Valentine’s Day: ನಿಮ್ಮ ಹುಡುಗನಿಗೆ ಕೊಡಬಹುದಾದ ನಿಮ್ಮಷ್ಟೇ ಚೆಂದದ ಉಡುಗೊರೆಗಳು
Valentine's Day: ವರ್ಷಕ್ಕೊಮ್ಮೆ ಬಂದು ಹೋಗುವ ಪ್ರೇಮಿಗಳ ದಿನಾಚರಣೆಯನ್ನು ಇಷ್ಟಪಟ್ಟವರಿಗೆ ಮೀಸಲಿಟ್ಟು, ಅವರಿಗಿಷ್ಟವಾಗುವಂತಹ ಉಡುಗೊರೆ ಕೊಟ್ಟು ಸಾರ್ಥಕಗೊಳಿಸಬೇಕು ಎಂದು ಬಯಸುವ ಹುಡುಗಿಯರಿಗೆಲ್ಲಾ ಇಲ್ಲಿ ಕೆಲ ಸುಲಭೋಪಾಯಗಳನ್ನು ನೀಡಲಾಗಿದೆ.
ಪ್ರೇಮಿಗಳ ದಿನಾಚರಣೆಗೆ ದಿನಗಣನೆ ಆರಂಭವಾಗಿದೆ. ದೇಶ, ಭಾಷೆ, ಜಾತಿ, ಕುಲದ ಗೋಡೆಗಳನ್ನೊಡೆದು ಹಬ್ಬುವ ಪ್ರೀತಿಗೆ ಈ ತಿಂಗಳು ತುಸು ಹೆಚ್ಚೇ ವಿಶೇಷ. ಅದರಲ್ಲೂ ಹುಡುಗಿಯರು ಈ ವಿಶೇಷ ದಿನದಲ್ಲಿ ತಾನು ಮೆಚ್ಚಿದ ಹುಡುಗನ ಚಿಗುರು ಮೀಸೆಯಡಿಯಲ್ಲಿ ನಗು ಕಾಣಲು ಏನು ಮಾಡಬಹುದು ಎಂದು ತಲೆಕೆಡಿಸಿಕೊಂಡಿರುತ್ತಾರೆ. ವರ್ಷಕ್ಕೊಮ್ಮೆ ಬಂದು ಹೋಗುವ ಪ್ರೇಮಿಗಳ ದಿನಾಚರಣೆಯನ್ನು ಇಷ್ಟಪಟ್ಟವರಿಗೆ ಮೀಸಲಿಟ್ಟು, ಅವರಿಗಿಷ್ಟವಾಗುವಂತಹ ಉಡುಗೊರೆ ಕೊಟ್ಟು ಸಾರ್ಥಕಗೊಳಿಸಬೇಕು ಎಂದು ಬಯಸುವ ಹುಡುಗಿಯರಿಗೆಲ್ಲಾ ಇಲ್ಲಿ ಕೆಲ ಸುಲಭೋಪಾಯಗಳನ್ನು ನೀಡಲಾಗಿದೆ. ಪ್ರೇಮಿಗಳ ದಿನವನ್ನು ವಿಶೇಷಗೊಳಿಸಲು ಈ ಚಿಕ್ಕ ಸಂಗತಿಗಳೂ ಕಾರಣವಾಗಬಲ್ಲದು.. ಮರೆಯದಿರಿ.
ನಿಮ್ಮವನಿಗೇನು ಕೊಟ್ಟರೆ ಖುಷಿಯಾಗಬಹುದು? ಹುಡುಗಿಯರಿಗಾಗಿ ಬೇಕಾದಷ್ಟು ಗಿಫ್ಟ್ ಸಿಗಬಹುದು. ಆದರೆ ಹುಡುಗರಿಗೆ ಉಡುಗೊರೆ ಹುಡುಕುವುದು ಕಷ್ಟ. ಮೊದಲನೆಯದಾಗಿ ಹುಡುಗರಿಗೆ ಅಪರೂಪದ ಉಡುಗೊರೆ ಅಂತೇನಾದರೂ ನೀವು ಕೊಟ್ಟರೆ ಅದು ಅವರ ಕಪಾಟು ಬಿಟ್ಟು ಹೊರ ಬರೋದೇ ಇಲ್ಲ. ಹಾಗಂತ ಟೀಶರ್ಟ್, ಜೀನ್ಸ್ ಕೊಡಿಸೋಣ ಅಂದ್ರೆ ಅದೂ ಬಹಳ ವಿಶೇಷ ಅಂತೇನೂ ಅನ್ನಿಸಿಕೊಳ್ಳೋದಿಲ್ಲ. ಹಾಗಾದರೆ, ಮನಗೆದ್ದ ಹುಡುಗನಿಗೆ ಏನು ಕೊಡಬಹುದು?
