AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cinema : ‘ದೊಡ್ಡ ದೊಡ್ಡ ಬೋರ್ಡುಗಳು ನಮ್ಮ ಪಾಕೀಟುಗಳನ್ನು ಅವಲಂಬಿಸಿರುತ್ತವೆಯೇ ಹೊರತು ನಮ್ಮನ್ನಲ್ಲ’

Grocery Stores: “ಈ ವಸ್ತು ನಿಮ್ಮ ಬಳಿ ಇದ್ದರಷ್ಟೆ ನಿಮಗೆ ಬೆಲೆ” ಎನ್ನುವ ಭ್ರಮೆ ಹುಟ್ಟಿಸುತ್ತ, ಮನುಷ್ಯರನ್ನು ಕೇವಲ ಗ್ರಾಹಕರಂತೆ ಪರಿಗಣಿಸುವ ಮಾರುಕಟ್ಟೆ ಆಧಾರಿತ ವ್ಯವಹಾರಕ್ಕೂ, ಬೇಕಾದಾಗಲೆಲ್ಲ ಮನೆಯ ಬಾಗಿಲಿಗೆ ಸೇವೆ ಒದಗಿಸಿ “ಈಗ ಹಣವಿಲ್ಲ ನಾಳೆ ಕೊಡುವೆ” ಎಂದಾಗಲೂ “ಪರ್ವಾಗಿಲ್ಲ ನಿಧಾನ ಕೊಡಿ” ಎನ್ನುವ ಸಂಬಂಧ ಸೇತುವೆ ಬೆಸೆಯುವ ಪುಟ್ಟ ಪುಟ್ಟ ಅಂಗಡಿಗಳಿಗೂ ಅಜಗಜಾಂತರ. - ದೀಪ್ತಿ ಭದ್ರಾವತಿ

Cinema : ‘ದೊಡ್ಡ ದೊಡ್ಡ ಬೋರ್ಡುಗಳು ನಮ್ಮ ಪಾಕೀಟುಗಳನ್ನು ಅವಲಂಬಿಸಿರುತ್ತವೆಯೇ ಹೊರತು ನಮ್ಮನ್ನಲ್ಲ’
ಲೇಖಕಿ ದೀಪ್ತಿ ಭದ್ರಾವತಿ
ಶ್ರೀದೇವಿ ಕಳಸದ
|

Updated on:Sep 29, 2021 | 4:29 PM

Share

Cinema : ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣಕ್ಕೆ ಓಡುತ್ತಲೇ ಇರುತ್ತೇವೆ, ಇದ್ದೇವೆ. ಆದರೂ ಬಿಡುವು ಮಾಡಿಕೊಂಡು ಒಂದು ಸಿನೆಮಾ ನೋಡುವ ಮನಸ್ಸು ಮಾಡುತ್ತೇವೆ; ಅರೆ! ಇಂಥದೇ ಒಂದು ಪಾತ್ರ, ಇಂಥದೇ ಒಂದು ಸನ್ನಿವೇಶ, ಇಂಥದೇ ಒಂದು ತಂತುವಿನೊಂದಿಗೆ ಜೀವಿಸುತ್ತಿದ್ದೇವಲ್ಲ ಎನ್ನಿಸಲಾರಂಭಿಸುತ್ತದೆ. ಎದುರಿನ ಪರದೆಯೊಳಗಿನ ಅಂತಃಸಾರ ಎದೆಮೆದುಳಿಗಿಳಿದು ಮೆಲ್ಲನೆ ಅಲೆಗಳನ್ನು ಹರಡುತ್ತದೆ. ಇಳಿದದ್ದು ಕಾಡದೇ ಇರದು, ಕಾಡುವುದು ಸುಮ್ಮನಿರಲು ಬಿಡದು. ಹಿಂಜಾಡಿ ಹಿಂಜಾಡಿ ಏನೇನೋ ನೆನಪುಗಳನ್ನುಕ್ಕಿಸುತ್ತದೆ, ಪ್ರಶ್ನೆಗಳನ್ನೆಬ್ಬಿಸುತ್ತದೆ. ಏಕೆಂದರೆ ಕಲೆ ಎನ್ನುವುದು ‘ರುಚಿಯವಿಚಾರ’, ನಮ್ಮ ಭಾವಭಿತ್ತಿಯನ್ನು ಮೀಟಿ, ಮೀರಿ ಪಾಕಗಟ್ಟುವ ಆತ್ಮಾವಲೋಕನದ ಪ್ರಕಾರ. ಈ ಪ್ರಕ್ರಿಯೆಯಲ್ಲಿ ನಿಮ್ಮನ್ನು ನೀವು ಕೆದಕಿಕೊಳ್ಳುತ್ತ ಅರಿವಿಲ್ಲದೆ ನೀವೇ ಒಂದು ಪಾತ್ರವಾಗಿಯೂ ನಿಂತುಬಿಡಬಹುದು! ಅಂತಹ ಅಭಿವ್ಯಕ್ತಿಗೊಂದು ವೇದಿಕೆಯಾಗಿ ‘ಟಿವಿ9 ಕನ್ನಡ ಡಿಜಿಟಲ್ : ಮೀಟುಗೋಲು’ ನೀವು ಬರೆದಾಗೆಲ್ಲ ಇದು ಪ್ರಕಟವಾಗುತ್ತದೆ. 

