ಟ್ರಂಪ್ ಟ್ಯಾರಿಫ್ನಿಂದ ಭಾರತದ ಆರ್ಥಿಕತೆಗೆ, ವಿವಿಧ ಸೆಕ್ಟರ್ಗಳಿಗೆ ಎಷ್ಟು ಹಾನಿ? ಇಲ್ಲಿದೆ ಡೀಟೇಲ್ಸ್
Trump tariffs' effect on India: ಅಮೆರಿಕ ಸರ್ಕಾರ ಭಾರತದ ಮೇಲೆ ಶೇ. 26ರಷ್ಟು ಟ್ಯಾರಿಫ್ ಹೇರಿಕೆ ಮಾಡಿದೆ. ಅಮೆರಿಕದೊಂದಿಗೆ ಭಾರತದ ವ್ಯಾಪಾರ ಸಂಬಂಧ ಉತ್ತಮವಾಗಿದೆ. ಆಮದಿಗಿಂತ ರಫ್ತು ಹೆಚ್ಚು ಮಾಡುತ್ತದೆ. ಈಗ ಆಮದು ಸುಂಕ ವಿಧಿಸಿರುವುದರಿಂದ ಬ್ಯುಸಿನೆಸ್ ಸಹಜವಾಗಿ ಕಡಿಮೆ ಆಗಬಹುದಾದರೂ, ಒಟ್ಟಾರೆ ತೀವ್ರ ಹಾನಿ ಮಾಡುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು.

ನವದೆಹಲಿ, ಏಪ್ರಿಲ್ 3: ಡೊನಾಲ್ಡ್ ಟ್ರಂಪ್ ಅವರು ಭಾರತದ ವಸ್ತುಗಳ ಮೇಲೆ ಶೇ. 26ರಷ್ಟು ಆಮದು ಸುಂಕ (US tariffs) ವಿಧಿಸುವುದಾಗಿ ಪ್ರಕಟಿಸಿದ್ದಾರೆ. ಅಮೆರಿಕದೊಂದಿಗೆ ಭಾರತದ ವ್ಯಾಪಾರ ವ್ಯವಹಾರ ಪ್ರಬಲವಾಗಿದೆ. ಅಮೆರಿಕದಿಂದ ಭಾರತ ಆಮದು ಮಾಡಿಕೊಳ್ಳುವುದಕ್ಕಿಂತ, ರಫ್ತನ್ನು ಹೆಚ್ಚು ಮಾಡುತ್ತದೆ. ಹೀಗಾಗಿ, ಅಮೆರಿಕದ ಮಾರುಕಟ್ಟೆಯು ಭಾರತದ ಕೆಲ ಪ್ರಮುಖ ಉದ್ದಿಮೆಗಳಿಗೆ ಶಕ್ತಿಯಾಗಿದೆ. ಹೀಗಾಗಿ, ಅಮೆರಿಕ ಸರ್ಕಾರ ಅಧಿಕ ಮಟ್ಟದ ಆಮದು ಸುಂಕ ವಿಧಿಸುತ್ತಿರುವುದು ಸಹಜವಾಗಿ ದಿಗಿಲು ತರುವ ಸಂಗತಿ. ಟ್ರಂಪ್ ಅವರ ಟ್ಯಾರಿಫ್ ಕ್ರಮದಿಂದ ಭಾರತದ ಮೇಲೆ ವಾಸ್ತವವಾಗಿ ಎಷ್ಟು ಪರಿಣಾಮ ಬೀರುತ್ತದೆ, ಜಿಡಿಪಿಗೆ ಎಷ್ಟು ಹಾನಿಯಾಗುತ್ತದೆ, ಯಾವ್ಯಾವ ಸೆಕ್ಟರ್ಗೆ ಹಿನ್ನಡೆಯಾಗುತ್ತದೆ, ಯಾವ ಸ್ಟಾಕ್ಗಳಿಗೆ ಪರಿಣಾಮವಾಗುತ್ತದೆ ಎಂಬುದರ ವಿವರ ಇಲ್ಲಿದೆ:
ಭಾರತದ ಜವಳಿ ಉದ್ಯಮದ ಮೇಲೆ ಟ್ಯಾರಿಫ್ ಪರಿಣಾಮ:
ಒಟ್ಟು ರಫ್ತು 35-36 ಬಿಲಿಯನ್ ಡಾಲರ್. ಇದರಲ್ಲಿ ಅಮೆರಿಕಕ್ಕೆ ಶೇ. 28 ರಫ್ತು. ಈ ಉದ್ಯಮಕ್ಕೆ ಶೇ. 10 ಮೂಲ ತೆರಿಗೆ ಮತ್ತು ಶೇ. 16 ಪ್ರತಿಸುಂಕ, ಹೀಗೆ ಒಟ್ಟು ಶೇ. 26 ಆಮದು ಸುಂಕವನ್ನು ಅಮೆರಿಕ ವಿಧಿಸಿದೆ.
