Motherhood: ನಾನೆಂಬ ಪರಿಮಳದ ಹಾದಿಯಲಿ; ಕ್ಷೀರಪಥದೊಳಗಿನ ಚೈತ್ರಗಾನ

‘ಅವಳಿಗೆ ಪ್ರೆಸ್ ಕೆಲಸದಿಂದ ಪುರಸೊತ್ತು ಸಿಕ್ಕಿದರೆ ತಾನೇ ಮಕ್ಕಳ ಬಗ್ಗೆ ಯೋಚಿಸೋದು? ಎನ್ನುವ ವ್ಯಂಗ್ಯ ಪ್ರಶ್ನೆಗೆ ನಗುತ್ತಲೇ, ಪ್ರೆಸ್​ನಲ್ಲಿ ನಾವು ಪೇಪರ್ ಮಾತ್ರ ಪ್ರಿಂಟ್ ಹಾಕ್ತೀವಿ, ಮಕ್ಕಳನ್ನಲ್ಲ ಎಂದುತ್ತರಿಸಿದ್ದೆ. ಆದರೆ ಪಾಶ್ಚಿಮಾತ್ಯರಾಗಲಿ, ಅರಬರಾಗಲಿ ಒಮ್ಮೆಯೂ ನಮ್ಮನ್ನು ಮಕ್ಕಳಿಲ್ಲವೇ, ಮದುವೆಯಾಗಿ ಎಷ್ಟು ವರ್ಷವಾಯಿತು ಎನ್ನುವ ಪ್ರಶ್ನೆಗಳನ್ನು ಕೇಳಿ ಮುಜುಗರಕ್ಕೊಳಪಡಿಸಲಿಲ್ಲ.' ಚೈತ್ರಾ ಅರ್ಜುನಪುರಿ

Motherhood: ನಾನೆಂಬ ಪರಿಮಳದ ಹಾದಿಯಲಿ; ಕ್ಷೀರಪಥದೊಳಗಿನ ಚೈತ್ರಗಾನ
ಲೇಖಕಿ, ಪತ್ರಕರ್ತೆ ಚೈತ್ರಾ ಅರ್ಜುನಪುರಿಯ ಲೆನ್ಸಿಗೆ ಸಿಕ್ಕ ಅಮ್ಮಮಂಗ ಮಗುಮಂಗ
Follow us
ಶ್ರೀದೇವಿ ಕಳಸದ
|

Updated on:Feb 06, 2021 | 4:09 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಇದು ಕತಾರ್​ನಲ್ಲಿ ವಾಸಿಸುತ್ತಿರುವ ಲೇಖಕಿ, ಪತ್ರಕರ್ತೆ ಚೈತ್ರಾ ಅರ್ಜುನಪುರಿ ಅವರ ಫ್ಲ್ಯಾಷ್​ ಬ್ಯಾಕ್.​

ನಮ್ಮ ಮದುವೆಯಾಗಿ ಹತ್ತು ತಿಂಗಳಾಗಿತ್ತು. ನಮಗಿಂತ ಒಂದು ವಾರ ಮುಂಚೆಯಷ್ಟೇ ಮದುವೆಯಾಗಿದ್ದ ನನ್ನ ಹಿರಿಯ ಓರಗಿತ್ತಿ ಗಂಡು ಮಗುವವನ್ನು ಹೆತ್ತು ಹದಿನೈದು ದಿನಗಳೂ ಆಗಿರಲಿಲ್ಲ. ತಾಯಿ-ಮಗುವನ್ನು ನೋಡುವ ಸಲುವಾಗಿ ಕೆಲಸ ಮಾಡುತ್ತಿದ್ದ ಪತ್ರಿಕಾ ಕಚೇರಿಯಲ್ಲಿ ಎರಡು ವಾರ ದುಡಿದು ಒಟ್ಟಿಗೇ ಎರಡು ದಿನ ರಜೆ ಸಂಪಾದಿಸಿ ಗಂಡನ ಜೊತೆ ಪಾಲಕ್ಕಾಡಿನ ಮನೆ ತಲುಪಿದೆ.

ಇದೇನಿದು ಬೆಂಗಳೂರಿನಿಂದ ಬರೀ ಒಂದು ಜೊತೆ ಬಟ್ಟೆ, ಕೈಗವಸು, ಸಾಕ್ಸ್, ಟೋಪಿ ತಂದಿದ್ದೀರಿ? ಈ ನಾಲ್ಕು ಡೈಪರ್ ಪ್ಯಾಕುಗಳ ಬದಲು ನಾಲ್ಕು ಜೊತೆ ಬಟ್ಟೆ ತರೋಕೆ ಆಗಲಿಲ್ವೇ? ಎಂದು ಅತ್ತೆ ಸಿಡುಕಿದ್ದು ನೆನೆಸಿಕೊಂಡು ಮಗುವನ್ನು ನೋಡಲು ಹೋಗುವಾಗ ನಾಲ್ಕು ಜೊತೆ ಬಟ್ಟೆಗಳನ್ನೂ ಖರೀದಿಸಿಕೊಂಡು ಓರಗಿತ್ತಿಯ ಮನೆ ತಲಪುವಷ್ಟರಲ್ಲಿ ಸಂಜೆಯಾಗಿತ್ತು.

