New Book : ಅಚ್ಚಿಗೂ ಮೊದಲು : ಕವಿ ಸುಧಾ ಆಡುಕಳ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ‘ಗೀತಾಂಜಲಿ’ ನಾಳೆಯಿಂದ ಲಭ್ಯ

New Book : ಅಚ್ಚಿಗೂ ಮೊದಲು : ಕವಿ ಸುಧಾ ಆಡುಕಳ ಅನುವಾದಿಸಿದ ರವೀಂದ್ರನಾಥ ಟ್ಯಾಗೋರರ ‘ಗೀತಾಂಜಲಿ’ ನಾಳೆಯಿಂದ ಲಭ್ಯ
ಕವಿ, ಅನುವಾದಕಿ ಸುಧಾ ಆಡುಕಳ

Rabindranath Tagore : ‘ರವೀಂದ್ರರ ಕಥೆಗಳಲ್ಲಿ ಬರುವ ಸ್ತ್ರೀ ಪಾತ್ರಗಳೆಲ್ಲವೂ ಒಂದು ಶತಮಾನ ಮುಂದಿರುವಂತೆ ನನಗನಿಸಿದೆ. ಬಹುಶಃ ಪುರಾಣವನ್ನು ವರ್ತಮಾನದ ಬೆಳಕಲ್ಲಿ ನಿಕಷಕ್ಕೊಳಪಡಿಸುವ ಪರಂಪರೆ ಅವರಿಂದಲೇ ಆರಂಭಗೊಂಡಿದೆ ಅನಿಸುತ್ತದೆ. ಅವರ ಅನೇಕ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸುವಾಗಲೆಲ್ಲ ನಾನು ನನ್ನೊಳಗೆ ಅವರ ಭಾವಲೋಕವನ್ನು ಆವಾಹಿಸಿಕೊಂಡಿರುವೆ.’ ಸುಧಾ ಆಡುಕಳ

ಶ್ರೀದೇವಿ ಕಳಸದ | Shridevi Kalasad

|

Oct 14, 2021 | 11:14 AM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ: ಗೀತಾಂಜಲಿ (ನೊಬೆಲ್ ಪಾರಿತೋಷಕ ಪಡೆದ ಕೃತಿ) ಮೂಲ : ರವೀಂದ್ರನಾಥ ಟ್ಯಾಗೋರ  ಕನ್ನಡಕ್ಕೆ : ಸುಧಾ ಆಡುಕಳ ಪುಟ: 160  ಬೆಲೆ: ರೂ. 150  ವಿನ್ಯಾಸ: ಅರುಣ್ ಕುಮಾರ ಜಿ. ಪ್ರಕಾಶಕರು: ಲಡಾಯಿ ಪ್ರಕಾಶನ, ಗದಗ

*

ಭಾರತೀಯ ಸಾಹಿತ್ಯಕ್ಕೆ ವಿಶ್ವಮಾನ್ಯತೆಯನ್ನು ತಂದುಕೊಟ್ಟ ಕೃತಿ ಗೀತಾಂಜಲಿ. ದೇಶ, ಕಾಲ, ಧರ್ಮ ಮತ್ತು ಭಾಷೆಗಳ ಗಡಿಯನ್ನು ಮೀರಿದ ಜಗದ ಎಲ್ಲ ಜನರ ಪ್ರಾರ್ಥನೆಯಂಥ ಗೀತೆಗಳನ್ನು ಇದು ಒಳಗೊಂಡಿದೆ. ಈ ಕೃತಿ ಪಾಶ್ಚಿಮಾತ್ಯ ಕವಿಗಳನ್ನು ಇನ್ನಿಲ್ಲದಂತೆ ಪ್ರಭಾವಿಸಿದ್ದು, ಡಬ್ಲ್ಯೂ ಬಿ. ಯೇಟ್ಸ್ ಈ ಕುರಿತು ವ್ಯಕ್ತಪಡಿಸಿದ್ದ ಅನಿಸಿಕೆ ಇಲ್ಲಿದೆ. ಲೇಖಕಿ, ಕವಿ ಸುಧಾ ಆಡುಕಳ ಅವರ ಮಾತುಗಳೂ ಇಲ್ಲಿವೆ. 102 ಕವನಗಳ ಈ ಸಂಕಲನ ನಾಳೆಯಿಂದಲೇ ನಿಮ್ಮ ಓದಿಗೆ.

