನ್ಸಿ?
ಸಾಂದರ್ಭಿಕ ಚಿತ್ರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 05, 2021 | 6:28 PM

ಷೇರು ಮಾರುಕಟ್ಟೆ ಏರಿಕೆ ಜತೆಗೆ ಕ್ರಿಪ್ಟೊ ಕರೆನ್ಸಿಯಲ್ಲಿ ಒಂದಾದ ಬಿಟ್​ಕಾಯಿನ್ Bitcoin​ ಮೌಲ್ಯ ಕೂಡ ಹೆಚ್ಚುತ್ತಿದೆ ಎನ್ನುವ ಸುದ್ದಿಯನ್ನು ನೀವು ಓದಿರಬಹುದು. ಬಿಟ್​ ಕಾಯಿನ್​ ಎಂದರೇನು? ಇದರ ಮೌಲ್ಯ ಹೆಚ್ಚುತ್ತಿರುವುದೇಕೆ ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿರುತ್ತದೆ. ಆ ಪ್ರಶ್ನೆಗೆ ಟಿವಿ9 ಕನ್ನಡ ಡಿಜಿಟಲ್​ ಫೇಸ್​ಬುಕ್​ ಲೈವ್​ನಲ್ಲಿ ಉತ್ತರ ಕಂಡು ಹಿಡಿಯುವ ಪ್ರಯತ್ನ ಮಾಡಲಾಯಿತು. ಹೂಡಿಕೆ ತಜ್ಞ ರುದ್ರಮೂರ್ತಿ, ಇಂಡಿಯಾ ಮನಿ ಡಾಟ್ ಕಾಮ್ ಸ್ಥಾಪಕ ಸಿ.ಎಸ್.ಸುಧೀರ್,​ ಪತ್ರಕರ್ತ ಅರುಣ್​ ಸುಂದರಂ ಮಾಹಿತಿ ನೀಡಿದರೆ, ಆ್ಯಂಕರ್​ ಸೌಮ್ಯಾ ಹೆಗಡೆ ಸಂವಾದ ನಡೆಸಿಕೊಟ್ಟರು.

ಜಗತ್ತಿನಲ್ಲಿ ಅನೇಕ ಕ್ರಿಪ್ಟೋ ಕರೆನ್ಸಿ ಇದೆ. ಅದರಲ್ಲಿ ಬಿಟ್​ ಕಾಯಿನ್​ ಕೂಡ ಒಂದು. ಇದು ಡಿಜಿಟಲ್ ಕರೆನ್ಸಿ. ಭಾರತದ 500 ರೂಪಾಯಿ ನೋಟು ನಿಮ್ಮ ಕೈನಲ್ಲಿ ಇದ್ದರೆ ಅದಕ್ಕೆ ಒಂದು ಭೌತಿಕ ಆಕಾರ ಇರುತ್ತದೆ. ಅದಕ್ಕೆ ಆರ್​ಬಿಐನ ಖಾತ್ರಿ ಇರುತ್ತದೆ. ಆದರೆ, ಕ್ರಿಪ್ಟೋ ಅಂದರೆ ಅದು ವರ್ಚುವಲ್​ ಕರೆನ್ಸಿ. ಬ್ಲಾಕ್​ ಚೈನ್​ ಟೆಕ್ನಾಲಜಿ ತಂತ್ರಜ್ಞಾನ ಬಳಕೆ ಮಾಡಿಕೊಂಡು ಇದನ್ನು ಸಿದ್ಧಪಡಿಸಲಾಗಿರುತ್ತದೆ. ಆದರೆ, ಕ್ರಿಪ್ಟೋ ಕರೆನ್ಸಿಗೆ ಯಾವುದೇ ಬ್ಯಾಕಪ್​ ಇಲ್ಲ, ನಿಮಗೆ ಖಾತ್ರಿ ಕೂಡ ಸಿಗುವುದಿಲ್ಲ ಎಂದು ಕ್ರಿಪ್ಟೋ ಕರೆನ್ಸಿ ಬಗ್ಗೆ ಮಾಹಿತಿ ನೀಡಿದರು ರುದ್ರಮೂರ್ತಿ.

