Valentine day: ಮನಕದ್ದ ಹುಡುಗಿಯ ಮನಗೆಲ್ಲಲು ಇದಕ್ಕಿಂತಲೂ ಉತ್ತಮ ಉಡುಗೊರೆ ಇನ್ನೊಂದಿಲ್ಲ
Valentine's day: ಕಳೆದ ವರ್ಷ ಕೊಟ್ಟಿದ್ದನ್ನೇ ಮತ್ತೆ ಕೊಟ್ಟರೆ ಹುಡುಗಿ ಮೂತಿ ತಿರುವಬಹುದು, ಇನ್ಯಾರೋ ಕೊಟ್ಟಿದ್ದನ್ನ ಕಾಪಿ ಮಾಡಿದರೆ ಮುಖ ತಿರುಗಿಸಿ ಹೊರಡಬಹುದು, ಹಾಗಂತ ಏನೂ ಕೊಡದೇ ಇರೋದನ್ನೇ ಸರ್ಪ್ರೈಸ್ ಅನ್ನೋಣ ಎಂದರೆ ಅನಾಹುತವೇ ಆಗಬಹುದು.
ಪ್ರೇಮಿಗಳ ದಿನ ಹತ್ತಿರ ಬಂದಂತೆ ಹುಡುಗರ ಎದೆಬಡಿತ ಲಯ ತಪ್ಪುತ್ತದೆ. ಮನಕದ್ದ ಹುಡುಗಿಯನ್ನು ಮೆಚ್ಚಿಸಲು ಯಾವ ಉಡುಗೊರೆ ಕೊಟ್ಟರೆ ಚೆನ್ನ ಎಂದು ಯುವಕರು ನಿದ್ದೆ ಬಿಟ್ಟು ಯೋಚಿಸುತ್ತಿರುತ್ತಾರೆ. ಹುಟ್ಟುಹಬ್ಬ, ಪ್ರೇಮಿಗಳ ದಿನ, ಹೊಸವರ್ಷ ಹೀಗೆ ಯಾವುದಾದರೂ ವಿಶೇಷ ಸಂದರ್ಭದಲ್ಲಿ ಹುಡುಗಿಯನ್ನು ಮೆಚ್ಚಿಸಲು ಏನು ಉಡುಗೊರೆ ಕೊಡಬಹುದು ಎಂಬ ಪ್ರಶ್ನೆ ಎದುರಾದರೆ ಉತ್ತರ ಸಿಗದೇ ತಿಣುಕಾಡುತ್ತಾರೆ. ಕಳೆದ ವರ್ಷ ಕೊಟ್ಟಿದ್ದನ್ನೇ ಮತ್ತೆ ಕೊಟ್ಟರೆ ಹುಡುಗಿ ಮೂತಿ ತಿರುವಬಹುದು, ಇನ್ಯಾರೋ ಕೊಟ್ಟಿದ್ದನ್ನ ಕಾಪಿ ಮಾಡಿದರೆ ಮುಖ ತಿರುಗಿಸಿ ಹೊರಡಬಹುದು, ಹಾಗಂತ ಏನೂ ಕೊಡದೇ ಇರೋದನ್ನೇ ಸರ್ಪ್ರೈಸ್ ಅನ್ನೋಣ ಎಂದರೆ ಅನಾಹುತವೇ ಆಗಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವ ಪ್ರತಿ ಹುಡುಗರೂ ಆ ಕ್ಷಣಕ್ಕೆ ಬಂದ ಆಲೋಚನೆಯನ್ನೇ ಕಾರ್ಯಗತಗೊಳಿಸಿ ಹುಡುಗಿಯ ಮನಗೆಲ್ಲಲ್ಲು ಹರಸಾಹಸಪಡುತ್ತಾರೆ. ಆದರೆ, ಅಷ್ಟೆಲ್ಲಾ ಒದ್ದಾಡುವ ಬದಲು ಸುಲಭವಾಗಿ, ಕಡಿಮೆ ಖರ್ಚಿನಲ್ಲಿ ಹುಡುಗಿಯನ್ನು ಖುಷಿಪಡಿಸಬಹುದು ಎನ್ನುವುದನ್ನು ಎಂದೆದಾರೂ ಆಲೋಚಿಸಿದ್ದೀರಾ?