ನೀವು ನೋಡಿದ ಯಾವುದೇ ಭಾಷೆಯ ಸಿನೆಮಾ ಮತ್ತು ನಿಮ್ಮ ಬದುಕಿನ ಅನುಭವ ಪರಸ್ಪರ ಮಿಳಿತಗೊಂಡು ವಾಸ್ತವದ ಬಗ್ಗೆ ಯೋಚಿಸುವಂತೆ ಮಾಡಿದ ರೀತಿಯನ್ನು ಬರಹದ ಮೂಲಕ ಕಟ್ಟಿಕೊಡಬಹುದು. ಪದಮಿತಿ 500-600. ನಿಮ್ಮ ಸ್ಥೂಲ ಪರಿಚಯ, ಭಾವಚಿತ್ರವೂ ಇರಲಿ. ಮೇಲ್ :  tv9kannadadigital@gmail.com 

ಲೇಖಕಿ ದೀಪ್ತಿ ಭದ್ರಾವತಿ ಅವರು ಇತ್ತೀಚೆಗೆ ನೋಡಿದ ಸಿನೆಮಾ, ಪಿ. ಶೇಷಾದ್ರಿ ಅವರ ನಿರ್ದೇಶನದ ‘ಭಾರತ್ ಸ್ಟೋರ್ಸ್’. ಅವರನ್ನು ಇದು ತಾಕಿದ ಪರಿ ಮತ್ತದರಿಂದ ಬಿಚ್ಚಿಕೊಂಡ ವಾಸ್ತವಾಂಶಗಳು ಮನಸ್ಸನ್ನು ಮೃದುಗೊಳಿಸದೇ ಇರವು.

*

‘ಬೇಕಾದ್ದು ಬೇಡವಾದ್ದು ಎಲ್ಲಾ ತಗೋತೀರಿ. ತಲೆಮೇಲೆ ಸಾಲದ ಹೊರೆ ಹೊತ್ಕೋತೀರಿ.’ -ಗೋವಿಂದಶೆಟ್ಟಿ

ಮೊನ್ನೆ ಹೀಗೆ ಯೂ ಟ್ಯೂಬಿನಲ್ಲಿ ‘ಭಾರತ್ ಸ್ಟೋರ್ಸ್’ ಎನ್ನುವ ಕನ್ನಡ ಸಿನೆಮಾ ನೋಡುತ್ತಿದ್ದೆ. ಕಾಲಘಟ್ಟದಡಿಯಲ್ಲಿ ಕಳೆದುಹೋದ ಪುಟ್ಟ ಕಿರಾಣಿಯಂಗಡಿಯೊಂದರ ಕತೆ ಅದು. ಅದು ಬರಿಯ ಅಂಗಡಿಯೊಂದರ ಕತೆಯಲ್ಲ ಅಲ್ಲಿ ಕಳೆದುಹೋಗುವುದು ಬರೀ ದಿನಸಿಯ ಪಟ್ಟಿಯೂ ಅಲ್ಲ. ಅದರ ಮಾಲೀಕ, ಅವನ ಜೊತೆಗಿನ ನೂರಾರು ಸಂಬಂಧಗಳು. ಹತ್ತೆಂಟು ವಿಲೇವಾರಿಗಳು. ಶಾಶ್ವತ ಉಳಿದು ಬಿಡುವ ಹತಾಶೆ. ಮುಂದೇನು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ದೊರೆಯದೆ ಹೋಗುವ ಮೌನ. ಹೀಗೆ ಹತ್ತೆಂಟು ವಿಚಾರಗಳು ನಿರಂತರ ಕಾಡಿ ಕೊನೆಗೂ ಇಂತಹದ್ದೊಂದು ಬರಹ ಬರೆಯಬೇಕು ಎನ್ನುವಲ್ಲಿಗೆ ನನ್ನ ತಂದು ನಿಲ್ಲಿಸಿದ್ದು ಸುಳ್ಳಲ್ಲ. ಒಂದು ಒಳ್ಳೆಯ ಸಿನೆಮಾ ಮಾಡುವ ಪರಿಣಾಮವೇ ಅಂಥದ್ದು. ಏನನ್ನೋ ಹೇಳುತ್ತ ಮತ್ತೇನನ್ನೋ ಮುಟ್ಟುತ್ತ ಹೋಗುತ್ತದೆ. ಮುಗಿದ ಮೇಲೆ ಆರಂಭವಾಗುತ್ತದೆ. ಅಂತೆಯೇ ನನಗಾದದ್ದು ಕೂಡ.