ವಿಶ್ವದಲ್ಲಿ ಬಿಟ್​ ಕಾಯಿನ್​ ಅನ್ನು ಕೆಲ ದೇಶಗಳು ಒಪ್ಪಿದರೆ, ಭಾರತ ಸೇರಿ ಅನೇಕ ರಾಷ್ಟ್ರಗಳು ಒಪ್ಪುತ್ತಿಲ್ಲ. ಭಾರತದಲ್ಲಿ ಡಿಜಿಟಲ್​ ಕರೆನ್ಸಿ ತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಒಂದೊಮ್ಮೆ ಇದನ್ನು ತಂದರೆ, ಗ್ಯಾರಂಟಿಯೊಂದಿಗೆ ಡಿಜಿಟಲ್​ ಕರೆನ್ಸಿ ವ್ಯವಹಾರ ಮಾಡಬಹುದು. ಚೀನಾ ಕೂಡ ಇಂತಹ ಚಿಂತನೆ ನಡೆಸುತ್ತಾ ಇದೆ. ಸರ್ಕಾರವೇ ಡಿಜಿಟಲ್​ ಕರೆನ್ಸಿ ತಂದರೆ ನೋಟು ಪ್ರಿಂಟ್​ ಮಾಡುವ ಪ್ರಮೇಯ ತಪ್ಪುತ್ತದೆ. ಪೇಪರ್ ಉಳಿಯುತ್ತದೆ. ನಕಲಿ ನೋಟು ಹಾವಳಿ ಕೂಡ ಕಡಿಮೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸೌಮ್ಯಾ ಹೆಗಡೆ, ಸುಧೀರ್, ರುದ್ರಮೂರ್ತಿ, ಅರುಣ್​ ಸುಂದರಂ

ಇದೊಂದು ಗ್ಯಾಂಬ್ಲಿಂಗ್​.. ಬಿಟ್​ ಕಾಯಿನ್​ ಎನ್ನುವುದು ಒಂದು ಗ್ಯಾಂಬ್ಲಿಂಗ್​ ಎಂದಿರುವ ರುದ್ರಮೂರ್ತಿ, ತಿರುಪತಿ ಹುಂಡಿಗೆ ದುಡ್ಡು​ ಹಾಕಿದರೆ ಸ್ವಲ್ಪ ಪುಣ್ಯ ಬರಬಹುದು. ಆದರೆ, ಬಿಟ್​ ಕಾಯಿನ್​ನಲ್ಲಿ ಹಣ ಹಾಕಿದರೆ ಏನೂ ಬುರುವುದಿಲ್ಲ. ಬಿಟ್​ ಕಾಯಿನ್​ ಜಗತ್ತಲ್ಲಿ ಒಂದು ದಿನಕ್ಕೆ ಶೇ 15ರಷ್ಟು ಏರಿಳಿತ ಇರುತ್ತದೆ. ಇದರಲ್ಲಿ ತುಂಬಾ ರಿಸ್ಕ್​ ಇದೆ ಎನ್ನುತ್ತಾರೆ ಅವರು.

ಭಾರತಕ್ಕೆ ಬರುತ್ತಾ ಬಿಟ್​ ಕಾಯಿನ್​? ಭಾರತದಲ್ಲಿ ಸರ್ಕಾರ ಬಿಟ್​ ಕಾಯಿನ್​ ಚಲಾವಣೆಗೆ ಒಪ್ಪಿಗೆ ಕೊಡುತ್ತೋ, ಇಲ್ಲವೋ ಎನ್ನುವ ವಿಚಾರದ ಬಗ್ಗೆ ಚರ್ಚೆ ಇದೆ. ಆದರೆ, ಭಾರತದಲ್ಲಿ ಬಿಟ್​ ಕಾಯಿನ್​ ಚಲಾವಣೆಗೆ ಅನುಮತಿ ಕೊಡುವ ಸಾಧ್ಯತೆ ತುಂಬಾ ಕಡಿಮೆ. ಸರ್ಕಾರವೇ ಡಿಜಿಟಲ್​ ಕರೆನ್ಸಿ ತರಬಹುದು ಎಂದು ವಿಶ್ಲೇಷಿಸಿದರು.