ಅವನ ಕೆನ್ನೆಗೆ ಮುತ್ತಿಡುವ ಟ್ರಿಮ್ಮರ್ ಕೊಟ್ಟರೆ ಹೇಗೆ? ಈಗೀಗ ಹುಡುಗರಿಗೆ ಗಡ್ಡ ಬಿಡುವುದೇ ಫ್ಯಾಶನ್ ಆಗಿದೆ. ಜೊತೆಗೆ, ಅದನ್ನು ಬೇಕಾಬಿಟ್ಟಿ ಬೆಳೆಸಿದರೆ ದೇವದಾಸನ ಥರ ಕಾಣೋ ಸಾಧ್ಯತೆ ಇರೋದ್ರಿಂದ ಆಗಾಗ ಗಡ್ಡಕ್ಕೆ ಸ್ವಲ್ಪ ಟಚಪ್ ಕೊಡಲೇಬೇಕು. ಹೀಗಾಗಿ ನಿಮ್ಮ ಹುಡುಗನಿಗೆ ಒಂದೊಳ್ಳೇ ಟ್ರಿಮ್ಮರ್ ಕೊಟ್ಟುಬಿಡಿ. ಟ್ರಿಮ್ಮರ್ ನೆಪದಲ್ಲಾದರೂ ನಿಮ್ಮ ಇನಿಯನ ಗಲ್ಲ ಸವರಬಹುದು.
ಫಿಟ್ನೆಸ್ ಬ್ಯಾಂಡ್ ಕೈಗಿಟ್ಟರೆ ಹುಡುಗ ಖುಷಿಯಾಗದೇ ಇರ್ತಾನಾ? ಹುಡುಗರಿಗೆ ಫಿಟ್ನೆಸ್ ಬಗ್ಗೆ ತುಸು ಹೆಚ್ಚೇ ವ್ಯಾಮೋಹ ಇರುತ್ತೆ. ಆದ್ರೆ, ಜಿಮ್, ವಾಕಿಂಗ್, ಯೋಗ ಮಾಡಿ ಅಂದ್ರೆ ಸೋಮಾರಿತನ ಕಾಡುತ್ತೆ. ಹೀಗಾಗಿ ಸುಲಭವಾಗಿ ನಿಮ್ಮ ಹುಡುಗನನ್ನು ಆಗಾಗ ಎಚ್ಚರಿಸುತ್ತಿರೋಕೆ ಒಂದು ಫಿಟ್ನೆಸ್ ಬ್ಯಾಂಡ್ ಕೊಡಿ. ಅವನು ಕೈ ನೋಡಿಕೊಂಡಾಗಲೆಲ್ಲಾ ನಿಮ್ಮ ನೆನಪಾಗಿ ಒಂದು ಕಿರುನಗೆ ಮೂಡಬಹುದು.