ಗೋವಿಂದಶೆಟ್ಟರು ಎನ್ನುವ ವ್ಯಕ್ತಿಯೊಬ್ಬ ಪುಟ್ಟ ಕಿರಾಣಿ ಅಂಗಡಿಯೊಂದರ ಮಾಲೀಕ. ಆ ಅಂಗಡಿ ಆ ಕಾಲಕ್ಕೆ ಎಷ್ಟು ಹೆಸರುವಾಸಿ ಎಂದರೆ ಅಲ್ಲಿನ ಬಸ್‌ ಸ್ಟಾಪ್‌ ಒಂದಕ್ಕೆ ಅದರದ್ದೇ ಹೆಸರು ಕೂಡ ಅಂಟಿಕೊಂಡಿರುತ್ತದೆ. ಅದಾದ ನಂತರ ಕಾಲದ ಚಕ್ರ ಉರುಳಿ ಗ್ರಾಹಕರ ಕೊಳ್ಳುವ ಆಶಯ ಆಸಕ್ತಿಗಳು ಬದಲಾಗಿ ಅವರ ಅಂಗಡಿ ಔಟ್​ಡೇಟೆಡ್ ಅನ್ನಿಸಿ ಕಣ್ಮರೆಯಾಗುತ್ತದೆ. ಅವರಿಂದ ಸಹಾಯ ಪಡೆದ ವ್ಯಕ್ತಿಯೊಬ್ಬರ ಮಗಳು ಅವರನ್ನು ಹುಡುಕಿ ಅವರ ಹಣವನ್ನು ವಾಪಾಸ್‌ ಕೊಡುವ ಆಶಯದಿಂದ ಅಮೆರಿಕಾದಿಂದ ಊರಿಗೆ ಬರುವ ಘಟನೆಯಿಂದ ಈ ಸಿನೆಮಾ ಆರಂಭಗೊಂಡು ಮುಂದುವರೆಯುತ್ತ ಹೋಗುತ್ತದೆ.

ನಾಲ್ಕೈದು ಉದ್ದುದ್ದ ರಸ್ತೆಗಳನ್ನು ಹೊಂದಿರುವ ಅತ್ತ ಪೂರ್ತಿ ನಗರವೂ ಅಲ್ಲದ ಇತ್ತ ಪೂರ್ತಿ ಹಳ್ಳಿಯೂ ಅಲ್ಲದೆ ತ್ರಿಶಂಕುವಿನ ಅವತಾರದಲ್ಲಿರುವ ಭದ್ರಾವತಿಯಲ್ಲಿಯಲ್ಲಿ ನಾನು ಬದುಕು ಕಳೆಯುತ್ತಿದ್ದೇನೆ. ಎತ್ತಿಂದ ಎತ್ತ ಹೋದರೂ ಅವೇ ಅವೇ ರಸ್ತೆಗಳು. “ಥೋ” ಈ ಊರಿನಲಿ ಇನ್ನು ಎಷ್ಟು ದಿನ ಇರುವುದಪ್ಪ ಎನ್ನಿಸಿ ಬಿಡುತ್ತದೆ. ಹಾಗಂತ ಬಿಟ್ಟು ಎಲ್ಲಿಗಾದರೂ ಹೋಗಿ ಬಿಡುವ ಎಂದುಕೊಂಡರೆ “ಹೋಗುವುದು ಎಲ್ಲಿಗೆ” ಎಂದು ಗೊತ್ತಾಗದೆ ಈ ಊರೇ ಅರಾಮ ಎನ್ನಿಸಿ ಸುಮ್ಮನಾಗಿಬಿಡುತ್ತೇನೆ.

