Art and Entertainment : ‘ನಮ್ಮ’ ಭಿತ್ತಿ-ಫಲಕಗಳ ಅಪರಾವತಾರಗಳೇ ದೃಶ್ಯಸಂಸ್ಕೃತಿಯ ಅಂತರಂಗ-ಬಹಿರಂಗದ ಅಶ್ಲೀಲ!

Art and Entertainment : ‘ನಮ್ಮ’ ಭಿತ್ತಿ-ಫಲಕಗಳ ಅಪರಾವತಾರಗಳೇ ದೃಶ್ಯಸಂಸ್ಕೃತಿಯ ಅಂತರಂಗ-ಬಹಿರಂಗದ ಅಶ್ಲೀಲ!
ಕಲೆ : ಎಚ್.ಎ. ಅನಿಲಕುಮಾರ್

Nude : ‘ಇಲ್ಲಿಯವರೆಗೂ ಭಾರತೀಯರ್ಯಾರೂ ನಮ್ಮೊಂದಿಗೆ ಅಥವಾ ಅವರವರಲ್ಲೇ ‘ಸೌನಾ’ ಮಾಡುವ ಧೈರ್ಯ ತೋರಿಲ್ಲ ಎಂಬ ಸವಾಲು ಬೇರೆ ಇತ್ತು ನನಗೆ. ಒಳ ಉಡುಪು ಧರಿಸಿ ಸೌನಾದ ಮನೆಗೆ ಪ್ರವೇಶಿಸಿದರೆ, ಅಲ್ಲಿ ಕಂಡದ್ದು ಪೂರ್ಣ ನಗ್ನರಾಗಿದ್ದ ಬಿಳಿಯ ತೊಗಲಿನ ಹೆಣ್ಣು-ಗಂಡುಗಳು. ಯಾವುದೋ ರೆನಾಯಾಸಾನ್ಸ್ ತೈಲವರ್ಣದ ಚಿತ್ರಗಳಿಂದ ಇಳಿದುಬಂದಂತಿದ್ದರು ಅವರೆಲ್ಲ.’ ಎಚ್. ಎ. ಅನಿಲಕುಮಾರ್

ಶ್ರೀದೇವಿ ಕಳಸದ | Shridevi Kalasad

|

Aug 05, 2021 | 6:43 PM

ಭಾರತೀಯ ಕಲಾಪ್ರಪಂಚವು ಶೃಂಗಾರ, ಕಾಮ ಮತ್ತು ಲೈಂಗಿಕತೆಯಂಥ ಸಹಜ ಅಭಿವ್ಯಕ್ತಿಗೆ ಸಂಬಂಧಿಸಿದಂತೆ ಅಗಾಧ ಅಡಿಪಾಯ ಮತ್ತು ಪರಂಪರೆಯನ್ನು ಹೊಂದಿದೆ. ರಂಗಭೂಮಿ, ಸಿನೆಮಾ, ಸಾಹಿತ್ಯ ಮುಂತಾದ ಲಲಿತ ಕಲೆಗಳ ಮೂಲಕ ಪ್ರಕೃತಿ ಪುರುಷನಲ್ಲಿ ಅಂತರ್ಗತವಾಗಿರುವ ವಿವಿಧ ಮುಖಗಳನ್ನು ಸೃಜನಶೀಲವಾಗಿ ಅನಾವರಣಗೊಳಿಸುವ ನಿರಂತರ ಶೋಧನೆ ಈ ಕ್ಷಣದವರೆಗೂ ನಡೆಯುತ್ತಲೇ ಇದೆ. ತಕ್ಕಂತೆ ವಿವಿಧ ಅಭಿರುಚಿಯ ರಸಿಕಸಮೂಹವೂ ರಸಾಸ್ವಾದಕ್ಕಾಗಿ ಸದಾಸಿದ್ಧವೇ. ಆದರೆ ಈ ಎಲ್ಲ ಪ್ರಕ್ರಿಯೆಗಳ ನಡುವೆಯೇ ಕೆಲವೊಮ್ಮೆ ಅನ್ನದೊಳಗೆ ಕಲ್ಲಿನಹರಳು ಸಿಕ್ಕಂಥ ಪ್ರಸಂಗಗಳು ರಸಾಭಾಸ ಉಂಟುಮಾಡಿಬಿಡುತ್ತವೆ. ಇದಕ್ಕೆ ತಾಜಾ ಉದಾಹರಣೆ ರಾಜ್​ ಕುಂದ್ರಾ ಪ್ರಕರಣ (Raj Kundra and Shilpa Shetty) ಮತ್ತು ನಟಿ ಶಿಲ್ಪಾ ಶೆಟ್ಟಿಯ ಹೇಳಿಕೆ. ‘ನನ್ನ ಗಂಡ ನಿರ್ಮಿಸಿರುವುದು ಕಾಮೋದ್ರೇಕದ ಸಿನೆಮಾಗಳನ್ನೇ ಹೊರತು ಅಶ್ಲೀಲ ಸಿನೆಮಾಗಳನ್ನಲ್ಲ’ ಎಂದಿದ್ದಾರೆ ಶಿಲ್ಪಾ. ಹೀಗಿರುವಾಗ ಶೃಂಗಾರ, ಕಾಮ, ಅಶ್ಲೀಲ ಅಭಿವ್ಯಕ್ತಿಗಳ ಮಧ್ಯೆ ಇರುವ ತೆಳುಗೆರೆಗಳ ಸುತ್ತ ಪ್ರಶ್ನೆಗಳೇಳುವುದು ಸಹಜ. ಈ ವಿಚಾರವಾಗಿ ಇಂದಿನಿಂದ ಶುರುವಾಗಲಿದೆ ‘ಟಿವಿ 9 ಕನ್ನಡ ಡಿಜಿಟಲ್ – ಮನೋರಂಜನ ವೃತ್ತಾಂತ’ ಹೊಸ ಸರಣಿ. ಇದರಲ್ಲಿ ಹಿರಿಯ ಪತ್ರಕರ್ತರು, ಬರಹಗಾರರು, ಕಲಾವಿಮರ್ಶಕರು ಕಲೆಯ ಸಾಧ್ಯತೆ, ಪ್ರಯೋಗ ಸೂಕ್ಷ್ಮತೆ ಮತ್ತು ಪರಿಣಾಮಗಳ ಕುರಿತು ಚರ್ಚಿಸುತ್ತಾರೆ.

ಪ್ರೊ. ಎಚ್.ಎ. ಅನಿಲ್ ಕುಮಾರ್ ಅವರು ಸೃಷ್ಟಿ ಮಣಿಪಾಲ್ ಕಲಾ, ವಿನ್ಯಾಸ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ವರ್ತಮಾನದ ಕ್ಯಾನ್ವಾಸಿನಲ್ಲಿ ಶೀಲ-ಅಶ್ಲೀಲದ ಸೂಕ್ಷ್ಮತೆಯನ್ನು ಬಹಳ ಮಾರ್ಮಿಕವಾಗಿ, ವಸ್ತುನಿಷ್ಠವಾಗಿ ಹರವಿಟ್ಟಿದ್ದಾರೆ.

