ಕಾಲೇಜ್ ಕ್ಯಾಂಟೀನ್ನಲ್ಲಿ ಮುಸುರೆ ತಿಕ್ಕುತ್ತಿದ್ದ ಬೆಂಗಳೂರು ಹುಡುಗ ಸಂಜಿತ್ ಈಗ ಆಸ್ಟ್ರೇಲಿಯಾದಲ್ಲಿ ಫೇಮಸ್ ಚಾಯ್ವಾಲಾ
Journey of Dropout Chaiwala founder Sanjith Koda: 18ನೇ ವಯಸ್ಸಿನಲ್ಲಿ ಬೆಂಗಳೂರಿನಿಂದ ಆಸ್ಟ್ರೇಲಿಯಾಗೆ ಹೋಗಿ ಅಲ್ಲಿ ಓದನ್ನು ಅರ್ಧಕ್ಕೆ ಬಿಟ್ಟು ಚಾ ಅಂಗಡಿ ಇಟ್ಟು ಸಕ್ಸಸ್ ಕಂಡಿದ್ದಾರೆ ಬೆಂಗಳೂರು ಹಡುಗ. ಸಂಜಿತ್ ಕೊಂಡ ಆಸ್ಟ್ರೇಲಿಯಾದಲ್ಲಿ ಓದುವಾಗ ಕಾಲೇಜು ಕ್ಯಾಂಟೀನ್ನಲ್ಲಿ ಪಾತ್ರೆ ತೊಳೆಯುತ್ತಿದ್ದರು. ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಕೊನೆಗೆ ಓದಿಗೆ ತಿಲಾಂಜಲಿ ಆಡಿ ಸ್ನೇಹಿತರ ಜೊತೆಗೂಡಿ ಡ್ರಾಪ್ಔಟ್ ಚಾಯ್ವಾಲ ಹೆಸರಿನ ಟೀ ಅಂಗಡಿ ಇಟ್ಟರು.

ಕೆಲವು ಜನರ ಜೀವನವೇ ಅಸಂಖ್ಯ ಪಾಠಗಳನ್ನು ಕಲಿಸುತ್ತದೆ. ಇದಕ್ಕೆ ಒಂದು ನಿದರ್ಶನ ಬೆಂಗಳೂರು ಹುಡುಗ ಸಂಜಿತ್ ಕೊಂಡ. ಆಸ್ಟ್ರೇಲಿಯಾ ದೇಶದಲ್ಲಿ ‘ಡ್ರಾಪ್ಔಟ್ ಚಾಯ್ವಾಲಾ’ (Dropout Chaiwala) ಎನ್ನುವ ಜನಪ್ರಿಯ ಬ್ರ್ಯಾಂಡ್ ನಿರ್ಮಿಸಿರುವ 22 ವರ್ಷದ ಸಂಜಿತ್ ಕೊಂಡ (Sanjith Konda), ಒಂದು ಕಾಲದಲ್ಲಿ ಯೂನಿವರ್ಸಿಟಿ ಕ್ಯಾಂಟೀನ್ನಲ್ಲಿ ಪಾತ್ರೆ ತೊಳೆದು ಜೀವನ ನಡೆಸುತ್ತಿದ್ದಂತಹ ವ್ಯಕ್ತಿ. ಇವರ ಡ್ರಾಪ್ಔಟ್ ಚಾಯ್ವಾಲಾ ಬ್ರ್ಯಾಂಡು ಏಷ್ಯಾದ ಟಾಪ್ 100 ಬಿಸಿನೆಸ್ ಅವಾರ್ಡ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆಸ್ಟ್ರೇಲಿಯಾದಲ್ಲಿ 2022 ಮತ್ತು 2024ರಲ್ಲಿ ಎರಡು ವರ್ಷ ಬೆಸ್ಟ್ ಚಾಯ್ ಅವಾರ್ಡ್ ಪಡೆದಿದೆ.
ಕಾಲೇಜ್ ಡ್ರಾಪ್ಔಟ್ ಆದ ಬೆಂಗಳೂರು ಹುಡುಗ ಸಂಜಿತ್ ಕೊಂಡ
ಸಂಜಿತ್ ಕೊಂಡ ಅವರು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವರು. ಬೆಂಗಳೂರಿನ ಸಿಟಿ ಪಿಯು ಕಾಲೇಜಿನಲ್ಲಿ ಓದಿದ ಹುಡುಗ. ಇವರ ತಂದೆ ಅರಬ್ ನಾಡಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್. ಇವರ ತಾಯಿ ಗೃಹಿಣಿ. ಚಿಕ್ಕ ವಯಸ್ಸಿನಿಂದಲೇ ಸ್ವಂತ ಕಾಲ ಮೇಲೆ ನಿಲ್ಲುವ ಸ್ವಭಾವ ಬೆಳೆಸಿಕೊಂಡವರು ಸಂಜಿತ್ ಕೊಂಡ.
