Short Stories : ಅಚ್ಚಿಗೂ ಮೊದಲು : ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ ಇಂದಿನಿಂದ ಓದುಗರಿಗೆ

Woman : ‘ಇಸ್ಮಾಯಿಲ್ ಅವರು ಮುಕ್ತ ಆಲೋಚನೆಯಿಂದ ಕಥೆಗಳನ್ನು ಕಟ್ಟುವುದು ಮೆಚ್ಚುಗೆ ಹುಟ್ಟಿಸುತ್ತದೆ. ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದ ಕಥೆಗಾರರ ಲೇಖನಿಯಲ್ಲಿ ಮೂಡುವ ಹೆಣ್ಣಿನ ಚಿತ್ರಣ ನಮ್ಮ ಸಾಮಾಜಿಕ ಸ್ಥಿತಿಗತಿಯ ಪ್ರತಿಬಿಂಬವಾಗಿರುತ್ತದೆ ಎಂಬ ನಂಬಿಕೆಗೆ ಇವರ ಕಥೆಗಳು ಸಾಕ್ಷಿ ನೀಡಿವೆ.’ ಚೈತ್ರಿಕಾ ನಾಯ್ಕ ಹರ್ಗಿ

Short Stories : ಅಚ್ಚಿಗೂ ಮೊದಲು : ಇಸ್ಮಾಯಿಲ್ ತಳಕಲ್ ಅವರ ‘ಬೆತ್ತಲೆ ಸಂತ’ ಇಂದಿನಿಂದ ಓದುಗರಿಗೆ
ಕಥೆಗಾರ ಇಸ್ಮಾಯಿಲ್ ತಳಕಲ್

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಬೆತ್ತಲೆ ಸಂತ (ಕಥೆಗಳು)
ಲೇಖಕರು : ಇಸ್ಮಾಯಿಲ್ ತಳಕಲ್
ಪುಟ : 96
ಬೆಲೆ : ರೂ. 80
ಮುಖಪುಟ ಕಲೆ : ಅಬ್ರಹಾಂ ಮೇಘನಾಥ ಬೆಳ್ಳಿ
ವಿನ್ಯಾಸ : ಗುರುಪ್ರಸಾದ 
ಪ್ರಕಾಶನ : ಕಥನ ಪ್ರಕಾಶನ, ಬೆಂಗಳೂರು

*

ಇಸ್ಮಾಯಿಲ್ ತಳಕಲ್ ಮೂಲತಃ ಕೊಪ್ಪಳ ಜಿಲ್ಲೆಯ ಗೊಂಡಬಾಳ ಗ್ರಾಮದವರು.  ಸದ್ಯ ಬೆಳಗಾವಿ ಜಿಲ್ಲೆಯ ಖನಗಾಂವದಲ್ಲಿ ಶಾಲಾ ಶಿಕ್ಷಕರಾಗಿದ್ದಾರೆ. ಸಾಹಿತ್ಯ ಮತ್ತು ಕಿರುಚಿತ್ರ ನಿರ್ಮಾಣ ಇವರ ಆಸಕ್ತಿ ಕ್ಷೇತ್ರಗಳು. ಇವರ ಮೊದಲ ಕಥಾ ಸಂಕಲನ ಬೆತ್ತಲೆ ಸಂತ ಇಂದಿನಿಂದಲೇ ಓದುಗರಿಗೆ ಲಭ್ಯ.

