M. Balamuralikrishna Birthday : ‘ಯಾವ ಕಲಾವಿದರಿಗೂ ಅವರವರ ಪ್ರತಿಭೆಯ ಮೇಲೆ ಅವರಿಗೆ ಹತೋಟಿ ಇರುವುದೇ ಇಲ್ಲ‘
Concert : ‘ಒಮ್ಮೊಮ್ಮೆ ಸುಮ್ಮನೆ ಶುದ್ಧಮಧ್ಯಮ, ಅಂತರ ಗಾಂಧಾರ, ಚತುಶ್ರುತಿ ರಿಷಭ ಮೂರು ಸ್ವರ ಹಿಡಿದುಬಿಡುತ್ತಿದ್ದರು. ಸಭಿಕರು ಶಂಕರಾಭರಣ ಎಂದುಕೊಂಡು ಕಿವಿ ನೆಟ್ಟಗೆ ಮಾಡಿ ಕುಳಿತುಕೊಳ್ಳುವಷ್ಟರಲ್ಲಿ ತಕ್ಷಣ ಹರಿಕಾಂಬೋಜಿಗೆ ಸರಸಾಂಗಿಗೋ, ಚಾರುಕೇಶಿಗೋ ಹಾರಿಬಿಡುವರು. ಈ ರೀತಿಯಲ್ಲೇ ಅವರಿಗೆ ಖುಷಿ. ಅದೊಂದು ಆಟ. ಕಛೇರಿ ಎನ್ನುವುದು ತೀರಾ ಗಂಭೀರವಾದಂಥ ಪವಿತ್ರವಾದಂಥ ಪ್ರಸ್ತುತಿ ಅಂತೆಲ್ಲ ಆಗಿರಲೇ ಇಲ್ಲ. ಭಕ್ತಿಗಿಂತ ಅವರು ಯುಕ್ತಿಗೆ ಹೆಚ್ಚು ತೆರೆದುಕೊಳ್ಳುತ್ತ ಬಂದರು. ತಂತ್ರಗಾರಿಕೆಗೆ ಹೆಚ್ಚು ಪ್ರಾಧಾನ್ಯ. ಹೀಗಾಗಿ ಸಂಪ್ರದಾಯವಾದಿಗಳು ಅವರನ್ನು ಹೆಚ್ಚು ಪ್ರಶ್ನಿಸುತ್ತಿದ್ದರು.‘ ಡಾ. ಟಿ. ಎಸ್. ಸತ್ಯವತಿ
ಸಂಗೀತ ಮಾಂತ್ರಿಕ ಡಾ. ಎಂ. ಬಾಲಮುರಳೀಕೃಷ್ಣ ಮತ್ತು ಪಿಟಿಲು ವಿದ್ವಾನ್ ಡಾ. ಲಾಲಗುಡಿ ಜಯರಾಮನ್ ಪ್ರಸಂಗವೊಂದನ್ನು ಆಗಾಗ ಅನೇಕ ಕಲಾವಿದರುಗಳು ನೆನಪಿಸಿಕೊಳ್ಳುತ್ತಿರುತ್ತಾರೆ. ಇಬ್ಬರೂ ಸಂಗೀತದ ಮೇರುಶಿಖರಗಳು. ಇವರ ಜೋಡಿಗಾಗಿ ಜನ ಕಾಯುವಂಥ ಪ್ರಖ್ಯಾತಿ ಆಗಿನ ಕಾಲಕ್ಕೆ. ಬಾಲಮುರಳಿಯವರು ತಾಳದ ಮುಖ ತೋರಿಸದಿದ್ದರೂ ಅಷ್ಟೇ ಸೃಜನಶೀಲವಾಗಿ ಅನುಸರಿಸಿಕೊಂಡು ಹೋಗುವ ಜಾಣ್ಮೆ ಲಾಲಗುಡಿಯವರದಾಗಿತ್ತು. ಆದರೆ ಒಂದು ಹಂತದ ನಂತರ ಲಾಲಗುಡಿಯವರು ಕೆಲವರ ಬಳಿ, ‘ಬಾಲಮುರಳಿಯವರಿಗೆ ಲಯವೇ ನಿಲ್ಲುವುದಿಲ್ಲ’ ಎಂದು ಹೇಳಿದ್ದು ಬಾಲಮುರಳಿಯವರ ಕಿವಿಗೆ ಬಿದ್ದಿತು. ಆಗ ಅವರು, ತಕ್ಷಣವೇ ಮುಂಬೈಯಲ್ಲಿ ಈ ಪರೀಕ್ಷೆಗೆಂದೇ ಕಛೇರಿಯನ್ನು ಏರ್ಪಡಿಸಿಬಿಟ್ಟರು. ಸಾವಿರಾರು ಜನರ ಮುಂದೆ ಅಸಾಧಾರಣವಾದ ಪಲ್ಲವಿಯನ್ನು ಪ್ರಸ್ತುತಪಡಿಸುತ್ತ, ತಾಳವನ್ನು ಪ್ರತೀ ಎಣಿಕೆಯಲ್ಲಿಯೂ ತೋರಿಸುತ್ತ ಹಾಡಿದರು. ಲಾಲಗುಡಿಯವರು ಪಿಟಿಲು ನುಡಿಸಲಾಗದೆ, ತೇಜೋವಧೆಯಾದಂತಾಗಿ ವಾದ್ಯವನ್ನು ಕೆಳಗಿಟ್ಟುಬಿಟ್ಟರು. ನಂತರ ಬಾಲಮುರಳಿ, ‘ನನಗೆ ಲಯವಿಲ್ಲ ಎಂದು ಹೇಳಿದ್ದಕ್ಕೆ ಏನು ಹೇಳುತ್ತಿ?’ ಎಂದು ಮರುಪ್ರಶ್ನಿಸಿ ಕಛೇರಿ ಸಂಪನ್ನಗೊಳಿಸಿದರು. ಅದೇ ಅವರಿಬ್ಬರೂ ಒಟ್ಟಾಗಿ ನುಡಿಸಿದ ಕೊನೇ ಕಛೇರಿ.