ನಮ್ಮಿಬ್ಬರನ್ನೂ ಮನೆಯೊಳಗೆ ಬರಮಾಡಿಕೊಂಡ ಓರಗಿತ್ತಿಯ ತಾಯಿ ಮಗುವನ್ನು ತಂದು ನನ್ನ ಗಂಡನ ಕೈಗೆ ಕೊಟ್ಟರು. ಒಂದೆರಡು ನಿಮಿಷ ತನ್ನ ಕೈಯಲ್ಲಿ ಹಿಡಿದುಕೊಂಡು ಮುದ್ದಿಸಿದ ಪತಿರಾಯ ಮಗುವನ್ನು ನನ್ನ ಕೈಗೆ ಕೊಡಲು ಮುಂದಾದ. ಮಗುವನ್ನು ತೆಗೆದುಕೊಳ್ಳಲು ನಾನು ಕೈಚಾಚಿದೆ. ಅಷ್ಟೂ ಹೊತ್ತು ಬಾಗಿಲ ಬಳಿ ನಿಂತಿದ್ದ ಓರಗಿತ್ತಿಯ ತಾಯಿ ಛಂಗನೆ ಬಂದು ಮಗುವನ್ನು ನನ್ನ ಗಂಡನ ಕೈಯಿಂದ ಕಸಿದುಕೊಂಡು ತನ್ನ ಸ್ವಸ್ಥಾನಕ್ಕೆ ಮರಳಿದರು. ನನಗೆ ಗಾಬರಿ, ಗಂಡನಿಗೆ ಗೊಂದಲ.

ನಾವಿಬ್ಬರೂ ಒಬ್ಬರನ್ನೊಬ್ಬರ ಮುಖವನ್ನು ನೋಡಿಕೊಳ್ಳುತ್ತಿರುವಾಗಲೇ ಆಕೆ ಬಾಂಬ್ ಸಿಡಿಸಿದರು: ‘ವಿಜಿ, ನಿನ್ನ ಹೆಂಡತಿಯನ್ನು ಯಾವುದಾದರೂ ಒಳ್ಳೆ ಡಾಕ್ಟರಿಗೆ ತೋರಿಸು. ಇಲ್ಲಾಂದ್ರೆ ಯಾವುದಾದರೂ ದೇವಸ್ಥಾನದಲ್ಲಿ ಹರಕೆ ಕಟ್ಟಿಕೊ. ಮಕ್ಕಳು ಹುಟ್ಟೋಕೆ ಯೋಗ ಬೇಕು. ನನ್ನ ಮಗಳು ನೋಡು ಹೇಗೆ ವರ್ಷದೊಳಗೆ ಮಗು ಹೆತ್ತಳು’ ಆಕೆಯ ಮಾತುಗಳನ್ನು ಕೇಳಿ ಮಂಜಾಗಿದ್ದು ನನ್ನ ಕಣ್ಣುಗಳು ಮಾತ್ರವಲ್ಲ, ಕಿವಿಗಳೂ ಸಹ! ಹತ್ತು ನಿಮಿಷಗಳಾದರೂ ಆಕೆಯ ಮಾತುಗಳು ನಿಲ್ಲುವ ಸೂಚನೆ ಕಾಣದೇ ಹೋದಾಗ ನಾನು ಕುರ್ಚಿಯಿಂದ ಮೇಲೆದ್ದು ಗಂಡನ ಭುಜದ ಮೇಲೆ ಕೈಯಿಟ್ಟೆ. ಅರ್ಥವಾಯಿತು ಎನ್ನುವ ಹಾಗೆ ಅವನು ಅಲ್ಲಿಂದ ಹೊರಡಲು ಮೇಲೆದ್ದ.

CHAITHRA

ಭಾವವೂ ಚಿತ್ರವೂ

‘ಯಾವುದಾದ್ರೂ ಡಾಕ್ಟರಿಗೆ ತೋರಿಸೋದು ಮರೀಬೇಡ, ಹಾಗೆ ದಾರಿಯಲ್ಲಿ ದೇವಸ್ಥಾನಕ್ಕೆ ಹೋಗಿ ಹರಕೆ ಕಟ್ಟಿಕೋ’ ಎಂದ ಅಮ್ಮನ ಬಾಯಿ ಮುಚ್ಚಿಸಲು ಓರಗಿತ್ತಿ ಹೇಳಿದಳು, ‘ಸುಮ್ನಿರಮ್ಮ, ಬೆಂಗಳೂರಿನಲ್ಲೇ ತೋರಿಸ್ಕೊತಾರೆ’ ನಾನು ಬಿರಬಿರನೆ ಬೈಕಿನತ್ತ ಹೆಜ್ಜೆ ಹಾಕಿದೆ.

ನಮಗೆ ಕೇಳಿಸುವ ಹಾಗೆ ಓರಗಿತ್ತಿಯ ತಾಯಿ ತನ್ನ ಮಗಳಿಗೆ ಹೇಳುತ್ತಿದ್ದರು: ‘ಅವಳ ಸೊಕ್ಕು ನೋಡು, ದೊಡ್ಡೋರು ಅನ್ನೋ ಭಯ ಭಕ್ತಿನೇ ಇಲ್ಲ. ನಾನು ಮಾತಾಡ್ತಾ ಇದ್ರೆ ಹೇಗೆ ಹೊರಟು ನಿಂತಿದ್ದಾಳೆ. ನಮ್ಮವಳನ್ನೇ ಯಾರನ್ನಾದ್ರೂ ನಿನ್ನ ಮೈದುನ ಮದುವೆಯಾಗಿದ್ದಿದ್ರೆ ಇಷ್ಟರಲ್ಲಿ ಅವನಿಗೂ ಒಂದು ಮಗುವಾಗಿರ್ತಿತ್ತು. ಬೆಂಗಳೂರಿನ ಹುಡುಗಿನೇ ಬೇಕಿತ್ತೇನೋ ಇವನಿಗೆ, ಅನುಭವಿಸಲಿ ಬಿಡು’

