Self Awareness; ನಾನೆಂಬ ಪರಿಮಳದ ಹಾದಿಯಲಿ: ಅಡುಗೆಯ ಜವಾಬ್ದಾರಿ ಇಲ್ಲದಿರುವುದೇ ನನ್ನ ಅದೃಷ್ಟ
‘ನಾನು ಬೇರೆಯವರು ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವವಳಲ್ಲ. ಹಾಗಂತ ನಾನು ಯಾರನ್ನೂ ಕೇರ್ ಮಾಡದೇ ರೆಬೆಲ್ ಆಗಿ ಖಂಡಿತ ಬದುಕುತ್ತಿಲ್ಲ. ನಮಗೇನು ಬೇಕು ಎಂಬ ಅರಿವು ಮತ್ತು ಅದನ್ನು ಪಡೆಯುವ ಗಟ್ಟಿ ನಿರ್ಧಾರ ಹೆಣ್ಣು ಮಕ್ಕಳಿಗೆ ಇರಬೇಕು.’ ದೀಪಾ ಹಿರೇಗುತ್ತಿ
ಒಳಗಿರುವ ಜೀವಚೈತನ್ಯಕ್ಕೆ ಲಿಂಗಬೇಧವುಂಟೆ?; ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿ ಇದೀಗ ನಿಮ್ಮೆಲ್ಲರ ಆಪ್ತ ಒಳಗೊಳ್ಳುವಿಕೆಯಿಂದಾಗಿ ರೂಪಾಂತರದ ಹಂತಕ್ಕೆ ಬಂದು ನಿಂತಿದೆ. ನೂರಾರು ವರುಷಗಳಿಂದ ಸುತ್ತಿಕೊಂಡಿರುವ ಎಡರು ತೊಡರುಗಳನ್ನೆಲ್ಲ ಕಿತ್ತೊಗೆದರೇ ನನ್ನೊಳಗಿನ ನಾನು ಪೂರ್ತಿಯಾಗಿ ಅರಳುವುದು, ಹೆಜ್ಜೆ ಕಿತ್ತಿಟ್ಟರೆ ಮಾತ್ರ ಸಹಜ ಗತಿಯಲ್ಲಿ ಚಲಿಸಲು ಸಾಧ್ಯವಾಗುವುದು ಎನ್ನುತ್ತಿದ್ದಾರೆ ನಮ್ಮ ನಡುವಿನ ದಿಟ್ಟ ಮಹಿಳೆಯರು. ತಮ್ಮ ಧೀಶಕ್ತಿಯಿಂದ ಸಮಾಜಕ್ಕೆ ತಕ್ಕ ಉತ್ತರಗಳನ್ನು ಕೊಡುತ್ತ ಬಂದಿರುವ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತ ಸಾಗುತ್ತಿರುವ ಅವರವರ ಪರಿಯನ್ನು ನಿಮ್ಮ ಮುಂದೆ ಇಡುತ್ತಿದ್ದಾರೆ. ಈ ಸರಣಿಯಲ್ಲಿ ನೀವೂ ಒಳಗೊಳ್ಳಬೇಕೇ? ದಯವಿಟ್ಟು ಬರೆಯಿರಿ tv9kannadadigital@gmail.com ಪರಿಕಲ್ಪನೆ: ಶ್ರೀದೇವಿ ಕಳಸದ
ಬೇರೆಯವರನ್ನು ಖುಷಿಪಡಿಸುತ್ತ ಬದುಕು ಕಳೆದುಬಿಡುವ ಮಹಿಳೆಯರು ಇತರರ ಜತೆಗೆ ತಾವೂ ಖುಷಿಯಾಗಿರಬೇಕೆಂದು ನಿರ್ಧರಿಸಿದಾಗಲೇ ಬೆಳಗು ಎನ್ನುತ್ತಿದ್ದಾರೆ ಲೇಖಕಿ, ಉಪನ್ಯಾಸಕಿ ದೀಪಾ ಹಿರೇಗುತ್ತಿ.