ದಶಕವೊಂದರ ಹಿಂದೆ ಫಿನ್​ಲ್ಯಾಂಡಿನಲ್ಲಿ ಕಲಾ ರೆಸಿಡೆನ್ಸಿಯಲ್ಲಿ ಇದ್ದಾಗ ಒಂದು ನಾಟಕ ಪ್ರಯೋಗ ನೋಡಿದ್ದೆ. ಪುಟ್ಟ ಪ್ರಾಯೋಗಿಕ ರಂಗಮಂದಿರವದು. ಮುಂದಿನ ಸಾಲಿನಲ್ಲಿ ಅಂದರೆ ನೆಲದ ಮೇಲೆ ಸಮಾನ ಮನಸ್ಕರೊಂದಿಗೆ ಕುಳಿತಿದ್ದೆ. ನಾಟಕ ಪ್ರದರ್ಶನ ಆರಂಭವಾಗಿ ಬೆಳಕು ಹರಡಿತು. ಎರಡಡಿ ದೂರದಲ್ಲೇ ಪೂರ್ಣನಗ್ನ ಪಾತ್ರಧಾರಿ ಯುವತಿಯೊಬ್ಬಳು ನಿಂತುಬಿಟ್ಟಿದ್ದಳು. ಮತ್ತೊಮೆ, ಅದೇ ಹೆಲ್ಸಿಂಕಿ ನಗರದಲ್ಲಿ ಅಲ್ಲಿನ ಫಿನ್ನಿಷ್ ಗೆಳೆಯನೊಬ್ಬ ಇತರೆ ಗೆಳೆಯ ಗೆಳತಿಯರೊಂದಿಗೆ ‘ಸೌನಾ- Sauna’ಕ್ಕೆಂದು (ಫಿನ್ನಿಷ್ ಜನರ ಸಾಂಪ್ರದಾಯಿಕ ಹಬೆಯ ‘ಸ್ನಾನ’ವದು) ಅವರ ತೋಟದಮನೆಗೆ ಕರೆದೊಯ್ದ. ‘ಇಲ್ಲಿಯವರೆಗೂ ಭಾರತೀಯರ್ಯಾರೂ ನಮ್ಮೊಂದಿಗೆ ಅಥವಾ ಅವರವರಲ್ಲೇ ‘ಸೌನಾ’ ಮಾಡುವ ಧಮ್ ತೋರಿಲ್ಲ’ ಎಂಬ ಸವಾಲು ಬೇರೆ ಇತ್ತು ನನಗೆ. ಒಳ ಉಡುಪು ಧರಿಸಿ ಸೌನಾದ ಮನೆಗೆ ಪ್ರವೇಶಿಸಿದರೆ, ಅಲ್ಲಿ ಕಂಡದ್ದು ಪೂರ್ಣ ನಗ್ನರಾಗಿದ್ದ ಬಿಳಿಯ ತೊಗಲಿನ ಹೆಣ್ಣು-ಗಂಡುಗಳು. ಯಾವುದೋ ರೆನಾಯಾಸಾನ್ಸ್ ತೈಲವರ್ಣದ ಚಿತ್ರಗಳಿಂದ ಇಳಿದುಬಂದಂತಿದ್ದರು ಅವರೆಲ್ಲ. ನೂರು ಡಿಗ್ರಿ ಹಬೆ ತುಂಬಿದ್ದ ಇಡಿಯ ಸೌನಾದ ಕೋಣೆಯ ಹತ್ತು ಹಲವು ನಗ್ನ ದೇಹಗಳಲ್ಲಿ ಒಂದು ಸಣ್ಣ ತುಂಡು ವಸ್ತ್ರ ಧರಿಸಿದ್ದವನು ನಾನೊಬ್ಬನೇ ಆಗಿದ್ದರಿಂದ, ಪೂರ್ಣ ನಗ್ನನಾದಂತೆನಿಸಿ ದಢಕ್ಕನೆ ಅಲ್ಲಿಂದ ಹೊರಕ್ಕೆ ಓಟಕಿತ್ತಿದ್ದೆ. ಮತ್ತೆ ಸುಧಾರಿಸಿಕೊಂಡು ಒಳಕ್ಕೆ ಹೋಗಿ ಸೌನಾ ಮಾಡಿದೆನೋ ಇಲ್ಲವೋ ಎಂಬುದು ವೈಯಕ್ತಿಕ ವಿಷಯ.

‘ಆ ಸೌನಾದ ಮನೆಯಲ್ಲಿ ಮೊದಲು ಗಂಡಸರು, ನಂತರ ಹೆಂಗಸರು ಸೌನಾ ಮಾಡುತ್ತಾ ಬಿಯರ್ ಕುಡಿಯುತ್ತಾರೆ. ಬಿಯರ್ ಹೆಚ್ಚಾದಾಗ ಎಲ್ಲರೂ ಒಟ್ಟಿಗೆ ಸೌನಾ ಮಾಡಿಬಿಡುತ್ತಾರೆ’ ಎಂದು ಟಿಪಿಕಲ್ ಫಿನ್ನಿಷ್ ಜೋಕ್ ಹೇಳುವಂತೆ ಗಂಭೀರವಾಗಿ ತಿಳಿಸಿದ್ದ ಆ ಗೆಳೆಯ. ಅವರ ಪ್ರವಾಸ ಭಿತ್ತಿಪತ್ರಗಳಲ್ಲಿ ಸೌನಾ ಮಾಡುವುದು ಒಂದು ಮುಖ್ಯ ರಾಷ್ಟ್ರೀಯ ಆಕರ್ಷಣೆ. ಭಾರತೀಯ ಪ್ರವಾಸೋದ್ಯಮವು ಜನಾಕರ್ಷಣೆಗಾಗಿ ತನ್ನ ಭಿತ್ತಿಪತ್ರಗಳಲ್ಲಿ ಖಜುರಾಹೋದ ನಗ್ನ ಶಿಲ್ಪಗಳನ್ನು ಪ್ರಕಟಿಸಿದಷ್ಟು, ಇತರೇ ಶಿಲ್ಪಗಳು ಕಲಾತ್ಮಕವೂ, ಉತ್ತಮ ಗುಣಮಟ್ಟದವಾಗಿದ್ದರೂ ಯಾಕೆ ಪ್ರಕಟಿಸಿಲ್ಲ ಎಂದು ಭಾರತೀಯ ಇತಿಹಾಸಜ್ಞೆ ತಪತಿ ಗುಹಾ ಥಾಕುರ್ತ ತನ್ನ ಪುಸ್ತಕದಲ್ಲಿ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ರಾಷ್ಟ್ರವೆಂಬ ಅಮೂರ್ತದ ‘ಗೋಚರ’ವನ್ನೇ (ಇಮೇಜ್) ಬಂಡವಾಳವನ್ನಾಗಿ ಮಾಡಿಕೊಳ್ಳುವ ಸಲುವಾಗಿ ಖಜುರಾಹೋ ಕೆತ್ತನೆಗಳ ಸೇಂದ್ರಿಯತೆ/ಸೆನ್ಸುಯಾಲಿಟಿ ಬಳಕೆಗೆ ಬಂದಿತಷ್ಟೇ. ಹಾಗೆ ನೋಡಿದರೆ ಅದಕ್ಕಿಂತಲೂ ನಗ್ನ, ಉದ್ದೀಪನ ಚಿತ್ರಗಳನ್ನು ದಿನನಿತ್ಯ ಮಕ್ಕಳು ಮುದುಕರಾದಿಯಾಗಿ ಸುಲಭವಾಗಿ ಮೊಬೈಲಿನಲ್ಲಿ ಲಭ್ಯವಿವೆ. ಸುಲಭವಾಗಿ ಕೈಗೆಟುಕುವ ವಸ್ತು-ಅಂಶಗಳಲ್ಲಿ ಅಶ್ಲೀಲತೆ ಕಂಡುಬರದು.

manoranjana vruttanta

ಖಜರಾಹೋದ ಶಿಲ್ಪಗಳು ಯಾರಿಗೆ ಉದ್ದೀಪನ ಎಂಬುದು ಮುಖ್ಯ. ಇಂದಿನ ಸಾಮಾಜಿಕ ಜಾಲತಾಣಗಳ ಮೈಮನಗಳನ್ನು ಆಕ್ರಮಿಸಿಕೊಂಡಿರುವ ವಿಕಾರದ ಸೇಂದ್ರೀಯ ತೀವ್ರತೆಯ ಮುಂದೆ ಈ ಶಿಲ್ಪಗಳು ಪ್ಲಾಸ್ಟಿಕ್ ಬೊಂಬೆಗಳಷ್ಟು ಮಾತ್ರ ಮುದ ನೀಡಬಲ್ಲವು ಇಂದು.