ನಮ್ಮ ಬೈಕು ಮರೆಯಾಗುವವವರೆಗೂ ಆಕೆ ಅಲ್ಲೇ ನಿಂತು ಮಗಳ ಜೊತೆ ಮಾತನಾಡುತ್ತಿರುವುದು ಕನ್ನಡಿಯಲ್ಲಿ ಕಾಣಿಸಿತು. ದಾರಿಯುದ್ದಕೂ ಇಬ್ಬರೂ ತುಟಿ ಪಿಟಿಕ್ ಎನ್ನಲಿಲ್ಲ, ಅದುಮಿಟ್ಟುಕೊಂಡಿದ್ದ ಕಣ್ಣೀರು ಮನೆ ತಲುಪುವವರೆಗೂ ಗಂಡನ ಭುಜವನ್ನು ತೋಯ್ದು ತೊಪ್ಪೆಯಾಗಿಸಿತ್ತು.

ಕೇರಳದಲ್ಲಿ ಹಾಗೆಯೇ, ಯಾವುದೇ ಮನೆಗೆ ಹೋದರೂ, ಮದುವೆ ಮುಂಜಿಗಳಿಗೆ ಹೋದರೂ ಇದೇ ಪ್ರಶ್ನೆ ಕೇಳುತ್ತಾರೆ ತಲೆಕೆಡಿಸಿಕೊಳ್ಳಬೇಡ ಎನ್ನುತ್ತಿದ್ದ ಗಂಡನೂ ತನ್ನ ಅತ್ತಿಗೆಯ ತಾಯಿ ನಡೆದುಕೊಂಡ ರೀತಿಯಿಂದ ಬೆಚ್ಚಿಬಿದ್ದಿದ್ದ. ಆ ವಿಷಯದ ಬಗ್ಗೆ ಮತ್ತೆ ಚರ್ಚಿಸುವುದು ಬೇಡವೆನ್ನುವಂತೆ ಇರಿಸು ಮುರಿಸಿನಿಂದಲೇ ‘ವಯಸ್ಸಾದವರು ಹೋಗಲಿ ಬಿಡು’ ಎಂದುಬಿಟ್ಟ. ಮನೆಯಲ್ಲಿ ವಿಚಾರ ತಿಳಿದ ಅತ್ತೆ, ಮಾವನೂ ತುಟಿ ಬಿಚ್ಚಲಿಲ್ಲ.

ಮದುವೆಯಾದ ಎರಡನೆಯ ತಿಂಗಳಿನಂದಲೇ ‘ಏನಾದ್ರೂ ಸ್ಪೆಷಲ್ ನ್ಯೂಸ್’ ಇದೆಯೇ ಎನ್ನುತ್ತಿದ್ದ ಗಂಡನ ಸಂಬಂಧಿಕರಿಗೆಲ್ಲ ನಗುತ್ತಲೇ ಇಲ್ಲವೆಂದು ತಲೆಯಾಡಿಸುತ್ತಿದ್ದ ನಾನು ಓರಗಿತ್ತಿಯ ತಾಯಿಯ ನಡವಳಿಕೆ ಮತ್ತು ಮಾತುಗಳಿಂದ ನೊಂದುಕೊಂಡಿದ್ದಕ್ಕಿಂತ ಕೇರಳದಲ್ಲಿ ಕನ್ನಡದ ಸೊಸೆಯಾಗಿ ಎದುರಿಸಬೇಕಾಗಿದ್ದ ಸವಾಲುಗಳನ್ನು ಕಂಡು ಬೆದರಿ ಹೋಗಿದ್ದೆ.

CHAITHRA

ಕ್ಷೀರಪಥದ ಸಂಗದಲ್ಲಿ

ಅದಾದ ಮೂರು ತಿಂಗಳಿಗೆ ಬೆಂಗಳೂರಿಗೆ ಭಾವ ಮತ್ತು ಓರಗಿತ್ತಿ ಬೆಂಗಳೂರಿಗೆ ಶಿಫ್ಟ್ ಆದರು. ನಾನು ಮನಸ್ಸಿಲ್ಲದ ಮನಸ್ಸಿನಿಂದಲೇ ಗಂಡನ ಜೊತೆಯಲ್ಲಿ ಅವರ ಮನೆಗೆ ಹೋದೆ. ಮೂರು ತಿಂಗಳ ಮಗು ಚಾಪೆಯ ಮೇಲೆ ಮಲಗಿಕೊಂಡು ಆಡುತ್ತಿತ್ತು. ಹತ್ತು ನಿಮಿಷವಾದ ಮೇಲೆ ಪಕ್ಕದಲ್ಲಿ ಕುಳಿತಿದ್ದ ಪತಿರಾಯ ಮಗುವನ್ನು ಎತ್ತುಕೋ ಎನ್ನುವಂತೆ ನನಗೆ ಸನ್ನೆ ಮಾಡಿದ. ನಾನು ಚಾಪೆಯ ಮೇಲಿದ್ದ ಮಗುವನ್ನು ಎತ್ತಿಕೊಳ್ಳಲು ಬಗ್ಗಿದೆ, ದಢಾರನೆ ಕುರ್ಚಿ ಬಿಟ್ಟು ಮೇಲೆದ್ದ ಓರಗಿತ್ತಿ ಮಗುವನ್ನು ಎತ್ತಿಕೊಂಡು ರೂಮಿಗೆ ಹೋದಳು. ಮಗುವಿಗೆ ಹಾಲು ಕುಡಿಸುವ ಸಮಯವಾಯಿತು ಎಂದು ಭಾವ ಸಮಜಾಯಿಷಿ ನೀಡಿದರೂ ಸಮಾಧಾನವಾಗಲಿಲ್ಲ. ಅರ್ಧ ಗಂಟೆ ಕಾದರೂ ಓರಗಿತ್ತಿ ಮಗುವಿನೊಂದಿಗೆ ರೂಮಿನಿಂದ ಹೊರ ಬರಲೇ ಇಲ್ಲ.

