India-China-US: ಎರಡು ಶತ್ರು ದೇಶಗಳನ್ನು ಒಂದು ಮಾಡುತ್ತಾ ಟ್ರಂಪ್ ಟ್ಯಾರಿಫ್?
India China relationship: ಡೊನಾಲ್ಡ್ ಟ್ರಂಪ್ ಅವರು ವಿಧಿಸಿರುವ ಪ್ರತಿಸುಂಕ ಕ್ರಮ ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಅತಿಹೆಚ್ಚು ಸುಂಕ ವಿಧಿಸಲಾಗಿರುವ ದೇಶಗಳ ಸಾಲಿನಲ್ಲಿ ಚೀನಾ ಇದೆ. ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ಚೀನಾ ದೇಶ ಪರ್ಯಾಯ ಮಾರುಕಟ್ಟೆಗಳನ್ನು ಅವಲೋಕಿಸುತ್ತಿದೆ. ಅದಕ್ಕೆ ಭಾರತ ಸೂಕ್ತ ಪರ್ಯಾಯ ಮಾರುಕಟ್ಟೆ ಎನಿಸಿದೆ.

ನವದೆಹಲಿ, ಏಪ್ರಿಲ್ 3: ಅಮೆರಿಕ ಸರ್ಕಾರ ಚೀನಾ, ಭಾರತ ಸೇರಿದಂತೆ 180ಕ್ಕೂ ಹೆಚ್ಚು ದೇಶಗಳ ಮೇಲೆ ಟ್ಯಾರಿಫ್ ವಿಧಿಸಿದೆ. ಚೀನಾ ಮೇಲೆ ಅತ್ಯಧಿಕ ಟ್ಯಾರಿಫ್ ಹಾಕಲಾಗಿದೆ. ಭಾರತದ ಮೇಲೂ ಶೇ. 27ರಷ್ಟು ಸುಂಕ ವಿಧಿಸಲಾಗಿದೆ. ಭಾರತ ಮತ್ತು ಚೀನಾ ಎರಡೂ ಕೂಡ ಅಮೆರಿಕದೊಂದಿಗೆ ಟ್ರೇಡ್ ಸರ್ಪ್ಲಸ್ ಹೆಚ್ಚು ಇರುವ ದೇಶಗಳೇ ಆಗಿವೆ. ಟ್ರೇಡ್ ಸರ್ಪ್ಲಸ್ ಎಂದರೆ ಆಮದಿಗಿಂತ ರಫ್ತು ಹೆಚ್ಚಿರುವ ಸ್ಥಿತಿ. ಅದರಲ್ಲೂ ಚೀನಾದ ಮ್ಯಾನುಫ್ಯಾಕ್ಚರಿಂಗ್ ಉದ್ಯಮಕ್ಕೆ ಅಮೆರಿಕ ಅತಿದೊಡ್ಡ ಮಾರುಕಟ್ಟೆ ಎನಿಸಿದೆ. ಈಗ ಅಮೆರಿಕ ಟ್ಯಾರಿಫ್ ಮೂಲಕ ತನ್ನ ಬಾಗಿಲನ್ನು ಪಾಕ್ಷಿಕವಾಗಿ ಮಾತ್ರ ತೆರೆದಿರುವುದು ಚೀನಾ ಪರ್ಯಾಯಗಳಿಗೆ ಹುಡುಕುವಂತಾಗಿದೆ. ಸದ್ಯ ಚೀನಾಗೆ ಉತ್ತಮ ಪರ್ಯಾಯ ಮಾರುಕಟ್ಟೆ ಎಂದಿರುವುದು ಭಾರತವೇ. ಈ ಕಾರಣಕ್ಕೆ ಭಾರತದೊಂದಿಗಿನ ಗಡಿ ಸೂಕ್ಷ್ಮತೆಗಳನ್ನು ಬದಿಗಿಟ್ಟು ಸಂಬಂಧ ಗಟ್ಟಿಗೊಳಿಸಿಕೊಳ್ಳಲು ಚೀನಾ ಯತ್ನಿಸುತ್ತಿದೆ. ಚೀನಾದ ರಾಯಭಾರಿ ಕ್ಸೂ ಫೇಹೋಂಗ್ ಅವರು ಭಾರತದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿರುವುದು ಇದಕ್ಕೆ ನಿದರ್ಶನ. ಭಾರತದಿಂದ ಹೆಚ್ಚು ಆಮದು ಮಾಡಿಕೊಳ್ಳಲು ಚೀನಾ ಸಿದ್ಧ ಎಂದು ಅವರು ಹೇಳಿರುವುದು ಕುತೂಹಲ ಮೂಡಿಸಿದೆ.
‘ವ್ಯಾಪಾರ ಮತ್ತಿತರ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಹೆಚ್ಚಿಸಲು ನಾವು ತಯಾರಿದ್ದೇವೆ. ಚೀನೀ ಮಾರುಕಟ್ಟೆಗೆ ಸೂಕ್ತವೆನಿಸುವ ಭಾರತೀಯ ಉತ್ಪನ್ನಗಳನ್ನು ಹೆಚ್ಚು ಆಮದು ಮಾಡಿಕೊಳ್ಳಲೂ ಸಿದ್ಧರಿದ್ದೇವೆ’ ಎಂದು ಚೀನೀ ರಾಯಭಾರಿ ಕ್ಸು ಫೇಹೋಂಗ್ ಅವರು ಹೇಳಿದರೆಂದು ಗ್ಲೋಬಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಟ್ರಂಪ್ ಟ್ಯಾರಿಫ್ ದರ ಪ್ರಕಟಿಸುವ ಮುನ್ನ ನೀಡಿದ ಹೇಳಿಕೆ ಇದು. ಆದಾಗ್ಯೂ ಪ್ರತಿಸುಂಕ ವಿಧಿಸುವ ಅಮೆರಿಕದ ನಿರ್ಧಾರ ಎಲ್ಲರಿಗೂ ಗೊತ್ತಿದ್ದಂಥದ್ದೇ.
ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ನಿಂದ ಭಾರತದ ಆರ್ಥಿಕತೆಗೆ, ವಿವಿಧ ಸೆಕ್ಟರ್ಗಳಿಗೆ ಎಷ್ಟು ಹಾನಿ? ಇಲ್ಲಿದೆ ಡೀಟೇಲ್ಸ್
1961ರಲ್ಲಿ ಭಾರತದ ಮೇಲೆ ಚೀನಾ ಯುದ್ಧ ಮಾಡಿದಂದಿನಿಂದ ಎರಡೂ ದೇಶಗಳ ಮಧ್ಯೆ ಸೂಕ್ಷ್ಮ ಸ್ಥಿತಿ ಇದೆ. ಪಾಕಿಸ್ತಾನಕ್ಕೆ ಬೆಂಬಲ ನೀಡುವುದು, ಗಡಿಭಾಗದಲ್ಲಿ ಸದಾ ಕಾಲ ಘರ್ಷಣೆಗೆ ಮುಂದಾಗುವುದು ಇತ್ಯಾದಿ ಕಾರಣಗಳಿಂದ ಚೀನಾ ದೇಶ ಭಾರತಕ್ಕೆ ನಂಬರ್ ಒನ್ ಶತ್ರುವಾಗಿ ಮಾರ್ಪಟ್ಟಿರುವುದು ಹೌದು. ಇದರ ನಡುವೆಯೂ ಎರಡೂ ದೇಶಗಳ ಮಧ್ಯೆ ವ್ಯಾಪಾರ ಸಂಬಂಧವಂತೂ ಮುಂದುವರಿದೇ ಇದೆ.
ಭಾರತ ಮತ್ತು ಚೀನಾ ಮಧ್ಯೆ ಸಾಕಷ್ಟು ವ್ಯಾಪಾರ ವಹಿವಾಟು ನಡೆಯುತ್ತದೆ. 2023-24ರಲ್ಲಿ 101.7 ಬಿಲಿಯನ್ ಡಾಲರ್ ವ್ಯಾಪಾರ ಆಗಿತ್ತು. ಇದರಲ್ಲಿ ಭಾರತದ ಪಾಲು 16.6 ಬಿಲಿಯನ್ ಡಾಲರ್ ಮಾತ್ರ. ಅಂದರೆ, ಹೆಚ್ಚಿನ ಪಾಲು ಚೀನಾದ್ದೇ ಆಗಿದೆ.
ಚೀನಾಗೆ ಭಾರತ ಮಾಡುವ ರಫ್ತಿನಲ್ಲಿ ಕಬ್ಬಿಣ ಅದಿರು, ಪೆಟ್ರೋಲಿಯಂ ತೈಲ, ಸಾಗರ ಉತ್ಪನ್ನಗಳು, ಎಣ್ಣೆ ಇತ್ಯಾದಿ ವಸ್ತುಗಳಿವೆ.
ಇದನ್ನೂ ಓದಿ: ಭಾರತದ ಫಾರ್ಮಾ ಮತ್ತು ಐಟಿ ಉದ್ಯಮ ಬಚಾವ್; ಟ್ರಂಪ್ ಪ್ರತಿಸುಂಕದಿಂದ ವಿನಾಯಿತಿ ಸಿಕ್ಕ ಸರಕುಗಳ್ಯಾವುವು? ಇಲ್ಲಿದೆ ಪಟ್ಟಿ
2023-24ರಲ್ಲಿ ಭಾರತ ಒಟ್ಟು 778 ಬಿಲಿಯನ್ ಡಾಲರ್ನಷ್ಟು ಆಮದು ಮಾಡಿಕೊಂಡಿದೆ. ಚೀನಾ 2024ರಲ್ಲಿ 3.58 ಟ್ರಿಲಿಯನ್ ಡಾಲರ್ನಷ್ಟು ಮೌಲ್ಯದ ಸರಕು ಮತ್ತು ಸೇವೆಗಳನ್ನು ರಫ್ತು ಮಾಡಿದೆ. ಅಮೆರಿಕಕ್ಕೆ ಅದು ಮಾಡಿರುವ ರಫ್ತು ಮೌಲ್ಯ 438 ಬಿಲಿಯನ್ ಡಾಲರ್. ಎಲೆಕ್ಟ್ರಿಕ್ ಯಂತ್ರೋಪಕರಣಗಳು, ನ್ಯೂಕ್ಲಿಯಾರ್ ರಿಯಾಕ್ಟರ್ ಇತ್ಯಾದಿ ಯಂತ್ರೋಪಕರಣಗಳು, ಆಟಿಕೆಗಳು, ಗೇಮ್ಗಳು, ಜವಳಿ, ವಾಹನ, ಮೆಡಿಕಲ್ ಸಲಕರಣೆ, ಪೀಠೋಪಕರಣ ಇತ್ಯಾದಿ ವಸ್ತುಗಳನ್ನು ಚೀನಾ ಅಮೆರಿಕಕ್ಕೆ ರಫ್ತು ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:59 pm, Thu, 3 April 25