ಇದನ್ನೂ ಓದಿ: ಇಲಾನ್ಸ್ ಮಸ್ಕ್ಗೆ ನೀರಿಳಿಸಿದ್ದ ಬಿವೈಡಿ ಕಂಪನಿ ಭಾರತಕ್ಕೆ ಬರಲು ಸಜ್ಜು; ಹೈದರಾಬಾದ್ನಲ್ಲಿ ಫ್ಯಾಕ್ಟರಿ ಸ್ಥಾಪನೆ ಸಾಧ್ಯತೆ
18ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾಗೆ ಹೋಗಿ ಮೆಲ್ಬೋರ್ನ್ ಲಾ ಟ್ರೋಬೆ ಯೂನಿವರ್ಸಿಟಿಯಲ್ಲಿ ಬ್ಯುನಿಸೆಸ್ ಸ್ಟಡೀಸ್ನಲ್ಲಿ ಪದವಿ ಕೋರ್ಸ್ ಸೇರಿದರು. ಓದುತ್ತಾ ಓದುತ್ತಾ ಅವರು ಪಾರ್ಟ್ ಟೈಮ್ ಕೆಲಸಗಳನ್ನೂ ಮಾಡುತ್ತಿದ್ದರು. ಕಾಲೇಜು ಫೀಸ್ ಅನ್ನು ಅಪ್ಪ ಕಟ್ಟುತ್ತಿದ್ದರೂ ಸಂಜಿತ್ ಅವರಿಗೆ ಸ್ವಂತವಾಗಿ ಹಣ ಸಂಪಾದಿಸುವ ಹಂಬಲ ಇತ್ತು. ಅಂತೆಯೇ, ಯೂನಿವರ್ಸಿಟಿಯ ಕ್ಯಾಂಟೀನ್ನಲ್ಲಿ ಮುಸುರೆ ತಿಕ್ಕುವ ಕೆಲಸ ಮಾಡಿದರು. ಸಮೀಪದ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿದರು. ಅಲ್ಲಿ ವಾರಕ್ಕೆ 600 ಆಸ್ಟ್ರೇಲಿಯನ್ ಡಾಲರ್ ಹಣ ಸಿಗುತ್ತಿತ್ತು. ಇವೆಲ್ಲಾ ಚಿಲ್ಲರೆ ಪಲ್ಲರೆ ಕೆಲಸ ಅಂತ ಸಂಜಿತ್ ಮನಸ್ಸಿಗೆ ಅನಿಸಲಿಲ್ಲ. ತಾನು ಮಾಡಿದ ಪ್ರತಿಯೊಂದು ಕೆಲಸದಲ್ಲೂ ಪಾಠ ಕಲಿಯುತ್ತಾ ಹೋದರು. ಜೊತೆಗೆ ಓದೂ ಮುಂದುವರಿದಿತ್ತು.
ಓದು ಸಾಕು, ಚಹಾ ಹಾಕು..
ಐದನೇ ಸೆಮಿಸ್ಟರ್ಗೆ ಬರುವಷ್ಟರಲ್ಲಿ ಸಂಜಿತ್ ಅವರಿಗೆ ತಾನು ಈ ಓದಿಗೆ ಹೇಳಿ ಮಾಡಿಸಿದವನಲ್ಲ ಎಂಬುದು ಅರಿವಿಗೆ ಬಂದಿತ್ತು. ಅಷ್ಟರಲ್ಲಾಗಲೇ ಅವರಿಗೆ ಸ್ವಂತ ಬ್ಯುಸಿನೆಸ್ ಮಾಡುವ ಐಡಿಯಾ ಬಂದಾಗಿತ್ತು. ಇವರು ತಮ್ಮ ನೆಚ್ಚಿನ ಪಾನೀಯವಾಗಿದ್ದ ಚಹಾದ ಬ್ಯುಸಿನೆಸ್ ಶುರು ಮಾಡಿದರು.
ಇದನ್ನೂ ಓದಿ: ಸರ್ಕಾರದಿಂದ ದೇಶಾದ್ಯಂತ ಸಹಕಾರಿ ಟ್ಯಾಕ್ಸಿ ಸೇವೆ? ಕ್ಯಾಬ್ ಚಾಲಕರಿಗೆ ಹೆಚ್ಚಲಿದೆ ಆದಾಯ
ತಮ್ಮ ಮೂವರು ಸ್ನೇಹಿತರಾದ ಪ್ರೀತಮ್ ಅಕುಲಾ, ಅಸರ್ ಅಹ್ಮದ್ ಸಯದ್ ಮತ್ತು ಅರುಣ್ ಪಿ ಸಿಂಗ್ ಅವರ ಜೊತೆ ಸೇರಿ ಮೆಲ್ಬೋರ್ನ್ನಲ್ಲೇ ಡ್ರಾಪ್ಔಟ್ ಚಾಯ್ವಾಲ ಎನ್ನುವ ಟೀ ಅಂಗಡಿ ಸ್ಥಾಪಿಸಿದರು. ಅದು 2021ರಲ್ಲಿ ಶುರುವಾಗಿದ್ದು. ವಿಭಿನ್ನ ಹೆಸರು, ವಿಭಿನ್ನ ಧೋರಣೆ, ಉತ್ತಮ ರುಚಿ, ಇವು ಡ್ರಾಪ್ಔಟ್ ಚಾಯ್ವಾಲಾ ಕಂಪನಿ ಬಹಳ ಬೇಗ ಜನಪ್ರಿಯವಾಯಿತು.
ಓದೊಂದೇ ದಾರಿಯಲ್ಲ, ಅಂದುಕೊಂಡಿದ್ದನ್ನು ಸಾಧಿಸುವ ಛಲ ಇದ್ದರೆ ಏನಾದರೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಇನ್ನೂ 22 ವರ್ಷದ ಹರೆಯದ ಯುವಕ ಸಂಜಿತ್ ಕೊಂಡ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