ಇಂತಹ ಊರಿನಲ್ಲಿ ಆಗೀಗ ಸಂಭವಿಸುವ ಹೊಸ ವಿಚಾರಗಳು ಎಂದರೆ ಹೊಸದಾಗಿ ಆರಂಭವಾಗುವ ಸಣ್ಣ ಪುಟ್ಟ ಅಂಗಡಿಗಳು. ಯಾವುದೋ ಬಟ್ಟೆ ಮೇಳ. ಮತ್ಯಾವುದೋ ಜುಮುಕಿ ಲೋಲಾಕಿನ ಸಪ್ತಾಹಗಳು ಅದು ಬಿಟ್ಟರೆ ತಿಂಗಳಿಗೊಮ್ಮೆ ವಾರಕ್ಕೊಮ್ಮೆ ನಡೆಯುವ ಸಂತೆಗಳು ಅದು ಬಿಟ್ಟರೆ ಇಲ್ಲಿನ ಬದುಕು ಕೊಂಚವೂ ಅಲ್ಲಾಡದ ಹಾಗೆ ಸ್ತಬ್ಧ ಚಿತ್ರದ ಹಾಗೆ ನಡೆದು ಹೋಗುತ್ತದೆ. ಏಕತಾನತೆಯೊಂದು ಬೇಡವೆಂದರೂ ಬಂದು ಮಾತಾಡಿಸಿ ಹೋಗುತ್ತದೆ.

ಹೀಗಾದಾಗೆಲ್ಲ ಪಕ್ಕದ ಶಿವಮೊಗ್ಗೆಗೆ ಹೋಗಿ ಒಂದಿಷ್ಟು ತಿರುಗಿ ದೊಡ್ಡ ದೊಡ್ಡ ಮಳಿಗೆ ಸುಖಾಸುಮ್ಮನೆ ಹೊಕ್ಕು ವಾಪಾಸ್ಸಾಗುವುದು ಇಲ್ಲಿನ ಬಹುತೇಕರ ರೂಢಿಗಳಲ್ಲಿ ಒಂದು ಅದಕ್ಕೆ ನಾನು ಕೂಡ ಹೊರತಲ್ಲ. ಆದರೆ ಅದಕ್ಕೂ ಸಣ್ಣಗೆ ಕಲ್ಲು ಬಿದ್ದದ್ದು ಇತ್ತೀಚಿನ ದಿನಗಳಲ್ಲಿ “ಅಯ್ಯೋ ಎಲ್ಲ ಇಲ್ಲೇ ಸಿಗತ್ತಲ್ಲ ಮತ್ತೆ ಎಂತಕ್ಕೆ ಅಲ್ಲಿಗೆ ಹೋಗುವುದು” ಎನ್ನುವ ರಾಗ ಶುರುವಾಗಿದ್ದು ಕೂಡ ಈಗೀಗಲೇ ಕಾರಣವಿಷ್ಟೆ.

ಮೊದಲೆಲ್ಲ ದೊಡ್ಡ ದೊಡ್ಡ ಊರುಗಳಿಗಷ್ಟೆ ಸೀಮಿತವಾಗಿದ್ದ ಮಾಲ್‌ಗಳು ಷೋರೂಂಗಳು ಸೂಪರ್‌ ಮಾರ್ಕೆಟ್ಟುಗಳು  ಈಗ್ಗೆ ಕೆಲವು ವರ್ಷಗಳ ಹಿಂದೆ ದಬದಬನೆ ಸಣ್ಣ ಪುಟ್ಟ ಊರುಗಳನ್ನು ಆಕ್ರಮಿಸಿಕೊಳ್ಳತೊಡಗಿದವು. ಚಿತ್ತಾಕರ್ಷಕ ಬೋರ್ಡುಗಳ ಜಾಹೀರಾತುಗಳು ಉಡುಗೊರೆಗಳು ನಯವಿನಯದ ಮಾತುಗಳು ಬಹುಶಃ ನಾವುಗಳು ಕಣ್ಣು ಅಗಲಿಸಿ ದೂರದಿಂದ ನೋಡುತ್ತಿದ್ದ ದೃಶ್ಯಗಳೆಲ್ಲ ನಮ್ಮ ರಸ್ತೆಗಳಲ್ಲಿಯೂ ಕಾಣತೊಡಗಿದಾಗ ಸಹಜವಾಗಿಯೇ ಬಹುತೇಕರು ಅದರ ಮೋಡಿಗೆ ಒಳಗಾದವರ ಹಾಗೆ ವರ್ತಿಸತೊಡಗಿದರು. ಅದರಲ್ಲಿ ನಾನು ಒಬ್ಬಳು.