ಇಂಥದ್ದೇ ಮತ್ತೊಂದು ಜನಜನಿತವಾದಂಥ ವಿಷಯ; ಯಾವ ಕೋನಗಳಿಂದಲೂ ಈ ‘ಪ್ರತಿಭೆ’ ಕರ್ನಾಟಕ ಶಾಸ್ತ್ರೀಯ ಸಂಗೀತದ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಕೂರುತ್ತಿಲ್ಲವಲ್ಲ ಎಂದು ಚರ್ಚಿಸಿದ ‘ಚೆನ್ನೈ ಮ್ಯೂಸಿಕ್ ಅಕಾಡೆಮಿ’ ಡಾ. ಎಂ. ಬಾಲಮುರಳೀಕೃಷ್ಣ ಅವರಿಗೆ ನಿರ್ಬಂಧ ಹೇರಿಬಿಡುತ್ತದೆ. ಆದರೆ, ಸದಾ ಪ್ರಯೋಗಾತ್ಮಕ ಹರಿವಿಗೆ ಒಡ್ಡಿಕೊಳ್ಳುವ ಸೃಜನಶೀಲ ವ್ಯಕ್ತಿಗಳ ಬದುಕಿನಲ್ಲಿ ಇಂಥ ಘಟನೆಗಳು ಸಹಜ. ಈ ಪ್ರಕ್ರಿಯೆಯಲ್ಲಿಯೇ ಕಲಾವಿದರು ಹೊಸ ಪ್ರಯತ್ನಗಳಿಗೆ, ಸವಾಲುಗಳಿಗೆ ಒಡ್ಡಿಕೊಳ್ಳುವುದು ಮತ್ತು ಈ ದಾರಿಗಳೇ ಮತ್ತೊಂದು ಮಜಲಿಗೆ ಅವರನ್ನು ಪ್ರೇರೇಪಿಸುವುದು. ಇಂಥದೆಲ್ಲವನ್ನೂ ಆಯಾ ಕ್ಷೇತ್ರದ ಪ್ರಾಜ್ಞರು ಕಲಾವಿದರ ಕೊಡುಗೆಯನ್ನು ವಿಶ್ಲೇಷಿಸುವುದು ಕೂಡ ಅವರವರದೇ ಆದ ಒಳನೋಟ ಮತ್ತು ಅಭಿಪ್ರಾಯಗಳಿಂದ ಕೂಡಿರುತ್ತದೆ. ಹಿರಿಯ ಕರ್ನಾಟಕ ಸಂಗೀತ ವಿದುಷಿ ಡಾ. ಟಿ. ಎಸ್. ಸತ್ಯವತಿ ಅವರು, ಬಾಲಮುರಳಿ ಅವರ ಅಸಾಧಾರಣ ‘ಪ್ರತಿಭೆ’ಯ ಬಗ್ಗೆ ಇಲ್ಲಿ ಮಾತನಾಡಿರುವುದು ಆಸಕ್ತಿದಾಯಕವಾಗಿದೆ.
