Art and Entertainment : ಅಧಿಕಾರದ ಶಕ್ತಿಕೇಂದ್ರ ಮಲಗಿದ ಹೆಬ್ಬಾವಿನಂತೆ, ಅದರೊಂದಿಗೆ ಸದಾ ಸೆಣಸುತ್ತಲೇ ಇರಬೇಕು…

Consumerist Culture : ‘ರಾಜ್ ಕುಂದ್ರಾ ನಡಾವಳಿಯನ್ನು ನಾನು ಒಪ್ಪುವುದಿಲ್ಲ. ಇದು ಶೃಂಗಾರವೂ ಅಲ್ಲ ಲೈಂಗಿಕತೆಯೂ ಅಲ್ಲ, ಹೆಣ್ಣಿನ ಸ್ವಾತಂತ್ರ್ಯವನ್ನು ಅಪಹರಿಸುವ ತಂತ್ರವಿದು. ಪ್ಯಾಕೇಜ್ ಮಾಡಿ ವ್ಯಾಪಾರಕ್ಕೆ ‘ಬಳಕೆ’ ಮಾಡುವ ಉಪಭೋಗ ಸಂಸ್ಕೃತಿ ಇದು. ಜಾಗತಿಕ ಮಾರುಕಟ್ಟೆಯ ಅಧಿಕಾರ ಕೇಂದ್ರಸ್ಥಾನದಲ್ಲಿ ಇರುವವರು ಮುಕ್ತಸಂಸ್ಕೃತಿ, ಸ್ವಾತಂತ್ರ್ಯದ ಹೆಸರಿನಲ್ಲಿ ಮಾತನಾಡುವುದು ‘ತಮ್ಮ’ ಲಾಭಕ್ಕೆ!’ ಡಾ. ಎನ್. ಮನು ಚಕ್ರವರ್ತಿ

Art and Entertainment : ಅಧಿಕಾರದ ಶಕ್ತಿಕೇಂದ್ರ ಮಲಗಿದ ಹೆಬ್ಬಾವಿನಂತೆ, ಅದರೊಂದಿಗೆ ಸದಾ ಸೆಣಸುತ್ತಲೇ ಇರಬೇಕು...
ಕಲೆ : ಎಚ್. ಎ. ಅನಿಲ್​ಕುಮಾರ್
Follow us
ಶ್ರೀದೇವಿ ಕಳಸದ
|

Updated on:Aug 05, 2021 | 6:39 PM

ಭಾರತೀಯ ಕಲಾಪ್ರಪಂಚವು ಶೃಂಗಾರ, ಕಾಮ ಮತ್ತು ಲೈಂಗಿಕತೆಯಂಥ ಸಹಜ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಅಗಾಧ ಅಡಿಪಾಯ ಮತ್ತು ಪರಂಪರೆಯನ್ನು ಹೊಂದಿದೆ. ರಂಗಭೂಮಿ, ಸಿನೆಮಾ, ಸಾಹಿತ್ಯ ಮುಂತಾದ ಲಲಿತ ಕಲೆಗಳ ಮೂಲಕ ಪ್ರಕೃತಿ ಪುರುಷನಲ್ಲಿ ಅಂತರ್ಗತವಾಗಿರುವ ವಿವಿಧ ಮುಖಗಳನ್ನು ಸೃಜನಶೀಲವಾಗಿ ಅನಾವರಣಗೊಳಿಸುವ ನಿರಂತರ ಶೋಧನೆ ಈ ಕ್ಷಣದವರೆಗೂ ನಡೆಯುತ್ತಲೇ ಇದೆ. ತಕ್ಕಂತೆ ವಿವಿಧ ಅಭಿರುಚಿಯ ರಸಿಕಸಮೂಹವೂ ರಸಾಸ್ವಾದಕ್ಕಾಗಿ ಸದಾಸಿದ್ಧವೇ. ಆದರೆ ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ಕೆಲವೊಮ್ಮೆ ಅನ್ನದೊಳಗೆ ಕಲ್ಲಿನಹರಳು ಸಿಕ್ಕಂಥ ಪ್ರಸಂಗಗಳು ರಸಾಭಾಸ ಉಂಟುಮಾಡಿಬಿಡುತ್ತವೆ. ಇದಕ್ಕೆ ತಾಜಾ ಉದಾಹರಣೆ ರಾಜ್​ ಕುಂದ್ರಾ ಪ್ರಕರಣ (Raj Kundra and Shilpa Shetty) ಮತ್ತು ನಟಿ ಶಿಲ್ಪಾ ಶೆಟ್ಟಿಯ ಹೇಳಿಕೆ. ‘ನನ್ನ ಗಂಡ ನಿರ್ಮಿಸಿರುವುದು ಕಾಮೋದ್ರೇಕದ ಸಿನೆಮಾಗಳನ್ನೇ ಹೊರತು ಅಶ್ಲೀಲ ಸಿನೆಮಾಗಳನ್ನಲ್ಲ’ ಎಂದಿದ್ದಾರೆ ಶಿಲ್ಪಾ. ಹೀಗಿರುವಾಗ ಶೃಂಗಾರ, ಕಾಮ, ಅಶ್ಲೀಲ ಅಭಿವ್ಯಕ್ತಿಗಳ ಮಧ್ಯೆ ಇರುವ ತೆಳುಗೆರೆಗಳ ಸುತ್ತ ಪ್ರಶ್ನೆಗಳೇಳುವುದು ಸಹಜ. ‘ಟಿವಿ 9 ಕನ್ನಡ ಡಿಜಿಟಲ್ – ಮನೋರಂಜನ ವೃತ್ತಾಂತ’ ಸರಣಿಯಲ್ಲಿ ಈತನಕ ಹಿರಿಯ ಪತ್ರಕರ್ತರು, ಬರಹಗಾರರು, ಕಲಾವಿಮರ್ಶಕರು ಕಲೆಯ ಸಾಧ್ಯತೆ, ಪ್ರಯೋಗ ಸೂಕ್ಷ್ಮತೆ ಮತ್ತು ಪರಿಣಾಮಗಳ ಕುರಿತು ಚರ್ಚಿಸಿದರು. ನೀವೆಲ್ಲ ಓದಿದಿರಿ. 

