Journalism : ‘ನನ್ನ ಮೂರು ಮಕ್ಕಳೊಂದಿಗೆ ನಾನೂ ಓದುತ್ತ ಬರೆಯುತ್ತ ಬೆಳೆಯುತ್ತಿದ್ದೇನೆ’

Future Journalists : ನಮ್ಮದು ಬಹುಮುಖಿ ಕಥನಗಳ ದೇಶ. ಅಂತೆಯೇ ಒಬ್ಬೊಬ್ಬರ ಹಾದಿಯೂ ಭಿನ್ನ. ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ಪಡೆದ ಜ್ಯೋತಿ ಎಸ್. ಮೂರು ಮಕ್ಕಳ ತಾಯಿ. ಅವರು ಪತ್ರಕರ್ತೆಯಾಗಬೇಕೆನ್ನುವ ಗುರಿಯನ್ನು ಗಟ್ಟಿ ಮಾಡಿಕೊಂಡಿರುವುದರ ಹಿಂದೆ ಏನೆಲ್ಲ ಸಂಕಟಗಳಿದ್ದವು. ಅವುಗಳನ್ನು ಹೇಗೆಲ್ಲ ಹಾಯ್ದು ಬಂದರು? ಓದಿ...

Journalism : ‘ನನ್ನ ಮೂರು ಮಕ್ಕಳೊಂದಿಗೆ ನಾನೂ ಓದುತ್ತ ಬರೆಯುತ್ತ ಬೆಳೆಯುತ್ತಿದ್ದೇನೆ’
ಜ್ಯೋತಿ ಎಸ್.

Future Journalists : ಜೀವನೋಪಾಯಕ್ಕೆಂದು ಮಾಡುವ ಕೆಲಸದ ವಿಧಾನ ಬೇರೆ. ಇಷ್ಟಪಟ್ಟು ತೊಡಗಿಕೊಳ್ಳುವ ಕೆಲಸದ ಗತಿಯೇ ಬೇರೆ. ಎರಡನೇ ಆಯ್ಕೆ ತುಸು ಕಷ್ಟದ್ದು, ನಿರಂತರ ಸವಾಲಿನದು. ಅಲ್ಲಿ ತನ್ನ ಹೊಟ್ಟೆ, ಬಟ್ಟೆ, ನೆತ್ತಿಗೂ ಮೀರಿದ ಆಲೋಚನೆಗಳು, ಆಶಯಗಳು ಸದಾ ಮಿಸುಕಾಡುತ್ತಿರುತ್ತವೆ. ಅಂಥ ಕ್ಷೇತ್ರಗಳಲ್ಲಿ ಪ್ರಮುಖವಾದುದು ಪತ್ರಿಕೋದ್ಯಮ. ಪತ್ರಕರ್ತರು ತಮ್ಮನ್ನು ಆವರಿಸುವ ಅಣುಅಣುವಿನ ಬಗ್ಗೆಯೂ ಸದಾ ಜಾಗೃತರಾಗಿರಲು ತಮ್ಮೊಳಗೊಂದು ತಿದಿಯನ್ನು ಹಗಲು ರಾತ್ರಿಯೂ ಒತ್ತಿಕೊಳ್ಳುತ್ತಲೇ ಇರಬೇಕಾಗುತ್ತದೆ. ಆಗುಹೋಗುಗಳನ್ನು ಯಾವೆಲ್ಲ ರೀತಿಯಲ್ಲಿ ತೆರೆದಿಡಬೇಕು, ಯಾವೆಲ್ಲ ದೃಷ್ಟಿಕೋನದಿಂದ ಗಮನಿಸಬೇಕು, ಹೇಗೆಲ್ಲ ಚಿಕಿತ್ಸಕ ನೋಟದಿಂದ ವಿಷಯವನ್ನು ಪರಾಮರ್ಶಿಸಬೇಕು ಮತ್ತು ಪ್ರಸ್ತುತಪಡಿಸಬೇಕು ಎಂಬ ತಯಾರಿಗೆ ಕೊನೆಮೊದಲಿಲ್ಲ. ಮುದ್ರಣ, ಎಲೆಕ್ಟ್ರಾನಿಕ್ ಜೊತೆಗೆ ಡಿಜಿಟಲ್ ಮಾಧ್ಯಮ​ ಇಂದು ಅತಿ ವೇಗದಲ್ಲಿ ಹಲವಾರು ಸಾಧ್ಯತೆಗಳ ಮೂಲಕ ಚಾಚಿಕೊಳ್ಳುತ್ತಿರುವಂಥ ಈ ಸಂದರ್ಭದಲ್ಲಿ ತಾಂತ್ರಿಕ ಸ್ವರೂಪದಲ್ಲಷ್ಟೇ ಬದಲಾವಣೆ, ಉಳಿದಂತೆ ಪತ್ರಕರ್ತರಿಗಿರಬೇಕಾದ ಒಳಗಣ್ಣು, ಆಸ್ಥೆ, ತುಡಿತ, ಪ್ರಾಮಾಣಿಕತೆ, ಸಾಮಾಜಿಕ ಕಾಳಜಿಯನ್ನೇ ಈ ಕ್ಷೇತ್ರ ಬೇಡುತ್ತದೆ. ಹಾಗಾಗಿ ಈ ವೃತ್ತಿ ಅಂಕಪಟ್ಟಿ, ಪದಕಗಳನ್ನು ಮೀರಿದ ಚಲನಶೀಲ, ವಿಶೇಷ ಪ್ರಜ್ಞೆಯುಳ್ಳ ವ್ಯಕ್ತಿತ್ವವನ್ನು ನಿರೀಕ್ಷಿಸುತ್ತದೆ. ಜೀವಪರತೆಯೇ ಇದಕ್ಕೆ ಮೂಲಾಧಾರ. 