ಯುವ ಲೇಖಕನೊಬ್ಬನಿಂದ ನಾವು ಏನನ್ನು ಬಯಸುತ್ತೇವೆ? ಆರ್ದ್ರತೆ, ಅಂತಃಕರಣ ತುಂಬಿದ ಒಡಲು, ಕಣ್ಣು ತೇವವಾಗಿಸಬಲ್ಲ ಭಾವುಕತೆ ಮತ್ತು ಉಳಿದ ಮನುಷ್ಯರಿಗೆ ಸದಾ ದ್ರವಿಸುವ ಹೃದಯ? ಹಾಗಿದ್ದರೆ, ಇಸ್ಮಾಯಿಲ್ ತಳಕಲ್ ಅಂತಹ ಎಲ್ಲ ಗುಣಗಳನ್ನೂ ಪಡೆದ ಬರಹಗಾರ. ಅವರು ಬೆಳೇದು ಬಂದ ಪರಿಸರ, ಅವರನ್ನು ಆವರಿಸಿರುವ ಬದುಕಿನಲ್ಲಿ ಸುಖದುಃಖ, ಬಯಕೆ-ಭಯಗಳೆಲ್ಲವೂ ಯಥಾ ಪ್ರಮಾಣದಲ್ಲಿಯೇ ಇವೆ. ಹಾಗೆಂದೇ, ಅವರು ಕಥೆಗಾರನ ಚಾಣದಲ್ಲಿ ಕೆತ್ತಿಸಿಕೊಂಡು ಜೀವವಿರುವ ಮೂರ್ತಿಯಾಗಲು ಬಯಸುತ್ತಿವೆ. ಇಲ್ಲಿನ ‘ಗುಲಾಬಿ ಹೂವಿನ ಫ್ರಾಕು’, ‘ರೋಗಗ್ರಸ್ಥ’, ಜಸ್ಟೀಸ್ ಫಾರ್ ದುರುಗಿ’, ‘ಬೆತ್ತಲೆ ಸಂತ’, ‘ಮುರಿದ ಕೊಳಲಿನ ನಾದ’ ಕಥೆಗಳಲ್ಲಿ ಆ ಬಗೆಯ ಮೂರ್ತರೂಪದ ಪಾತ್ರಗಳನ್ನು ಎದುರುಗೊಳ್ಳುವರು. ಸ್ಥಳೀಯ ಭಾಷೆಯ ಸೊಗಡು, ಅಪ್ಪಟ ಪ್ರಾಮಾಣಿಕತೆ ನೇರವಂತಿಕೆ ಈ ಕಥೆಗಳಲ್ಲಿ ಉಸಿರಿನಷ್ಟು ಸಹಜವಾಗಿ ಬೆರೆತಿದೆ. ಕರ್ಕಶ ಗದ್ದಲದ ಲೋಕದಲ್ಲಿ ಇಸ್ಮಾಯಿಲ್​ರಂಥ ಕಥೆಗಾರರ ಮೆಲುದನಿ ಕೇಳಿಸಿಕೊಳ್ಳುವುದು ಬಹಳ ಮುಖ್ಯ. ಅದು ಕಥಾಲೋಕದ ಹೊಣೆಗಾರಿಕೆ ಕೂಡ.
ಕೇಶವ ಮಳಗಿ, ಹಿರಿಯ ವಿಮರ್ಶಕ