ಬಹಳಷ್ಟು ಮಂದಿ ಮದುವೆಯಾದ ಹೆಣ್ಣುಮಕ್ಕಳಿಗೆ ಇಲ್ಲದ ಒಂದು ಮುಖ್ಯ ಅನುಕೂಲವಿರುವ ಕೆಲವೇ ಅದೃಷ್ಟವಂತರಲ್ಲಿ ನಾನೂ ಒಬ್ಬಳು. ಅದು ಅಡುಗೆಯ ಜವಾಬ್ದಾರಿ ಇಲ್ಲದಿರುವುದು! ಅಷ್ಟೇ ಅಲ್ಲ, ಈ ಸರಣಿಯಲ್ಲಿ ಲೇಖಕಿಯರು ಬರೆದ ಹಲವು ಲೇಖನಗಳನ್ನು ಓದಿರುವೆ. ಅವರು ಅನುಭವಿಸಿದ ಯಾವ ತೊಂದರೆಯೂ ಬಾಲ್ಯದಲ್ಲಿ ನನಗೆ ಇರಲಿಲ್ಲ. ನನ್ನ ತಂಗಿ ತಮ್ಮ ಸ್ವಲ್ಪ ಬೆಳ್ಳಗಿದ್ದುದರಿಂದ ಚಿಕ್ಕವಳಿರುವಾಗ ಕೆಲವೊಮ್ಮೆ ಕೀಳರಿಮೆ ಅನುಭವಿಸಿದ್ದಿತ್ತು. ಆದರೆ ಯಾವುದಕ್ಕೂ ಅಂಜದ, ಹಿಂಜರಿಯದ ನನ್ನ ದಿಟ್ಟ ಸ್ವಭಾವ ತಂದ ಆತ್ಮವಿಶ್ವಾಸ ಅದನ್ನು ಮುಂದುವರೆಯಲು ಬಿಡಲಿಲ್ಲ. ನಾನು ನನಗೇ ಅರಿವಿಲ್ಲದೇ ನನ್ನ ಬದುಕನ್ನು ನನಗಿಷ್ಟ ಬಂದ ಹಾಗೆಯೇ ನಡೆಸುವ ತೀರ್ಮಾನವನ್ನು ಯಾವತ್ತೋ ಮಾಡಿಬಿಟ್ಟಿದ್ದೆ ಎಂದು ಈಗ ನಾಲ್ಕು ದಶಕಗಳ ನನ್ನ ಬದುಕನ್ನು ಹಿಂದಿರುಗಿ ನೋಡುವಾಗ ಅನ್ನಿಸುತ್ತದೆ. ನಮ್ಮ ಅಪ್ಪ ಅಮ್ಮ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪಡುವ ಬವಣೆಯನ್ನು ನೋಡಿ ಆದರೆ ಉಪನ್ಯಾಸಕಿಯೇ ಆಗಬೇಕೆಂದು ತೀರ್ಮಾನಿಸಿದ್ದೆ. ಪದವಿಯಲ್ಲಿ ಐಚ್ಛಿಕ ಇಂಗ್ಲಿಷ್‍ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಎರಡನೇ ಸ್ಥಾನ ಪಡೆದ ಕಾರಣ ಹತ್ತು ತಿಂಗಳ ಬಿಎಡ್ ಮಾಡಿದರೆ ತಕ್ಷಣ ಕೆಲಸ ಸಿಗುತ್ತದೆಂದು ಮನೆಯಲ್ಲಿ ಒತ್ತಾಯ. ಉಪವಾಸ ಸತ್ಯಾಗ್ರಹ ಮಾಡಿ ಎಂಎಗೆ ಸೇರಿಕೊಂಡೆ. ಕೆಲಸಕ್ಕೆ ಸೇರಿ ಸ್ವಾವಲಂಬಿಯಾದ ಮೇಲೆ ವಿವಾಹವಾಗುವುದೆಂದು ನಿರ್ಧರಿಸಿದ್ದೆ. ನನ್ನ ಸ್ವಭಾವಕ್ಕೆ ಸರಿಹೊಂದುವ ಅನ್ಯ ಜಾತಿಯ ಹುಡುಗನನ್ನು ಆಯ್ಕೆ ಮಾಡಿಕೊಂಡಾಗ ನನ್ನನ್ನು ಮುದ್ದಿನಿಂದ ಬೆಳೆಸಿದ್ದ ತಂದೆಗೆ ನೋವಾದದ್ದು ನನಗೂ ಸಂಕಟ ತಂದರೂ ನನ್ನ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಗಟ್ಟಿ ನಿರ್ಧಾರ ಕೈಗೊಂಡೆ. ಮುಲಾಜಿಗೆ ಬಲಿಯಾಗಿ, ಒತ್ತಾಯಕ್ಕೆ ಕಟ್ಟುಬಿದ್ದು, ಭಾವನೆಗಳಲ್ಲಿ ಕೊಚ್ಚಿಹೋಗುವ ಹೆಣ್ಣುಮಕ್ಕಳು ಇಡೀ ಬದುಕನ್ನೇ ನರಳುತ್ತ ಕಳೆದುಬಿಡುತ್ತಾರೆ. ಕಾಲ ಎಲ್ಲವನ್ನೂ ಮರೆಸುತ್ತದೆ ಎಂದುಕೊಂಡು ಮುಂದುವರೆದದ್ದು ಸತ್ಯವೇ ಆಯಿತು.
ನಮಗೆ ಅಂದರೆ ಹೆಣ್ಣುಮಕ್ಕಳಿಗೂ, ಗಂಡಸರಿಗೂ ಇರುವ ಒಂದು ವ್ಯತ್ಯಾಸವೆಂದರೆ ಗಂಡಸರು ತಮ್ಮ ಬದುಕು ಹೀಗೇ ಇರಬೇಕು ಎಂದು ನಿರ್ಧರಿಸಿಕೊಳ್ಳುತ್ತಾರೆ. ಅದಕ್ಕೆ ಕುಟುಂಬದ ಉಳಿದವರು ಸಹಕರಿಸುವಂತೆ ