Heart health: ಈ ಆಹಾರ ಹೃದಯಕ್ಕೆ ಬಹಳ ಅಪಾಯಕಾರಿ, ಎಷ್ಟೇ ಇಷ್ಟವಾಗಿದ್ದರೂ ತಿನ್ನಬೇಡಿ!
ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ಕಡಿಮೆ ಮಾಡಲು ನಾವು ಕೆಲವು ಸಲಹೆಗಳನ್ನು ತಪ್ಪದೆ ಅನುಸರಿಸಬೇಕಾಗಿದೆ. ಅದರಲ್ಲಿಯೂ ವಿಶೇಷವಾಗಿ ಯುವಜನರಲ್ಲಿಯೂ ಈ ಕಾಯಿಲೆಗಳ ಪ್ರಭಾವ ಹೆಚ್ಚುತ್ತಿರುವುದರಿಂದ. ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವುದು ಬಹಳ ಅವಶ್ಯಕವಾಗಿದೆ. ಇಲ್ಲವಾದಲ್ಲಿ ಇದು ನಾನಾ ರೀತಿಯ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಆರೋಗ್ಯ ಚೆನ್ನಾಗಿರಬೇಕು ಎಂದರೆ ನಾವು ರೂಢಿಸಿಕೊಂಡಿರುವ ಅಭ್ಯಾಸ, ಆಹಾರಕ್ರಮ ಎಲ್ಲವೂ ಸರಿಯಾಗಿರಬೇಕಾಗುತ್ತದೆ. ಹಾಗಾದರೆ ನಮ್ಮ ಹೃದಯ ಆರೋಗ್ಯವಾಗಿರಲು ಯಾವ ರೀತಿಯ ಆಹಾರಗಳ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ಹೃದಯ (Heart) ಸಂಬಂಧಿ ಕಾಯಿಲೆಗಳು ಹೆಚ್ಚುತ್ತಲೇ ಇದೆ. ಇದಕ್ಕೆ ನಮ್ಮ ಜೀವನಶೈಲಿಯಲ್ಲಿ ಆದಂತಹ ಮಾರ್ಪಾಡುಗಳು, ಒತ್ತಡ, ವ್ಯಾಯಾಮ, ಸಾಕಷ್ಟು ಪ್ರಮಾಣದ ನಿದ್ರೆಯ ಕೊರತೆ, ಕೊಬ್ಬಿನಂಶ ಮತ್ತು ಅತಿಯಾದ ಸಕ್ಕರೆ ಇರುವ ಆಹಾರಗಳ ಸೇವನೆ ಹೀಗೆ, ನಾನಾ ರೀತಿಯ ಅಭ್ಯಾಸಗಳು ಕಾರಣವಾಗಿದೆ. ಹೊಸ ಅಧ್ಯಯನಗಳ ಪ್ರಕಾರ, ಭಾರತದಲ್ಲಿ ಸಾಯುತ್ತಿರುವ ಪ್ರತಿ ನಾಲ್ಕು ಜನರಲ್ಲಿ ಒಬ್ಬರಿಗೆ ಹೃದಯ ಸಂಬಂಧಿ ಸಮಸ್ಯೆಗಳು (Heart Problem) ಇದ್ದೆ ಇರುತ್ತವೆ. ಇದಲ್ಲದೆ, ವಿಶ್ವದಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವವರಲ್ಲಿ ಶೇ. 40 ರಷ್ಟು ಜನರು ಭಾರತೀಯರು ಎಂಬುದು ಕಳವಳಕಾರಿ. ಈ ಪರಿಸ್ಥಿತಿಯಲ್ಲಿ, ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೆಲವು ಆಹಾರ ಪದಾರ್ಥಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಅಥವಾ ಅದರ ಸೇವನೆ ಪ್ರಮಾಣವನ್ನು ಕಡಿಮೆ ಮಾಡುವುದು ಬಹಳ ಅವಶ್ಯಕ. ಹಾಗಾದರೆ ಯಾವ ಆಹಾರಗಳ ಸೇವನೆ ಮಾಡುವುದು ನಮ್ಮ ಹೃದಯದ ಆರೋಗ್ಯಕ್ಕೆ (Heart health) ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳಿ.