ನೋವಿನ ಜೊತೆಯಲ್ಲಿ ಕೋಪವೂ ಸೇರಿಕೊಂಡು ಯಾಕಾದರೂ ಮಗು ನೋಡಲು ಹೋಗಬೇಕಿತ್ತು ಎಂದು ಜಗಳವಾಡಿಕೊಂಡೇ ಗಂಡ-ಹೆಂಡತಿ ಮನೆ ತಲುಪಿದೆವು. ವಾರಕ್ಕೆ ಮೂರ್ನಾಲ್ಕು ಸಲ ಅತ್ತೆ ಮಾವನ ಜೊತೆಯಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದವಳು ಬಾಯಿ ತಪ್ಪಿ ಮಾವನೊಡನೆ ಓರಗಿತ್ತಿ ಮತ್ತವಳ ತಾಯಿ ನಡೆದುಕೊಂಡ ಬಗ್ಗೆ ಒಮ್ಮೆ ನೋವಿನಿಂದಲೇ ಪ್ರಸ್ತಾಪಿಸಿದೆ. ‘ನಿಮ್ಮಲ್ಲಿ ಹೇಗೋ ಗೊತ್ತಿಲ್ಲ, ನಮ್ಮಲ್ಲಿ ಬಂಜೆಯರ ಕೈಗೆ ಮಗು ಕೊಟ್ಟರೆ ಮಗುವಿಗೆ ಆಯಸ್ಸು ಕಡಿಮೆಯಾಗುತ್ತದೆ ಅಂತ ನಮ್ಮ ನಂಬಿಕೆ’ ವಿದೇಶದಲ್ಲಿ 32 ವರ್ಷ ವಾಸವಿದ್ದ ಮಾವ ಖಡಕ್ಕಾಗಿ ಹೇಳಿದಾಗ, ನಾಲ್ಕು ಸಮಾಧಾನದ ಮಾತುಗಳ ನಿರೀಕ್ಷೆಯಲ್ಲಿದ್ದ ನನ್ನ ಕಿವಿಗಳಿಗೆ ಕಾದ ಕಬ್ಬಿಣ ಸುರಿದ ಹಾಗಾಯಿತು.

ಆ ಮಗುವಿನ ಅನ್ನಪ್ರಾಶನಕ್ಕೂ ನಾನು ಬರಬಾರದೆಂದು ಮಾವ ತಾಕೀತು ಮಾಡಿದ ಮೇಲೆ ಮನಸ್ಸು ಸಾಕಷ್ಟು ಕಠಿಣವಾಗಿಬಿಟ್ಟಿತ್ತು. ಬರಬರುತ್ತ ಕೆಲಸದ ನೆಪವೊಡ್ಡಿ ಗಂಡನ ಕಡೆಯ ಮದುವೆ ಮುಂಜಿಗಳಿಗೆ ಹೋಗುವುದನ್ನು ಕಡಿಮೆ ಮಾಡಿಕೊಂಡೆನಾದರೂ ಕೇರಳಕ್ಕೆ ಹೋದಾಗಲೆಲ್ಲಾ ಚುಚ್ಚು ಮಾತುಗಳನ್ನು ಎದುರಿಸುವುದು ಮಾತ್ರ ನಿಲ್ಲಲೇ ಇಲ್ಲ. ಎರಡೆರಡು ತಿಂಗಳಿಗೊಮ್ಮೆ ಮಗು ಬೇಕೆಂದು ಆಸ್ಪತ್ರೆಗಳ ಕದ ತಟ್ಟುವುದು ಮಾತ್ರ ನಿಲ್ಲಲಿಲ್ಲ.

ಮದುವೆಯಾದ ಎರಡು ವರ್ಷಗಳಲ್ಲಿ ಮಕ್ಕಳಿಲ್ಲವೆನ್ನುವ ಅಪಮಾನ, ನಿಂದನೆಗಳು ಪುನರಾವರ್ತನೆಯಾಗಿ ಚಿಕ್ಕಂದಿನಿಂದಲೂ ಮಕ್ಕಳೆಂದರೆ ಪ್ರಾಣ ಬಿಡುತ್ತಿದ್ದ ನಾನು ಮಕ್ಕಳನ್ನು ಕಂಡರೆ ಸಿಡಿಮಿಡಿಗೊಳ್ಳತೊಡಗಿದೆ. ಇದೆಲ್ಲದರ ನಡುವೆಯೊಮ್ಮೆ ಬಸುರಿಯಾಗಿ ಎರಡನೆಯ ತಿಂಗಳಿಗೇ ಗರ್ಭಪಾತವಾದಾಗ ಗಂಡನ ಮನೆಯವರಾಡಿದ ಮಾತುಗಳು ನನ್ನನ್ನು ಮತ್ತಷ್ಟು ರೊಚ್ಚಿಗೆಬ್ಬಿಸಿದವು.