ವೆಲ್ಸ್ಪ್ ಇಂಡಿಯಾ, ಟ್ರೈಡೆಂಟ್ ಇಂಡಿಯಾ, ಅರವಿಂದ್ ಲಿ ಸಂಸ್ಥೆಗಳ ಹೆಚ್ಚಿನ ಜವಳಿ ಉತ್ಪನ್ನಗಳು ಅಮೆರಿಕಕ್ಕೆ ಸರಬರಾಜಾಗುತ್ತವೆ. ಇವುಗಳ ಮೇಲೆ ಟ್ಯಾರಿಫ್ ಪರಿಣಾಮ ಬೀರಬಹುದು.
ಇದನ್ನೂ ಓದಿ: ಭಾರತದ ಫಾರ್ಮಾ ಮತ್ತು ಐಟಿ ಉದ್ಯಮ ಬಚಾವ್; ಟ್ರಂಪ್ ಪ್ರತಿಸುಂಕದಿಂದ ವಿನಾಯಿತಿ ಸಿಕ್ಕ ಸರಕುಗಳ್ಯಾವುವು? ಇಲ್ಲಿದೆ ಪಟ್ಟಿ
ಭಾರತದ ರಾಸಾಯನಿಕ ಸೆಕ್ಟರ್ ಮೇಲೆ ಟ್ರಂಪ್ ಟ್ಯಾರಿಫ್ ಪರಿಣಾಮ
ಭಾರತದ ಕೆಮಿಕಲ್ಸ್ ಉದ್ಯಮವು ವರ್ಷಕ್ಕೆ 25ರಿಂದ 30 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡುತ್ತದೆ. ಇದರಲ್ಲಿ ಅಮೆರಿಕಕ್ಕೆ ಹೋಗುವುದು ಶೇ. 20-25ರಷ್ಟು ಎನ್ನಲಾಗಿದೆ. ಶೇ. 26ರಷ್ಟು ಸುಂಕ ವಿಧಿಸುವುದರಿಂದ ಅಮೆರಿಕದ ಗ್ರಾಹಕರು ಭಾರತ ಬಿಟ್ಟು ಚೀನಾದಿಂದ ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.
ಯುಪಿಎಲ್ ಲಿ, ಎಸ್ಆರ್ಎಫ್ ಲಿ, ಆರತಿ ಇಂಡಸ್ಟ್ರೀಸ್ ಸಂಸ್ಥೆಗಳಿಗೆ ಇದರ ಪರಿಣಾಮ ಬೀರಬಹುದು.
