New Book : ಅಚ್ಚಿಗೂ ಮೊದಲು : ‘ಬಿಂದಾಚಾರ್ ಆ್ಯಟ್ ಕಿಷ್ಕಿಂದಾ ಬಾರ್‘ ನರಸಿಂಹಮೂರ್ತಿ ಪ್ಯಾಟಿಯವರ ಪ್ರಬಂಧಗಳು ಸದ್ಯದಲ್ಲೇ ನಿಮ್ಮ ಓದಿಗೆ

Essay : ‘ಬಡಿಯೋವಾಗ ಹತ್ತು ಭಕ್ರಿ ಹೆಚ್ಚಿಗೆ ಬಡೀಬೇಕು, ಹಡಿಯೋವಾಗ ಹತ್ತು ಮಕ್ಕಳನ್ನ ಹೆಚ್ಚಿಗೆ ಹಡೀಬೇಕು’ ಅನ್ನೋ ಮಾತಿನಲ್ಲಿ ನಂಬಿಕೆ ಇಟ್ಟಿದ್ದ ಬಿಂದಾಚಾರ್ ಹದಿಮೂರೇ ವರ್ಷಗಳಲ್ಲಿ ಏಳು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳ ತಂದೆಯಾದರು.

New Book : ಅಚ್ಚಿಗೂ ಮೊದಲು : ‘ಬಿಂದಾಚಾರ್ ಆ್ಯಟ್ ಕಿಷ್ಕಿಂದಾ ಬಾರ್‘ ನರಸಿಂಹಮೂರ್ತಿ ಪ್ಯಾಟಿಯವರ ಪ್ರಬಂಧಗಳು ಸದ್ಯದಲ್ಲೇ ನಿಮ್ಮ ಓದಿಗೆ
ಲೇಖಕ, ಪತ್ರಕರ್ತ ನರಸಿಂಹಮೂರ್ತಿ ಪ್ಯಾಟಿ
Follow us
|

Updated on:Oct 13, 2021 | 9:05 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಬಿಂದಾಚಾರ್ @ ಕಿಷ್ಕಿಂದಾ ಬಾರ್ (ಪ್ರಬಂಧಗಳು) ಲೇ: ನರಸಿಂಹಮೂರ್ತಿ ಪ್ಯಾಟಿ ಪುಟಗಳು : 96 ಬೆಲೆ : 100 ರೂ. ಮುಖಪುಟ ವಿನ್ಯಾಸ : ಮುರಳೀಧರ ರಾಠೋಡ್ ಪ್ರಕಾಶನ : ಸಂಗಾತ ಪುಸ್ತಕ, ಧಾರವಾಡ

*

‘ಟಿವಿ9 ಕನ್ನಡ’ ಸುದ್ದಿ ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ಲೇಖಕ ನರಸಿಂಹಮೂರ್ತಿ ಪ್ಯಾಟಿ ಅವರ ಈ ಪ್ರಬಂಧ ಸಂಕಲನ ಸದ್ಯದಲ್ಲೇ ಬಿಡುಗಡೆಯಾಗಲಿದೆ.

*

ಈ ಸಂಕಲನದ ಎಲ್ಲ ಪ್ರಬಂಧಗಳ ಬಹುದೊಡ್ಡ ಶಕ್ತಿಯೇ ಇವುಗಳಲ್ಲಿ ಅಂತರ್ಗತವಾಗಿರುವ ವಿನೋದಪರತೆ ಹಾಗೂ ಲೇಖಕರ ಹಾಸ್ಯ ಪ್ರಜ್ಞೆ. ಒಂದು ಅಗ್ರಹಾರದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಮಡಿ ಮೈಲಿಗೆ; ಮಠ ಮಾನ್ಯಗಳು; ಆಗಾಗ್ಗೆ ಬರುವ ಮಠಾಧೀಶರು; ಅವರ ಪ್ರವಚನಗಳು; ಉಸಿರುಗಟ್ಟುವ ವಾತಾವರಣದಿಂದ ಪಾರಾಗಲು ಬಯಸುವ ಯುವ ಸಮೂಹ… ಹೀಗೆ ಎಲ್ಲ ತಳಮಳವನ್ನೂ, ಬಿಂದಾಚಾರ್‌ರಂತಹ ಹಿರಿಯರ ಸಮಯಪ್ರಜ್ಞೆ ಹಾಗೂ ತನ್ನೆಲ್ಲಾ ಮಿತಿಗಳ ನಡುವೆಯೂ ಸಮುದಾಯದ ಬದುಕನ್ನು ಸಹನೀಯವಾಗಿಸಲು ಯತ್ನಿಸುವ ಗುಣವನ್ನು ಲೇಖಕ ನರಸಿಂಹಮೂರ್ತಿ ಪ್ಯಾಟಿ ತಮ್ಮದೇ ಆದ ನವಿರಾದ ಭಾಷೆಯಲ್ಲಿ, ಚಿತ್ರಕ ಶೈಲಿಯಲ್ಲಿ ಅಪೂರ್ವ ಲವಲವಿಕೆಯಿಂದ ಬರವಣಿಗೆಗೆ ಇಳಿಸಿದ್ದಾರೆ. ಚಂದ್ರಶೇಖರ ಆಲೂರು, ಹಿರಿಯ ಲೇಖಕ

