Netflix : ಇದ್ದೂ ಇರದಂತಿರದ ಬಿಸಿಲಕೋಲ ಬೆಂಬತ್ತಿ; ‘ಮೇಡ್’
Self Respect : ‘ಜಗತ್ತಿನ ಎಲ್ಲಾ ಗಂಡಸರೂ ಒಂದೇ. ತಮಗೆ ಬೇಕಾದಾಗ ಬೇಕಾದ್ದನ್ನು ಪಡೆಯಲು ಮಾತ್ರ ಸಿದ್ದರಿರುತ್ತಾರೆ. ಕೊಡುವ ಸಂದರ್ಭ ಬಂದಾಗ ನೆರಳೂ ಸಾಥ್ ಕೊಡುವುದಿಲ್ಲವೆನ್ನುವ ಮಾತು ನೆನಪಾಗುತ್ತದೆ. ಆತ್ಮಗೌರವವನ್ನು ಕಳೆದುಕೊಂಡು ಬದುಕುವುದಕ್ಕಿಂತ ಏಕಾಂಗಿಯಾಗಿ ಬದುಕುವುದು ಕಡುಕಷ್ಟದ್ದಾಗಿದ್ದರೂ ಅದು ಕೊಡುವ ನೆಮ್ಮದಿ ಗೌರವಕ್ಕಾದರೂ ಅನಿವಾರ್ಯದ ಹಾದಿಯನ್ನು ಆರಿಸಿಕೊಳ್ಳುತ್ತಾಳೆ ಅಲೆಕ್ಸ್.’ ರೇಣುಕಾ ನಿಡಗುಂದಿ
Cinema : ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣಕ್ಕೆ ಓಡುತ್ತಲೇ ಇರುತ್ತೇವೆ, ಇದ್ದೇವೆ. ಆದರೂ ಬಿಡುವು ಮಾಡಿಕೊಂಡು ಒಂದು ಸಿನೆಮಾ ನೋಡುವ ಮನಸ್ಸು ಮಾಡುತ್ತೇವೆ; ಅರೆ! ಇಂಥದೇ ಒಂದು ಪಾತ್ರ, ಇಂಥದೇ ಒಂದು ಸನ್ನಿವೇಶ, ಇಂಥದೇ ಒಂದು ತಂತುವಿನೊಂದಿಗೆ ಜೀವಿಸುತ್ತಿದ್ದೇವಲ್ಲ ಎನ್ನಿಸಲಾರಂಭಿಸುತ್ತದೆ. ಎದುರಿನ ಪರದೆಯೊಳಗಿನ ಅಂತಃಸಾರ ಎದೆಮೆದುಳಿಗಿಳಿದು ಮೆಲ್ಲನೆ ಅಲೆಗಳನ್ನು ಹರಡುತ್ತದೆ. ಇಳಿದದ್ದು ಕಾಡದೇ ಇರದು, ಕಾಡುವುದು ಸುಮ್ಮನಿರಲು ಬಿಡದು. ಹಿಂಜಾಡಿ ಹಿಂಜಾಡಿ ಏನೇನೋ ನೆನಪುಗಳನ್ನುಕ್ಕಿಸುತ್ತದೆ, ಪ್ರಶ್ನೆಗಳನ್ನೆಬ್ಬಿಸುತ್ತದೆ. ಏಕೆಂದರೆ ಕಲೆ ಎನ್ನುವುದು ‘ರುಚಿಯವಿಚಾರ’, ನಮ್ಮ ಭಾವಭಿತ್ತಿಯನ್ನು ಮೀಟಿ, ಮೀರಿ ಪಾಕಗಟ್ಟುವ ಆತ್ಮಾವಲೋಕನದ ಪ್ರಕಾರ. ಈ ಪ್ರಕ್ರಿಯೆಯಲ್ಲಿ ನಿಮ್ಮನ್ನು ನೀವು ಕೆದಕಿಕೊಳ್ಳುತ್ತ ಅರಿವಿಲ್ಲದೆ ನೀವೇ ಒಂದು ಪಾತ್ರವಾಗಿಯೂ ನಿಂತುಬಿಡಬಹುದು! ಅಂತಹ ಅಭಿವ್ಯಕ್ತಿಗೊಂದು ವೇದಿಕೆಯಾಗಿ ‘ಟಿವಿ9 ಕನ್ನಡ ಡಿಜಿಟಲ್ : ಮೀಟುಗೋಲು’ ನೀವು ಬರೆದಾಗೆಲ್ಲ ಇದು ಪ್ರಕಟವಾಗುತ್ತದೆ.
ನೀವು ನೋಡಿದ ಯಾವುದೇ ಭಾಷೆಯ ಸಿನೆಮಾ/ವೆಬ್ ಸೀರೀಸ್ ಮತ್ತು ನಿಮ್ಮ ಬದುಕಿನ ಅನುಭವ ಪರಸ್ಪರ ಮಿಳಿತಗೊಂಡು ವಾಸ್ತವದ ಬಗ್ಗೆ ಯೋಚಿಸುವಂತೆ ಮಾಡಿದ ರೀತಿಯನ್ನು ಬರಹದ ಮೂಲಕ ಕಟ್ಟಿಕೊಡಬಹುದು. ಪದಮಿತಿ ಸುಮಾರು 600. ನಿಮ್ಮ ಸ್ಥೂಲ ಪರಿಚಯ, ಭಾವಚಿತ್ರವೂ ಇರಲಿ. ಮೇಲ್ : tv9kannadadigital@gmail.com
ನೆಟ್‍ಫ್ಲಿಕ್ಸ್ ವೆಬ್ ಸೀರೀಸ್ ‘ಮೇಡ್’ ನೋಡಿದ ರೇಣುಕಾ ನಿಡಗುಂದಿ ಅವರಿಗೆ ಅನ್ನಿಸಿದ್ದು ಇಲ್ಲಿದೆ.
