International Yoga Day :ಮೊದಲ ಬಾರಿಗೆ ಯೋಗ ಮಾಡ್ತಾ ಇದ್ದೀರಾ? ತಜ್ಞರು ಹೇಳಿರುವ ಈ ವಿಷಯಗಳನ್ನು ಮರಿಬೇಡಿ
ನೀವು ಕೂಡ ಮೊದಲ ಬಾರಿಗೆ ಯೋಗ ಮಾಡಲು ಪ್ರಾರಂಭ ಮಾಡಬೇಕು ಎಂದು ಅಂದುಕೊಂಡಿದ್ದರೆ ತಜ್ಞರು ನೀಡಿರುವ ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಏಕೆಂದರೆ ಯೋಗ ಮಾಡುವುದು ತಪ್ಪಾದರೆ, ಅದು ಪ್ರಯೋಜನಗಳನ್ನು ನೀಡುವ ಬದಲು ಹಾನಿಯನ್ನುಂಟುಮಾಡುವುದೇ ಹೆಚ್ಚಾಗಿರುತ್ತದೆ. ಹಾಗಾಗಿ ಯೋಗದ ಆರಂಭಕ್ಕೂ ಮೊದಲು ನೀವು ಮಾಡಿಕೊಳ್ಳುವ ಪೂರ್ವ ತಯಾರಿ ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ತಜ್ಞರು ಮೊದಲ ಬಾರಿಗೆ ಯೋಗ ಮಾಡುವವರಿಗೆ ನೀಡಿರುವ ಸಲಹೆಗಳು ಯಾವವು ಎಂಬುದನ್ನು ತಿಳಿದುಕೊಳ್ಳಿ.

ಆರೋಗ್ಯವಾಗಿರಬೇಕು ಎಂಬ ಹಂಬಲದಿಂದ ತಪ್ಪದೆ ಯೋಗ (Yoga) ಮಾಡುವವರು ನಮ್ಮ ಮಧ್ಯೆಯೇ ಇದ್ದಾರೆ. ಆದರೆ ಯೋಗ ಮಾಡುವುದಕ್ಕೆ ಆರಂಭ ಮಾಡಿ ಪ್ರತಿದಿನ ಯೋಗ ಮಾಡಬೇಕೆಂದು ಅಂದುಕೊಳ್ಳುವವರು ಕೂಡ ಅನೇಕರಿದ್ದಾರೆ. ಆ ರೀತಿ ದೃಢ ಸಂಕಲ್ಪ ಮಾಡಿಕೊಂಡು ಮೊದಲ ಬಾರಿಗೆ ಯೋಗ ಮಾಡಲು ಪ್ರಾರಂಭಿಸುವವರಿಗೆ ಸ್ವಲ್ಪ ಭಯ ಇದ್ದೆ ಇರುತ್ತದೆ. ಏಕೆಂದರೆ ಹೇಗೆ ಮಾಡಬೇಕು? ಸರಿಯಾಗದಿದ್ದರೆ? ಹೀಗೆ ನಾನಾ ರೀತಿಯ ಪ್ರಶ್ನೆಗಳು ಮನಸ್ಸಿನಲ್ಲಿ ಕೊರೆಯುತ್ತದೆ. ಆದರೆ ಯೋಗ ತಜ್ಞರು ಹೇಳುವ ಪ್ರಕಾರ ಮುಖ್ಯವಾಗಿ ಯೋಗ ಆರಂಭ ಮಾಡುವ ಮೊದಲು ಕೆಲವು ಅಂಶಗಳನ್ನು ನೆನಪಿನಲ್ಲಿಡಬೇಕು. ಈ ಸಲಹೆಗಳು ನಮ್ಮ ಆರೋಗ್ಯ (Health) ಕಾಪಾಡಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ. ಜೊತೆಗೆ ಶಿಸ್ತಿನಿಂದ ಯೋಗ ಮಾಡಲು ಈ ಸಲಹೆಗಳು ಸಹಾಯ ಮಾಡುತ್ತದೆ. ಹಾಗಾದರೆ ಯೋಗದ ಆರಂಭಕ್ಕೂ ಮೊದಲು ನಮ್ಮ ತಯಾರಿ ಹೇಗಿರಬೇಕಾಗುತ್ತದೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಯೋಗವನ್ನು ಪ್ರಾರಂಭಿಸುವ ಮೊದಲು ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅನೇಕ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಮಾಡುವ ತಪ್ಪುಗಳು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ನೀವು ಯೋಗವನ್ನು ಪ್ರಾರಂಭಿಸುವಾಗ ಈ ಅಂಶಗಳನ್ನು ನೆನಪಿಟ್ಟುಕೊಳ್ಳಿ, ಜೊತೆಗೆ ಅದನ್ನು ತಪ್ಪದೆ ಪಾಲಿಸಿ.