*

ನಾನು ಈ ಅನುವಾದಗಳ ಹಸ್ತಪ್ರತಿಯನ್ನು ದಿನಗಟ್ಟಲೆ ನನ್ನೊಂದಿಗೆ ಕೊಂಡೊಯ್ದಿದ್ದೇನೆ, ಅದನ್ನು ರೈಲುಗಳಲ್ಲಿ ಅಥವಾ ಓಮಿನಿ ಬಸ್ಸಿನಲ್ಲಿ ಮತ್ತು ರೆಸ್ಟೋರೆಂಟ್‌ಗಳಲ್ಲಿ ಓದಿದ್ದೇನೆ. ಅಲ್ಲೆಲ್ಲ ಅಪರಿಚಿತರು ಓದುವಾಗಿನ ನನ್ನ ತಲ್ಲಣಗಳನ್ನು ನೋಡುತ್ತಾರೆಂದು ಕೆಲವೊಮ್ಮೆ ಅನಿವಾರ್ಯವಾಗಿ ಪುಸ್ತಕವನ್ನು ಮುಚ್ಚಿದ್ದೇನೆ. ಈ ಸಾಹಿತ್ಯ- ಮೂಲದಲ್ಲಿ ಭಾರತೀಯರು ಹೇಳುವಂತೆ, ಲಯದ ಸೂಕ್ಷ್ಮತೆ, ಅನುವಾದಿಸಲಾಗದ ಬಣ್ಣಗಳ ಬೆಡಗು, ಸಾಲುಗಳ ಲಯಬದ್ಧತೆಯ ಮೂಲಕ ಜಗತ್ತಿನ ಬಗೆಗಿನ ಆಲೋಚನೆಗಳನ್ನು ವ್ಯಕ್ತಪಡಿಸುತ್ತವೆ, ಇವು ನನ್ನ ಜೀವಮಾನದ ಕನಸೂ ಹೌದು. ಒಂದು ಮಹೋನ್ನತ ಸಂಸ್ಕೃತಿಯ ಕೆಲಸದಲ್ಲಿ ಅವು ಪರಿಪೂರ್ಣ ಮಂತ್ರಗಳಂತಿವೆ. ಕವಿತೆ ಮತ್ತು ಧರ್ಮ ಒಂದೇ ಆಗಿರುವ ಒಂದು ಸಂಪ್ರದಾಯ ಶತಮಾನಗಳಿಂದ ಅಸ್ತಿತ್ವದಲ್ಲಿದೆ. ಅದು ಕಲಿತ ಮತ್ತು ಕಲಿಯದ ರೂಪಕ, ಭಾವನೆಗಳ ಮೂಲಕ ಒಂದಾಗುತ್ತದೆ ಮತ್ತು ವಿದ್ವಾಂಸರ, ಶ್ರೇಷ್ಠರ ಚಿಂತನೆಯನ್ನು ಅನೇಕರಿಗೆ ಮುಟ್ಟಿಸುತ್ತದೆ. ಬಂಗಾಳದ ನಾಗರಿಕತೆಯು ಅವಿಚ್ಛಿನ್ನವಾಗಿ ಉಳಿದಿದ್ದರೆ, ಅದಕ್ಕೆ ಕಾರಣ ಎಲ್ಲರ ಎದೆಯಲ್ಲಿ ಅಡಕವಾಗಿರುವ ಪ್ರೇಮಭಾವ. ಅದು ಎಲ್ಲರಲ್ಲಿಯೂ ಚಲನಶೀಲವಾಗಿದೆ. ಈ ವಚನಗಳಲ್ಲಿ ಅತ್ಯಂತ ಸೂಕ್ಷ್ಮವಾದ ಸಂಗತಿಗಳು ತಲೆಮಾರುಗಳ ಮೂಲಕ ಒಬ್ಬ ಸಾಮಾನ್ಯ ಅಲೆಮಾರಿಯಲ್ಲೂ ಅಡಕವಾಗಿವೆ. ಬಹುಶಃ ಸಾಹಿತ್ಯದಲ್ಲಿ ಮೊದಲ ಬಾರಿಗೆ ನಮ್ಮ ಕನಸಿಗೆ ಧ್ವನಿಬಂದಂತೆ ಇಲ್ಲಿ ಕವಿತೆಗಳಿವೆ. ಡಬ್ಲ್ಯೂ ಬಿ. ಯೇಟ್ಸ್, ಐರಿಷ್ ಕವಿ, ಖ್ಯಾತ ನಾಟಕಕಾರ