*
ಇಟ್ಟಿಗೆ ಗಾರೆ ಸಿಮೆಂಟಿನಿಂದ ಕಟ್ಟಿದ ಕಟ್ಟಡ ಮನೆಯಾಗುವುದು ಮನುಷ್ಯರು ಅಲ್ಲಿ ವಾಸಿಸತೊಡಗಿದಾಗ. ಜಗತ್ತಿನಲ್ಲಿ ನಾವು ಸುರಕ್ಷಿತವಾಗಿ ನಿಶ್ಚಿಂತವಾಗಿ ನೆಮ್ಮದಿಯಿಂದ ಇರುವ ಸ್ಥಳವೆಂದರೆ ನಾವಿರುವ ನಮ್ಮ ಮನೆ. ಅದು ಗುಡಿಸಲೋ ಅರಮನೆಯೋ ಅದು ಪ್ರಶ್ನೆಯಲ್ಲ. ಜಗತ್ತಿನಲ್ಲಿ ಎಲ್ಲೇ ಸುತ್ತಾಡಿದರೂ ಕೊನೆಗೂ ನಾವು ಹಾತೊರೆದು ಬರುವ ಜಾಗ ನಮ್ಮ ಮನೆಯೇ. ಹೊರಗೆ ಎಷ್ಟು ಪಕ್ವಾನ್ನಗಳನ್ನು ತಿಂದರೂ ಕೊನೆಗೆ ಸಂತೃಪ್ತಿಯೆನಿಸುವುದು ಮನೆಯ ಒಂದು ಲೋಟ ನೀರು. ಮನೆಯೆಂದರೆ ನಮ್ಮ ಕನಸುಗಳನ್ನು ತುಂಬಿಕೊಂಡು ಸಾಗುತ್ತಿರುವ ಹಡಗು. ಕೆಲವೊಮ್ಮೆ ಧೂಪ ದೀಪ ಸಾಂಬ್ರಾಣಿಯ ಘಮಲನ್ನು ಸೂಸುತ್ತಿರುವ ಪ್ರಶಾಂತವಾದ ದೇಗುಲ. ನಾವು ಹೇಗಿದ್ದೇವೆ, ಹೇಗೆ ವಾಸಿಸುತ್ತಿದ್ದೇವೆ? ಅಲ್ಲಿ ವಾಸಿಸುವವರ ಕಷ್ಟ ಸುಖಗಳೇನು, ಅವರ ಸ್ವಭಾವಗಳೇನು. ಬದುಕು ಎಂಥದ್ದು, ನಿಜವಾಗಿಯೂ ಅವರು ಬದುಕುತ್ತಿದ್ದಾರೆಯೇ ಇಲ್ಲ ಬರೀ ವಾಸಿಸುತ್ತಿದ್ದಾರೆಯೇ ಯಂತ್ರಮಾನವರಂತೆ! ರೈಲ್ವೇ ನಿಲ್ದಾಣದಂತೆ? ಯಾವಾಗೆಂದರೆ ಆವಾಗ ಎದ್ದು ಹೋಗಿಬಿಡಬಹುದಾದ ವ್ಯಾನಿನಂತೆ? ಇಲ್ಲಾ ಒಂದು ಕಿಕ್ ಕೊಟ್ಟು ಓಡಿಸಿಬಿಡಬಹುದಾದ ಬೈಕಿನಂತೆ?
ಅಥವಾ ಎಲ್ಲರೂ ಅವರವರ ಕನಸಿನ ಹಡಗಿನಲ್ಲಿ ಕುಳಿತು ಆಹ್ಲಾದಕರವಾದ ಬದುಕನ್ನು ಬದುಕುತ್ತಿದ್ದಾರಾ? ಇಲ್ಲಾ ಅನಂತ ಆಕಾಶದಲ್ಲಿ ಅತಂತ್ರಗೊಂಡ ಗಾಳಿಪಟದಂತೆ ದಿಕ್ಕುದೆಸೆಯಿಲ್ಲದೇ ಸಾಗುತ್ತಿದ್ದೇವಾ ಎನಿಸುತ್ತದೆ. ಅದರೆ ಕಗ್ಗತ್ತಲ್ಲ ಕಾಡಿನಂತಹ ಮುಳ್ಳುಹಾದಿಗಳನ್ನು ಮತ್ತು ಮಬ್ಬುಮುಸುಕಿದ ಕಣಿವೆಯಾಳದ ಎಲ್ಲ ನಿಗೂಢ ದಾರಿಗಳನ್ನು ನೀಗುವುದು ಈ ‘ಮನೆ’ಯೇ. ಮನೆಯೊಳಗಿನ ಗೋಡೆಗಳು, ಗೂಡುಗಳು, ಮಾಡು, ಮಾಳಿಗೆ ಕಪಾಟು, ಕಪಾಟಿನೊಳಗಿನ ಬಟ್ಟೆಬರೆಗಳು, ಡ್ರಾಯರಿನಲ್ಲಿ ಸಂಭಾಳಿಸಿಟ್ಟ ವಸ್ತುಗಳು, ಕಳಚಿಟ್ಟ ಬಟ್ಟೆಗಳು, ಪೇರಿಸಿಟ್ಟ ಗುಜರಿ ಸಾಮಾನುಗಳು, ಯಾರೂ ಬಳಸದ ಕತ್ತಲಕೋಣೆ, ಕಸಕಡ್ದಿ, ಮಲಗುವ ಪಲ್ಲಂಗು, ಬಚ್ಚಲುಮನೆ ಕನ್ನಡಿ, ಟಾಯ್ಲೆಟ್ಟಿನ ಟೈಲ್ಸು, ಟವಲ್ಲು ಎಲ್ಲವೂ ನಮ್ಮ ನಮ್ಮ ವ್ಯಕ್ತಿತ್ವವನ್ನು ಮತ್ತು ಒಟ್ಟು ಆಯುಷ್ಯದ ನಮ್ಮ ನಮ್ಮ ಆತ್ಮಕತೆಗಳನ್ನು ಅಡಗಿಸಿಟ್ಟುಕೊಂಡ ಹಡಗಿನ ಮಜಲುಗಳು.