1970ರ ದಶಕದಲ್ಲಿ ಡೆಸ್ಮನ್ಡ್ ಮೋರಿಸ್ ಎಂಬ ಮಾನವಶಾಸ್ತ್ರಜ್ಞ ಒಂದು ಟೆಲಿವಿಷನ್ ಕಾರ್ಯಕ್ರಮವೊಂದನ್ನು ರೂಪಿಸಿ, ವಾದವಿವಾದದ ಬಿರುಗಾಳಿ ಎಬ್ಬಿಸಿದ್ದ. ಹೆಣ್ಣಿನ ಲೈಂಗಿಕ ಅಂಗದೊಳಕ್ಕೆ ಅತಿಸಣ್ಣ ಕ್ಯಾಮರಾ ಇರಿಸಿ, ದೇಹದ ಆಗುಹೋಗುಗಳ ನೈಜ ಚಲನ-ಚಿತ್ರಣವನ್ನು ಪ್ರಸಾರ ಮಾಡಿದ್ದ. ರೋಗದ ಅನುಮಾನದಿಂದ ಸಮಕಾಲೀನ ‘ವೈದ್ಯಕೀಯ ಪರೀಕ್ಷೆ’ಯ ಒಂದು ಸಹಜ ಪ್ರಯೋಗವಾಗಬಹುದಾಗಿದ್ದ ಈ ಕ್ರಿಯೆ, ಮಾನವಿಕಶಾಸ್ತ್ರದ ದೃಷ್ಟಿಕೋನದಿಂದ ನೋಡಿದ್ದರಿಂದ ವಿವಾದ ಎದ್ದಿತು. ಇತರೆ ಪ್ರಾಣಿಗಳಿಗೆ ಹೋಲಿಸಿದರೆ, ಮನುಷ್ಯ ಅನೇಕ ಸಾಮರ್ಥ್ಯಗಳನ್ನು ಕಳೆದುಕೊಂಡು ಅಥವಾ ವಿಕಾಸದಲ್ಲಿ ಪಡೆದುಕೊಳ್ಳದೆ, ತನ್ನದೇ ಅನನ್ಯ ಸಾಮರ್ಥ್ಯ ಹೊಂದಿರುವ (ಉದಾಹರಣೆಗೆ: ಮಾತಿನ ಸಾಮರ್ಥ್ಯ) ‘ಪ್ರಾಣಿ’ಯಷ್ಟೇ ಎನ್ನುತ್ತಾನೆ ಮೋರಿಸ್. ಮಿಥ್ಯೆ ಹಾಗೂ ಮಾನವಿಕ ಶಾಸ್ತ್ರದ ಬಟಾಬಯಲುತನಕ್ಕೆ ಇತಿಹಾಸವೆಂಬ ಪ್ರಕಾರದ ವಸ್ತ್ರ ತೊಡಿಸಿಬಿಡುವುದು ‘ದೇಶ’ನಿರ್ಮಿತ ಪೊಲೀಸಪ್ಪಗಳ ಕರ್ತವ್ಯ ಆದಂತೆ ಕಾಣುತ್ತದೆ. ಇಂತಲ್ಲೇ ಅಶ್ಲೀಲದ ಮಾತು ಹುಟ್ಟುವುದು. ದೇಶಕಾಲಗಳ (ಸ್ಪೇಸ್ ಅಂಡ್ ಟೈಮ್) ಇತಿಮಿತಿ-ಸಾಧ್ಯತೆಯನ್ನು ಇತಿಹಾಸ ಎಂಬ ಪ್ರಕಾರವು ಕಿಂಚಿತ್ ಪ್ರಯತ್ನ ಮಾಡಿದರೂ ಸಹ ಅದು ಮಾನವಿಕಶಾಸ್ತ್ರದ ಪರಿಧಿಯೊಳಕ್ಕೆ ಬಂದುಬಿಡುತ್ತದೆ. ಯಾರೇ ಇಬ್ಬರು ಒಟ್ಟಿಗೆ ‘ಅಶ್ಲೀಲ’ ಎಂಬುದರ ಕುರಿತು ಒಂದು ನಿರ್ದಿಷ್ಟ ವ್ಯಾಖ್ಯೆಗೆ, ಒಪ್ಪಂದಕ್ಕೆ ಬಂದರೆಂದರೆ, ಅವರಿಬ್ಬರೂ ತಮ್ಮಗಳ ನಡುವಣ ವ್ಯಕ್ತಿ-ವಿಶಿಷ್ಟತೆಯ ವ್ಯತ್ಯಾಸಗಳನ್ನೇ ನಿರಾಕರಿಸುವ ಮಟ್ಟಕ್ಕೆ ಇಳಿದುಬಿಟ್ಟರು ಎಂದರ್ಥ.

ಹೆಲ್ಸಿಂಕಿಯ ನಾಟಕದ ನಂತರದ ಪಾರ್ಟಿಯಲ್ಲಿ ಆ ನಗ್ನ ಪಾತ್ರಧಾರಿಯನ್ನು ಮಾತನಾಡಿಸಲು ಯತ್ನಿಸಿದ ನಾನು, ಆಕೆಗೆ ಕೇಳಬಹುದಾಗಿದ್ದ ಪ್ರಶ್ನೆಗಳನ್ನೆಲ್ಲ ಆಕೆ ನನಗೇ ಹಿಂದಿರುಗಿ ಕೇಳಿಬಿಟ್ಟರೆ ಹೇಗಿರುತ್ತದೆ ಎಂದು ಸುಮಾರು ಹೊತ್ತು ಯೋಚನೆ ಮಾಡಿದ್ದಂತೂ ನಿಜ ;

“ಹೇಗನ್ನಿಸುತ್ತೆ ನಗ್ನವಾಗಿ ನಿಲ್ಲುವುದು?”

“ನಿಮಗೆ ಹೇಗನ್ನಿಸುತ್ತೆ ನನ್ನ ನಗ್ನತೆ? ಅದನ್ನು ನಾಟಕದ ಪಾತ್ರ ಎಂದು ಮಾತ್ರ ಸ್ವೀಕರಿಸಲು ಸಾಧ್ಯವಾಯಿತೇ?”

“ಏನು ಇದರ ಹಿಂದಿನ ಉದ್ದೇಶ?”

“ಏನಿರಬಹುದು ನೀವೇ ಹೇಳಿ?”

“ನಾಟಕದ ಇಡೀ ವೈಶಿಷ್ಟ್ಯವನ್ನೆಲ್ಲ ನಿಮ್ಮ ನಗ್ನತೆ ನುಂಗಿಬಿಡಲಿಲ್ಲವೇ?”

“ಉಳಿದವರಿಗೆ ಹಾಗೆ ಅನ್ನಿಸದಿರಬಹುದು ಅಲ್ಲವೇ? ಅದು ನಿಮ್ಮ ಪೂರ್ವಗ್ರಹ ಎಂದೇಕೆ ಭಾವಿಸಬಾರದು?”

ಇತ್ಯಾದಿ ಇತ್ಯಾದಿ.

ಅಶ್ಲೀಲತೆಯು ಸಂಸ್ಕೃತಿ-ಕಲೆಯ ಮೂಲಕ ಪ್ರಕಟವಾದ (ಚಿತ್ರ, ಶಿಲ್ಪಿ, ಬರವಣಿಗೆ, ಸಿನೆಮಾಗಳ) ಕೃತಿಗಳೊಳಗಿನ ಆಯ್ದ ಅಂಶಗಳನ್ನು, ಅದರಾಚೆಯೇ ಉಳಿದುಕೊಂಡು, ಅದನ್ನು ನಿಯಂತ್ರಿಸಬಲ್ಲ ಉಪಾಯಕ್ಕೆ ಅನುವು ಮಾಡಿಕೊಟ್ಟಾಗ, ಉಂಟಾಗುತ್ತದೆ. ರಾಜಕಾರಣ ಮತ್ತು ಅಧಿಕಾರಶಾಹಿತ್ವವು, ತನ್ನ ಮಾನದಂಡದ ಪ್ರಕಾರ (ಮಾತ್ರ) ಹುಡುಕುವ, ಅವರ ‘ಸಾಮಾಜಿಕವಾಗಿ ಅಸ್ವೀಕೃತ’ ಎಂಬ ಉಪಾಯದ ಪಟ್ಟಿಯೊಳಕ್ಕೆ ಸೂಕ್ತವಾಗಿ ಸೇರಿಬಿಡುವ ಅಂಶ ಅಶ್ಲೀಲ. ಇಲ್ಲದಿದ್ದಲ್ಲಿ ಕಲಾರಂಗದಲ್ಲಿ ನಾವೆಲ್ಲ ಬಹಳ ಅಭಿಮಾನದಿಂದ ಮೆಚ್ಚಿದ್ದ ಹರಪ್ಪ-ಮೊಹೆಂಜೋದಾರೋ ಸಂಸ್ಕೃತಿಯ ಮುದ್ದುಮುದ್ದಾದ ಪುಟಾಣಿ ‘ನೃತ್ಯಗಾರ್ತಿ’ (ಡಾನ್ಸಿಂಗ್ ಗರ್ಲ್) ಶಿಲ್ಪವನ್ನು ಅಶ್ಲೀಲ ಎಂಬ ಹಣೆಪಟ್ಟಿ ಕಟ್ಟಿ ಕ್ಯಾಲೆಂಡರಿನ ಚಿತ್ರವಾಗುವುದನ್ನು ತಡೆಹಿಡಿದ ದೆಹಲಿಯ ರಾಜಕಾರಣಿಯೊಬ್ಬರಿಗೆ ಅಂತಹ ಅಸಂಗತ ಅನುಭವ ಉಂಟಾದದ್ದು ಹೇಗೆ?