*
‘ಕೈಲಾಸೇಶ್ವರ ಸುಪ್ರಭಾತ’ದ ಕ್ಯಾಸೆಟ್ ರೆಕಾರ್ಡಿಂಗ್ ಸಂದರ್ಭದಲ್ಲಿ ಬಾಲಮುರಳೀಕೃಷ್ಣ ಅವರನ್ನು ಮೊದಲು ಭೇಟಿಯಾದದ್ದು. ಅದೇ ರೆಕಾರ್ಡಿಂಗ್ ಸ್ಟುಡಿಯೋದಲ್ಲಿಯೇ ಎಂ. ರಂಗರಾವ್ ನಿರ್ದೇಶನದಲ್ಲಿ ಅವರು ಒಂದು ಹಾಡನ್ನು ಹಾಡುತ್ತಿದ್ದರು. ಬಿಡುವಿನ ವೇಳೆಯಲ್ಲಿ ಹೊರಬಂದು, ‘ನಿಮ್ಮ ಬಗ್ಗೆ ಬಹಳ ಕೇಳಿದ್ದೀನಿ. ಸಂಸ್ಕೃತ ಮತ್ತು ಸಂಗೀತ ಎರಡೂ ನಿಮಗೆ ಗೊತ್ತಿದೆ. ಎರಡರ ಮಿಳಿತ ಅದ್ಭುತ’ ಎಂದು ಸಂತೋಷ ವ್ಯಕ್ತಪಡಿಸಿದರು. ಅವರ ನೇರ ಭೇಟಿ ಇದೊಂದೇ. ನಂತರ ನೂರಾರು ಕಛೇರಿಗಳನ್ನು ಕೇಳುತ್ತಾ ಬಂದೆ. 2019ರಲ್ಲಿ ಇದೇ ದಿನ ಅಂದರೆ ಅವರ ಹುಟ್ಟುಹಬ್ಬದ ದಿನ ಚೆನ್ನೈಯಲ್ಲಿ ಅವರ ರಚನೆಗಳ ಬಗ್ಗೆ ಉಪನ್ಯಾಸ ಕೊಡಬೇಕಿತ್ತು. ಅದರೆ ಕೊವಿಡ್ನಿಂದಾಗಿ ರದ್ದಾಗಿ, ಈ ವರ್ಷವೂ ಕೂಡ ಅದು ನೆರವೇರಲಿಲ್ಲ.
ಸಂಸ್ಕೃತದಲ್ಲಿ ಒಳ್ಳೆಯ ಪಾಂಡಿತ್ಯ ಇದ್ದುದರಿಂದ ಸಂಸ್ಕೃತದಲ್ಲಿ ಅನೇಕ ರಚನೆಗಳನ್ನು ಅವರು ಮಾಡಿದ್ದರು. 17ನೇ ವರ್ಷಕ್ಕೆ 72 ರಾಗಗಳಲ್ಲಿ ರಚನೆಗಳನ್ನು ಮಾಡುವುದೆಂದರೆ ಅದು ಅವರ ಅಸಾಧಾರಣ ಸಾಧನೆ. ಪ್ರತಿಭೆ ಮತ್ತು ಅಗಾಧ ಬೌದ್ಧಿಕ ಶಕ್ತಿಯಲ್ಲಿ ಅವರನ್ನು ಮೀರಿಸುವ ಇನ್ನೊಬ್ಬರಿಲ್ಲ. ಹಾಗಾಗಿಯೇ ಅವರು, ಸಂಗೀತಕ್ಕೆ ತೆರೆದುಕೊಳ್ಳುತ್ತಿದ್ದ ರೀತಿಯನ್ನೇ ಅನೇಕ ಸಂಪ್ರದಾಯವಾದಿಗಳು ವಿರೋಧಿಸುತ್ತ ಬಂದರು. ಆದರೆ ಅದೇ ವೇಳೆಗೆ ಅವರ ಆ ವಿನೂತನ ಶೈಲಿ, ಕ್ರಮವನ್ನು ಮೆಚ್ಚಿಕೊಳ್ಳುವ ಕೋಟ್ಯಂತರ ಸಹೃದಯಿಗಳು ಹುಟ್ಟಿಕೊಳ್ಳುತ್ತಲೇ ಹೋದರು ಎನ್ನುವುದು ಗಮನಾರ್ಹ. ವಿದ್ವತ್ತು ಎಂದರೆ ನಿಜಕ್ಕೂ ವಿದ್ವತ್ತು.
ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಸಂಪ್ರದಾಯಕ್ಕೆ ಬದ್ಧರಾಗಿರಲಿಲ್ಲ ಎಂಬುದನ್ನು ನಾನೂ ಅನುಮೋದಿಸುತ್ತೇನೆ. ಆದರೆ, ಅದೇ ದೊಡ್ಡ ವಿಷಯವಲ್ಲ. ಅವರ ವಿದ್ವತ್ತು ಅವರದೇ ರೀತಿಯಲ್ಲಿ ಹಿರಿದು. ಅವರ ರಚನೆಗಳಲ್ಲಿರುವ ಹೊಸ ರೀತಿಯ ಠಾಯಪ್ರಬಂಧವನ್ನು ಗಮನಿಸಿದರೆ ಪ್ರತಿಭೆಯ ಆಳ ಅರ್ಥವಾಗುತ್ತದೆ. ಉದಾಹರಣೆಗೆ, ಕಲ್ಯಾಣಿ ರಾಗವನ್ನು ಮೂಲವಾಗಿಟ್ಟುಕೊಂಡು ಭಿನ್ನ ಸ್ವರಗಳಿಂದ ಅದನ್ನು ಸ್ಪರ್ಷಿಸುತ್ತ ಹೋದಾಗ ಹುಟ್ಟಿಕೊಳ್ಳುವ ರಾಗಗಳಿವೆಯಲ್ಲ… ಆ ಕಲ್ಪನಾಶಕ್ತಿಯೇ ಉದಾತ್ತ ಮತ್ತು ಉತ್ತುಂಗ ಸ್ಥಿತಿಗೆ ತಲುಪಿಸುವಂಥದ್ದು.