ಕಲೆ, ಸಂಸ್ಕೃತಿ, ಸಿನೆಮಾ, ಸಾಹಿತ್ಯ ವಿಮರ್ಶಕ, ಡಾ. ಎನ್. ಮನು ಚಕ್ರವರ್ತಿ ಅವರ ಈ ವಿಚಾರಧಾರೆಯು ಕಲೆ ಮತ್ತು ಸಾಂಸ್ಕೃತಿಕ ಲೋಕದ ಪರಿಧಿಗುಂಟ ಸಾಗುತ್ತ ಮನುಷ್ಯನ ಮೂಲಗುಣದ ಚುಂಗು ಹಿಡಿದು ಸಹಜತೆಯ ಆಳಕ್ಕಿಳಿಯುತ್ತದೆ. ಲೈಂಗಿಕತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಲಿಂಗಬೇಧ, ಉಪಭೋಗ ಸಂಸ್ಕೃತಿ ಕುರಿತು  ದಾಖಲೆಗಳೊಂದಿಗೆ ನಿರೂಪಿಸುತ್ತ, ಭವಿಷ್ಯದಲ್ಲಿ ಈ ಕುರಿತು ಇನ್ನೂ ಹೆಚ್ಚು ಹೋರಾಟದಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಯಾಕೆ ಮತ್ತು ಹೇಗೆ ಉಂಟಾಗುತ್ತದೆ ಎಂದು ಎಚ್ಚರಿಸಿರುವುದು ಅತ್ಯಂತ ಸಮಯೋಚಿತವಾಗಿದೆ.

*

ಸೌಂದರ್ಯಮೀಮಾಂಸೆ, ಮಾನವಶಾಸ್ತ್ರ, ಸಮಾಜಶಾಸ್ತ್ರ ಮತ್ತು ಸಂಸ್ಕೃತಿಯ ನೆಲೆಯಲ್ಲಿ ನೋಡಿದಾಗ  ಮೂಲಭೂತ (ಇಂದ್ರಿಯಕ್ಕೆ ಸಂಬಂಧಪಟ್ಟ) ವಿಷಯಗಳು ಬರೀ ಲೈಂಗಿಕತೆಗೆ ಸಂಬಂಧಪಟ್ಟಿದ್ದಲ್ಲ. ಒಂದು ಮೂಲಭೂತ ಪ್ರಕ್ರಿಯೆಯಾಗಿಯೇ ಇದನ್ನು ಎಲ್ಲರೂ, ಎಲ್ಲ ಸಂಸ್ಕೃತಿ-ನಾಗರಿಕತೆಗಳೂ ಕಂಡಿವೆ. ಇದು ಆದಿಮ ಸ್ವರೂಪ. ಮನುಷ್ಯರಿಗೆ ಪ್ರಾಣಿಗಳಿಗೆ ಪ್ರಾಕೃತಿಕವಾಗಿ ಒದಗಿಬಂದಿರುವ ಒಂದು ಅಂಶ, ಇದು ನಿರ್ವಿವಾದ. ಇತಿಹಾಸಪೂರ್ವ ನಾಗರಿಕತೆಗಳ ಮೊದಲು ಆದಿಮ ಜನಗಳು, ಮೂಲನಿವಾಸಿಗಳು, ಬುಡಕಟ್ಟು ಜನರು ಈ ನೀತಿಯ ಸಂಹಿತೆ, ಧರ್ಮಬೀರುಗಳ ವ್ಯಾಖ್ಯಾನದ ಚೌಕಟ್ಟಿನೊಳಗೆ ಯಾವತ್ತೂ ಬರುತ್ತಿರಲಿಲ್ಲ. ಲೈಂಗಿಕತೆ ಎನ್ನುವುದು ಆದಿಮ ಗುಣ (Primal Instinct) ಇದು ಇಂದ್ರಿಯಗಳಿಗೆ ಸಂಬಂಧಿಸಿದ್ದು. ಪ್ರಾಕೃತಿಕವಾಗಿ ಬಂದಿರುವಂಥದ್ದು, ಇದರಲ್ಲಿ ಅಶ್ಲೀಲದ ಲವಲೇಷವೂ ಇರುತ್ತಿರಲಿಲ್ಲ. ಆ ಸ್ವರೂಪದಲ್ಲಿ ಈ ವಿಷಯವನ್ನು ಪ್ರಾಥಮಿಕವಾಗಿ ಗ್ರಹಿಸಿಕೊಳ್ಳಬೇಕು.

ಅಶ್ಲೀಲ ಎಂದು ತೀರ್ಮಾನ ಕೊಡುವವರಿಗೂ ಗೊತ್ತಿರಬೇಕು; ತಮಗೆ ಅಂಟಿರುವುದು ಪ್ರಾಕೃತಿಕ, ಆದಿಮ ಗುಣ ಎಂದು. ಲೈಂಗಿಕತೆ (Sexuality) ಎನ್ನುವುದು ಎಲ್ಲ ಜೀವಿಗಳ ದೇಹಕ್ಕೂ ಅಂಟಿರುವ ಗುಣ. ಇದರಲ್ಲಿ ಆಯ್ಕೆ ಎನ್ನುವುದು ಇರುವುದೇ ಇಲ್ಲ. ಮೂಲಧಾತುವಾಗಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇದರ ಬಗ್ಗೆ ನೈತಿಕ ತೀರ್ಮಾನಗಳನ್ನು ಹೊರಡಿಸಬಾರದು. ಚಲನಶೀಲತೆ ಇರುವ ಎಲ್ಲಾ ಜೀವ, ಮನುಷ್ಯ, ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳ ದೇಹಕ್ಕೆ ಅಂಟಿಕೊಂಡು ಬಂದಿರುವಂಥದ್ದು ಇದು. ವಯಸ್ಕ ಸ್ಥಿತಿಗೆ ಬಂದಾಗ ಉದ್ದೀಪನಗೊಳ್ಳುವ ಇದರೊಳಗೆ ನೀತಿ, ಅಶ್ಲೀಲ ಎನ್ನುವ ಪದಗಳಿಗೆ ಜಾಗವೇ ಇಲ್ಲ.