‘ಕತೆ’ ಒಂದು ಮಾಂತ್ರಿಕ ಶಕ್ತಿಯಾಗಿ ಯಾವಾಗಲೂ ನನ್ನನ್ನು ಆಕರ್ಷಿಸುತ್ತಿರುತ್ತದೆ. ಕತೆ ಬರೆಯುವಾಗಿನ ಪ್ರೀತಿ ಕತೆ ಓದುವಾಗಲೂ ಇರುವುದರಿಂದ ನನಗೆ ಅವೆರಡು ಕ್ರಿಯೆಗಳು ಬೇರೆ ಬೇರೆ ಎಂದೆನಿಸುವದಿಲ್ಲ. ಅವೆರಡರ ನಡುವೆ ಅಮೂರ್ತ ಹರಿವು ಇದ್ದು ಕತೆ ಓದುವಾಗ ಬರೆಯುವುದರ ಕಡೆಗೆ, ಬರೆಯುವಾಗ ಓದುವುದರ ಕಡೆಗೆ ಹರಿಯುತ್ತಿರುತ್ತದೆ ಎಂದು ನನಗನಿಸುತ್ತದೆ. ಕತೆ ಏಕೆ ಬರೆಯುತ್ತೇನೆ ಮತ್ತು ಏಕೆ ಬರೆಯಬೇಕು ಎನ್ನುವ ಎಲ್ಲಾ ಕತೆಗಾರರನ್ನು ಕಾಡುವ ಪ್ರಶ್ನೆ ಸಹಜವಾಗಿ ನನಗೂ ಕಾಡಿದ್ದಿದೆ. ನಮ್ಮ ಸುತ್ತಮುತ್ತ ನಡೆಯುವ, ಘಟಿಸುವ ಸಾಕಷ್ಟು ಅಹಿತಕರ ಘಟನೆಗಳು ಬಹುವಾಗಿ ಕಾಡಿ ಏನೂ ಮಾಡಲಾಗದ ಅಸಹಾಯಕನನ್ನಾಗಿಸಿ ಎದೆಯನ್ನು ಭಾರವಾಗಿಸಿವೆ. ಆ ಭಾರವನ್ನು ಕಡಿಮೆ ಮಾಡಲು ಕತೆಗಳನ್ನು ಬರೆದು ಒಂದಿಷ್ಟು ಹಗುರಾಗಲು ಪ್ರಯತ್ನಿಸಿದ್ದೇನೆ. ಹೀಗೆ ಕತೆ ಬರೆಯುವುದೇ ಹೊರಗಿನ ಘಟನೆಗಳಿಗೆ ಪ್ರತಿಸ್ಪಂದನೆಯಾಗುತ್ತದೆಯೇ? ಅಥವಾ ಕತೆಗಾರ ಅದಕ್ಕೂ ಮೀರಿ ಇನ್ನೇನಾದರೂ ಮಾಡಬೇಕಾ? ಎಂಬ ಪ್ರಶ್ನೆಗಳು ಸದಾ ಕಾಡುತ್ತಲೆ ಇರುತ್ತವೆ. ಹೊರಗಿನ ಘಟನೆಗಳಿಗೆ ನನ್ನೊಳಗೆ ಉಂಟಾಗುವ ಪ್ರತಿಸ್ಪಂದನೆಗಳ ಘರ್ಷಣೆಯಲ್ಲಿ ಪಳಕ್ಕನೆ ಹೊಳೆಯುವ ಎಳೆಯೊಂದನ್ನು ಕಥೆಯಾಗಿ ವಿಸ್ತರಿಸುವಲ್ಲಿ ಸಾಕಷ್ಟು ಬಾರಿ ಸೋತಿದ್ದೇನೆ. ಹಲವು ಬಾರಿ ತಿದ್ದಿದ್ದೇನೆ. ಕೆಲವೊಂದು ಕತೆಗಳನ್ನು ಸಂಕಲನದಿಂದ ಹೊರಗಿಟ್ಟಿದ್ದೂ ಇದೆ. ಇಲ್ಲಿರುವ ಅಷ್ಟೂ ಕತೆಗಳ ಕುರಿತು ಆ ಕ್ಷಣಕ್ಕೆ ಮಾತ್ರ ತೃಪ್ತಿಪಟ್ಟುಕೊಳ್ಳಲು ಪ್ರಯತ್ನಿಸಿದ್ದೇನೆ. ಆದರೆ ಮತ್ತೊಮ್ಮೆ ಓದಲು ಕುಳಿತಾಗ ಮತ್ತೇನೋ ತಿದ್ದಬೇಕು, ಯಾವುದನ್ನೋ ಬದಲಾಯಿಸಬೇಕು ಎಂದೆನಿಸಿತ್ತಿರುವುದು ಸುಳ್ಳಲ್ಲ.
ಇಸ್ಮಾಯಿಲ್ ತಳಕಲ್, ಕಥೆಗಾರ