CHAITHRA

ನಡುರಾತ್ರಿಯ ಚೈತ್ರಪಯಣ

ಕತಾರಿನಲ್ಲಿ ಗಂಡನಿಗೆ ನೌಕರಿ ಸಿಕ್ಕು ಹೊರಟಾಗ ಇನ್ನು ಸ್ವಲ್ಪ ಕಾಲ ಜನರ ಬಾಯಿಗೆ ಬೀಗ ಬೀಳಬಹುದೆಂಬ ನಿರೀಕ್ಷೆಯಿತ್ತು. ಅದೂ ಸುಳ್ಳಾದಾಗ, ನನ್ನ ಜೊತೆಯಾದದ್ದು ಚಿಕ್ಕಂದಿನಿಂದಲೂ ನಾನು ಹಚ್ಚಿಕೊಂಡಿದ್ದ, ನಂಬಿಕೊಂಡಿದ್ದ ಬರವಣಿಗೆ. ಇಂಗ್ಲಿಷಿನಲ್ಲಿ ಬ್ಲಾಗುಗಳನ್ನು ಬರೆದು ಮನಸ್ಸನ್ನು ಹಗುರ ಮಾಡಿಕೊಂಡೆ, ಪರಿಸ್ಥಿತಿಯನ್ನು ನನ್ನದೇ ರೀತಿಯಲ್ಲಿ ನಿಭಾಯಿಸಲು ತಯಾರಾದೆ.

ಕತಾರಿನಿಂದ ರಜೆಯ ಮೇಲೆ ಹದಿನೈದು ದಿನ ಊರಿಗೆ ಬಂದಿದ್ದ ಗಂಡನ ಜೊತೆಯಲ್ಲಿ ಆತನ ಪಕ್ಕದ ಮನೆಯವರ ಮಗನ ಮದುವೆಗೆ ಹೋದವಳಿಗೆ ಎದುರಾಗಿದ್ದು ಮತ್ತದೇ ಕೊಂಕು ನೋಟ, ನುಡಿಗಳು. ‘ಅವಳಿಗೆ ಪ್ರೆಸ್ ಕೆಲಸದಿಂದ ಪುರಸೊತ್ತು ಸಿಕ್ಕಿದರೆ ತಾನೇ ಮಕ್ಕಳ ಬಗ್ಗೆ ಯೋಚಿಸೋದು?’ ಎನ್ನುವ ವ್ಯಂಗ್ಯ ಪ್ರಶ್ನೆಗೆ ನಗುತ್ತಲೇ, ‘ಪ್ರೆಸ್​ನಲ್ಲಿ ನಾವು ಪೇಪರ್ ಮಾತ್ರ ಪ್ರಿಂಟ್ ಹಾಕ್ತಿವಿ, ಮಕ್ಕಳನ್ನಲ್ಲ’ ಎಂದುತ್ತರಿಸಿದ್ದೆ. ಪ್ರಶ್ನೆ ಕೇಳಿದ ಸಂಬಂಧಿ ತಲೆ ತಗ್ಗಿಸಿಕೊಂಡು ದೂರ ನಡೆದಿದ್ದಳು. ಅದೇ ಮದುವೆ ಮನೆಯಲ್ಲಿ ಮತ್ತೊಬ್ಬ ಸಂಬಂಧಿ ಕೇಳಿದ ಕುಹಕದ ಪ್ರಶ್ನೆಗೆ ಆಕೆಗೇ ಮುಜುಗರವಾಗುವ ಹಾಗೆ ಉತ್ತರಿಸಿ ನಕ್ಕಿದ್ದೆ.

ಇಂತಹ ಪ್ರಶ್ನೆಗಳು ಕೇರಳಕ್ಕೆ ಮಾತ್ರ ಸೀಮಿತವಾಗದೆ ಕತಾರಿಗೆ ಬಂದ ಮೇಲೂ ಮುಂದುವರಿಯತೊಡಗಿದಾಗ, ಗಂಡನ ಮಲಯಾಳಿ ಸ್ನೇಹಿತರ ಮನೆಗೆ ಭೇಟಿ ಕೊಡುವುದನ್ನೇ ನಿಲ್ಲಿಸಿಬಿಟ್ಟೆ. ನಾನಾಯಿತು, ನನ್ನ ಕೆಲಸವಾಯಿತು, ಬರವಣಿಗೆ, ಸುತ್ತಾಟವೆಂದುಕೊಂಡು ಸಾಕಷ್ಟು ವಿದೇಶಿಯರ ಗೆಳೆತನ ಸಂಪಾದಿಸಿದೆ. ಪಾಶ್ಚಿಮಾತ್ಯರಾಗಲಿ, ಅರಬರಾಗಲಿ ಒಮ್ಮೆಯೂ ನಮ್ಮನ್ನು ಮಕ್ಕಳಿಲ್ಲವೇ, ಮದುವೆಯಾಗಿ ಎಷ್ಟು ವರ್ಷವಾಯಿತು ಎನ್ನುವ ಪ್ರಶ್ನೆಗಳನ್ನು ಕೇಳಿ ಮುಜುಗರಕ್ಕೊಳಪಡಿಸಲಿಲ್ಲ. ಈ ನಡುವೆ ಮತ್ತೆರಡು ಬಾರಿ ಬಸುರಿಯಾಗಿ ಗರ್ಭಪಾತವಾದಾಗ ಮನಸ್ಸಿಗೆ ನೋವಾದರೂ ವಿದೇಶಿ ಗೆಳೆಯರ ಸಮಾಧಾನದ ಮಾತುಗಳು ಸದಾ ಜೊತೆಯಾಗಿರುತ್ತಿದ್ದವು.