ಟಿವಿ 9ನಂಥ ನ್ಯೂಸ್ ಚಾನಲ್‌ನ ಎಡೆಬಿಡದ ಕೆಲಸದ ನಡುವೆ ಸೃಜನಶೀಲ ಬರವಣಿಗೆಯ ತೇವ ಆರದಂತೆ ನೋಡಿಕೊಳ್ಳುವುದು ಬಲುಕಷ್ಟ. ಆದರೆ, ನರಸಿಂಹಮೂರ್ತಿ ಪ್ಯಾಟಿಯವರು ವರದಿಗಾರಿಕೆಯಲ್ಲಿಯೇ ಕಳೆದು ಹೋಗದೆ, ಬದುಕಿನ ಚಲನಶೀಲತೆಗೆ ಬೆನ್ನು ತೋರದೆ ಎದೆಯ ದನಿಗೆ ಕಿವಿಗೊಟ್ಟು ಬಿಡದೇ ಓದಿಸಿಕೊಳ್ಳುವಂಥ ಪ್ರಬಂಧಗಳನ್ನು ಬರೆದಿದ್ದಾರೆ. ಟಿ.ಎಸ್.ಗೊರವರ, ಕಥೆಗಾರ

*

ಈ ಪುಸ್ತಕದ ನಾಯಕ ಬಿಂದಾಚಾರ್ ಬಗ್ಗೆ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಅವರ ವ್ಯಕ್ತಿತ್ವ ಅಷ್ಟು ಸುಲಭಕ್ಕೆ ಸಿಗುವಂಥದ್ದಲ್ಲ. ಒಬ್ಬೊಬ್ಬರಿಗೆ ಒಂದೊಂದು ಥರಾ ಕಾಣುತ್ತಿದ್ದ ಅವರನ್ನು ದ್ವೇಷಿಸಿದ್ದು ಯಾರೂ ಇಲ್ಲ. ಇನ್ನೂ ಅನೇಕ ವರ್ಷಗಳವರೆಗೆ ನಮ್ಮೊಂದಿಗೆ ಇರುತ್ತಾರೆ ಅಂದುಕೊಂಡಿದ್ದ ಎಲ್ಲರಿಗೂ ಅವರು ದೊಡ್ಡ ಶಾಕ್ ನೀಡಿದ್ದರು. ನೆಮ್ಮದಿಯಾಗಿದ್ದ ದಿನಗಳಲ್ಲೇ ಅವರು ಹೊರಟು ಹೋದರು. ಅವರೊಡನೆ ಕಳೆದ ದಿನಗಳನ್ನು ಇಂದಿಗೂ ಅವರ ಆತ್ಮೀಯರು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಅವರು ಕಳೆದುಹೋಗಿ ಇಪ್ಪತ್ತೈದು ವರ್ಷಗಳೇ ಆದರೂ ಇಂದಿಗೂ ಅವರು ನಮ್ಮಂಥ ಅನೇಕರೊಂದಿಗೆ ಇದ್ದಾರೆ ಅನ್ನುವಂಥ ಭಾವ ಬಿಟ್ಟು ಹೋಗಿದ್ದಾರೆ. ಇಂಥ ಬಿಂದಾಚಾರ್ ಅವರ ಆತ್ಮೀಯರ ಪೈಕಿ ನನ್ನಪ್ಪ ನಾರಾಯಣಾಚಾರ್ಯ ಪ್ಯಾಟಿ ಒಬ್ಬರು. ಆಗಾಗ ಮನೆಗೆ ಬರುತ್ತಿದ್ದ ಬಿಂದಾಚಾರ್, ತಮ್ಮ ಸುತ್ತಮುತ್ತ ನಡೆಯುತ್ತಿದ್ದ ಅನೇಕ ಹಾಸ್ಯ ಪ್ರಸಂಗಗಳನ್ನು ಹೇಳುತ್ತಿದ್ದರು. ಅಪ್ಪ ಕೂಡ ಹಾಸ್ಯ ಸ್ವಭಾವದ ವ್ಯಕ್ತಿಯಾಗಿದ್ದರಿಂದ ಇಬ್ಬರಿಗೂ ಸಾಕಷ್ಟು ಅನ್ಯೋನ್ಯತೆ ಇತ್ತು. ಇಬ್ಬರ ನಡುವೆ ನಡೆಯುತ್ತಿದ್ದ ಸಂಭಾಷಣೆ ಹಾಗೂ ಅನೇಕರ ಅನುಭವಗಳನ್ನು ಆಧರಿಸಿ ಈ ಪ್ರಬಂಧಗಳನ್ನು ಬರೆದಿದ್ದೇನೆ. ನರಸಿಂಹಮೂರ್ತಿ ಪ್ಯಾಟಿ, ಲೇಖಕ

*

‘ಬಿಂದಾಚಾರ್ @ ಕಿಷ್ಕಿಂದಾ ಬಾರ್’ (ಆಯ್ದಭಾಗ)