ಈ ಹಿನ್ನೆಲೆಯಲ್ಲಿ ರೂಪಿಸುತ್ತಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಭವಿಷ್ಯದ ಪತ್ರಕರ್ತರು’ ಇದರಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಪತ್ರಿಕೋದ್ಯಮದಲ್ಲಿ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ. ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವರನ್ನು ಪ್ರೇರೇಪಿಸಿದ ವಿಚಾರಗಳು ಯಾವುವು ಎನ್ನುವುದನ್ನು ಆಗಾಗ ಇಲ್ಲಿ ಹಂಚಿಕೊಳ್ಳಲಿದ್ದಾರೆ.
ಪ್ರತಿಕ್ರಿಯೆಗಾಗಿ : tv9kannadadigital@gmail.com

ನಮ್ಮದು ಬಹುಮುಖಿ ಕಥನಗಳ ದೇಶ. ಅಂತೆಯೇ ಒಬ್ಬೊಬ್ಬರ ಹಾದಿಯೂ ಭಿನ್ನ. ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ಪಡೆದ ಜ್ಯೋತಿ ಎಸ್. ಮೂರು ಮಕ್ಕಳ ತಾಯಿ. ಅವರು ಪತ್ರಕರ್ತೆಯಾಗಬೇಕೆನ್ನುವ ಗುರಿಯನ್ನು ಗಟ್ಟಿ ಮಾಡಿಕೊಂಡಿರುವುದರ ಹಿಂದೆ ಏನೆಲ್ಲ ಸಂಕಟಗಳಿದ್ದವು. ಅವುಗಳನ್ನು ಹೇಗೆಲ್ಲ ಹಾಯ್ದು ಬಂದರು? ಓದಿ…

*

ನಾನು ಜ್ಯೋತಿ. ಎಸ್. ತುಮಕೂರು ಜಿಲ್ಲೆಯ ಸಿರಾ ಮೂಲದವಳು. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ತುಂಬಾ ಸೂಕ್ಷ್ಮ ಮನಸ್ಸಿನ ವ್ಯಕ್ತಿತ್ವವುಳ್ಳ ನಾನು ಎಲ್ಲವನ್ನೂ ಬಹಳ ಬೇಗ ಗ್ರಹಿಸುವ ಬಹಳ ಬೇಗ ಸ್ಪಂದಿಸುವ ಸ್ವಭಾವದವಳು. ಅಪ್ಪ-ಅಮ್ಮ-ತಮ್ಮ-ನಾನು ಹೀಗೆ ನಮ್ಮದು ಪುಟ್ಟ ಪ್ರಪಂಚ. ನಾನಂದ್ರೆ ಎಲ್ಲರಿಗೂ ಮುದ್ದು. ನಮ್ಮ ಕಡೆಗೆ ಹೆಣ್ಣುಮಕ್ಕಳು ಬಹಳ ಕಡಿಮೆ. ಮೂರು ತಲೆಮಾರಿನ ನಂತರ ಹುಟ್ಟಿದ ಹೆಣ್ಣುಮಗಳು ನಾನು. ಕಷ್ಟದ ಅರಿವಾಗದಂತೆ ಇದ್ದಿದ್ದರಲ್ಲಿಯೇ ತುಂಬಾ ಪ್ರೀತಿಯಿಂದ ನನ್ನನ್ನು ಅಪ್ಪ ಅಮ್ಮ ಬೆಳೆಸಿದರು. ಸಣ್ಣ ನೋವಾದರೂ ಸಹಿಸುತ್ತಿರಲಿಲ್ಲ. ಹತ್ತು ವರ್ಷ ತುಂಬಿದರೂ ಅಪ್ಪ ಹೆಗಲಮೇಲೆ ಕೂರಿಸಿಕೊಂಡು ಓಡಾಡಿಸುತ್ತಿದ್ದರು. ಪಿಯುಸಿ ಮುಗಿಸೋ ಹೊತ್ತಿಗೆ ಎಲ್.ಎಲ್. ಬಿ. ಮಾಡುವ ಕನಸೊಂದಿತ್ತು. ಅದೇ ಸಮಯಕ್ಕೆ ಹೆಣ್ಣಿನ ಹುಡುಕಾಟದಲ್ಲಿದ್ದ ಶ್ರೀಮಂತ ಕುಟುಂಬವೊಂದಕ್ಕೆ ನಾನು ಸಿಕ್ಕಿದೆ. ಒಬ್ಬಳೇ ಮಗಳು, ಶ್ರೀಮಂತ ಕುಟುಂಬ. ಆಳುಕಾಳು ಎಲ್ಲರೂ ಇದ್ದಾರೆ. ಮಗಳು ಸುಖವಾಗಿರುತ್ತಾಳೆ ಅಂತ ಮನೆಯ ಹಿರಿಯರೆಲ್ಲ ತೀರ್ಮಾನಿಸಿ ಮದುವೆ ಎನ್ನುವ ಕರಿಮಣಿಯ ಸರಪಳಿಯಿಂದ ನನ್ನ ಕಟ್ಟಿದರು.