*

‘ಚಾಕೊಲೇಟ್’ ಕಥೆಯ ಆಯ್ದ ಭಾಗ

ತೇಪೆ ಹಚ್ಚಿದ ಅಂಗಿ ಮತ್ತು ಅಲ್ಲಲ್ಲಿ ತೂತಾದ ಚಡ್ಡಿಗೆ ಸಿಡಿದಿದ್ದ ರಾಡಿಯನ್ನ ಒರೆಸಿಕೊಳ್ಳುತ್ತಲೆ ಹೊಲಗಳ ಬದು ಹಿಡಿದು ದುಬು ದುಬು ಮನಿ ಕಡೆ ಓಡತೊಡಗಿದ್ದ ಶಿವಾನಂದನಿಗೆ ಅಂದು ಮುಖದ ತುಂಬಾ ಖುಷಿ ಆವರಿಸಿಕೊಂಡಿತ್ತು. ಸೂರ್ಯ ಹುಟ್ಟೋದಕ್ಕೂ ಮುಂಚೆ ತನ್ನ ವಾರಿಗೆಯವರೊಂದಿಗೆ ಕೂಲಿಗಂತ ಹೊಳಿಹೊತ್ತಿಗೆ ಹೋಗಿದ್ದವನು, ಮೊಣಕಾಲು ಗಂಟ ಇದ್ದ ರಾಡಿಯೊಳಗೆ ಹಲಸಂದಿ ಬೀಜವೂರಿ ಮೈತುಂಬ ಹರ್ಲ್ ಸಿಡಿಸ್ಕೆಂಡು ಮತ್ತ ಒಂಬತ್ತು ಗಂಟೆ ಅನ್ನೋದ್ರೊಳಗ ಮನೆಗೆ ಬಂದು ತಯಾರಾಗಿ ಶಾಲೆಗೆ ಹೊರಡುವ ಅವನ ಎಂದಿನ ದಿನಚರಿ ಇದ್ದರೂ ಇವತ್ತು ತುಸು ಉಲ್ಲಾಸ ಹೆಚ್ಚಿಗೆ ಇದ್ದದ್ದು ಪದೇಪದೆ ತೊಡರು ಹಾಕುತಿದ್ದ ಅವನ ಪಾದಗಳಿಂದ ಗೊತ್ತಾಗುತ್ತಿತ್ತು. ಅವನ ಮನೆಯ ಪರಿಸ್ಥಿತಿ ಅನುಕೂಲಕರವಾಗಿ ಇಲ್ಲದಿದ್ದರೂ ಅಭ್ಯಾಸದಲ್ಲಿ ಪರವಾಗಿಲ್ಲ ಅನ್ನುವ ಮಟ್ಟಕ್ಕಿದ್ದ ಶಿವಾನಂದ ಇನ್ನೆರೆಡು ದಿನಗಳಲ್ಲಿ ಹೊಸ ಶಾಲೆಗೆ ಹೋಗುವ ಕಾತರ ಮತ್ತು ರೋಮಾಂಚನಕ್ಕೆ ಮೂಕನಾಗಿದ್ದ. ಇಂದು ಕೊಪ್ಪಳಕ್ಕೆ ಹೋಗಿ ಹೊಸ ಅಂಗಿ, ಪಾಟಿಚೀಲ ತರಾಣ ಅಂತ ಅವನಪ್ಪ ಮಲ್ಲಣ್ಣ ಹೇಳಿದ್ದು ಅವನು ಈ ಪರಿ ಖುಷಿಯಾಗಿದ್ದಕ್ಕೆ ಕಾರಣ ಆಗಿತ್ತು. ಅದಕ್ಕ ತನ್ನ ಗೆಳೆಯರನ್ನ ಅರ್ಧ ದಾರಿಯಲ್ಲೆ ಬಿಟ್ಟು ಅವಸರದಿಂದಲೆ ಮನಿಕಡಿ ಪಾದ ಬೆಳಿಸಿದ್ದ.

