Lotus : ಮಗುವಂತೂ ಬದುಕಲಿಲ್ಲ, ಮಾಡಿದ ಸಾಲಕ್ಕೆ ತಾವರೆಯೇ ಆಸರೆ

Flower Selling : ‘ಹೋಟೆಲ್, ಮಾಲ್, ಸಿನಿಮಾ ಥಿಯೇಟರ್​ಗಳಲ್ಲಿ ಮುಲಾಜಿಲ್ಲದೆ ಕೇಳಿದಷ್ಟು ಹಣ ಕೊಟ್ಟು ಬರುವ ಮಂದಿಗೆ ನೈಜ ಹೂವಿನ ಕಡೆಗೆ ಯಾಕೆ ಆಸಕ್ತಿ ಇಲ್ಲ? ಇದ್ದರೂ ಯಾಕಷ್ಟು ಚೌಕಾಶಿ ಮಾಡುವುದು?’ ದೊಡ್ಡಬಳ್ಳಾಪುರ ವೆಂಕಟೇಶ

Lotus : ಮಗುವಂತೂ ಬದುಕಲಿಲ್ಲ, ಮಾಡಿದ ಸಾಲಕ್ಕೆ ತಾವರೆಯೇ ಆಸರೆ
ತಾವರೆ ವ್ಯಾಪಾರಿ ದೊಡ್ಡಬಳ್ಳಾಪುರದ ವೆಂಕಟೇಶ
Follow us
ಶ್ರೀದೇವಿ ಕಳಸದ
|

Updated on:Sep 24, 2021 | 3:59 PM

Flower Seller : ನೀರಿನ ಮೇಲೆ ನಿರ್ಲಿಪ್ತವಾಗಿ ಅರಳಿನಿಂತ ತಾವರೆ ಸೆಳೆಯದಿದ್ದೀತೆ? ನೋಡುತ್ತಲೇ ಸ್ಪರ್ಶಿಸಬೇಕು, ಕೀಳಬೇಕು ಎನ್ನಿಸಿದರೂ ಕೆಸರಿನೊಳಗಿಳಿಯುವ ಮನಸ್ಸು ಎಷ್ಟು ಜನಕ್ಕಿದ್ದೀತು? ಬೇಕೇಬೇಕು ಎನ್ನುವ ಅನಿವಾರ್ಯತೆ ಇರುವವರು ಮಾತ್ರ ಕೆಸರಿನೊಳಗಿಳಿಯುತ್ತಾರೆ. ಅಂಟಿದ ಕೆಸರು ಅನ್ನಕ್ಕೆ ದಾರಿಯಾಗುವುದಾದರೆ ಯಾಕಿದನ್ನೇ ಕಾಯಕವನ್ನಾಗಿಸಿಕೊಳ್ಳಬಾರದು ಎಂದೂ ಆಲೋಚಿಸಿ ಪಟ್ಟಣದ ಬೀದಿಗಳಿಗೆ ತಾವರೆಯ ದಂಡನ್ನು ಕರೆತರುತ್ತಾರೆ. ಸದಾ ಗಿಜಿಗುಡುವ ರಸ್ತೆಗಳ ಮಧ್ಯೆ, ಕೌಶಲಯುತವಾಗಿ ಜೋಡಿಸಿಟ್ಟ ಅರೆಬಿರಿದ ತಾವರೆಗಳಿಗೆ ಸೌಂದರ್ಯ, ಭಕ್ತಿಯ ಉಪಾಸಕರಿಗೆ ಕಂಗಳು ಸೋಲವೆ? ಹೀಗೆ ನಗರವಾಸಿಗಳಿಗೆ ನಿತ್ಯವೂ ತಾವರೆಗಳನ್ನು ತಲುಪಿಸುವ ಕಾಯಕವನ್ನೇ ನೆಚ್ಚಿಕೊಂಡವರು ದೊಡ್ಡಬಳ್ಳಾಪುರದ ವೆಂಕಟೇಶ್​. ಬೆಂಗಳೂರಿನ ಸಹಕಾರನಗರದ ಬೀದಿಯಲ್ಲಿ ಇವರನ್ನು ಮಾತಿಗೆಳೆಯುತ್ತ ಅವರ ಭಾವಚಿತ್ರಗಳನ್ನು ಸೆರೆಹಿಡಿದವರು ಲೇಖಕಿ ಜ್ಯೋತಿ ಎಸ್.  