ಶ್ರೀಮಂತರ ಬಳಿ ಇದೆ ಬಿಟ್​ ಕಾಯಿನ್​.. ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ ಸೇರಿ ಅನೇಕರ ಬಳಿ ಬಿಟ್​ ಕಾಯಿನ್​ ಇದೆ ಎನ್ನಲಾಗುತ್ತಿದೆ. ಇವರು ಇದಕ್ಕೆ ಹೂಡಿಕೆ​ ಮಾಡಿದ್ದು ಹೇಗೆ ಮತ್ತು ಏಕೆ ಎನ್ನುವ ಬಗ್ಗೆ ರುದ್ರಮೂರ್ತಿ ಮಾಹಿತಿ ಉತ್ತರ ನೀಡಿದ್ದಾರೆ. 2011ರಲ್ಲಿ ಒಂದು ಬಿಟ್​ ಕಾಯಿನ್​ ಬೆಲೆ ಕೇವಲ 1 ಡಾಲರ್ (72 ರೂಪಾಯಿ) ಇತ್ತು. ಈಗ ಇದರ ಬೆಲೆ 37,292 ಡಾಲರ್​ (27 ಲಕ್ಷ ರೂಪಾಯಿ) ಆಗಿದೆ. ಶ್ರೀಮಂತ ವ್ಯಕ್ತಿಗಳು ಎನಿಸಿಕೊಂಡವರು 2011ರಲ್ಲೇ ಸ್ವಲ್ಪ ಬಿಟ್​ ಕಾಯಿನ್​ ಪಡೆದಿರಬಹುದು. ಆದರೆ, ಈಗ ಬಿಟ್​ ಕಾಯಿನ್​ಗೆ ದುಡ್ಡು ಹಾಕಲು ಹೋದರೆ.. ಭಿಕ್ಷೆ ಪಾತ್ರೆ ಸಿಗುತ್ತೆ ಎಂದು ರುದ್ರಮೂರ್ತಿ ಕಠಿಣವಾಗಿ ಎಚ್ಚರಿಸಿದರು.

ನಿತ್ಯಾನಂದ ಒಂದು ದ್ವೀಪ ಖರೀದಿಸಿ ಅಲ್ಲಿ ಅವರದ್ದೇ ಆದ ಕರೆನ್ಸಿಯನ್ನು ಚಲಾವಣೆಗೆ ತಂದಿದ್ದಾರೆ. ಅದೇ ರೀತಿ ಬ್ಲಾಕ್​ ಚೈನ್​ ಟೆಕ್ನಾಲಜಿ ಬಳಸಿಕೊಂಡು ನೀವು ಕೂಡ ಕ್ರಿಪ್ಟೋ ಕರೆನ್ಸಿ ಸಿದ್ಧಪಡಿಸಬಹುದಾಗಿದೆ ಎಂದು ಮಾತು ಆರಂಭಿಸಿದರು ಇಂಡಿಯಾ ಮನಿ ಸ್ಥಾಪಕ ಸುಧೀರ್​.

ಬಿಟ್​ ಕಾಯಿನ್​​ ಇದು ಲಿಮಿಟೆಡ್​ ಕರೆನ್ಸಿ. ಡಿಮ್ಯಾಂಡ್​ ಕಡಿಮೆ ಇದ್ದು, ಬೇಡಿಕೆ ಹೆಚ್ಚಿದೆ ಎನ್ನುವ ಕಾರಣಕ್ಕೆ ಇದರ ಬೆಲೆ ಹೆಚ್ಚಾಗುತ್ತಿದೆ. ಕೆಲ ನೀಚ ಬುದ್ಧಿಯವರು ಬಿಟ್​ ಕಾಯಿನ್​ ಹೆಸರಲ್ಲಿ ಅನೇಕ ಮುಗ್ಧರನ್ನು ಮೋಸ ಮಾಡುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಾದರೆ ಸಂಸ್ಥೆಯ ಮೌಲ್ಯ ಆಧರಿಸಿ ಷೇರು ಸೂಚ್ಯಂಕ ನಿರ್ಧಾರವಾಗುತ್ತದೆ. ಆದರೆ, ಬಿಟ್​ ಕಾಯಿನ್​ನಲ್ಲಿ ಆ ರೀತಿ ಇಲ್ಲ. ಇದೆಲ್ಲ ಮೂರ್ಖತನದ ಪರಮಾವಧಿ. ಈ ಚೈನ್​ ಒಂದು ದಿನ ಕಳಚಿ ಬೀಳುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಳ್ಳ ಕೆಲಸಕ್ಕೆ ಬಳಕೆ ಇತ್ತೀಚೆಗೆ ಉಜಿರೆಯಲ್ಲಿ ಮಗುವನ್ನು ಕಿಡ್ನ್ಯಾಪ್​ ಮಾಡಿ ಬಿಟ್​ ಕಾಯಿನ್​ಗೆ ಬೇಡಿಕೆ ಇಡಲಾಗಿತ್ತು. ಹೀಗಾಗಿ, ಈ ಕರೆನ್ಸಿ ಕೇವಲ ಬೇರೆ ಕೆಲಸಗಳಿಗೆ ಹೆಚ್ಚು ಬಳಕೆ ಆಗುತ್ತಿದೆ. ಕಳೆದ 15 ವರ್ಷಗಳಲ್ಲಿ ನಾವು ಟೆಕ್ನಾಲಜಿಯಲ್ಲಿ ತುಂಬಾನೇ ಮುಂದುವರಿದಿದ್ದೇವೆ. ತಂತ್ರಜ್ಞಾನ ಬಳಕೆ ಮಾಡಿಕೊಂಡು ಕೆಲವರು ಕೆಲವರನ್ನು ಮೋಸ ಮಾಡುತ್ತಿದ್ದಾರೆ. ಕೆಲವೇ ಕೆಲವರು ಪತ್ರಕರ್ತರು ಬಿಟ್​ ಕಾಯಿನ್​ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಆದರೆ, ಬಹುತೇಕರು ಇದನ್ನು ಕೊಂಡುಕೊಳ್ಳಿ, ನಿಮಗೆ ತುಂಬಾನೇ ಲಾಭ ಇದೆ ಎಂದು ಹೇಳುತ್ತಾರೆ. ಅದೇ ರೀತಿ ಸಾಕಷ್ಟು ಯೂಟ್ಯೂಬರ್​ಗಳು ಇದೇ ಕೆಲಸ ಮಾಡುತ್ತಿದ್ದಾರೆ. ದುಡ್ಡು ತೆಗೆದುಕೊಂಡು ಬಿಟ್​ ಕಾಯಿನ್​ ಪ್ರಮೋಟ್​ ಮಾಡುತ್ತಿದ್ದಾರೆ. ಇದು ದುರಾದೃಷ್ಟಕರ ಎಂದು ಸುಧೀರ್ ಬೇಸರ ಹೊರ ಹಾಕಿದರು.