ಆದ್ರ ಅನಕ್ಷರಸ್ಥರೂ ಬಡವರೂ ಆಗಿದ್ದ ಅವನ ತಂದೆ ತಾಯಿ ಮಗನನ್ನು ಶಾಲೆಗೆ ಕಳುಹಿಸುವುದ ಬಿಟ್ಟು ಹೆಚ್ಚಾಗಿ ತಮ್ಮ ಜೊತೆ ಕೂಲಿಗೆ ಕರೆದುಕೊಂಡು ಹೋಗುವುದು ರೂಢಿಯಾಗಿತ್ತು. ಇವರಿಗೆ ಇಂಬು ಕೊಡುವಂತೆ ಆ ಊರಿನಲ್ಲಿ ಮಳೆಗಾಲವೇನಾದರೂ ಪ್ರಾರಂಭವಾಯಿತೆಂದರೆ ಹೊಲಗಳಲ್ಲಿ ಉತ್ತುವುದು ಬಿತ್ತವದು ಇತರ ಕೆಲಸ ಕಾರ್ಯಗಳು ಶುರುವಾಗಿ ಗೊಬ್ಬರ ಹಾಕಲಿಕ್ಕೆ, ಸ್ವಲ್ಪ ಬೆಳೆ ಬೆಳೆದ ನಂತರ ಅದರಲ್ಲಿರುವ ಕಳೆ ಕೀಳಲಿಕ್ಕೆ ರೈತರಿಗೆ ಸುಲಭವಾಗಿ ಸಿಗುತ್ತಿದ್ದದ್ದು ಈ ಸರ್ಕಾರಿ ಶಾಲೆಯ ಮಕ್ಕಳೇ. ಆಗೆಲ್ಲ ತರಗತಿಯಲ್ಲಿ ಮಕ್ಕಳ ಸಂಖ್ಯೆ ಅರ್ಧಕರ್ಧ ಕಡಿಮೆಯಾಗಿ ಹೊಲಗಳಲ್ಲಿ ಹಾಜರಾತಿ ಹೆಚ್ಚಾಗುತ್ತಿದ್ದದ್ದು ಮಾಮೂಲಾಗಿತ್ತು. ಇದರಿಂದ ಹೆಚ್ಚಾಗಿ ತೊಂದರೆಯಾಗುತ್ತಿದ್ದದ್ದು ಶಾಲೆಯ ಮಾಸ್ತರುಗಳಿಗೆ. ಅವರು ಶಾಲೆಗೆ ಬರದ ವಿದ್ಯಾರ್ಥಿಗಳ ತಂದೆತಾಯಿಯವರ ಮನೆಗೆ ಹೋಗಿ ಅವರ ಕೈಕಾಲು ಹಿಡಿದು ಬುದ್ಧಿ ಹೇಳಿ ರಮಿಸಿ ಮತ್ತೆ ಶಾಲೆಗೆ ಕರೆತರುವ ಹೊತ್ತಿಗೆ ಸಾಕು ಸಾಕಾಗಿ ಹೋಗುತ್ತಿತ್ತು. ಆಗ ಎರಡು ಮೂರು ದಿನ ಶಾಲೆಗೆ ಬಂದವರಂತೆ ನಟಿಸುತ್ತಿದ್ದ ವಿದ್ಯಾರ್ಥಿಗಳು ಸ್ವಲ್ಪ ದಿನದ ನಂತರ ವರ್ಗಕೋಣೆಗಳಿಗೂ ತಮಗೂ ಆಗಿಬರುವದಿಲ್ಲ ಎಂಬಂತೆ ಮತ್ತೆ ಹೊಲದ ಕಡೆ ಮುಖ ಮಾಡಿಬಿಡುತ್ತಿದ್ದರಿಂದ ಮಾಸ್ತರುಗಳಿಗೆ ತಲಿಬ್ಯಾನಿ ಅಂತೂ ತಪ್ಪುತ್ತಿರಲಿಲ್ಲ. ವರ್ಷಂಪೂರ್ತಿ ಪಾಠ ಮಾಡುವದಕ್ಕಿಂತ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಹಿಡಿದಿಡುವುದೇ ಅವರಿಗೆ ಒಂದು ದೊಡ್ಡ ಸವಾಲಾಗಿಬಿಡುತ್ತಿತ್ತು.

