ಚಾಣಕ್ಷ್ಯ ವಾರನ್ ಬಫೆಟ್; ಊರೆಲ್ಲಾ ತೋಪೆದ್ದರೂ ಕರಗಲಿಲ್ಲ ಇವರ ಶ್ರೀಮಂತಿಕೆ; ಇದು ಹೇಗೆ ಸಾಧ್ಯ?
Warren Buffett's $12B Profit: 2025ರಲ್ಲಿ ಹೆಚ್ಚಿನ ಶ್ರೀಮಂತರು ಷೇರು ಮಾರುಕಟ್ಟೆಯ ಕುಸಿತದಿಂದ ನಷ್ಟ ಅನುಭವಿಸಿದಾಗ, ವಾರನ್ ಬಫೆಟ್ 12 ಬಿಲಿಯನ್ ಡಾಲರ್ ಲಾಭ ಗಳಿಸಿದ್ದಾರೆ. ಅವರ ಚಾಣಾಕ್ಷ ಹೂಡಿಕೆ ತಂತ್ರ ಮತ್ತು 2024ರಲ್ಲಿ ಪ್ರಮುಖ ಷೇರುಗಳ ಮಾರಾಟದಿಂದಾಗಿ ಈ ಲಾಭ ಸಾಧ್ಯವಾಯಿತು. ಅವರ ಬರ್ಕ್ಷೈರ್ ಹಾಥ್ವೇ ಕಂಪನಿಯ ಬೃಹತ್ ನಗದು ಸಂಗ್ರಹವು ಸಂಭವನೀಯ ಅಪಾಯ ತಪ್ಪಿಸಲು ಸಹಾಯ ಮಾಡಿತು. ಮಾರುಕಟ್ಟೆಯಲ್ಲಿನ ಅತಿಯಾದ ಬೆಲೆಯನ್ನು ಅವರು ಮುಂಚಿತವಾಗಿ ಊಹಿಸಿದ್ದರು.

ನವದೆಹಲಿ, ಏಪ್ರಿಲ್ 6: ಷೇರು ಮಾರುಕಟ್ಟೆ ಪ್ರಚಂಡ ಕುಸಿತದ ಹಾದಿಯಲ್ಲಿದೆ. ಬಹುತೇಕ ಎಲ್ಲಾ ಶ್ರೀಮಂತರ ಶ್ರೀಮಂತಿಕೆ ಸಾಕಷ್ಟು ಕಡಿಮೆ ಆಗಿದೆ. ಮಾರುಕಟ್ಟೆ ಆಘಾತಗಳ ಮಧ್ಯೆಯೂ ಲಾಭ ಮಾಡಿದ ಶ್ರೀಮಂತರ ಸಂಖ್ಯೆ ವಿರಳ. ಈ ವಿರಳರಲ್ಲಿ ವಾರನ್ ಬಫೆಟ್ (Warren Buffett) ಪ್ರಮುಖರು. ವಿಶ್ವದ ಹತ್ತು ಅತಿ ಶ್ರೀಮಂತರಲ್ಲಿ ಈ ವರ್ಷ (2025) ಸಂಪತ್ತು ಹೆಚ್ಚಿರುವುದು ವಾರನ್ ಬಫೆಟ್ ಅವರದ್ದು ಮಾತ್ರವೇ. ಇಲಾನ್ ಮಸ್ಕ್ ಅವರಿಂದ ಹಿಡಿದು ಸರ್ಗೇ ಬ್ರಿನ್ವರೆಗೆ (Sergey Brin) ಉಳಿದೆಲ್ಲಾ ಟಾಪ್-10 ಶ್ರೀಮಂತರು ನಷ್ಟ ಕಂಡಿದ್ದಾರೆ. ಬರ್ಕ್ಶೈರ್ ಹಾಥವೇ ಕಂಪನಿಯ ಸಿಇಒ ಆದ ವಾರನ್ ಬಫೆಟ್ 2025ರಲ್ಲಿ 12 ಬಿಲಿಯನ್ ಡಾಲರ್ ಆದಾಯ ಹೆಚ್ಚಿಸಿಕೊಂಡಿದ್ದಾರೆ. ಒಟ್ಟು 155 ಬಿಲಿಯನ್ ಡಾಲರ್ ನೆಟ್ ವರ್ತ್ ಇರುವ ಅವರು ವಿಶ್ವದ ಆರನೇ ಅತಿದೊಡ್ಡ ಶ್ರೀಮಂತ.