ಯಾವುದಾದರೂ ರಾಜಕೀಯ ಸೃಷ್ಟಿಯನ್ನು ಕಲಾವಲಯ ಎಂದಾದರೂ ಇಲ್ಲಿಯವರೆಗೂ ಅಶ್ಲೀಲ ಎಂದದ್ದುಂಟೇ? ವಿಶ್ಲೇಷಣೆಗೆ ಎಟುಕುವದು ಅಶ್ಲೀಲವಾಗುವುದಿಲ್ಲ, ತರ್ಕಾತೀತವಾಗಿ ಅರಗಿಸಿಕೊಳ್ಳಲಾರದ ಸೃಷ್ಟಿ ಅಶ್ಲೀಲವಾಗದೆ ಬಚಾವಾಗಲು ಸಾಧ್ಯವಿಲ್ಲ.

manoranjana vruttanta

ಅಮೆರಿಕದ ಛಾಯಾಗ್ರಾಹಕ ಸ್ಪೆನ್ಸರ್ ಟ್ಯುನಿಕ್ ವಿವಿಧ ನಗರಗಳಲ್ಲಿ ಜನರನ್ನು ಬಹಿರಂಗವಾಗಿ ಬೆತ್ತಲೆಗೊಳಿಸಲು ಆಹ್ವಾನಿಸಿ, ಛಾಯಾಚಿತ್ರ ಸರಣಿಗಳನ್ನು ರೂಪಿಸುತ್ತಾನೆ. ಬೆತ್ತಲೆ ಜನರು ನಗರವನ್ನು ಹೊಸತೆರನಾದ ಬೃಹತ್ ಇಟ್ಟಿಗೆಗಳಂಎ ಉಪನರ್ ರೂಪಿಸುವುದು ವಿಶೇಷ.

ನಗ್ನ ಮತ್ತು ಬೆತ್ತಲೆ ಎಂಬೆರೆಡು ಅವತಾರಗಳ ಸೃಷ್ಟಿ ಇಲ್ಲವೇ ದೇಹದ ಸಹಜ ಮೂಲಭೂತ ವಾಂಛೆಗೆ ಸಂಬಂಧಿಸಿದ್ದು (ಬ್ಲೂ ಫಿಲಂ), ಅಥವಾ ಅಸ್ತಿತ್ವದ ನಿಗೂಢತೆಯ ಬೃಹತ್ ಹುಡುಕಾಟದ ಆಧ್ಯಾತ್ಮಕ್ಕೂ ರೂಪಕವಾಗಿಬಿಡಬಹುದು ಅಕ್ಕಮಹಾದೇವಿಯಂತೆ, ಬಾಹುಬಲಿಯ ಶಿಲ್ಪಗಳಂತೆ. ನಗ್ನತೆಯ ವಿರಾಟ್ ರೂಪಕ್ಕೆ ಒದಗಿಬಂದಿರುವ ಇಂತಹ ದಿವ್ಯಾರ್ಥಗಳೂ ಸಹ ನಡುವೆ ಸುಳಿವ ರಾಜಕಾರಣಾತ್ಮದ ಇಕ್ಕಳಕ್ಕೆ ಸಿಲುಕಿ ವಿಲವಿಲನೆ ಒದ್ದಾಡುವ ಅಪಾಯದ ಸಾಧ್ಯತೆಯಂತೂ ಅನಂತಾನಂತ. ಕುಂಬಾರನಿಗೊಂದು ವರುಷ, ದೊಣ್ಣೆಗೊಂಡು ನಿಮಿಷವೆಂಬಂತೆ ಇದು. ನಗ್ನಕ್ಕೂ ಬೆತ್ತಲೆಗೂ ಪ್ರಾಯಶಃ ಇಂಗ್ಲಿಷಿನಲ್ಲಿರುವ ‘ನೇಕೆಡ್’ ಮತ್ತು ‘ನ್ಯೂಡ್’ ನಡುವಿನ ಸ್ಪಷ್ಟ ಗೆರೆಯಂತ ಅರ್ಥವಿಂಗಡಣೆ ಇರಲಾರದೇನೋ. ಸಂಸ್ಕೃತ ಪಂಡಿತರೂ, ಕನ್ನಡ ಅರ್ಥಕೋಶ ತಜ್ಞರೂ ತಿಳಿಯಪಡಿಸಬೇಕಾದ ವಿಷಯವಿದು.

ಒಂದೊಮ್ಮೆ ಭಾರತದ ಕಲಾಶಾಲೆಗಳಲ್ಲಿ ವಿದ್ಯಾರ್ಥಿಗಳು ಮೊದಲು ಕಲಿಯಬೇಕಾಗಿದ್ದದ್ದು ‘ನಗ್ನ-ಅಧ್ಯಯನ’ (ನ್ಯೂಡ್ ಸ್ಟಡಿ). ಮದ್ರಾಸು, ಕೊಲ್ಕೊತ್ತಾ ಹಾಗೂ ಮುಂಬೈ ನಗರಗಳಲ್ಲಿ 1950ರಲ್ಲೇ ಆರಂಭಗೊಂಡ ಬ್ರಿಟಿಷ್ ವಸಾಹತು ಕಲಾಶಾಲೆಗಳಲ್ಲಿ ನಗ್ನಾಧ್ಯಯನದಲ್ಲಿ ಬೆತ್ತಲೆಯಾಗಿದ್ದ ಗಂಡುಹೆಣ್ಣುಗಳು ನಿಶ್ಚಿತವಾಗಿ, ನಿಶ್ಚಲವಾಗಿ ಈಗಲೂ ನಿಂತೇ ಇದ್ದಾರೆ ಸಿಪಾಯಿ ಮ್ಯೂಟಿನಿಯ ಕಾಲದಿಂದಲೂ ಸಹ. ಯುವ ಅಧ್ಯಯನಾರ್ಥಿಗಳು ತಾವು ಕಲಿಯುವ ಮನಸ್ಸಿನ ವಿದ್ಯಾರ್ಥಿಗಳೋ ಅಥವಾ ಸೇಂದ್ರಿಯ ತೀವ್ರತೆಯ (ಇಂದ್ರಿಯ ಸೆಳೆತಕ್ಕಷ್ಟೇ ಸೀಮಿತವಾದ) ಎಳೆಯ ಪ್ರಾಯದ ಹುಡುಗ-ಹುಡುಗಿಯರೋ ಎಂಬ ‘ಆಸಿಡ್-ಟೆಸ್ಟ್’ ಅನ್ನು ಪರೋಕ್ಷವಾಗಿ ಪರೀಕ್ಷೆಗೊಡ್ಡುವ ವಿಶೇಷ ಸಂದರ್ಭವಿರುತ್ತದೆ. ಇಂತಹ ಮೂಲಭೂತ ಆರಂಭಿಕ ತರಗತಿಗಳಲ್ಲಿ ನಗ್ನಗೊಂಡಿರುವ ವ್ಯಕ್ತಿ-ಮಾಡೆಲ್ ಯಾವಾಗಲೂ ಸಾಮಾಜಿಕ ಕೆಳಸ್ಥರದವರಾಗಿದ್ದು, ದೈನಂದಿನ ಬದುಕಿನ ದುಡಿಮೆಗಾಗಿ ಮಾತ್ರ ಈ ಅನಿವಾರ್ಯ ವೃತ್ತಿಯನ್ನು ಅನಿಶ್ಚಿತವಾದ, ಆರ್ಥಿಕ ಸ್ಥಿತಿಯ ಅಯೋಮಯತೆಯ ದೆಸೆಯಿಂದಾಗಿ ಕೈಗೊಂಡಿರುತ್ತಾರೆ. ಬಹುವಾಗಿ ಎಲ್ಲರಲ್ಲೂ ಕಾಡುವ ಆದರೆ ಎಂದೂ ಸುಲಭಕ್ಕೆ ಚರ್ಚೆಯ ‘ಅನಾವರಣಕ್ಕೆ’ ತೆರೆದುಕೊಳ್ಳದ ಪ್ರಶ್ನೆಗಳ ಮೊತ್ತವೇ ಈ ನ್ಯೂಡ್ ಸ್ಟಡಿ ತರಗತಿಗಳು. ನಗ್ನ-ಮಾಡೆಲ್ ಯಾವಾಗಲೂ ಹೆಣ್ಣು, ಚಿತ್ರಿಸುವ ಕಲಾವಿದ ಇಂದಿಗೂ ಗಂಡು ಎಂಬ ಆಧುನಿಕ ಕಲೆಯವರೆಗಿನ ನಂಬಿಕೆ ಸಮಕಾಲೀನ ಕಲೆಯಲ್ಲಿ ಕ್ರಮೇಣ ಕರಗುತ್ತಿದೆ.