‘ಬಿಂದಾಚಾರ್ ಶನಿವಾರ ಸಂಜೀ ಮುಂದ ಬಾರ್‌ಗೆ ಹೋಗಿದ್ರಂತೆ’ ಅನ್ನೋ ಸುದ್ದಿ ಅಗ್ರಹಾರದ ಅಂದಿನ ಬ್ರೇಕಿಂಗ್ ನ್ಯೂಸ್. ಬಿಬಿಸಿ ನೀಡೋ ಬಿಸಿಬಿಸಿ ವರದಿಗಿಂತಲೂ ಸ್ಪೀಡಾಗಿ ಅದು ಇಡೀ ಊರಲ್ಲೆಲ್ಲಾ ಹರಡಿತ್ತು. ‘ಅಲ್ಲಾರೀ ಹತ್ತತ್ತು ಮಕ್ಕಳ ತಂದೆ; ಮ್ಯಾಲೆ ದೊಡ್ಡ ಆಚಾರ್ ಕೂಡ; ನಿತ್ಯ ಪ್ರಾಣ ದೇವರನ್ನ ಮುಟ್ಟಿ ಪೂಜಾ ಮಾಡೋ ಆಚಾರಿಗೆ ಅದೇನಾಗಿತ್ತು ಅಂತಾ ಇಂಥಾ ಕೆಲಸ ಮಾಡ್ಯಾನೋ ಏನೋ? ಈ ವಯಸ್ಸಿನ್ಯಾಗ ಅದೆಂಥಾ ಬಯಕಿ ಬಂತೋ ಆ ಮುದುಕುಗಾ..?’

‘ಅಲ್ಲಾರೀ, ಆತ ಎದುರು ಬಂದ್ರ ಸಾಕು, ಪಟಕ್ಕನಾ ಕಾಲಿಗೆ ಹೋಗಿ ಬೀಳ್ತಿದ್ದಿವಿ. ನಾವ್ ಕೊಡೋ ಗೌರವ ಹೆಚ್ಚಾತೋ ಏನೋ ಆ ಪ್ರಾಣಿಗೆ? ಅದಕ್ಕ ಬ್ರಾಹ್ಮಣರು ತಲಿ ತಗ್ಗಿಸೋ ಕೆಲಸ ಮಾಡ್ಯಾನ…’ ಒಬ್ರಾ? ಇಬ್ರಾ? ಹೀಗೆ ಎಲ್ಲರ ಮನೆಯಲ್ಲಿಯೂ ಇದೇ ಸುದ್ದಿ. ಬ್ರಾಹ್ಮಣ ಸಮುದಾಯದ್ದೇ ಒಂದು ನ್ಯೂಸ್ ಚಾನೆಲ್ ಏನಾದರೂ ಇದ್ದಿದ್ದರೆ ಮಿನಿಮಮ್ ಒಂದು ವಾರದ ಡಿಸ್ಕಶನ್ ಇಶ್ಯೂ ಇದಾಗಿತ್ತು.

ಈ ಘಟನೆ ನಡೆಯೋವರೆಗೂ ಬಿಂದಾಚಾರ್ ವ್ಯಕ್ತಿತ್ವವೇ ಅಂಥದ್ದಾಗಿತ್ತು. ಅವರೆಂದರೆ ಹಿರಿಯರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಅಚ್ಚುಮೆಚ್ಚು. ಆ ಊರಿನ ಬ್ರಾಹ್ಮಣರೆಲ್ಲಾ ಹನುಮಂತ ದೇವರ ಗುಡಿಗೆ ಹೋಗೋದಕ್ಕೆ ಕಾರಣವೇ ಬಿಂದಾಚಾರ್ ಅಂದರೂ ತಪ್ಪಲ್ಲ. ಏಕೆಂದರೆ ಎಲ್ಲರೊಂದಿಗೆ ಮುಕ್ತವಾಗಿ ಮಾತಾಡಿ, ಬಾಯ್ತುಂಬಾ ಎಲ್ಲರನ್ನೂ ನಗಿಸಿ, ಅವರ ದುಃಖವನ್ನು ಕಡಿಮೆ ಮಾಡೋ ತಾಕತ್ತು ಬಿಂದಾಚಾರ್‌ಗೆ ಇತ್ತು. ಅವರು ಏನೇ ಮಾತಾಡಲಿ ಅದು ಚೆಂದ. ಅವರವರ ವಯಸ್ಸಿಗೆ ತಕ್ಕಂತೆ ಮಾತಾಡಿ, ಅವರ ದುಃಖವನ್ನ ಕಡಿಮೆ ಮಾಡೋದು, ಅವರ ಸಮಸ್ಯೆಗೆ ಪರಿಹಾರ ನೀಡೋದು ಬಿಂದಾಚಾರ್ ಅವರ ನಿತ್ಯದ ಕೆಲಸ. ಇನ್ನು ಯುವಕರು ಇವರನ್ನು ಇಷ್ಟಪಡೋದಕ್ಕೆ ಕಾರಣವೆಂದರೆ ವಿನಾಕಾರಣ ‘ಮಡಿ ಮಡಿ’ ಅಂತಾ ಹಾರಾಡೋ ಜಾಯಮಾನ ಬಿಂದಾಚಾರ್ ಅವರದ್ದಾಗಿರಲಿಲ್ಲ. ಹೀಗಾಗಿ ಸಂಜೆ ಆಯ್ತು ಅಂದ್ರೆ ಸಾಕು ದೇವಸ್ಥಾನದ ಮುಂದಿನ ಮಠದ ಕಟ್ಟೆಯಲ್ಲಿ ಹನುಮನ ಗ್ಯಾಂಗ್ ಬಂದು ಜಮಾ ಆಗುತ್ತಿತ್ತು. ರಾತ್ರಿ ಎಂಟರ ಹೊತ್ತಿಗೆ ದೇವಸ್ಥಾನದ ಪೂಜೆ ಮುಗಿಸಿ ಬಿಂದಾಚಾರ್ ಹೊರ ಬಂದರೆ ಸಾಕು ಹುಡುಗರಿಗೆ ಕೇಕೇ ಹಾಕುವಷ್ಟು ಖುಷಿ. ರಾತ್ರಿ ಹತ್ತು ಗಂಟೆಯವರೆಗೆ ಯುವಕರೊಂದಿಗೆ ಹರಟೆ ಹೊಡೆದು, ಅವರನ್ನೂ ನಗಿಸಿ, ತಾವೂ ನಕ್ಕು ಮನೆಗೆ ಹೋಗೋದು ನಿತ್ಯದ ಕಾಯಕ. ಆದರೆ ಅದೇಕೋ ಎಲ್ಲರಿಗೂ ಅವರು ಬಾರ್‌ಗೆ ಹೋಗಿದ್ದನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ಸಂಜೆ ಹೊತ್ತಿನಲ್ಲಿ, ಶನಿವಾರ ಪ್ರಾಣ ದೇವರ ಪೂಜೆ ಬಿಟ್ಟು ಅದೇಕೆ ಇಂಥ ಕೆಟ್ಟ ಕೆಲಸಕ್ಕೆ ಕೈ ಹಾಕಿದರು ಅನ್ನೋದೇ ಎಲ್ಲರ ಕೋಪಕ್ಕೆ ಕಾರಣವಾಗಿತ್ತು.