*

ಪುಟ್ಟ ಮಗುವಿಗಿಲ್ಲಿ ರಾಜಕುಮಾರನ ಪೋಷಾಕು ತೊಡಿಸಲಾಗಿದೆ ಚಿನ್ನದ ಕಂಠೀಹಾರದ ಥಳುಕು ಕೊರಳ ಬಳಸಿದೆ ಹೆಜ್ಜೆಯಿಡಲೂ ತೊಡಕಾಗಿದೆ ಈ ಪೋಷಾಕು ಬಾಲ್ಯದಾಟದ ಖುಶಿಯ ಕಳಕೊಂಡಿದೆ ಬದುಕು

ಝರಿಯಂಚು ಹರಿದೀತೆಂಬ ಭಯ ಅಂಗಿ ಕೊಳೆಯಾದೀತೆಂಬ ಆತಂಕ ಸಹಜ ಬದುಕಿನ ಕೊಂಡಿ ಕಳಚಿದೆ ಭಯದ ನೆರಳಲ್ಲಿ ಹೆಜ್ಜೆ ಹಿಂಜರಿದಿದೆ

ಅಮ್ಮಾ, ಇವೆಲ್ಲವೂ ವ್ಯರ್ಥ ಸಾಹಸಗಳು ‘ನಿನ್ನ ಅತಿಪ್ರೀತಿ ಉಸಿರುಗಟ್ಟಿಸುವುದು ಕೇಳು ನೆಲದ ಬಂಧವ ಕಸಿದು ಬದುಕ ಜಾತ್ರೆಯ ಬೆರಗ ಬಾಗಿಲನು ಮುಚ್ಚುವುದು ಥರವೆ ಹೇಳು?’

ಬಿಡುಗಡೆಯೆಂಬುದು ಜಗದ ಪ್ರತಿಜೀವಿಯ ಸಹಜ ಬಯಕೆ. ಅದಕ್ಕೆಂದೇ ಎಲ್ಲ ಬಂಧನಗಳನ್ನು ತೊಡೆದು ಬಯಲಾಗುವುದನ್ನು ‘ಮುಕ್ತಿ’ ಎಂದು ಪರಿಗಣಿಸುತ್ತಾರೆ. ಬಂಧನವಿರುವುದು ದೇಹಕ್ಕೆ ಮಾತ್ರವಲ್ಲ, ಮನಸ್ಸು, ಆಲೋಚನೆಗಳು ಮತ್ತು ವಿಚಾರಗಳಿಗೂ ಹೌದು. ಅರಿವಿಗಿರುವ ಈ ತಡೆಗಳನ್ನೆಲ್ಲ ಮೀರುವ ಮಾರ್ಗಗಳನ್ನು ಹುಡುಕುವುದೇ ಎಲ್ಲ ಸೃಜನಶೀಲ ಚಟುವಟಿಕೆಗಳ ಮೂಲೋದ್ದೇಶವಾಗಿದೆ. ಸಾಹಿತ್ಯವೂ ಇದಕ್ಕೆ ಹೊರತೇನಲ್ಲ. ಅಂತಹ ಸಾಹಿತ್ಯ ಕೃತಿಗಳು ದೇಶ, ಕಾಲ, ಭಾಷೆಗಳ ಗಡಿಯನ್ನು ಮೀರಿ ಜನರ ನೋವುಗಳಿಗೆ ಸ್ಪಂದಿಸುತ್ತಲೇ, ನೋವುಗಳಿಂದ ಬಿಡುಗಡೆಗೊಳ್ಳುವ ದಾರಿಯನ್ನು ತೋರುತ್ತವೆ. ಗುರುದೇವ ರವೀಂದ್ರರ ಸಾಹಿತ್ಯ ಈ ಎಲ್ಲ ಗುಣಗಳಿಂದ ಸಮೃದ್ಧವಾಗಿದೆ. ಹಾಗಾಗಿಯೇ ಅವು ವಿಶ್ವಮಾನ್ಯತೆಯನ್ನು ಪಡೆದಿವೆ.

