AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Chocolate Day 2021 : ಸುಪ್ರಿಯಾ ‘ಫೆರೆರೋಧಾರೆ’ಯೊಂದಿಗೆ ‘ಪಿಂಕಿ’ಯ ಟ್ಯಾಂಗೋ ಜುಗಲಬಂದಿ

Chocolate Memories : ಗಾಯಕಿ ಸುಪ್ರಿಯಾ ರಘುನಂದನ ಖಾರಪ್ರಿಯೆ. ಆದರೂ ಆ ರಾತ್ರಿಯಿಡೀ ನೆಟ್​ಫ್ಲಿಕ್ಸ್​ ನೋಡ್ತಾ ಒಂದು ಡಬ್ಬಿ ಚಾಕೋಲೇಟ್ ಖಾಲಿ ಮಾಡಿದ್ದರೆಂದರೆ...! ಆ ಹತ್ತುರೂಪಾಯಿಯ ‘ಟ್ಯಾಂಗೋ’ಗಾಗಿ ನಟಿ ಅಕ್ಷತಾ ಪಾಂಡವಪುರ ಗುರುವಾರದ ಸಂತೆಗಾಗಿ ಯಾರಿಗಾಗಿ ಕಾದಿದ್ದರು?

World Chocolate Day 2021 : ಸುಪ್ರಿಯಾ ‘ಫೆರೆರೋಧಾರೆ’ಯೊಂದಿಗೆ ‘ಪಿಂಕಿ’ಯ ಟ್ಯಾಂಗೋ ಜುಗಲಬಂದಿ
ಗಾಯಕಿ ಸುಪ್ರಿಯಾ ರಘುನಂದನ ಮತ್ತು ನಟಿ ಅಕ್ಷತಾ ಪಾಂಡವಪುರ
ಶ್ರೀದೇವಿ ಕಳಸದ
|

Updated on:Jul 07, 2021 | 1:50 PM

Share

ಒಮ್ಮೆ ನಿಮ್ಮ ಹಳೆಯ ಪುಸ್ತಕ ತೆಗೆದು ನೋಡಿ. ಪುಟಗಳ ನಡುವೆ ನಿಮ್ಮ ಪ್ರಿಯರು ಕೊಟ್ಟ ಚಾಕೋಲೇಟಿನ ರ್ಯಾಪರ್​ಗಳು ಈಗಲೂ ಸಿಕ್ಕರೂ ಸಿಗಬಹುದು. ಹಾಗೆಯೇ ಅದರೊಂದಿಗಿನ ನೆನಪುಗಳೂ, ಹುಚ್ಚುತನಗಳೂ, ಜಗಳಗಳೂ, ಹಟಗಳೂ, ಕೋಪದುಂಡೆಗಳು, ಸಿಹಿಕನಸುಗಳೂ… ಹೀಗೆ ಏನೇನೆಲ್ಲ  ನೆನಪುಗಳು ನಿಮ್ಮ ಮನಸ್ಸಿನಲ್ಲಿ ಗುಡ್ಡೆ ಹಾಕಿಕೊಳ್ಳಬಹುದು. ಚಾಕೋಲೇಟ್! ಆ ಶಬ್ದದ ಮೋಡಿಯೇ ಅಂಥದ್ದು. ಅದರ ನೆನಪು ಜಾರೋದು ನೇರ ಬಾಲ್ಯಕ್ಕೇ. ಈವತ್ತು ‘ವಿಶ್ವ ಚಾಕೋಲೇಟ್ ದಿನ- World Chocolate Day 2021’ ನಮ್ಮ ಕನ್ನಡ ಸಿನೆಮಾ ನಟಿ ಅಕ್ಷತಾ ಪಾಂಡವಪುರ ಮತ್ತು ಗಾಯಕಿ ಸುಪ್ರಿಯಾ ರಘುನಂದನ ಅವರಿಗೆ ಚಾಕೋಲೇಟ್ ಎಂದಾಕ್ಷಣ ಈ ಕ್ಷಣಕ್ಕೆ ಏನು ನೆನಪಾಗುತ್ತಿದೆ ಎಂದು ಕೇಳಿದಾಗ ಒಂದೆರಡು ಎಳೆಗಳನ್ನವರು ಬಿಡಿಸಿಕೊಂಡು ಇಲ್ಲಿಗೆ ಕಳಿಸಿದರು. ಸುಪ್ರಿಯಾ ಖಾರಪ್ರಿಯೆಯಾದರೂ ‘ಫೆರೆರೋ ರೋಷರ್’ನ ಭಯಂಕರ ನೆನಪಿದೆ! ಹಾಗೆಯೇ ಅಕ್ಷತಾಗೆ ಚಾಕೋಲೇಟ್ ಇಷ್ಟವಿಲ್ಲ ಆದರೂ ‘ಟ್ಯಾಂಗೋ’ ನೆನಪಚಿತ್ರ ಮಾತ್ರ ಸ್ವರ್ಗ. *

ಎಲ್ಲರೂ ತಿಂತಿದಾರೆ ನನಗೂ ಬೇಕು ಅಷ್ಟೇ!