ಫ್ರೆಂಚ್ ಫ್ರೈಸ್
ಬಿಸಿ ಎಣ್ಣೆಯಲ್ಲಿ ಕರಿದ ಆಲೂಗಡ್ಡೆ ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಏಕೆಂದರೆ ಈ ತಿಂಡಿಯಲ್ಲಿ ಉಪ್ಪು ಮತ್ತು ಕೊಬ್ಬು ಅಧಿಕವಾಗಿದ್ದು, ಇದು ಹೃದಯದ ಆರೋಗ್ಯವನ್ನು ಹಾಳು ಮಾಡುತ್ತದೆ. ಇದನ್ನು ತಿನ್ನುವುದಕ್ಕೆ ತುಂಬಾ ಇಷ್ಟ ಎಂದು ಆಗಾಗ ಸೇವನೆ ಮಾಡುತ್ತಿದ್ದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಅಪಾಯ ಹೆಚ್ಚಾಗುತ್ತದೆ.
ಐಸ್ ಕ್ರೀಂ
ಸಾಮಾನ್ಯವಾಗಿ ಐಸ್ ಕ್ರೀಂ ಸೇವನೆ ಮಾಡುವುದಕ್ಕೆ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಇದನ್ನು ಅತಿಯಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆ ಇರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಹೆಚ್ಚಾಗುವುದರ ಜೊತೆಗೆ ಹೃದಯಾಘಾತದ ಅಪಾಯ ಕೂಡ ಹೆಚ್ಚಾಗುತ್ತದೆ.
ಪಿಜ್ಜಾ
ವೀಕೆಂಡ್ ಬಂದರೆ ಸಾಕು ಮನೆಯಲ್ಲಿ ಪಿಜ್ಜಾ ಪಾರ್ಟಿ ಮಾಡುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಆದರೆ ಅದರಲ್ಲಿರುವ ಚೀಸ್, ಮಾಂಸ ಮತ್ತು ಸಂಸ್ಕರಿಸಿದ ಆಹಾರಗಳು ಹೆಚ್ಚಿನ ಪ್ರಮಾಣದ ಕೊಬ್ಬನ್ನು ಹೊಂದಿರುತ್ತವೆ. ಹಾಗಾಗಿ ಇವು ತುಂಬಾ ಇಷ್ಟ ಎಂದು ಪದೇ ಪದೇ ಸೇವನೆ ಮಾಡುವುದು ನಮ್ಮ ಆರೋಗ್ಯಕ್ಕೆ ಅದರಲ್ಲಿಯೂ ಹೃದಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಎಲ್ಲಾದರೂ ಅಪರೂಪಕ್ಕೆ ಇದನ್ನು ಸೇವನೆ ಮಾಡುವುದು ಒಳ್ಳೆಯದು.