ಅವರ ಕೃತಿಗಳು ವಿನೂತನ. ದಾಖಲೆಗಳನ್ನು ಬೇಕಾದಷ್ಟು ಮಾಡಿದ್ದಾರೆ. ಸದ್ಯೋಜ್ಯಾತವಾದ ಪ್ರತಿಭೆ. ಪೂರ್ವಸಿದ್ಧತೆ ಅನ್ನುವುದು ಅವರ ವಿಷಯದಲ್ಲಿ ಬಹಳ ಕನಿಷ್ಠ. ಸಾಧನೆ ಬೇಕಾದಷ್ಟು ಮಾಡಿದರೂ ಕಛೇರಿಗಳಿಗೆ ಅವರು ಬಹಳ ಯೋಜಿಸಿ ಹೀಗೇ ಹಾಡುತ್ತೇನೆ ಎಂದು ಹಾಡಿದ್ದು ನನಗಂತೂ ಗೊತ್ತಿಲ್ಲ. ಅವರ ಕಲ್ಪನಾ ಸ್ವರಗಳ ವಿಶೇಷವೇ ಅದು, ಅವು ಅವರಿಗೆ ಮಾತ್ರ ಹುಟ್ಟುತ್ತವೆ. ಆ ಮುಕ್ತಾಯಗಳು ಹಾಗ್ಹಾಗೇ ಹೊಳೆಯುತ್ತವೆ. ತಾನಾಗಿಯೇ ಅವರ ಆಲೋಚನೆಗಳಲ್ಲಿ ಅವು ಆವಿರ್ಭವಿಸುವಂಥವು. ಅದಕ್ಕಾಗಿ ಅವರು ವಿಶೇಷ ಶ್ರಮ ಹಾಕುತ್ತಿರಲೇ ಇಲ್ಲ. ಹೀಗೆ ಸಾಂಪ್ರದಾಯಿಕ ಕ್ರಮಕ್ಕಿಂತ ವಿಭಿನ್ನವಾದಂಥ ಶೈಲಿ ಅವರದು. ಮುಟ್ಟಲಾರದ ಎತ್ತರದ ಪ್ರಕಾರ ಅದು.
ತಮ್ಮ ಕಂಠಕ್ಕೆ ಒಪ್ಪುವಂಥ ಶೈಲಿಯನ್ನು ಅವರು ರೂಢಿಸಿಕೊಂಡಿದ್ದು ಮಾತ್ರ ಬಹಳ ಅಪರೂಪ. ತ್ರಿಸ್ಥಾಯಿಗಳಲ್ಲ, ಚತುಃಸ್ಥಾಯಿಗಳಲ್ಲಿಯೂ ಅವರ ಕಂಠ ಚಲಿಸುತ್ತಿತ್ತು. ಆರೋಹ ಅವರೋಹಗಳಲ್ಲಿ ಐದು ಸ್ವರಗಳಿದ್ದರೆ ಅದು ರಾಗ. ಆದರೆ ಇವರು ನಾಲ್ಕೇ ಸ್ವರಗಳನ್ನಿಟ್ಟುಕೊಂಡು ಹಾಡುತ್ತಿದ್ದರು. ಇದಕ್ಕೆ ಸ್ವರಾಂತರರಾಗ ಎನ್ನುತ್ತೇವೆ. ಇದು ವಿಸ್ತಾರಕ್ಕೆ ವಿನ್ಯಾಸಕ್ಕೆ ತಕ್ಕುದಲ್ಲ. ಆದರೆ ಅವರು ಸಾಗಪಸಾ, ಸಾಪಗಸಾ ಇದನ್ನು ಯಾವ ರೀತಿ ವಿಸ್ತಾರ ಮಾಡುತ್ತಿದ್ದರು ಎನ್ನುವುದೇ ಅತ್ಯಾಶ್ಚರ್ಯ. ರಸದೃಷ್ಟಿಯಿಂದ ನೋಡಿದಾಗ ಅವರು ಅದ್ಭುತ ರಸವನ್ನೇ ಹೆಚ್ಚು ಸೃಷ್ಟಿ ಮಾಡುತ್ತಿದ್ದರು! ಹೀಗೆ ಅವರೊಂದು ವಿಸ್ಮಯ.
