Gender Equality; ನಾನೆಂಬ ಪರಿಮಳದ ಹಾದಿಯಲಿ: ಪ್ರಶ್ನಿಸುವ ಸಾಹಸ ಮನೋಭಾವದ ಹೆಣ್ಣೆಂದರೆ ಸಮಾಜಕ್ಕೆ ಇನ್ನೂ ಬಿಸಿತುಪ್ಪವೆ?

‘ಕಳೆದೆರಡು ದಶಕಗಳಲ್ಲಿ ನಾನು ಹಲವಾರು ಹೊರಾಂಗಣ ಚಟುವಟಿಕೆಗಳನ್ನು ರೂಢಿಸಿಕೊಂಡಿದ್ದೀನಿ. ಆಗೆಲ್ಲಾ ಗಮನಿಸಿರುವುದು ಬಹುತೇಕ ಮಟ್ಟಿಗೆ ನಾನು ಒಬ್ಬಂಟಿ ಭಾರತೀಯಳು! ಪಾಶ್ಚಾತ್ಯ ಸಮಾಜದಲ್ಲಿ ವಾಸಿಸುತ್ತಿದ್ದರೂ ಯಾಕೆ ಭಾರತೀಯ ಹೆಣ್ಣುಮಕ್ಕಳು ಇಂತಹ ಹೊರಾಂಗಣ, ಸಾಹಸ ಮತ್ತು ನಿಸರ್ಗ-ಸಂಬಂಧಿತ ಚಟುವಟಿಕೆಗಳಲ್ಲಿ ಕಾಣಿಸುವುದಿಲ್ಲ ಎಂದು ಆಗಾಗ ನನ್ನನ್ನು ನಾನೇ ಕೇಳಿಕೊಳ್ಳುತ್ತೀನಿ.‘ ಡಾ. ವಿನತೆ ಶರ್ಮ

Gender Equality; ನಾನೆಂಬ ಪರಿಮಳದ ಹಾದಿಯಲಿ: ಪ್ರಶ್ನಿಸುವ ಸಾಹಸ ಮನೋಭಾವದ ಹೆಣ್ಣೆಂದರೆ ಸಮಾಜಕ್ಕೆ ಇನ್ನೂ ಬಿಸಿತುಪ್ಪವೆ?
ಡಾ. ವಿನತೆ ಶರ್ಮ
Follow us
|

Updated on:Feb 28, 2021 | 6:53 PM

ಒಳಗಿರುವ ಜೀವಚೈತನ್ಯಕ್ಕೆ ಲಿಂಗಬೇಧವುಂಟೆ?; ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿ ಇದೀಗ ನಿಮ್ಮೆಲ್ಲರ ಆಪ್ತ ಒಳಗೊಳ್ಳುವಿಕೆಯಿಂದಾಗಿ ರೂಪಾಂತರದ ಹಂತಕ್ಕೆ ಬಂದು ನಿಂತಿದೆ. ನೂರಾರು ವರುಷಗಳಿಂದ ಸುತ್ತಿಕೊಂಡಿರುವ ಎಡರು ತೊಡರುಗಳನ್ನೆಲ್ಲ ಕಿತ್ತೊಗೆದರೇ ನನ್ನೊಳಗಿನ ನಾನು ಪೂರ್ತಿಯಾಗಿ ಅರಳುವುದು, ಹೆಜ್ಜೆ ಕಿತ್ತಿಟ್ಟರೆ ಮಾತ್ರ ಸಹಜ ಗತಿಯಲ್ಲಿ ಚಲಿಸಲು ಸಾಧ್ಯವಾಗುವುದು ಎನ್ನುತ್ತಿದ್ದಾರೆ ನಮ್ಮ ನಡುವಿನ ದಿಟ್ಟ ಮಹಿಳೆಯರು. ತಮ್ಮ ಧೀಶಕ್ತಿಯಿಂದ ಸಮಾಜಕ್ಕೆ ತಕ್ಕ ಉತ್ತರಗಳನ್ನು ಕೊಡುತ್ತ ಬಂದಿರುವ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತ ಸಾಗುತ್ತಿರುವ ಅವರವರ ಪರಿಯನ್ನು ನಿಮ್ಮ ಮುಂದೆ ಇಡುತ್ತಿದ್ದಾರೆ. ಈ ಸರಣಿಯಲ್ಲಿ ನೀವೂ ಒಳಗೊಳ್ಳಬೇಕೇ? ದಯವಿಟ್ಟು ಬರೆಯಿರಿ tv9kannadadigital@gmail.com ಪರಿಕಲ್ಪನೆ: ಶ್ರೀದೇವಿ ಕಳಸದ

ಮೂಲತಃ ಬೆಂಗಳೂರಿನವರಾದ ಡಾ. ವಿನತೆ ಶರ್ಮ ಆಸ್ಟ್ರೇಲಿಯಾದ ಬ್ರಿಸ್ಬೆನ್​ನಲ್ಲಿ ವಾಸವಾಗಿದ್ದಾರೆ. ಸಾಹಿತ್ಯ, ಹೊರಾಂಗಣ ಸಾಹಸ ಚಟುವಟಿಕೆ, ಮನಃಶಾಸ್ತ್ರ, ತಳಸಮುದಾಯಗಳ ಅಧ್ಯಯನ, ಪ್ರವಾಸ, ತೋಟಗಾರಿಕೆ ಇವರ ಆಸಕ್ತಿಯ ವಿಷಯಗಳು. ಪಿಎಚ್​.ಡಿ ಪದವೀಧರರಾಗಿರುವ ಇವರು ಈ ಮೊದಲು ಇಂಗ್ಲೆಂಡ್​ನಲ್ಲಿ ವಾಸವಾಗಿದ್ದರು. ಸದ್ಯ ಮನಶಾಸ್ತ್ರ (ಅರೆಕಾಲಿಕ) ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನೆರಡು ಮಕ್ಕಳನ್ನು ಆಸ್ಥೆಯಿಂದ ಬೆಳೆಸುತ್ತಿರುವ ಇವರು ಸ್ವಅಸ್ತಿತ್ವದ ಬಗ್ಗೆ ಅಪಾರ ಪ್ರಜ್ಞೆಯುಳ್ಳವರಾಗಿದ್ದಾರೆ. ಸಮುದ್ರದೊಳಗೆ ಮುಳುಗು ಹಾಕುವುದಕ್ಕೆ, ಹಿಮದಬೆಟ್ಟವನ್ನು ಏರುವುದಕ್ಕೆ ಸ್ವಲ್ಪ ವಿರಾಮ ನೀಡಿ ಕುಳಿತಲ್ಲಿಂದಲೇ ಒಮ್ಮೆ ನಿಮ್ಮ ಬದುಕನ್ನೊಮ್ಮೆ ಹಿಂತಿರುಗಿ ನೋಡಬಹುದೇ? ಎಂದು ಕೇಳಿದಾಗ…