ಆದರೆ, ಈ ಪದ ಎಲ್ಲಿಂದ ಕಾಣಿಸಿಕೊಳ್ಳಲಾರಂಭಿಸಿತು?; ಸಮಾಜವು ತನ್ನನ್ನು ತಾನು ರಚನೆಗೆ ಒಳಪಡಿಸಿಕೊಳ್ಳುತ್ತಾ, ವರ್ಗೀಕರಣಗಳದೊಳಗೆ ಬೆಳೆಯುತ್ತಾ ‘ನಾಗರಿಕತೆ’ ಎಂಬ ‘ವಸ್ತ್ರ’ ಧರಿಸಿದಾಗ. ಅಶ್ಲೀಲ ಎನ್ನುವುದು ಧಾರ್ಮಿಕ, ಜಾತಿ ವರ್ಗದ ಸಾಮಾಜಿಕ ರಚನೆ ಕೂಡ; ತನಗೆ ಸಲ್ಲದ, ಒಪ್ಪಿಗೆ ಇಲ್ಲದ, ಸಾರ್ವಜನಿಕ ಕ್ಷೇತ್ರಗಳಲ್ಲಿ ಒಪ್ಪಿಕೊಳ್ಳಲು ಬಾರದ ಸಂದರ್ಭಗಳಲ್ಲೆಲ್ಲಾ ಈ ಪದ ಚಲಾವಣೆಗೆ ಬರುತ್ತ ಹೋಯಿತು ಮತ್ತು ಬರುತ್ತಲೇ ಇರುತ್ತದೆ. ಆದರೆ ಈ ವಿಚಾರ ಲೈಂಗಿಕತೆಗಷ್ಟೇ ಸಂಬಂಧಿಸಿದ್ದಲ್ಲ. ಅಧಿಕಾರ ಶಕ್ತಿಕೇಂದ್ರಗಳಿಂದ ಬರುವಂಥ ಎಲ್ಲಾ ಸಂಗತಿಗಳನ್ನು ಈ ಹಿನ್ನೆಲೆಯಲ್ಲಿ ಬಹುಮುಖ್ಯವಾಗಿ ಗಮನಿಸಬೇಕು.

ಲೈಂಗಿಕತೆಯಲ್ಲಿ ತೊಡಗಿಕೊಂಡ ಮನುಷ್ಯರಾದ ಯಾರೂ ಬೀದಿ ಪ್ರದರ್ಶನ ಮಾಡುತ್ತ ಹೋಗುವುದಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿಯೂ ಕರ್ಮಟ ಮನಸ್ಸಿನವರು ಲೈಂಗಿಕತೆಯನ್ನು ನಿಷಿದ್ಧಗೊಳಿಸಿದರು. ಕಾಮ (ಲೈಂಗಿಕತೆ) ಅಥವಾ ಮನುಷ್ಯನ ಹುಟ್ಟು ಎನ್ನುವುದೇ ಮುಗ್ಧ, ಪವಿತ್ರ ಸ್ಥಿತಿಯ ನಾಶ ಎನ್ನುವುದು ಅವರ ಪ್ರತಿಪಾದನೆ. ಇದು ರೋಮನ್​ ಕ್ಯಾಥಲಿಕ್ ಮತ್ತು ಪ್ರಾಟೆಸ್ಟೆಂಟ್​ರಿಗೂ ಇದು ಅನ್ವಯವಾಗುತ್ತದೆ. ಹಾಗಾಗಿ ಲೈಂಗಿಕ ಸಂಬಂಧಗಳಿಂದ ಹುಟ್ಟುವ ಮನುಷ್ಯರು, ಹುಟ್ಟಿದ ಮಗುವೂ ಕೂಡ ಮೂಲಭೂತ ಪಾಪದ (Original Sin) ಫಲ! ಆದುದರಿಂದಲೇ ಕನ್ಯೆ ಮೇರಿಯ ಮಗ ‘ಜೀಸಸ್’ಗೆ ಅವರು ‘ಪವಿತ್ರ’ ಕಲ್ಪನೆ ಕೊಟ್ಟಿರುವುದು. ಅವರ ಪ್ರಕಾರ ಹುಟ್ಟುವ ಪ್ರತೀ ಮಗುವೂ ಮೂಲಭೂತ ಪಾಪದ ಹಣೆಪಟ್ಟಿ ಹೊತ್ತುಕೊಂಡೇ ಬರುತ್ತದೆ. ಇಂಥ ಧಾರ್ಮಿಕ ನಂಬಿಕೆಗಳು ‘ಅಶ್ಲೀಲ’ಕ್ಕೂ ಮೀರಿದ ಪಾಪಪ್ರಜ್ಞೆಯಿಂದ ಕೂಡಿರುವಂಥವು. ಈ ಕನ್ಯತ್ವ ಪರಿಕಲ್ಪನೆ (Notion of Virginity)ಯಿಂದಾಗಿ ಲೈಂಗಿಕತೆಯನ್ನು ಅಶ್ಲೀಲ, ಪಾಪ ಎನ್ನುವ ದೊಡ್ಡ ನಂಬಿಕೆ ಪಾಶ್ಚಿಮಾತ್ಯದ ಧಾರ್ಮಿಕ ನೆಲೆಯಲ್ಲಿದೆ. ಈ ಪದ ಪ್ರಯೋಗಿಸುವುದೆಂದರೆ ಕ್ರೋಢೀಕರಣಗೊಂಡಂಥ ಅಧಿಕಾರದ ಶಕ್ತಿಗಳನ್ನು ಎತ್ತಿ ತೋರಿಸಿದಂತೆ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಾತ್ಸಾಯನನ ಕಾಮಸೂತ್ರವನ್ನೇ ಅಧಿಕೃತ, ವೈಜ್ಞಾನಿಕ ಎಂದು ಪರಿಗಣಿಸಿದ್ದೇವೆ. ಭರ್ತೃಹರಿ ನೀತಿಶತಕ, ವೈರಾಗ್ಯಶತಕ ಮತ್ತು ಶೃಂಗಾರಶತಕವನ್ನೂ ಬರೆದ. ಶೃಂಗಾರಶತಕದಲ್ಲಿ ಗಂಡು ಹೆಣ್ಣಿನ ಬಗ್ಗೆ ಅತ್ಯದ್ಭುತ, ಅಚ್ಚರಿ ಎನ್ನಿಸುವ ವಾಕ್ಯಗಳಿವೆ; ದೇವರನ್ನು ಕಾಣಬೇಕು ಎಂದರೆ ಹೆಣ್ಣಿನ ಯೋನಿಯನ್ನು ಮುಟ್ಟಿ/ನೀಡಿ ಪಡೆದುಕೋ ಎನ್ನುತ್ತಾನೆ ಅವ. ತಾಂತ್ರಿಕರ ಯೋನಿಪೂಜೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ನಮ್ಮ ದೇಶ ಹಲವು ಸಂಸ್ಕೃತಿಗಳನ್ನು, ವಿವಿಧ ನಾಗರಿಕತೆಗಳನ್ನು, ಅನೇಕ ಸಂಪ್ರದಾಯಗಳನ್ನು ಉಳ್ಳಂಥ ಬಹುಮುಖಿ ಸಾಂಸ್ಕೃತಿಕ ತಾಣ. ಕ್ರೈಸ್ತ ಧರ್ಮಕ್ಕಿಂತ ಮೊದಲು ಅಂದರೆ, ಗ್ರೀಕ್ ಸಂಸ್ಕೃತಿಯ Apollonian ಸಂಪ್ರದಾಯದಲ್ಲಿ ಮನುಷ್ಯರು ಶಿಸ್ತು, ಸಂಯಮ, ಇಂದ್ರಿಯ ನಿಗ್ರಹಕ್ಕೆ ಒಳಪಡುತ್ತಾರೆ. ಆದರೆ Dionysian ಮಾರ್ಗದಲ್ಲಿ ಸ್ವಚ್ಛಂದವಾಗಿ, ಮುಕ್ತವಾಗಿ ಸಂಭ್ರಮಾಚರಣೆಯಲ್ಲಿರುತ್ತಾರೆ; ಯಾವ ಅಡೆತಡೆಗಳಿಲ್ಲದೆ ಭೂಮಿಯೊಳಗಿನ ಸಮೃದ್ಧತೆ, ಫಲವತ್ತತೆಯನ್ನು ಒಂದು ಶಕ್ತಿಯಾಗಿ ಪರಿಭಾವಿಸುವುದು. ಹೀಗೆ ಬಹುಮುಖಿ ನೆಲೆಗಳನ್ನು ನೋಡುತ್ತಾ ಹೋದಂತೆ ಪೂರ್ವ ಇತಿಹಾಸದ ನಾಗರಿಕತೆಗಳು, ಸಂಪ್ರದಾಯಗಳು ಮತ್ತು ಮುಕ್ತ ಸಮಾಜಗಳನ್ನು ನೋಡಿದಾಗ ಅಲ್ಲಿ ಅಶ್ಲೀಲ ಎಂಬ ಪದಕ್ಕೆ ಅಸ್ತಿತ್ವವೇ ಇಲ್ಲ ಎನ್ನುವುದನ್ನು ಗಮನಿಸಬಹುದು.

