ಡಿಜಿಟಲ್ ಎನರ್ಜಿ ಗ್ರಿಡ್, ಇದು ವಿದ್ಯುತ್ ಕ್ಷೇತ್ರದ ಯುಪಿಐ: ನಂದನ್ ನಿಲೇಕಣಿ
Nandan Nilekani at Arkam annual meet: ಯುಪಿಐ ಹಣ ಪಾವತಿ ಸಿಸ್ಟಂ ಬಂದ ಮೇಲೆ ಭಾರತದ ಹಣಕಾಸು ಕ್ಷೇತ್ರದಲ್ಲಿ ದೊಡ್ಡ ಪರಿವರ್ತನೆಯೇ ಆಗಿಹೋಗಿದೆ. ಸಣ್ಣ ವ್ಯಾಪಾರಿಗಳಿಗೂ ಡಿಜಿಟಲ್ ಬಲ ಸಿಕ್ಕಿದೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ಯುಪಿಐ ರೀತಿಯಲ್ಲಿ ಎನರ್ಜಿ ಕ್ಷೇತ್ರದಲ್ಲಿ ಡಿಜಿಟಲ್ ಎನರ್ಜಿ ಗ್ರಿಡ್ ದೊಡ್ಡ ಪರಿವರ್ತನೆ ಬರಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು, ಮಾರ್ಚ್ 31: ಹಣಕಾಸು ಪಾವತಿ ಕ್ಷೇತ್ರದಲ್ಲಿ ಯುಪಿಐ ಕ್ರಾಂತಿ ತಂದ ರೀತಿಯಲ್ಲಿ, ಎನರ್ಜಿ ಕ್ಷೇತ್ರದಲ್ಲೂ ಕ್ರಾಂತಿ ಆಗಲಿದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ (Nandan Nilekani) ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆರ್ಕಮ್ ವಾರ್ಷಿಕ ಸಭೆಯಲ್ಲಿ (Arkam Annual Meet 2025) ಮಾತನಾಡುತ್ತಿದ್ದ ಆಧಾರ್ ಪ್ರಾಜೆಕ್ಟ್ ರೂವಾರಿಯಾದ ನಿಲೇಕಣಿ ಅವರು, ಭಾರತದಾದ್ಯಂತ ಕೋಟ್ಯಂತರ ಜನರು ವಿದ್ಯುತ್ ವಹಿವಾಟುಗಳನ್ನು ನಡೆಸುವ ಕಾಲ ಬರುತ್ತದೆ ಎಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ತಾನು ಮಾತನಾಡಿದ ಆ ವಿಡಿಯೋ ತುಣಕನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿಯೊಂದು ಮನೆಯಲ್ಲೂ ಸೋಲಾರ್ ಮತ್ತು ಇವಿ ಬ್ಯಾಟರಿಗಳು ಬರಲಿರುವುದರಿಂದ ಪ್ರತೀ ಮನೆಯಲ್ಲೂ ಎನರ್ಜಿ ಉತ್ಪಾದನೆ ಮತ್ತು ಸಂಗ್ರಹ ಸಾಧ್ಯ. ಇದು ಎನರ್ಜಿ ವಹಿವಾಟಿಗೆ ಎಡೆ ಮಾಡಿಕೊಡುತ್ತದೆ ಎಂಬುದು ನಂದನ್ ನಿಲೇಕಣಿ ಅವರ ಅನಿಸಿಕೆ.