ಸ್ವತಂತ್ರ ಭಾರತದ ನಂತರ ಹುಟ್ಟಿಕೊಂಡ ಕಲಾಶಾಲೆಗಳಲ್ಲಿ, ಕರ್ನಾಟಕವನ್ನೂ ಹೊರತುಪಡಿಸದಂತೆ, ನಗ್ನಅಧ್ಯಯನವನು ಕಲಾಶಾಲೆಗಳಲ್ಲಿ ಸಾಂಘಿಕವಾಗಿ ನಿಲ್ಲಿಸಲಾಗಿದೆ. ಆದರೆ ವೈದ್ಯಕೀಯ ಅಧ್ಯಯನದಲ್ಲಿ ಇಂತಹ ನಿರ್ಬಂಧಗಳಿಲ್ಲ. ಬಟ್ಟೆ ಹಾಕಿಕೊಂಡಿರುವ ದೇಹಗಳನ್ನೇ ವೈದ್ಯಕೀಯ ಪರೀಕ್ಷೆಗೆ ಒಡ್ಡಬೇಕಾದ ದೈನಂದಿನ ಆಚರಣೆಯ ಇರುವ ಹಲವು ಕಾಲಘಟ್ಟಗಳ, ಹಲವರ ಸಂಸ್ಕೃತಿಗಳನ್ನು ನೆನೆಸಿಕೊಂಡರೆ ಒಂದು ವಿಶೇಷ ಅಂಶ ಗಮನ ಸೆಳೆಯುತ್ತದೆ. ಅದೇನೆಂದರೆ ನಾವು ಧರಿಸುವ ವಸ್ತ್ರ ಇತರರಿಗೆ ನಮ್ಮ ಗೋಚರಿಕೆಯ ಅನಿವಾರ್ಯ ಚರ್ಮ ಆಗಿಬಿಡುವ ಪ್ರಕ್ರಿಯೆ. ಪ್ರಾಯಶಃ ಅಶ್ಲೀಲತೆಯ ಆರಂಭಿಕ ಘಟ್ಟವೊಂದಿದೆ: ಬಟ್ಟೆಯಿಲ್ಲದ ಸಹಜ ಸ್ಥಿತಿಯನ್ನು (ಮನುಷ್ಯನನ್ನು ಹೊರತುಪಡಿಸಿ ಸಕಲ ಜೀವ ಚರಾಚಾರಗಳ ಸಹಜಾವಸ್ಥೆಯಂತೆ) ನಗ್ನತೆ ಎಂಬ ಸಂಕೋಚದ ಆತಂಕಕ್ಕೆ ಒಡ್ಡಿ, ಅಶ್ಲೀಲದ ಬೆದರಿಕೆಗೆ ಒಡ್ಡಿ, ಅದನ್ನು ಒಂದು ವ್ಯಾಪಾರಿ ಸರಕನ್ನಾಗಿಸಿದ ಬಂಡವಾಳ ಮನೋಭಾವ ಹುಟ್ಟುಹಾಕಿದ್ದೇ ವಸ್ತ್ರ ಎಂಬ ಅಸ್ತ್ರ.

ಶೀಲ, ಅಸಹ್ಯ, ಅಪದ್ಧ ಎಂಬ ಆಚರಣೆ ಸಾಧ್ಯವೇ ಹೊರತು ಅಶ್ಲೀಲ ಎಂಬುದು ಒಂದು ಅಯೋಮಯ, ಅನುಮಾನಾಸ್ಪದ ಪ್ರಸ್ತುತಿ. ಶೀಲ ಎಂದರೆ ಒಂದು ನಿಯಮಕ್ಕೆ ಮೈಮನಗಳನ್ನು ಬದ್ಧವಾಗಿಸಿಕೊಳ್ಳುವುದು (ಧಾರ್ಮಿಕ ಆಚರಣೆ, ಪಾವಿತ್ರ್ಯದ ಕಲ್ಪನೆ ಇತ್ಯಾದಿ), ಅಸಹ್ಯ ಎಂದರೆ ವ್ಯಕ್ತಿಗತವಾದ ನಂಬಿಕೆಯಿಂದ ಸಾರ್ವತ್ರಿಕವಾಗಿ ಅದನ್ನು ಮುರಿವುದು (ಹಿಪ್ಪಿ ಸಂಸ್ಕೃತಿ), ಅಪದ್ಧ ಎಂದರೆ ಶೀಲ-ಅಸಹ್ಯಗಳಂತಹ ಬಂಧನಗಳ ಕೊಳ ತೊಡಿಸುವ ಸಂಸ್ಕಾರದ ತಾತ್ವಿಕತೆಯನ್ನು ಒಪ್ಪದೆ, ಅದರ ತಂಟೆಗೂ ಹೋಗದೆ ಸುಮ್ಮನಿದ್ದುಬಿಡುವುದು (ಝೆನ್, ಬುದ್ಧಿಸಂ ಅನ್ನು ಹೋಲುವಂತಹ ಜೀವನಕ್ರಮ). ಇಂತಲ್ಲಿ ಅಶ್ಲೀಲ ಎಂಬುದು ನಡುವೆ ಸುಳಿವ ಆತ್ಮದಂತೆ ಕಾಣದು, ಕೆಳದು, ಸಾಕ್ಷಿ ಒದಗಿಸದು, ಇಲ್ಲದಿದ್ದರೂ ಇದ್ದಂತೆ ನಟಿಸಿಬಿಡುವುದು!

ನಗ್ನರಾಗಿ, ಅಪರಿಚಿತರ ಎದುರಿಗೆ ದಿನವಿಡೀ ನಿಲ್ಲುವ (ಕಲೆ), ಕೂಡುವ (ವೃತ್ತಿ), ಮಲಗುವ (ವೈದ್ಯಕೀಯ) ಕ್ರಮದ ಆಚರಣೆಯ ಹಿಂದೆ ಅದನ್ನು ಅನುವು ಮಾಡಿಕೊಡುವ ‘ಸಾಂಸ್ಥೀಕರಣ’ದ ಉದ್ದೇಶವೇ ಶ್ಲೀಲ-ಅಶ್ಲೀಲದ ವ್ಯಾಖ್ಯಾನ ಮಾಡುವುದಾಗಿರುತ್ತದೆ. ಶಾಂತಿನಿಕೇತನದ ಕಲಾಭವನದಲ್ಲಿ ಹಲವು ದಶಕಗಳಿಂದ ನಗ್ನ ಮಾಡೆಲ್ ಆಗಿ ಕೂರುತ್ತಿದ್ದವರ ಬದಲಿಗೆ ಮತ್ತೊಬ್ಬರು ಬಂದಾಗ, ಮೊದಲನೆಯವರು ಅವರೊಂದಿಗೆ ಜಗಳವಾಡಿ, ‘ಕಳಚಿದ್ದ ಬಟ್ಟೆ ಉಡಿಸಿ’ ಓಡಿಸಿಬಿಟ್ಟದ್ದು ಇಂದಿನ ನಮ್ಮ ಮನಸ್ಥಿತಿಗೆ ವ್ಯಂಗ್ಯೋಕ್ತಿಯಾಗಿ ಕಂಡರೆ ಅದು ನಮ್ಮ ಮನಸ್ಥಿತಿಗೆ ಹಿಡಿದ ಕನ್ನಡಿ. ಅವರಿಗೆ ಹೊಟ್ಟೆಪಾಡಿನ ಸಂಗತಿ. ನಾರಾಯಣ ಗುರು ಅವರು ಹೇಳಿದ ಕಥೆಯೊಂದರಲ್ಲಿ: ಕೇವಲ ಒಂದೆರೆಡು ಶತಮಾನದ ಹಿಂದೆ ಕೇರಳದ ಸಂಸಾರವೊಂದರಲ್ಲಿ ರಾತ್ರಿ ಹೊತ್ತಿನಲ್ಲಿ, ಸಂಪ್ರದಾಯದ ವಿರುದ್ಧವಾಗಿ ರವಿಕೆಯನ್ನು (ಗಂಡನ ಅನುಮತಿಯೊಂದಿಗೆ) ತೊಟ್ಟು, ಬೆಳಿಗ್ಗೆ ಅದನ್ನು ಕಳಚಿಡಲು ಮರೆತ ಸೊಸೆ ಹೊರಬಂದಾಗ, ಆಕೆಯ ಅತ್ತೆ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಚಚ್ಚಿಹಾಕಿದಳಂತೆ, ಸಂಪ್ರದಾಯ ವಿರುದ್ಧವಾಗಿ ರವಿಕೆ ತೊಟ್ಟಳೆಂದು! ಅಂದಿಗೂ ಇಂದಿಗೂ ನಡುವಣ ಇಷ್ಟು ಕಡಿಮೆ ಅವಧಿಯಲ್ಲಿ ‘ನಿಷಿದ್ಧ’ ಎಂಬುದನ್ನು ನೋಡುವ, ಭಾವಿಸುವ, ಗ್ರಹಿಸುವ ಬಗೆಯು ಇಷ್ಟೊಂದು ತಿರುವು ಮರುವು ಆಗಿದ್ದಾದರೂ ಹೇಗೆ?