*

ದೊಡ್ಡಬಳ್ಳಾಪುರದ ವೆಂಕಟೇಶ್ ದಿನವೂ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಎದ್ದು ಕೆರೆಗಳೊಳಗೆ ಇಳಿದು ತಾವರೆ ಹೂಗಳನ್ನು, ಮೊಗ್ಗುಗಳನ್ನು, ಅದರ ಎಲೆಗಳನ್ನು ಕಿತ್ತು ಹೊತ್ತುಕೊಂಡು ಈಜಿ ಆ ದಿನವನ್ನೂ ತೂಗಿಸುವ ಕಾಯಕಕ್ಕೆ ತೆರೆದುಕೊಳ್ಳುತ್ತಾರೆ.  ಸುಮಾರು 5 ಗಂಟೆ ಹೊತ್ತಿಗೆ ಬೆಂಗಳೂರಿನ ಬಸ್​ ಹತ್ತುತ್ತಾರೆ. 29 ವರ್ಷದ ಅವರು ಸುಮಾರು ಹತ್ತು ವರ್ಷಗಳಿಂದ ಇದನ್ನೇ ಜೀವನೋಪಾಯವಾಗಿಸಿಕೊಂಡಿದ್ದಾರೆ. ಹೇಗೆ ಅವರು ಈ ವೃತ್ತಿಗೆ ತೆರೆದುಕೊಂಡರು ಎನ್ನುವುದರ ಹಿಂದೆ ಒಂದು ಆಕಸ್ಮಿಕ ಪ್ರಸಂಗವಿದೆ.

‘ನಾನು ಓದಿದ್ದು ಪ್ರಥಮ ಪಿಯುಸಿ ಮಾತ್ರ. ಸರ್ಕಾರಿ ಕಾಲೇಜು. ಹೀಗೇ ಒಂದು ದಿನ ನಮ್ಮೂರಿನ ಬೆಟ್ಟದ ಬಳಿ ಇರುವ ದೇವಸ್ಥಾನಕ್ಕೆ ಹೋಗಿದ್ದೆ. ಪ್ರವಾಸಿಗರೊಬ್ಬರು ಕೆರೆಯೊಳಗಿನಿಂದ 20 ತಾವರೆಗಳನ್ನು ಕಿತ್ತು ಕೊಡುವಂತೆ ಕೇಳಿಕೊಂಡರು. ಆಗ ಕೀಳುತ್ತ ಕೀಳುತ್ತ ಉಮೇದಿಗೆ ಬಿದ್ದು ಐವತ್ತು ಹೂಗಳನ್ನು ಕಿತ್ತುಬಿಟ್ಟೆ. ಅಷ್ಟೊಂದು ಹೂ ಏನು ಮಾಡುವುದು? ಬಾಡುವ ಮೊದಲೇ ಹೇಗಾದರೂ ಮಾರಲೇಬೇಕಲ್ಲ ಎಂದು ಇಡೀದಿನ ಅಲ್ಲೇ ಇದ್ದು ಆ ಹೂಗಳನ್ನು ಮಾರಿದೆ’ ಎನ್ನುತ್ತಾರೆ ವೆಂಕಟೇಶ್.

lotus vendor doddaballapura venkatesh

ತಾವರೆಯೇ ದೇವರು

ಈತನಕವೂ ದೊಡ್ಡಬಳ್ಳಾಪುರ, ಬಾಯ್ಲಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರದ ಕೆರೆಗಳಿಗೂ ಹೋಗಿ ಹೂವನ್ನು ಕಿತ್ತುಕೊಂಡು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಅವರು ಮಾರುವುದು ದಿನಚರಿ.