ಬಾಲ್ಯದಲ್ಲಿ ನನ್ನಮ್ಮ ಮತ್ತು ನಮ್ಮಪ್ಪ ನಮಗೆಲ್ಲಾ ಮಕ್ಕಳಿಗೆ ಹೇಳುತ್ತಿದ್ದ ಕಥೆಗಳಲ್ಲಿ ಅವರ ಬಾಲ್ಯವೂ ಹಾಸುಹೊಕ್ಕಿತ್ತು. ಅಮ್ಮನ ಅಪ್ಪ ಬಾಲಕೃಷ್ಣ ರಾವ್ ಬ್ರಿಟಿಷರ ಆಡಳಿತ ವ್ಯವಸ್ಥೆಯಲ್ಲಿ ಗುಮಾಸ್ತೆ ಉದ್ಯೋಗದಲ್ಲಿದ್ದರು. ಬ್ರಿಟಿಷರ ಆಡಳಿತ ಕೊನೆಗೊಳ್ಳುವ ದಶಕದಲ್ಲಿ ಹುಟ್ಟಿದ ಅಮ್ಮನ ಹೆಚ್ಚಿನ ಬಾಲ್ಯ ಕಳೆದಿದ್ದು ಶಿವನಸಮುದ್ರ – ಗಗನಚುಕ್ಕಿ-ಭರಚುಕ್ಕಿ ಜಲಾಶಯ ಪ್ರಾಂತ್ಯದಲ್ಲಿ. ಆಗ ಅವರಪ್ಪ ವಿದ್ಯುಚ್ಛಕ್ತಿ ಘಟಕದಲ್ಲಿ ಕೆಲಸ ಮಾಡುತ್ತಿದ್ದರಂತೆ. ಭೋರ್ಗೆರೆಯುವ ಜಲಪಾತ, ಕಾವೇರಿಯ ಕುಲುಕಾಟ, ನೈಸರ್ಗಿಕ ಸೌಂದರ್ಯ, ತಮ್ಮ ಮನೆಯ ಅಂಗಳದಲ್ಲಿದ್ದ ದೊಡ್ಡ ನೇರಳೆಮರದ ರಸಭರಿತ ಹಣ್ಣು, ರಾಶಿರಾಶಿ ಹೂ ವಿಧಗಳು ಎಲ್ಲವನ್ನೂ ಅಮ್ಮ ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದರು. ಅದನ್ನು ಕೇಳುತ್ತಿದ್ದಾಗ ಬೆಂಗಳೂರಿನ ಹೊರವಲಯದಲ್ಲಿ ಹುಟ್ಟಿ ಬೆಳೆಯುತ್ತಿದ್ದ ನನಗೆ ಅಪಾರ ಅಸೂಯೆ! ಐ.ಟಿ.ಐ. ವಿದ್ಯಾಮಂದಿರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅಮ್ಮನನ್ನು ನಾನು ‘ನೀನ್ಯಾಕೆ ನದಿ, ಬೆಟ್ಟಗುಡ್ಡ ಇರೋ ಕಡೆ ಟೀಚರ್ ಆಗ್ಲಿಲ್ಲಾ?’ ಅಂತ ಕೇಳುತ್ತಿದ್ದದ್ದು ನೆನಪಿದೆ. ಇನ್ನು ಅಪ್ಪನೋ, ತಮ್ಮ ರೈತಾಪಿ ಕುಟುಂಬದ ಹೊಲ-ಬೆಳೆ ಕಥೆಗಳನ್ನು, ಅವರ ಬಾಲ್ಯ ಜೀವನದ ಸಂಗಾತಿಗಳಾಗಿದ್ದ ವನ್ಯಪ್ರಾಣಿಗಳ ಕಥೆಗಳನ್ನು, ಅವರ ಹಾವು, ಚೇಳು, ನರಿ, ತೋಳ, ಕರಡಿ, ಕೋತಿಗಳ ಒಡನಾಟದ ರೋಚಕ ಹುಡುಗುತನ-ಸಾಹಸಗಳನ್ನು ಕೇಳುತ್ತಿದ್ದಾಗ ಮುಂದೆ ನಾನು ರೈತಳಾಗುವುದೇ ನಿಜ, ಇವೆಲ್ಲವನ್ನೂ ಅನುಭವಿಸಲೇಬೇಕು; ಅದೇ ನನ್ನ ಜೀವನ ಎಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿಕೊಳ್ಳುತ್ತಿದ್ದೆ. ಅಪ್ಪನ ಹಳ್ಳಿ ಜೀವನ, ಕಾಡಿನ ಸಾಹಸಗಳು, ಅಮ್ಮನ ಪ್ರಕೃತಿ ವರ್ಣನೆಯಲ್ಲಿದ್ದ ಭಾಷಾ ಲಾಲಿತ್ಯ ನನ್ನ ನರನಾಡಿಗಳಲ್ಲಿ ಇಳಿದುಬಿಟ್ಟಿದ್ದವು. ಅದರ ಪ್ರಭಾವ ನಾನು ಬೆಳೆಯುತ್ತಾ ಹೋದಂತೆ ಗೋಚರಿಸತೊಡಗಿತು.

ಹೊರಾಂಗಣ ಚಟುವಟಿಕೆಗಳು, ಜೀವನಶೈಲಿ, ತೋಟಗಾರಿಕೆ, ಗಿಡ-ಮರ-ಪಕ್ಷಿ-ವನ್ಯಪ್ರಾಣಿಗಳ ಒಡನಾಟ, ಬೆಟ್ಟ ಹತ್ತುವ ಅತೀವ ಹಂಬಲ, ನದಿನೀರಿನಲ್ಲಿ ಸಾಹಸಗಳನ್ನು ಮಾಡುವ ಕನಸು, ಇವೆಲ್ಲವೂ ನನಗೆ ಬಹಳ ಇಷ್ಟವೆಂದು ಎಲ್ಲರಿಗೂ ಹೇಳುತ್ತಿದ್ದೆ. ಈಜು ಕಲಿಕೆಯನ್ನು ಹೇಳಿಕೊಡಿ ಎಂದು ಅಪ್ಪನ ಬಳಿ ಗೋಗೆರೆಯುತ್ತಿದ್ದೆ. ಮನೆಯಂಗಳದಿ ಆಗಾಗ ಬರುತ್ತಿದ್ದ ಹಾವುಗಳ ಬಳಿ ಹೋಗಿ ಧೈರ್ಯದಿಂದ ಅವನ್ನು ಗಮನಿಸುತ್ತಿದ್ದೆ. ನನ್ನ ನಡವಳಿಕೆಗಳನ್ನು ನೋಡುತ್ತಿದ್ದ, ಮಾತುಗಳನ್ನು ಕೇಳುತ್ತಿದ್ದವರು-ತಂದೆತಾಯಿ, ಒಡಹುಟ್ಟಿದವರು, ಸಂಬಂಧಿಕರು, ಸ್ನೇಹಿತರು, ಸಮಾಜ-ಹೌಹಾರುತ್ತಿದ್ದರು. ಹುಡುಗಿಯೊಬ್ಬಳು ಹಾಗೆಲ್ಲಾ ಯೋಚಿಸುವುದು, ಮಾತನಾಡುವುದು ತಪ್ಪು, ಎನ್ನುತ್ತಿದ್ದರು. ಬೇರೆ ಹೆಣ್ಮಕ್ಕಳಂತೆ ನಾಜೂಕು, ನಾಚಿಕೆಯ ಸ್ವಭಾವವಿರಬೇಕು ಎಂದು ಆಜ್ಞಾಪಿಸುತ್ತ, ಮನೆಕೆಲಸ, ಅಡುಗೆ, ಕಸೂತಿಗಳನ್ನು ಅಚ್ಚುಕಟ್ಟಾಗಿ ಕಲಿತು ಮದುವೆಗೆ ತಯಾರಾಗುವುದನ್ನು ಕಲಿತುಕೋ, ಎಂದು ನನ್ನ ಸುತ್ತಮುತ್ತಲಿನ ಎಲ್ಲರೂ ಬುದ್ಧಿವಾದ ಹೇಳುತ್ತಿದ್ದರು. ನನಗೆ ಅತೀವ ನಿರಾಸೆಯಾಗಿ, ಅಸಹನೆಯುಂಟಾಗುತ್ತಿತ್ತು. ನಮ್ಮ ಸಮಾಜದಲ್ಲಿ ಹುಡುಗಿಯರು ಪ್ರಶ್ನೆ ಕೇಳುವುದೇ ಒಂದು ಸಾಹಸವೆಂದು ನಿಧಾನವಾಗಿ ಅರ್ಥವಾಗಿತ್ತು!