ನನಗೆ ಮಾಲ್‌ಗಳಿಗೆ ನುಗ್ಗಿ ಕಂಡಿದ್ದೆಲ್ಲ ಖರೀದಿಸುವ ಹುಮ್ಮಸ್ಸು ಇಲ್ಲದಿದ್ದರೂ ಬೇಸರ ಬಂದಾಗಲೆಲ್ಲ ತಳ್ಳುಗಾಡಿಯ ತಳ್ಳುತ್ತ ಅರ್ಧಗಂಟೆ ಅದರೊಳಗೆ ತಿರುಗಿ ಬೇಕಾದ್ದು ಬೇಡದ್ದು ನೋಡಿ ಹೆಂಗಸರ ಸ್ವಾತಂತ್ರ್ಯ ಎನ್ನುವುದು ಇಲ್ಲೇ ಇದೆ ಎಂದುಕೊಳ್ಳುತ್ತ ಅನುಭವಿಸುತ್ತೇನೆ. ಅದು ನಿಜಕ್ಕೂ ಹೌದು. ನೀವು ಏನು ಕೊಂಡಿರಿ ಎಂದು ಅಲ್ಲಿ ಯಾರು ಕೇಳುವುದಿಲ್ಲ. ಏನು ಬೇಕು ಅಂತಲೂ ಯಾರೂ ವಿಚಾರಿಸುವುದಿಲ್ಲ. ಯಾರೂ ಯಾರತ್ತ ಗಮನ ಹರಿಸುವುದು ಇಲ್ಲ. ನೀವು ಮನುಷ್ಯ ಸಹಜ ಹಕ್ಕನ್ನು ಅನುಭವಿಸುತ್ತ ಅರಾಮದಲ್ಲಿ ತಿರುಗಬಹುದು. ಹೀಗಾಗಿಯೆ ಹನ್ನೆರಡು ವರ್ಷಗಳಿಂದ ಪ್ರತಿ ತಿಂಗಳು ಕೊಟ್ಟ ಪಟ್ಟಿಗೆ ಅನುಸಾರ ದಿನಸಿ ಕಟ್ಟಿ ಆಟೋದಲ್ಲಿ ತಾನೇ ಹೇರಿ ಕಳುಹಿಸುತ್ತಿದ್ದ ಮಾರವಾಡಿ ಅಂಗಡಿ ಬೇಡ ಅನ್ನಿಸಿದ್ದು ಅದೇ ಕಾರಣಕ್ಕೆ. ಆವರೆಗೂ ಅವರು ಕಳಿಸುತ್ತಿದ್ದ ವಸ್ತುಗಳು ಸೂಪರ್‌ ಇವೆ ಎನ್ನಿಸುತ್ತಿತ್ತಾದರೂ ಆ ನಂತರ ಅವು ಸರಿ ಇಲ್ಲ ಇದಕ್ಕಿಂತ ಒಳ್ಳೆಯದು ಸಿಗುತ್ತದೆ ಎನ್ನಿಸತೊಡಗಿದ್ದು ಆಗಲೇ. ಸರಿ ನನ್ನ ವರಾತ ಶುರುವಾಗುವುದಕ್ಕೆ ತಡವೇನು ಆಗಲಿಲ್ಲ. “ಇದಕ್ಕೆ ತುಂಬಾ ರೇಟು ಹಾಕಿದ್ದಾರೆ, ರವೆ ಏನೇನು ಚನ್ನಾಗಿಲ್ಲ. ಅವಲಕ್ಕಿ ಮುಗ್ಗಲು. ಅಕ್ಕಿಯಂತು ಎಂತ ಕಾಸ್ಟ್ಲಿ” ಹೀಗೆ ಹತ್ತಾರು ಜಾರಿಕೊಳ್ಳುವುದಕ್ಕೆ ನೂರು ನೆವ.