ರವೀಂದ್ರರ ಮಕ್ಕಳ ಸಾಹಿತ್ಯ ಎಂತೋ ಅಂತೆಯೇ ಅವರ ಕಥಾಲೋಕವೂ ನನ್ನನ್ನು ಕಾಡಿದೆ. ಹೆಣ್ಣ ಒಳಲೋಕವನ್ನು ಕಟ್ಟಿಕೊಡುವಾಗ ಅವರು ತೋರುವ ಮುಂಗಾಣ್ಕೆ ನನ್ನನ್ನು ಚಕಿತಗೊಳಿಸಿದೆ. ಅವರ ಕಥೆಯಲ್ಲಿ ಬರುವ ಸ್ತ್ರೀ ಪಾತ್ರಗಳೆಲ್ಲವೂ ಒಂದು ಶತಮಾನ ಮುಂದಿರುವಂತೆ ನನಗನಿಸಿದೆ. ಹೆಣ್ಣಲೋಕದ ತಲ್ಲಣಗಳನ್ನು ಹಿಡಿದಿಡಬೇಕೆಂಬ ತವಕದಿಂದ ಬರೆಯಲು ಪ್ರಾರಂಭಿಸಿದ ನನಗೆ ರವೀಂದ್ರರ ಸಶಕ್ತ ಸ್ತ್ರೀ ಪಾತ್ರಗಳು ಬರವಣಿಗೆಯ ಸರಕುಗಳಾಗಿಯೂ ಒದಗಿವೆ. ಬಹುಶಃ ಪುರಾಣವನ್ನು ವರ್ತಮಾನದ ಬೆಳಕಲ್ಲಿ ನಿಕಷಕ್ಕೊಳಪಡಿಸುವ ಪರಂಪರೆ ಅವರಿಂದಲೇ ಆರಂಭಗೊಂಡಿದೆ ಅನಿಸುತ್ತದೆ. ಅವರ ಅನೇಕ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸುವಾಗಲೆಲ್ಲ ನಾನು ನನ್ನೊಳಗೆ ಅವರ ಭಾವಲೋಕವನ್ನು ಆವಾಹಿಸಿಕೊಂಡಿರುವೆ. ಲಯಬದ್ಧವಾಗ ಗದ್ಯ, ಸಂಗೀತಕ್ಕೆ ಒಗ್ಗುವ ಹಾಡುಗಳು, ಪ್ರಕೃತಿಯೊಂದಿಗಿನ ಅವರ ತಾದ್ಯಾತ್ಮ, ಮಗು ಸಹಜ ಕುತೂಹಲದ ಮನಸ್ಥಿತಿ, ಮಕ್ಕಳ ಮನೋಲೋಕದ ಬಗೆಗಿನ ಅತೀವ ಕಾಳಜಿ, ವೈಜ್ಞಾನಿಕ ಮನೋವೃತ್ತಿ ಮತ್ತು ಧರ್ಮ, ದೇವರನ್ನು ನೋಡುವ ಅವರ ಅಸಂಪ್ರದಾಯಿಕ ವಿಧಾನ ಇವೆಲ್ಲವೂ ನನ್ನನ್ನು ಇನ್ನಿಲ್ಲದಂತೆ ಪ್ರಭಾವಿಸಿವೆ. ಸಾಹಿತ್ಯ, ಚಿತ್ರಕಲೆ, ಮಕ್ಕಳ ಮನೋವಿಜ್ಞಾನ, ಶಿಕ್ಷಣ ಮತ್ತು ಆಧ್ಯಾತ್ಮ ಈ ಎಲ್ಲ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿದವರು ಶ್ರೀ ಟ್ಯಾಗೋರ್. ಒಬ್ಬ ವ್ಯಕ್ತಿ ಜೀವಿತಾವಧಿಯಲ್ಲಿ ಇಷ್ಟೆಲ್ಲವನ್ನು ಸಾಧಿಸಲು ಸಾಧ್ಯವೇ? ಎಂದು ಬೆರಗುಗೊಳ್ಳಬೇಕಾದ ಪ್ರತಿಭೆ ಅವರದ್ದು.

