Asia Cup 2025: ಏಷ್ಯಾಕಪ್‌ಗೆ ಹೊಸ ತಂಡವನ್ನು ಪ್ರಕಟಿಸಿದ ಆಕಾಶ ಚೋಪ್ರಾ
Asia Cup 2025: ಆಕಾಶ್ ಚೋಪ್ರಾ ಅವರು 2025ರ ಏಷ್ಯಾ ಕಪ್‌ಗಾಗಿ ತಮ್ಮ ಕನಸಿನ ತಂಡವನ್ನು ಪ್ರಕಟಿಸಿದ್ದು, ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ಭಾರತ ತಂಡದ ಆಯ್ಕೆ ಸಮಿತಿಯಿಂದ ಕೈಬಿಡಲ್ಪಟ್ಟ ಅನೇಕ ಪ್ರತಿಭಾವಂತ ಆಟಗಾರರನ್ನು ಈ ತಂಡದಲ್ಲಿ ಸೇರಿಸಲಾಗಿದೆ. ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಮತ್ತು ರಿಷಭ್ ಪಂತ್ ಮುಂತಾದ ಆಟಗಾರರು ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮಂಗಳವಾರ 2025 ರ ಏಷ್ಯಾಕಪ್‌ಗಾಗಿ (Asia Cup 2025) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿದೆ. ಅದು ಮಾತ್ರವಲ್ಲದೆ ಐವರು ಮೀಸಲು ಆಟಗಾರರನ್ನು ಸಹ ಈ ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಆದಾಗ್ಯೂ ಈ ತಂಡದಲ್ಲಿ ಕೆಲವು ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡಿಲ್ಲ ಎನ್ನುವುದು ತಂಡದ ಮಾಜಿ ಆಟಗಾರರ ಹಾಗೂ ಅಭಿಮಾನಿಗಳ ಅಭಿಪ್ರಾಯವಾಗಿದೆ. ಅದರಲ್ಲೂ ಶ್ರೇಯಸ್ ಅಯ್ಯರ್ (Shreyas Iyer) ಅವರನ್ನು ತಂಡದಿಂದ ಕೈಬಿಟ್ಟಿರುವುದು ಅನ್ಯಾಯ ಎಂದು ಅನುಭವಿಗಳು ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೊಸ ಟಿ20 ತಂಡವನ್ನು ಸಿದ್ಧಪಡಿಸಿದ್ದು, ಈಗ ಪ್ರಕಟವಾಗಿರುವ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಾರೆಲ್ಲ ವಿಫಲರಾಗಿದ್ದರೋ ಅಂತಹ ಆಟಗಾರರಿಗೆಲ್ಲ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕ
ಆಕಾಶ್ ಚೋಪ್ರಾ ಏಷ್ಯಾಕಪ್‌ಗೆ ಆಯ್ಕೆ ಮಾಡಿದ ತಮ್ಮ ತಂಡದ ನಾಯಕನನ್ನಾಗಿ ಶ್ರೇಯಸ್ ಅಯ್ಯರ್ ಅವರನ್ನು ನೇಮಿಸಿದ್ದಾರೆ. ಅಯ್ಯರ್ 2023 ರಿಂದ ಟಿ20 ತಂಡದಿಂದ ಹೊರಗಿದ್ದಾರಾದರೂ ಇತ್ತೀಚಿನ ದಿನಗಳಲ್ಲಿ ಅವರು ಉತ್ತಮ ಫಾರ್ಮ್ನಲ್ಲಿದ್ದರು. ಅಲ್ಲದೆ ಈ ಹಿಂದೆ ನಡೆದಿದ್ದ ಐಪಿಎಲ್‌ನಲ್ಲಿ ನಾಯಕನಾಗಿ ತಂಡವನ್ನು ಫೈನಲ್ಗೆ ಕೊಂಡೊಯ್ದಿದಲ್ಲದೆ, ಆಟಗಾರನಾಗಿಯೂ ಅಮೋಘ ಪ್ರದರ್ಶನ ನೀಡಿದ್ದರು. ಹೀಗಾಗಿ ಆಕಾಶ್, ಅಯ್ಯರ್ ಅವರಿಗೆ ನಾಯಕತ್ವದ ಪಟ್ಟ ಕಟ್ಟಿದ್ದಾರೆ.
ಕೆಎಲ್ ರಾಹುಲ್ಗೂ ಅವಕಾಶ
ಉಳಿದಂತೆ ಆಕಾಶ್ ಚೋಪ್ರಾ ತಂಡದಲ್ಲಿ ರುತುರಾಜ್ ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಚೋಪ್ರಾ ತಂಡದಲ್ಲಿ ರಿಷಭ್ ಪಂತ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕೂಡ ಇದ್ದಾರೆ. ಕೃನಾಲ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಸ್ಪಿನ್ ಬೌಲಿಂಗ್ ಆಲ್‌ರೌಂಡರ್‌ಗಳಾಗಿದ್ದಾರೆ. ರವಿ ಬಿಷ್ಣೋಯ್ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದರೆ, ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ವೇಗದ ಬೌಲರ್‌ಗಳ ಖೋಟಾದಲ್ಲಿ ಸ್ಥಾನ ಪಡೆದಿದ್ದಾರೆ.
Sanju Samson: ಏಷ್ಯಾಕಪ್‌ಗಾಗಿ ಬ್ಯಾಟಿಂಗ್ ಕ್ರಮಾಂಕ ಬದಲಿಸಿದ ಸಂಜು ಸ್ಯಾಮ್ಸನ್
ಆಕಾಶ್ ಚೋಪ್ರಾ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗೈಕ್ವಾಡ್, ಕೆಎಲ್ ರಾಹುಲ್, ರಿಷಭ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ರವಿ ಬಿಷ್ಣೋಯ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:36 pm, Sat, 23 August 25