manoranjana vruttanta

ಕಲೆ : ಎಚ್. ಎ. ಅನಿಲ್​ಕುಮಾರ್

ಲೈಂಗಿಕತೆ ಎನ್ನುವುದು ಪ್ರಕೃತಿ ದಾನ ಮಾಡಿರುವ ಯೋಗ, ಚಿತ್, ವರ. ಉಸಿರಾಟದಂತೆ ಸಹಜವಾಗಿತ್ತು. ಸಮಾಜದ ಪದರಗಳು ರಚನೆ ಆಗುತ್ತಾ ಧರ್ಮ, ಜಾತಿಯ ನೆಲೆಗಳು ಬಿಗಿಗೊಳ್ಳುತ್ತಾ ಹೋದಂತೆ ‘ಅಶ್ಲೀಲ’ ಪದ ಢಾಳಾಗಿ ಕಾಣತೊಡಗಿತು. ಆದರೆ, ಇದರ ಹಿಂದೆ ಒಂದು ರಾಚನಿಕ ಕ್ರಿಯೆ ಇದೆ. ಪ್ರಕೃತಿ, ಸಂಸ್ಕೃತಿಯ ಒಂದು ಪ್ರಜ್ಞೆ ಇದೆ. ಹಾಗಾಗಿ ಅಧಿಕಾರ ಶಕ್ತಿ ಎನ್ನುವುದು ಇದನ್ನು ಸದಾ ಸುತ್ತುವರಿಯುತ್ತಲೇ ಇರುತ್ತದೆ. ಕರ್ನಾಟಕ ಸಂಗೀತದಲ್ಲಿ ಕೆಲವರು ಜಾವಳಿಗಳನ್ನು ಹಾಡುವುದೇ ಇಲ್ಲ, ಈ ಪ್ರಕಾರವು ಲೈಂಗಿಕತೆ-ಕಾಮಗುಣ-ಕಾಮಪ್ರಕ್ರಿಯೆಗೆ ಸಂಬಂಧಿಸಿದೆ ಎನ್ನುವ ಕಾರಣಕ್ಕೆ. ಜಾವಳಿಗಳೆಂದರೆ ಸೆಲೆಬ್ರೇಷನ್. ಆದರೆ ಇದನ್ನು ಅಶ್ಲೀಲ ಎನ್ನುವುದು ಏಕಮುಖಿ ನಾಗರಿಕತೆಯ ಸಂಕೇತ; ಶ್ರೇಷ್ಠತೆಯ ಪರಿಕಲ್ಪನೆ, ಅಶ್ಲೀಲತೆ ಎನ್ನುವುದನ್ನು ಶ್ರೇಣೀಕೃತಗೊಳಿಸುವ ಮನೋಭಾವ. ಖ್ಯಾತ ಕಲಾವಿದೆಯರಾಗಿದ್ದ ಟಿ. ಬೃಂದಾ, ಟಿ. ಮುಕ್ತಾ (ಗಾಯಕಿಯರು), ಟಿ. ಧನಮ್ಮಾಳ (ವೈಣಿಕರು) ಮತ್ತು ಇದೇ ಕುಟುಂಬಕ್ಕೆ ಸೇರಿದ ಟಿ. ಬಾಲಸರಸ್ವತಿ (ಅತ್ಯದ್ಭುತ ನರ್ತಕಿ) ಇವರೆಲ್ಲ ದೇವದಾಸಿ ಸಂಪ್ರದಾಯಕ್ಕೆ ಸೇರಿದವರು. ಜಾವಳಿ ಪ್ರಕಾರದಿಂದ ಸಂಗೀತಕ್ಕೆ ನೃತ್ಯಕ್ಕೆ ತೆರೆದುಕೊಳ್ಳುವಂಥ ಪರಂಪರೆ ಇದು. ಇಲ್ಲಿ ಶೃಂಗಾರ ವೈಭವೀಕರಣಗೊಳ್ಳುತ್ತದೆ. ಈ ಪರಂಪರೆಯವರು ಆಸ್ಥಾನದಲ್ಲಿ, ಆಗರ್ಭ ಶ್ರೀಮಂತರ ಪೋಷಣೆಯಲ್ಲಿ ನರ್ತಕಿಯರಾಗಿರುತ್ತಿದ್ದರು. ಶೃಂಗಾರರಸವನ್ನು ಎತ್ತಿ ಹಿಡಿದವರೇ ಅವರು.