‘ಮುಂದಿನ ಯುಪಿಐ ಕ್ಷಣ ಯಾವುದು ಎಂದರೆ ಅದು ಎನರ್ಜಿ (ವಿದ್ಯುತ್ ಅಥವಾ ಇಂಧನ). ನಾವು ಈ ಎನರ್ಜಿಯನ್ನು ಸಣ್ಣ ಮೊತ್ತಗಳಲ್ಲಿ ಖರೀದಿಸುತ್ತಿದ್ದೇವೆ. ಜನರು ಇದ್ದಿಲನ್ನು ಪಡೆದು ನಿತ್ಯ ಬಳಸಬಹುದು. ನೀವು ಎಲ್ಪಿಜಿ ಸಿಲಿಂಡರ್ ಖರೀದಿಸುತ್ತೀರಿ. ಆದರೆ, ವಿದ್ಯುತ್ ಅನ್ನು ಗ್ರಿಡ್ ಮೂಲಕ ಪಡೆಯಬೇಕು ಎಂದೇ ಆಗಿದೆ. ಜನರೇಟರ್ ಹೊಂದಿದ್ದೇವೆ. ಆದರೆ, ಭವಿಷ್ಯದಲ್ಲಿ ಕೋಟ್ಯಂತರ ಜನರು ಈ ಎನರ್ಜಿ ಉತ್ಪಾದಕರಾಗಲಿದ್ದಾರೆ. ಪ್ರತಿಯೊಂದು ಮನೆಯಲ್ಲೂ ರೂಫ್ಟಾಪ್ ಸೋಲಾರ್ ಇರುವುದರಿಂದ ಅಲ್ಲೆಲ್ಲಾ ಎನರ್ಜಿ ಉತ್ಪಾದನೆ ಆಗುತ್ತದೆ. ಪ್ರತಿಯೊಂದು ಮನೆಯಲ್ಲೂ ಇವಿ ಬ್ಯಾಟರಿ ಇರುವುದರಿಂದ ಎಲ್ಲವೂ ಕೂಡ ಎನರ್ಜಿ ಸಂಗ್ರಹ ಆಗುತ್ತದೆ. ಹೀಗಾಗಿ, ಪ್ರತಿಯೊಂದು ಮನೆಯೂ ಕೂಡ ಶಕ್ತಿಯ ಉತ್ಪಾದಕರು, ಶಕ್ತಿಯ ಮಾರಾಟಗಾರರು ಮತ್ತು ಶಕ್ತಿಯ ಖರೀದಿದಾರರು ಆಗಿರುತ್ತದೆ. ನೀವು ನೆರೆಹೊರೆಯವರೊಂದಿಗೆ ಈ ಎನರ್ಜಿ ಮಾರಬಹುದು ಅಥವಾ ಖರೀದಿ ಮಾಡಬಹುದು. ಇದರಿಂದ ಕೋಟ್ಯಂತರ ಎನರ್ಜಿ ಉದ್ದಿಮೆದಾರರು ನಿರ್ಮಾಣಗೊಳ್ಳಲಿದ್ದಾರೆ’ ಎಂದು ತಾವು ಹಂಚಿಕೊಂಡ ವಿಡಿಯೋ ಕ್ಲಿಪ್ನಲ್ಲಿ ನಿಲೇಕಣಿ ಹೇಳುತ್ತಿರುವುದನ್ನು ಕೇಳಬಹುದು.
ಇದನ್ನೂ ಓದಿ: ಐಎಂಡಿ: ಇದು ಹವಾಮಾನ ಭವಿಷ್ಯವೂ ಹೇಳುತ್ತೆ, ಸರ್ಕಾರಕ್ಕೆ ಭರ್ಜರಿ ಆದಾಯವೂ ತರುತ್ತೆ
ಈ ಪೋಸ್ಟ್ಗೆ ಜನರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಹಣಕಾಸು ಕ್ಷೇತ್ರವು ಯುಪಿಐನಿಂದ ದೊಡ್ಡ ಪರಿವರ್ತನೆ ಕಂಡಂತೆ, ಡಿಜಿಟಲ್ ಎನರ್ಜಿ ಗ್ರಿಡ್ ಎಂಬುದು ಭಾರತದ ಎನರ್ಜಿ ಕ್ಷೇತ್ರದಲ್ಲಿ ದೊಡ್ಡ ಪರಿವರ್ತನೆ ತರಲಿದೆ. ಸಣ್ಣ ಉತ್ಪಾದಕರು ಸೇರಿ ಭಾರತಕ್ಕೆ ಇಂಧನ ಸ್ವಾವಲಂಬನೆ ಬರಲಿದ್ದಾರೆ ಎಂದು ನಿತಿನ್ ಗುಪ್ತಾ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.