naanemba parimaladha haadhiyali

ಮಡಿಲ ಮಗುವಿನೊಂದಿಗೆ ವಿನತೆ

ಚಿಕ್ಕ ಹುಡುಗಿಯಾಗಿ ನಾನು ಆಟವಾಡುತ್ತಿದ್ದದ್ದು, ಹೆಚ್ಚಿನ ಸಮಯ ಕಳೆಯುತ್ತಿದ್ದದ್ದು ಹೊರಗಿನ ಪರಿಸರದಲ್ಲಿ. ನಗರದ ಹೊರಭಾಗದ ಕೃಷ್ಣರಾಜಪುರ (ಆಗದು ಹಳ್ಳಿಯಾಗಿತ್ತು), ನಂತರ ದೂರವಾಣಿನಗರದಲ್ಲಿ ಕಳೆದ ಬಾಲ್ಯ ಅತ್ಯಮೂಲ್ಯವಾಗಿತ್ತು. ಸುತ್ತಮುತ್ತಲೂ ವನ್ಯಸಂಪತ್ತು ಹೇರಳವಾಗಿತ್ತು. ಹಲವಾರು ಹೊರಾಂಗಣ ಆಟಗಳ ಜೊತೆಗೆ, ಮರ ಹತ್ತುವುದು, ಮರವನ್ನೇರಿ ಹಣ್ಣು ಕಿತ್ತು ಅಲ್ಲೇ ಕೊಂಬೆಯ ಮೇಲೆ ಕೂತು ತಿನ್ನುವುದು ನನಗೆ ತುಂಬಾ ಇಷ್ಟವಾಗುತ್ತಿತ್ತು. ಆದರೆ ಹೆಣ್ಣುಮಕ್ಕಳು ಅನೇಕ ನಿರ್ಬಂಧಗಳನ್ನು, ನಿಬಂಧನೆಗಳನ್ನು ಅನುಭವಿಸುತ್ತಿದ್ದ ಕಾಲವದು. ನನಗೆ ವಿಧಿಸುತ್ತಿದ್ದ ಸಾಮಾಜಿಕ ಚೌಕಟ್ಟುಗಳನ್ನು ವಿರೋಧಿಸುತ್ತಿದ್ದೆ. ಅವೇ ಚೌಕಟ್ಟುಗಳು ಗಂಡುಮಕ್ಕಳಿಗೆ ಯಾಕಿಲ್ಲ ಎಂದು ಕೇಳುತ್ತಿದ್ದೆ. ನಾನು ಬಹುವಾಗಿ ಪ್ರೀತಿಸುತ್ತಿದ್ದ ಪ್ರಕೃತಿಯ ಪ್ರಾಣಿಪಕ್ಷಿ ಮರಗಿಡಗಳಲ್ಲಿ ಕಂಡುಬರದ ತಾರತಮ್ಯಗಳು ಮನುಷ್ಯರಲ್ಲಿ ಯಾಕಿವೆ ಎಂದು ಆಶ್ಚರ್ಯವೂ, ಖೇದವೂ ಆಗುತ್ತಿತ್ತು. ಬಾಲ್ಯದಿಂದಲೇ ಧಾರ್ಮಿಕ ಮತ್ತು ಸಾಮಾಜಿಕ ತಾರತಮ್ಯಗಳನ್ನು, ಅಸಮಾನತೆಗಳನ್ನು ಪ್ರಶ್ನಿಸಲಾರಂಭಿಸಿದೆ. ಪ್ರಕೃತಿಯಲ್ಲಿ ನಾನು ನೋಡುತ್ತಿದ್ದ ಜೀವಜಾಲಕ್ಕೂ ನಾನಿದ್ದ ಸಂಪ್ರದಾಯಸ್ಥ ಮನೆ ವಾತಾವರಣಕ್ಕೂ ಅಜಗಜಾಂತರ ವ್ಯತ್ಯಾಸವಿದ್ದದ್ದು ನಿಚ್ಚಳವಾಗಿತ್ತು. ನಿಸರ್ಗ ವೈವಿಧ್ಯತೆಯನ್ನು ಕುತೂಹಲದಿಂದ ನೋಡುತ್ತಿದ್ದ ನನಗೆ ಮಾನವ ಪ್ರಪಂಚವು ಅದೆಷ್ಟು ಸಂಕುಚಿತವಾಗಿದೆ ಎಂದೆನಿಸುತ್ತಿತ್ತು.

ಬ್ರಾಹ್ಮಣ ಜಾತಿಯ ಮನೆಯಲ್ಲಿ ಹುಟ್ಟಿದ್ದ ನಾನು ಜಾತಿ-ಸಂಬಂಧಿತ ಎಲ್ಲಾ ಕೆಲಸಕಾರ್ಯಗಳನ್ನು, ರೀತಿನೀತಿಗಳನ್ನು, ಆಚಾರ-ವಿಚಾರಗಳನ್ನು ಚೆನ್ನಾಗಿಯೇ ಕಲಿತು ಚಾಚೂತಪ್ಪದೆ ಅವನ್ನು ಮಾಡುತ್ತಿದ್ದೆ. ಸ್ವಲ್ಪವೂ ಬೇಸರಿಸದೆ ಆಗಾಗ ಗಂಡುಮಗನ ಕೆಲಸಗಳ ಪಾತ್ರವನ್ನೂ ನಿರ್ವಹಿಸುತ್ತಾ ಗಂಡು-ಹುಡುಗಿಯಾಗಿದ್ದೆ. ಆದರೂ ನನ್ನ ಕುಟುಂಬದವರು ನನ್ನ ಪ್ರಶ್ನಿಸುವ ಮನೋಭಾವವನ್ನು, ಧೈರ್ಯವನ್ನು, ದಿಟ್ಟತನವನ್ನು ಇಷ್ಟಪಡದೆ ಅದೇ ಮಾಮೂಲು ಚೌಕಟ್ಟುಗಳಲ್ಲೇ ನನ್ನನ್ನಿರಿಸಲು ಪ್ರಯತ್ನಿಸುತ್ತಿದ್ದರು. ನನ್ನ ಕೆಲ ಸ್ನೇಹಿತೆಯರು, ಸಂಬಂಧಿಕರು ಮತ್ತು ಹೊರಗಿನ ಸಮಾಜ ನನ್ನ ಸಾಹಸಿ ಮನೋಭಾವ, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನೋಡಿ ಅವೆಲ್ಲಾ ‘ಗಂಡುತನದ’ ಗುಣಗಳು, ನೀನೊಬ್ಬ ಗಂಡುಬೀರಿ, ಹೆಣ್ಣಾಗಿರುವುದನ್ನು ಕಲಿತುಕೊ, ಎಂದು ನನ್ನ ನಡವಳಿಕೆಗೆ ತರಹಾವರಿ ಹೆಸರಿಡುತ್ತಿದ್ದರು. ಹೆಣ್ಣುಮಕ್ಕಳು ಹೊರಾಂಗಣ ಜೀವನವನ್ನು ಮತ್ತು ಸಾಹಸವನ್ನು ಪ್ರೀತಿಸುವುದೇ ತಪ್ಪಾಗಿತ್ತು. ‘ಮೈ ನೆರೆ’ಯುತ್ತಿದ್ದಂತೆ ಹುಡುಗಿ ಹೆಂಗಸಾಗಬೇಕಿತ್ತು. ಮದುವೆಯಾದ ದಿನದಿಂದಲೇ ತನ್ನ ವ್ಯಕ್ತಿತ್ವವನ್ನು ಮರೆಮಾಚಿ, ಅಸ್ಮಿತೆಯನ್ನು ಕೊಂದುಕೊಂಡು ವಿಧೇಯ ಸೊಸೆ ಮತ್ತು ಹೆಂಡತಿಯಾಗಬೇಕಿತ್ತು. ಅಂದರೆ ತವರು ಮನೆ, ಗಂಡನ ಮನೆ ಮತ್ತು ಹೊರಗಿನ ಸಮಾಜವು ಒಬ್ಬ ಹುಡುಗಿಯನ್ನು ಅವರೆಲ್ಲಾ ಸೇರಿ ಪಳಗಿಸಲೇಬೇಕಾದ ಒಂದು ಪ್ರಾಣಿಯಂತೆ ಕಾಣುತ್ತಿದ್ದರು.