ಬ್ಲೂಟೂಥ್ ಹೆಡ್ಸೆಟ್ ಕೊಟ್ಟು ಅವನ ಕಿವಿಗೆ ಬೀಳುತ್ತಿರಿ! ಅವನ ಕಿವಿಯಲ್ಲೊಂದು ಬ್ಲೂಟೂಥ್ ಹೆಡ್ಸೆಟ್ ಇದ್ದರೆ ಹುಡುಗ ಇನ್ನೊಂಚೂರು ಅಪ್ಡೇಟೆಡ್ ಆಗಿ ಕಾಣಬಹುದು. ಸಾಧಾರಣವಾಗಿ ಹುಡುಗರಿಗೆ ಇಂಥದ್ದೆಲ್ಲಾ ತೆಗೆದುಕೊಳ್ಳಬೇಕು ಅನ್ನೋ ಆಸೆ ಇರುತ್ತೆ. ಆದ್ರೆ ಅದು ಕಾರ್ಯರೂಪಕ್ಕೆ ಮಾತ್ರ ಬಂದಿರೋದಿಲ್ಲ. ಹೀಗೆ ಬಾಕಿ ಉಳಿದ ಆಸೆಗಳನ್ನು ನೀವು ಪೂರ್ಣಗೊಳಿಸುವುದಾದರೆ ಅದಕ್ಕಿಂತಾ ಹೆಚ್ಚಿನದು ಇನ್ನೇನಿದೆ?
ಇದೆಲ್ಲಾ ಅವಳು ಅವನಿಗೆ ಕೊಡಬಹುದಾದ ಕೆಲವು ಸಿಂಪಲ್ ಉಡುಗೊರೆಗಳು. ಆದರೆ,ಇದೆಲ್ಲಕ್ಕಿಂತಲೂ ಮಿಗಿಲಾದ, ಬೆಲೆ ಕಟ್ಟಲಾಗದ, ಅತೀ ದುಬಾರಿ ಉಡುಗೊರೆಯೊಂದನ್ನು ನೀವು ಪರಸ್ಪರ ಹಂಚಿಕೊಳ್ಳುವುದು ಅತಿಮುಖ್ಯ.
ಯಾವುದದು ದುಬಾರಿ ಉಡುಗೊರೆ? ಸಮಯ.. ಟೈಂ! ಇದಕ್ಕಿಂತ ದುಬಾರಿ ಉಡುಗೊರೆಯನ್ನು ಎಲ್ಲಾದರೂ ಹುಡುಕಲು ಸಾಧ್ಯವೇ? ಪ್ರೇಮಿಗಳೆಂದ ಮೇಲೆ ಮಾತುಕತೆ, ಹರಟೆ, ಆಗಾಗ ಜಗಳ ಎಲ್ಲಾ ಇದ್ದಿದ್ದೇ. ಆದರೆ, ಈ ಬಿಡುವಿಲ್ಲದ ಬದುಕಲ್ಲಿ ನೀವಿಬ್ಬರು ಪರಸ್ಪರ ಎಷ್ಟು ಸಮಯ ಕೊಟ್ಟುಕೊಳ್ಳುತ್ತೀರಿ ಎನ್ನುವ ಬಗ್ಗೆ ಆಲೋಚಿಸಿದ್ದೀರಾ? ಮಾತಿಲ್ಲದೇ, ಕತೆಯಿಲ್ಲದೇ, ಬರೀ ಮೌನದಲ್ಲಿ ಇಬ್ಬರೂ ಅಕ್ಕಪಕ್ಕದಲ್ಲಿ ಕುಳಿತರೂ ಸಾಕು. ಗಡಿಬಿಡಿ, ಕೆಲಸ, ಆಫೀಸು ಎಲ್ಲವೂ ದಿನನಿತ್ಯ ಇದ್ದಿದ್ದೇ.. ಆದರೆ, ನೀವೆಂದರೆ ನೀವು ಮಾತ್ರ ಇರುವ ಲೋಕವೊಂದನ್ನು ಸೃಷ್ಟಿಸಿಕೊಂಡು ಕಾಲ ಕಳೆದರೆ ಅದು ನಿಮ್ಮಿಬ್ಬರನ್ನು ಕೊನೆ ತನಕವೂ ಕಾಪಾಡಬಲ್ಲದು.
Valentine day: ಮನಕದ್ದ ಹುಡುಗಿಯ ಮನಗೆಲ್ಲಲು ಇದಕ್ಕಿಂತಲೂ ಉತ್ತಮ ಉಡುಗೊರೆ ಇನ್ನೊಂದಿಲ್ಲ
Published On - 8:19 pm, Fri, 5 February 21