‘ಒಮ್ಮೆ ಕಿತ್ತ ಹೂವನ್ನು ಸುಮಾರು 3 ದಿನಗಳ ಕಾಲ ಇಟ್ಟು ಮಾರಬಹುದು. ಪೂರ್ತಿ ಮೊಗ್ಗನ್ನು ಕಿತ್ತುಕೊಂಡು ಬಂದರೆ, ರಬ್ಬರ್ ಹಾಕಿ ವಾರಗಟ್ಟಲೆ ಅರಳುವಿಕೆಯನ್ನು ಮುಂದೂಡಿ ಜೋಪಾನಿಸುತ್ತೇವೆ. ಮಧ್ಯರಾತ್ರಿ ಕೆರೆಗಳಿಗೆ ಇಳಿದು ಹೂ ಕೀಳಲು ಹೋಗುವುದು ಕಷ್ಟವೇ. ಬೇರೆ ಕೆರೆಗಳಿಗೆ ಹೋದಾಗ ಎಷ್ಟೋ ಸಲ ಆಳ ಗೊತ್ತಿರುವುದಿಲ್ಲ. ಜೊತೆಗೆ ಕಲ್ಲಿನ ಕೋರೆಗಳು, ಗಾಜಿನ ಚೂರು ಎಲ್ಲ ತಾಗಿ, ಮೈ ತುಂಬ ತರಚಿದ ಗೀರುಗಳಾಗುವುದು ಸಾಮಾನ್ಯ. ಎರಡು ಬಾರಿ ನೀರುಹಾವು ಕೂಡ ಕಚ್ಚಿದೆ’ ಎನ್ನುತ್ತಾರೆ. ಅವರ ಕೆಲಸ ದಿನವೂ ಅಪಾಯದ ಮಧ್ಯೆಯೇ ಸಾಗುವಂಥದ್ದು.

‘ದಿನದ ಪಾಸ್ ತೆಗೆದುಕೊಂಡು ಮಲ್ಲೇಶ್ವರ, ಕಮ್ಮನಹಳ್ಳಿ, ಮೋದಿ ಹಾಸ್ಪಿಟಲ್ ಎಲ್ಲಾ ಕಡೆಗೂ ಹೋಗಿ ಮಾರಾಟ ಮಾಡುತ್ತೇನೆ. ದಿನ ಒಂದಕ್ಕೆ ಸುಮಾರು 50 ರಿಂದ 60 ಹೂವುಗಳನ್ನು ಮಾರುತ್ತೇನೆ. ನಾನು ಅಷ್ಟು ಹೂವುಗಳನ್ನು ಮಾರಲೇಬೇಕು ಹಾಗಾಗಿ ಪೂರ್ತಿ ಬೆಂಗಳೂರು ಓಡಾಡುತ್ತೇನೆ. ಈಗ ನೋಡಿ, ನಾಳೆ ಸಂಘಕ್ಕೆ 2,000 ರೂಪಾಯಿ ಕಟ್ಟಬೇಕಾಗಿರುತ್ತೆ. ಆಗ 200 ಹೂವುಗಳನ್ನು ಕಿತ್ತುಕೊಂಡು ಹೆಚ್ಚು ಮಾರಾಟವಾಗುವ ಸ್ಥಳಗಳಿಗೆ ಹೋಗಿ ಅಷ್ಟೂ ಹೂವನ್ನು ಮಾರಾಟ ಮಾಡಲೇಬೇಕಾದ ಒತ್ತಡವಿರುತ್ತದೆ’ ಎನ್ನುತ್ತಾರೆ.

ಹೋಟೆಲ್, ಮಾಲ್, ಸಿನಿಮಾ ಥಿಯೇಟರ್​ಗಳಲ್ಲಿ ಮುಲಾಜಿಲ್ಲದೆ ಕೇಳಿದಷ್ಟು ಹಣ ಕೊಟ್ಟು ಬರುವ ಮಂದಿ, ಇಷ್ಟೆಲ್ಲ ಕಷ್ಟಪಟ್ಟು ಕಿತ್ತುಕೊಂಡು ಬಂದ ಹೂವನ್ನು ಮಾರುವಾಗ ಒಂದು ಹೂವಿಗೆ 20 ರೂಪಾಯಿ ಹೇಳಿದರೆ 10 ರೂಪಾಯಿಗೆ ಕೊಡಿ 15 ರೂಗೆ ಕೊಡಿ ಅಂತ ಚೌಕಾಶಿ ಮಾಡುತ್ತಾರಲ್ಲ ಬೇಸರವಾಗುತ್ತದೆ. ನಮಗೂ ನಮ್ಮದೇ ಆದ ಕಷ್ಟ ನೋವುಗಳಿರುತ್ತವೆ ಅಲ್ಲವೆ? ಎನ್ನುವುದು ಅವರ ಪ್ರಶ್ನೆ.