naanemba parimaladha haadhiyali

ಸುಧಾ ಅವರ ಪ್ರಕಟಿತ ಪುಸ್ತಕಗಳು

ರವೀಂದ್ರರು ಭಾರತೀಯ ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟವರು. ಅವರ ಅನೇಕ ಕಥೆಗಳು, ಮಕ್ಕಳ ಸಾಹಿತ್ಯ ಮತ್ತು ನಾಟಕಗಳನ್ನು ಓದಿದ್ದ ನನಗೆ ಸಹಜವಾಗಿಯೇ ಗೀತಾಂಜಲಿಯನ್ನು ಇಡಿಯಾಗಿ ಓದಬೇಕೆಂಬ ಬಯಕೆಯಿತ್ತು. ಅಂತರ್ಜಾಲದಲ್ಲಿ ಸಿಗುವ ಬಿಡಿಬಿಡಿ ಪದ್ಯಗಳನ್ನು ಓದಿದಾಗ ಅರ್ಥವಾದದ್ದೂ ಕಡಿಮೆಯೆ. ಗೀತೆಗಳನ್ನೆಲ್ಲ ಸಮಗ್ರವಾಗಿ ಓದುವ ವಿರಾಮವನ್ನು ಕೊರೊನಾ ಕಾಲ ಒದಗಿಸಿತು. ಇಡಿಯ ಪ್ರಪಂಚ ರೋಗಭಯದಲ್ಲಿ ಮುಳುಗೇಳುತ್ತಿರುವಾಗ ಜಗದ ಪ್ರಾರ್ಥನೆಯಾಗಿ ಮೂಡಿಬಂದ ಗೀತಾಂಜಲಿಯನ್ನಲ್ಲದೇ ಬೇರೇನನ್ನು ಓದಲು ಸಾಧ್ಯ? ರವೀಂದ್ರರ ಕೈಬರಹಗಳೊಂದಿಗೆ ಕವನಗಳ ಆಂಗ್ಲ ಅನುವಾದ ಮತ್ತು ಆಕರ್ಷಕ ಛಾಯಾಚಿತ್ರಗಳಿಂದ ಸಿಂಗಾರಗೊಂಡ ಪುಸ್ತಕ ಕೈಸೇರಿದಾಗ ಅಮೂಲ್ಯ ನಿಧಿಯೊಂದು ಕೈಗೆಟುಕಿದ ಭಾವ! ಓದುತ್ತಾ, ಓದುತ್ತಾ ನನಗರಿವಿಲ್ಲದೇ ಕೆಲವು ಸಾಲುಗಳನ್ನು ಕನ್ನಡದಲ್ಲಿ ಡೈರಿಯಲ್ಲಿ ಬರೆಯುತ್ತಾ ಹೋದೆ. ಡೈರಿಯ ಪುಟಗಳನ್ನು ತಿರುವಿಹಾಕುವಾಗಲೆಲ್ಲ ಇದು ನನ್ನ ಗೀತಾಂಜಲಿಯ ಓದು ಅನಿಸತೊಡಗಿತು. ಹಾಗಾಗಿ ಕವನಗಳೆಲ್ಲವನ್ನು ಕನ್ನಡದಲ್ಲಿ ಬರೆಯತೊಡಗಿದೆ. ಒಂದಿನಿತೂ ಬಾಹ್ಯ ಒತ್ತಡವಿಲ್ಲದೇ ನನಗಾಗಿ ಹಾಡಿಕೊಳ್ಳುತ್ತಿರುವ ಹಾಡು ಇದು ಎಂಬ ಭಾವದಲ್ಲಿಯೇ ಇಲ್ಲಿರುವ ಕವನಗಳೆಲ್ಲವನ್ನೂ ಅನುವಾದಿಸಿದೆ. ಹತ್ತಿರದ ಸ್ನೇಹಿತರ ಓದಿಗೆ ಕಳಿಸುತ್ತಾ ಬಂದೆ. ಹೊಸ ಅರ್ಥಗಳು ದಕ್ಕುತ್ತಿವೆ ಎಂಬ ಅವರ ಅಭಿಪ್ರಾಯವು ನನ್ನನ್ನು ಮತ್ತೆ ಅನುವಾದಿಸುವಂತೆ ಪ್ರೇರೇಪಿಸುತ್ತಿತ್ತು. ದಿನದ ದಂದುಗಗಳನ್ನೆಲ್ಲ ಮುಗಿಸಿ ಗೀತಾಂಜಲಿಯಲ್ಲಿ ಮುಳುಗಿಹೋಗುವ ಗಳಿಗೆಗಾಗಿ ಕಾಯುವುದು ಅಭ್ಯಾಸವಾಗಿಹೋಯಿತು. ಇಂದಿಗೂ ಮತ್ತೆ, ಮತ್ತೆ ಆ ಪುಸ್ತಕವನ್ನು ಸವರುತ್ತಲೇ ಹೊಸ ಅರ್ಥಗಳಿಗಾಗಿ ತಡಕಾಡುತ್ತೇನೆ. ನಿಜಕ್ಕೂ ಅದೊಂದು ಸಾಗರ, ನನ್ನ ಬೆರಳುಗಳಿಗೆ ಅಂಟಿದ್ದು ಕೆಲವು ಹನಿಗಳಷ್ಟೆ ಎಂಬುದು ವಾಸ್ತವ!