ನಿಮ್ಮ ಕೈಯಡುಗೆಯನ್ನು ಎಂದಾದರೂ ಅವಳಿಗೆ ತಿನ್ನಿಸಿದ್ದೀರಾ? ಹೇಗೂ ಈ ಬಾರಿ ಕೊರೊನಾ ಸಂಕಷ್ಟ ಇನ್ನೂ ಮುಗಿದಿಲ್ಲ. ಮೈಮರೆತು ಜನಸಂದಣಿಯಲ್ಲಿ ಹೋಗಿ ತಿಂದುಂಡು ಖುಷಿಪಡುವುದಕ್ಕಿಂತ ನಿಮ್ಮ ಮನದರಸಿಗೆ ನಿಮ್ಮ ಕೈಯ್ಯಾರೆ ಮಾಡಿದ ಅಡುಗೆಯನ್ನು ತಿನ್ನಿಸಿ ನೋಡಿ. ಉಪ್ಪು, ಹುಳಿ, ಖಾರ ಹೆಚ್ಚು ಕಡಿಮೆಯಾದರೂ ನಿಮ್ಮ ಕೈತುತ್ತಿನ ಮುಂದೆ ಅದು ಲೆಕ್ಕಕ್ಕೆ ಬರುವುದಿಲ್ಲ.
ಗ್ರೀಟಿಂಗ್ ಕಾರ್ಡ್ ಕೊಡೋದು ಹಳೇ ಸ್ಟೈಲ್ ಏನಲ್ಲ ಗ್ರೀಟಿಂಗ್ ಕಾರ್ಡ್ ಕೊಡೋದು, ಪತ್ರ ಬರೆಯೋದು ಎಂದ ತಕ್ಷಣ ಸುಮಾರು ಜನರಿಗೆ ಹಳೇ ಸಿನಿಮಾ ನೆನಪಾಗಿ ಬಿಡುತ್ತೆ. ಅದೆಲ್ಲಾ ಓಲ್ಡ್ ಫ್ಯಾಷನ್ ಎಂದು ಮುಖ ತಿರುಗಿಸುತ್ತಾರೆ. ಆದ್ರೆ, ಈ ಜಗತ್ತು ಎಷ್ಟೇ ಬೆಳೆದಿದ್ರೂ ಸಣ್ಣ, ಪುಟ್ಟ ವಿಷಯಗಳು ನೀಡೋ ದೊಡ್ಡ ಖುಷಿಯನ್ನು ಮಾತ್ರ ಕಡಿಮೆ ಮಾಡೋಕೆ ಆಗಿಲ್ಲ. ನೀವೇ ಬಿಡಿಸಿದ ಚಿತ್ರ, ಬರೆದ ಬರಹಗಳನ್ನೊಳಗೊಂಡ ಒಂದು ಪುಟಾಣಿ ಪತ್ರವನ್ನು ಹುಡುಗಿಯ ಕೈಗಿಟ್ಟರೂ ಅವಳು ಖುಷಿಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಜೊತೆಯಾಗಿ ಮೊದಲು ತೆಗಿಸಿಕೊಂಡ ಫೋಟೋ ಯಾವುದು? ಮೊಬೈಲ್ ಬಂದ ಮೇಲಂತೂ ಫೋಟೋ ತೆಗಿಸಿಕೊಳ್ಳೋದು ದಿನಚರಿಯ ಭಾಗವಾಗಿ ಹೋಗಿದೆ. ಹಿಂದೆಲ್ಲಾ ಒಂದು ಫೋಟೋ ತೆಗೆಸಿಕೊಳ್ಳೋದು ಅಂದ್ರೆ ಏನೆಲ್ಲಾ ಸಂಭ್ರಮ ಇರ್ತಿತ್ತು. ಆದ್ರೆ ಈಗ ಫೋಟೋ ತೆಗೆಯೋದೂ ಕಷ್ಟ ಅಲ್ಲ, ತೆಗೆದಿದ್ದನ್ನ ಡಿಲೀಟ್ ಮಾಡೋದೂ ಕಷ್ಟವಲ್ಲ ಎಂಬಂತಾಗಿದೆ. ಇಂತಹ ಹೊತ್ತಲ್ಲಿ ಸುಮ್ಮನೆ ಕುಳಿತು ನೀವಿಬ್ಬರು ಜೊತೆಯಾಗಿ ತೆಗೆಸಿಕೊಂಡ ಮೊದಲ ಫೋಟೋ ಯಾವುದೆಂದು ಆಲೋಚಿಸಿ. ಅದನ್ನ ಹುಡುಕಿ ನಿಮ್ಮ ಗೆಳತಿಗೆ ಗಿಫ್ಟ್ ಕೊಟ್ಟರೆ ಅದಕ್ಕಿಂತ ದೊಡ್ಡ ಉಡುಗೊರೆ ಬೇಕೇ?
