Budget 2021 Explainer | ಕೇಂದ್ರ ಸರ್ಕಾರದ ಖಜಾನೆಯ 1 ರೂಪಾಯಿ ಲೆಕ್ಕ ನಿಮಗೆ ಗೊತ್ತಾ?
ಕೇಂದ್ರ ಸರ್ಕಾರವು ಪ್ರತಿ ಒಂದು ರೂಪಾಯಿಯನ್ನು ಅಂದರೆ 100 ಪೈಸೆಯನ್ನು ಹೇಗೆ ಸಂಪಾದಿಸುತ್ತದೆ ಮತ್ತು ಹೇಗೆ ಖರ್ಚು ಮಾಡುತ್ತದೆ ಎಂಬ ವಿವರ ಇಲ್ಲಿದೆ.
ಬಜೆಟ್ ಮಂಡನೆ ಸಂದರ್ಭದಲ್ಲಿ ಅನುದಾನವನ್ನು ಲಕ್ಷ ಕೋಟಿ ರೂಪಾಯಿಯಲ್ಲಿ ಉಲ್ಲೇಖಿಸುತ್ತ ಹೋಗುತ್ತಾರೆ. ಒಂದೊಂದು ರೂಪಾಯಿ ಕೂಡಿಯೇ ಅಷ್ಟು ದೊಡ್ಡ ಮೊತ್ತ ಆಗುವುದು. ಆಯಾ ಕ್ಷೇತ್ರಗಳಿಗೆ ಇಂತಿಷ್ಟು ಎಂದು ಹಣ ಹಂಚಿಕೆ ಮಾಡುವ ಕೇಂದ್ರ ಸರ್ಕಾರ ಪ್ರತಿ ಒಂದು ರೂಪಾಯಿಯನ್ನೂ ಹೇಗೆಲ್ಲ ಖರ್ಚು ಮಾಡುತ್ತದೆ? ಹೇಗೆ ಸಂಪಾದನೆ ಮಾಡುತ್ತದೆ ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತದೆ.
ಒಂದು ರೂಪಾಯಿ ಎಂದರೆ ಕಡಿಮೆ ಅಲ್ಲ, ನೂರು ಪೈಸೆಗಳು. ಈ ಪ್ರತಿ ನೂರು ಪೈಸೆಗಳು ಭಾರತದಲ್ಲಿ ಹೇಗೆ ವ್ಯಯವಾಗುತ್ತವೆ ಎಂಬ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
2021ರ ಬಜೆಟ್ ಪ್ರಕಾರ 100 ಪೈಸೆಯಲ್ಲಿ ಅತಿಹೆಚ್ಚು ಅಂದರೆ 20 ಪೈಸೆಯನ್ನು ಬಡ್ಡಿ ಪಾವತಿ (Interest Payment)ಗೆ ವಿನಿಯೋಗಿಸಲಾಗುತ್ತದೆ. 16 ಪೈಸೆಯನ್ನು ರಾಜ್ಯಗಳ ತೆರಿಗೆ ಮತ್ತು ಸುಂಕಕ್ಕೆ ಖರ್ಚು ಮಾಡಲಾಗುತ್ತದೆ. ಕೇಂದ್ರ ವಲಯದ ಯೋಜನೆಗಳಿಗಾಗಿ 13 ಪೈಸೆ, ಇತರ ವ್ಯಯಕ್ಕಾಗಿ 10 ಪೈಸೆ, ಹಣಕಾಸು ಆಯೋಗ ಮತ್ತು ಇತರೆ ವರ್ಗಾವಣೆಗಾಗಿ 10 ಪೈಸೆ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗಾಗಿ 9 ಪೈಸೆ, ಸಬ್ಸಿಡಿಗಾಗಿ 9 ಪೈಸೆ ಮತ್ತು ರಕ್ಷಣಾ ಕ್ಷೇತ್ರಕ್ಕಾಗಿ 8 ಪೈಸೆಯನ್ನು ವಿನಿಯೋಗಿಸಲಾಗುತ್ತದೆ.