ಇಲ್ಲಿಯ ಎಲ್ಲ ಗೀತೆಗಳು ಧರ್ಮ, ಭಾಷೆ, ದೇಶ, ಕಾಲಗಳ ಎಲ್ಲೆಯನ್ನು ಮೀರಿವೆ. ಎಲ್ಲರನ್ನೂ ಒಳಗೊಳ್ಳುವ ರವೀಂದ್ರರ ಸಾಹಿತ್ಯದ ಸ್ಥಾಯೀಭಾವ ಗೀತಾಂಜಲಿಯಲ್ಲಿ ಹೂವಿನ ಮಕರಂದ ಜೇನಾದಂತೆ ಹೆಪ್ಪುಗಟ್ಟಿದೆ. ಹಾಗಾಗಿ ಇದು ಜಗದ ಪ್ರಾರ್ಥನೆ. ಸಂಗೀತದ ಲಯಕ್ಕೆ ಒಗ್ಗುವ, ನೃತ್ಯದ ಪಟ್ಟುಗಳಿಗೆ ಎಟಕುವ ಮತ್ತು ರಂಗರೂಪಕವಾಗಬಲ್ಲ ಅನೇಕ ರಚನೆಗಳು ಇಲ್ಲಿವೆ. ಆ ನಿಟ್ಟಿನಲ್ಲಿಯೂ ಪ್ರಯತ್ನಗಳು ನಡೆಯಬೇಕಾದುದು ಈ ಕಾಲದ ಅಗತ್ಯವಾಗಿದೆ. ಕೊನೆಗೂ ನೆನಪಿನಲ್ಲುಳಿಯುವುದು ರವೀಂದ್ರರು ಹೇಳುವ ಸತ್ಯಲೋಕದ ಕಲ್ಪನೆ. ಬಯಸಿದಂತೆ ನಾವಾಗಬಲ್ಲ ಸತ್ಯಲೋಕವನ್ನು ಯಾವಾಗ ಬೇಕಾದರೂ ಮರಳಿ ತರಬಹುದು, ನಮ್ಮಲ್ಲಿ ಸಾಹಿತ್ಯ, ಸಂಗೀತ, ನಾಟಕ, ಚಿತ್ರ ಮೊದಲಾದ ಸೃಜನಶೀಲ ಕಲೆಗಳು ಇರುವವರೆಗೂ… ಅರಿವಿಗೆ ಬೇಲಿಗಳೇಳುತ್ತಿರುವ ಈ ಕಾಲದಲ್ಲಿ ಅವರು ಹೇಳುವ ಹತಿಯಾರಗಳು ಮೊಂಡಾಗದಿರಲಿ. ಮಾತಿನ ಮಾರ್ದವ ಕಳಕೊಂಡು ಕರ್ಕಶವಾಗುತ್ತಿರುವ ಇಂದಿನ ಯುವಕರ ಭಾಷೆ ಇಂತಹ ಓದಿನ ಮೂಲಕ ಮೃದುತನವ ಪಡೆಯಲಿ. ಗೀತಾಂಜಲಿ ಎಲ್ಲರ ಮನಗಳಲ್ಲಿ, ಮನೆಗಳಲ್ಲಿ ಜಾಗ ಪಡೆಯಲಿ. ನಮ್ಮ ಮಕ್ಕಳಿಗೆ ಇದಕ್ಕಿಂತ ಒಳ್ಳೆಯ ಕೊಡುಗೆಯನ್ನೇನು ಕೊಡಬಲ್ಲೆವು ನಾವು? ನಮ್ಮ ನಾಡು ಅರಿವಿಗೆ ಬೇಲಿಯಿರದ ಮುಕ್ತತೆಯ ಕಡೆಗೆ ಪಯಣಿಸಲಿ.