ದೇವಸ್ಥಾನದ ಹೊರಗೆ ದ್ವಾರಪಾಲಕರು ನಿಲ್ಲುವ ಜಾಗದಲ್ಲಿ ಬಿಂದಾಚಾರ್ ಬಾರ್‌ನಿಂದ ಹೊರ ಬರುತ್ತಿರೋ ದೊಡ್ಡ ಫೋಟೋಗಳು ರಾರಾಜಿಸುತ್ತಿದ್ದವು. ಅಷ್ಟೇ ಅಲ್ಲ, ಅವುಗಳ ಹಲವಾರು ಕಾಪಿಗಳನ್ನು ಅಗ್ರಹಾರದ ಅನೇಕ ಬ್ರಾಹ್ಮಣರ ಮನೆಗಳಿಗೆ ರಾತ್ರೋ ರಾತ್ರಿ ಎಸೆದು ಹೋಗಲಾಗಿತ್ತು.

‘ಅಲ್ಲಾರೀ, ದೇವ್ರು ಎಲ್ಲಾ ಕಸಗೊಂಡ ಅನ್ನೋ ಹೊತ್ತಿನ್ಯಾಗ ನಮ್ಮ ದಕ್ಷಿಣಾಧಿಮಠದ ಸ್ವಾಮಿಗಳು ತಮ್ಮ ಜೊತಿ ಕರಕೊಂಡು ಬಂದು ಇಲ್ಲಿ ಜಾಗ ಕೊಟ್ಟಾರ. ಅವ್ರು ಇವತ್ತು ಬದುಕಿದ್ದರ ಅವರ ಗತಿ ಏನಾಗ್ತಿತ್ತು?’

‘ಏನಾಗ್ತಿತ್ತು? ಹೋಗಿ ಎಲ್ಲೆರಾ ನೀರಿನ್ಯಾಗ ಪ್ರಾಣಾಹುತಿ ಮಾಡಿಕ್ಯೋತಿದ್ರು, ಅಷ್ಟ’