Lotus Vendor Doddaballapura Venkatesh

ಮುದುಡುವ ಮೊದಲೇ ಮಾರುವುದೂ ಒಂದು ಕಲೆ

‘ಕೆಲ ವರ್ಷಗಳ ಹಿಂದೆ ನಮ್ಮ 24 ದಿನದ ಹಸುಗೂಸಿಗೆ ಜಾಂಡೀಸ್ ಬಂದು ಪರಿಸ್ಥಿತಿ ಗಂಭೀರವಾದಾಗ ಆಸ್ಪತ್ರೆಗೆ ಸೇರಿಸಿದೆವು. ಎರಡು ದಿನಕ್ಕೆ ಏನೆಲ್ಲ ಟೆಸ್ಟ್​ಗಳನ್ನು ಮಾಡಿ, ಚಿಕಿತ್ಸೆ ನೀಡಿ, 1, 30,000 ರೂಪಾಯಿ ಬಿಲ್ ಮಾಡಿ, ಕೊನೆಗೆ ಮಗು ತೀರಿಹೋಗಿದೆ ಎಂದು ಹೇಳಿದರು. ನಮ್ಮ ಬಳಿ ಆಗ ಅಷ್ಟೊಂದು ಹಣವಿರಲಿಲ್ಲ. ಜೊತೆಗೆ ಮಗುವನ್ನು ಕಳೆದುಕೊಂಡ ನೋವು. ನನ್ನ ಹೆಂಡತಿಯನ್ನು ಅಲ್ಲಿಯೇ ಬಿಟ್ಟು ನಾನು ಊರಿಗೆ ಹೋಗಿ ಅವರಿವರ ಹತ್ತಿರ ಹಣವನ್ನು ಸಾಲವಾಗಿ, ಬಡ್ಡಿಗಾಗಿ ತಂದು ಬಿಲ್ ಕಟ್ಟಿದೆ. ಈಗ ಮಗು ಇಲ್ಲ. ಆದರೆ ಸಾಲ? ಬದುಕನ್ನು ಕುರುಡಾಗಿಸಿದೆ. ಏನು ಮಾಡುವುದು ಆಸ್ಪತ್ರೆ ಬಿಲ್ ಪಾವತಿಸಲು ಮಾಡಿದ ಸಾಲವನ್ನು ತಾವರೆ ಮಾರಿಯೇ ತೀರಿಸುತ್ತಿದ್ದೇನೆ.’ ಎನ್ನುತ್ತಾರೆ.

ರಂಗುರಂಗಿನ ಜಗಮಗಿಸುವ ಪ್ಲಾಸ್ಟಿಕ್ ಹೂವುಗಳೇ ಇಂದು ಎಲ್ಲರಿಗೂ ಬೇಕು. ಆದರೆ ನೈಜ ಹೂಗಳನ್ನು ಮಾರುವುದು ದೊಡ್ಡ ಸವಾಲು. ನಮ್ಮೂರ ಬೆಟ್ಟದ ಮೇಲಿನ ಕೆರೆಯ ಹೂಗಳನ್ನು ಬೀದಿಪಾಲು ಮಾಡದೇ ಮಾರಿದ್ದರಿಂದ ಈವತ್ತು ನನ್ನ ಕುಟುಂಬವನ್ನು ನಾನು ಬೀದಿಪಾಲಾಗದಂತೆ ಕಾಪಾಡಿಕೊಳ್ಳಲು ಅನುಕೂಲವಾಗಿದೆ. ಈ ಹೂವಿನ ಜೊತೆಗೆ ನನ್ನ ಪ್ರಯಾಣ ಆಕಸ್ಮಿಕವಾಗಿ ಶುರುವಾಗಿ… ಅದೇ ಈಗ ಬದುಕು ಎಂಬಂತಾಗಿದೆ ಎನ್ನುತ್ತಾರೆ ಅವರು.

ಇದನ್ನೂ ಓದಿ : Journalism : ‘ನನ್ನ ಮೂರು ಮಕ್ಕಳೊಂದಿಗೆ ನಾನೂ ಓದುತ್ತ ಬರೆಯುತ್ತ ಬೆಳೆಯುತ್ತಿದ್ದೇನೆ’

Published On - 3:43 pm, Fri, 24 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