ನನಗೆ ಚಾಕೋಲೇಟ್ ಖಂಡಿತ ಇಷ್ಟವಿಲ್ಲ. ಯಾಕಂದ್ರೆ ಓಲೈಸಿಕೊಳ್ಳಬೇಕಾದರೆ ಚಾಕೋಲೇಟ್ ಕೊಟ್ಟು ಕೊಟ್ಟು ಮಕ್ಕಳನ್ನು ಓಲೈಸಿಕೊಳ್ತಾರೆ. ಆದರೆ ಈವತ್ತಿಗೂ ಮನಸಲ್ಲಿರೋದು ಟ್ಯಾಂಗೋದ ನೆನಪು. ಆಗ ಹತ್ತು ರೂಪಾಯಿಗೆ ಇಷ್ಟುದ್ದಾ ಟ್ಯಾಂಗೋ ಚಾಕೋಲೇಟ್ ಬರೋದು. ಎಲ್ಲರ ಹತ್ರ ಇರೋದು ನನಗೂ ಬೇಕಲ್ಲ, ನಾನೂ ತಿನಬೇಕಲ್ಲ ಅನ್ನಿಸ್ತು ಒಂದಿನ. ಆದರೆ ಆಗಿನ ಕಾಲಕ್ಕೆ ಹತ್ತು ರೂಪಾಯಿ ದೊಡ್ಡದು! ಆದರೂ ಟ್ಯಾಂಗೋ ಬೇಕು. ನನಗೆ ಬೇಕಂದ್ರೆ ಬೇಕು ಅಂತ ಹಟ. ಯಾರ ಬಳಿ ಕೇಳೋದು? ಹತ್ತು ರೂಪಾಯಿ ಎಲ್ಲಿಂದ ತರೋದು? ನಮ್ಮ ಚಿಕ್ಕಜ್ಜ ಒಬ್ಬರಿದ್ರು. ಅವರಿಗೆ ನನ್ನ ಕಂಡ್ರೆ ಭಾರೀ ಇಷ್ಟ. ಪಾಂಡವಪುರದ ಸಂತೆ ಪ್ರತೀ ಗುರುವಾರ. ಆಗವರು ಅದಕ್ಕೆ ಅವರ ಹಳ್ಳಿಯಿಂದ ಬರೋವ್ರು. ಅವರನ್ನೇ ಕೇಳಿದರಾಯಿತು ಅಂತ ಗುರುವಾರಕ್ಕೆ ಕಾಯ್ದೆ. ಆದರೆ ಅವರು ಸಂತೆಯ ದಿನ ಬರಲೇ ಇಲ್ಲ. ಇಷ್ಟು ಬೇಜಾರಾಯ್ತಂದ್ರೆ… ಯಾರ ಬಳಿ ಹೇಳ್ಕೊಳೋದು?

ಮತ್ತೆ ಮುಂದಿನ ಗುರುವಾರದ ತನಕ ಕಾಯ್ದೆ. ಸಂತೆಗೆ ಬಂದವರು ಮನೆಗೆ ಬಂದರು. ಟ್ಯಾಂಗೋ ಬೇಕೇಬೇಕು ಅಂತ ದುಂಬಾಲುಬಿದ್ದೆ. ಅವರಿಗೆ ಆ ಪದವೇ ಗೊತ್ತಿಲ್ಲ. ಹತ್ತು ರೂಪಾಯಿ ಅನ್ನೋದೇ ದೊಡ್ಡ ವಿಷಯ. ಆದರೂ ಅಂಗಡಿ ತೋರಿಸು ಅಂದರು. ತುಂಬಾ ದೂರ ನಡೆದುಕೊಂಡು ಹೋದೆವು. ಟ್ಯಾಂಗೋ ಕೈಗೆ ಸಿಕ್ಕಾಗ ಇಷ್ಟು ಖುಷಿಯಾಯ್ತಲ್ಲ! ಶಾಲೆಗೆ ಓಡಿ ಟಾಯ್ಲೆಟ್ ಬಳಿ ಅವಿತುಕೊಂಡು ಚಪ್ಪರಿಸಿ ಚಪ್ಪರಿಸಿ ಜಬರ್​ದಸ್ತಿನಿಂದ ಮಜಾ ಮಾಡಿಕೊಂಡು ತಿಂದೆ. ರುಚಿಗಾಗಿ ಅಲ್ಲ, ಷೋಕಿಗಾಗಿ! ಯಾರೆಲ್ಲಾ ತಿಂತಾರಲ್ಲ ಹತ್ತುರೂಪಾಯಿ ಕೊಟ್ಟು, ನಾ ತಿನ್ನಬಾರದಾ ಅಂತ. ಆಮೇಲೆ ರ್ಯಾಪರ್ ಜೇಬಲ್ಲಿಟ್ಟುಕೊಂಡು ಕ್ಲಾಸಿಗೆ ಹೋದೆ. ಮನೆಗೆ ಹೋಗುವಾಗ ದಾರಿಯಲ್ಲಿ ಅದನ್ನು ಬಿಸಾಕಿದೆ. ಈಗಲೂ ಟ್ಯಾಂಗೋ ರುಚಿ ನೆನಪಿದೆ ಆದರೆ ಹೇಳೋದಕ್ಕೆ ಬರಲ್ಲ. ರುಚಿ ಅಂದರೆ ಅನುಭವಿಸೋದು ಅಲ್ವಾ?