ಎಲ್ಲವೂ ಇದ್ದು ಪ್ರೀತಿಯೇ ಇರದಾಗ?
ಅಥವಾ ಇದೆಲ್ಲದರ ಆಚೆಗೂ ಬಿಸಿಲಕೋಲ ಪ್ರೀತಿ! ನೀಲ ಕಡಲು… ಶಿಶಿರದ ಬಿಸಿಲ ಹಿತ! ಇದ್ದುದೇನು ಇರದುದೇನು? ನಾವೆಲ್ಲ ಓಡುತ್ತಿರುವುದಾದರೂ ಯಾವ ಗಮ್ಯಕೆ?
ಹೀಗನಿಸತೊಡಗಿದ್ದು ಇತ್ತೀಚೆಗೆ ನೆಟ್‍ಫ್ಲಿಕ್ಸ್ ನಲ್ಲಿ ‘ಮೇಡ್’ ಸರಣಿ ನೋಡತೊಡಗಿದಾಗಿನಿಂದ. ದುಡ್ಡಿನ ದೊಡ್ಡಪ್ಪ ಅಮೆರಿಕದಲ್ಲಿ ಕಡುಬಡತನ ದಿನಗಳಲ್ಲಿ, ಕೆಟ್ಟ ಅಹಿತ ದಾಂಪತ್ಯ, ಸಣ್ಣ ಮಗುವಿನ ಹೊಣೆಗಾರಿಕೆಯನ್ನು ನಿಭಾಯಿಸಲು ಮನೆಕೆಲಸದವಳಾಗಿ ದುಡಿದು ತನ್ನ ಕನಸಿನ ಭವಿಷ್ಯವನ್ನು ಸಾಕಾರಗೊಳಿಸಲು ಕ್ಷಣಕ್ಷಣವೂ ಸವಾಲುಗಳನ್ನು ಎದುರಿಸಿದ ಸ್ಟಿಫನಿ ಲ್ಯಾಂಡ್ ಎಂಬ ಬರಹಗಾರ್ತಿಯ ಸ್ವಾನುಭವದ ಕತೆಯನ್ನೇ ಆಧರಿಸಿ ನೆಟ್‍ಫ್ಲಿಕ್ಸ್ ಈ ಸರಣಿಯನ್ನು ತಯಾರಿಸಿದೆ. ಆಕೆ ಮನೆಗೆಲಸದವಳಾಗಿ ಮನೆ-ಟಾಯ್ಲೆಟ್ಟುಗಳನ್ನು ಕ್ಲೀನ್ ಮಾಡುತ್ತಾ ಆಯಾ ಮನೆಗಳನ್ನು ಆ ಮನೆಗಳು ಅಡಗಿಸಿಟ್ಟುಕೊಂಡ ಮನುಷ್ಯ ರಹಸ್ಯಗಳನ್ನು ತನ್ನದೇ ರೀತಿಯಲ್ಲಿ ದಾಖಲಿಸುವ ಆಕೆ ವಾಸ್ತವದಲ್ಲಿ ಎಷ್ಟೋ ಮನೆಯ ನಿವಾಸಿಗಳಿಗೆ ಅವಳ್ಯಾರೆಂದೂ ಗೊತ್ತಿರುವುದಿಲ್ಲ. ತಾನು ಸ್ವಚ್ಛಗೊಳಿಸುವ ಮನೆಗಳ ನಿವಾಸಿಗಳೆಲ್ಲರ ಬಗ್ಗೆಯೂ ಆಕೆಗೆ ಗೊತ್ತಿರುತ್ತದೆ. ಆಕೆ ಬರೆಯುವ ಡೈರಿಯ ಟಿಪ್ಪಣಿಗಳು ಆಸಕ್ತಿಕರವಾಗಿವೆ.
ಕೌಟುಂಬಿಕ ದೌರ್ಜನ್ಯದಿಂದ ತಪ್ಪಿದ ಏಟಿನಿಂದ ಬೆದರಿ ಇನ್ನು ಈ ಸಂಬಂಧ ಸಾಕು ಎಂದು ತನ್ನ ಮೂರುವರ್ಷದ ಮಗುವಿನೊಂದಿಗೆ ಆಕೆ ಹೊರಬರುವುದರಿಂದ ಕಥೆ ಆರಂಭವಾಗುತ್ತದೆ. ನೆಟಫ್ಲಿಕ್ಸ್ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಇತ್ತೀಚಿಗಿನ “ಮೇಡ್’’ ಸರಣಿ ನೋಡಲು ಸಾಧಾರಣ ಎನಿಸಿದರೂ ಸೂಕ್ಷ್ಮ ಹೊಳಹುಗಳಿಂದ, ಸ್ವಮರುಕದಲ್ಲಿ ಗೋಳಾಡುವ ಹೆಣ್ಣಿನಂತಾಗದೇ ನಾಯಕಿಯ ಸಂಘರ್ಷಮಯ ಬದುಕು, ಛಲದ ಹೋರಾಟ ಸ್ಪೂರ್ತಿದಾಯಕವೆನಿಸುತ್ತದೆ, ಕಾಲೇಜು ಡಿಗ್ರಿಯಿರದ, ಮಗುವಿಗೂ ಸಮಯಕೊಡಬೇಕಾದ ಕಾರಣ ಬೇರೆ ಕೆಲಸಗಳು ಒಗ್ಗದೇ ಆಕೆ ಮನೆಗೆಲಸದವಳಾಗುತ್ತಾಳೆ. ಆಕೆ ಬರೆಯುವ ಡೈರಿಯಿಂದ ನಮ್ಮ ಹೃದಯದ ಕವಾಟಗಳನ್ನು ತೂರಿ ಹರಡುವ ಬಿಸಿಲಕೋಲಂತೆ ಬೆಚ್ಚಗಿನ ಭಾವ ಆವರಿಸಿಕೊಳ್ಳುತ್ತದೆ.