ಹೊರಗಿನ ಪ್ರಪಂಚವೇ ಗೊತ್ತಿರದ ನನಗೆ, ಸಣ್ಣ ನೋವಿಗೂ ಅಪ್ಪ ಬೇಕೆಂದು ಅಳುತ್ತಿದ್ದ ನನಗೆ, ಮದುವೆಯ ನಂತರ ನನಗಾದ ಸಣ್ಣ ನೋವನ್ನೂ ಅಪ್ಪ ಅಮ್ಮನ ಹತ್ತಿರ ಹೇಳಿಕೊಳ್ಳಬಾರದು ಎಂದುಕೊಂಡೆ. ಹಣ ಇದ್ದವರಲ್ಲಿ ಶ್ರೀಮಂತಿಕೆ ಇದ್ದಲ್ಲಿ ಎಲ್ಲವೂ ಸುಖವಾಗಿರುತ್ತದೆ, ಸೊಗಸಾಗಿರುತ್ತದೆ, ಎನ್ನುವುದು ಹೊರನೋಟಕ್ಕಷ್ಟೇ. ಬದುಕು ಪ್ರತಿಕ್ಷಣವೂ ನರಕಸದೃಶವಾಗಿರುತ್ತದೆ. ತುತ್ತು ಅನ್ನವನ್ನು ಜೀರ್ಣಿಸಿಕೊಳ್ಳುವುದು ಕಷ್ಟಸಾಧ್ಯವೇ ಸರಿ. ಹಾಗಾಗಿ ನಾನು ತುಂಬಾ ಹಸಿವನ್ನು, ನಿದ್ರೆ, ನೀರಡಿಕೆಗಳನ್ನು ತಡೆದಿದ್ದೇನೆ. ಬದುಕಬೇಕು ಎನ್ನುವ ಕಾರಣಕ್ಕೆ ಈಗಲೂ ದಿನಕ್ಕೊಮ್ಮೆ ತಿಂದರೂ ಹೆಚ್ಚೇ.