*

ತಿನ್ನೋವಾಗ ಮತ್ತು ತಿಂದನಂತರ ನಂತರ ಯಾವ ಲೋಕದಲ್ಲಿದ್ದೆ?

ಸಿಹಿ ಅಂದ್ರೆ ದೂರ ನಾನು. ಖಾರಪ್ರಿಯೆ. ಫ್ರೂಟ್ ಅಂಡ್ ನಟ್ಸ್ ಇರೋ ಚಾಕೋಲೇಟ್ ಅಂದರೆ ವಿಶೇಷ ಪ್ರೀತಿ. ಬೇರೆ ಎಲ್ಲವೂ ಇಷ್ಟವಾಗಲ್ಲ. ಫೆರೆರೋ ರೋಷರ್ ಅಂದ್ರೆ ವಿಪರೀತ ಹುಚ್ಚು. ಒಂದೊಂದು ಪದರವನ್ನು ಭೇದಿಸಿಕೊಂಡು ಹೋಗಿ ಕೊನೇಲಿರೋ ಹುರಿದ ಬಾದಾಮಿಗೋಸ್ಕರ… ಆಹಾ ಅದು ಸಿಗೋವಷ್ಟರಲ್ಲಿ ಸ್ವರ್ಗ ಸಿಕ್ಕ ಹಾಗೆ.

ಮೂರು ನಾಲ್ಕು ವರ್ಷಗಳ ಹಿಂದಿನ ಕಥೆ. ಮಗ ಚಿಕ್ಕವನಾಗ. ಮಲಗೋದು ತಡರಾತ್ರಿ. ಅವ ಮಲಗಿದ ಮೇಲೆ ನನ್ನ ಪ್ರಪಂಚ ತೆರೆದುಕೊಳ್ತಾ ಇತ್ತು. ನಾನು ನೆಟ್​ಫ್ಲಿಕ್ಸ್ ನೋಡಿಕೊಂಡೋ ಹಾಡಿಕೊಂಡೋ ಇರ್ತಿದ್ದೆ. ಆಗ ತಾನೆ ನನ್ನ ಗಂಡ ಅಮೆರಿಕಕ್ಕೆ ಹೋಗಿಬಂದಿದ್ರು. ಎಲ್ಲ ಪರಿಚಯದವರಿಗೆ ಕೊಡೋದಕ್ಕೆ ಅಂತ ಒಂದು ಫ್ರಿಡ್ಜಿನ ಕ್ಯಾಬಿನ್​ ತುಂಬುವಷ್ಟು ವೆರೈಟಿ ಚಾಕೋಲೇಟ್​ ತಂದಿದ್ದರು. ಅದರಲ್ಲಿ ಫೆರೆರೋ ರೋಷರ್​ನ ನಾಲ್ಕು ಡಬ್ಬಗಳಿದ್ದವು. ಎಂದಿನಂತೆ ಮಗ ಹನ್ನೆರಡೂವರೆಗೆ ಮಲಗಿದ. ನೆಟ್​ಫ್ಲಿಕ್ಸ್ ಹಾಕಿಕೊಂಡು ಕೂತೆ. ಒಂದು ಫೆರೆರೋ ರೋಷರ್ ಡಬ್ಬ ಹಿಡಿದುಕೊಂಡು ಖುಷಿಯಿಂದ ಮುಳುಗಿದೆ. ಎರಡು ಗಂಟೆಗಳ ಸಿನೆಮಾ. ಅದು ಮುಗಿಯುವಷ್ಟರಲ್ಲಿ ಡಬ್ಬಿಯೂ ಖಾಲಿ. ಅದರಲ್ಲಿ ಎಷ್ಟಿತ್ತೋ ಗೊತ್ತಿಲ್ಲ. ಆದರೆ ದೊಡ್ಡ ಡಬ್ಬಿ. ಅದನ್ನು ತಿಂದು ಮುಗಿಸೋವಷ್ಟು ಹೊತ್ತು ಎಲ್ಲಿದ್ದೆ ಅಂತ ಗೊತ್ತಾಗಲಿಲ್ಲ. ತಿಂದನಂತರ ಸೈಡ್​ ಎಫೆಕ್ಟ್​ನಿಂದ ಒಂದುವಾರ ಯಾವ ಲೋಕದಲ್ಲಿದ್ದೆ ಅಂತಾನೂ ಗೊತ್ತಾಗಿರಲಿಲ್ಲ. ಸುಪ್ರಿಯಾ ರಘುನಂದನ್, ಗಾಯಕಿ

ಇದನ್ನೂ ಓದಿ : World Chocolate Day 2021 : ದಿಶಾಳ ‘ಪೆಟ್ಟಿಗೆ ಅಂಗಡಿ’ ನೀತೂಳ ‘ಔಷಧಿ ಬಾಟಲಿ‘

Published On - 1:23 pm, Wed, 7 July 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!