ಶಿವಾನಂದನ ತಂದೆ ತಾಯಿಗಳೂ ಇದಕ್ಕೇನೂ ಹೊರತಾಗಿರಲಿಲ್ಲ. ಶಾಲೆಯಲ್ಲಿ ಮಗನಿಗೆ ಅಕ್ಷರದ ಬಿಂದುಗಳನ್ನು ತಲೆಗಿಳಿಸುವದಕ್ಕಿಂತ ಹೊಲದಲ್ಲಿ ಬೆವರ ಹನಿಯುದಿರಿಸುವದೇ ಅನ್ನದ ಮೂಲವೆಂದು ನಂಬಿದ್ದವರು. ಅವರ ಒತ್ತಾಯಕ್ಕೆ ನಸುಕಿನ ಹೊತ್ತಿನಲ್ಲಿಯೇ ತನ್ನ ವಾರಿಗೆಯ ಹುಡುಗರೊಂದಿಗೆ ಹೊಲಕ್ಕೆ ಹೋಗಿ ದುಡ್ಕೊಂಡು ಬಂದು ಮತ್ತೆ ಗಂಟೆ ಬಾರಿಸುವ ಹೊತ್ತಿಗೆ ಹರಕು ಚೊಣ್ಣ ಮುರುಕು ಪಾಟಿಚೀಲ ಹೆಗಲಿಗಾಕಿಕೊಂಡು ಶಿವಾನಂದ ಸಾಲಿಗೋಡುತ್ತಿದ್ದ. ಓದಬೇಕೆನ್ನುವ ಇವನ ಹಂಬಲ ನವೀನ್ ಸರ್ ಎನ್ನುವ ಮಾಸ್ತರ್‍ವೊಬ್ಬರಿಗೆ ಗೊತ್ತಿದ್ದರಿಂದ ಆದರ್ಶ ವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆಸಿದ್ದರು. ಅವರ ನಿರೀಕ್ಷೆ ಹುಸಿ ಮಾಡದೆ ಪರೀಕ್ಷೆ ಪಾಸು ಮಾಡಿ ಇಂಗ್ಲೀಷ್ ಮೇಡಿಯಮ್‍ನ ಆ ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಗೆ ಪ್ರವೇಶ ಪಡೆದಿದ್ದ ಶಿವಾನಂದನಿಗೆ ಏನೋ ಗೆದ್ದಂತಹ ಸಂಭ್ರಮ. ನವೀನ್ ಸರ್‍ರವರಿಗೆ ಎಂತಹದ್ದೊ ಧನ್ಯತಾ ಭಾವ. ಆದರೆ ಅವನಿಗಿದ್ದ ಒಂದೇ ಒಂದು ಸಮಸ್ಯೆಯೆಂದರೆ ಆ ಶಾಲೆ ತನ್ನೂರಿನಿಂದ ಇಪ್ಪತ್ತು ಕಿಲೋಮೀಟರ್ ದೂರವಿದ್ದದ್ದು. ಇದೆ ನೆಪ ಮಾಡಿಕೊಂಡ ಅವನ ತಂದೆ ತಾಯಿ ಅಷ್ಟು ದೂರದ ಶಾಲೆಗೆ ಸೇರಿಸಲು ನಿರಾಕರಿಸಿದ್ದರು. ತನ್ನನ್ನು ಶಾಲೆಗೆ ಹೋಗಲು ಬಿಡುತ್ತಿಲ್ಲವೆಂದು ಸಿಟ್ಟು ಮಾಡಿಕೊಂಡ ಶಿವಾನಂದ ಒಂದು ದಿನ ಹೇಳದೆ ಕೇಳದೆ ಮನೆಬಿಟ್ಟು ಹೋಗಿಬಿಟ್ಟಿದ್ದ.