‘ಹೌದು ಬಿಡ್ರಿ; ಈ ಮನುಷ್ಯಾ ಇಷ್ಟು ಹೊಲಸ ಕೆಲಸಾ ಮಾಡ್ತಾನಾ ಅಂತ ಅವರಿಗೇನೂ ಗೊತ್ತು? ಒಂದು ವ್ಯಾಳ್ಯಾ ಅವತ್ತ ಗೊತ್ತಾಗಿತ್ತು ಅಂದ್ರ ಇವರನ್ನ ಗುಡಿ ಕಟ್ಟಿ ತುಳಿಲಿಕ್ಕೆ ಸಹ ಸ್ವಾಮಿಗಳು ಬಿಡ್ತಿದ್ದಿಲ್ಲ ನೋಡ್ರಿ…’ ಮಹಿಳೆಯರ ಮಾತುಗಳು ಮುಂದುವರೆದಿದ್ದವು. ಘಟನೆ ನಡೆದು ಮೂರು ದಿನಗಳಾದರೂ ಮಠಕ್ಕೆ ಭಜನೆಗೆ ಅಂತಾ ಬರೋ ಮಹಿಳೆಯರಿಗೆ ಇದೊಂದು ಚೂಯಿಂಗ್ ಗಮ್ ಥರಾ ಆಗಿತ್ತು. ಎಷ್ಟು ಮಾತಾಡಿದ್ರೂ ಈ ವಿಷಯ ಮುಗಿಯುತ್ತಲೇ ಇರಲಿಲ್ಲ. ಅಲ್ಲದೇ ಘಟನೆ ನಡೆದ ದಿನದಿಂದ ಬಿಂದಾಚಾರ್ ದೇವಸ್ಥಾನಕ್ಕೂ ಬಾರದೇ, ಊರಲ್ಲೆಲ್ಲೂ ಕಾಣದೇ ಇರೋದೂ ಕೂಡ ಚೂಯಿಂಗ್ ಗಮ್‌ನ ರುಚಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಇನ್ನು ಆಚಾರ್ಯರ ವಲಯದಲ್ಲಂತೂ ದೊಡ್ಡದೊಂದು ಕೋಲಾಹಲವೇ ಎದ್ದಿತ್ತು. ಅದುವರೆಗೂ ತಮ್ಮನೆಯ ಪುರೋಹಿತರು ಅಂತಾ ಅವರನ್ನೇ ಎಲ್ಲ ಕಾರ್ಯಗಳಿಗೆ ಕರೆಯಿಸುತ್ತಿದ್ದ ಬ್ರಾಹ್ಮಣರಿಗೆಲ್ಲಾ ಹೊಟ್ಟೆಯಲ್ಲಿ ಬೆಂಕಿ ಸುರಿದ ಹಾಗಾಗಿತ್ತು.

‘ಅಲ್ಲಾರೀ, ನಮ್ ತಾಯಿ ತೀರಿಕೊಂಡಾಗ ಪೂರ್ವ ಪಂಕ್ತಿಗೆ ನೀವ ಕೂಡಬೇಕು ಅಂತಾ ಒತ್ತಾಯ ಮಾಡಿ ಕೂಡಿಸಿದ್ದಿವಿ ನೋಡ್ರಿ. ತಾಯಿದೂ ಅದೇ ಆಸೆ ಆಗಿತ್ತು. ಅದಕ್ಕ ಅವರನ್ನ ಕೂಡಿಸಿ, ಸಾವಿರಾರು ರೂಪಾಯಿ ದಕ್ಷಿಣಿ ಕೊಟ್ಟು, ಬಡ ಬ್ರಾಹ್ಮಣ ಅಂತಾ ಬೆಳ್ಳಿ ತಂಬಿಗಿ ಕೊಟ್ಟು ಕಳಿಸಿದ್ವಿ. ಆದ್ರ ಈಗ ನೋಡಿದ್ರ ಈ ಬ್ರಾಹ್ಮಣ ಮಾಡಬಾರದ ಅನಾಚಾರ ಮಾಡಿ ಕೂತಾನ. ಮ್ಯಾಲೆ ಕೂತ ನಮ್ ತಾಯಿ ಆತ್ಮ ಅದೆಷ್ಟು ನೊಂದುಕೋತಾದೋ ಏನೋ?’

Acchigoo Modhalu bindachar at kishkinda bar narasimhamurthy pyati

                                                   ಕಲೆ : ಮುರಳೀಧರ ರಾಠೋಡ

‘ಅಲ್ಲಾರೀ, ನಿಮ್ದು ನಿಮ್ಮಮ್ಮ ಸತ್ತಾಗಿನ್ ಸುದ್ದಿ ಆತು. ಆದ್ರೆ ಕಳೆದ ವಾರ ನಮ್ಮನ್ಯಾಗ ಹೋಮ ಮಾಡಿದಾಗ ಅವರೇ ಮುಂದ್ ನಿಂತು ಎಲ್ಲ ನಡೆಸಿಕೊಟ್ಟಿದ್ರು. ಅಂಥಾ ದೊಡ್ಡ ಹೋಮ ಮಾಡಿಸಿದ ಆತಗ ಅದ್ಯಾಕಾದ್ರೂ ಇಂಥ ದುರ್ಬುದ್ಧಿ ಬಂತೋ ಏನೋ? ಹೋಮ ಮುಗಿದ ಮ್ಯಾಲೆ ಅಡ್ಡಡ್ಡಕ ಮನೆಯವರೆಲ್ಲಾ ಕಾಲು ಬಿದ್ದು ಆಶೀರ್ವಾದ ತಗೊಂಡಿದ್ವಿ. ಎಂಥಾ ಮನುಷ್ಯನ ಆಶೀರ್ವಾದ ತೆಗೆದುಕೊಂಡ್ವಿ ನೋಡ್ರಿ. ನೆನೆಸಿಕೊಂಡ್ರ ಮೈಯೆಲ್ಲಾ ಉರೀತಾದ’ ಹೀಗೆ ವಿಪ್ರೋತ್ತಮರ ಮಾತು-ಪ್ರತಿಮಾತು ನಡೆದಿತ್ತು.

