ಆರ್ಆರ್ಆರ್ ಸಿನಿಮಾಕ್ಕೆ ಗೌರವ ನೀಡಿದ ಆಸ್ಕರ್, ರಾಜಮೌಳಿಗೆ ಖುಷಿ
RRR Movie: ರಾಜಮೌಳಿ ನಿರ್ದೇಶಿಸಿ, ಜೂ ಎನ್ಟಿಆರ್-ರಾಮ್ ಚರಣ್ ನಟನೆಯ ‘ಆರ್ಆರ್ಆರ್’ ಸಿನಿಮಾ ಈಗಾಗಲೇ ಆಸ್ಕರ್ ಪ್ರಶಸ್ತಿಯೊಂದನ್ನು ಗೆದ್ದಿದೆ. ಇದೀಗ ಮತ್ತೊಮ್ಮೆ ಆಸ್ಕರ್ಸ್ ‘ಆರ್ಆರ್ಆರ್’ ಸಿನಿಮಾಕ್ಕೆ ಗೌರವ ನೀಡಿದೆ. ಆಸ್ಕರ್ ನೀಡಿರುವ ಗೌರವದಿಂದ ನಿರ್ದೇಶಕ ಎಸ್ಎಸ್ ರಾಜಮೌಳಿ ಸಖತ್ ಥ್ರಿಲ್ ಆಗಿದ್ದಾರೆ. ಏನಿದು ವಿಷಯ? ಇಲ್ಲಿದೆ ಮಾಹಿತಿ...

ರಾಜಮೌಳಿ (SS Rajamouli) ನಿರ್ದೇಶಿಸಿ ಜೂ ಎನ್ಟಿಆರ್-ರಾಮ್ ಚರಣ್ (Jr NTR-Ram Charan) ನಟಿಸಿದ್ದ ‘ಆರ್ಆರ್ಆರ್’ (RRR) ಸಿನಿಮಾ ಹಲವು ದಾಖಲೆಗಳನ್ನು ಮಾಡಿದೆ. ಮುಖ್ಯವಾಗಿ ಭಾರತಕ್ಕೆ ಆಸ್ಕರ್ ತಂದುಕೊಟ್ಟಿದೆ. ವಿದೇಶಿ ಸಿನಿಮಾ ಪ್ರಮುಖರು, ನಿರ್ಮಾಣ ಸಂಸ್ಥೆಗಳು ಭಾರತ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದೆ. ಈಗಾಗಲೇ ‘ಆರ್ಆರ್ಆರ್’ ಸಿನಿಮಾದ ‘ನಾಟು ನಾಟು’ ಹಾಡಿಗೆ ಆಸ್ಕರ್ ಧಕ್ಕಿದೆ. ಆದರೆ ಇದೀಗ ಮತ್ತೊಮ್ಮೆ ಆಸ್ಕರ್, ‘ಆರ್ಆರ್ಆರ್’ ಸಿನಿಮಾ ಅನ್ನು ನೆನಪು ಮಾಡಿಕೊಂಡಿದೆ. ಹೊಸ ಪ್ರಶಸ್ತಿ ಘೋಷಣೆಗೆ ‘ಆರ್ಆರ್ಆರ್’ ಸಿನಿಮಾದ ಐಕಾನಿಕ್ ಚಿತ್ರವೊಂದನ್ನು ಬಳಸಿಕೊಂಡಿದೆ.
ಆಸ್ಕರ್ ಶುರುವಾದಾಗಿನಿಂದಲೂ ಆಕ್ಷನ್ ಡಿಸೈನ್ ವಿಭಾಗಕ್ಕೆ ಯಾವುದೇ ಪ್ರಶಸ್ತಿ ಇರಲಿಲ್ಲ. ಸಿನಿಮಾಗಳ ಕತೆ ಹೇಳುವಲ್ಲಿ ಆಕ್ಷನ್ ಡಿಸೈನ್ ಬಹಳ ಪ್ರಮುಖವಾದ ಪಾತ್ರ ನಿರ್ವಹಿಸುತ್ತದೆ, ಸಿನಿಮಾಗಳಿಗೆ ಆಕ್ಷನ್ ಬಹಳ ಮುಖ್ಯ ಆದರೆ ಆಸ್ಕರ್ನಲ್ಲಿ ಈ ವರೆಗೆ ಆಕ್ಷನ್ಗೆ ಪ್ರಶಸ್ತಿ ಇರಲಿಲ್ಲ. ಆದರೆ ಈಗ ಆಸ್ಕರ್ ಈ ಪ್ರಶಸ್ತಿಯನ್ನು ತನ್ನ ಪಟ್ಟಿಗೆ ಸೇರಿಸಲು ಮುಂದಾಗಿದೆ. ಇದರ ಘೋಷಣೆಗೆ ‘ಆರ್ಆರ್ಆರ್’ ಸಿನಿಮಾದ ಆಕ್ಷನ್ ದೃಶ್ಯವೊಂದರ ಚಿತ್ರವನ್ನು ಬಳಸಿಕೊಂಡಿದೆ.