Future Journalists Jyothi Bhaskar

ಮಗಳು ಅಮೃತಾಳೊಂದಿಗೆ ಜ್ಯೋತಿ

ಓದುವ ಕನಸಿಗೆ ಪರದೆ ಬಿದ್ದಿತ್ತು. ಪುರುಷಪ್ರಧಾನ ಕುಟುಂಬದಲ್ಲಿ, ಸಂಪ್ರದಾಯಸ್ಥ ಮನೆಗಳಲ್ಲಿ ಪತಿಯೇ ಪ್ರತ್ಯಕ್ಷ ದೈವ ಅನ್ನೋದು ಮತ್ತೆ ಮತ್ತೆ ಸಾಬೀತು ಆಗುತ್ತಲೇ ಇರುತ್ತದೆ. ಹೆಣ್ಣು, ಮಕ್ಕಳನ್ನು ಹಡೆಯಲು, ಅಡಿಗೆ ಮಾಡಿಕೊಂಡು, ಮನೆಕೆಲಸ ನೋಡಿಕೊಂಡು, ದೇವರ ಪೂಜೆ, ಹಿರಿಯರ ಸೇವೆ ಮಾಡಿಕೊಂಡು ಹಪ್ಪಳ-ಸಂಡಿಗೆ ಒತ್ತಿಕೊಂಡು, ಮನೆಯ ಗಂಡಸರ ಬೇಕುಬೇಡಗಳನ್ನು ಗಮನಿಸಿಕೊಂಡು ನಿಲ್ಲಬೇಕು.  ಕೆಲಸಗಳಿಗೆ ಜೊತೆಯಾಗಿ ನಿಲ್ಲಬೇಕು ಅಂತಷ್ಟೇ ಇತ್ತು. ಕೊನೆಗೆ ಕೇಳುವ ಪ್ರಶ್ನೆ ನೀನು ಏನು ಮಾಡಿದೆ..?! ಅಂತ ನಿನ್ನಿಂದ ಏನಾಗತ್ತೆ ಅಂತ? 18 ವರ್ಷಕ್ಕೆ ಮದುವೆಯಾದ ನನಗೆ ಯಾವ ಸ್ಪೆಷಲ್ ಸ್ಕಿಲ್ಸ್ ಇಲ್ಲ ( ಕಲಿಯಲು ಯಾವ ಅವಕಾಶ ಆಗ ಇರಲಿಲ್ಲ ) ವಿದ್ಯಾಭ್ಯಾಸ ಪೂರ್ಣವಾಗಿಲ್ಲ. 23 ವರ್ಷ ಕಳೆಯುವ ಹೊತ್ತಿಗೆ ಮೂರು ಮಕ್ಕಳು ಎರಡು ಗರ್ಭಪಾತ ( ಗರ್ಭ ಧರಿಸದಂತೆ ಇರುವ ಮುಂಜಾಗರೂಕತೆ ಏನು ಎಂಬ ಅಲ್ಪ ತಿಳುವಳಿಕೆ ಕೂಡ ಇರಲಿಲ್ಲ ) ಕೊನೆಗೆ ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಮಾಡಿಸಿದರು. ಬಸಿರು, ಬಾಣಂತನ, ಹಾರೈಕೆ ಎಲ್ಲವೂ ಅಷ್ಟಕಷ್ಟೇ. ಎಲ್ಲವೂ ನನಗೆ ನಾನೇ. ನಾನೇ ಮಗುವಿನಂತಿದ್ದೆ, ಆ ಮೂರು-ನಾಲ್ಕು ತಿಂಗಳ ಹಸುಗೂಸನ್ನು ಕಾಲ ಮೇಲೆ ಮಲಗಿಸಿ ಕೊಂಡು ಸ್ನಾನ ಮಾಡಿಸಿ ಸಾಂಭ್ರಾಣಿ ಹೊಗೆ ಕೊಟ್ಟು ಬೆಚ್ಚಗಿಟ್ಟು ಮಲಗಿಸುವುದು ನನಗಾಗ ಸವಾಲಿನ ಕೆಲಸವೇ ಸರಿ. ಹೀಗೆ ಒಂದರ ನಂತರ ಒಂದು ಮೂರು ಮಕ್ಕಳು ಜನಿಸಿದರು. ಎಡಗೈಯ ತೋಳ ಮೇಲೊಂದು. ಬಲಗೈ ತೋಳ ಮೇಲೊಂದು, ಎದೆಮೇಲೆ ಮತ್ತೊಂದು ಮಗುವನ್ನು ಮಲಗಿಸಿಕೊಂಡು ಮಕ್ಕಳನ್ನು ಸಾಕಿದೆ. ಬರೆಯುತ್ತಿದ್ದಂತೆ ನನಗರಿವಿಲ್ಲದಂತೆ ಕಣ್ಣಂಚಲ್ಲಿ ಕಂಬನಿ ಜಿನುಗುತ್ತಿದೆ.

ಸರಿ ನನ್ನನ್ನು ನಾನೇ ಮರೆತೆ ಬದುಕೆಂದರೆ ಅತ್ತೆ, ಮಾವ, ಗಂಡ, ಮಕ್ಕಳು, ಅವರ ಲಾಲನೆ ಪಾಲನೆ, ಮನೆಕೆಲಸ, ಜವಾಬ್ದಾರಿಗಳನ್ನು ನಿರ್ವಹಿಸುವುದು ಅಂತ ಅರ್ಥೈಸಿಕೊಂಡೆ.

ವರ್ಷ ಕಳೆದರೂ ಅಪ್ಪ-ಅಮ್ಮನ ಮನೆಗೆ ಹೋಗುವಂತಿಲ್ಲ. ನೋಡುವ ಹಾಗಿಲ್ಲ. ಮಾತನಾಡಬೇಕೆಂದು ಅನಿಸಿದಾಗ ಮಾತನಾಡುವ ಹಾಗಿಲ್ಲ. ನಗಬೇಕೋ ಅಳಬೇಕೋ ಬದುಕು ಬಂದಂತೆ ಸ್ವೀಕರಿಸಬೇಕೋ ಅಥವಾ ಎಲ್ಲವನ್ನೂ ಎದುರಿಸಿ ನಿಲ್ಲಬೇಕೋ? ನನ್ನನ್ನು ನಾನೇ ಪ್ರಶ್ನೆ ಮಾಡಿಕೊಳ್ಳಲಾಗದೆ ಒದ್ದಾಡಿದೆ.