ಯಾವ ಕಲಾವಿದರಿಗೂ ಅವರವರ ಪ್ರತಿಭೆಯ ಮೇಲೆ ಅವರಿಗೆ ಹತೋಟಿ ಇರುವುದೇ ಇಲ್ಲ. ಆ ಪ್ರತಿಭೆ ಅವರನ್ನು ಎಲ್ಲೆಲ್ಲಿಗೋ ಕರೆದೊಯ್ಯುತ್ತದೆ. ಅದನ್ನು ಯಾರು ಒಪ್ಪುತ್ತಾರೆ ಎಷ್ಟು ಜನ ಒಪ್ಪುತ್ತಾರೆ ಎನ್ನುವುದು ಮುಖ್ಯವಲ್ಲ. ನನ್ನ ಪ್ರಕಾರ, ಯಾವ ಕಾಲಕ್ಕೆ ಎಷ್ಟು ಉಳಿಯುತ್ತೆ ಎನ್ನುವುದು ಮುಖ್ಯ. ಈ ಹೊತ್ತಿಗೆ 20 ಜನ ಒಪ್ಪಿ 200 ಜನ ಒಪ್ಪದೇ ಇರಬಹುದು. ಅಥವಾ 200 ಜನ ಒಪ್ಪಿ 20 ಜನ ಒಪ್ಪದೇ ಇರಬಹುದು. ಆದರೆ, ಕಾಲದ ಪರೀಕ್ಷೆ ಎನ್ನುವುದೊಂದು ಇರುತ್ತದೆ. ಅಂತಿಮವಾಗಿ ನಿಲ್ಲುವಂಥದ್ದು ಗಟ್ಟಿಕಾಳು ಮಾತ್ರ. ಜೊಳ್ಳೆಲ್ಲವೂ ಹಾರಿಕೊಂಡು ಹೋಗುತ್ತದೆ. ಆ ಹೊತ್ತಿಗೆ ಆ ಪ್ರಸ್ತುತಿ ಚಮತ್ಕಾರದಂತೆ ಭಾಸವಾದರೂ ಅದರ ಆಯುಷ್ಯ ಅಲ್ಪ. ಯಾವುದು ಉಳಿಯುತ್ತದೆ, ಉಳಿಯುವುದಿಲ್ಲ ಎನ್ನುವುದು ಕೂಡ ಕಾಲ ಕೊಡುವಂಥ ನಿರ್ಣಯ. ಪುರಂದರ, ಕನಕದಾಸ, ತ್ಯಾಗರಾಜರು ಗತಿಸಿ ನೂರಾರು ವರ್ಷಗಳು ಕಳೆದರೂ ನಾವು ಇಂದಿಗೂ ಅವರ ಕೀರ್ತನೆಗಳನ್ನು ಯಾಕೆ ಹಾಡುತ್ತಿದ್ದೇವೆ?
ಆಗ ಸಂಪ್ರದಾಯವಾದಿಗಳು ಅವರ ಕಛೇರಿಗಳ ಬಗ್ಗೆ ಬಹಳ ಚರ್ಚಿಸುತ್ತಿದ್ದರು. ಏಕೆಂದರೆ ಅವರು ಗಮಕ ಪ್ರಯೋಗಗಳಲ್ಲೇ ತುಂಬಾ ವಿಭಿನ್ನವಾದ ಮಾರ್ಗ ತುಳಿದವರು. ಒಪ್ಪಿತವಾದಂಥ ಗಮಕ, ಕೆಲವು ರಾಗಗಳಿಗೆ ಅದರ ವಿಶಿಷ್ಟ ಸ್ವರೂಪಸಾಧನೆಗೆ ಕೆಲ ಪ್ರಯೋಗಗಳನ್ನು ಹಾದು ಹೋಗಲೇಬೇಕಾಗುತ್ತದೆ. ರಂಜನಿರಾಗವನ್ನು ಅದರ ವಿಶಿಷ್ಟ ಗಮಕ ಪ್ರಯೋಗಗಳಿಂದ ರಂಜನಿ ಎಂದು ಕರೆಯುತ್ತೀರಿ. ಹಾಗೆಯೇ ಸಾವೇರಿ, ಅಸಾವೇರಿ ಮುಂತಾಗಿ. ಆಯಾ ರಾಗಕ್ಕೆ ಸ್ವರೂಪಾಧಾಯಕ ಸಂಚಾರಗಳಿರುತ್ತವೆ ಮತ್ತು ಪ್ರಯೋಗಗಳಿರುತ್ತವೆ. ಅದದೇ ಸ್ವರಗಳಿದ್ದರೂ ಆ ಎರಡು ರಾಗಗಳಿಗೆ ಭಿನ್ನತೆಯನ್ನು ತಂದುಕೊಡುವುದು ಆ ಗಮಕಗಳು. ಆದರೆ ಅವರು, ಅದರ ಉಚ್ಚಾರಣೆಯಲ್ಲಿ ಅದರ ಕಾಲಪ್ರಮಾಣದ ಲಯದಲ್ಲಿಯೂ ವ್ಯತ್ಯಾಸ ಉಂಟುಮಾಡುತ್ತಿದ್ದರು. ಎಷ್ಟೋ ಸಲ ಒಂದು ರೀತಿ ‘ರಹಸ್ಯ’ವನ್ನು ಸೃಷ್ಟಿಸುತ್ತಿದ್ದರು. ಕಛೇರಿ ಶುರುವಾಗುತ್ತಿದ್ದಂತೆ ಆ ರಾಗ ಯಾವುದು ಅಂತ ವಿದ್ವಾಂಸರು, ಕೇಳುಗರು ತಿಣುಕಿಬಿಡುತ್ತಿದ್ದರು. ಒಮ್ಮೊಮ್ಮೆ ಸುಮ್ಮನೆ ಶುದ್ಧ ಮಧ್ಯಮ, ಅಂತರ ಗಾಂಧಾರ, ಗಾಂಧಾರ, ಚತುಶ್ರುತಿ ರಿಷಭ ಮೂರು ಸ್ವರ ಹಿಡಿದುಬಿಡುತ್ತಿದ್ದರು. ಸಭಿಕರು ಶಂಕರಾಭರಣ ಎಂದುಕೊಂಡು ಕಿವಿ ನೆಟ್ಟಗೆ ಮಾಡಿ ಕುಳಿತುಕೊಳ್ಳುವಷ್ಟರಲ್ಲಿ ತಕ್ಷಣ ಹರಿಕಾಂಬೋಜಿಗೆ ಸರಸಾಂಗಿಗೋ, ಚಾರುಕೇಶಿಗೋ ಹಾರಿಬಿಡುವರು.
ಈ ರೀತಿಯಲ್ಲೇ ಖುಷಿ. ಅದೊಂದು ಆಟ. ಕಛೇರಿ ಎನ್ನುವುದು ತೀರಾ ಗಂಭೀರವಾದಂಥ ಪವಿತ್ರವಾದಂಥ ಪ್ರಸ್ತುತಿ ಅಂತೆಲ್ಲ ಆಗಿರಲೇ ಇಲ್ಲ ಅವರಿಗೆ. ಭಕ್ತಿಗಿಂತ ಅವರು ಯುಕ್ತಿಗೆ ಹೆಚ್ಚು ತೆರೆದುಕೊಳ್ಳುತ್ತ ಬಂದರು. ತಂತ್ರಗಾರಿಕೆಗೆ ಹೆಚ್ಚು ಪ್ರಾಧಾನ್ಯ. ಹೀಗಾಗಿ ಸಂಪ್ರದಾಯವಾದಿಗಳು ಅವರನ್ನು ಹೆಚ್ಚು ಪ್ರಶ್ನಿಸುತ್ತಿದ್ದರು. ಆಕಾಶವಾಣಿ ಸಂಗೀತ ಕಛೇರಿಗಳಲ್ಲಿಯೂ ಇಂಥ ಪ್ರಯೋಗಗಳನ್ನು ಮಾಡಿದ್ದಾರೆ. ಹೀಗೆ ಒಮ್ಮೆ ಸುಮ್ಮನೆ ಅಂತರಗಾಂಧಾರ, ಚತುಶ್ರುತಿ ರಿಷಭ ಹಿಡಿದರು. ಪಿಟಿಲು ಪಕ್ಕವಾದ್ಯಗಾರರು ಶಂಕರಾಭರಣವೆಂದುಕೊಂಡು ಒಂದು ಸಂಗತಿ ನುಡಿಸುವ ಹೊತ್ತಿಗೆ ಚಕ್ಕನೆ ಬಿಲಹರಿಗೆ ತಿರುಗಿಕೊಂಡುಬಿಟ್ಟರು. ನಂತರ ‘ಇಂತಕನ್ನಾನಂದಮೇಮಿ’ ಹಾಡಿದರು. ಅದನ್ನು ಯಾರೂ ಆ ರೀತಿ ಹಾಡಲು ಸಾಧ್ಯವಿಲ್ಲ. ಆ ಪದ ಉಚ್ಚಾರ, ಪದಗಳನ್ನು ಛೇದ ಮಾಡುವ ರೀತಿ, Pause ಕೊಡು ವಂಥದ್ದು. ಇನ್ನು ತಾಳವೂ ಅಷ್ಟೇ. ಅನೇಕ ವೇಳೆ ತೋರಿಸುತ್ತಿರಲೇ ಇರಲಿಲ್ಲ. ಮೃದಂಗದವರಿಗೂ, ಪಿಟಿಲು ಕಲಾವಿದರಿಗೂ ಇವರನ್ನು ಹಿಂಬಾಲಿಸುವುದು ಕಷ್ಟವೇ. ‘ಪಕ್ಕವಾದ್ಯದಲ್ಲಿ ಯಾರಿದ್ದರೂ ಸರಿ. ನಾನು ಹಾಡುತ್ತೇನೆ’ ಎಂದೇ ಬಾಲಮುರಳಿ ಹೇಳುತ್ತಿದ್ದರು. ಅದಕ್ಕೆ ನಾವೆಲ್ಲ ತಮಾಷೆ ಮಾಡುತ್ತಿದ್ದೆವು. ಪಿಟಿಲು ತಿರುಗಿಸಿ ಇಟ್ಟುಕೊಂಡು ನುಡಿಸಿದರೂ ಅವರು ಅವರ ಪಾಡಿಗೆ ಹಾಡುತ್ತಾರೆ ಎಂದು. ಅವರ ಸಂಗೀತ ಅವರದು. ತಾನು ಹಾಡಿದ ಹಾಗೆಯೇ ನುಡಿಸು ಎಂಬ ನಿರೀಕ್ಷೆ ಎಂದೂ ಮಾಡುತ್ತಿರಲಿಲ್ಲ. ಇದಕ್ಕೆ ಭಾರೀ ಎದೆಗಾರಿಕೆ ಬೇಕು. ಹಾಗೆಂದು ಸಹವಾದ್ಯಗಾರರ ಬಗ್ಗೆ ಗೌರವ ಇರಲಿಲ್ಲವೆಂದಲ್ಲ.