ಅಗ್ರಹಾರದ ಪ್ರತಿಮನೆಯಲ್ಲೂ ಇದೇ ಸುದ್ದಿ. ಒಂದಷ್ಟು ಜನರಿಗೆ ಈ ವಿಷಯ ಚಾನೆಲ್‌ಗಳಲ್ಲಿ ಬರುವ ಮೆಗಾ ಸೀರಿಯಲ್‌ನಂತೆ ಕಂಡಿದ್ದರೆ, ಮತ್ತೆ ಕೆಲವರಿಗೆ ಟೈಂ ಪಾಸ್ ಆಗಿತ್ತು. ಆದರೆ ಒಟ್ಟಾರೆಯಾಗಿ ಬಿಂದಾಚಾರ್ ಶನಿವಾರ, ಅದೂ ಸಂಜೆ ಹೊತ್ತಿಗೆ ಪ್ರಾಣದೇವರ ಪೂಜೆಯ ವೇಳೆಗೆ ಸ್ಟೇಶನ್ ರಸ್ತೆಯ ‘ಕಿಷ್ಕಿಂದಾ ಬಾರ್ ಅಂಡ್ ರೆಸ್ಟೊರೆಂಟ್’ಗೆ ಹೋಗಿದ್ದು ಮಾತ್ರ ಇಡೀ ಬ್ರಾಹ್ಮಣ ಸಮುದಾಯದ ಪಾಲಿನ ಕೆಟ್ಟ ಗಳಿಗೆಯಾಗಿತ್ತು. ಅಷ್ಟಕ್ಕೂ ಬಿಂದಾಚಾರ್ ಯಾರು? ಅವರು ಎಲ್ಲಿಯವರು? ಇಲ್ಲಿಗೆ ಹೇಗೆ ಬಂದರು? ಅನ್ನೋದೇ ಸಾಕಷ್ಟು ಕುತೂಹಲದ ವಿಷಯ. ನಗರದಿಂದ ಹತ್ತು ಕಿ.ಮೀ. ದೂರದಲ್ಲಿರೋ ಹಲಗೇರಿ ಐದು ನೂರು ಜನರಿರೋ ಹಳ್ಳಿ. ಮೂವತ್ತು ವರ್ಷಗಳ ಹಿಂದೆ ಬಿಂದಾಚಾರ್ ಇದೇ ಊರಿನಲ್ಲಿ, ತಮ್ಮ ಹೊಲ ಮನೆಗಳನ್ನು ನೋಡಿಕೊಂಡು ಆರಾಮವಾಗಿದ್ದರು. ಮೂಲತಃ ಸಂಪ್ರದಾಯಸ್ಥ ಮನೆತನ. ತಂದೆ ಗೋವಿಂದಾಚಾರ್ ಪುರೋಹಿತರಾಗಿದ್ದರು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಶುಭ-ಅಶುಭ ಕಾರ್ಯಗಳು ನಡೆದರೂ ಗೋವಿಂದಾಚಾರ್ಯರೇ ಹೋಗಬೇಕು. ಹಾಗೂ ಹೀಗೂ ಮಾಡಿ ಹತ್ತನೇ ತರಗತಿಯವರೆಗೆ ಓದಿದ ಬಿಂದಾಚಾರ್‌ಗೆ ಮುಂದೆ ಓದೋ ಮನಸ್ಸಿರಲಿಲ್ಲವೋ ಅಥವಾ ಮನೆಯ ಆರ್ಥಿಕ ಪರಿಸ್ಥಿತಿ ಸಹಕರಿಸಲಿಲ್ಲವೋ ಗೊತ್ತಿಲ್ಲ. ತಂದೆಯಂತೆಯೇ ಪುರೋಹಿತಗಿರಿಗೆ ಇಳಿದುಬಿಟ್ಟರು.

ತಂದೆಯೊಂದಿಗೆ ತಾವೂ ಕಾರ್ಯಗಳಿಗೆ ಹೋಗಿ, ತಂದೆಗೆ ಸಹಾಯ ಮಾಡೋದು ಮುಂದುವರೆಯಿತು. ತಂದೆಯು ತೀರಿಕೊಂಡ ಬಳಿಕ, ತಾವೇ ಮನೆಯ ಜವಾಬ್ದಾರಿ ವಹಿಸಿಕೊಂಡರು. ಮೂವರು ಸಹೋದರಿಯರ ಮದುವೆಯನ್ನು ತಾವೇ ನಿಂತು ಮಾಡಿ ಮುಗಿಸಿದರು. ಬಳಿಕ ಸಂಬಂಧದಲ್ಲಿಯ ಹೆಣ್ಣನ್ನು ಮದುವೆಯಾದರು. ‘ಬಡಿಯೋವಾಗ ಹತ್ತು ಭಕ್ರಿ ಹೆಚ್ಚಿಗೆ ಬಡೀಬೇಕು, ಹಡಿಯೋವಾಗ ಹತ್ತು ಮಕ್ಕಳನ್ನ ಹೆಚ್ಚಿಗೆ ಹಡೀಬೇಕು’ ಅನ್ನೋ ಮಾತಿನಲ್ಲಿ ನಂಬಿಕೆ ಇಟ್ಟಿದ್ದ ಬಿಂದಾಚಾರ್ ಹದಿಮೂರೇ ವರ್ಷಗಳಲ್ಲಿ ಏಳು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳ ತಂದೆಯಾದರು. ಆಗಲೇ ಅವರಿಗೆ ಸಮಸ್ಯೆಯ ಅರಿವಾಗಿತ್ತು. ನಿತ್ಯದ ಖರ್ಚನ್ನು ನಿಭಾಯಿಸೋದೇ ದೊಡ್ಡ ಸಮಸ್ಯೆಯಾಯಿತು. ಇಪ್ಪತ್ತು ಎಕರೆಯಷ್ಟು ಪಿತ್ರಾರ್ಜಿತ ಆಸ್ತಿ ಇತ್ತು. ಅದುವರೆಗೂ ಅದರ ನಿರ್ವಹಣೆಯನ್ನು ತಾವೇ ನೋಡಿಕೊಳ್ಳುತ್ತಿದ್ದರು. ಆದರೆ ಯಾವಾಗ ಮನೆ-ಮಕ್ಕಳ ತಾಪತ್ರಯ ಹೆಚ್ಚಾಯಿತೋ ರೈತನೊಬ್ಬನಿಗೆ ಅರ್ಧ ಪಾಲಿನ ಲೆಕ್ಕಕ್ಕೆ ಜಮೀನನ್ನು ನೀಡಿದರು. ಇನ್ನು ಉಳಿದಂತೆ ಮನೆಯಲ್ಲಿ ಬೆಳ್ಳಿ-ಬಂಗಾರಕ್ಕೆ ಕೊರತೆ ಇರಲಿಲ್ಲ. ಹೋದ ಕಡೆಗಳಲ್ಲೆಲ್ಲಾ ಜನರು ಅಭಿಮಾನ ಹಾಗೂ ಗೌರವದಿಂದ ಬೆಳ್ಳಿ-ಬಂಗಾರ ಸಾಮಾನುಗಳನ್ನು ದಕ್ಷಿಣೆ ರೂಪದಲ್ಲಿ ನೀಡುತ್ತಿದ್ದರು. ಆದರೆ ಅದ್ಯಾವುದರ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳದ ಬಿಂದಾಚಾರ್, ತಾವಾಯಿತು ತಮ್ಮ ಕೆಲಸವಾಯಿತು ಅಂತಾ ನೆಮ್ಮದಿಯಿಂದ ಇದ್ದುಬಿಟ್ಟಿದ್ದರು. ಯಾರು ಎಷ್ಟು ಕೊಟ್ಟರು ಅನ್ನೋದರ ಬಗ್ಗೆ ಒಮ್ಮೆಯೂ ಯೋಚಿಸದ ಬಿಂದಾಚಾರ್, ಎಲ್ಲರೊಂದಿಗೆ ಪ್ರೀತಿಯಿಂದ ಇದ್ದುಬಿಡುವ ಮನಸ್ಸಿನವರಾಗಿದ್ದರು.

ಇಂಥ ದಿನಗಳಲ್ಲಿ ಒಂದು ದಿನ ಬೆಳಿಗ್ಗೆ ಏಳುತ್ತಲೇ ಬಿಂದಾಚಾರ್‌ಗೆ ಶಾಕ್ ಆಗಿತ್ತು. ನಿತ್ಯವೂ ಐದು ಗಂಟೆಗೆ ಎದ್ದು ಪ್ರಾತಃವಿಧಿಗಳನ್ನು ಮುಗಿಸುವ ರೂಢಿ ಇಟ್ಟುಕೊಂಡಿದ್ದ ಬಿಂದಾಚಾರ್, ಎಂದಿನಂತೆ ಎದ್ದು ಬಚ್ಚಲ ಮನೆಗೆ ಹೋದಾಗ ಮೂಲೆಯಲ್ಲಿ ದೊಡ್ಡದೊಂದು ಕನ್ನ ಬಿದ್ದಿತ್ತು. ತಕ್ಷಣವೇ ಮನೆ ಕಳ್ಳತನವಾಗಿದ್ದು ಅರಿವಿಗೆ ಬಂತು. ಅಡುಗೆ ಮನೆಗೆ ಹೋದವರೇ ಮೂಲೆಯಲ್ಲಿದ್ದ ಕಟ್ಟಿಗೆ ಡಬ್ಬ ನೋಡಿದಾಗ ಎದೆ ಝಲ್ ಅಂದಿತು. ಅದುವರೆಗೂ ತಾವು ಸಂಪಾದಿಸಿದ್ದ ಹಣ, ಆಭರಣಗಳನ್ನೆಲ್ಲಾ ಆ ಡಬ್ಬದಲ್ಲಿಯೇ ಇಟ್ಟಿರುತ್ತಿದ್ದರು. ಅವೆಲ್ಲಾ ಕಳ್ಳರ ಪಾಲಾಗಿದ್ದವು. ಒಂದು ಕ್ಷಣ ತಲೆ ಸುತ್ತಿದಂತಾಗಿ, ಕಣ್ಣಂಚಲ್ಲಿ ನೀರು ಬಂತು.