ಮಾರುಕಟ್ಟೆ ವಿಸ್ಫೋಟದ ಸುಳಿವು ಸಿಕ್ಕಿತ್ತಾ ವಾರನ್ ಬಫೆಟ್?
ವಾರನ್ ಬಫೆಟ್ ಬಹಳ ಚಾಣಾಕ್ಷ್ಯ ಹೂಡಿಕೆದಾರ. ಕಳೆದ 15 ತಿಂಗಳಿಂದಲೇ ಅವರು ಪ್ರಮುಖ ಷೇರುಗಳನ್ನು ಮಾರುತ್ತಾ ಬಂದಿದ್ದಾರೆ. 2024ರಲ್ಲಿ ಮಾರುಕಟ್ಟೆ ಇನ್ನೂ ಗೂಳಿ ಓಟದಲ್ಲಿ ಇರುವಾಗಲೇ ಇವರು ಷೇರುಗಳನ್ನು ಮಾರಿ ಅಚ್ಚರಿ ಮೂಡಿಸಿದ್ದರು. ಅದು ಪ್ರಾಫಿಟ್ ಬುಕಿಂಗ್ ಮಾತ್ರವೇ ಆಗಿರಲಿಲ್ಲ. ಬಹಳ ಅಸಹಜ ಬೆಳವಣಿಗೆ ಎನಿಸಿತ್ತು.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ನಿಂದ ಭಾರತದ ಆರ್ಥಿಕತೆಗೆ, ವಿವಿಧ ಸೆಕ್ಟರ್ಗಳಿಗೆ ಎಷ್ಟು ಹಾನಿ? ಇಲ್ಲಿದೆ ಡೀಟೇಲ್ಸ್
ವಾರನ್ ಬಫೆಟ್ ಅವರ ಬರ್ಕ್ಶೈರ್ ಒಂದು ಹೂಡಿಕೆ ಸಂಸ್ಥೆ. 2024ರಲ್ಲಿ ಇದು ಮಾರಿದ ಷೇರು ಅಷ್ಟಿಷ್ಟಲ್ಲ. ಬರೋಬ್ಬರಿ 134 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಮಾರಿತ್ತು. 2024ರ ಅಂತ್ಯದಲ್ಲಿ ಬರ್ಕ್ಶೈರ್ ಬಳಿ ಇದ್ದ ನಗದು ಹಣ 334 ಬಿಲಿಯನ್ ಡಾಲರ್. ಬರ್ಕ್ಶೈರ್ನ ಸಂಪತ್ತಿನಲ್ಲಿ ಅರ್ಧಕ್ಕಿಂತ ಹೆಚ್ಚು ಮೊತ್ತವು ಕ್ಯಾಷ್ ರಿಸರ್ವ್ನಲ್ಲಿತ್ತು. ಯಾವುದೇ ಹೂಡಿಕೆದಾರ ಇಷ್ಟು ದೊಡ್ಡ ಮೊತ್ತವನ್ನು ಷೇರುಗಳಲ್ಲಿ ಹೂಡಿಕೆ ಮಾಡದೇ ಹಾಗೇ ಇರಿಸಿಕೊಳ್ಳುತ್ತಾರೆ ಎಂದರೆ ಅದು ಯಾವುದೋ ದೊಡ್ಡ ಸುಳಿವನ್ನು ಕೊಡುವಂತಿತ್ತು.