100 ಪೈಸೆಗೆ ಎಲ್ಲೆಲ್ಲಿಂದ ಎಷ್ಟು ಆದಾಯ ಗೊತ್ತಾ? ಖರ್ಚಷ್ಟೇ ಅಲ್ಲ, ಆದಾಯಕ್ಕೂ ಇದು ಅನ್ವಯ ಆಗುತ್ತದೆ. ಇಂದು ಮಂಡನೆಯಾದ 2021-22ನೇ ಬಜೆಟ್ ಪ್ರಕಾರ ಕೇಂದ್ರದ ಖಜಾನೆಗೆ ಬರುವ ಪ್ರತಿ ಒಂದು ರೂಪಾಯಿ, ಅಂದರೆ 100 ಪೈಸೆ ಆದಾಯದಲ್ಲಿ ಅತಿ ಹೆಚ್ಚು ಅಂದರೆ 53 ಪೈಸೆ ಆದಾಯ ನೇರ ಹಾಗೂ ಪರೋಕ್ಷ ತೆರಿಗೆಯಿಂದಲೇ ಬರುತ್ತದೆ. ಸಾಲ ಹಾಗೂ ಇತರ ಹೊಣೆಗಾರಿಕೆಯಿಂದ 36 ಪೈಸೆ, ತೆರಿಗೆ ರಹಿತ ಆದಾಯದಿಂದ 6 ಪೈಸೆ, ಸಾಲ ರಹಿತ ಬಂಡವಾಳ ವರಮಾನದಿಂದ 5 ಪೈಸೆಗಳಷ್ಟು ಸರ್ಕಾರಕ್ಕೆ ಸೇರ್ಪಡೆಯಾಗುತ್ತದೆ.
ಮೇಲಿನ ಗಳಿಕೆ ವಿವರವನ್ನು ಇನ್ನಷ್ಟು ಸೂಕ್ಷ್ಮವಾಗಿ ಅವಲೋಕಿಸಿದರೆ, ಒಟ್ಟಾರೆ ಆದಾಯದ ಭಾಗವಾದ ಪ್ರತಿ ರೂಪಾಯಿಯಲ್ಲಿ ಸರಕು ಸೇವಾ ತೆರಿಗೆಯು 15 ಪೈಸೆಯಷ್ಟು ಹಾಗೂ ಕಾರ್ಪೋರೇಟ್ ತೆರಿಗೆ (ಉದ್ಯಮ ತೆರಿಗೆ) 13 ಪೈಸೆಯಷ್ಟು ಕೊಡುಗೆ ನೀಡುತ್ತಿದೆ. ಆದಾಯ ತೆರಿಗೆಯಿಂದ 14 ಪೈಸೆ ಗಳಿಸಲಾಗುತ್ತಿದ್ದು, ಕೇಂದ್ರ ಅಬಕಾರಿ ಸುಂಕದಿಂದ 8 ಪೈಸೆ, ಸೀಮಾ ಸುಂಕದಿಂದ 3 ಪೈಸೆ ಗಳಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ.
Budget 2021| ’ನಮ್ಮಲ್ಲಿನ ಹೆದ್ದಾರಿ ನಿರ್ಮಾಣಕ್ಕೆ ನೀವು ಹಣ ಕೊಡೋದೇನೂ ಬೇಡ..ಹೋಗಿ ರೈತರಿಗೇನು ಬೇಕೋ ಅದನ್ನು ಕೊಡಿ‘
Budget 2021 | ವಿಮಾ ವಲಯದಲ್ಲಿ ವಿದೇಶಿ ಹೂಡಿಕೆಗೆ ಪ್ರೋತ್ಸಾಹ, ಶೀಘ್ರ LIC ಐಪಿಒ
Budget 2021 | ಷೇರುಪೇಟೆ ಗೂಳಿಗೆ ಬಜೆಟ್ ಬಲ: ಏರಿಕೆಯೊಂದಿಗೆ ವಹಿವಾಟು ಪೂರ್ಣಗೊಳಿಸಿದ ಬ್ಯಾಂಕ್ ನಿಫ್ಟಿ
Published On - 7:59 pm, Mon, 1 February 21