acchigoo modhalu bettale santha ismayil talakal

ಕಲೆ : ಅಬ್ರಹಾಂ ಮೇಘನಾಥ ಬೆಳ್ಳಿ

ಬೆಳಿಗ್ಗೆಯಿಂದ ಎಷ್ಟು ಹುಡುಕಿದರೂ ಎಲ್ಲಿಯೂ ಪತ್ತೆಯಾಗದಿದ್ದರಿಂದ ಆತಂಕಗೊಳಗಾಗಿದ್ದ ಅವನ ತಂದೆತಾಯಿಗಳು ಕೊನೆಗೆ ಊರಿಂದ ಸ್ವಲ್ಪ ದೂರದಲ್ಲಿದ್ದ ಗುಡ್ಡದ ಕಡೆಗೆ ಹೋಗಿ ನೋಡಿದರೆ ಅದರ ತುದಿಯಲ್ಲಿದ್ದ ಒಂದು ದೊಡ್ಡ ಬಂಡೆಯ ಮೇಲೆ ಒಬ್ಬನೇ ಕುಳಿತ್ತಿದ್ದ. ಪಕ್ಕದಲ್ಲಿ ಅವನ ಪಾಟೀಚೀಲ. ಅದರ ಮೇಲೆ ಅರೆತೆರೆದ ಪುಸ್ತಕ ಗಾಳಿಗೆ ತನ್ನ ಪುಟಗಳನ್ನು ಪಟಪಟಗುಟ್ಟಿಸುತ್ತಿತ್ತು. ಮಗನನ್ನು ಕೊನೆಗೂ ಹುಡುಕಿದ ಶಿವಾನಂದನ ಪಾಲಕರು ನಿಟ್ಟುಸಿರು ಬಿಟ್ಟಿದ್ದರು. ಅವನನ್ನು ಸಮಾಧಾನಿಸಿ ಮನೆಗೆ ಕರೆತರುವ ಹೊತ್ತಿಗೆ ಸೂರ್ಯ ಗುಡ್ಡದ ಮರೆಯಲ್ಲಿ ಮುಳುಗತೊಡಗಿದ್ದ. ಹೀಗೆ ಈ ಮೊದಲು ಯಾವುದಾದರೂ ವಿಷಯಕ್ಕೆ ಶಿವಾನಂದ ದುಃಖಿತನಾದಾಗ ಆ ಗುಡ್ಡಕ್ಕೆ ಹೋಗಿ ಕುಳಿತುಕೊಳ್ಳುತ್ತಿದ್ದದ್ದು ಸಾಮಾನ್ಯ. ಆ ಏಕಾಂತ ಅವನಿಗೆ ಮುದ ನೀಡುತ್ತಿತ್ತೋ ಏನೋ ಬೇರೆ ಸಮಯದಲ್ಲೂ ಅಲ್ಲಿಗೆ ಹೋಗಿ ಸ್ವಲ್ಪ ಸಮಯ ಕಳೆದು ಬರುತ್ತಿದ್ದ. ಆದರೆ ಶಿವಾನಂದನ ಪಾಲಕರ ನಿರ್ಲಕ್ಷ್ಯ ಕಂಡು ನವೀನ್ ಗುರುಗಳು ಅವರಿಗೆ ಬೈದು ಬುದ್ದಿ ಹೇಳಿ ಶಿವಾನಂದನನ್ನು ಆ ಹೊಸ ಶಾಲೆಗೆ ಹೋಗಲು ಅನುಕೂಲ ಮಾಡಿಕೊಟ್ಟಿದ್ದರು. ಅದಕ್ಕೆ ಮಲ್ಲಣ್ಣ ಮಗನನ್ನು ಕರೆದುಕೊಂಡು ಇಂದು ಕೊಪ್ಪಳಕ್ಕೆ ಹೋಗಿ ಅವನಿಗೆ ಬೇಕಾದ್ದು ಕೊಡಿಸುವವನಿದ್ದ. ಮಗ ದಿನವೂ ಇಪ್ಪತ್ತು ಕಿಲೋಮೀಟರ್ ಪ್ರಯಾಣಿಸಿ ಶಾಲೆಗೆ ಹೋಗಿಬಂದು ಮಾಡಿದರೆ ತುಂಬಾ ದಣಿದಾನು ಎನ್ನುವ ಕೊರಗಿಗಿಂತ ಕೂಲಿಗೆ ಹೋದರೆ ಸಿಗುತ್ತಿದ್ದ ಅಷ್ಟೋ ಇಷ್ಟೋ ಪುಡಿಗಾಸು ಇನ್ನು ಸಿಗುವದಿಲ್ಲ ಎನ್ನುವ ಕೊರಗು ಅವರನ್ನು ಕಾಡತೊಡಗಿತ್ತು. ಬೆಳಿಗ್ಗೆ ಎಂಟು ಗಂಟೆಯ ಬಸ್ಸಿಡಿದು ಶಾಲೆಗೆ ಹೋದರೆ ಮತ್ತೆ ಮರಳಿ ಬರುವುದು ಸಂಜೆ ಆರಕ್ಕೆ ಎನ್ನುವ ವಿಷಯ ಕೇಳಿದ ಮೇಲಂತೂ ಅವರಿಗೆ ಸಹಿಸಿಕೊಳ್ಳದ ವಿಷಯವಾಗಿತ್ತು.