ಆದರೆ ಈ ಶೃಂಗಾರಾಭಿವ್ಯಕ್ತಿಯ ಮೂಲಕ ಕಲಾ ‘ಸಂಪ್ರದಾಯ’ದೊಳಗೆ ‘ಅಶ್ಲೀಲ’ ಎಂಬ ಪದ ತೂರಿಕೊಳ್ಳಲು ಶುರುವಾಗುತ್ತಿದ್ದಂತೆ ಚೆನ್ನೈನ ಕಲಾಕ್ಷೇತ್ರದಂಥ ಸಂಸ್ಥೆಗಳಂಥವರು ಈ ‘ಸಾಂಸ್ಕೃತಿಕ ಭಾಷೆಯ’ ಶೃಂಗಾರಕ್ಕೆ ಭಕ್ತಿಯ ಲೇಪ ಕೊಟ್ಟು ಶೃಂಗಾರವನ್ನು ಭಕ್ತಿಪ್ರಧಾನವಾಗಿಸಿದರು. ಏಕೆಂದರೆ, ದೇವದಾಸಿಗಳು ವೇಶ್ಯೆಯರನ್ನು ಒಳಗೊಳ್ಳುವ ಈ ಪ್ರಸ್ತುತಿ ಸಾರ್ವಜನಿಕವಾಗಿ ಪ್ರದರ್ಶನಗೊಂಡಾಗ ಕಾಮಪ್ರಚೋದನೆ ಉಂಟುಮಾಡುತ್ತದೆ, ಉದ್ರೇಕಗೊಳಿಸುತ್ತದೆ ಎಂಬ ಕಾರಣಕ್ಕೆ. ಶೃಂಗಾರ ಎಂದರೆ ವಿಪರೀತ ಮುಜುಗರಕ್ಕೆ ಒಳಪಡಿಸುವಂಥದ್ದು, ಕಾಮೋದ್ರೇಕಗೊಳಿಸುವಂಥದ್ದು, ಕೆಳಮಟ್ಟಕ್ಕಿಳಿಸುವಂಥದ್ದು ಎಂಬ ವಾದಗಳನ್ನು ‘ಶುದ್ಧೀಕರಣ’ ಕೇಂದ್ರದವರು ಮಂಡಿಸಲಾರಂಭಿಸಿದರು. ಅಂತೆಯೇ ಇದು ಸಮಾಜದಲ್ಲಿ ಯಾರು ಆಳುತ್ತಿದ್ದರೋ ಯಾರು ಪ್ರಬಲವಾಗಿದ್ದರೋ ಅವರು ಕಟ್ಟಿದಂಥ ಅಸಹಜವಾದಂಥ ಮೀಮಾಂಸೆ ಎನ್ನಿಸಿಕೊಳ್ಳುತ್ತದೆ. ಇದೊಂದು ‘ಶುದ್ಧೀಕರಣ’ಗೊಂಡವರ ಅಸಹಜ ಮನಸ್ಥಿತಿಯನ್ನು ತೋರಿಸುತ್ತದೆ. ಹೀಗಾಗಿಯೇ ಇಲ್ಲಿಯೂ ‘ಅಸ್ಪೃಶ್ಯ’ ಎಂಬ ಪದ ಕಾಣಿಸಿಕೊಳ್ಳಲಾರಂಭಿಸಿತು. ಹೀಗೆ ಶೃಂಗಾರ ಎನ್ನುವುದು ಕರ್ನಾಟಕ ಸಂಗೀತದ ಜಾವಳಿ ಮತ್ತು ನೃತ್ಯಕ್ಕೆ ಸೀಮಿತವಾಯಿತು.

ದೇವದಾಸಿ ಸಂಪ್ರದಾಯಕ್ಕೆ ಸೇರಿದ ಬೆಂಗಳೂರು ನಾಗರತ್ನಮ್ಮನವರ ಕೊಡುಗೆ ಬಹಳ ದೊಡ್ಡದು. ವಸಾಹತುಶಾಹಿ ಕಾಲದಲ್ಲಿ ಅವರು ಕಲಾವಿದರನ್ನು ಪೋಷಿಸಿ ಕಲೆಯನ್ನು ಶ್ರೀಮಂತಗೊಳಿಸಿದ ರೀತಿ ಗಮನಾರ್ಹ. ಹಾಗೆಯೇ ಕಲಾಪ್ರಪಂಚದಲ್ಲಿ ಬಹುಮುಖ್ಯ ಪಾತ್ರ ‘ರಾಧಿಕಾಸಾಂತ್ವನಮ್’. ಈ ಕಾವ್ಯವನ್ನು ಮುತ್ತುಪಳನಿ ಎಂಬ ಹೆಣ್ಣುಮಗಳು ಬರೆದಿದ್ದಾರೆ. ಜಯದೇವರ ಗೀತಗೋವಿಂದವೂ ಶೃಂಗಾರಕಾವ್ಯವೇ, ಮುತ್ತುಪಳನಿಯವರದೂ ಶೃಂಗಾರಕಾವ್ಯವೇ. ಗೀತಗೋವಿಂದದ ಅಷ್ಟಪದಿಗಳು ಕೃಷ್ಣಪ್ರಧಾನ, ಪುರುಷಕೇಂದ್ರ ಲೈಂಗಿಕತೆ. ‘ರಾಧಿಕಾಸಾಂತ್ವನಮ್’ ಸ್ತ್ರೀಪ್ರಧಾನ ಲೈಂಗಿಕತೆ. ಹೆಣ್ಣಿನ ಲೈಂಗಿಕ ಆಸೆ-ಬಯಕೆ-ತೃಪ್ತಿಗೆ ಸಂಬಂಧಿಸಿದ್ದು. ಕೃಷ್ಣ ಗೋಪಿಕಾಸ್ತ್ರೀಯರೊಂದಿಗೆ ರತಿಕ್ರೀಡೆಯಲ್ಲಿ ತೊಡಗುವುದು ಸಹಜ. ಆದರೆ ರಾಧೆ? ಹೆಣ್ಣಿನ ಲೈಂಗಿಕತೆ ಅಶ್ಲೀಲವೆ! ಅಶ್ಲೀಲ ಎನ್ನುವುದಕ್ಕೆ ಎಷ್ಟೊಂದು ಆಯಾಮಗಳಿವೆ… ವಸಾಹತುಶಾಹಿ ಸಂದರ್ಭದಲ್ಲಿ ಆಳುತ್ತಿರುವ ಬ್ರಿಟೀಷರು ‘ರಾಧಿಕಾಸಾಂತ್ವನಮ್’ ಕೃತಿಯನ್ನು ಮುಟ್ಟುಗೋಲು ಹಾಕಿದಾಗ ಈ ಕೃತಿಯ ಪ್ರಕಾಶಕರು, ಮುದ್ರಕರು, ಪುಸ್ತಕದಂಗಡಿಯವರೂ ಈ ಪರಿಣಾಮವನ್ನು ಎದುರಿಸಬೇಕಾಯಿತು. ಹಾಗಾದರೆ ಗೀತಗೋವಿಂದ ಯಾಕೆ ಅಶ್ಲೀಲವೆನ್ನಿಸಿಕೊಳ್ಳಲಿಲ್ಲ? ಹೀಗೆ ನೈತಿಕತೆ ಎನ್ನುವುದು ಲಿಂಗ, ವರ್ಗಗಳಿಗನುಸಾರವಾಗಿ ಹೆಡೆ ಬಿಚ್ಚತೊಡಗಿತು. ಹೆಣ್ಣು ತನ್ನ ಅಂಗಾಂಗಗಳ ಬಗ್ಗೆ, ತೃಪ್ತಿ, ಬಯಕೆ, ಸುಖದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದರೆ ತಪ್ಪು. ‘ಕೃಷ್ಣ’ ಮಾತ್ರ ಸಂಭ್ರಮಿಸಬಹುದು. ಹೀಗೆ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಲಿಂಗತಾರತಮ್ಯ ತಾಂಡವವಾಡತೊಡಗಿತು. ಲೈಂಗಿಕತೆ ಎನ್ನುವುದು ಸಾಂಸ್ಕೃತಿಕ ಮತ್ತು ಕಾನೂನಿನ ಕಣ್ಣಿನಲ್ಲಿಯೂ ಅಶ್ಲೀಲವೆಂಬಂತಾದಾಗ ಕವಿ ಕಮಲಾದಾಸ್ ಅಂಥವರು ಇದನ್ನು ಉಲ್ಲಂಘಿಸಿದರು. ನಿರ್ಭಿಡೆಯಿಂದ ಮಾತನಾಡತೊಡಗಿದರು.