ಖಾಲಿ ಹೊಟ್ಟೆಯಲ್ಲಿ ಯೋಗ ಮಾಡಿ:
ಯೋಗ ತಜ್ಞೆ ಡಾ. ಸುಪ್ರತಾ ಅವರು ಹೇಳುವ ಪ್ರಕಾರ, ಯೋಗವನ್ನು ಯಾವಾಗಲೂ ಖಾಲಿ ಹೊಟ್ಟೆಯಲ್ಲಿರುವಾಗಲೇ ಮಾಡಬೇಕು. ನೀವು ಯೋಗ ಮಾಡುವ ಅರ್ಧ ಗಂಟೆ ಮೊದಲು ನೀರು ಕುಡಿಯಬಹುದು ಅದರ ಹೊರತಾಗಿ ಯಾವುದೇ ರೀತಿಯ ಆಹಾರ ನಿಮ್ಮ ಹೊಟ್ಟೆಯಲ್ಲಿರದಂತೆ ನೋಡಿಕೊಳ್ಳಬೇಕಾಗುತ್ತದೆ. ನೀವು ಬೆಳಿಗ್ಗೆ ಬೇಗನೆ ಯೋಗ ಮಾಡಲು ಸಾಧ್ಯವಾಗದಿದ್ದಾಗ ಊಟ ಮಾಡಿದ ಕನಿಷ್ಠ 3 ಗಂಟೆಗಳ ನಂತರ ಯೋಗ ಮಾಡಬಹುದು. ನೀವು ಬೆಳಗ್ಗಿನ ತಿಂಡಿಯಾದ ಮೇಲೆ ಯೋಗ ಮಾಡುತ್ತೀರಿ ಎಂದಾದರೆ ಉಪಾಹಾರದ ನಂತರ ಕನಿಷ್ಠ 2 ಗಂಟೆಗಳ ಅಂತರವಿಟ್ಟುಕೊಳ್ಳಬೇಕು. ಆದರೆ ಯಾವುದೇ ಕಾರಣಕ್ಕೂ ತಿಂಡಿ, ಊಟ ಮಾಡಿದ ತಕ್ಷಣ ಯೋಗ ಮಾಡಬಾರದು.
ಯೋಗ ಭಂಗಿಗಳನ್ನು ಸರಿಯಾಗಿ ಮಾಡಿ:
ಯೋಗಾಭ್ಯಾಸ ಮಾಡುವಾಗ ಸರಿಯಾದ ಭಂಗಿಯಲ್ಲಿ ಮಾಡಿ. ಇದು ಎಲ್ಲಕಿಂತ ಮುಖ್ಯವಾದ ಅಂಶ. ಏಕೆಂದರೆ ಯೋಗ ಮಾಡುವುದು ತಪ್ಪಾಗಿದ್ದರೆ, ಅದು ಪ್ರಯೋಜನಗಳನ್ನು ನೀಡುವ ಬದಲು ಹಾನಿಯನ್ನುಂಟುಮಾಡಬಹುದು. ಪ್ರತಿಯೊಂದು ಯೋಗ ಭಂಗಿಯನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ದೈಹಿಕ ನೋವು ಅಥವಾ ಅನಾರೋಗ್ಯವನ್ನು ನಿವಾರಿಸಲು ಯೋಗ ಮಾಡುತ್ತಿದ್ದರೆ, ತಜ್ಞರೊಂದಿಗೆ ಸಮಾಲೋಚಿಸಿ ಅದಕ್ಕೆ ಸೂಕ್ತವಾಗಿರುವ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ. ತಪ್ಪಾದ ಯೋಗ ಭಂಗಿಗಳನ್ನು ಆಯ್ಕೆ ಮಾಡುವುದರಿಂದ ಸಮಸ್ಯೆ ಇನ್ನಷ್ಟು ಹದಗೆಡಬಹುದು. ಅಲ್ಲದೆ ತಾಜಾ ಗಾಳಿ ಬರುವಲ್ಲಿ ಯೋಗಾಭ್ಯಾಸ ಮಾಡಿದರೆ ಅದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಬಟ್ಟೆ ಆಯ್ಕೆ:
ಯೋಗ ಮಾಡುವುದಕ್ಕೆ ಸರಿಯಾದ ಬಟ್ಟೆಗಳನ್ನು ಆಯ್ಕೆ ಮಾಡುವುದು ಕೂಡ ಬಹಳ ಮುಖ್ಯ. ಅದರಲ್ಲಿಯೂ ವಿಶೇಷವಾಗಿ ಸರಿಯಾದ ಒಳ ಉಡುಪುಗಳನ್ನು ಆರಿಸಿಕೊಳ್ಳುವುದು . ಬಹಳ ಮುಖ್ಯವಾಗುತ್ತದೆ. ನಿಮ್ಮ ದೇಹಕ್ಕೆ ಕಂಫರ್ಟ್ ನೀಡುವಂತಹ ಉಡುಗೆಗೆಳನ್ನು ಆಯ್ಕೆ ಮಾಡಿಕೊಳ್ಳಿ, ಆದಷ್ಟು ಅದು ಬಿಗಿಯಾಗಿ ಇರದಂತೆ ನೋಡಿಕೊಳ್ಳಿ. ಅಂದರೆ ಸರಿಯಾಗಿ ಉಸಿರಾಡಬಹುದಾದ ಬಟ್ಟೆಗಳ ಆಯ್ಕೆ ಮಾಡಿ. ಹೆಚ್ಚುವರಿಯಾಗಿ, ಹವಾಮಾನಕ್ಕೆ ಅನುಗುಣವಾಗಿ ಅಂತಹ ಬಟ್ಟೆಗಳನ್ನು ಆರಿಸಿ ಇದರಿಂದ ನೀವು ಸುಲಭವಾಗಿ ಯೋಗವನ್ನು ಅಭ್ಯಾಸ ಮಾಡಬಹುದು.
ಇದನ್ನೂ ಓದಿ: ವಾಕಿಂಗ್ ಕೂಡ ಒಂದು ಯೋಗ, ನಡಿಗೆ ಯೋಗದ ಪ್ರಯೋಜನ ಇಲ್ಲಿದೆ
ಯೋಗ ಮ್ಯಾಟ್:
ಯೋಗ ಮಾಡುವುದಕ್ಕೂ ಮೊದಲು ನಿಮ್ಮ ಮ್ಯಾಟ್ ಸರಿಯಾಗಿ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಯೋಗ ಮ್ಯಾಟ್ ಆರಾಮದಾಯಕವಾಗಿಲ್ಲದಿದ್ದರೆ, ನೀವು ಯೋಗ ಮಾಡುವಾಗ ಹಲವಾರು ರೀತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅದರಲ್ಲಿಯೂ ಮ್ಯಾಟ್ ಜಾರುವಂತೆ ಇರಬಾರದು ಏಕೆಂದರೆ ಯೋಗ ಮಾಡುವಾಗ ಜಾರಿದರೆ ಆರೋಗ್ಯ ಚೆನ್ನಾಗಿರುವುದಕ್ಕಿಂತ ಹಾಳಾಗುವ ಸಂಭವವೇ ಹೆಚ್ಚಾಗಿರುತ್ತದೆ. ಹಾಗಾಗಿ ಮ್ಯಾಟ್ ಆಯ್ಕೆ ಬಹಳ ಮುಖ್ಯವಾಗುತ್ತದೆ. ಇನ್ನು ಅದರ ಜೊತೆಗೆ ಮ್ಯಾಟ್‌ನ ಶುಚಿತ್ವದ ಬಗ್ಗೆಯೂ ಗಮನ ಕೊಡುವುದು ಬಹಳ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