ನನ್ನ ಪ್ರಪಂಚದಲ್ಲಿ ಅನೇಕ ಹೆಂಗಸರು ಮನೆಯ ಹೊರಗಡೆ ಮತ್ತು ಒಳಗಡೆ ದಿನಪೂರ್ತಿ ದುಡಿಯುತ್ತಿದ್ದರು (ಉದಾಹರಣೆಗೆ, ನನ್ನಮ್ಮ). ಆದರೆ ಬಹಳಷ್ಟು ಗಂಡಸರು ಹೊರಗಡೆ ಮಾತ್ರ ದುಡಿಯುತ್ತಿದ್ದದ್ದನ್ನು ನೋಡಿ ನಾನು ‘ಅಚ್ಚುಕಟ್ಟಾಗಿ ಮನೆವಾರ್ತೆ ನಡೆಸುವಂತೆ ಗಂಡುಮಕ್ಕಳಿಗೆ ಯಾಕೆ ಯಾರೂ ತರಬೇತಿ ಕೊಡುವುದಿಲ್ಲ?’ ಎಂದು ಕೇಳುತ್ತಿದ್ದೆ. ನನ್ನ ಖಾಸಗಿ ವಲಯದ ಹೆಂಗಸರು ನನ್ನನ್ನು ಒಬ್ಬ ನಾಜೂಕು ಹೆಣ್ಣನ್ನಾಗಿ ನೋಡಲು ಅಪೇಕ್ಷಿಸಿದರೆ, ಗಂಡಸರು ‘ಮನೆವಾರ್ತೆ’ ನಡೆಸುವ ಕೋಮಲ-ವಿಧೇಯ ಹೆಣ್ಣಾಗಿ ಬಾಳುವಂತೆ ಹೇಳುತ್ತಿದ್ದರು. ನಾನು ಒಪ್ಪಿಕೊಳ್ಳದ ಜಾತಿ ವ್ಯವಸ್ಥೆ, ನಮ್ಮ ಸಾಮಾಜಿಕ ಪದ್ಧತಿಯಲ್ಲಿದ್ದ ಅಸಮಾನತೆಗಳನ್ನು, ಪುರುಷಾಧಿಕಾರವನ್ನು ಕುರಿತು ಪ್ರಶ್ನಿಸಿದರೆ ನನ್ನ ಧೈರ್ಯವನ್ನು ಆಡಿಕೊಂಡು ಹೀನಾಯಿಸುತ್ತಿದ್ದರು. ಆಗ ಅವರಿಗೆ ಢಾಳಾಗಿ ಕಾಣುತ್ತಿದ್ದದ್ದು ನನ್ನ ಹೊರಾಂಗಣ ಜೀವನ ಪ್ರೀತಿ, ಮತ್ತು ಸಾಹಸ ಪ್ರವೃತ್ತಿ. ಅವನ್ನು ನೆಪವಾಗಿಸಿಕೊಂಡು ನನ್ನನ್ನು ಪಳಗಿಸಲು ಮತ್ತಷ್ಟು ಪ್ರಯತ್ನಿಸುತ್ತಿದ್ದರು. ಒಮ್ಮೆ ಎರಡು ದಿನದ ಚಾರಣವನ್ನು ಮುಗಿಸಿಕೊಂಡು ಮನೆಗೆ ಹಿಂದುರುಗಿದಾಗ ಮನೆಗಂಡಸರು ‘ಊರೂರು ತಿರುಗಾಡಿ ಬಂದಳು. ಮುಸುರೆ ಪಾತ್ರೆ ರಾಶಿ ಬಿದ್ದಿದೆ, ಮೊದಲು ಹೋಗಿ ತೊಳೆಯುವುದನ್ನು ನೋಡು’ ಅಂದಿದ್ದರು. ಅದು ಪುರುಷಪ್ರಧಾನ ಮತ್ತು ಪುರುಷಾಧಿಕಾರದ ನಡೆಯೆಂದು ನನಗೆ ಗೊತ್ತಿತ್ತು. ಹೆಣ್ಣಿನ ಮೇಲೆ ತಮ್ಮ ನಿರ್ದಯ ಅಧಿಕಾರವನ್ನು ಸ್ಥಾಪಿಸುವುದೇ ಸಮಾಜದ ಉದ್ದೇಶವಾಗಿತ್ತು ಎನ್ನುವುದನ್ನು ನೆನೆದರೆ ಮೈಗೆ ಮುಳ್ಳು ತಾಕಿದ ಭಾವನೆಯೀಗ. ತಮ್ಮದೇ ಕುಟುಂಬದ ಒಬ್ಬ ಹೆಣ್ಣಿನ ಬಗ್ಗೆ ಇರಬೇಕಿದ್ದ ನಂಟು, ಅಕ್ಕರೆ, ಕಕ್ಕುಲಾತಿಗಿಂತಲೂ ಅವರು ತಮ್ಮ ಸಾಮಾಜಿಕ-ಧಾರ್ಮಿಕ ವ್ಯವಸ್ಥೆಗೆ ಹೆಚ್ಚು ಬೆಲೆ ಕೊಡುತ್ತಿದ್ದರು.

naanemba parimaladha haadhiyali

ಮುಳುಗೆದ್ದ ಮೇಲೆಯೇ ತೇಲುವುದು…

ನನ್ನ ಪ್ರಪಂಚದಲ್ಲಿನ ಕೆಲ (ಎಲ್ಲರೂ ಅಲ್ಲ) ಹೆಂಗಸರು ಮತ್ತು ಗಂಡಸರು ತಮ್ಮ ಮನಸ್ಸಿನಲ್ಲಿ ಹೆಣ್ಣಿನ ಏಕರೂಪದ ಚಿತ್ರವೊಂದನ್ನು ಸ್ಥಾಪಿಸಿಕೊಂಡು ಅದಕ್ಕೆ ನನ್ನನ್ನು ಹೋಲಿಸಿ ನೋಡಿ ಸೊನ್ನೆ ಅಂಕಗಳನ್ನು ಕೊಟ್ಟು ನನ್ನನ್ನು ಫೇಲ್ ಮಾಡಿದ್ದರು! ಕಾರಣವೊಂದೇ- ನನ್ನ ಸಾಹಸೀ ಮನೋಭಾವ. ಇವರೆಲ್ಲಾ ಸುಶಿಕ್ಷಿತ ಹೆಣ್ಣುಗಂಡುಗಳು! ಅವರು ಒಪ್ಪಿಕೊಂಡು ಪರಿಪಾಲಿಸುತ್ತಿದ್ದ ಸಾಮಾಜಿಕ ಕಟ್ಟಳೆ, ಪದ್ಧತಿ, ಏಕರೂಪಗಳೆದುರು ಅವರು ಪಡೆದ ಶಿಕ್ಷಣ ಕಾಲುಕಿತ್ತಿತ್ತು! ಅಥವಾ ಶಿಕ್ಷಣವು ಬರೇ ಸಂಬಳ ತರುವ ಉದ್ಯೋಗಕ್ಕಷ್ಟೇ ಮೀಸಲಾಗಿತ್ತು. ನಾನು ಭಾರತವನ್ನು ಬಿಟ್ಟು ಆಸ್ಟ್ರೇಲಿಯಾ ದೇಶಕ್ಕೆ ಬರುವ ತನಕವೂ ಈ ಪ್ರಯತ್ನಗಳು ಸದಾ ನಡೆದಿದ್ದವು ಎನ್ನುವುದನ್ನು ನೆನೆದರೆ ಗಾಬರಿಯಾಗುತ್ತದೆ. ಆದರೆ ಈ ಮನೋಭಾವವು ಭಾರತೀಯ ಸಮಾಜದಲ್ಲಿ ಇವತ್ತಿಗೂ ಜೀವಂತವಾಗಿದೆ. ಹೆಣ್ಣೊಬ್ಬಳು ಜೋರಾಗಿ ನಕ್ಕರೆ ಅವಳನ್ನು ರಾಕ್ಷಸಿಯೆನ್ನುವ ಜನರು ಈಗಲೂ ನಮ್ಮ ನಡುವೆಯಿದ್ದಾರೆ.