manoranjana vruttanta

ರಫೆಲ್ ಬರೋಸನ್ ಕೃತಿಯಲ್ಲಿ ಷೇರು ಜಗತ್ತು (ಬುಲ್) ಸಣ್ಣಪುಟ್ಟ ಗಳಿಕೆಗಳನ್ನು (ಹಂದಿಯಾಕಾರದ ಹುಂಡಿ) ಸವಾರಿ ಮಾಡುವ ಅರ್ಥವುಳ್ಳ ಈ ಕೃತಿ, ಇವೆರಡರ ಅರ್ಥ ತಿಳಿಯದವರಿಗೆ ಒಂದು ಅಶ್ಲೀಲವಾಗಿ ಕಾಣಬಹುದು.

“ಯಾಕೆ ಇಂದು ನಮ್ಮ ಸುತ್ತಮುತ್ತಲಿನ ಕಲಾಶಾಲೆಗಳಲ್ಲಿ ನ್ಯೂಡ್ ಸ್ಟಡಿ ಇಲ್ಲ?” ಎಂಬ ಪ್ರಶ್ನೆಗೆ ಯಾರಲ್ಲೂ ಸರಿಯಾದ ಉತ್ತರವಿಲ್ಲದ ಕಾಲವೊಂದಿತ್ತು. ಆ ಪ್ರಶ್ನೆ ಕೇಳುವುದೇ ಅಪರೂಪವಾಗುತ್ತಿರುವ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಸಮಾಜವೊಂದರ ಭಾಗವಾಗಿ ನಾವೆಲ್ಲ ಅದರಂತೆ ನಡೆಯಬೇಕು ಎಂಬುದು ನಿಜ, ಸತ್ಯ, ಖಂಡಿತ. ಜೊತೆಗೆ ಅಂತಹ ನಾವು-ನೀವುಗಳು ಇರುವ ಸಮಾಜಗಳ ನಿರ್ದಿಷ್ಟ ವ್ಯಕ್ತಿತ್ವಗಳೇ ಅಯೋಮಯವಾದಲ್ಲಿ, ಅಶ್ಲೀಲತೆಯ ಪ್ರಶ್ನೆಗಳನ್ನು ಮುಂಚೂಣಿಗೆ ತರುವುದೆಲ್ಲ ಅವಕಾಶವಾದಿತ್ವ ಆಕರ್ಷಕ ಆಷಾಢಭೂತಿತನ ಆಗುವ ಸಾಧ್ಯತೆ ಇಲ್ಲವೇ? ತಪ್ಪು ಮಾಡುವುದು ತಪ್ಪಲ್ಲ, ಹಾಗೆ ಮಾಡಿ ಸಿಕ್ಕಿಹಾಕಿಕೊಂಡಾಗ ಮಾತ್ರ ತಪ್ಪು ಸೃಷ್ಟಿಯಾಗುತ್ತದೆ ಎಂಬ ಅಂಶವು ಎರಡು ದಶಕಗಳಿಂದ ಚರ್ಚಿತವಾಗಿರುವ ಎಂ.ಎಫ್. ಹುಸೇನರ ‘ಸರಸ್ವತಿ’ ರೇಖಾಚಿತ್ರದ ವಿವಾದದ ಇತಿಹಾಸವನ್ನು ನಿರೂಪಿಸುತ್ತದೆ.

ವಿಶೇಷವೆಂದರೆ ಅಶ್ಲೀಲತೆಯ ಹೆಸರಿನಲ್ಲಿ ಸಂಕಟಕ್ಕೆ ಸಿಲುಕುವ ಕಲಾಸೃಷ್ಟಿಗಳಲ್ಲಿ ನಗ್ನತೆ/ಬೆತ್ತಲೆ ಚಿತ್ರಗಳು ಮೊದಲಾದರೆ, ಆಧ್ಯಾತ್ಮಿಕ ವಿಷಯಗಳನ್ನುಳ್ಳ ಕೃತಿಗಳಿಗೆ ಎರಡನೆಯ ಸ್ಥಾನ. ಇವೆರಡೂ ವಿಷಯಗಳು ಪ್ರಸ್ತುತ ಸಮಾಜದ ಅತ್ಯಂತ ಸೂಕ್ಷ್ಮ ವಿಷಯಗಳಾದ್ದರಿಂದ, ಅವೆರಡರಲ್ಲಿ ಒಂದಾದರೂ ಪೂರ್ವಸಿದ್ಧ ನಿರೀಕ್ಷೆಗಳಿಗಿಂತಲೂ ಸ್ವಲ್ಪ ಅತ್ತಿತ್ತ ಅಲುಗಿದರೂ ಸಾಕು ಅಸ್ತಿತ್ವದಲ್ಲಿ ಸಾಧ್ಯವೇ ಇಲ್ಲದ ಅಶ್ಲೀಲ ಗೋಚರವಾಗತೊಡಗುತ್ತವೆ ಭೂತಪ್ರೇತ, ಅನ್ಯಗ್ರಹ ಜೀವಿಗಳಂತೆ.

* ‘ಬೆತ್ತಲೆ ಪೂಜೆ ಯಾಕೆ ಸಲ್ಲದು?’, ‘ನಾ ಕೊಂದ ಹುಡುಗಿ’, ‘ಕಥೆಯಾದಳು ಹುಡುಗಿ’ಯಂತಹ ಪಠ್ಯಗಳು ಕ್ರಮಬದ್ಧವಾಗಿ, ಕನ್ನಡ ಪ್ರಜ್ಞೆಯ ‘ಸಮುದಾಯದಲ್ಲಿನ ಆಚರಣೆಗಳ ವೈವಿಧ್ಯತೆಗಳು’ ಮತ್ತು ಅಂತಹ ‘ವೈವಿಧ್ಯತೆಗಳ ವ್ಯಕ್ತಿಗತ ಅರ್ಥೈಸುವಿಕೆಯ’ ದುರಂತಗಳನ್ನು ಚಿತ್ರಿಸುವ ಕನ್ನಡ ಸಂಸ್ಕೃತಿಯ ಕೆಲವು ಅಮೂರ್ತ ಚಿಂತನೆಗಳನ್ನು ವೈವಿಧ್ಯಮಯವಾಗಿದ ದೇಸಿ ಪಠ್ಯಗಳು. ಇಂದು ಸಾಮಾಜಿಕ ಜಾಲತಾಣಗಳು ಹೀಗೆ ಸಂಸ್ಕೃತಿ, ಸಮುದಾಯಗಳಿಗೇ ನಿರ್ದಿಷ್ಟವಾದ ಶ್ಲೀಲ-ಅಶ್ಲೀಲದ ಸ್ವಾಯತ್ತತೆಯ ನಿರೂಪಣೆಗಳನ್ನು ಲೇವಡಿ ಮಾಡುವಂತೆ, ಎಲ್ಲವನ್ನೂ ಸರ್ವ-ಲಭ್ಯ ದೃಶ್ಯ-ಪಠ್ಯಗಳ ಸರಾಗತನದ ಇಸ್ತ್ರಿ ಪೆಟ್ಟಿಗೆಯಲ್ಲಿ ಸಮತಟ್ಟಾಗಿಸುತ್ತಿದೆ. ಆದ್ದರಿಂದ ಪ್ರತಿ ಕುಟುಂಬಗಳಲ್ಲಿ ಕೇವಲ ಎರಡು-ಮೂರು ತಲೆಮಾರುಗಳಲ್ಲಿ ಈ ನಗ್ನತೆ, ವಸ್ತ್ರ ಸಂಹಿತೆ ಮತ್ತು ಅವುಗಳ ಸುತ್ತಲಿನ ನಡವಳಿಕೆಯಲ್ಲಿನ ಅಗಾಧವಾದ ಗ್ರಹಿಕೆಯ, ಭಾವನೆಗಳ ಕಂದರ ಉಂಟಾಗುತ್ತಿದೆ. ಆದರೆ ಅದು ಜಾಲತಾಣಗಳ ಗೌಪ್ಯತೆಗಳಲ್ಲಿ ಮರೆಯಾಗಿ, ಅಲ್ಲಿಯೇ ಪರಿಚಯವಾದ, ಎಂದೂ ಕಂಡು ಕೇಳರಿಯದವರು, ರಕ್ತ ಸಂಬಂಧ ಹಂಚಿ ಒಟ್ಟಿಗೆ ಬೆಳೆದವರಿಗಿಂತಲೂ ಆತ್ಮೀಯರಾದಂತೆ ಕಾಣುತ್ತಿರುತ್ತಾರೆ. ಇದೊಂದು ತೆರನಾದ ವಿಶಿಷ್ಟ ಅಶ್ಲೀಲ.