Amritha Bhaskar

ಜ್ಯೋತಿಯವರ ಮಗಳು ಅಮೃತಾ ಭಾಸ್ಕರ್ ಪ್ರಶಸ್ತಿಗಳೊಂದಿಗೆ

ಹೀಗಿರುವಾಗಲೇ ಮಾವನಿಗೆ ಮೂಳೆ ಕ್ಯಾನ್ಸರ್. ಒಂದೆಡೆ ಸಾವು ಬದುಕಿನ ನಡುವೆ ಒದ್ದಾಟ. ಇನ್ನೊಂದೆಡೆ  ಮಡಿಲಲ್ಲಾಡುವ ಎಳೆಮಗು. ಬಲುಬೇಗನೆ ಬದುಕಿನ ಅನುಭವಗಳು ತುಂಬಾ ಪ್ರಶ್ನೆಗಳನ್ನು ಹುಟ್ಟಿಸಿದವು. ಹುಟ್ಟು ಎಂದರೇನು? ಬದುಕು ಎಂದರೇನು? ಸಾವು ಯಾಕಾಗಿ? ಹೀಗೆಲ್ಲಾ ಸಾವಿರಾರು ಪ್ರಶ್ನೆಗಳು ನನ್ನ ಕಾಡಲು ಆರಂಭಿಸಿದವು. ಉತ್ತರ ಕಂಡುಕೊಳ್ಳುವ ಕಾರಣದಿಂದಾಗಿ ಹುಟ್ಟಿಕೊಂಡ ನನ್ನ ಹಟ, ಛಲ ನನ್ನನ್ನು ಈವರೆಗೂ ಸುಮ್ಮನೆ ಕೂರಲು ಬಿಟ್ಟಿಲ್ಲ. ‘ನನ್ನ ಹುಟ್ಟಿಗೆ ಅರ್ಥ ಇರಬೇಕು; ಇಲ್ಲ ನನ್ನ ಸಾವಾದರೂ ಸಾರ್ಥಕವಾಗಬೇಕು ‘ ಹಾಗೆ ಬದುಕಬೇಕು ಅಂತ ನಿರ್ಧರಿಸಿದೆ. ನಾನು ನಾನಾಗಿ ಬದುಕಲು ಆರಂಭಿಸಿದೆ. ಹಾಗೆ ಬದುಕುವುದೆಂದರೆ ಈ ಕ್ಷಣದವರೆಗೂ ಸುತ್ತುವರಿದುಕೊಂಡದ್ದರ ಜೊತೆ ಹೋರಾಡುತ್ತಲೇ ಇರುವುದು. ಹೇಳುತ್ತ ಹೋದರೆ ಒಂದೇ ಎರಡೆ?

ಸಾಧಕರಿಗೂ ಸೋಮಾರಿಗೂ ಎಲ್ಲರಿಗೂ ಇರುವುದು ದಿನಕ್ಕೆ 24 ಗಂಟೆ ಸಮಯ ಮಾತ್ರ. ಸಮಯ ಯಾರಿಗಾಗಿ ಕಾಯುವುದಿಲ್ಲ. ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡಾಗ ಮಾತ್ರ ಏನಾದರೂ ಸಾಧನೆ ಸಾಧ್ಯವಾಗುತ್ತದೆ. ಯಾರೋ ಸಾಧಕರನ್ನು ತೋರಿಸಿ ನೀನು ಅವರಂತಾಗಬೇಕು ಎಂದು ಹೇಳುವುದಕ್ಕಿಂತ, ನಾನೇ ಯಾಕೆ ಮಕ್ಕಳಿಗೆ ಮಾದರಿ ಆಗಬಾರದು ಎಂದು ನಿರ್ಧಾರ ಮಾಡಿದೆ. ನಿಲ್ಲಿಸಿದ ಓದನ್ನು ಮತ್ತೆ ಆರಂಭಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪದವಿಗೆ ಪ್ರವೇಶ ಮಾಡಿಸಿದೆ. ಜೊತೆಗೆ ಹಿಮಾಂಷು ಜ್ಯೋತಿ ಕಲಾ ಪೀಠ, ಮಲ್ಲೇಶ್ವರಂನಲ್ಲಿ ಡಿಪ್ಲೋಮ ಇನ್ ಎನ್.ಟಿ. ಟಿ 2019 – 2020 ರಲ್ಲಿ ತರಬೇತಿಯನ್ನು ಪಡೆದೆ. ತರಗತಿ ಇಂಗ್ಲಿಷ್ ನಲ್ಲಿ ನಡೆಯುತ್ತಿದ್ದು ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದ ಕಾರಣ ಹಿಂಜರಿಕೆ ಇತ್ತು. ಆದಾಗಿಯೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣವಾಗಿದ್ದು ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತ್ತು. ಇತರೇ ಪುಸ್ತಕಗಳ ಓದು ಮತ್ತು ಆನ್​ಲೈನ್ ಜಗತ್ತು ನನ್ನಲ್ಲಿ ಬದುಕುವ ಛಲ ಹುಟ್ಟಿಸುತ್ತಿತ್ತು. ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಮಾರ್ಗದರ್ಶನ ಮಾಡುತ್ತಿತ್ತು. ನನ್ನ ಆಪ್ತ ಸ್ನೇಹಿತೆ ಮತ್ತು ತಮ್ಮ ನನ್ನ ಬೆಂಬಲಕ್ಕೆ ನಿಂತರು. ಗಾಯಗಳು ಮಾಯತೊಡಗಿದವು.

