ಈ ಹಣ್ಣಿನ ಸೀಸನ್ ಮುಗಿಯುವ ಮೊದಲು ತಿನ್ನಿ, ಇದ್ರಲ್ಲಿ ಸಿಗುವ ಆರೋಗ್ಯ ಪ್ರಯೋಜನ ಯಾವುದರಲ್ಲೂ ಇಲ್ಲ
ನೇರಳೆ ಹಣ್ಣು ಅಥವಾ ಜಾಮೂನ್ ಬಗ್ಗೆ ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಕೆಲವರು ಅದರ ರುಚಿಯನ್ನು ನೋಡಿರಬಹುದು. ಆದರೆ ಎಂದಾದರೂ ಇದನ್ನು ಸೇವನೆ ಮಾಡಿದರೆ ಯಾವ ರೀತಿ ಪ್ರಯೋಜನ ಸಿಗುತ್ತದೆ ಎಂಬುದನ್ನು ಯೋಚನೆ ಮಾಡಿದ್ದೀರಾ, ನಿಮಗೆ ತಿಳಿದಿರಲಿ, ಇಂದಿನ ಮಕ್ಕಳಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಈ ಹಣ್ಣು ಹೇಗಿರುತ್ತದೆ ಎಂಬುದೇ ತಿಳಿದಿಲ್ಲ ಇದರ ಪರಿಣಾಮ ಮಕ್ಕಳು ಈ ಹಣ್ಣನ್ನು ಸೇವನೆ ಮಾಡುವುದು ದೂರದ ಮಾತು ಅದನ್ನು ನೋಡಿಯೂ ಇರುವುದಿಲ್ಲ. ಆದರೆ ಇಂತಹ ಹಣ್ಣುಗಳಲ್ಲಿಯೇ ಹೇರಳವಾಗಿರುವ ಆರೋಗ್ಯ ಪ್ರಯೋಜನಗಳಿರುತ್ತವೆ ಹಾಗಾಗಿ ಈ ಹಣ್ಣು ಮಾರುಕಟ್ಟೆಗೆ ಬಂದಾಗ ತಪ್ಪದೆ ಸೇವನೆ ಮಾಡಿ.

ಋತುಮಾನಕ್ಕೆ ಅನುಗುಣವಾಗಿ ಮಾರುಕಟ್ಟೆಗಳಿಗೆ ಸೀಸನ್ ಫ್ರೂಟ್ (Seasonal Fruit) ಗಳು ಆಗಮಿಸುತ್ತವೆ. ಬಳಿಕ ಅದು ನಮಗೆ ಬೇಕೆಂದರೂ ಸಿಗುವುದಿಲ್ಲ ಹಾಗಾಗಿ ವರ್ಷ ಪೂರ್ತಿ ಸಿಗುವ ಹಣ್ಣನ್ನು ಪ್ರತಿನಿತ್ಯ ಸೇವನೆ ಮಾಡುವುದಕ್ಕಿಂತ ಕಾಲೋಚಿತವಾಗಿ ಸಿಗುವ ಹಣ್ಣುಗಳನ್ನು ಹೆಚ್ಚೆಚ್ಚು ಸೇವನೆ ಮಾಡಿ. ನಾವು ಸೇಬು, ಕಿತ್ತಳೆ, ಮುಸಂಬಿ ಹಣ್ಣುಗಳ ಹೊರತಾಗಿ ಬೇರೆ ಯಾವ ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡುವುದಿಲ್ಲ. ಆದರೆ ಅದು ತಪ್ಪು. ಎಲ್ಲಾ ರೀತಿಯ ಹಣ್ಣುಗಳನ್ನು ತಿನ್ನಬೇಕು ಅದರಲ್ಲಿಯೂ ನಮ್ಮಲ್ಲಿಯೇ ಬೆಳೆಯುವ ಹಣ್ಣುಗಳು ಮಾರುಕಟ್ಟೆಗೆ ಬಂದಾಗ ಅವುಗಳನ್ನು ಎಂದಿಗೂ ತಿನ್ನದೆ ಇರಬಾರದು. ಇವು ನಮಗೆ ಬೇಕಾದಾಗ ಸಿಗುವುದಿಲ್ಲ ಬದಲಾಗಿ ಅವು ಬಂದಾಗ ನಾವು ಸೇವನೆ ಮಾಡಬೇಕಾಗುತ್ತದೆ. ಅದರಲ್ಲಿಯೂ ಇವುಗಳಲ್ಲಿ ಪೋಷಕಾಂಶಗಳು ಹೇರಳವಾಗಿದ್ದು ನಮ್ಮ ಆರೋಗ್ಯ (Health) ಕಾಪಾಡಲು ಸಹಾಯ ಮಾಡುತ್ತದೆ. ಇಂತಹ ಹಣ್ಣುಗಳಲ್ಲಿ ನೇರಳೆ ಹಣ್ಣು (Jamun Fruit) ಅಥವಾ ಜಾಮೂನ್ ಕೂಡ ಒಂದು. ಇದರಲ್ಲಿ ವಿಟಮಿನ್ ಗಳು ಸಮೃದ್ಧವಾಗಿದ್ದು ನಮ್ಮ ಊಹೆಗೂ ನಿಲುಕದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಾದರೆ ಇದನ್ನು ಸೇವನೆ ಮಾಡಿದರೆ ಯಾವ ರೀತಿ ಲಾಭಗಳಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.