ಆವಾಹನೆಯಾದಂತೆ ಹಾಡುವ ರೀತಿ ಅವರದು. ಚೌಡಯ್ಯ ಸಭಾಂಗಣದಲ್ಲಿ ಒಮ್ಮೆ, ‘ಪರಿಪರಿ ನೀ ಪಾದಮೇ’ ಸ್ವರಚನೆ ಹಂಸಧ್ವನಿಯಲ್ಲಿ ಅರ್ಧ ಹಾಡಿದರು. ಇನ್ಯಾವುದೋ ರಚನೆ ಎತ್ತಿಕೊಂಡು ಮತ್ತೆ ವಾಪಾಸು ಹಂಸಧ್ವನಿಗೆ ಹಿಂದಿರುಗಿದರು. ಅರ್ಧಗಂಟೆ, ಮುಕ್ಕಾಲುಗಂಟೆ ಒಂದು ರಚನೆ ಹಾಡಿ ‘ಬ್ರೇಕ್’ ಎಂದು ಹೋದರು. ಅರ್ಧಗಂಟೆಯ ತನಕ ಕೇಳುಗರು ಅವರಿಗಾಗಿ ಕಾಯ್ದರು. ಮತ್ತೆ ಬಂದರು ಅರ್ಧ ಹಾಡಿದರು. ಇನ್ನರ್ಧ ಹಾಡಲೇ ಇಲ್ಲ. ಅಪರೂಪ ಮತ್ತು ವಿಲಕ್ಷಣ ವ್ಯಕ್ತಿತ್ವ ಅವರಲ್ಲಿ ಮೇಳೈಸಿತ್ತು. ಹೀಗಿದ್ದರೂ ಅವರದೇ ಆದ ದೊಡ್ಡ ಶ್ರೋತೃವರ್ಗವಿದೆ. ಬಾಲಮುರಳಿ ಏನು ಮಾಡಿದರೂ ಚೆನ್ನ. ಆ ಕಂಠ ಮತ್ತು ನಿರ್ವಹಣೆಯ ವೈಶಿಷ್ಟ್ಯ, ಮೋಡಿಯೇ ಅಂಥದ್ದು. ಸಭಿಕರನ್ನು ಆಕರ್ಷಿಸಿ ಕೂರಿಸುವಲ್ಲಿ ಏನೋ ಒಂದು ರಹಸ್ಯಾತ್ಮಕ ಅಂಶವಿದ್ದೇ ಇರುತ್ತದೆ. ಹೀಗಾಗಿ ಎಂದೂ ಅವರ ಶ್ರೋತೃವರ್ಗ ನಿರಾಸೆಗೆ ಒಳಗಾಗಲಿಲ್ಲ. ಅಸಾಧಾರಣ ವ್ಯಾಮೋಹವಲಯವನ್ನು ಸೃಷ್ಟಿಸುವ ಕಲೆಗಾರಿಕೆ ಅವರಿಗೆ ತಿಳಿದಿತ್ತು.