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆ ಮನೆಬಿಟ್ಟು ಹೊರಬಂದರೆ ಹೊರದೇಶದಲ್ಲಿ ಏನೆಲ್ಲ ಸವಲತ್ತುಗಳನ್ನು ಆ ದೇಶ ಕೊಡುತ್ತದೆ. ಗಂಡ ಹೆಂಡತಿ ಬೇರೆಯಾಗಿ ಇರಬಯಸಿದಾಗ ಮಗುವಿನ ಭವಿಷ್ಯದ ಬಗ್ಗೆ ಅಲ್ಲಿನ ಕಾನೂನುಗಳು ಎಷ್ಟೊಂದು ಬಿಗಿಯಾಗಿವೆ ಅದರಂತೆ ಉಳಿದ ಕಾನೂನು ನಿಯಮಗಳನ್ನು ಶಿಸ್ತು ಬದ್ಧವಾಗಿ ವ್ಯವಹರಿಸುವ ಅಲ್ಲಿನ ನಾಗರಿಕರನ್ನು ಕಂಡಾಗ ನಾವೆಷ್ಟು ಹಿಂದಿದ್ದೇವೆ ನಾವೆಷ್ಟು ಅಶಿಸ್ತಿನ, ಬೇಜವಾಬ್ದಾರಿಯುಳ್ಳವರು ಎನಿಸತೊಡಗುತ್ತದೆ. ಆದರೆ ಅಲೆಕ್ಸ್ ‘ಮನೆಗೆಲಸದವಳು’ ಆಗಿ ‘ವ್ಯಾಲ್ಯೂ ಮೇಡ್ಸ್” ಎಂಬ ಸರ್ವೀಸ್ ಪ್ರೊವೈಡಿಂಗ್ ಕಂಪನಿ ಸೇರಿ ಮನೆ ಮನೆಗೆ ಹೋಗಿ ಮನೆ ಸ್ವಚ್ಚಗೊಳಿಸುವ ಕೆಲಸ ಆರಂಭಿಸುತ್ತಾಳೆ. ಅದಕ್ಕಾಗಿ ಆಕೆಯ ಪಡುವ ಪರದಾಟ ಅಷ್ಟಿಷ್ಟಲ್ಲ. ಎಷ್ಟೊಂದು ಸೋಲುಗಳು, ಅದೆಷ್ಟು ಸವಾಲುಗಳು. ಆದರೆ ಅಲೆಕ್ಸಳ ಆತ್ಮವಿಶ್ವಾಸ ಬದುಕನ್ನು ಎದುರಿಸುವ ರೀತಿ ಅಚ್ಚರಿ ಹುಟ್ಟಿಸುತ್ತದೆ.
ಅಲೆಕ್ಸ್ ಕೂಡ ಕೌಟುಂಬಿಕ ದೌರ್ಜನ್ಯದ ಬೆಂಕಿಯಲ್ಲಿ ಸುಟ್ಟುಕೊಂಡೇ ಬೆಳೆದವಳು. ಒಮ್ಮೆ ಒಂದು ಪಾಳುಬಿದ್ದ ಮನೆಯನ್ನು ಸ್ವಚ್ಚಗೊಳಿಸಲು ತನ್ನ ಸಹಯೋಗಿಯೊಂದಿಗೆ ಹೋದಾಗ ಆ ಮನೆಯಲ್ಲಿನ ಬಹುತೇಕ ಎಲ್ಲಾ ಕಪಾಟಿಗೂ ಕೀಲಿ ಜಡಿದಿರುವುದನ್ನು ಗಮನಿಸುತ್ತಾಳೆ. ಒಂದು ಗೋಡೆಯಲ್ಲಿ ನೆಲಕ್ಕೆ ಅಂಟಿಕೊಂಡ ಒಬ್ಬರು ನುಸುಳಬಹುದಾದ ಚಚ್ಚೌಕ ಬಾಗಿಲು ಅದೂ ಲಾಕ್ ಆಗಿರುತ್ತದೆ. ಅಲೆಕ್ಸ್ಗೆ ಆಕೆಯ ಸಹಯೋಗಿ ಅದನ್ನು ತೋರಿಸಿದಾಗ ಅಲೆಕ್ಸ್ ಹಾರಿಯಿಂದ ಮೀಟಿ ಅದರ ಬಾಗಿಲನ್ನು ತೆಗೆದು ಒಳಗೆ ನುಸುಳಿಹೋಗಿ ನೋಡುತ್ತಾಳೆ. ಅಲ್ಲಿನ ಗೋಡೆಯ ಮೇಲೆ ಮಗುವೊಂದು ಗೀಚಿದ ಭಯಾನಕ ಚಿತ್ರಗಳಿರುತ್ತವೆ. ಬಹುಶಃ ಆ ಮನೆಯ ಒಡತಿ ತನ್ನ ಮಗನಿಗೆ ಹೀಗೆ ಕೂಡಿಟ್ಟು ಶಿಕ್ಷೆ ಕೊಡುತ್ತಿದ್ದಳು ಅಂತ ಆಕೆ ಊಹಿಸುತ್ತಾಳೆ. ಇಡೀ ಮನೆಯಲ್ಲಿ ಕಪಾಟು, ಬಾಗಿಲು ಪ್ರತಿಯೊಂದಕ್ಕೂ ಕೀಲಿಗಳೇ ಕೀಲಿಗಳು. ಅಲೆಕ್ಸ್ಗೆ ತನ್ನ ಬಾಲ್ಯದ ಕಹಿನೆನಪು ಆವರಿಸುತ್ತದೆ. ತನ್ನ ತಂದೆ ತಾಯಿ ಜಗಳಾಡಿ ತಾಯಿ ಸ್ವತಃ ಪೆಟ್ಟು ತಿಂದು ಮಗಳನ್ನು ರಕ್ಷಿಸುತ್ತಿದ್ದು ಅವಳ ಕನವರಿಕೆಯಲ್ಲಿ ಮನಸ್ಸಿನ ಪರದೆಯಲ್ಲಿ ಮೂಡುತ್ತದೆ.
