Bill Gates: ನಿನ್ನಂಥ ಅಪ್ಪ ಇಲ್ಲ… ಮಕ್ಕಳಿಗೆ ನೂರಕ್ಕೆ ಒಂದು ರುಪಾಯಿಯೂ ಕೊಡದ ಬಿಲ್ ಗೇಟ್ಸ್; ಮಕ್ಕಳು ಏನಂತಾರೆ ನೋಡಿ…
Bill Gates unwilling to be dynastic: ಮಕ್ಕಳಿಗೆ ಆಸ್ತಿ ಮಾಡಬಾರದು, ವಿದ್ಯೆ ಕಲಿಸಿಕೊಡಬೇಕು ಎಂದು ದೊಡ್ಡವರು ಹೇಳುತ್ತಾರೆ. ಇಂಥ ಧೋರಣೆ ಹೊಂದಿದವರು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್. ಇವರ ಬಳಿ ಇರುವ ಆಸ್ತಿ ಎಲ್ಲವನ್ನೂ ಮೂವರು ಮಕ್ಕಳಿಗೆ ಕೊಟ್ಟರೆ ಅವರ ಮಕ್ಕಳು, ಮರಿಮಕ್ಕಳು ಕೂತು ತಿನ್ನುವಷ್ಟು ಆಗುತ್ತದೆ. ಆದರೆ, ಬಿಲ್ ಗೇಟ್ಸ್ ತಮ್ಮ ಸಂಪತ್ತಿನಲ್ಲಿ ಶೇ. 1ರಷ್ಟರನ್ನೂ ಮಕ್ಕಳಿಗೆ ಕೊಡುತ್ತಿಲ್ಲ.

ಭಾರತದಲ್ಲಿ ಯಾರಾದರೂ ಶ್ರೀಮಂತರನ್ನು ಕೇಳಿನೋಡಿ, ಯಾಕಿಷ್ಟು ಆಸ್ತಿ ಮಾಡಿಟ್ಟಿದ್ದೀರಿ ಅಂತ. ಮಕ್ಕಳು, ಮೊಮ್ಮಕ್ಕಳಿಗೆ ಕೂತು ತಿನ್ನುವಷ್ಟಾದರೂ ಆಸ್ತಿ ಮಾಡಬೇಡವೇ ಅನ್ನುತ್ತಾರೆ. ಸಾಮಾನ್ಯವಾಗಿ ಇಲ್ಲಿ ಒಬ್ಬ ವ್ಯಕ್ತಿ ಆಸ್ತಿ ಮಾಡಿದರೆ, ಅದು ಮಕ್ಕಳಿಗೂ ವರ್ಗಾವಣೆ ಆಗಿ ಹೋಗುತ್ತದೆ. ಭಾರತ ಮಾತ್ರವಲ್ಲ, ವಿಶ್ವದ ಹೆಚ್ಚಿನ ಕಡೆಯೂ ಇದೇ ಪ್ರವೃತ್ತಿ ಇರುವುದು. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಇದಕ್ಕೆ ಹೊರತಾದವರು. ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು. ತಮ್ಮ ಆದಾಯದ ಹೆಚ್ಚಿನ ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವ ಕೆಲವೇ ಶ್ರೀಮಂತರಲ್ಲಿ ಅವರೂ ಒಬ್ಬರು. ಆದಾಗ್ಯೂ ಅವರ ಬಳಿ 101.2 ಬಿಲಿಯನ್ ಡಾಲರ್ನಷ್ಟು ನಿವ್ವಳ ಆಸ್ತಿ ಇದೆ. ಇವರ ಹೆಚ್ಚಿನ ಆಸ್ತಿಯಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯ ಷೇರುಗಳೇ ಇರುವುದು. ಇವರು ತಮ್ಮ ಆಸ್ತಿಯಲ್ಲಿ ಶೇಕಡಾ ಒಂದು ಭಾಗವನ್ನೂ ಮಕ್ಕಳಿಗೆ ನೀಡುವುದಿಲ್ಲವಂತೆ.
ಭಾರತದ ಖ್ಯಾತ ಯೂಟ್ಯೂಬರ್ ರಾಜ್ ಶಮಾನಿಗೆ ನೀಡಿದ ಸಂದರ್ಶನದಲ್ಲಿ ಬಿಲ್ ಗೇಟ್ಸ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ಇದೇನು ವಂಶಪಾರಂಪರ್ಯವಲ್ಲ. ನನ್ನ ಆಸ್ತಿಯಲ್ಲಿ ಮಕ್ಕಳಿಗೆ ಸಿಗುವುದು ಶೇ. 1ಕ್ಕಿಂತ ಕಡಿಮೆ. ಅವರು ತಾವೇ ಸ್ವಂತವಾಗಿ ಗಳಿಸಿ ಯಶಸ್ಸು ಹೊಂದಲು ಅವಕಾಶ ಕೊಡಬಯಸುತ್ತೇನೆ. ನನಗೆ ಸಿಕ್ಕ ಅಪೂರ್ವವಾದ ಅದೃಷ್ಟ ಮತ್ತು ಸಂಪತ್ತು ಅವರನ್ನು ಆವರಿಸಿಕೊಳ್ಳಬಾರದು ಎನ್ನುವುದು ನನ್ನ ಭಾವನೆ’ ಎಂದು ಮೈಕ್ರೋಸಾಫ್ಟ್ ಮಾಜಿ ಸಿಇಒ ಹೇಳಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಸೌಕರ್ಯ; ಭಾರತದ ಮುಂದೆ ಸಿಲಿಕಾನ್ ವ್ಯಾಲಿ ಏನೂ ಇಲ್ಲ: ವಿವೇಕ್ ವಾಧವಾ
69 ವರ್ಷದ ಬಿಲ್ ಗೇಟ್ಸ್ ಅವರು ಮೆಲಿಂದಾ ಗೇಟ್ಸ್ ಜೊತೆ ವಿವಾಹವಾಗಿ, ವಿಚ್ಛೇದನ ಹೊಂದಿದ್ದಾರೆ. ಈ ವಿವಾಹದಿಂದ ಅವರಿಗೆ ಮೂವರು ಮಕ್ಕಳಿದ್ದಾರೆ. ಜೆನಿಫರ್ ಗೇಟ್ಸ್ (28) ರೋರಿ ಗೇಟ್ಸ್ (25) ಮತ್ತು ಫೋಬೆ ಗೇಟ್ಸ್ (22) ಅವರು ಆ ಮೂವರು ಮಕ್ಕಳು.
ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ವಿರುದ್ಧ ಬಡದೇಶಗಳನ್ನು ತಮ್ಮ ಪ್ರಯೋಗಶಾಲೆ ಮಾಡಿಕೊಂಡಿದ್ದಾರೆ ಎನ್ನುವುದೂ ಸೇರಿದಂತೆ ಕೆಲ ಆರೋಪಗಳಿವೆ. ಅವೇನೇ ಇದ್ದರೂ ಗೇಟ್ಸ್ ವೈಯಕ್ತಿಕವಾಗಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕ ವ್ಯಕ್ತಿಯಾಗಿ ಗುರುತಾಗಿದ್ದಾರೆ. ಗೇಟ್ಸ್ ಫೌಂಡೇಶನ್ ಮೂಲಕ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.
ಅಪ್ಪನ ಆಸ್ತಿ ಸಿಗದ್ದಕ್ಕೆ ಬಿಲ್ ಗೇಟ್ಸ್ ಮಕ್ಕಳಿಗೆ ಬೇಸರ ಇಲ್ಲವಾ?
‘ಮಕ್ಕಳಿಗೆ ನಮ್ಮ ಬೆಂಬಲ ಮತ್ತು ಪ್ರೀತಿ ಸದಾ ಇರುತ್ತದೆ. ಎಲ್ಲರನ್ನೂ ಸಮಾನವಾಗಿ ನೋಡುತ್ತೇವೆ. ಅವರಿಗೆ ಎಲ್ಲಾ ಅವಕಾಶಗಳನ್ನೂ ನೀಡುತ್ತೇನೆ. ಆದರೆ, ಈ ಸಂಪನ್ಮೂಲಗಳಲ್ಲಿ (ಫೌಂಡೇಶನ್ನಲ್ಲಿರುವ ನಿಧಿ) ಹೆಚ್ಚಿನವು ಅಗತ್ಯ ಇದ್ದವರಿಗೆ ಸಲ್ಲಬೇಕು ಎಂಬುದು ನಮ್ಮ ನಿಲುವು. ಇದನ್ನು ಅವರಿಗೆ ಅರ್ಥ ಮಾಡಿಸಿದ್ದೇವೆ. ಮಕ್ಕಳು ಫೌಂಡೇಶನ್ನ ಯಶಸ್ಸನ್ನು ಕಂಡಿದ್ದಾರೆ. ಅವರಿಗೆ ಅದರ ಬಗ್ಗೆ ಹೆಮ್ಮೆ ಇರಬಹುದು’ ಎಂದು ಸಂದರ್ಶನದಲ್ಲಿ ಬಿಲ್ ಗೇಟ್ಸ್ ವಿವರಿಸಿದ್ದಾರೆ.
ಇದನ್ನೂ ಓದಿ: ಚಾಣಕ್ಷ್ಯ ವಾರನ್ ಬಫೆಟ್; ಊರೆಲ್ಲಾ ತೋಪೆದ್ದರೂ ಕರಗಲಿಲ್ಲ ಇವರ ಶ್ರೀಮಂತಿಕೆ; ಇದು ಹೇಗೆ ಸಾಧ್ಯ?
ಬಿಲ್ ಗೇಟ್ಸ್ ಅವರ ಕೊನೆಯ ಮಗಳಾದ ಫೋಬೆ ಗೇಟ್ಸ್ ಅವರು ಪೋಡ್ಕ್ಯಾಸ್ವೊಂದರಲ್ಲಿ ಆಡಿದ ಮಾತು, ಅಪ್ಪನಿಗೆ ತಕ್ಕ ಮಗಳು ಎಂದು ರುಜುವಾತು ಮಾಡಿದಂತಿದೆ.
‘ದೊಡ್ಡ ಕುಟುಂಬದಿಂದ ಬಂದಿರುವುದು ನನ್ನಲ್ಲಿ ಅಭದ್ರ ಭಾವನೆ ತರುತ್ತದೆ. ನನ್ನದೇ ಸ್ವಂತ ಗುರುತು ಸ್ಥಾಪಿಸಲು ಬಯಸುತ್ತೇನೆ’ ಎಂದು 22 ವರ್ಷದ ಫೋಬೆ ಗೇಟ್ಸ್ ಹೇಳುತ್ತಾರೆ. ಸ್ಟಾನ್ಫೋರ್ಡ್ ವಿವಿಯಲ್ಲಿ ಓದಿದ ಈ ಯುವತಿಯು ‘ಫಿಯಾ’ ಎನ್ನುವ ಫ್ಯಾಷನ್ ಟೆಕ್ ಕಂಪನಿ ಆರಂಭಿಸಿದ್ದಾಳೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