ವಾರನ್ ಬಫೆಟ್ಗೆ ಭವಿಷ್ಯ ಕಂಡಿತ್ತಾ?
ವಾರನ್ ಬಫೆಟ್ ಅವರು ಷೇರುಗಳ ಮಾರಾಟದ ಭರಾಟೆಯಲ್ಲಿರುವಾಗ ಹೇಳಿದ ಒಂದು ವಿಷಯವನ್ನು ಗಮನಿಸಬೇಕು. ಷೇರು ಮಾರುಕಟ್ಟೆಯಲ್ಲಿರುವ ಅನೇಕ ಷೇರುಗಳು ಅತಿಯಾದ ವ್ಯಾಲ್ಯುಯೇಶನ್ ಅಥವಾ ಬೆಲೆ ಹೊಂದಿವೆ ಎಂಬುದು ಅವರ ಅನಿಸಿಕೆಯಾಗಿತ್ತು. ಆ್ಯಪಲ್, ಮೆಟಾ ಇತ್ಯಾದಿ ದೊಡ್ಡ ಕಂಪನಿಗಳ ಷೇರುಗಳನ್ನು ಬರ್ಕ್ಶೈರ್ ಕೈಬಿಟ್ಟಿತ್ತು.
ಬರ್ಕ್ಶೈರ್ನ ಕ್ಯಾಷ್ ಹಣದಲ್ಲಿ ಹೆಚ್ಚಿನವು ಅಮೆರಿಕ ಸರ್ಕರದ ಟ್ರೆಷರಿ ಬಿಲ್ಗಳಲ್ಲಿ ಹೂಡಿಕೆಯಾಗಿವೆ. ಅದೂ ಕಿರು ಅವಧಿಯ ಸರ್ಕಾರಿ ಬಾಂಡ್ಗಳಲ್ಲಿ ವಾರನ್ ಬಫೆಟ್ ಹೂಡಿಕೆ ಮಾಡಿದ್ದಾರೆ. ಹೀಗಾಗಿ, ಷೇರು ಮಾರುಕಟ್ಟೆ ಗಿರಗಿರನೇ ಸುತ್ತುತ್ತಿದ್ದರೂ ಬಫೆಟ್ ಅವರ ಆಸ್ತಿ ಹಾರಿ ಹೋಗುತ್ತಿಲ್ಲ.
ಇದನ್ನೂ ಓದಿ: ಅಮೆರಿಕದ ಸರಕುಗಳಿಗೆ ಚೀನಾದಿಂದಲೂ ಶೇ. 34 ಪ್ರತಿಸುಂಕ ಹೇರಿಕೆ; ಎಲ್ಲಿಯವರೆಗೆ ಹೋಗುತ್ತೆ ಈ ಟ್ರೇಡ್ ವಾರ್?
ಬಫೆಟ್ ಮುಂದಿನ ಹೆಜ್ಜೆಗಳ ಮೇಲೆ ಕಣ್ಣು
ಸಾಕಷ್ಟು ಕ್ಯಾಷ್ ರಿಸರ್ವ್ ಹೊಂದಿರುವ ವಾರನ್ ಬಫೆಟ್ ಅವರು ಯಾವ್ಯಾವ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ ಎಂದು ಜಗತ್ತಿನಾದ್ಯಂತ ಬಹಳ ಜನರು ಗಮನಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬರ್ಕ್ಶೈರ್ ಹಾಥವೇ ಸಂಸ್ಥೆಯು ಶೆವ್ರಾನ್ ಕಾರ್ಪೊರೇಶನ್ ಷೇರುಗಳಲ್ಲಿ ಹೂಡಿಕೆ ಮಾಡಿದೆ. ಮೂರು ತಿಂಗಳ ಹಿಂದೆ ಆಕ್ಸಿಡೆಂಟಲ್ ಪೆಟ್ರೋಲಿಯಂ ಎಂಬ ಕಂಪನಿಯ ಷೇರುಗಳನ್ನು ಖರೀದಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