ಬೀದರ್‌ನ ಬಿದ್ರಿ ಕಲೆಗೂ ತಟ್ಟಿದ ಯುದ್ಧದ ಬಿಸಿ: ವಿದೇಶಿ ವಹಿವಾಟು ಕುಸಿತ; ಸಂಕಷ್ಟದಲ್ಲಿ ಕಲಾವಿದರು
ಇಸ್ರೇಲ್ ಮತ್ತು ಇರಾನ್ ಯುದ್ಧದ ಎಫೆಕ್ಟ್ ಹಿನ್ನೆಲೆ ಬಿದರ್‌ನ ಐತಿಹಾಸಿಕ ಬಿದರಿ ಕಲೆಯು ಸದ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಕುಸಿದಿದ್ದು, ನೂರಾರು ಕಲಾವಿದರು ತಮ್ಮ ಜೀವನೋಪಾಯ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸರ್ಕಾರವು ನಮ್ಮ ನೆರವಿಗೆ ಬರುವಂತೆ ಕಲಾವಿದರು ಒತ್ತಾಯಿಸಿದ್ದಾರೆ.

ಬೀದರ್, ಮಾರ್ಚ್ 13: ಜಗತ್ತಿನಾದ್ಯಾಂತ ಪ್ರಸಿದ್ಧಿ ಪಡೆದಿರುವ ಐತಿಹಾಸಿಕ ಬೀದರಿ ಕಲೆಗೆ ಅಮೆರಿಕಾ, ಇಸ್ರೇಲ್, ಇರಾನ್ ಯುದ್ಧದಿಂದಾಗಿ (iran israel war) ವ್ಯಾಪಾರ ಕುಸಿತವಾಗಿದೆ. ಬೀದರಿ ಕಲೆಯನ್ನ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ. ಬೀದರಿ ಕಲೆಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕರು ಈ ಕಲೆಯನ್ನ ಪ್ರೋತ್ಸಾಹಿಸಬೇಕಾದ ಸರ್ಕಾರ ಕಂಡುಕಾಣದಂತೆ ಕುಳಿತುಬಿಟ್ಟಿದ್ದು, ಯುದ್ಧದ ಎಫೆಕ್ಟ್ ಹಿನ್ನಲೆ ಬಿದ್ರಿ ಕಲಾಕೃತಿಗಳು ಮಾರಾಟವಾಗುತ್ತಿಲ್ಲ.
ಬೀದರ್ ಜಿಲ್ಲೆ ಎಂದ ಕೂಡಲೇ ನಮಗೆ ತಕ್ಷಣ ನೆನಪಾಗುವುದು ಜಗತ್ತಿನಾದ್ಯಾಂತ ಪ್ರಸಿದ್ಧಿ ಪಡೆದಿರುವ ಬೀದರಿ ಕಲೆ. ಇಂತಹ ಅಪರೂಪದ ಕಲೆಗಳು ಮಾರಾಟವಾಗದೆ ಕಲಾವಿದರಿಗೆ ಸಂಕಷ್ಟ ಎದುರಾಗಿದೆ. ಬೀದರ್‌ನ (ಬಿದ್ರಿ ಕಲೆ)ಗೂ ಈಗ ಯುದ್ಧದ ಬಿಸಿ ತಟ್ಟಿದ್ದು, ವಿದೇಶಿ ಮಾರಾಟದಲ್ಲಿ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ. ಶೇಕಡಾ 50ರಷ್ಟು ವಿದೇಶಿ ವ್ಯವಹಾರ ಕಡಿಮೆಯಾಗಿರುವುದರಿಂದ ಬಿದ್ರಿ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಪ್ಪು ಮಿಶ್ರಿತ ಲೋಹದ ಮೇಲಿನ ಬೆಳ್ಳಿಯ ನವಿರು ಕೆತ್ತನೆಯಿಂದ ತಯಾರಾಗುವ ಬಿದ್ರಿ ಕಲಾಕೃತಿಗಳು ವಿಶ್ವದ ಗ್ರಾಹಕರನ್ನು ಸೆಳೆದಿದ್ದವು. ವಿಶೇಷವಾಗಿ ಯುಎಸ್, ದುಬೈ, ಫ್ರಾನ್ಸ್ ಮತ್ತು ಕೆನಾಡಾ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇತ್ತು. ಯುದ್ಧದ ಕರಿನೆರಳು ಮುಂದುವರಿದರೆ, ಬೀದರ್‌ನ ಈ ಪಾರಂಪರಿಕ ಕೈಗಾರಿಕೆಗೆ ಮತ್ತಷ್ಟು ಹೊಡೆತ ಬೀಳುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಸಿಲಿಂಡರ್ ಕೊರತೆ: ಸೌದೆ ಒಲೆ ಮೇಲೆ ಅಡುಗೆ ಮಾಡಿದ ಇಂದಿರಾ ಕ್ಯಾಂಟಿನ್ ಸಿಬ್ಬಂದಿ
ಈ ವಿದೇಶಿ ಗ್ರಾಹಕರೇ ದುಬಾರಿ ಬಿದ್ರಿ ಕಲಾಕೃತಿಗಳ ಪ್ರಮುಖ ಬೆಂಬಲವಾಗಿದ್ದರು. ಆದರೆ ಯುದ್ದದ ಪರಿಣಾಮ ಅಂತಾರಾಷ್ಟ್ರೀಯ ಸಾಗಾಟ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾಗಿವೆ. ವಿಮಾನ ಮತ್ತು ಹಡಗು ಸಂಚಾರದಲ್ಲಿ ಅಡಚಣೆಗಳಿರುವುದರಿಂದ ಕಲಾಕೃತಿಗಳನ್ನು ವಿದೇಶಗಳಿಗೆ ಕಳುಹಿಸುವಲ್ಲಿ ವಿಳಂಬವಾಗುತ್ತಿದೆ. ಆನ್‌ಲೈನ್ ಮೂಲಕ ಬುಕ್ಕಿಂಗ್ ಪ್ರಮಾಣ ಹೆಚ್ಚಿದ್ದರೂ ಸಾಗಾಟದ ಸಮಸ್ಯೆಯಿಂದ ರಫ್ತು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಬಿದ್ರಿ ಕಲೆ ನಂಬಿಕೊಂಡಿರುವ ನೂರಾರು ಕಲಾವಿದರಲ್ಲಿ ಆತಂಕ ಹೆಚ್ಚಾಗಿದೆ.