ಮದುವೆಯಾಗಿ ಆರು ವರ್ಷ ತುಂಬಿದ ಮೇಲೆ ನಾಲ್ಕನೇ ಬಾರಿಗೆ ಬಸುರಿಯಾದಾಗ ಕೆಲಸ ಮಾಡುತ್ತಿದ್ದ ಅಲ್ ಜಜೀರಾ ಟಿವಿ ಚಾನೆಲ್ಲಿಗೆ ರಾಜೀನಾಮೆ ಕೊಟ್ಟು ಹೊರ ನಡೆದೆ. ಎರಡನೇ ತಿಂಗಳ ಸ್ಕ್ಯಾನಿಂಗ್ ನಲ್ಲಿ ಡಾಕ್ಟರ್, ‘ಇದೋ ನೋಡಿ ನಿಮ್ಮ ಮಗು. ಇದು ಮಗುವಿನ ಹಾರ್ಟ್ ಬೀಟ್’ ಎಂದು ನನ್ನ ಭುಜ ನೇವರಿಸಿದಾಗ, ಭಯದಿಂದ ಇನ್ನೂ ಕಣ್ಣು ಮುಚ್ಚಿಕೊಂಡಿದ್ದ ನನ್ನ ಬಾಯಿಂದ ಹೊರಟ ಮೊದಲ ಮಾತು, ‘ತುಂಬಾ ಕಾಯಿಸಿಬಿಟ್ಟ ಸಿದ್ಧಾರ್ಥ ನನ್ನ!’ ಗಂಡು ಮಗುವೇ ಎಂದು ಹೇಗೆ ಹೇಳುತ್ತೀರಿ ಎಂದು ನಕ್ಕ ಡಾಕ್ಟರಿಗೆ, ನನ್ನ ಮನಸ್ಸು ಹೇಳುತ್ತಿದೆ ಇದು ಗಂಡು ಮಗುವೇ, ಸಿದ್ಧಾರ್ಥನೇ ಎಂದು ಕಣ್ಣು ತುಂಬಿಕೊಂಡು ಹೇಳಿದ್ದೆ.

CHAITHRA

ಕಪ್ಪುಬಿಳುಪಿನ ಮಾಯೆ

ಹೆಣ್ಣುಮಗು ಬೇಕೆಂದು ಹಂಬಲಿಸುತ್ತಿದ್ದರೂ ಯಾಕೆ ನನ್ನ ಬಾಯಿಂದ ಆ ಗಳಿಗೆಯಲ್ಲಿ ಸಿದ್ಧಾರ್ಥ ಎನ್ನುವ ಹೆಸರು ಬಂತೋ ಇದುವರೆಗೂ ತಿಳಿದಿಲ್ಲ. ಡಾಕ್ಟರ್ ನನ್ನ ಪ್ರಸವಕ್ಕೆ ನೀಡಿದ್ದ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿಯೇ ಗಾಂಧೀ ಜಯಂತಿಯ ದಿನದಂದು ಸಿದ್ಧಾರ್ಥ ನಮ್ಮ ಬಾಳಿಗೆ ಕಾಲಿರಿಸಿದ. ಏಳು ವರ್ಷ ಸಹಿಸಿದ್ದ ನಿಂದನೆ, ಅಪಮಾನ, ನೋವುಗಳೆಲ್ಲಾ ಅವನ ಪುಟ್ಟ ಮುಖ ಕಂಡ ಕ್ಷಣದಲ್ಲಿ ಕಣ್ಣೀರಾಗಿ ಹರಿದು ಹೋದವು.

ಮಗ ಹುಟ್ಟಿದ ಮೇಲೆ ಕೆಲಸಕ್ಕೆ ಮರಳಿ ಬರುವಂತೆ ಕರೆ ಬಂದರೂ ಮನಸ್ಸು ಒಪ್ಪಲಿಲ್ಲ. ಏಳು ವರ್ಷಗಳಲ್ಲಿ ಅನುಭವಿಸಿದ ನೋವು, ಸಂಕಟಗಳಿಗೆ ಮುಲಾಮು ಸಿದ್ಧಾರ್ಥನೇ ಹೊರತು ಕೆಲಸವಲ್ಲ ಎಂದು ಅವನನ್ನು ಮೊದಲ ಸಲ ಆಪರೇಷನ್ ಥಿಯೇಟರಿನಲ್ಲಿ ನೋಡಿದಾಗಲೇ ಮಾನವರಿಕೆಯಾಗಿಬಿಟ್ಟಿತ್ತು. ಅಷ್ಟಕ್ಕೂ ಮಗುವನ್ನು ಕೆಲಸದವಳ ಕೈಗಿಟ್ಟು, ಅವನ ಬಾಲ್ಯದ ದಿನಗಳನ್ನು ಮಿಸ್ ಮಾಡಿಕೊಂಡು ಮತ್ತೆ ಹಗಲು ರಾತ್ರಿಯೆನ್ನದೆ ಟಿವಿ ಚಾನೆಲ್ ನಲ್ಲಿ ಕೆಲಸ ಮಾಡಲು ನಾನು ತಯಾರಿರಲಿಲ್ಲ.