ನನ್ನ ಶಿಕ್ಷಣದ ಆಯ್ಕೆಯಲ್ಲಿ ನಾನು ಅದೃಷ್ಟಶಾಲಿ. ಅನೇಕ ಸೋಲು-ಗೆಲುವುಗಳ ನಡುವೆಯೂ ನಾನೇನನ್ನು ಓದಬೇಕು ಎಂಬ ನಿರ್ಧಾರವನ್ನು ನಾನೇ ಮಾಡಿದ್ದೀನಿ. ಪ್ರಕೃತಿಯೊಡನಾಟದ ನನ್ನ ಸಹಜ ಮನೋಭಾವನೆಗನುಗುಣವಾಗಿ ನಾನು ಓದಲು ಹಂಬಲಿಸಿದ್ದು ಬಯೋ-ಸೈಕಾಲಜಿ ಐಚ್ಚಿಕ ವಿಷಯವನ್ನು. ಬಯೋ-ಸೈಕಾಲಜಿಯಲ್ಲಿ ಇಡೀ ಜೀವಸಂಕುಲದ ಅಧ್ಯಯನವೇ ಅಡಗಿತ್ತು. ಇದನ್ನು ಓದುವುದಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯವನ್ನು ತ್ಯಜಿಸಿ, ಅಪ್ಪಅಮ್ಮಂದಿರನ್ನು ಒಪ್ಪಿಸಿ ಮೈಸೂರು ವಿಶ್ವವಿದ್ಯಾಲಯವನ್ನು ಸೇರಿ, ಮಾನಸಗಂಗೋತ್ರಿ ಲೇಡೀಸ್ ಹಾಸ್ಟೆಲಿಗೆ ಹೋದೆ. ಹೋದ ಮೊದಲನೇ ವರ್ಷದಲ್ಲಿಯೇ ವಿಶ್ವವಿದ್ಯಾಲಯ ನಡೆಸುತ್ತಿದ್ದ ಸರಸ್ವತಿಪುರಂನಲ್ಲಿದ್ದ ಈಜುಕೊಳಕ್ಕೆ ಹೋಗಿ, ಅಲ್ಲಿ ಈಜುವವರನ್ನು ಗಮನಿಸುತ್ತಾ ನಿಧಾನವಾಗಿ ನಾನೇ ಸ್ವತಃ ಅಷ್ಟಿಷ್ಟು ಈಜುವುದನ್ನು ಕಲಿತೆ. ಎರಡನೇ ವರ್ಷದ ಬಯೋ-ಸೈಕಾಲಜಿ ಓದಿನಲ್ಲಿ ಅಧ್ಯಯನ ವಿಷಯವಾಗಿ ನೇರವಾಗಿ ನಿಸರ್ಗದ ಮಡಿಲಿಗೇ ಹೋಗಿ ಕೋತಿಗಳ ವರ್ತನೆಯನ್ನು ಅಭ್ಯಸಿಸಲಾರಂಭಿಸಿದೆ (Bonnet Macaques; Primatology). ಮುಂದಿನ ಕೆಲವರ್ಷಗಳ ಕಾಲ ಪಿಎಚ್.ಡಿ ಪದವಿಗಾಗಿ ಕೋತಿಗಳ ಅಧ್ಯಯನವನ್ನು ಮುಂದುವರೆಸಿದೆ. ದಕ್ಷಿಣ ಭಾರತದಲ್ಲಿ ಸಹಜವಾಗಿ ಪ್ರಕೃತಿಯಲ್ಲಿ ವಾಸಿಸುತ್ತಿದ್ದ ಕೋತಿಗಳ ಅಧ್ಯಯನವನ್ನು ಕೈಗೊಂಡ ಪ್ರಪ್ರಥಮ ಮಹಿಳಾ ವಿದ್ಯಾರ್ಥಿ ನಾನು ಎಂದು ಬಲ್ಲವರು ಹೇಳುತ್ತಿದ್ದರು. ಹಲವರು ನಗಾಡುತ್ತಾ ಆಡಿಕೊಳ್ಳುತ್ತಿದ್ದರು.

ಇದೇ ಕಾಲಘಟ್ಟದಲ್ಲಿ ನಾನು ‘ಆಂದೋಲನ’ ದಿನಪತ್ರಿಕೆಯಲ್ಲಿ ಡೆಸ್ಕ್ ರಿಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದೆ. ಕೆಲಕಾಲ ಸೈಕಾಲಜಿ ವಿಭಾಗದಲ್ಲಿ ಅತಿಥಿ ಅಧ್ಯಾಪಕಿಯಾಗಿದ್ದೆ. ನಂತರ ಮಹಾಜನ ಡಿಗ್ರಿ ಕಾಲೇಜಿನಲ್ಲಿ ಹೊಸದಾಗಿ ತೆರೆದ ಸೈಕಾಲಜಿ ಡಿಪಾರ್ಟ್ಮೆಂಟಿನ ಮೊಟ್ಟಮೊದಲ ಅಧ್ಯಾಪಕಿ ಮತ್ತು ಮುಖ್ಯಸ್ಥೆಯಾಗಿ ಕೆಲಕಾಲ ಸೇವೆ ಸಲ್ಲಿಸಿದೆ. ಅದೇ ಕಾಲೇಜಿನಲ್ಲಿ ಒಂದು ವರ್ಷದ ಮಟ್ಟಿಗೆ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಿರ್ವಹಣೆಯನ್ನೂ ಹೊತ್ತಿದ್ದೆ. ನಾನೂ ಮತ್ತು ನನ್ನ ವಿದ್ಯಾರ್ಥಿಗಳು ಒಗ್ಗೂಡಿ ಸಣ್ಣದೊಂದು Roof  Top Garden ಮಾಡಿದ್ದೆವು. ನೇಚರ್ ಕ್ಲಬ್, ಕೌನ್ಸೆಲಿಂಗ್ ಘಟಕ ಮುಂತಾದ ಕನಸುಗಳು ಸಾಕಾರಗೊಳ್ಳುವ ಮೊದಲೇ ನಾನು ಬೆಂಗಳೂರಿಗೆ ಹಿಂದುರುಗಿದೆ. ರಾಷ್ಟ್ರೀಯ ಸೇವಾ ಯೋಜನೆ ಕೆಲಸದಲ್ಲಿ ನಾನು ಪಡೆದ ತರಬೇತಿಗಳು (ಮಹಿಳಾ ಸಾಕ್ಷರತೆ- ಸಬಲೀಕರಣ, ಪರಿಸರ ಸಂರಕ್ಷಣೆ, ಸಮುದಾಯ ಅಭಿವೃದ್ಧಿ, ಮಾನವ ಹಕ್ಕುಗಳು ಮುಂತಾದವು) ನನ್ನನ್ನು ಪ್ರಭಾವಿಸಿದ್ದವು. ಸೈಕಾಲಜಿ ಬೋಧನೆಯನ್ನು ಪಕ್ಕಕ್ಕಿಟ್ಟು ಸಾಮಾಜಿಕ ಕಾರ್ಯ ಕ್ಷೇತ್ರಕ್ಕೆ ಧುಮುಕಿದೆ. ಅಲ್ಲಿಂದ ಮುಂದೆ ಆಸ್ಟ್ರೇಲಿಯಾಗೆ ಹೋಗುವ ತನಕವೂ ಅದೇ ಕ್ಷೇತ್ರದಲ್ಲಿ ಹಲವಾರು ಎನ್ ಜಿ ಓ ಗಳ, ತಳಸಮುದಾಯಗಳ ಜೊತೆ ಕೆಲಸ ಮಾಡಿದ್ದು ನನ್ನ ಜೀವನದಲ್ಲಿ ಹೆಗ್ಗುರುತು.

naanemba parimaladha

ಇಳಿದೇರಿ ಏರಿ ಏರಿ…

ನಾನು ಕೆಲಸ ಮಾಡುತ್ತಿದ್ದ ಸಾಮಾಜಿಕ ಕಾರ್ಯ ಎನ್ನುವ ಕ್ಷೇತ್ರವು ಬೆಂಗಳೂರಿನ ನನ್ನ ಕುಟುಂಬದವರಿಗೆ, ಸಂಬಂಧಿಕರಿಗೆ ಹೊಸ ವಿಷಯವಾಗಿತ್ತು. ಬಹುಶಃ ಅಲ್ಲಿಯವರೆಗೆ ಸರಕಾರಿ ಉದ್ಯೋಗ, ಬ್ಯಾಂಕ್ ಉದ್ಯೋಗ, ಶಾಲಾ ಶಿಕ್ಷಕಿ/ಕ ಕೆಲಸ, ಇಂಜಿನಿಯರ್ ಕೆಲಸಗಳು ಮಾತ್ರ ಪರಿಚಯವಿದ್ದು, ಸಾಮಾಜಿಕ ಕಾರ್ಯ/ಸಮುದಾಯ ಸಂಘಟನೆ/ತಳಸಮುದಾಯ ಸಬಲೀಕರಣ ಇಂಥ ವಿಷಯಗಳನ್ನು ನಮ್ಮವರು ಯಾರೂ ಕೇಳಿಯೇ ಇರಲಿಲ್ಲ. ನಾನೇ ಮೊದಲಿಗಳು! ‘ಮುಂಚಿನಿಂದಲೂ ಇವಳು ಹೀಗೇ, ನಾವೊಂದು ಯೋಚಿಸಿದರೆ ಇವಳೊಂದು ಮಾಡುತ್ತಾಳೆ’ ಎಂದುಕೊಂಡರೇನೋ! ನಮ್ಮಪ್ಪ ನಮ್ಮಮ್ಮನಿಗಂತೂ ಇದ್ಯಾವ ಸೀಮೆಯ ಉದ್ಯೋಗ ಎಂದು ಕಕ್ಕಾಬಿಕ್ಕಿಯಾಗಿತ್ತು. ಇದೇ ಅವಧಿಯಲ್ಲಿ ಅನಿರೀಕ್ಷಿತವಾಗಿ, ಅಸಾಮಾನ್ಯ ಸನ್ನಿವೇಶಕ್ಕೆ ಸಿಲುಕಿಕೊಂಡು ನನ್ನಮ್ಮ ನಮ್ಮನ್ನು ಬಿಟ್ಟುಹೋದರು. ಆಸ್ಟ್ರೇಲಿಯಾಗೆ ಬಂದು ಹೊಸಜೀವನವನ್ನು ಆರಂಭಿಸಿದರೂ ಆಕೆಯ ಅಗಲಿಕೆಯ ನೋವು ನನ್ನನ್ನು ಕಾಡಿದೆ.