ಶಾಲೆಗೆ ಹೋಗುವಾಗ ಮಕ್ಕಳಿಗಾಗಿ ನಾನು ನಿರ್ವಹಿಸಿದ ಕಾಳಜಿ, ಜವಾಬ್ದಾರಿಗಳನ್ನು, ಮಕ್ಕಳು ನನಗಾಗಿ ನಿರ್ವಹಿಸಿದರು. ನಾನು ಕಾಲೇಜಿಗೆ ಹೊರಡುವಾಗ ಊಟದ ಡಬ್ಬಿ ನೆನಪಿಸುವುದು, ನೀರಿನ ಬಾಟಲಿ ಇಡುವುದು, ಮಳೆ ಇದ್ದರೆ ಜರ್ಕಿನ್ ತಂದಿಡುವುದು, ಗೇಟಿನತನಕ ಬಂದು ಬೀಳ್ಕೊಟ್ಟು ಹುಷಾರು ಎಂದು ಹೇಳುವುದು. ಇವೆಲ್ಲವೂ ನನಗಂತೂ ನಿಜಕ್ಕೂ ಹೆಮ್ಮೆಯ ಸಂಗತಿಗಳು.

Amritha Malt

‘ನಾನು ತಯಾರಿಸುವ ಮಾಲ್ಟ್​ ಗೆ ನನ್ನ ಮಕ್ಕಳೇ ರೂಪದರ್ಶಿಗಳು’

ಅವಕಾಶ ಇಲ್ಲವಾದಲ್ಲಿ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು. ನನ್ನ ಅತ್ಯಾಪ್ತ ಸಂಗಾತಿ ನಾನೇ. ನನ್ನ ಜೊತೆಗೇ ನಾನು ಹೆಚ್ಚು ಮಾತನಾಡಿಕೊಳ್ಳುವುದು. ‘ಕತ್ತಲ ಬೆನ್ನಿಗೆ ಹಗಲಿರುವ ಹಾಗೆ’ ನಮ್ಮ ಕಷ್ಟದ ಸಮಯ ಕಳೆಯುವವರೆಗೆ ನಮ್ಮಲ್ಲಿ ತಾಳ್ಮೆ ಇರಬೇಕು ಎಂದು ಧೈರ್ಯ ತುಂಬಿಕೊಳ್ಳುತ್ತಿದ್ದೆ. ಯಾರು ನನ್ನ ಎಷ್ಟೇ ಬಾರಿ ಕುಗ್ಗಿಸಲು ಪ್ರಯತ್ನಪಟ್ಟರೂ ಅಚಲವಾದ ಆತ್ಮಬಲ, ಸ್ವಾಭಿಮಾನ ನನ್ನ ಜೊತೆಗೆ ಇರುವುದರಿಂದ ಯಾವುದನ್ನೂ ಸುಲಭಕ್ಕೆ ಸೋಲೊಪ್ಪಿಕೊಳ್ಳಲು ಇಲ್ಲೀತನಕ ಬಿಟ್ಟಿಲ್ಲ. ಬದುಕಿನ ಪ್ರತಿ ಅನುಭವಗಳು, ನೋವುಗಳು ನನ್ನನ್ನು ಮತ್ತಷ್ಟು ಗಟ್ಟಿಯಾಗಿಸಿದವು.

‘ಹೇಗೂ ಬದುಕಿದರಾಯ್ತು ಅನ್ನೋದಕ್ಕಿಂತ ಹೀಗೇ ಬದುಕಬೇಕು’ ಎಂಬ ತತ್ವ ನಿಶ್ಚಲವಾಯಿತು. ಏನೇ ಕಷ್ಟ ಬಂದರೂ ಎದುರಿಸಬಲ್ಲೆ ಗೆದ್ದು ತೋರಿಸಬಲ್ಲೆ ಎನ್ನುವ ನಿರ್ಧಾರ ಮಾಡಿದೆ. ನನ್ನಿಂದಾಗಲ್ಲ ಅಲ್ಲ, ನನ್ನಿಂದ ಯಾಕೆ ಆಗಲ್ಲ ಅಂತ ಪ್ರಶ್ನಿಸಿಕೊಳ್ಳುತ್ತಿದ್ದೆ.