ಕೆಲಸ ಬಿಟ್ಟ ಮೇಲೆ ಕನ್ನಡದ ಪತ್ರಿಕೆಗಳಿಗೆ ಬರೆಯುವುದು ಹೆಚ್ಚಾಯಿತು. ಸಖಿ ಪಾಕ್ಷಿಕಕ್ಕೆ ಇಂಗ್ಲೀಷ್ ಪುಸ್ತಕಗಳ ವಿಮರ್ಶೆಯ ಅಂಕಣ ಬರೆಯಲು ಸಂಪಾದಕರು ಕೇಳಿದಾಗ ಇದು ನನ್ನಿಂದ ಸಾಧ್ಯವೇ ಎನ್ನುವ ಅಳುಕಿನಲ್ಲೇ ಪ್ರಾರಂಭಿಸಿ ಸತತವಾಗಿ ಮೂರು ವರ್ಷ, ಮಗ ಹುಟ್ಟಿದ ಮೇಲೂ ಹತ್ತಾರು ವಿಮರ್ಶೆಗಳನ್ನು ನಿರಂತರವಾಗಿ ಬರೆಯುತ್ತಾ ಮಗನ ಲಾಲನೆ ಪಾಲನೆಗಳ ಜೊತೆಯಲ್ಲಿಯೇ ಓದು, ಬರವಣಿಗೆಗಳಲ್ಲಿ ನನ್ನನ್ನು ನಾನು ಮುಳುಗಿಸಿಕೊಂಡೆ.

ಮಕ್ಕಳಿಲ್ಲದವಳೆಂದು ಹಂಗಿಸುತ್ತಿದ್ದವರ ಬಾಯಿಗೆ ಬೀಗ ಬಿದ್ದಾಗಿತ್ತು. ಇದೆಲ್ಲದರ ನಡುವೆ ಹಿರಿಯ ಓರಗಿತ್ತಿ ತನ್ನ ವಿಚ್ಛೇದನವಾದ ಎರಡು ವರ್ಷಗಳ ಬಳಿಕ ನನಗೆ ಫೋನ್ ಮಾಡಿ ತನ್ನನ್ನೂ, ತನ್ನ ತಾಯಿಯನ್ನೂ ಕ್ಷಮಿಸಿಬಿಡು ಎಂದು ಅವಲತ್ತುಕೊಂಡಳು. ‘ವಿಚ್ಛೇದನ ಪಡೆಯದೆ ಹೋಗಿದ್ದರೆ ನಿನ್ನ ಅಂದಿನ ನಡೆವಳಿಕೆಯನ್ನು ಇಂದು ತಪ್ಪು ಎಂದು ಒಪ್ಪಿಕೊಳ್ಳುತ್ತಿದ್ದೆಯಾ?’ ನನ್ನಿಂದ ಆ ಪ್ರಶ್ನೆಯನ್ನು ನಿರೀಕ್ಷಿಸದೇ ಇದ್ದ ಅವಳು ಕಕ್ಕಾಬಿಕ್ಕಿಯಾದರೂ, ಪ್ರಾಮಾಣಿಕವಾಗಿ, ‘ಖಂಡಿತಾ ಇಲ್ಲ’ ಎಂದು ಉತ್ತರಿಸಿದಳು. ಆಬಳಿಕ ಅವಳು ನೀಡಿದ ಸಮಜಾಯಿಷಿಗಳು, ಕಾರಣಗಳು ಯಾವೂ ನಾನನುಭವಿಸಿದ ನೋವಿಗೆ ಮದ್ದು ನೀಡಲಿಲ್ಲವೆನ್ನುವುದು ಬೇರೆ ಸಂಗತಿ.

ನಾನು ಕಾಲೇಜಿನಲ್ಲಿ ಬರೆದಿದ್ದ ಕವನಗಳೆಲ್ಲವನ್ನೂ ಸಂಗ್ರಹಿಸಿ ಒಂದು ಕವನ ಸಂಕಲವನ್ನೂ, ವಿಮರ್ಶೆಗಳೆಲ್ಲವನ್ನೂ ಒಗ್ಗೂಡಿಸಿ ಎರಡು ವಿಮರ್ಶಾ ಪುಸ್ತಕಗಳನ್ನು ಪ್ರಕಟಿಸಿದೆ. ಮಗ ಹುಟ್ಟಿದ ದಿನದಿಂದ ಅವನ ಫೋಟೋಗಳನ್ನು ತೆಗೆಯುತ್ತಾ ಬಾಲ್ಯದಲ್ಲಿಯೇ ಹಿಡಿದಿದ್ದ ಪೋಟೊಗ್ರಫಿಯ ಹುಚ್ಚಿಗೆ ನೀರೆರೆಯತೊಡಗಿದೆ. ಮಗನಿಗೆ ನಾಲ್ಕು ವರ್ಷವಾಗುತ್ತಿದ್ದ ಹಾಗೆಯೇ ಅವನನ್ನೂ ಕರೆದುಕೊಂಡು ಫೋಟೋ ತೆಗೆಯಲು ಹೊರಗೆ ಹೋಗತೊಡಗಿದೆ. ಮಗನ ನಿದ್ರೆ ಮತ್ತು ಪತಿಯ ಆಫೀಸ್ ಸಮಯ ನೋಡಿಕೊಂಡು ಪ್ರತಿ ಸಂಜೆ ಕ್ಯಾಮೆರಾ ಹಿಡಿದು ಹೊರಗೆ ಹೋಗುವುದು ದಿನಚರಿಯಾಯಿತು.