Energy is the next UPI! Millions of small producers will participate in the Digital Energy Grid (DEG).
Full video: https://t.co/NboKoiSIXh pic.twitter.com/o2MbSquesQ
— Nandan Nilekani (@NandanNilekani) March 28, 2025
ಮತ್ತೊಬ್ಬ ಬಳಕೆದಾರರು ನಂದನ್ ನಿಲೇಕಣಿ ದೃಷ್ಟಿಕೋನವನ್ನು ಪ್ರಶ್ನಿಸಿದ್ದಾರೆ. ಮಾರುಕಟ್ಟೆಯಲ್ಲಿ ಎಲ್ಲರೂ ಮಾರಾಟಗಾರರೇ ಆಗಿಹೋದರೆ ಖರೀದಿದಾರರು ಯಾರು ಎಂದು ಕೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ತಯಾರಕಾ ವಲಯ ಇತ್ತೀಚೆಗೆ ಎಷ್ಟು ಮುಂದುವರಿದಿದೆ ಗೊತ್ತಾ? ಉದ್ಯಮಿ ಪ್ರಕಾಶ್ ದದಲಾನಿ ಕೊಟ್ಟ ನಿದರ್ಶನ ಇದು
ನಂದನ್ ನಿಲೇಕಣಿ ಅವರು ಆ ಕಾರ್ಯಕ್ರಮದಲ್ಲಿ ಮಾತನಾಡಿರುವ ಪೂರ್ಣ ವಿಡಿಯೋದ ಲಿಂಕ್ ಇಲ್ಲಿದೆ…
2035ಕ್ಕೆ 10 ಲಕ್ಷ ಸ್ಟಾರ್ಟಪ್ಗಳು
2035ಕ್ಕೆ ಭಾರತದಲ್ಲಿ 10 ಲಕ್ಷ ಸ್ಟಾರ್ಟಪ್ಗಳು ಸ್ಥಾಪನೆಯಾಗಿರಬಹುದು ಎಂಬುದು ನಮ್ಮ ನಿರೀಕ್ಷೆ. 2016ರ ವರ್ಷ ನೋಡಿದರೆ ಕೆಲ ಸಾವಿರ ಸ್ಟಾರ್ಟಪ್ಗಳಿದ್ದವೇನೋ. ಇವತ್ತು ಒಂದೂವರೆ ಲಕ್ಷ ಸ್ಟಾರ್ಟಪ್ಗಳಿವೆ. ಈ ಸ್ಟಾರ್ಟಪ್ಗಳ ಸಂಖ್ಯೆ ಹೆಚ್ಚಳ ಶೇ. 20ರ ದರದಲ್ಲಿ ಸಾಗಬಹುದು ಎಂದು ಭಾವಿಸಿದ್ದೇವೆ.
1 million Indian start-ups by 2035! It’s happening due to binary fission and an explosion of new businesses in Bharat. More here👇 pic.twitter.com/kAKp86UuR1
— Nandan Nilekani (@NandanNilekani) March 24, 2025
ಇಲ್ಲಿ ಒಂದು ರೀತಿಯಲ್ಲಿ ಬೈನರಿ ಫಿಶನ್ ಆಗುತ್ತದೆ. ಒಂದು ಸ್ಟಾರ್ಟಪ್ನಿಂದ ಮತ್ತಷ್ಟು ಸ್ಟಾರ್ಟಪ್ಗಳು ಉದಯಿಸುತ್ತವೆ. ಒಂದು ಸ್ಟಾರ್ಟಪ್ ಐಪಿಒಗೆ ಬಂದರೆ ನೂರಾರು ಹೊಸ ಸ್ಟಾರ್ಟಪ್ಗಳು ಹುಟ್ಟುತ್ತವೆ. ಸಣ್ಣ ನಗರಗಳಲ್ಲಿ ಮತ್ತು ಪಟ್ಟಣಗಳಲ್ಲಿ ಸ್ಟಾರ್ಟಪ್ಗಳು ಉದಯಿಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:35 am, Mon, 31 March 25