ಇನ್ನೊಂದು ರೆಜಿನಾಳ ಮನೆ. ನೀಲ ಸಮುದ್ರಕ್ಕೆ ಎದುರು ಬೆನ್ನುಮಾಡಿ ನಿಂತ ವಿಶಾಲವಾದ ಬಂಗಲೆ ಅದು. ಎಷ್ಟು ಚೆಂದದ, ಎಂಥ ದೊಡ್ದ ಆಧುನಿಕ ಬಂಗಲೆ. ಆಕೆ ಈ ಮನೆಗಾಗಿ ಜೀವನವಿಡೀ ದುಡಿಯುವುದರಲ್ಲಿಯೇ ಕಳೆಯುತ್ತಾಳೆ. ಆಕೆಯೇ ಹೇಳುವಂತೆ ನಾನು ಈ ಮನೆಗಾಗಿ ಬರೀ ದುಡಿಯುವುದರಲ್ಲಿಯೇ ಜೀವ ಸವೆಸಿದೆ. ಈ ಮನೆಯಲ್ಲಿ ಒಂದು ದಿನವೂ ನಿಶ್ಚಿಂತೆಯಿಂದ ಕೂತುಕೊಳ್ಳಲಿಲ್ಲ. ಅವಳೇ ಬಯಸಿ ಕಟ್ಟಿಕೊಂಡ ಮನೆಯನ್ನು ರೆಜಿನಾ ಕನ್ನಡಿಯಂತೆ ಸ್ವಚ್ಛಗೊಳಿಸಿ ಲಕಲಕಿಸುವಂತೆನೋ ಇಡುತ್ತಾಳೆ ಆದರೆ ಆ ಮನೆಯ ಸುಖವನ್ನು ಅನುಭವಿಸಿರುವುದಿಲ್ಲ. ಮಕ್ಕಳಿಲ್ಲದ ರೆಜಿನಾ ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯಲು ಮೂರು ನಾಲ್ಕು ವರ್ಷದಿಂದಲೂ ಪ್ರಯತ್ನಿಸಿರುತ್ತಾಳೆ. ಇನ್ನೇನು ಮಗು ಸಿಗುತ್ತದೆ ಎನ್ನುವಾಗ ಅವಳ ಸಂಗಾತಿ ಡೈವೋರ್ಸ್ ಕೇಳುತ್ತಾನೆ.
ಇನ್ನೊಂದು ಮನೆಯ ಕತೆ- ಭವ್ಯವಾದ ಮನೆ. ಅಲ್ಲಿ ಬದುಕುವವರು ಮಾತ್ರ ಎರಡು ದ್ವೀಪಗಳಂತೆ ಬದುಕುತ್ತಿರುತ್ತಾರೆ. ಅಕ್ಕಪಕ್ಕದ ಎರಡು ಕೋಣೆಗಳು, ನಡುವೆ ಗೋಡೆ. ಅವಳ ಮಂಚದ ಬದಿಯ ಡ್ರಾಯರಿನಲ್ಲಿ ರೊಮ್ಯಾಂಟಿಕ್ ಕಾದಂಬರಿಗಳು, ಬೇರೆ ಬೇರೆ ನಮೂನೆಯ ಸೆಕ್ಸ್ ಆಟಿಕೆಗಳು. ಅವನ ಕೋಣೆಯಲ್ಲಿ ಅವನ ಡ್ರಾಯರಿನಲ್ಲಿ ಸೆಕ್ಸ್ ಮಾಯ್ಗಝೀನುಗಳು, ಸೆಕ್ಸ್ ಆಟಿಕೆಗಳಿರುವುದನ್ನು ಅಲೆಕ್ಸ್ ಗಮನಿಸುತ್ತಾಳೆ. ಮನೆಮನೆಗೂ ಹೋಗಿ ಮನೆ ಸ್ವಚ್ಛಗೊಳಿಸುವ ಒಬ್ಬ “ಮನೆಗೆಲಸದವಳಾ”ಗಿ ಅಲೆಕ್ಸ್ ಕಣ್ಣಿನಿಂದ ಅನೇಕರ ಬದುಕಿನ ನೋವು ನಲಿವಿನ ರಹಸ್ಯಗಳು ತಪ್ಪಿಸಿಕೊಂಡು ಹೋಗುವುದಿಲ್ಲ. ನೆಲೆಸಲು ನೆಲೆಯೇ ಇಲ್ಲದ ಬಡತನವನ್ನೂ ತನ್ನ ಬದುಕನ್ನೂ ಜಾಗರೂಕತೆಯಿಂದ ನಿಭಾಯಿಸುವ ಅಲೆಕ್ಸ್ ಇವರೆಲ್ಲರ ಮುಂದೆ ಅತ್ಯಂತ ಸುಖಿ ಎನಿಸುತ್ತಾಳೆ,