ಅತ್ಯಂತ ಸೂಕ್ಷ್ಮವಾದ ಕುಸುರಿ ಕಲೆಯಿಂದ ವಸ್ತುಗಳನ್ನ ತಯಾರು ಮಾಡುವುದಕ್ಕೆ ತಿಂಗಳು ಬೇಕಾಗುತ್ತದೆ. ಕಷ್ಟಪಟ್ಟು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ಇಲ್ಲವಾಗಿದ್ದು, ಕಲೆಯನ್ನ ನಂಬಿಕೊಂಡವರಿಗೆ ಆತಂಕ ಹೆಚ್ಚಿಸುವಂತೆ ಮಾಡಿದೆ. ಎರಡು ವರ್ಷದ ಹಿಂದೆ ಬಿದರಿ ಕಲೆಗಾರ ಷಾ ರಷೀದ್ ಅಹ್ಮದ್ ಖಾದ್ರಿಗೆ ಈ ಕಲೆಯನ್ನು ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ವಂಶಪರಂಪರವಾಗಿ ಬಂದಿದ್ದ ಕುಶಲಕರ್ಮಿಗೆ ಸರ್ಕಾರ ಗುರುತಿಸಿ 74ನೇ ಗಣರಾಜ್ಯೋತ್ಸವದಂದು ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿದೆ.
ಇನ್ನು ಶೆಕಡಾ 50ರಷ್ಟು ವಿದೇಶದಲ್ಲಿ ಬಿದ್ರಿ ಕಲೆಗಳು ಮಾರಾಟವಾಗುತ್ತವೆ. ಇನ್ನೂಳಿದ 50ರಷ್ಟು ನಮ್ಮ ದೇಶದಲ್ಲಿ ಮಾರಾಟವಾಗುತ್ತವೆ ಆದರೆ ವಂಶಪಾರಂಪರಗತವಾಗಿ ಬಂದಿರುವ ಈ ಕಲೆಯಿಂದಲೇ ಬದುಕು ಕಟ್ಟಿಕೊಂಡಿರುವ ಕಲಾವಿದರಿಗೆ ಇವರು ತಯಾರಿಸಿದ ವಸ್ತುಗಳಿಗೆ ಮಾರಾಟಕ್ಕೆ ಸರಕಾರ ಪ್ರೋತ್ಸಾಹ ಕೊಡುತ್ತಿಲ್ಲ. ಜೊತೆಗೆ ಈ ವಸ್ತುಗಳನ್ನ ತಯಾರಿಸಲಿಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ಪೂರೈಸುತ್ತಿಲ್ಲ. ಈ ಕಲೆಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿರುವ ಜನರ ಸ್ಥಿತಿ ಆರಕ್ಕೇರದೆ ಮೂರಕ್ಕಿಳಿಯದಂತಾಗಿದೆ. ನಮ್ಮ ಕಲೆಗೆ ಸರಕಾರದ ಬೆಂಬಲ ಬೇಕಾಗಿದೆ ಎಂದು ಕಲಾವಿದರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಗ್ಯಾಸ್ ಬೆನ್ನಲ್ಲೇ ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!
ಶತಮಾನಗಳ ಇತಿಹಾಸ ಹೊಂದಿರುವ ಬೀದರಿ ಕಲೆ ಇಂದು ಯುದ್ದದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಬಂದ್ ಆಗಿದೆ. ಜಿಲ್ಲಾಡಳಿತ ಹಾಗೂ ಸರಕಾರದ ದಿವ್ಯ ನಿರ್ಲಕ್ಷದಿಂದ ಇಡೀ ಜಗತ್ತಿಗೆ ಕರ್ನಾಟಕದ ಬೀದರಿ ಕಲೆಯನ್ನ ಪರಿಚಯಿಸಿದ ಕಲಾವಿದರ ಬದುಕು ಮಾತ್ರ ಬೀದಿಗೆ ಬಂದಿದೆ. ಕಲೆ ಹಾಗೂ ಕಲಾವಿದರನ್ನ ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಜಿಲ್ಲಾಡಳಿತಕ್ಕಿದೆ. ಇಂತಹ ಅಪರೂಪದಲ್ಲಿ ಅಪರೂಪದ ಕಲೆಗೆ ಪ್ರಚಾರ ಮತ್ತು ಮಾರುಕಟ್ಟೆಯ ಕೊರತೆಯಿದ್ದು, ಸರಕಾರ ಮುಂದೆ ಬಂದು ಬೀದರಿ ಕಲೆಯನ್ನ ಉಳಿಸುವ ಕಡೆಗೆ ಕಾಳಜಿ ವಹಿಸುವುದು ಅನಿವಾರ್ಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.