ಬೇರೆಯವರಿಗೆ ಕಾಣುವಂತೆ ಹೆಣ್ಣು ಲಾವಣ್ಯ ಮತ್ತು ನಾಚಿಕೆಯನ್ನು ತೋರಿದರೆ ಮಾತ್ರ ಯಾಕೆ ಅವಳನ್ನು ಸಮಾಜ ಒಪ್ಪುತ್ತದೆ? ನಿರ್ಲಜ್ಜೆ ಅಂದರೇನು ಅರ್ಥ? ಆ ವರ್ತನೆಗಳು ಸಹಜವೇ ಅಥವಾ ಸಾಮಾಜಿಕವಾಗಿ ಕಲಿತದ್ದೇ? ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು ಪಾಶ್ಚಿಮಾತ್ಯ ದೇಶದ ಸಮಾಜದಲ್ಲಿ. ಲಿಂಗಾಧಾರಿತ ತಾರತಮ್ಯ, ಅಸಮಾನತೆಗಳನ್ನು ಮತ್ತು ಸ್ತ್ರೀ ಏಕರೂಪಗಳ ಬಗ್ಗೆ ನಾನು ಅಧ್ಯಯನವನ್ನು ಮಾಡುತ್ತಲೇ ಆಸ್ಟ್ರೇಲಿಯನ್ ಸ್ನೇಹಿತರಿಂದ ಅವರ ಸಮಾಜದ ಬಗ್ಗೆ ನಿಧಾನವಾಗಿ ತಿಳಿಯುತ್ತಾ ಹೋದೆ. ಒಮ್ಮೆ ನನ್ನ ಸ್ನೇಹಿತೆಯ ಜೊತೆ ಮಾತನಾಡುತ್ತ ‘ಹುಡುಗಿ ಎಂಬ ಕಾರಣಕ್ಕಾಗಿ ಈಜು ಕಲಿಯುವುದಕ್ಕೆ ಬಿಡಲಿಲ್ಲ’ ಎಂದಾಗ ಅವರು ಬೇಸರಿಸಿಕೊಂಡು ‘ಈ ದೇಶದಲ್ಲಿ ಈಜುಕಲಿಕೆ ಶಾಲಾಪಠ್ಯದ ಒಂದು ಭಾಗ; ಅದು ಅತ್ಯವಶ್ಯಕ ಜೀವರಕ್ಷಕ ಕಲೆ; ಯಾವುದೇ ಲಿಂಗಬೇಧವಿಲ್ಲ,’ ಎಂದಾಗ ನನಗೆ ಕಣ್ಣಲ್ಲಿ ನೀರು ಬಂದಿತ್ತು. ಅವರಾಗ ಸಮಾನ ಹಕ್ಕುಗಳಿಗಾಗಿ, ಸ್ಥಾನಮಾನ-ಗೌರವಗಳಿಗಾಗಿ ಪಾಶ್ಚಾತ್ಯ ಮಹಿಳೆಯರು ಹೋರಾಡಿದ ಕಥೆಯನ್ನು (suffragette) ನೆನಪಿಸಿಕೊಳ್ಳುತ್ತಾ, ಈಗಲೂ ಕೆಲ ಕ್ಷೇತ್ರಗಳಲ್ಲಿ ಲಿಂಗಾಧಾರಿತ ತಾರತಮ್ಯಗಳಿವೆಯೆಂದರೆ ಆಶ್ಚರ್ಯ ಪಡಬೇಡ; ನಾವು ಮಹಿಳೆಯರು ಮಾಡಬೇಕಾದ ಕೆಲಸ ಇನ್ನೂ ಬಹಳಷ್ಟಿದೆ, ಎಂದಿದ್ದರು.

ಪಾಶ್ಚಿಮಾತ್ಯ ದೇಶದಲ್ಲಿ ನನ್ನ ಹೊರಾಂಗಣ ಸಾಹಸ ಪ್ರೀತಿ ಮತ್ತಷ್ಟು ಗರಿಕೆದರಿತು. ಸಮುದ್ರದ ನೀರಿಗಿಳಿದರೆ ‘ಅಯ್ಯೋ ನೀನು ಹೆಣ್ಣುಹೆಂಗಸು, ನೀರಿಗಿಳಿಯಬೇಡ. ಒದ್ದೆಬಟ್ಟೆ ತೊಟ್ಟ ಮೈ ತೋರಿಸಬೇಡ. ಗಂಡಸರ ಅನುಮತಿಯಿಲ್ಲದೆ ಈಜಬೇಡ’ ಎಂಬ ರಗಳೆಯಿರಲಿಲ್ಲ. ನಾನಿದ್ದ ಊರಿನಲ್ಲಿದ್ದ ಒಂದು ಚಿಕ್ಕ ಬೆಟ್ಟವನ್ನು ಹತ್ತಲು ಹೋದರೆ ‘ಯಾರ ಜೊತೆ ಹೋಗುತ್ತಿದ್ದೀಯ? ಅವನಿಗೂ ನಿನಗೂ ಸಂಬಂಧವೇನು? ನಾವು ಗೌರವಸ್ಥ ಕುಟುಂಬದವರು. ನಮ್ಮನೆ ಹೆಣ್ಣುಮಕ್ಕಳು ಹಾಗೆಲ್ಲ ಮಾಡಬಾರದು’ ಎನ್ನುವ ದರ್ಪ ಮತ್ತು ಅಧಿಕಾರ ಇರಲಿಲ್ಲ.