ಕೊನೆಗೆ ಕಾರಣಗಳು ಜಾಸ್ತಿಯಾಗಿ ಇದಕ್ಕೆಲ್ಲ ಒಂದು ಕೊನೆ ಕಾಣಿಸಲೇಬೇಕು ಎನ್ನುವ ಹಟ ತೊಟ್ಟು ಆ ಅಂಗಡಿಯ ವ್ಯವಹಾರದಿಂದ ನುಣುಚಿಕೊಳ್ಳುವುದಕ್ಕೆ ಹೆಚ್ಚೇನು ಹೊತ್ತು ಹಿಡಿಯಲಿಲ್ಲ. “ಅವರು ನನ್ನ ಮಾವನ ಬಳಿಯಲ್ಲಿ ಒಂದೆರಡು ಬಾರಿ ಹೇಳಿ ಕಳಿಸಿದರೂ ಕೂಡ” ನನ್ನದು ಮತ್ತದೇ ರಾಗ. ಕೊನೆಗೆ ನನ್ನ ಗೆಲುವು ಮೇಲಾಗಿ ಮಾಲ್‌ಗಳಲ್ಲಿ ನಾನು ಗಾಡಿ ತಳ್ಳುತ್ತ ಅಲೆಯುವುದು ಖಾಯಂ ಆಯಿತು. ಆದರೆ ವಿಚಿತ್ರ ಎಂದರೆ ಈ ಎಲ್ಲವೂ ತಿರುಗುಮುರುಗಾಗುವುದಕ್ಕೆ ಹೆಚ್ಚು ದಿನಗಳೇನು ಉಳಿಯಲಿಲ್ಲ. ಎಲ್ಲವೂ ಸರಿ ಇದೆ ಎಂದುಕೊಳ್ಳುವಾಗಲೇ ಕೋವಿಡ್ ಎನ್ನುವ ಪುಟ್ಟ ವೈರಾಣುವೊಂದು ಬಂದು ದೊಡ್ಡ ದೊಡ್ಡ ಭ್ರಮೆಗಳನ್ನು ಕೆಡವಿಹಾಕಿದ್ದು. ಲಾಕ್‌ ಡೌನು, ಸೀಲ್‌ ಡೌನು ಏನೇನೋ ಗೊತ್ತಿಲ್ಲದ ಪದಗಳೆಲ್ಲ ಗಾಬರಿ ಹುಟ್ಟಿಸಿದ್ದು. ರಸ್ತೆಗಳಲ್ಲಿ ಅರಾಮು ಅಲೆಯುತ್ತಿದ್ದವರೆಲ್ಲ ಬೆಪ್ಪಾಗಿ ಮೂಲೆಯಲ್ಲಿ ಕೂತದ್ದು.

Meetugolu Deepthi Bhadravathi Bharath Stores P Sheshadri

ಸೌಜನ್ಯ : ಅಂತರ್ಜಾಲ

ಆಗಿನ ಪರಿಸ್ಥಿತಿಗಳು ಪ್ರತಿಯೊಬ್ಬರ ಅರಿವಿನಲ್ಲಿ ಇರುವುದರಿಂದ ಮತ್ತೆ ನಾನದನ್ನು ಇಲ್ಲಿ ಹೇಳುವುದಿಲ್ಲ. ಆದರೆ ಆಗಲೇ ನೋಡಿ ನನ್ನ ಮಾಲ್‌ನ ಸಂಬಂಧ ಶಿಥಿಲಗೊಂಡದ್ದು. ಲಾಕ್‌ ಡೌನ್‌ ಆರಂಭವಾದ ಮೇಲೆ ಅಂಗಡಿ ಮುಂಗಟ್ಟುಗಳು ಕೇವಲ ಎರಡೋ ಮೂರೋ ಗಂಟೆಯಷ್ಟೆ ತೆಗೆಯುತ್ತಿದ್ದವು. ಅದರ ಮುಂದೆ ಉದ್ದುದ್ದ ಹನುಮಪ್ಪನ ಬಾಲದಂತಹ ಸಾಲುಗಳು. ಇನ್ನೇನು ಯುದ್ಧ ಆರಂಭವಾಗಲಿದೆ ಆ ನಂತರ ತಿನ್ನುವುದಕ್ಕೆ ಏನು ಸಿಕ್ಕುವುದಿಲ್ಲ ಎಂಬಂತೆ ಖರೀದಿಗೆ ಮುಗಿಬಿದ್ದ ಜನ. ಇದರ ನಡುವೆ ನಮ್ಮ ಮನೆಗೆ ತಿಂಗಳ ರೇಷನ್‌ ತರುವುದು ಸಾಧ್ಯವಿರಲಿಲ್ಲ. ಮನೆಯ ಮೇಲುಸ್ತುವಾರಿಯನ್ನು ಸಾರಾಸಗಟುವಹಿಸಿಕೊಂಡಿರುವ ನನಗೆ ಕೋವಿಡ್ ವಾರಿಯರ್‌ ನ ಬಿರುದು ಸಿಕ್ಕು ಬದುಕು ಹೈರಾಣಾಗಿತ್ತು. ಒಂದೆಡೆ ಕೋವಿಡ್ ಅಂಟಿಕೊಂಡರೆ ಅನ್ನುವ ಭಯ, ಮತ್ತೊಂದೆಡೆ ಮನೆಯವರಿಗೆ ದಾಟಿಸಿದರೆ ಎನ್ನುವ ಸಂಕಟ ಅದರೊಂದಿಗೆ ಖಾಲಿಯಾಗುತ್ತಿರುವ  ಅಡುಗೆ ಮನೆಯ ಡಬ್ಬಿಗಳು. ಬಹಶಃ ಜಗತ್ತಿನ ಎಲ್ಲ ಸಮಸ್ಯೆಗಳಿಗಿಂತಲೂ ಮನೆ ಮಂದಿಯ ಹೊಟ್ಟೆ ತುಂಬಿಸುವುದು ನನಗಾಗ ದೊಡ್ಡದಾಗಿ ಕಂಡಿದ್ದು ಸುಳ್ಳಲ್ಲ.