ಮೂರ್ಖನೇ, ನಿನ್ನ ಶಿಲುಬೆಯನು ನೀನೇ ಹೊತ್ತು ನಡೆದುಬಿಡು ಓ ಭಿಕ್ಷುಕನೇ, ನಿನ್ನ ಮನೆಯಂಗಳದಲ್ಲೇ ನಿಂತು ಭಿಕ್ಷೆ ಬೇಡು ನಿನ್ನ ಎಲ್ಲ ದುಗುಡಗಳನ್ನೂ ಅವನ ಕೈಯ್ಯಲ್ಲಿಟ್ಟುಬಿಡು ವಿಷಾದದಿಂದ ಎಂದಿಗೂ ಹಿಂದಿರುಗಿ ನೋಡದಿರು

ಆಸೆಗಳ ನಿಟ್ಟುಸಿರು ದಾರಿ ಬೆಳಗುವ ದೀಪವನ್ನಾರಿಸುತಿದೆ ಅಶುದ್ಧ ಕೈಗಳಿಂದ ಪವಿತ್ರ ಉಡುಗೊರೆಗಳನ್ನು ಸ್ವೀಕರಿಸಲಾಗದು ಅಪ್ಪಟ ಪ್ರೀತಿಯಿಂದ ನೀಡಿದುದನು ನಿರಾಕರಿಸಬಾರದು

*

ಪರಿಚಯ: ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸುಧಾ ಆಡುಕಳ ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾಟಕ ರಚನೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿರುವ ಇವರು ರವೀಂದ್ರರ ಮಕ್ಕಳ ಸಾಹಿತ್ಯವನ್ನು ಆಧರಿಸಿ ಮಕ್ಕಳ ರವೀಂದ್ರ ಎಂಬ ನಾಟಕವನ್ನು ರಚಿಸಿರುತ್ತಾರೆ. ಅಲ್ಲದೇ ಅವರ ಕೆಂಪುಕಣಗಿಲೆ, ಚಿತ್ರಾ ಹಾಗೂ ಅವಳ ಕಾಗದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿರುತ್ತಾರೆ. ಬಕುಲದ ಬಾಗಿಲಿನಿಂದ ಅಂಕಣ ಬರಹಕ್ಕೆ ರಾಜ್ಯಸಾಹಿತ್ಯ ಅಕಾಡೆಮಿ ಬಹುಮಾನ ಬಂದಿರುತ್ತದೆ. ಒಂದು ಇಡಿಯ ಬಳಪ ಇವರ ಪ್ರಕಟಿತ ಕಥಾಸಂಕಲನ. ಮಗುವಿನ ಭಾಷೆ ಮತ್ತು ಪುಸ್ತಕ ಅನುವಾದಿತ ಕೃತಿ ದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್​ನಿಂದ ಪ್ರಕಟಗೊಂಡಿದೆ. ‘ಗೀತಾಂಜಲಿ’ ಇವರ ಮೊದಲ ಅನುವಾದಿತ ಕವನ ಸಂಕಲನವಾಗಿದೆ.

(ಪುಸ್ತಕ ಖರೀದಿಗಾಗಿ ಸಂಪರ್ಕಿಸಿ: 9480286844)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ಅನಿಲ್ ಗುನ್ನಾಪೂರ ಅವರ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನ ನಾಳೆ ಬಿಡುಗಡೆ

Follow us on

Related Stories

Most Read Stories

Click on your DTH Provider to Add TV9 Kannada