ನಿಧಾನವಾಗಿ ನನ್ನ ಅರಿವಿಗೆ ಬಂದದ್ದು ಸಮುದ್ರದ ಅಂಚಿನಲ್ಲಿ, ನೀರಿಗಿಳಿದು ಆಟವಾಡುವ ಭಾರತೀಯರನ್ನು ಗಮನಿಸಿದಾಗ ಅವರಲ್ಲಿ ಹೆಚ್ಚಿನವರು ಗಂಡಸರು. ಅವರಲ್ಲೂ, ಕೆಲವರು ಮಾತ್ರ ಸ್ವಲ್ಪ ಮುಂದುವರೆದು ನೀರಿನಲ್ಲಿ ಈಜಾಡುತ್ತಾ ಬಾಡಿ ಬೋರ್ಡ್ ಹಿಡಿದು ಬಾಡಿ ಸರ್ಫಿಂಗ್ ಮಾಡುತ್ತಾರೆ. ಆದರೆ ಹೆಂಗಸರು ದಡದಲ್ಲೇ ಕೂತಿದ್ದೋ ಇಲ್ಲವೇ ಮಕ್ಕಳೊಡನೆ ಕಾಲು ಒದ್ದೆಯಾಗುವಷ್ಟು ಮಾತ್ರ ನೀರನ್ನು ತಾಕಿಸಿಕೊಂಡು ನಿಂತಿರುತ್ತಾರೆ. ಈಜು ಬರುವುದಿಲ್ಲ ಅಥವಾ ಸಮುದ್ರದೊಳಗೆ ಇಳಿಯಲು ಅಂಜಿಕೆ/ಅಧೈರ್ಯ ಅಥವಾ ತಾವು ಬೆಳೆದ ಭಾರತೀಯ ಸಾಮಾಜಿಕ ಪದ್ಧತಿಯಂತೆ ಹೆಂಗಸರು ‘ಮುಂದೆ ಬಿದ್ದು’ ಸಾಹಸಕ್ಕಿಳಿಯುವುದಿಲ್ಲ. ಭಾರತೀಯ ಹೆಂಗಸರು ಹೊರಾಂಗಣ ಮತ್ತು ಸಾಹಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲೇಬೇಕು ಎನ್ನುವುದು ಯಾರ ನಿರೀಕ್ಷೆ, ಅಪೇಕ್ಷೆ ಅಲ್ಲ. ಆದರೆ ಹಾಗೆ ಮಾಡುವ ಬೇರೆ ಭಾರತೀಯ ಹೆಂಗಸರನ್ನು (ನನ್ನಂಥವರನ್ನು) ನೋಡಿ ಆಡಿಕೊಳ್ಳುವುದು ಇಲ್ಲಿಯೂ ಇದೆ. ಆಸ್ಟ್ರೇಲಿಯಾಗೆ ಬಂದ ಮೊದಲ ಎರಡು ವರ್ಷಗಳಲ್ಲಿ ನಾನಿದ್ದ ಊರಿನಲ್ಲಿ ಪರಿಚಯವಾದ ಹಲವರು ನನ್ನನ್ನು ಮದುವೆ-ಮಕ್ಕಳ ಬಗ್ಗೆ ಕೇಳುತ್ತಿದ್ದರೆ ವಿನಃ ನಾನು ಅಧ್ಯಯನ ಮಾಡುತ್ತಿದ್ದ ವಿಷಯದ ಬಗ್ಗೆ, ನನ್ನ ಅಭಿರುಚಿಗಳ ಬಗ್ಗೆ ಕೇಳುತ್ತಿರಲಿಲ್ಲ. ಗಂಡಸರಿಗಿಂತಲೂ ಹೆಚ್ಚು ಹೆಂಗಸರು ‘ಭಾರತೀಯ ಹೆಣ್ಣು ಮತ್ತಷ್ಟು ಭಾರತೀಯ ಹೆಣ್ಣಾಗಿ ಕಾಣಿಸಿಕೊಳ್ಳಬೇಕು’ ಎಂದು ನನಗೆ ಬುದ್ಧಿವಾದ ಹೇಳುತ್ತಿದ್ದರು. ಸಮುದ್ರನೀರಿನಲ್ಲಿ ಇಳಿಯುವ ನನ್ನ ನಡೆಯನ್ನು ಟೀಕಿಸುತ್ತಿದ್ದರು.

naanemba parimaladha

ತಾಯಿಯಂತೆ ಮಗ

ಕಳೆದೆರಡು ದಶಕಗಳಲ್ಲಿ ನಾನು ಹಲವಾರು ಹೊರಾಂಗಣ ಚಟುವಟಿಕೆಗಳನ್ನು ರೂಢಿಸಿಕೊಂಡಿದ್ದೀನಿ. ಆಗೆಲ್ಲಾ ಗಮನಿಸಿರುವುದು ಬಹುತೇಕ ಮಟ್ಟಿಗೆ ನಾನು ಒಬ್ಬಂಟಿ ಭಾರತೀಯಳು! ಪಾಶ್ಚಾತ್ಯ ಸಮಾಜದಲ್ಲಿ ವಾಸಿಸುತ್ತಿದ್ದರೂ ಯಾಕೆ ಭಾರತೀಯ ಹೆಂಗಸರು ಇಂತಹ ಹೊರಾಂಗಣ, ಸಾಹಸ ಮತ್ತು ನಿಸರ್ಗ-ಸಂಬಂಧಿತ ಚಟುವಟಿಕೆಗಳಲ್ಲಿ ಕಾಣಿಸುವುದಿಲ್ಲ ಎಂದು ಆಗಾಗ ನನ್ನನ್ನು ನಾನೇ ಕೇಳಿಕೊಳ್ಳುತ್ತೀನಿ. ಅವರೂ ಕೂಡ ಈಜು ಕಲಿಯಬಹುದು-ಎಲ್ಲಾ ಕಡೆ ಈಜು ಕಲಿಕೆ ತರಗತಿಗಳು ನಡೆಯುತ್ತವೆ. ಅವರೂ ಕೂಡ ರಾಕ್ ಕ್ಲೈಂಬಿಂಗ್, ಚಾರಣ, kayaking ವಿವಿಧ ಸಾಹಸ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಅವರೊಬ್ಬರೇ ಮಾಡಬೇಕಿಲ್ಲ, ಗೆಳತಿಯರ ಜೊತೆ, ಸಂಗಾತಿಯ ಜೊತೆ, ಮಕ್ಕಳ ಜೊತೆ ಆನಂದಿಸಬಹುದು. ಹೆಚ್ಚಿನದೇನೂ ಖರ್ಚಿಲ್ಲದ ಕ್ಯಾಂಪಿಂಗ್ ಅವಕಾಶವಂತೂ ಮಾಮೂಲು ದಿನನಿತ್ಯ ಜೀವನದ ಚೌಕಟ್ಟಿನಾಚೆಯ ಅನುಭವವನ್ನು ಒದಗಿಸುತ್ತದೆ.

ಈಗಂತೂ ಅತ್ಯಾಧುನಿಕ ಸಂಪರ್ಕ ಸಾಧನಗಳು, ಸಾಮಾಜಿಕ ತಾಣಗಳು, ಸಾಹಸ ಚಟುವಟಿಕೆಗಳಿಗೆ ಬೇಕಾಗುವ ವಸ್ತುಸಾಮಗ್ರಿಗಳು, ಮಾರ್ಗದರ್ಶಕ ಮಾಹಿತಿ ಇರುವುದು ಮಹಿಳೆಯರಿಗೆ ಹೊರಾಂಗಣ ಮತ್ತು ಸಾಹಸ ಚಟುವಟಿಕೆಗಳ ಅನುಭವ ಪಡೆಯಲು ಮತ್ತಷ್ಟು ಉತ್ತೇಜನ ಕೊಡುತ್ತದೆ. ಅವಕಾಶಗಳಿಗೇನೂ ಕಡಿಮೆಯಿಲ್ಲ; ಬಹು ಸುಲಭವಾಗಿ ಎಟುಕುವ ಗ್ರಾಹಕ-ಸ್ನೇಹಿ ವ್ಯವ್ಯಸ್ಥೆಗಳಿವೆ; ಹೆಚ್ಚಿನವಕ್ಕೆ ಅಷ್ಟೇನೂ ಹಣದ ವೆಚ್ಚವಿಲ್ಲ; ಗಂಡಸರಿಗಿರುವಂತೆಯೇ ಹೆಂಗಸರಿಗೂ ಕೂಡ ಅನೂಕೂಲದ ವಾತಾವರಣವಿದೆ. ಕ್ಷೇಮ-ಸುರಕ್ಷತೆಗಳ ಬಗ್ಗೆ ಕಾಳಜಿ ವಹಿಸುವ ಸಮಾಜ ಮತ್ತು ಸರಕಾರವಿದೆ. ಆದರೂ ಯಾಕೆ ಭಾರತೀಯ ಹೆಂಗಸರು ಹಿಂಜರಿಯುತ್ತಾರೆ ಎನ್ನುವುದು ಪ್ರಶ್ನೆಯಾಗೇ ಉಳಿದಿದೆ.