ಅಶ್ಲೀಲ ಎನ್ನುವುದಕ್ಕೆ ಅಧಿಕಾರದ ಚೌಕಟ್ಟು, ನಿಯಂತ್ರಿಸುವ ಸಾಮಾಜಿಕತೆಯಿಂದ ಬರುವಂಥದ್ದು ಎಂಬುದನ್ನು ಇಲ್ಲಿ ಗಮನಿಸಬೇಕು. ಆದರೂ ಕೂಡ ಸ್ವಾತಂತ್ರ್ಯ ಎನ್ನುವ ಹೆಸರಿನಲ್ಲಿಯೋ ಲೈಂಗಿಕತೆ ಎನ್ನುವ ಹೆಸರಿನಲ್ಲಿಯೋ ಜಾಗತಿಕ ಮಾರುಕಟ್ಟೆಯ ಚೌಕಟ್ಟಿನೊಳಗೆ ತಾತ್ವಿಕವಾಗಿ, ಸೈದ್ಧಾಂತಿಕವಾಗಿ ರಸದ ನೆಲೆಯಲ್ಲಿ ಶೃಂಗಾರ, ಲೈಂಗಿಕತೆಯನ್ನು ಸಂಭ್ರಮಿಸಬೇಕು ಎಂದಾಗ, ಸ್ವಾತಂತ್ರ್ಯದ ಹೆಸರಿನಲ್ಲಿ ಹೆಣ್ಣನ್ನು ಭೋಗದ ವಸ್ತುವಂತೆ ನೋಡಲಾಗುತ್ತಿದೆ ಎಂದು ಉಗ್ರ ಸ್ತ್ರೀವಾದಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ ಹೆಣ್ಣಿನ ದೇಹವೆಂದರೆ ವ್ಯಾಪಾರದ ವಸ್ತುವಲ್ಲ. ರಾಜ್ ಕುಂದ್ರಾ ನಡಾವಳಿಯನ್ನು ನಾನು ಈ ಕಾರಣಕ್ಕೆ ಒಪ್ಪುವುದಿಲ್ಲ. ಇದೊಂದು ರೀತಿ ವಿಚಿತ್ರವಾಗಿ ಹೆಣ್ಣಿನ ಸ್ವಾತಂತ್ರ್ಯವನ್ನು ಅಪಹರಿಸುವ ತಂತ್ರ. ಇದು ಶೃಂಗಾರವೂ ಅಲ್ಲ ಲೈಂಗಿಕತೆಯೂ ಅಲ್ಲ, ಪ್ಯಾಕೇಜ್ ಮಾಡಿ ವ್ಯಾಪಾರಕ್ಕೆ ‘ಬಳಕೆ’ ಮಾಡುವ ಉಪಭೋಗ ಸಂಸ್ಕೃತಿ. ಜಾಗತಿಕ ಮಾರುಕಟ್ಟೆಯ ಅಧಿಕಾರ ಕೇಂದ್ರ. ಆ ಕೇಂದ್ರಸ್ಥಾನದಲ್ಲಿ ಇರುವವರು ಮುಕ್ತಸಂಸ್ಕೃತಿ, ಸ್ವಾತಂತ್ರ್ಯದ ಹೆಸರಿನಲ್ಲಿ ಮಾತನಾಡುವುದು ‘ತಮ್ಮ’ ಲಾಭಕ್ಕೆ! ಹೀಗಿರುವಾಗ ಶೃಂಗಾರಕ್ಕೆ ಜಾಗವೆಲ್ಲಿ? ಕಲೆಯ ಪ್ರಪಂಚ ಬೇರೆ, ಅದರ ಅಭಿವ್ಯಕ್ತಿ ಬೇರೆ. ಆದರೆ ಇದು ಉಪಭೋಗ ಸಂಸ್ಕೃತಿ.