ತಂಪು ಪಾನೀಯ
ಸಾಮಾನ್ಯವಾಗಿ ಬಿಸಿ ಇರುವ ಆಹಾರಗಳಿಗಿಂತ ತಂಪಾಗಿರುವ ಆಹಾರಗಳನ್ನೇ ನಾವು ಹೆಚ್ಚಾಗಿ ಇಷ್ಟಪಡುತ್ತೇವೆ. ಅದರಲ್ಲಿಯೂ ಪದೇ ಪದೇ ತಂಪು ಪಾನೀಯಗಳ ಸೇವನೆ ಮಾಡುವುದರಿಂದ ಆರೋಗ್ಯ ಹಾಳಾಗುತ್ತದೆ ಎಂಬುದನ್ನು ನಾವು ಮರೆತಿರುತ್ತೇವೆ. ಸಾಮಾನ್ಯವಾಗಿ ನಾವು ಇಷ್ಟ ಪಟ್ಟು ಕುಡಿಯುವ ತಂಪು ಪಾನೀಯಗಳಲ್ಲಿರುವ ಹೆಚ್ಚಿನ ಸಕ್ಕರೆ ಮತ್ತು ಕಾರ್ಬೊನೇಟೆಡ್ ವಸ್ತುಗಳು ದೇಹವನ್ನು ನಿರ್ಜಲೀಕರಣಗೊಳಿಸುವುದಲ್ಲದೆ, ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತವೆ, ಇದು ಚಯಾಪಚಯ ಕ್ರಿಯೆಯನ್ನು ದುರ್ಬಲಗೊಳಿಸುತ್ತದೆ.ಹಾಗಾಗಿ ಇವುಗಳ ಸೇವನೆ ಮಾಡುವುದರ ಬದಲಾಗಿ, ತಾಜಾ ಹಣ್ಣಿನ ರಸಗಳು ಮತ್ತು ನಿಂಬೆ ಹಣ್ಣಿನ ಜ್ಯೂಸ್ ಗಳನ್ನು ಕುಡಿಯುವುದು ಬಹಳ ಉತ್ತಮ.
ಇದನ್ನೂ ಓದಿ: ನಿಮ್ಮ ಹೃದಯ ಆರೋಗ್ಯವಾಗಿರಬೇಕು ಎಂದರೆ ಈ ಸಲಹೆಗಳನ್ನು ಅನುಸರಿಸಿ
ಸಂಸ್ಕರಿಸಿದ ಮಾಂಸಗಳು
ಸಾಮಾನ್ಯವಾಗಿ, ಬೇಕನ್ ಮತ್ತು ಸಾಸೇಜ್‌ಗಳಂತಹ ಸಂಸ್ಕರಿಸಿದ ಮಾಂಸಗಳು ಹೃದಯಕ್ಕೆ ಒಳ್ಳೆಯದಲ್ಲ. ಇವುಗಳ ನಿಯಮಿತ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಈಗಾಗಲೇ ಹೃದಯ ಸಂಬಂಧಿ ಸಮಸ್ಯೆಗಳನ್ನು ಹೊಂದಿರುವವರು ಅವುಗಳನ್ನು ಸಂಪೂರ್ಣವಾಗಿ ತಪ್ಪಿಸುವುದು ಬಹಳ ಒಳ್ಳೆಯದು.
ಕೋಳಿ ಮಾಂಸ
ಆರೋಗ್ಯಕ್ಕೆ ಕೋಳಿ ಮಾಂಸ ಒಳ್ಳೆಯದು ನಿಜ. ಆದರೆ, ಅದನ್ನು ಎಣ್ಣೆಯಲ್ಲಿ ಹುರಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಪರಿಣಾಮವಾಗಿ, ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಹುರಿಯುವ ಬದಲು, ಅದನ್ನು ಗ್ರಿಲ್ ಮಾಡಿ ತಿನ್ನುವುದು ಉತ್ತಮ. ಹೃದಯದ ಆರೋಗ್ಯವು ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಸರಿಯಾದ ಆಹಾರದ ಜೊತೆಗೆ ವ್ಯಾಯಾಮ, ನಿದ್ರೆ ಮತ್ತು ಒತ್ತಡ ನಿರ್ವಹಣೆಯಂತಹ ಅಂಶಗಳಿಗೆ ಗಮನ ಕೊಡುವ ಮೂಲಕ, ನಾವು ನಮ್ಮ ಹೃದಯವನ್ನು ಆರೋಗ್ಯವಾಗಿಡಬಹುದು. ಮೇಲೆ ಹೇಳಿರುವ ಆಹಾರಗಳ ಸೇವನೆ ಮಾಡುವುದನ್ನು ಕಡಿಮೆ ಮಾಡುವುದು ಅಥವಾ ಸಂಪೂರ್ಣವಾಗಿ ತ್ಯಜಿಸುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