1980ರ ದಶಕದಲ್ಲಿ ತಮ್ಮ ಸ್ವಂತ ನಗ್ನ ಚಿತ್ರಗಳ ತೈಲವರ್ಣ ಕೃತಿಗಳನ್ನು ಬೆಂಗಳೂರಿನ ವೆಂಕಟಪ್ಪ ಕಲಾಗ್ಯಾಲರಿಯಲ್ಲಿ ಪ್ರದರ್ಶಿಸಿದ್ದ ಬ್ಯಾಂಕ್ ಉದ್ಯೋಗಿಯಾಗಿದ್ದ ಕಲಾವಿದೆ ಸಾವಿತ್ರಿಯವರು ಇಂದಿಗೂ ‘ನಗ್ನ ಚಿತ್ರಗಳ ಕಲಾವಿದೆ’ ಎಂದೇ ಪ್ರಸಿದ್ಧರಾಗಿದ್ದಾರೆಯೇ ಹೊರತು ಈ ಸೆನ್ಸೆಷನಲಿಸಂನ ಆಚೆಗೆ ಅವರಿಗೊಂದು ವ್ಯಕ್ತಿತ್ವ ದಕ್ಕಿಲ್ಲ. ಅವರ ಕೃತಿಗಳು ಈ ಜನಪ್ರಿಯತೆಯ ಆಚೆಗೆ ಕಲಾತ್ಮಕತೆಯ ದೃಷ್ಟಿಯಿಂದ ಮುಖ್ಯವೋ ಇಲ್ಲವೋ ಎಂದು ನಿರ್ಧಾರವಾಗದ ಸಾಂಸ್ಕೃತಿಕ ಮನಸ್ಥಿತಿಯೂ ಮತ್ತೂ ಒಂದು ರೀತಿಯ ಅಶ್ಲೀಲವೇ.

ಉಳಿದಂತೆ, ಪ್ರಜಾಪ್ರಭುತ್ವವಾದಿ ನಿಯಮಗಳ ಪ್ರಕಾರ ಕೆಲವರು ಅಶ್ಲೀಲತೆಯ ಆರೋಪಿಗಳಾಗುತ್ತಾರೆ, ಸಾಕ್ಷಿ ಆಧಾರಗಳ ಕೊರತೆಯಿಂದಾಗಿ ಅಥವಾ ಸಾಕ್ಷಿಗಳ ಕೃತಕ ಕೊರತೆಯ ಸೃಷ್ಟಿಯಿಂದಾಗಿ ಆರೋಪ ಮುಕ್ತರಾಗಬಹುದು, ಅವರ ಕುಟುಂಬದವರ ಜನಪ್ರಿಯತೆ ಎಂಬ ಬಂಡವಾಳಕ್ಕೆ ಸ್ವಲ್ಪ ಮಟ್ಟಿನ ಹೊಡೆತವೂ ಬೀಳುತ್ತದೆ, ಈ ವಿಷಯಗಳ ಖ್ಯಾತಿ-ಅಪಖ್ಯಾತಿಗಳನ್ನೇ ಲಾಭ ಮಾಡಿಕೊಳ್ಳುವ ಛಾತಿ ಇದ್ದಲ್ಲಿ ಈ ಘಟನೆಯ ಸುತ್ತಲೇ ಒಂದು ಸಿನೆಮಾ ಅವರ ಬ್ಯಾನರ್ ಅಡಿಯಲ್ಲೇ ನಿರ್ಮಾಣಗೊಳ್ಳುತ್ತದೆ. ಅದೇ ಕುಟುಂಬದವರು ಆ ಸಿನೆಮಾದಲ್ಲಿ ನಿರ್ಮಾತೃಗಳಾಗಿ, ಕಲಾವಿದರಾಗಿ, ಅದರಲ್ಲಿ ಪಾತ್ರವಹಿಸಿ ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಲ್ಲಿ, ಅಶ್ಲೀಲವು ಇಲ್ಲವಾಗದೆ, ಒಳ್ಳೆಯ ಕಥಾವಸ್ತುವಾಗಿ ರೂಪಾಂತರಗಬಲ್ಲದು, ಕರೋನದಂತೆ. ಆದರೆ ಈ ಮತ್ತು ಇಂತಹ ಘಟನೆಗಳ ಹಿನ್ನೆಲೆಯಲ್ಲಿ ನಗ್ನ-ಬೆತ್ತಲೆ-ಅಶ್ಲೀಲಗಳ ನಡುವಣ ಸಂಬಂಧಗಳ ಕುರಿತ ಸ್ಪಷ್ಟತೆಯನ್ನು ಆಗಗೊಡದಂತೆ ಮಾಧ್ಯಮಗಳು ತಡೆಹಿಡಿಯುತ್ತವೆ. ಏಕೆಂದರೆ ಅಶ್ಲೀಲ ಎನ್ನುವುದು ಜಾಲತಾಣದ ಇಂದಿನ ಬಂಡವಾಳ. ಇದು ಮತ್ತೂ ಒಂದು ತೆರನಾದ ಅಶ್ಲೀಲವೂ ಹೌದಾಗಿದೆ.

manoranjana vruttanta

ಸಾರಾನೊನ್ ‘ಪಿಸ್ ಕ್ರೈಸ್ಟ್’ ಎಂಬ ಈ ಛಾಯಾಚಿತ್ರವೂ ಕ್ರೈಸ್ತ ಧರ್ಮವನ್ನು ಅಣಕಿಸುತ್ತದೆ ಎಂಬುದು ವಿವಾದ. ‘ಕ್ರೈಸ್ತ ಇದನ್ನೂ ಕ್ಷಣಿಸುತ್ತಿದ್ದ’ ಎಂಬ ಸನ್ಯಾಸಿನಿ/ನನ್ನ ಒಬ್ಬಳು ನ್ಯಾಯಾಂಗದಲ್ಲಿ ನುಡಿದು, ಈ ಕಲಾವಿದನನ್ನು ವಿವಾದದಿಂದ ಮುಕ್ತಗೊಳಿಸಿದಳು.