‘ಆರ್ಆರ್ಆರ್’ ಸಿನಿಮಾದ ಇಂಟರ್ವೆಲ್ ಫೈಟ್ ನ ಒಂದು ಅದ್ಭುತ ದೃಶ್ಯವನ್ನು ಆಸ್ಕರ್ ತನ್ನ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. ರಾಮ್ ಚರಣ್ ಹಾರಿ ಹುಲಿಗೆ ಹೊಡೆಯುವ ದೃಶ್ಯದ ಚಿತ್ರ ಇದಾಗಿದೆ. ಆ ಮೂಲಕ ‘ಆರ್ಆರ್ಆರ್’ ಸಿನಿಮಾದ ಫೈಟ್ ಡಿಸೈನ್ಗೆ ಗೌರವ ನೀಡಿದೆ ಆಸ್ಕರ್. ಮತ್ತೊಂದು ವಿಶೇಷವೆಂದರೆ ‘ಆರ್ಆರ್ಆರ್’ ಸಿನಿಮಾದ ಚಿತ್ರವನ್ನು ವಿಶ್ವದ ಅತ್ಯುತ್ತಮ ಆಕ್ಷನ್ ಸಿನಿಮಾಗಳಲ್ಲಿ ಮುಖ್ಯವಾದ ‘ಮಿಷನ್ ಇಂಪಾಸಿಬಲ್’ನ ಜೊತೆಗೆ ಹಂಚಿಕೊಳ್ಳಲಾಗಿದೆ. ಇದು ಸಾಮಾನ್ಯ ಗೌರವವೇನಲ್ಲ. ‘ಆರ್ಆರ್ಆರ್’, ‘ಮಿಷನ್ ಇಂಪಾಸಿಬಲ್’ ಜೊತೆಗೆ ಆಸ್ಕರ್ ವಿಜೇತ ‘ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್’ ಸಿನಿಮಾದ ಒಂದು ಚಿತ್ರವನ್ನು ಸಹ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ:97ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ: ವಿನ್ನರ್ ಸಂಪೂರ್ಣ ಲಿಸ್ಟ್ ಇಲ್ಲಿದೆ
ಆಸ್ಕರ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ರಾಜಮೌಳಿ, ‘100 ವರ್ಷಗಳ ಕಾಯುವಿಕೆ ಬಳಿಕ ಕೊನೆಗೂ ಆಸ್ಕರ್ನಲ್ಲಿ ಆಕ್ಷನ್ ಡಿಸೈನ್ ವಿಭಾಗಕ್ಕೆ ಪ್ರಶಸ್ತಿಯನ್ನು ಸೇರಿಸುವುದು ಬಹಳ ಖುಷಿಯ ವಿಷಯ’ ಎಂದಿರುವ ರಾಜಮೌಳಿ ಇದಕ್ಕೆ ಕಾರಣರಾದ ಕೆಲವರಿಗೆ ಧನ್ಯವಾದ ಹೇಳಿದ್ದಾರೆ. ನೆಟ್ಫ್ಲಿಕ್ಸ್ ಸಿಇಓಗೂ ಧನ್ಯವಾದ ಹೇಳಿದ್ದಾರೆ. ತಮ್ಮ ‘ಆರ್ಆರ್ಆರ್’ ಸಿನಿಮಾದ ಚಿತ್ರ ಹಂಚಿಕೊಂಡಿದ್ದು ಖುಷಿ ತಂದಿದೆ ಎಂದು ಸಹ ಅವರು ಹೇಳಿದ್ದಾರೆ. ಅಂದಹಾಗೆ ಹಾಲಿವುಡ್ನ ನಿಕ್ ಪೋವೆಲ್ ಮತ್ತು ದಕ್ಷಿಣದ ಸ್ಟಾರ್ ಆಕ್ಷನ್ ಕೊರಿಯೋಗ್ರಫರ್ ಆಗಿರುವ ಕಿಂಗ್ ಸೋಲೊಮನ್ ಅವರುಗಳು ‘ಆರ್ಆರ್ಆರ್’ ಸಿನಿಮಾದ ಆಕ್ಷನ್ ಕೊರಿಯೋಗ್ರಫಿ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:42 pm, Fri, 11 April 25