ನಮ್ಮ ಮನೆಯಿಂದ ನೂರು ಅಡಿ ದೂರದಲ್ಲಿರುವ ನಾನು ವಾರಕ್ಕೊಮ್ಮೆಯಾದರೂ ಭೇಟಿ ಕೊಡುತ್ತಿದ್ದ ದೊಡ್ಡ ದಿನಸಿ ಮಳಿಗೆಯಲ್ಲಿ ಮನೆ ಬಾಗಿಲಿಗೆ ಸೇವೆ ಒದಗಿಸುವ ಯಾವ ವ್ಯವಸ್ಥೆಯೂ ಇಲ್ಲ. ನಿಗದಿತ ಅವಧಿಯೊಳಗೆ ನಾನು ಅಲ್ಲಿಯ ಎಲ್ಲ ನಿಯಮಗಳಿಗೆ ಅನುಸಾರ ಹೋಗುವುದು ಸಾಧ್ಯವಿಲ್ಲ. ಇನ್ನು ಮನೆಯ ಸದಸ್ಯರು ನನ್ನ ಕರಾರುವಾಕ್​ತನಗಳಿಗೆ ಹೆದರಿ ಇದ್ಯಾವುದನ್ನು ಮಾಡಿದವರೇ ಅಲ್ಲ. ಏನು ಮಾಡದ ಸಂದಿಗ್ಧ ಪರಿಸ್ಥಿತಿ.

ಆಗಲೇ ನೋಡಿ ಮತ್ತೆ ನೆನಪಾಗಿದ್ದು ಅದೇ ಹಳೆಯ ಮಾರವಾಡಿ ಅಂಗಡಿ. ಹಳೆಯ ದೇವರ ಪಾದವೇ ಗತಿ ಎನ್ನುವ ಹಾಗೆ ಎಲ್ಲೋ ಇದ್ದ ಅವರ ಸಂಖ್ಯೆ ಹುಡುಕಿ ಕರೆ ಮಾಡಿದ ತಕ್ಷಣ “ಆಗಲಿ ಕಳಿಸುತ್ತೇನೆ” ಎಂದದ್ದಲ್ಲ “ನೀವೇನು ಬರಬೇಡಿ ವಾಟ್ಸಪ್‌ ಮಾಡಿ” ಎನ್ನುತ್ತ ತಮ್ಮ ಸೀಮಿತ ಅವಧಿಯಲ್ಲಿಯೂ ಮನೆಗೆ ಸಕಾಲಕ್ಕೆ ಅಗತ್ಯ ವಸ್ತುಗಳನ್ನು ತಲುಪಿಸಿದ ಜವಬ್ದಾರಿ ಅವರಿಗೆ ಸೇರುತ್ತದೆ. ಆ ದಿನ ನಾನೆಷ್ಟು ನಿರಾಳವಾದೆನೆಂದರೆ ಇಲ್ಲಿ ವಿವರಿಸುವುದು ಸಾಧ್ಯವಿಲ್ಲ. ಇವೆಲ್ಲ ಸಣ್ಣ ಸಣ್ಣ ಸಂಗತಿಗಳು ಎಂದು ಈಗ ಅನ್ನಿಸಿದರೂ ಆಗಿನ ತುರ್ತು ಅನಿವಾರ್ಯತೆ ಆಗ ದಕ್ಕಿದ ಸಹಾಯ ಅಂತಿತ್ತದ್ದಲ್ಲ. ಅದಾದ ಎಷ್ಟೋ ದಿನದ ನಂತರ ಹಣ ತಲುಪಿಸಲಾಗದೆ ಗೂಗಲ್‌ ಪೇ ಮಾಡಿ ಧನ್ಯವಾದ ತಿಳಿಸಿದ್ದು ಸುಳ್ಳಲ್ಲ.