ಭಾರತದ ಕೃಷಿ ಕ್ಷೇತ್ರದ ಮೇಲೆ ಟ್ರಂಪ್ ಟ್ಯಾರಿಫ್ ಪರಿಣಾಮ
ಭಾರತದ ಕೃಷಿ ಕ್ಷೇತ್ರವು 20-25 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡುತ್ತದೆ. ಇದರಲ್ಲಿ ಅಮೆರಿಕ ಪಾಲು ಶೇ. 10-15ರಷ್ಟಿದೆ. ಆವಂತಿ ಫೀಡ್ಸ್, ಏಪೆಕ್ಸ್ ಫ್ರೋಜನ್ ಫೂಡ್ಸ್, ಐಟಿಸಿ ಲಿ ಮೊದಲಾದ ಕೆಲ ಸಂಸ್ಥೆಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ವಿಧಿಸಿರುವ ಪ್ರತಿ ಸುಂಕ ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ಭಾರತದ ಇತರ ಪ್ರಮುಖ ರಫ್ತು ಉದ್ಯಮಗಳೆಂದರೆ ಐಟಿ, ಫಾರ್ಮಾ, ಆಟೊಮೊಬೈಲ್ ಸೆಕ್ಟರ್ ಸೇರಿವೆ. ಅದರೆ, ಇವುಗಳ ಮೇಲೆ ಸುಂಕ ವಿನಾಯಿತಿ ಇದೆ. ಫಾರ್ಮಾ ಸೆಕ್ಟರ್ 20-22 ಬಿಲಿಯನ್ ಡಾಲರ್ ರಫ್ತು ಮಾಡುತ್ತಿದ್ದು, ಇದರಲ್ಲಿ ಶೇ. 40ರಷ್ಟವು ಅಮೆರಿಕದ ಮಾರುಕಟ್ಟೆಗೆ ಹೋಗುತ್ತದೆ. ಈಗ ಟ್ಯಾರಿಫ್ನಿಂದ ವಿನಾಯಿತಿ ಸಿಕ್ಕಿರುವುದು ಈ ಉದ್ಯಮಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗಿದೆ.
ಆಟೊಮೊಬೈಲ್ ಸೆಕ್ಟರ್ 15ರಿಂದ 18 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡುತ್ತದೆ. ಇದರಲ್ಲಿ ಅಮೆರಿಕಕ್ಕೆ ಶೇ. 15-20ರಷ್ಟು ರಫ್ತಾಗುತ್ತದೆ. ಆದರೆ, ಅತಿಹೆಚ್ಚು ರಫ್ತಾಗುವುದು ಐಟಿ ಸೆಕ್ಟರ್ನಿಂದ. ಇದು ವರ್ಷಕ್ಕೆ 130-140 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡುತ್ತದೆ. ಶೇ. 60-65ರಷ್ಟು ಐಟಿ ಸರ್ವಿಸ್ ಅಮೆರಿಕಕ್ಕೆ ಹೋಗುತ್ತದೆ.
ಭಾರತದ ಮೇಲೆ ಒಟ್ಟಾರೆ ಪರಿಣಾಮ ಎಷ್ಟಾಗಬಹುದು?
ಭಾರತದಿಂದ ಅಮೆರಿಕಕ್ಕೆ ಒಟ್ಟಾರೆ ಆಗುವ ರಫ್ತು ಸುಮಾರು 66 ಬಿಲಿಯನ್ ಡಾಲರ್. ಶೇ. 26ರ ಸುಂಕ ಹೇರಿಕೆಯಾದರೆ, ರಫ್ತು 5 ಬಿಲಿಯನ್ ಡಾಲರ್ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಹೀಗಾದಲ್ಲಿ ಜಿಡಿಪಿ ಬೆಳವಣಿಗೆಯು 10ರಿಂದ 60 ಮೂಲಾಂಕಗಳಷ್ಟು ಕುಂಠಿತಗೊಳ್ಳಬಹುದು. ಉದಾಹರಣೆಗೆ, ಶೇ. 7ರಷ್ಟು ಬೆಳೆಯಬಹುದಾಗಿದ್ದ ಜಿಡಿಯು ಶೇ. 6.4-6.9ರಷ್ಟು ಬೆಳೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