ಪತ್ರಕರ್ತರಾದ ಅರುಣ್​ ಸುಂದರಂ ಮಾತನಾಡಿ, ಆದರೆ, 2015ರಲ್ಲೇ ಭಾರತದಲ್ಲಿ ಈ ಡಿಜಿಟಲ್​ ಕರೆನ್ಸಿ ಹಾವಳಿ ಆರಂಭವಾಗಿತ್ತು. 2017ರಲ್ಲಿ ​ಕ್ರಿಪ್ಟೋ ಕರೆನ್ಸಿಯನ್ನು ಬಳಕೆ ಮಾಡಲು ಭಾರತದಲ್ಲಿ ಒಪ್ಪಿಗೆ ಇಲ್ಲ ಎಂದು ಆರ್​ಬಿಐ ಅಧಿಸೂಚನೆ ಹೊರಡಿಸಿತ್ತು. ಈ ವಿಚಾರ ಸುಪ್ರೀಂಕೋರ್ಟ್​ ಮೆಟ್ಟಿಲು ಕೂಡ ಏರಿತ್ತು. ಮೊದಲ ಲಾಕ್​​ಡೌನ್​ಗೂ ಮೊದಲು ಕ್ರಿಪ್ಟೊ ಕರೆನ್ಸಿ ಅಕ್ರಮ ಅಲ್ಲ ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿತ್ತು. ಈ ತೀರ್ಪಿನಿಂದ ಬಿಟ್​ ಕಾಯಿನ್​ ಕ್ಷೇತ್ರದಲ್ಲಿ ಯಾವುದೇ ತೇಜಿ ಕಂಡಿರಲಿಲ್ಲ. ಆದರೆ, ಕಳೆದ ನವೆಂಬರ್​ನಿಂದ ಬಿಟ್​ ಕಾಯಿನ್​ ದರ ಏರುತ್ತಿದೆ ಎಂದು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಖಾಸಗಿ ಕ್ರಿಪ್ಟೋ ಕರೆನ್ಸಿ ಭಾರತದಲ್ಲಿ ಬ್ಯಾನ್​ ಮಾಡಬಹುದು. ಇದರ ಜತೆಗೆ ಭಾರತ ತನ್ನದೇ ಆದ ಡಿಜಿಟಲ್​ ಕರೆನ್ಸಿ ತರಬಹುದು. ಚಳಿಗಾಲದ ಅಧಿವೇಶನ ಅಥವಾ ಮಳೆಗಾಲದ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದ ವಿಧೇಯಕ ಮಂಡನೆ ಆಗುವ ಸಾಧ್ಯತೆ ಕೂಡ ಇದೆ ಎಂದು ಅವರು ಮುನ್ಸೂಚನೆ ನೀಡಿದರು.

Budget 2021 Explainer | ಕೇಂದ್ರ ಸರ್ಕಾರದ ಖಜಾನೆಯ 1 ರೂಪಾಯಿ ಲೆಕ್ಕ ನಿಮಗೆ ಗೊತ್ತಾ?

RBI ವಿತ್ತೀಯ ನೀತಿ ಪ್ರಕಟ: ರೆಪೊ ದರದಲ್ಲಿಲ್ಲ ಬದಲಾವಣೆ