ಇದೆಲ್ಲಾ ನೀವು ನಿಮ್ಮಾಕೆಗೆ ಕೊಡಬಹುದಾದ ಸಿಂಪಲ್ ಉಡುಗೊರೆಗಳು. ಆದರೆ, ಇದೆಲ್ಲಕ್ಕಿಂತಲೂ ಮಿಗಿಲಾದ, ಬೆಲೆ ಕಟ್ಟಲಾಗದ, ಅತೀ ದುಬಾರಿ ಉಡುಗೊರೆಯೊಂದನ್ನು ನೀವು ಪರಸ್ಪರ ಹಂಚಿಕೊಳ್ಳಲೇಬೇಕು..
ಇದಕ್ಕಿಂತಲೂ ದುಬಾರಿಯಾದ ಉಡುಗೊರೆ ಇನ್ನೊಂದಿಲ್ಲ.. ಪ್ರತಿಯೊಬ್ಬರೂ ಸದಾ ಬಯಸುವುದು ತಾನಿಷ್ಟಪಟ್ಟ ಜೀವದ ಜೊತೆ ಹೆಚ್ಚೆಚ್ಚು ಕಾಲ ಕಳೆಯಬೇಕೆಂದು. ಸರ್ಪ್ರೈಸ್ ಗಿಫ್ಟ್, ಸಂಭ್ರಮ, ಆಚರಣೆ ಇದೆಲ್ಲವಕ್ಕೂ ನಿಜಾರ್ಥ ಬರುವುದು ನೀವು ಅವರಿಗಾಗಿ ಸಮಯ ಮೀಸಲಿಟ್ಟಾಗ. ಸಮಯಕ್ಕಿಂತ ದುಬಾರಿ ಉಡುಗೊರೆಯನ್ನು ಎಲ್ಲಾದರೂ ಹುಡುಕಲು ಸಾಧ್ಯವೇ? ಪ್ರೇಮಿಗಳೆಂದ ಮೇಲೆ ಮಾತುಕತೆ, ಹರಟೆ, ಆಗಾಗ ಜಗಳ ಎಲ್ಲಾ ಇದ್ದಿದ್ದೇ. ಆದರೆ, ಈ ಬಿಡುವಿಲ್ಲದ ಬದುಕಲ್ಲಿ ನೀವಿಬ್ಬರು ಪರಸ್ಪರ ಎಷ್ಟು ಸಮಯ ಕೊಟ್ಟುಕೊಳ್ಳುತ್ತೀರಿ ಎನ್ನುವ ಬಗ್ಗೆ ಆಲೋಚಿಸಿದ್ದೀರಾ? ಮಾತಿಲ್ಲದೇ, ಕತೆಯಿಲ್ಲದೇ, ಬರೀ ಮೌನದಲ್ಲಿ ಇಬ್ಬರೂ ಅಕ್ಕಪಕ್ಕದಲ್ಲಿ ಕುಳಿತರೂ ಸಾಕು. ಅವಳ ಅಂಗೈನ ಮೃದುವಿಗೆ ಇವನ ಒರಟು ಕೈ ತಾಕಿದಾಗ ಆಗುವ ರೋಮಾಂಚನವನ್ನು, ಗಾಳಿಗೆ ತೇಲುವ ಅವಳ ತಲೆಗೂದಲು ಮುಖವನ್ನು ನೇವರಿಸುವುದನ್ನು ಅನುಭವಿಸಿದಾಗಲೇ ಖುಷಿ ಸಿಗುವುದು. ಎಷ್ಟೋ ಜನ ಹೀಗೆ ಸಮಯ ಕೊಡುವುದರ ಬಗ್ಗೆ ಯೋಚಿಸದೆಯೇ ಅನಾವಶ್ಯಕ ಅಸಮಾಧಾನಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಈ ಪ್ರೇಮಿಗಳ ದಿನಾಚರಣೆಯ ನೆಪದಲ್ಲಿ ಸಮಯ ಮೀಸಲಿಡುವುದನ್ನು ಅಭ್ಯಸಿಸಿಕೊಂಡರೆ ಅದು ನಿಮ್ಮಿಬ್ಬರ ಪಾಲಿಗೂ ಅತಿದೊಡ್ಡ ಉಡುಗೊರೆ ಆಗುವುದು ಖಚಿತ.
Valentine’s Day: ನಿಮ್ಮ ಹುಡುಗನಿಗೆ ಕೊಡಬಹುದಾದ ನಿಮ್ಮಷ್ಟೇ ಚೆಂದದ ಉಡುಗೊರೆಗಳು
Published On - 8:48 pm, Fri, 5 February 21