ಒಮ್ಮೆ ಹಾಲೋವಿಯನ್ ಥ್ಯಾಂಕ್ಸ್ ಗಿವಿಂಗ್ ಆಚರಿಸುವುದಕ್ಕೆ ರೆಜಿನಾ ಎರಡು ದಿನ ಹೊರಗೆ ಹೋಗುತ್ತಿರುವುದಾಗಿ ಹೇಳಿದಾಗ ಅಲೆಕ್ಸ್ ತಾನು ಬಂದು ಸ್ವಚ್ಛಗೊಳಿಸುವುದಾಗಿ ಹೇಳಿರುತ್ತಾಳೆ. ಅಂದರೆ ಮನೆಯ ಮಾಲಕರು ಇಲ್ಲದಿದ್ದಾಗಲೂ ಬಂದು ಅವರ ಮನೆಯನ್ನು ಸ್ವಚ್ಛಗೊಳಿಸ್ತಾರಲ್ಲ ಅದು ನಮ್ಮ ದೇಶದಲ್ಲಿ ಯಾವತ್ತಾದರೂ ಸಾಧ್ಯವೇ? ಮನುಷ್ಯನನ್ನು ಮನುಷ್ಯ ನಂಬುವ ಸ್ಥಿತಿಯೇ ಇಲ್ಲವಾಗುತ್ತಿರುವಾಗ ನಮ್ಮ ನಮ್ಮ ಮನೆಯನ್ನು ಯಾರೋ ಅರ್ಬನ್ ಕ್ಲ್ಯಾಪ್ ಸರ್ವೀಸ್ನವರಿಗೆ ಕೊಟ್ಟು ಹೋಗ್ತೀವಾ? ಮನುಷ್ಯ ಸಂಬಂಧಗಳ ಪ್ರಾಮಾಣಿಕತೆ ಮತ್ತು ನಂಬುಗೆ ನಮ್ಮಲ್ಲಿ ಉಳಿದಿದೆಯಾ? ಸಾವಿರ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.
ನಿಧಾನಕ್ಕೆ ಅಲೆಕ್ಸಳ ಗಂಡ ಬದಲಾಗಲು ಪ್ರಯತ್ನಿಸುತ್ತಾನೆ. ಮಗಳನ್ನು ಚೆನ್ನಾಗಿ ನೋಡಿಕೊಳ್ಳುವ ಅಪ್ಪ. ಅಲೆಕ್ಸಳ ಕ್ಷಮೆ ಕೋರಿ ತನ್ನೊಂದಿಗೆ ಬದುಕಲು ಕರೆದಾಗಲೂ ಅಲೆಕ್ಸ್ ತನ್ನ ವಿಚಾರ ಮತ್ತು ನಿರ್ಧಾರವನ್ನು ಬದಲಿಸುವುದಿಲ್ಲ. ಅವಳನ್ನು ಇಷ್ಟಪಡುವ ಒಬ್ಬ ಗೆಳೆಯ ಅವಳಿಗೆ ಆಶ್ರಯ ಕೊಟ್ಟಿರುತ್ತಾನೆ. ಓಡಾಡಲು ಕಾರನ್ನೂ ಕೊಟ್ಟಿರುತ್ತಾನೆ. ಎಲ್ಲೂ ನೆಲೆ ಇರದಾಗ ತನ್ನಮಗಳಿಗಾಗಿ ಆ ಗೆಳೆಯನ ಮನೆಯಲ್ಲಿ ಆಶ್ರಯಪಡೆದಿರುತ್ತಾಳೆ ಅಲೆಕ್ಸ್. ಅದೇ ಒಂದಿನ ತನ್ನ ಪತಿಯೊಂದಿಗೆ ರಾತ್ರಿ ಕಳೆದುಬಂದ ಅಲೆಕ್ಸಳನ್ನು ಅವಳಿಗೆ ಆಶ್ರಯಕೊಟ್ಟ ಗೆಳೆಯ ಸಹಿಸುವುದಿಲ್ಲ. ನಿಷ್ಠೂರವಾಗಿ ಮನೆಯನ್ನು ತೊರೆಯಲು ಕೇಳುತ್ತಾನೆ. ಆತ ಅವಳನ್ನು ಇಷ್ಟಪಟ್ಟಿದ್ದರೂ ಅಲೆಕ್ಸ್ಗೆ ಅವನು ಇಷ್ಟವಿದ್ದರೂ ಯಾವ ಸಂಬಂಧಕ್ಕೂ ಆಕೆ ಸಿದ್ಧಳಿಲ್ಲ ಎಂದು ಸ್ಪಷ್ಟಪಡಿಸಿರುತ್ತಾಳೆ. ಆತ ಯಾವ ಶರತ್ತನ್ನು ಹಾಕದೇ ಅವಳ ಒಪ್ಪಿಗೆಯ ನಿರೀಕ್ಷೆಯಲ್ಲಿರುವಾಗಲೇ ಎಲ್ಲವೂ ಬಟಾಬಯಲಾಗುತ್ತದೆ. ಗೆಳೆಯನೂ ಮುಖ ತಿರುಗಿಸುತ್ತಾನೆ.