ಆದರೂ, ಕೆಲವರ ವಿಷಯವಾಗಿ ಜನಪ್ರಿಯತೆ ಎನ್ನುವುದು ಒಂದು ವರ್ಗಕ್ಕೆ ಕಾಲಕ್ಕೆ ಸೀಮಿತವಾಗಿರುತ್ತದೆ. ಆದರೆ ಯಾವ ಕಾಲಕ್ಕೂ ಮೇರುತನ ತಂದುಕೊಡುವಂಥದು ಸಾಂಪ್ರದಾಯಿಕ ಶಾಸ್ತ್ರೀಯ ಸಂಗೀತದ ಭಾಗವಾಗಿದ್ದಾಗ ಮಾತ್ರ. ಅಂತೆಯೇ ಕರ್ನಾಟಕ ಸಂಗೀತದ ಪಿತಾಮಹರಾದ ಪುರಂದರದಾಸರ ಸಂಗೀತ ಕ್ರಮ ಐನೂರು ವರ್ಷಗಳ ನಂತರವೂ ಮುಂದುವರೆಯುತ್ತಿದೆ. ಅಂದರೆ, ಸಾರ್ವಕಾಲಿಕ ಜನಪ್ರಿಯತೆಯ ಪರಿಧಿಗೆ ಉಳಿಯುವಂಥ ಶಾಸ್ತ್ರೀಯ ಸಂಗೀತ. ಆದರೆ ಬೆರಗು ಮತ್ತು ಅದ್ಭುತ ಸೃಷ್ಟಿಸುವ ಕಲೆಗಾರಿಗೆ ಸಮುದ್ರದ ಅಲೆಗಳಂತೆ. ಆ ಹೊತ್ತಿಗೆ ಏರುಅಲೆಗಳನ್ನು ಸೃಷ್ಟಿಸಿ ನಂತರ ಮಸುಕಾಗಿಬಿಡುತ್ತವೆ. ಆದರೆ, ಆ ಕಾಲವನ್ನು ನೆನಪಿಸಿಕೊಳ್ಳುತ್ತಾ ಆ ಕಾಲಕ್ಕೆ ಕರೆದುಕೊಂಡು ಹೋದರೆ, ಅದು ಅದ್ಭುತವೆಂದೇ ಹೇಳಬೇಕಾಗುತ್ತದೆ.
ಒಬ್ಬ ವ್ಯಕ್ತಿ ಕಣ್ಮರೆಯಾಗಿಬಿಟ್ಟರೆನೇ ಒಂದಿಷ್ಟು ಹೊರಟು ಹೋಯಿತು ಎಂದರ್ಥ. ಎಂ.ಎಸ್. ಸುಬ್ಬಲಕ್ಷ್ಮೀ ಅವರ ಸಂಗೀತ ಉಳಿದುಕೊಂಡ ಹಾಗೆ ಬಾಲಮುರಳಿಯವರ ಸಂಗೀತ ಈವತ್ತಿಗೆ ಉಳಿದುಕೊಂಡಿಲ್ಲ. ಇದನ್ನು ಯಾರೂ ಒಪ್ಪಬಹುದಾದದ್ದು. ಯಾವ ಸಾಂಪ್ರದಾಯಿಕ ಸಂಗೀತದಲ್ಲಿ ಭಕ್ತಿಭಾವವನ್ನು ಅವಿಭಾಜ್ಯ ಅಂಗವೆಂಬುದಾಗಿ ಒಪ್ಪಿಕೊಂಡು ಬರಲಾಗಿದೆಯೋ ಅದೇ ಕರ್ನಾಟಕ ಸಂಗೀತದ ಅಸ್ತಿತ್ವ. ಆದ್ದರಿಂದ ಅದರ ಪ್ರತಿನಿಧಿಯಾಗಿ ಎಂ.ಎಸ್. ಸುಬ್ಬಲಕ್ಷ್ಮೀಯವರು ಉಳಿದುಕೊಳ್ಳುತ್ತಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಸಮಗ್ರ ಸಾಮಗ್ರಿ ಅವರ ಸಂಗೀತದಲ್ಲಿ ಇದೆ. ಆದರೆ, ಬಾಲಮುರಳಿಯವರ ಸಂಗೀತದಲ್ಲಿ ತಂತ್ರಗಾರಿಕೆಯ ಪ್ರಭಾವ ಹೆಚ್ಚು. ಅದು ಬೆರಗನ್ನು ಸೃಷ್ಟಿಸುತ್ತದೆಯೇ ಹೊರತು ಅದು ಉನ್ನತಿಗೆ ದಾರಿ ಮಾಡಬಹುದೆ? ಎಲ್ಲಿ ಚಮತ್ಕಾರ ಹೆಚ್ಚುತ್ತದೆಯೋ ಅಲ್ಲಿ ಮನೋರಂಜನಾ ಅಂಶಗಳು ಹೆಚ್ಚುತ್ತಲೇ ಅಧ್ಯಾತ್ಮದ ಅಂಶಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅದೇನೇ ಇದ್ದರೂ ಬಾಲಮುರಳಿಯವರ ಸಂಗೀತದ ಮೌಲ್ಯಕ್ಕೆ ಎಂದೂ ಕುಂದಿಲ್ಲ.
ಇದನ್ನೂ ಓದಿ : M. Balamuralikrishna Birthday : ಕಲ್ಲು ಕರಗುವ ಸಮಯ ಬೇಕಿಲ್ಲ ಉಳಿಯೇಟು
Published On - 5:09 pm, Tue, 6 July 21