*

ಪರಿಚಯ : ಕೊಪ್ಪಳದ ನರಸಿಂಹಮೂರ್ತಿ ಪ್ಯಾಟಿಯವರ ಜನನ 1977, ಜುಲೈ 28. ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಟಾ ಗ್ರಾಮದಲ್ಲಿ ಪ್ರಾಥಮಿಕ, ಹೈಸ್ಕೂಲ್ ವಿದ್ಯಾಭ್ಯಾಸ. ಹೊಸಪೇಟೆಯಲ್ಲಿ ಪಿಯುಸಿ, ರಾಯಚೂರಿನಲ್ಲಿ ಡಿಪ್ಲೊಮೊ ಇನ್ ಮೆಕ್ಯಾನಿಕಲ್ ಎಂಜನಿಯರಿಂಗ್. ಯಲಬುರ್ಗಾ ತಾಲ್ಲೂಕಿನ ತಳಕಲ್‌ನ ಸರಕಾರಿ ಐಟಿಐನಲ್ಲಿ ನಾಲ್ಕು ವರ್ಷಗಳ ಕಾಲ ಉಪನ್ಯಾಸಕ ವೃತ್ತಿ. ಬಳಿಕ ಕೊಪ್ಪಳದಲ್ಲಿ ಟಿವಿ9 ಜಿಲ್ಲಾ ವರದಿಗಾರರಾಗಿ ಏಳು ವರ್ಷ ಕಾರ್ಯನಿರ್ವಹಿಸಿ, ಬಡ್ತಿ ಹೊಂದಿ ಹಿರಿಯ ವರದಿಗಾರರಾಗಿ ಪ್ರಸ್ತುತ ಧಾರವಾಡದಲ್ಲಿ ಎಂಟು ವರ್ಷಗಳಿಂದ ಕಾರ್ಯ ನಿರ್ವಹಣೆ. ಸಂಗೀತ, ಸಾಹಿತ್ಯ ಮತ್ತು ಕೃಷಿ ಆಸಕ್ತಿ ಕ್ಷೇತ್ರಗಳು. ಕುಕನೂರು ತಾಲ್ಲೂಕಿನ ನಿಟ್ಟಾಲಿ ಗ್ರಾಮದ ಐದು ಎಕರೆ ಜಮೀನಿನಲ್ಲಿ ಅರಣ್ಯಕೃಷಿ ಮಾಡುತ್ತಿದ್ದಾರೆ. ‘ಬ್ರಾಹ್ಮಣ ಕುರುಬ’ ಮೊದಲ ಪ್ರಬಂಧ ಸಂಕಲನ. ‘ಬಿಂದಾಚಾರ್ @ ಕಿಷ್ಕಿಂದಾ ಬಾರ್’ ಎರಡನೇಯದು.

(ಈ ಪುಸ್ತಕದ ಖರೀದಿಗೆ ಸಂಪರ್ಕಿಸಿ : 9341757653)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ಅನಿಲ್ ಗುನ್ನಾಪೂರ ಅವರ ‘ಕಲ್ಲು ಹೂವಿನ ನೆರಳು’ ಕಥಾ ಸಂಕಲನ ನಾಳೆ ಬಿಡುಗಡೆ

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ನಾಳೆ ಅರಳಲಿದೆ ದಾದಾಪೀರ್ ಜೈಮನ್ ಕಥಾ ಸಂಕಲನ ‘ನೀಲಕುರಿಂಜಿ’

Published On - 3:25 pm, Wed, 13 October 21

ತಾಜಾ ಸುದ್ದಿ
‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ
‘ಯಾರೇ ದೊಡ್ಡವರಾದ್ರೂ ಕಾನೂನಿಗೆ ಹೊರತಲ್ಲ’: ವಸಿಷ್ಠ ಸಿಂಹ ಪ್ರತಿಕ್ರಿಯೆ
‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
‘ಮೆಜೆಸ್ಟಿಕ್’ ಸಿನಿಮಾ ಬಗ್ಗೆ ಭಾಮಾ ಹರೀಶ್ ಮಾತು, ದರ್ಶನ್​ಗೆ ಎಚ್ಚರಿಕೆ
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಮೈಸೂರು: ಆಕ್ಸೆಲ್ ಕಟ್ ಆಗಿ ಜಮೀನಿಗೆ ನುಗ್ಗಿದ ಕೆಎಸ್​ಆರ್​ಟಿಸಿ ಬಸ್
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್​
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ಬೆಂಗಳೂರಿನಲ್ಲಿ ಸದ್ಯದಲ್ಲೇ ನೀರಿನ‌ ದರ ಏರಿಕೆ? ಡಿಕೆಶಿ ಹೇಳಿದ್ದಿಷ್ಟು
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೀಲ್ಸ್​ಗೆ ಯುವತಿ ಬಲಿ, 15 ಸೆಕೆಂಡ್‌ನಲ್ಲೇ ಹಾರಿ ಹೋಯ್ತು ಪ್ರಾಣ ಪಕ್ಷಿ
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ಕುರಿತು ಕಮಿಷನರ್​ ಹೇಳಿದ್ದಿಷ್ಟು
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದ ವಿಜಯೇಂದ್ರ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ
ದರ್ಶನ್ ನನ್ನ ಬಳಿ ಹೇಳಿ ಶೆಡ್​ಗೆ ಹೋಗಿಲ್ಲ; ಪಟ್ಟಣಗೆರೆ ಜಯಣ್ಣ