ಕೋರ್ಟಿನಲ್ಲಿ ದೌರ್ಜನ್ಯವನ್ನು ಪುಷ್ಠೀಕರಿಸಲು ಅಲೆಕ್ಸ್ ಪುರಾವೆಯನ್ನು ಕೊಡಬೇಕಾದಾಗ ತಂದೆಯನ್ನು ಸಾಕ್ಷಿ ನುಡಿಯುವಂತೆ ಹೇಳಿದಾಗ ತಂದೆ ನಿರಾಕರಿಸುತ್ತಾನೆ. ಜಗತ್ತಿನ ಎಲ್ಲಾ ಗಂಡಸರೂ ಒಂದೇ. ತಮಗೆ ಬೇಕಾದಾಗ ಬೇಕಾದ್ದನ್ನು ಪಡೆಯಲು ಮಾತ್ರ ಸಿದ್ದರಿರುತ್ತಾರೆ. ಕೊಡುವ ಸಂದರ್ಭ ಬಂದಾಗ ನೆರಳೂ ಸಾಥ್ ಕೊಡುವುದಿಲ್ಲವೆನ್ನುವ ಮಾತು ನೆನಪಾಗುತ್ತದೆ. ಆತ್ಮಗೌರವವನ್ನು ಕಳೆದುಕೊಂಡು ಬದುಕುವುದಕ್ಕಿಂತ ಏಕಾಂಗಿಯಾಗಿ ಬದುಕುವುದು ಕಡುಕಷ್ಟದ್ದಾಗಿದ್ದರೂ ಅದು ಕೊಡುವ ನೆಮ್ಮದಿ ಗೌರವಕ್ಕಾದರೂ ಅನಿವಾರ್ಯದ ಹಾದಿಯನ್ನು ಆರಿಸಿಕೊಳ್ಳುತ್ತಾಳೆ ಅಲೆಕ್ಸ್.
ಪರದೆಯ ಮೇಲೆ ನಡೆಯುವ ಈ ಕತೆಗಳನ್ನು ನಮ್ಮ ಸುತ್ತಮುತ್ತ ಸ್ವತಃ ನಮ್ಮ ನಮ್ಮ ಬದುಕಿನಲ್ಲಿ ಅದೆಷ್ಟು ಬಾರಿ ಕಂಡಿಲ್ಲ. ಮಾನಸಿಕ ಅಸ್ವಸ್ಥ ತಾಯಿಯನ್ನು ಹೆಜ್ಜೆಹೆಜ್ಜೆಗೂ ಕಾಯುವ ಕಾಪಾಡುವ ಅಲೆಕ್ಸಳಂಥ ಮಗಳು, ಸಣ್ಣ ಪುಟ್ಟ ವಿಷಯಗಳನ್ನು ಸೂಕ್ಷ್ಮವಾಗಿ ಗ್ರಹಿಸುವ, ಅಂತಃಕರಣದ ಹೆಣ್ಣುಮಗಳು ಪ್ರತಿಯೊಂದು ಮನೆಯಲ್ಲಿಯೂ ಇರುತ್ತಾಳೆ. ಇಡೀ ದಿನ ಮನೆಗೆಲಸದವಳಂತೆಯೇ ದುಡಿಯುವ ಅದೆಷ್ಟು ಗ್ರಹಿಣಿಯರಿಗೆ ತಮ್ಮ ಕನಸುಗಳ ಬಗ್ಗೆಯೇ ಮರೆತುಹೋಗಿರಬಹುದು. ಕಪಾಟಿನಲ್ಲಿ ಅರ್ಧ ಹೆಣೆದಿಟ್ಟ ಕಸೂತಿ, ಅರ್ಧ ಹೆಣೆದಿಟ್ಟ ಉಲ್ಲನ್ ಟೋಪಿ, ಸ್ಕಾರ್ಫು, ಬರೆದಿಟ್ಟುಕೊಂಡ ರೆಸಿಪಿ ಪುಸ್ತಕವನ್ನು ಮಕ್ಕಳು ಎಲ್ಲಿಯೋ ಬಿಸಾಕಿರಬಹುದು, ಜೀವದ ತುಣುಕುಗಳಂತೆ ಜತನದಿಂದ ಕಾಪಿಟ್ಟುಕೊಂಡಿದ್ದ ಹಳೆಯ ಪತ್ರಗಳನ್ನು ಹೊರತೆಗೆದು ಓದಬೇಕೆಂದಿದ್ದು ಕಳೆದೇ ಹೋಗಿರಬಹುದು. ಕಾಲು ಶತಮಾನವಾದರೂ ಮಾಡಬೇಕೆಂದ ಕೆಲಸಗಳೇ ಸಾಧ್ಯವಾಗಿಲ್ಲ. ಹಳೇ ಡೈರಿಯ ಅಕ್ಷರಗಳು ಅಳಿಸಿವೆಯೋ ಇನ್ನೂ ಇವೆಯೋ ಗೊತ್ತಿಲ್ಲ. ಈಗ ಅವಳ ಡ್ರಾಯರಿನಲ್ಲಿ ಕತೆ ಪುಸ್ತಕಗಳ ಬದಲು ಈಗ ಬೀಪಿ ಮಾತ್ರೆಗಳು ತುಂಬಿರಬಹುದು. ಎರಡು ಜಡೆಯ ಹುಚ್ಚೂ ಈಗ ಹೋಗಿದೆ. ರಾಶಿ ಕೂದಲು ಮಾಯವಾಗಿ “ಪೋನಿ” ಮಾತ್ರ ಉಳಿದಿದೆ. ಮಾಲೆಕಟ್ಟುವ ಹುರುಪು ಹೋಗಲಿ ಹೂಮುಡಿಯುವುದನ್ನೇ ಮರೆತಂತಿದೆ. ಯಾರಾದರೂ ಬರಲಿ ಬಿಡಲಿ ಚೆಂದವಾಗಿ ಡ್ರೆಸ್ ಮಾಡಿಕೊಳ್ಳಲೂ ಸೋಮಾರಿತನವಾಗಿ ನೈಟಿಯೇ ಅವಳ ಆರಾಮದಾಯಕ ಉಡುಪು ನೈಟಿಯೇ ಸರ್ವಸ್ವದಂತೆ ಅದರಲ್ಲಿಯೇ ಉಳಿದುಬಿಟ್ಟಿದ್ದಾಳೆ ಅಂತ ಆಗೀಗ ಅನಿಸುವುದಿಲ್ಲವೇ ?