ಬದುಕು ಕಮ್ಯುನಿಟಿ ಕಾಲೇಜಿನಲ್ಲಿ ಡಿಪ್ಲೊಮೊ ಜರ್ನಲಿಸಂ ಮುಗಿಸಿದೆ. ಬದುಕು ಕಾಲೇಜಿನ ಪಾಠ, ಸಂವಾದ, ಚರ್ಚೆಗಳು, ವಿಚಾರ ಸಂಕಿರಣಗಳು ನನ್ನನ್ನು ಮತ್ತಷ್ಟು ನನ್ನಂತೆಯೇ ಬದುಕಲು ಹೆಚ್ಚು ಸಹಕಾರಿಯಾಗಿ ಭರವಸೆ ಮೂಡಿಸಿದವು. ಜೊತೆಗೆ ಹಂಗಿನ ಅಗುಳನ್ನು ಜೀರ್ಣಿಸಿಕೊಳ್ಳುವುದು ಅಸಾಧ್ಯವಾದಾಗ ತಮ್ಮನ ಸಹಾಯ ಪಡೆದುಕೊಂಡು ಮಗಳ ಹೆಸರಿನಲ್ಲಿ ‘ಅಮೃತ ಫುಡ್ ಪ್ರಾಡಕ್ಟ್ಸ್’ ಎಂಬ ಸಣ್ಣ ಕಂಪನಿ ಆರಂಭಿಸಿದೆ.  ಸಿರಿಧಾನ್ಯಗಳಿಂದ ಸಿದ್ಧವಾದ ಎಲ್ಲ ವಯೋಮಾನದವರಿಗೂ ಉಪಯುಕ್ತವಾಗುವ ಆರೋಗ್ಯಪೂರ್ಣ ಆಹಾರ ‘ಅಮೃತ ಮಾಲ್ಟ್ ‘ ಅನ್ನು ಅಮೆಝಾನ್ ಡಿಜಿಟಲ್ ಪ್ಲ್ಯಾಟ್​ಫಾರ್ಮ್​ನಲ್ಲಿ ಬಿಡುಗಡೆ ಮಾಡಿದೆ. ಮಂಗಳೂರು, ಪುತ್ತೂರು, ಮಂಡ್ಯ, ಬೀದರ್, ಬಾಗಲಕೋಟೆ, ಕೆ.ಜಿ.ಎಫ್, ಕೋಲಾರ, ಹಿಮಾಚಲ ಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ, ಮಹಾರಾಷ್ಟ್ರ,ಪುಣೆ, ತಮಿಳುನಾಡು, ಚೆನ್ನೈ, ತೆಲಂಗಾಣ, ಉತ್ತರ ಕರ್ನಾಟಕ, ವಿರಾಜಪೇಟೆ, ಕೊಡಗು ಇನ್ನು ಬಹುತೇಕ ಜಿಲ್ಲೆಗಳಿಂದ, ರಾಜ್ಯ ಮತ್ತು ಹೊರ ದೇಶಗಳಿಂದಲೂ ಆರ್ಡರ್​ ಬರುತ್ತಿರುವುದು ನಿಜಕ್ಕೂ ಹೆಚ್ಚುಹೆಚ್ಚು ಕೆಲಸ ಮಾಡಲು ಉತ್ಸಾಹವನ್ನು ಮೂಡಿಸಿದೆ.

Baduku Community College Bengaluru

ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನ ಪ್ರಾಧ್ಯಾಪಕ ಮತ್ತು ಸ್ನೇಹಿತವೃಂದದೊಂದಿಗೆ ಜ್ಯೋತಿ.

ತಾಯಿಯಾಗಿ ನನ್ನ ಜವಾಬ್ದಾರಿ ಹಾಗೂ ಕರ್ತವ್ಯದ ಸಲುವಾಗಿ ಮಕ್ಕಳ ಕನಸುಗಳಿಗೆ ನೀರೆರೆದು ಪೋಷಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಮಗಳು ಅಮೃತ 9ನೇ ತರಗತಿಯಲ್ಲಿ ಓದುತ್ತಿದ್ದು ಟೆಕ್ವಾಂಡೋ (ಕೊರಿಯನ್ ಮಾರ್ಷಿಯಲ್ ಆರ್ಟ್ ) ನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ. ಮಂಗೋಲಿಯಾ, ನೇಪಾಳ, ಕೇರಳ, ಗುಜರಾತ್, ಗೋವಾ, ಮೈಸೂರು, ದೆಹಲಿ ಸೇರಿದಂತೆ ಭಾರತವನ್ನು ಪ್ರತಿನಿಧಿಸಿ ಹಲವಾರು ಚಿನ್ನ, ಬೆಳ್ಳಿ, ಕಂಚಿನ ಪದಕವನ್ನು ಪಡೆದಿದ್ದಾಳೆ. 2/2 ಸೆಂಟಿಮೀಟರ್ ಅಳತೆಯಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತರ ಭಾವಚಿತ್ರವನ್ನು 4 ನಿಮಿಷ 53 ಸೆಕೆಂಡ್​ನಲ್ಲಿ ಬಿಡಿಸಿ ವಿಶ್ವದಾಖಲೆ ಮಾಡಿದ್ದಾಳೆ. ಈತನಕ ಸುಮಾರು 2,500ಕ್ಕೂ ಹೆಚ್ಚಿನ ಚಿತ್ರಗಳನ್ನು ಬಿಡಿಸಿದ್ದಾಳೆ. ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆ ಮುಗಿಸಿದ್ದಾಳೆ. ಕ್ರೀಡೆ ಮತ್ತು ಚಿತ್ರಕಲೆಯಲ್ಲಿ ಅಸಾಧಾರಣ ಸಾಧನೆಗಾಗಿ ಸುಮಾರು ಎಂಟು ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ಯೋಗ, ಸಂಗೀತ, ನಟನೆಯಲ್ಲಿ ಆಸಕ್ತಿ ಹೊಂದಿದ್ದು ಹೆಚ್ಚಿನ ಸಾಧನೆ ಮಾಡುವ ಗುರಿ ಹೊಂದಿದ್ದಾಳೆ. ಮಗ ರಕ್ಷಿತ್ ಟೇಕ್ವಾಂಡೂನಲ್ಲಿ ರೆಡ್ ಬೆಲ್ಟ್ ಪಡೆದಿದ್ದು, ಕೀಬೋರ್ಡ್ ಕಲಿಯುತ್ತಿದ್ದಾನೆ. ಚಿಕ್ಕಮಗ ವಿಶಾಲ್ ಪ್ರಜ್ವಲ್ ಕಿಡ್ ಮಾಡೆಲ್, ನೃತ್ಯ ಮತ್ತು ನಟನೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು ಅಭ್ಯಾಸ ಮಾಡುತ್ತಿದ್ದಾನೆ.