ದೊಡ್ಡ ದೊಡ್ಡ ಬೋರ್ಡುಗಳು ನಮ್ಮ ಪಾಕೀಟುಗಳನ್ನು ಅವಲಂಬಿಸಿರುತ್ತವೆಯೇ ಹೊರತು ನಮ್ಮನ್ನಲ್ಲ ಎಂದು ಅರಿವಾಗಿದ್ದು ಆಗಲೇ. ನೂರೆಂಟು ಜಾಹೀರಾತುಗಳ ಬಿತ್ತುತ್ತ ಮನುಷ್ಯನನ್ನು ಕೊಳ್ಳುಬಾಕ ಸಂಸ್ಕೃತಿಗೆ ದೂಡುತ್ತ “ಈ ವಸ್ತು ನಿಮ್ಮ ಬಳಿ ಇದ್ದರಷ್ಟೆ ನಿಮಗೆ ಬೆಲೆ” ಎನ್ನುವ ಭ್ರಮೆ ಹುಟ್ಟಿಸುತ್ತ, ಮನುಷ್ಯರನ್ನು ಕೇವಲ ಗ್ರಾಹಕನಂತೆ ಪರಿಗಣಿಸುವ ಮಾರುಕಟ್ಟೆ ಆಧಾರಿತ ವ್ಯವಹಾರಕ್ಕೂ, ಬೇಕಾದಾಗಲೆಲ್ಲ ಮನೆಯ ಬಾಗಿಲಿಗೆ ಸೇವೆ ಒದಗಿಸಿ ಹದಿನೈದು ದಿನಕ್ಕೋ ತಿಂಗಳಿಗೋ ಹಣ ಪಡೆಯುವ “ಈಗಿಲ್ಲ ನಾಳೆ ಕೊಡುವೆ” ಎಂದಾಗಲೂ “ಪರ್ವಾಗಿಲ್ಲ ನಿಧಾನ ಕೊಡಿ” ಎನ್ನುವ ಸಂಬಂಧ ಸೇತುವೆ ಬೆಸೆಯುವ ಪುಟ್ಟ ಪುಟ್ಟ ಅಂಗಡಿಗಳಿಗೂ ಅಜಗಜಾಂತರ. ಜೀವದ ಸೆಲೆ ಎನ್ನುವುದು ಮನುಷ್ಯ ಸಂಬಂಧಗಳು ಹೊಸೆಯುವಲ್ಲಿ ಮಾತ್ರ ಜೀವಂತವಾಗಿ ಇರುತ್ತದೆ ಎನ್ನಿಸಿದ್ದು ಆಗಲೇ. ಈಗ ನಮ್ಮ ಮತ್ತು ಅವರ ಸಂಬಂಧ ಮತ್ತೆ ಮುಂದುವರೆದಿದೆ ಮುಂದುವರೆಯುತ್ತದೆ ಕೂಡ ಎನ್ನುವುದು ಸುಳ್ಳಲ್ಲ. ಒಂದು ಸಿನೆಮಾದಿಂದಾಗಿ ಇಷ್ಟೆಲ್ಲ ಹೇಳುವಂತಾಯಿತು. ಸಿನೆಮಾದಲ್ಲಿ ಕಾಣೆಯಾಗುವ “ಭಾರತ್‌ ಸ್ಟೋರ್ಸ್’’​ನಂತಹ ಎಷ್ಟೋ ಅಂಗಡಿಗಳು ಈಗಲೂ ನಮ್ಮ ನಡುವೆ ಇದೆ. ಅದರ ಮಾಲೀಕರ ಮಕ್ಕಳು ಎಲ್ಲೆಲ್ಲೋ ಹೋಗಿ ಯಾವುದೋ ನಗರದ ಮಾಲ್‌ಗಳಲ್ಲಿ ಕಸ ಹೊಡೆಯುತ್ತಲೋ ಸೆಲ್ಯೂಟ್‌ ಹೊಡೆಯುತ್ತಲೋ ಬದುಕುತ್ತಿದ್ದಾರೆ ಅವರೆಲ್ಲ ಮತ್ತೆ ಮರಳಿ ಪುಟ್ಟ ಊರುಗಳಿಗೆ ಬರಲಿ ಕಳೆದು ಹೋಗುವ ನಂಟುಗಳು ಮತ್ತೆ ಹರವಿಕೊಳ್ಳಲ್ಲಿ ಎಂಬುದಷ್ಟೆ ಈ ಹೊತ್ತಿನ ಆಶಯ.

ಇದನ್ನೂ ಓದಿ : Lotus : ಮಗುವಂತೂ ಬದುಕಲಿಲ್ಲ, ಮಾಡಿದ ಸಾಲಕ್ಕೆ ತಾವರೆಯೇ ಆಸರೆ

Published On - 3:56 pm, Wed, 29 September 21