ಅಲೆಕ್ಸ್ ಕಾರಿನಲ್ಲಿ ಜಿಗಿದುಕೂತು ಕಾರನ್ನು ಓಡಿಸಿಕೊಂಡು ಮನೆಯ ಕೆಲಸಕ್ಕೆ ಹೋಗುವಾಗ ಅವಳಷ್ಟು ಸ್ವಾತಂತ್ರ್ಯ ಅವಳಷ್ಟು ಆತ್ಮವಿಶ್ವಾಸ ನನಗಿನ್ನೂ ಬಂದೇ ಇಲ್ಲವಲ್ಲ ಅಂದುಕೊಳ್ಳುತ್ತೇನೆ. ಹತಾಶೆಯಲ್ಲಿಯೂ ಅದನ್ನು ಅದುಮಿಡುವ ಆಕೆಯ ಸಮಸ್ಥಿತಿ, ಅವಮಾನಗಳನ್ನೂ, ಸೋಲನ್ನೂ ಸಹಜವೆಂಬಂತೆ ಸ್ವೀಕರಿಸುವ ರೀತಿ ಇನ್ನೂ ಕಲಿಯಬೇಕಿದೆ. ಕೊನೆಗೂ ಅಲೆಕ್ಸ್ ಮಿಸ್ಸೌಲಾದ ಮೊಂಟಾನಾ ವಿಶ್ವವಿದ್ಯಾಲಯದಲ್ಲಿ ಶಾಲೆಗೆ ಹಾಜರಾಗಲು ಲ್ಯಾಂಡ್ ಪೆಲ್ ಗ್ರಾಂಟ್ ಪಡೆದಾಗ ಕತೆ ಕೊನೆಗೊಳ್ಳುತ್ತದೆ. ಅವಳು ಅಂತಿಮವಾಗಿ ತನ್ನ ಸ್ನಾತಕೋತ್ತರ ಪದವಿಯನ್ನು ಇಂಗ್ಲಿಷ್‌ನಲ್ಲಿ ಪಡೆಯುತ್ತಾಳೆ. ಅಲೆಕ್ಸ್ ಪಾತ್ರದಲ್ಲಿ ಮಾರ್ಗ್ರೆಟ್ ಕ್ವಾಲೆ ಅಭಿನಯ ಸಶಕ್ತವಾಗಿದೆ. ನಿಕ್ ರಾಬಿನ್‍ಸನ್( ಪತಿ), ರೇಮಂಡ್ ಅಬ್ಲಾಕ್ (ಗೆಳೆಯ), ಆಂಡಿ ಮಾಕ್‍ಡಾವೆಲ್ (ತಾಯಿ ಪೌಲಾ) ಅಭಿನಯವೂ ಸಹಜವಾಗಿದೆ. ಸರಣಿ ಮುಕ್ತಾಯದ ಚಿತ್ರಣವನ್ನು ವೀಕ್ಷರಿಗೆ ಬಿಟ್ಟುಬಿಡುತ್ತದೆ: ಮೊಂಟಾನಾ ಶಿಖರದ ತುತ್ತತುದಿಗೇರುವ ಅಲೆಕ್ಸ್ ಳಿಗೆ ಅವಳ ಕನಸಿನ ಮನೆಯೂ ನೆಲೆಯೂ ಸಿಕ್ಕಿರಬಹುದು, ಆ ಅಲೆಕ್ಸಳನ್ನು ನೋಡುವುದಕ್ಕಾಗಿಯೇ ನಾನು ಸಂಜೆಗಾಗಿ ಕಾಯುತ್ತೇನೆ. ಕನಸುಗಳು ನಕ್ಷತ್ರದಂತೆ ಸುಟ್ಟುಹೋದುದಕ್ಕಾಗಲಿ, ಆಯುಷ್ಯದ ಮರುಭೂಮಿಯಲ್ಲಿ ಹರಿದ ನದಿ ಕಳೆದುಹೋದದ್ದಕ್ಕಾಗಲಿ ಅಳಬಾರದು. ಕನ್ನಡಿಯನ್ನು ಕನ್ನಡಿಯಂತೆಯೇ, ಬಿಸಿಲುಕೋಲನ್ನು ಬಿಸಿಲುಕೋಲಂತೆಯೇ ಕಾಣಬೇಕಿದೆ. ಕನಸುಗಳನ್ನು ತುಂಬಿಕೊಂಡ ಹಡಗಿನ ಮಾಳಿಗೆಯಲ್ಲಿ ಮಲಗಿಕೊಂಡು ನೀಲಗಡಲಿನಲ್ಲಿ ತೇಲುವುದನ್ನು ಕಲ್ಪಿಸಿಕೊಳ್ಳುತ್ತ ನಾನೂ ನಿದ್ದೆಗಿಳಿಯುತ್ತೇನೆ.
ಇದನ್ನೂ ಓದಿ : ಮೀಟುಗೋಲು : ‘ದೊಡ್ಡ ದೊಡ್ಡ ಬೋರ್ಡುಗಳು ನಮ್ಮ ಪಾಕೀಟುಗಳನ್ನು ಅವಲಂಬಿಸಿರುತ್ತವೆಯೇ ಹೊರತು ನಮ್ಮನ್ನಲ್ಲ’