manoranjana vruttanta

ಕಲೆ : ಎಚ್. ಎ. ಅನಿಲ್​ಕುಮಾರ್

ಬಹುಮುಖಿ ಸಂಸ್ಕೃತಿ, ನಾಗರಿಕತೆ, ಆಚರಣೆಗಳು ಕಡಿಮೆಯಾಗುತ್ತಾ ಹೋದಂತೆ ‘ತಾಂತ್ರಿಕ’ ಜಗತ್ತಿನಲ್ಲಿ ಲೈಂಗಿಕತೆ ಅದರದೇ ಆದ ಭಾಷೆ, ನುಡಿಗಟ್ಟುಗಳನ್ನೂ ಉಳಿಸಿಕೊಂಡಿತ್ತು. ಆದರೆ ನಂತರ? ಮಾತೆತ್ತಿದರೆ ಧಾರ್ಮಿಕ ಭಾವನೆಗಳಿಗೆ ನೋವು! ಇದಕ್ಕೆ ಕಾನೂನನ್ನು ಬಳಸಿಕೊಂಡು ಅಶ್ಲೀಲ, ಪೋರ್ನೊಗ್ರಫಿ ಎಂಬಂಥ ವಾದಗಳಲ್ಲಿ ದುಷ್ಟಶಕ್ತಿಗಳ ಕೇಂದ್ರಸ್ಥಾನವು ಭದ್ರ ಆಗುತ್ತಾ ಹೋಗುತ್ತಿರುವುದು ಆತಂಕ ತರುತ್ತಿದೆ. ಕಲಾಭಿವ್ಯಕ್ತಿಯನ್ನು ರಾಷ್ಟ್ರವಿರೋಧಿ, ವಲ್ಗರ್, ಅಪ್​ಸೀನ್ ಎಂದು ಸೆನ್ಸಾರ್ ಮಾಡುವುದು, ನಿಷೇಧಿಸುವುದು ಹೆಚ್ಚುತ್ತಾ ಹೋಗುವ ಸಾಧ್ಯತೆ ಇದೆ. ಇದಕ್ಕಾಗಿ ಕಾನೂನನ್ನು ‘ಬಳಸಿ’ಕೊಳ್ಳುವುದೂ ಭರದಿಂದ ಸಾಗಬಹುದು. ಅಶ್ಲೀಲ ಎನ್ನುವುದನ್ನು ಏಕಮುಖಿಯಾಗಿ ನಿಷೇಧಿಸುವಂಥ ಕೇಂದ್ರಗಳಿಗೆ ಸಹಾಯ ಮಾಡುವ ರೀತಿಯಲ್ಲಿ ಪೋರ್ನ್, ಬ್ಲ್ಯೂ ಫಿಲಮ್​ಗಳು ಒತ್ತಾಸೆ ನೀಡಬಾರದು. ಸಮಾಜದ ನೀತಿ, ಚೌಕಟ್ಟನ್ನು ಕೆಡಿಸುತ್ತದೆ ಎಂದು ಹೇಳುವಲ್ಲಿಯೇ ಇದಕ್ಕೊಂದು ರಾಜಕೀಯ ಆಯಾಮವಿದೆ. ಸ್ವಾಯತ್ತತೆ ಬಯಸುವಂಥವರು ಕಾನೂನಿನ ದಬ್ಬಾಳಿಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಸೆನ್ಸಾರ್​ಶಿಪ್ ಎನ್ನುವುದು ನಾಲ್ಕು ಜನ ಕುಳಿತು ಪುಸ್ತಕ, ಸಿನೆಮಾದ ಭಾಗಗಳನ್ನು ತುಂಡರಿಸಿ, ಹಿಂದೂ ಸಂಸ್ಕೃತಿಗೆ ಅಶ್ಲೀಲ ಎಂದು ಬ್ಯಾನ್ ಮಾಡುವ ಪ್ರಕ್ರಿಯೆಗಳು ಹೆಚ್ಚುತ್ತ ಹೋಗಬಹುದು.

ಆದರೆ ಲೈಂಗಿಕತೆಗೆ ಗಟ್ಟಿಯಾದಂಥ ಪ್ರಜಾಪ್ರಭುತ್ವದ ನೆಲೆ ಇದೆ ಎನ್ನುವುದು ನನ್ನ ಗ್ರಹಿಕೆ. ಅಧಿಕಾರದ ಮೂಲದಿಂದ ಇವೆಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕು ಇದು ಕೇವಲ ದೇಹಕ್ಕೆ ಸಂಬಂಧಿಸಿದ್ದಲ್ಲ. ಶೃಂಗಾರವನ್ನು  ಆಚರಣೆ ಮಾಡುತ್ತಿದ್ದವನು ಹೆಣ್ಣಿನ ದೇಹವನ್ನು ಮಾರುಕಟ್ಟೆ ವಸ್ತುವಾಗಿಸುವಾಗ ನಾನು ಹೇಗೆ ಒಪ್ಪಿಕೊಳ್ಳಲಿ? ಸ್ವಾತಂತ್ರ್ಯ, ಸಂಸ್ಕೃತಿಯ ಹೆಸರಿನಲ್ಲಿ ಹೆಣ್ಣಿನ ದೇಹವನ್ನೇ ಬಂಡವಾಳ ಮಾಡಿಕೊಳ್ಳುವುದರಲ್ಲಿ ಖಂಡಿತ ರಾಜಕೀಯ ಅಂಶವಿದೆ. ಇದನ್ನು ಅಕಡೆಮಿಕ್ ಮೀಮಾಂಸೆಗಳಿಂದ ವ್ಯಾಖ್ಯಾನ ಮಾಡಲಾಗದು. ಇದಕ್ಕೆ ನಿಜವಾದ ಪ್ರಜಾಪ್ರಭುತ್ವದ ಆಯಾಮವಿದೆ. ಬ್ಯಾನಿಂಗ್ ಸಂಸ್ಕೃತಿ ಇದು ಫ್ಯಾಸಿಸ್ಟ್ ನಡೆವಳಿಕೆ. ಫ್ಯಾಸಿಸ್ಟ್ ಶಕ್ತಿಗಳನ್ನು ವಿರೋಧಿಸುತ್ತಲೇ ನಮ್ಮ ಹೋರಾಟಗಳನ್ನು ಮುಂದುವರಿಸಬೇಕು.