ಪಾಶ್ಚಿಮಾತ್ಯ ಸಮಾಜದಲ್ಲಿ ಕೂಡ ಮಹಿಳೆಯರಿಗೆ ಹೊರಾಂಗಣ ಮತ್ತು ಸಾಹಸ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಅದನ್ನೇ ಜೀವನ ಮತ್ತು ಉದ್ಯೋಗವನ್ನಾಗಿ ಮಾಡಿಕೊಳ್ಳುವುದು ಅಷ್ಟೇನೂ ಸುಗಮದಾರಿಯಲ್ಲ. ಸಂಗಾತಿಯ ಬೆಂಬಲ, ತಾಯ್ತನ, ಮತ್ತು ಪುರುಷರಿಗೆ ಕೊಡುವಷ್ಟು ಆದ್ಯತೆಯನ್ನೇ ಸಮಾನವಾಗಿ ಮಹಿಳೆಯರಿಗೆ ಕೊಡುವ ಉದ್ಯೋಗ ಸಂಸ್ಥೆಗಳು ಇಲ್ಲ, ಕಣ್ಣಿಗೆ ಕಾಣದ ಅನುಭವಕ್ಕೆ ಮಾತ್ರ ಬರುವ ಅನೇಕ ತಾರತಮ್ಯಗಳಿವೆ ಎನ್ನುವುದು ಚರ್ಚಯಾಗೇ ಉಳಿದಿದೆ. ಇತ್ತೀಚೆಗೆ ಭಾರತದಲ್ಲಿ ಬೇಸಾಯ/ವ್ಯವಸಾಯ/ರೈತ ಜೀವನದಲ್ಲಿ ಮಹಿಳೆಯರ ಪಾತ್ರ ಅಷ್ಟೇನೂ ಮಹತ್ತರವಾದದ್ದಲ್ಲ ಎನ್ನುವ ಪ್ರಶ್ನೆಯೆದ್ದು ಅದರ ಚರ್ಚೆಯಾಗಿತ್ತು. ಅದೇ ಧಾಟಿಯಲ್ಲಿ ಪಾಶ್ಚಿಮಾತ್ಯ ದೇಶಗಳ ಹೊರಾಂಗಣ ಮತ್ತು ಸಾಹಸ ಚಟುವಟಿಕೆಗಳ ವಿಷಯದಲ್ಲಿ ಮಹಿಳೆಯರ ಪಾತ್ರ ಗುರುತರವಾಗಿಲ್ಲ ಎಂಬ ಆರೋಪವನ್ನು ಮಹಿಳೆಯರು ಖಂಡಿಸಿದ್ದಾರೆ. ಆ ವಿಷಯ ಈಗಲೂ ಜೀವನದಲ್ಲಿ ಪುರುಷರ ನಿಯಂತ್ರಣ ಮತ್ತು ಅಧಿಕಾರವೇ ನಡೆಯುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದಿದ್ದಾರೆ.

ತಾಯ್ತನಕ್ಕೂ ಮುಂಚೆ ನಾನು ಸೈಕ್ಲಿಂಗ್, ಜಾಗಿಂಗ್, ನಡಿಗೆ, ಚಾರಣ, ಈಜು ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದೆ. ತಾಯಿಯಾದ ಹೊಸತರಲ್ಲಿ ಅವಕ್ಕೆ ಗಮನ ಕೊಡುವುದು ಸ್ವಲ್ಪ ಕಡಿಮೆಯಾಯ್ತು. ಮಕ್ಕಳು ಬೆಳೆಯುತ್ತಿದ್ದಂತೆ ಅವರ ಜೊತೆ ನಾನು ಆ ಚಟುವಟಿಕೆಗಳನ್ನು ಮತ್ತೆ ಕೈಗೆತ್ತಿಕೊಂಡೆ. ಹಿಂದೆಂದೂ ನಾನು ಕಲಿತಿರದ ಆತ್ಮರಕ್ಷಣೆ ಕಲೆ (martial arts) ಕಲಿತೆ. ಮಕ್ಕಳಿಗೆ ನಾನು ಹೇಳಿದ್ದು ಒಂದು ಸಂಗೀತ, ಒಂದು ಆತ್ಮರಕ್ಷಣೆ, ಒಂದು ಹೊರಾಂಗಣ – ಈ ಮೂರು ವಿಷಯಗಳಿಗೆ ನಾನು ತುಂಬು ಪ್ರೋತ್ಸಾಹ ಕೊಡುತ್ತೀನಿ. ವಿವಿಧ martial arts ಸ್ಟೈಲ್ ಗಳನ್ನು ಅವರು ಕಲಿತರು; ಚಿಕ್ಕವನು ಆಫ್ರಿಕನ್ ಡ್ರಮ್ಮಿಂಗ್ ನಲ್ಲಿ ಪರಿಣಿತನಾದಾಗ ಅವನನ್ನೇ ನನ್ನ ಗುರುವೆಂದು ಕರೆದು ಅವನಿಂದ ನಾನೂ ಕೂಡ ಅಲ್ಪಸ್ವಲ್ಪ Djembe ಕಲಿತೆ. ದೊಡ್ಡವನು ಹೊರಾಂಗಣ ಕಲಿಕೆಯಲ್ಲಿ ನಿಪುಣನಾದಾಗ ನಾನೂ ಕೂಡ ಒಂದಷ್ಟು ಕೈ-ಕೆಲಸಗಳನ್ನು ಕಲಿತು ಮುಂದೆ Forest School ಪ್ರಾಕ್ಟಿಶನರ್ ಕೋರ್ಸ್ ಮಾಡಿ ಬೇರೆಯವರಿಗೂ ಹೇಳಿಕೊಟ್ಟೆ. ಜೊತೆಜೊತೆಗೆ ಹಲವಾರು ಬೆಟ್ಟಗುಡ್ಡಗಳನ್ನು ಏರಿದ್ದು, ಅವರೊಡನೆಯೇ ಸ್ನೋರ್ಕೆಲ್ಲಿಂಗ್ ಮತ್ತು ಸ್ಕೀಯಿಂಗ್ ಕಲಿತೆ. ನನ್ನ ಬಾಲ್ಯದಲ್ಲಿ ಮತ್ತು ವಿದ್ಯಾಭ್ಯಾಸದ ವರ್ಷಗಳಲ್ಲಿ ಇಂತಹ ಅವಕಾಶಗಳು ಸಿಕ್ಕಿದ್ದಿದ್ದರೆ ನನ್ನ ಜೀವನದ ದಿಕ್ಕೇ ಬದಲಾಗುತ್ತಿತ್ತು.

ನಾವು ನಾಲ್ಕು ಜನರೂ ಪ್ರತಿವರ್ಷವೂ ಕ್ಯಾಂಪಿಂಗ್ ಹೋಗುವುದು ಖುಷಿ ತರುತ್ತದೆ. ನಿಸರ್ಗ-ಸಂಬಂಧಿತ ಚಟುವಟಿಕೆಗಳಲ್ಲಿ ಪಳಗಿದ್ದೀವಿ. ಆದರೆ ಯಾರೂ ಯಾರನ್ನೂ ಉದ್ದೇಶಪೂರ್ವಕವಾಗಿ ಮತ್ತು ಲಿಂಗಬೇಧವನ್ನು ಕಾರಣವಾಗಿಟ್ಟುಕೊಂಡು ‘ಪಳಗಿಸಲು’ ಪ್ರಯತ್ನಿಸಿಲ್ಲ. ಈಗಲೂ ಇಂತಹ, ವಿಶೇಷವಾಗಿ ಹೊರಾಂಗಣ, ಚಟುವಟಿಕೆಗಳಲ್ಲಿ ಕಾಣಿಸುವುದು ನಾನೊಬ್ಬಳೇ ಏಕಾಂಗಿ ಭಾರತೀಯ ಹೆಂಗಸು! ಕಡು ಸಂಪ್ರದಾಯಸ್ಥ ಕುಟುಂಬದಿಂದ ಬಂದ ಒಬ್ಬ ಹೆಣ್ಣಾಗಿ ನಾನು ಜಾತಿ, ಧರ್ಮಗಳ ಅಂಕುಶವನ್ನು ಬಿಸಾಡಿ ನನ್ನ ಸಾಹಸ ಮನೋಭಾವವನ್ನು ಉಳಿಸಿಕೊಂಡು ಮನೋಬಲದಿಂದ ನಾನು ನಾನಾಗೆ ಇರುವುದು ಖುಷಿಯಾಗುತ್ತದೆ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ಕಾಜಾಣ ಪ್ರೆಸೆಂಟ್ ಮೇಡಮ್ ಕೆಂಬೂತ ಪ್ರೆಸೆಂಟ್ ಮೇಡಮ್ ಗುಬ್ಬಚ್ಚಿ ಅಬ್ಸೆಂಟ್ ಮೇಡಮ್ 

Published On - 6:45 pm, Sun, 28 February 21

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್