ಆಯುರ್ವೇದ ತಜ್ಞ ಕಿರಣ್ ಗುಪ್ತಾ ಅವರು ತಿಳಿಸಿರುವ ಮಾಹಿತಿ ಪ್ರಕಾರ, ನೇರಳೆ ಹಣ್ಣಿನ ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ ನೇರಳೆ ಹಣ್ಣಿನಲ್ಲಿ ವಿಟಮಿನ್ ಸಿ, ಬಿ12, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಖನಿಜ ಮತ್ತು ನಾರಿನಾಂಶದ ಉತ್ತಮ ಮೂಲವಾಗಿದೆ. ಆದ್ದರಿಂದ, ಇದನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸಿಕೊಳ್ಳುವುದು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳುತ್ತಾರೆ .
ಇದನ್ನೂ ಓದಿ: ನೇರಳೆ ಹಣ್ಣು ತಿಂದು ಅದರ ಬೀಜ ಎಸೆಯುವ ಮೊದಲು ಅದರ ಉಪಯೋಗ ತಿಳಿಯಿರಿ
ನೇರಳೆ ಹಣ್ಣಿನ ಸೇವನೆಯಿಂದ ಸಿಗುವ ಪ್ರಯೋಜನಗಳು:
- ಜಾಮೂನ್ ದೇಹಕ್ಕೆ ತಂಪು ನೀಡುತ್ತದೆ. ಈ ಹಣ್ಣಿನ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜಾಮೂನ್ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.
- ನೇರಳೆ ಅಥವಾ ಜಾಮೂನ್ ಹಣ್ಣು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಈ ಹಣ್ಣುಗಳು ಆಂಥೋಸಯಾನಿನ್‌ಗಳು ಎಂಬ ಅಂಶವನ್ನು ಹೊಂದಿದ್ದು, ಇದನ್ನು ಸೇವನೆ ಮಾಡುವುದು ನಮ್ಮ ಜೀವಕೋಶಗಳಿಗೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
- ಈ ಹಣ್ಣುಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿದ್ದು ಇದು ರಕ್ತದ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಇದು ರಕ್ತಹೀನತೆಯನ್ನು ಕೂಡ ಸರಿದೂಗಿಸುತ್ತದೆ.
- ನೇರಳೆ ಅಥವಾ ಜಾಮೂನ್ ಹಣ್ಣಿನಲ್ಲಿ ಕ್ಯಾಲೋರಿ ತುಂಬಾ ಕಡಿಮೆ ಇರುವುದರಿಂದ, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಸಹ ಇದು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಅಂಶವಿದೆ. ಪರಿಣಾಮವಾಗಿ, ಇದನ್ನು ತಿಂದ ನಂತರ, ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ಅತಿಯಾಗಿ ತಿನ್ನುವ ಅಭ್ಯಾಸ ನಿಯಂತ್ರಣಕ್ಕೆ ಬರುತ್ತದೆ. ಹಾಗಾಗಿ ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಇದರಲ್ಲಿ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಇದ್ದು, ಇದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಒಂದು ದಿನಕ್ಕೆ ಸುಮಾರು 200 ಗ್ರಾಂ ನೇರಳೆ ಹಣ್ಣನು ಆರೋಗ್ಯವಂತ ವ್ಯಕ್ತಿ ಸೇವಿಸಬಹುದು ಎಂದು ತಜ್ಞರು ಹೇಳಿದ್ದಾರೆ. ಆದರೂ ಕೂಡ, ನಿಮ್ಮ ದೇಹದ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಸೀಮಿತ ಪ್ರಮಾಣದಲ್ಲಿ ಸೇವನೆ ಮಾಡುವುದು ಬಹಳ ಒಳ್ಳೆಯದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