ಗೀತಗೋವಿಂದ, ಜಾವಳಿ ಎಲ್ಲವೂ ನಮಗೆ ಬೇಕು. ಆದರೆ, ಉಪಭೋಗದ ಹೆಸರಿನಲ್ಲಿ ಹೆಸರಿನಲ್ಲಿ ಶೃಂಗಾರವನ್ನೇ ನಾಶಮಾಡುವಂಥ ಪ್ಯಾಕೇಜ್​ ಏಜಂಟರುಗಳು ನಮಗೆ ಬೇಕಿಲ್ಲ. ಎರಡು ವಿರೋಧಾಬಾಸಗಳ ಮಧ್ಯೆ ಮುಕ್ತವಾದ ಶೃಂಗಾರದ ಬಗ್ಗೆ, ರಸದ ಬಗ್ಗೆ, ಸ್ವಾತಂತ್ರ್ಯ, ಸ್ವಾಯತ್ತತೆಯ ನೆಲೆಯಲ್ಲಿ ಪ್ರಜಾಪ್ರಭುತ್ವದ ನೆಲೆಯಲ್ಲಿ ಬಹುಮುಖಿ ಸಂಸ್ಕೃತಿಗಳ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ರಾಜಕಾರಣದ ಪ್ರಶ್ನೆಯನ್ನು ಇದು ತಂದು ಒಡ್ಡುತ್ತಿದೆ. ಇದರ ಹಿಂದೆ ಲಿಂಗಬೇಧ ನೀತಿಯಿದೆ. ಜನಾಂಗ, ಧರ್ಮ ಮತ್ತು ಆಳುವ ವರ್ಗದ ಅಧಿಕಾರವಿದೆ. ಅಧಿಕಾರದ ಶಕ್ತಿಗಳಿಗೆ, ಕುಂದ್ರಾನಂಥ ಏಜಂಟರುಗಳಿಗೆ, ಜಾಗತಿಕ ಮಾರುಕಟ್ಟೆಯ ಗ್ರಾಹಕ ಸಂಸ್ಕೃತಿಗೆ ಕಲೆ, ಸಂಸ್ಕೃತಿ, ಶೃಂಗಾರ ಬೇಕಿಲ್ಲ. ಕಲೆಯ ಬಗ್ಗೆ, ಮುಕ್ತಸಮಾಜದ ಬಗ್ಗೆ, ನಿಜವಾದ ಶೃಂಗಾರದ ಬಗ್ಗೆ ಅರಿವಿಲ್ಲ. ಇದು ಯುವಪೀಳಿಗೆಯ ಮೇಲೂ ಪರಿಣಾಮ ಬೀರುತ್ತಿದೆ. ಬಹುಮುಖಿ ಸಮಾಜ ಕಥನಗಳನ್ನು ಹುಡುಕುತ್ತಾ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಲೇಬೇಕು. ಹೆಣ್ಣನ್ನು ಉಪಕರಣ ಅಥವಾ ಭೋಗದ ವಸ್ತುವನ್ನಾಗಿಸಿ ಶೃಂಗಾರ ಅನ್ನುವುದು ಇದೆಯಲ್ಲ ಪ್ರಜ್ಞೆಗೆ ಆಚರಣೆಗೆ ಅವಮಾನ. ಇದನ್ನು ವಿರೋಧಿಸುತ್ತಾ ಈ ನೀತಿಯ ಜಾತಿ, ರಾಜಕೀಯ ಶಕ್ತಿಗಳು ಗಟ್ಟಿಯಾಗುವುದಕ್ಕೆ ಬಿಡಬಾರದು. ಎರಡೂ ನಮ್ಮ ಆಯ್ಕೆಗಳಲ್ಲ. ಎರಡನ್ನೂ ಏಕಕಾಲಕ್ಕೆ ವಿಲಂಬಿಸಬೇಕು.

ಶೃಂಗಾರದ ಹೆಸರಿನಲ್ಲಿ ದುರ್ಬಳಕೆ, ಸ್ವಾಯತ್ತತೆ ಹೆಸರಿನಲ್ಲಿ ಬೆಳೆಯುತ್ತಿರುವ ಗ್ರಾಹಕ ಸಂಸ್ಕೃತಿಯನ್ನು ತಡೆಯಬೇಕು. ಮಾರುಕಟ್ಟೆ ಕಲಿಸುವ ಸ್ವಾತಂತ್ರ್ಯದ ಭಾಷೆ ನಿಜವಾದ ಸ್ವಾತಂತ್ರ್ಯದ ಭಾಷೆ ಅಲ್ಲ. ಅದರಲ್ಲಿ ಅಸಮಾನತೆ ಇದೆ, ಅನ್ಯಾಯ ಇದೆ. ಆರ್ಥಿಕತೆಗೆ ಸಂಬಂಧಿಸಿದ ಭಾಷೆಯದು, ಸಾಂಸ್ಕೃತಿಕ ಭಾಷೆಯಲ್ಲ ಅದು.  ಮಾರಲು ಬೇಕಾದ ಸ್ವಾತಂತ್ರ್ಯದ ಭಾಷೆ ಮಾರುಕಟ್ಟೆಗೆ ಬೇಕು, ಹೆಣ್ಣಿನ ಲೈಂಗಿಕ ಬಯಕೆಗಳಲ್ಲ. ಹೆಣ್ಣಿನ ಕನಸು, ಹೆಣ್ಣಿನ ಅಂತರಂಗದ ಭಾಷೆ, ಅಭಿವ್ಯಕ್ತಿಯನ್ನು ಪ್ಯಾಕೇಜ್ ಮಾಡಿ ಇಡುವುದೆಂದರೆ, ಅವಳ ಕನಸನ್ನು ಮಾರುವ ಆಶಯ! ಇದು ಆದಿಮ ಸಮಾಜ, ಸಂಸ್ಕೃತಿಯ ಭಾಷೆಯಲ್ಲ ಇದನ್ನು ಅಕಡೆಮಿಕ್​ ಮೂಲಕ ಬದಲಾವಣೆ ತರಲು ಸಾಧ್ಯವಾಗುವುದಿಲ್ಲ.

ಇಂದಿಗೂ ಜಯದೇವನ ಅಷ್ಟಪದಿಗೆ ನೃತ್ಯ ಪ್ರದರ್ಶಿಸುತ್ತಾರೆ. ರಾಧಿಕಾಸಾಂತ್ವನಮ್ ಆಧರಿಸಿ ನೃತ್ಯ ಪ್ರದರ್ಶನಗಳಿರುವುದಿಲ್ಲ. ಏಕೆಂದರೆ ‘ರಾಧಿಕಾಸಾಂತ್ವನಮ್’ ಲೈಂಗಿಕ ಸುಖ ಕೊಡು ಎಂದು ಕೇಳುವ ‘ಹೆಣ್ಣಿನ ಮಾತು’. ಎಂಥ ವಿರೋಧಾಭಾಸವಿದು?

(ಈ ಸರಣಿ ಇಲ್ಲಿಗೆ ಮುಕ್ತಾಯವಾಯಿತು. ಸರಣಿಯ ಎಲ್ಲಾ ಲೇಖನಗಳನ್ನು ಇಲ್ಲಿ ಓದಬಹುದು https://tv9kannada.com/tag/art-and-entertainment )

ಇದನ್ನೂ ಓದಿ : Art and Entertainment : ‘ನಮ್ಮ’ ಭಿತ್ತಿ-ಫಲಕಗಳ ಅಪರಾವತಾರಗಳೇ ದೃಶ್ಯಸಂಸ್ಕೃತಿಯ ಅಂತರಂಗ-ಬಹಿರಂಗದ ಅಶ್ಲೀಲ!

Published On - 6:31 pm, Thu, 5 August 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