CHAITHRA

ದೂರದೊಂದು ತೀರದಲ್ಲಿ

ಒಂದಷ್ಟು ಫೋಟೋಗಳು ನ್ಯಾಷನಲ್ ಜಿಯಾಗ್ರಫಿಕ್ ಜಾಲತಾಣದಲ್ಲಿ ಪ್ರಕಟವಾದ ಮೇಲೆ ಓದು, ಬರವಣಿಗೆಯ ಜೊತೆಗೆ ಫೋಟೋಗ್ರಫಿಯನ್ನೂ ಗಂಭೀರವಾಗಿ ತೆಗೆದುಕೊಂಡೆ. ನೈಟ್ ಫೋಟೊಗ್ರಫಿ, ಲಾಂಗ್ ಎಕ್ಸ್ಪೋಷರ್, ಅಸ್ಟ್ರೋ ಫೋಟೋಗ್ರಫಿಯತ್ತ ಒಲವು ಮೂಡಿಸಿಕೊಂಡು ಮಗ ಮಲಗಿರುವಾಗ ಮಧ್ಯರಾತ್ರಿ ಕ್ಷೀರಪಥದ (ಮಿಲ್ಕಿವೇ) ಚಿತ್ರಗಳನ್ನು ತೆಗೆಯಲು ಹೋಗಿ ಅವನು ಕಣ್ಬಿಡುವ ಮುನ್ನವೇ ಮನೆ ಸೇರಿಕೊಳ್ಳುತ್ತಿದ್ದೆ. ನಾನು ತೆಗೆದ ಚಿತ್ರಗಳು ಒಂದೆರಡು ರಾಷ್ಟ್ರೀಯ ಮಟ್ಟದ ಫೋಟೋ ಪ್ರದರ್ಶನಗಳಿಗೆ ಆಯ್ಕೆಯಾದಾಗ ವಿಶ್ವಾಸ ಇಮ್ಮಡಿಯಾಯಿತು.

ಮಗನಿಗೆ ಸ್ವಲ್ಪ ತಿಳಿವಳಿಕೆ ಬರುವವರೆಗೂ ಕೆಲಸಕ್ಕೆ ಹೋಗುವುದು ಬೇಡವೆಂದು ನಿರ್ಧರಿಸಿ ಸದ್ಯಕ್ಕೆ ಓದು, ಬರವಣಿಗೆ, ಫೋಟೋಗ್ರಫಿ ಎಂದುಕೊಂಡಿದ್ದೇನೆ. ಅಂದ ಹಾಗೆ ಮುಂದಿನ ತಿಂಗಳು ಮೊದಲನೇ ತರಗತಿಯ ಅಂತಿಮ ಪರೀಕ್ಷೆಗೆ ಅಮ್ಮ ಮಗ ಇಬ್ಬರೂ ತಯಾರಾಗುತ್ತಿದ್ದೇವೆ!

***

ಪರಿಚಯ: ಮಂಡ್ಯ ಜಿಲ್ಲೆ ಮದ್ದೂರು ಮೂಲದ ಚೈತ್ರಾ ಅರ್ಜುನಪುರಿ ಸದ್ಯಕ್ಕೆ ದೋಹಾ-ಕತಾರ್, ನಿವಾಸಿ. ವಿಜಯ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್ ದಿನಪತ್ರಿಕೆಗಳು, ಮತ್ತು ಕತಾರಿನ ಅಲ್ ಜಜೀರಾ ಟಿವಿ ಚಾನೆಲ್​ನಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿದ್ದು, ಈಗ ಛಾಯಾಗ್ರಹಣ, ಅದರಲ್ಲೂ ನೈಟ್ ಫೋಟೋಗ್ರಫಿಯ ಹುಚ್ಚು ಹಿಡಿಸಿಕೊಂಡಿದ್ದಾರೆ. ಇವರು ತೆಗೆದ ಕೆಲವು ಚಿತ್ರಗಳು ನ್ಯಾಷನಲ್ ಜಿಯೋಗ್ರಾಫಿಕ್ ಮತ್ತಿತರ ಜಾಲತಾಣಗಳಲ್ಲಿ ಪ್ರಕಟಿತವಾಗಿವೆ. ಪುಸ್ತಕ ವಿಮರ್ಶೆ, ಕಥೆ, ಲೇಖನ ಮತ್ತು ಪ್ರವಾಸ ಕಥನ ಬರೆಯುವ ಹವ್ಯಾಸವಿದೆ. ‘ಚೈತ್ರಗಾನ’ ಕವನ ಸಂಕಲನ, ‘ಪುಸ್ತಕ ಪ್ರದಕ್ಷಿಣೆ’ ಮತ್ತು ‘ಓದುವ ವೈಭವ’ ವಿಮರ್ಶಾ ಸಂಕಲನಗಳು ಪ್ರಕಟಿತ ಪುಸ್ತಕಗಳು.

ನಾನೆಂಬ ಪರಿಮಳದ ಹಾದಿಯಲಿ: ಆ್ಯಟಿಟ್ಯೂಡ್ ಎಂಬ ಬ್ರಹ್ಮಾಸ್ತ್ರ ಪಡೆದುಕೊಂಡಿದ್ದು ಹೀಗೆ…

Published On - 3:39 pm, Sat, 6 February 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