ಸೋತವರ ಬದುಕಿನಲ್ಲಿ ಉತ್ಸಾಹದ ಅಲೆಯನ್ನು ಮೂಡಿಸಬೇಕೆಂಬ ಸದುದ್ದೇಶ ಇಟ್ಟುಕೊಂಡು ಹಲವಾರು ಪ್ರೇರಣಾದಾಯಕ ಕಥೆಗಳನ್ನು, ಸಾಮಾಜಿಕ ಸಂದೇಶಗಳನ್ನು ಕೊಡುವ ‘ಅಮೃತಘಳಿಗೆ ಕನ್ನಡ ಯುಟ್ಯೂಬ್ ಚಾನಲ್’ ಅನ್ನು ಪ್ರಾರಂಭ ಮಾಡಿ, ಯೂಟ್ಯೂಬರ್ ಆಗಿ ಕೆಲಸ ಮಾಡುತ್ತಿದ್ದೇನೆ. ಪ್ರತಿಫಲವಾಗಿ ಸಾಕಷ್ಟು ಜನರು ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡು ಸಂತೋಷವಾಗಿರುವ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ಓದಿ, ತಿಳಿದುಕೊಂಡು, ಸೂಕ್ಷ್ಮವಾಗಿ ಇದರ ಸುತ್ತ ಕೆಲಸ ಮಾಡಲು ಇಚ್ಚಿಸುತ್ತೇನೆ. ಅದಕ್ಕಾಗಿ ನಾನು ಆಯ್ಕೆ ಮಾಡಿಕೊಂಡ ಕ್ಷೇತ್ರ ಮಾಧ್ಯಮ.

Future Journalists Jyothi Bhaskar

ಅನಾಥಾಶ್ರಮದ ಜೀವಗಳನ್ನು, ಅವರ ಕಲ್ಪನೆಗಳನ್ನು ಜ್ಯೋತಿ ಸೆರೆ ಹಿಡಿದಿದ್ದು ಹೀಗೆ.

ಒಂದು ಮರ ಗಿಡವಾಗಿದ್ದಾಗ ಅದರ ಮಹತ್ವ ಬಹುತೇಕರಿಗೆ ಗೊತ್ತಾಗುವುದಿಲ್ಲ. ಎಲ್ಲವನ್ನು ಸಹಿಸಿಕೊಂಡು ಕಷ್ಟಸಹಿಷ್ಣುವಾಗಿ ಬೆಳೆದು, ಫಲ ಕೊಡುವಾಗ, ನೆರಳು ನೀಡುವಾಗ ಅದರ ಬೆಂಬಲಕ್ಕೆ ನಿಲ್ಲುತ್ತಾರೆ. ಈಗ ನನ್ನ ಗಂಡನಮನೆಯ ಎಲ್ಲಾ ಸದಸ್ಯರು ನನ್ನ ಹಾಗೂ ಮಕ್ಕಳ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಾವು ಏನಾಗಬೇಕೋ ಅದನ್ನೇ ಯೋಚಿಸಬೇಕು. ನಮ್ಮ ಯೋಚನೆಗಳು ನಮ್ಮ ಬದುಕನ್ನು ರೂಪಿಸುತ್ತವೆ ಎಂದು ನಾನು ಬಲವಾಗಿ ನಂಬುತ್ತೇನೆ. ವಿದ್ಯಾಭ್ಯಾಸ ಮುಂದುವರಿಸುತ್ತಾ, ನೊಂದವರಿಗೆ ನೆರವಾಗುವ, ಸ್ಪಂದಿಸುವ, ಧ್ವನಿಯಾಗುವ ನಿಟ್ಟಿನಲ್ಲಿ ಪತ್ರಿಕೋದ್ಯಮದಲ್ಲಿ ಮುಂದುವರೆಯುವ ಗುರಿ ಇದೆ. ಓದು, ಬರೆವಣಿಗೆ, ನಿರೂಪಣೆಯಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಲು ಅವಕಾಶಗಳನ್ನು ಹುಡುಕಿಕೊಳ್ಳುತ್ತಿದ್ದೇನೆ.

ಇದನ್ನೂ ಓದಿ : Journalism : ‘ದೇವರ ಹೆಸರಿನಲ್ಲಿ ನನ್ನ ಅಮ್ಮನ ಕುತ್ತಿಗೆಯಲ್ಲಿ ಜೋತಾಡುವ ಆ ಮುತ್ತುಗಳಿಗಾಗಿ’

Read Full Article

Click on your DTH Provider to Add TV9 Kannada