ಹಾಗೂ ಹೀಗೂ ಮನೆಯವರ ವಿರೋಧದ ನಡುವೆಯೂ ಇಂಗ್ಲೀಷ್  ಮೇಡಿಯಂ ಶಾಲೆಗೆ ಸೇರಿಕೊಂಡ ಶಿವಾನಂದನಿಗೆ ಎಲ್ಲವೂ ಹೊಸ ಅನುಭವವೆ. ಇಷ್ಟುದಿನ ಶಾಲೆಯಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದವನಿಗೆ ಅಲ್ಲಿ ಎಲ್ಲರೂ ಇಂಗ್ಲೀಷ್‍ನಲ್ಲಿ ಮಾತನಾಡುವದು ಕಂಡು ತಾನ್ಯಾವುದೋ ಭಾಷೆ ಅರ್ಥವಾಗದ ಅನ್ಯಗ್ರಹವೊಂದಕ್ಕೆ ಬಂದುಬಿಟ್ಟಿದ್ದೇನೆ ಎನ್ನುವ ಅನುಭವವಾಗತೊಡಗಿತ್ತು. ಅಲ್ಲಿ ಇಂಗ್ಲೀಷ್ ಮಾತನಾಡುತ್ತಿದ್ದವರೆಲ್ಲರೂ ಏಲಿಯನ್‍ಗಳಂತೆಯೇ ಕಾಣತೊಡಗಿದ್ದರು. ಮೊನ್ನೆ ಅವನ ಸಹಪಾಠಿಯಾಗಿದ್ದ ಸಂಗು, ತನ್ನ ಹುಟ್ಟಿದ ಹಬ್ಬವಿದ್ದರಿಂದ ಹೊಸ ಬಟ್ಟೆ ತೊಟ್ಟು ಚಾಕೊಲೇಟಿನ ಬಾಕ್ಸೊಂದನ್ನು ಹಿಡಿದು ಶಾಲೆಗೆ ಬಂದಿದ್ದ. ಬೆಳಿಗ್ಗೆಯ ಶಾಲಾ ಪ್ರಾರ್ಥನೆ ಮುಗಿದ ನಂತರ ತನ್ನ ತರಗತಿಗೆ ಬಂದು ಎಲ್ಲರಿಗೂ ಎರಡೆರಡು ಚಾಕೊಲೇಟುಗಳನ್ನು ಕೊಟ್ಟಿದ್ದರಿಂದ ಶಿವಾನಂದನಿಗೂ ಎರಡು ಚಾಕೊಲೇಟ್‍ಗಳು ಸಿಕ್ಕಿದ್ದವು. ಈ ಶಾಲೆಗೆ ಬಂದ ನಂತರ ಅವನಿಗೆ ಖುಷಿಕೊಟ್ಟ ವಿಚಾರವೆಂದರೆ ಇದೊಂದೆ. ಬಣ್ಣ ಬಣ್ಣದ ಹಾಳೆಗಳಲ್ಲಿ ಸುತ್ತಿ ಇಟ್ಟಿದ್ದ ಚಾಕೊಲೇಟೊಂದನ್ನು ಬಿಚ್ಚಿ ಬಾಯಿಗೆ ಹಾಕಿಕೊಂಡು ಅದರ ಸ್ವಾದ ಸವಿದಾಗ ಅದೊಂತರ ಭಾರಿ ಮಜ ಅನಿಸಿತು. ಹೊಸ ಸ್ವಾದದ ಹೊಸ ರುಚಿಯ ಆ ಚಾಕೊಲೇಟನ್ನು ಚೀಪಿ ಚೀಪಿ ಖುಷಿಪಟ್ಟ. ಅದು ಬಾಯಲ್ಲಿದ್ದ ಅಷ್ಟೂ ಹೊತ್ತೂ ಮೈಯೆಲ್ಲ ರೋಮಾಂಚನವಾಗತೊಡಗಿತ್ತು. ಅಂತಹ ಚಾಕೊಲೇಟನ್ನು ಇದುವರೆಗೂ ಸವಿಯದಿದ್ದ ಶಿವಾನಂದನಿಗೆ ಈ ಶಾಲೆಗೆ ಬಂದಿದ್ದು ಸಾರ್ಥಕವಾಯ್ತು ಎನ್ನಿಸಿತು. ಇನ್ನೊಂದು ಚಾಕೊಲೇಟನ್ನು ಚಡ್ಡಿ ಜೇಬಿಗಿಳಿಸಿಕೊಂಡ. ತನ್ನೊಂದಿಗೆ ಪರೀಕ್ಷೆ ಬರೆದು ಪಾಸಗದೆ ತಮ್ಮೂರಿನ ಅದೇ ಶಾಲೆಯಲ್ಲಿ ಓದುತ್ತಿರುವ ತನ್ನ ಗೆಳೆಯರಿಗೆ ತೋರಿಸಿ ಅವರೆದುರಿಗೆ ಜಂಬ ಕೊಚ್ಚಿಕೊಳ್ಳಬೇಕೆನ್ನುವ ಆಸೆ ಅವನದು.

(ಕಥಾಸಂಕಲನದ ಖರೀದಿಗೆ ಸಂಪರ್ಕಿಸಿ : 9448334622)

ಇದನ್ನೂ ಓದಿ : New Novel : ಅಚ್ಚಿಗೂ ಮೊದಲು : ಸಂಯುಕ್ತಾ ಪುಲಿಗಲ್ ಅವರ ‘ಆಪರೇಷನ್ ಬೆಳಕಿನ ಕಿಡಿಗಳು’ ನಾಳೆ ಬಿಡುಗಡೆ

Read Full Article

Click on your DTH Provider to Add TV9 Kannada