ಅಶ್ಲೀಲತೆಯ ಪ್ರಶ್ನೆ ಯಾವಾಗಲೂ ನಗ್ನತೆ, ಲೈಂಗಿಕತೆಯ ಸುತ್ತಲೇ ಗಿರಾಕಿ ಹೊಡೆವುದು ಎಷ್ಟು ಸರಿ? ಸಾಮೂಹಿಕವಾಗಿ ಗೌಪ್ಯವಾದುದನ್ನು ವೈಯಕ್ತಿಕವಾಗಿ ಅನುಭವಿಸಿ ಆಸ್ವಾದಿಸಿದರೆ ಸರಿ, ಸಾರ್ವತ್ರಿಕವಾಗಿ ಪ್ರಕಟವಾದಲ್ಲಿ ಅದಕ್ಕೆ ಹಣೆಪಟ್ಟಿಯೊಂದು ತಯಾರಾಗಿರುತ್ತದೆ. ಉದಾಹರಣೆಗೆ ಕುಡಿತ. ಕುಡಿಯಬಹುದು, ಕುಡಿದು ಗಾಡಿ ಓಡಿಸುವಂತಿಲ್ಲ. ಆರೋಗ್ಯಕ್ಕೆ ಹಾನಿಕರ, ಆದರೆ ಅದು ತಂದುಕೊಡುವ ತೆರಿಗೆಯ ನೆಪದಿಂದ ಸರ್ಕಾರಕ್ಕೆ ಅದು ನಿಷಿದ್ಧವಲ್ಲ. ಬ್ಲೂ ಫಿಲಂ – ಅದನ್ನು ನೋಡುವುದು ಸರಿ, ತಯಾರಿಸುವುದು ಸರಿಯಲ್ಲ ಕೆಲವು ದೇಶಗಳಲ್ಲಿ. ಯೂರೋಪಿನ ನಾರ್ಡಿಕ್ ದೇಶಗಳಲ್ಲಿ ತಯಾರಿಸಿದಲ್ಲಿ, ಅಲ್ಲಿನ ಆರ್ಥಿಕತೆಗೆ ಕೊಡುಗೆ ನೀಡಿದರೆಂದು ಅದರ ನಿರ್ಮಾತೃಗಳು ಪ್ರಶಸ್ತಿ ಪಡೆಯಬಹುದಾಗಿದ್ದ ಯತ್ನ ಮತ್ಯಾವುದೋ ದೇಶದಲ್ಲಿ ಶಿಕ್ಷಾರ್ಹ. “ಹಾಗಿದ್ದರೆ ಅಲ್ಲಿಯೇ ಹೋಗಿ, ನಿಷಿದ್ಧವನ್ನು ತಯಾರಿಸಿ, ಪ್ರಶಸ್ತಿಗೆ ಭಾಜನರಾಗಬಹುದಲ್ಲ. ಇಲ್ಯಾಕಿದ್ದೀರಿ?” ಎಂದು ಫೇಸ್ಬುಕ್-ಭಾಷೆಯಲ್ಲಿ, ಅಲ್ಲಿಯೇ ಕುಟುಕುವವರು, “ಏಕೆ ಹೀಗೆ ನೈತಿಕತೆ-ನಿಯಮಗಳ ಚೌಕಟ್ಟುಗಳು ದೇಶಕಾಲಗಳಿಗೆ ಬದ್ಧವಾಗಿ ರೂಪಾಂತರ ಹೊಂದುತ್ತದೆ?” ಎಂದು ಗಂಭೀರವಾಗಿ ಕೇಳಿಕೊಳ್ಳುವುದೇ ಇಲ್ಲ. ಇಂತಹ ಚಿಂತನೆಯ ಇತಿಮಿತಿಗೇ ಬದ್ಧವಾಗಿಬಿಡುವುದು ಮಾನವನಿಂದ ಮಂಗನಾವಸ್ಥೆಗೆ ಹೋಗುವ ತವಕವಾಗಿರುತ್ತದೆ. ಆದ್ದರಿಂದಲೇ ನೈತಿಕತೆ ಹಾಗೂ ಅಶ್ಲೀಲಗಳನ್ನು ‘ನ್ಯಾಯತೀರ್ಪಿಗೆ ಬದ್ಧ’ ಹಾಗೂ ‘ಮಾಧ್ಯಮಗಳಿಗೆ ಆಹಾರ’ ಎಂಬ ಎರಡು ಚೌಕಟ್ಟುಗಳ ಮೂಲಕ ಮಾತ್ರ ಪರೀಕ್ಷಿಸುತ್ತಿದ್ದೇವೆ ಇಂದು.

ದೃಶ್ಯಕಲೆಯಲ್ಲಿ ನಿಜವಾದ ಅಶ್ಲೀಲ ಜನಕರ ಸಮಕಾಲೀನ ಸಾಕ್ಷ್ಯ ಒಂದಿದೆ: ಮುಖ್ಯ ರಸ್ತೆ, ಬೀದಿ, ಗಲ್ಲಿಗಲ್ಲಿಗಳಲ್ಲೂ ರಾತ್ರೋರಾತ್ರಿ ಪ್ರತ್ಯಕ್ಷರಾಗುತ್ತಿರುವ ಮಧ್ಯವಯಸ್ಕ (ಬಹುಪಾಲು) ಶ್ವೇತವಸ್ತ್ರಧಾರಿ ಗಂಡಸರ ಆಳೆತ್ತರದ ನಿಲುವಿನ ಭಿತ್ತಿ-ಫಲಕಗಳವು. ಎಲ್ಲ ಬೆರಳುಗಳಿಗೂ ಚಿನ್ನದ ಬಣ್ಣದ ಉಂಗುರಗಳನ್ನು, ಕಡಗಗಳನ್ನು ತೊಟ್ಟು, ಕೈಯೊಂದರಲ್ಲಿ ದುಬಾರಿ ಮೊಬೈಲು ಹಿಡಿದು, ಬಲವಂತದ ನಗೆಯೊಂದನ್ನು ಸೂಸಿ ಕ್ಯಾಮರಾದ ಕಡೆಗೇ ನಿತ್ಯನಿರಂತರವಾಗಿ ಎಂಬಂತೆ ನಡೆದು ಬರುತ್ತಿರುವ ಈ ಶ್ವೇತ’ಮಧ್ಯ’ವಯಸ್ಕರು, ಸಾವಿರಗಟ್ಟಲೆ ಫ್ಲೆಕ್ಸ್ ಪೋಸ್ಟರ್​ಗಳಲ್ಲಿ, ರಸ್ತೆಯ ಎಡಬಲಗಳಲ್ಲಿ ದೃಶ್ಯ-ರದ್ಧಿಗಳಾಗಿ, ಒಮ್ಮೊಮ್ಮೆ ವಾಹನ ಅಪಘಾತಕ್ಕೂ ಕಾರಣರಾಗಿ, ದೃಶ್ಯಕಲೆಯ ಅತ್ಯಂತ ಅಭಿರುಚಿಹೀನ ಸೃಷ್ಟಿಗಳಿಗೆ ಆಹಾರಗಳಾಗಿ ನಿಂತಲ್ಲೇ ನಿಲ್ಲದೆ, ಚಿತ್ರ ಚೌಕಟ್ಟಿನೊಳಗೂ ಸಹ ‘ಸಾಮಾಜಿಕ ಅಂತರ’ ಕಾಯ್ದಿಟ್ಟುಕೊಂಡು, ನಮ್ಮದೇ ತೆರಿಗೆಯನ್ನು ಕೆರೆಯ-ನೀರು-ಕೆರೆಗೆ ಎಂಬಂತೆ ಸುರಿದು, ತಮ್ಮ ಚುನಾಯಿತಾಯ್ಕೆಯ ಕರ್ತವ್ಯವನ್ನೇ ‘ಸಾಧನಾಭಿವೃದ್ದಿ’ ಎಂಬಂತೆ ಬಿಂಬಿಸುವ ಅವಸರದಲ್ಲಿ ವಿಕಾರ ರೂಪ/ಕಗಳಾಗಿ, ‘ವಿಂಡೋಸ್’ ಆಚೆ ನೋಡಿದಾಗಲೆಲ್ಲ, ಮನೆಯಾಚೆಗೆ ಹೆಜ್ಜೆ ಇಟ್ಟ ಕ್ಷಣದಿಂದ ಹಿಂದಿರುಗಿ ಮನೆ ಸೇರಿಕೊಳ್ಳುವವರೆಗೂ ‘ದೃಶ್ಯರದ್ಧಿ’ಗಳಾಗಿ ಎದಿರಾಗುತ್ತಾರಲ್ಲ, ಎಲ್ಲಿಯೂ ಹೋಗದೆ ಇದ್ದಲ್ಲೇ ನಡೆದಂತೆ ಮಾಡುತ್ತ ಬೇರುಬಿಟ್ಟಿರುತ್ತಾರಲ್ಲ, ಚಿತ್ರಗಳಾಗಿ ನಮ್ಮ ದೈನಂದಿನ ಓಡಾಟದ ತಾಣಗಳನ್ನೇ ಬಲವಂತದ ಗ್ಯಾಲರಿಗಳನ್ನಾಗಿಸಿ, ಅನಿವಾರ್ಯವಾಗಿ ನಮ್ಮ ದೈನಂದಿನ ನೋಟಕ್ಕೆ ಅಸಹ್ಯಕರವಾಗಿ ದಾಳಿ ಇಡುತ್ತಾರಲ್ಲ… ಈ ಇವರುಗಳು ಪ್ರಕಟಗೊಳ್ಳುತ್ತಿರುವ ಭಿತ್ತಿ-ಫಲಕಗಳ ಅಪರಾವತಾರಗಳೇ ದೃಶ್ಯಸಂಸ್ಕೃತಿಯ ನಿಜವಾದ ಅಂತರಂಗ-ಬಹಿರಂಗದ ಅಶ್ಲೀಲ!

ಇದನ್ನೂ ಓದಿ : Art and Entertainment : ಆ ಒಬ್ಬಂಟಿ ದೇವರಿಗೆ ಹೀಗೊಮ್ಮೆ ಬಹಳ ಬೇಸರವಾಗಿ

Follow us on

Most Read Stories

Click on your DTH Provider to Add TV9 Kannada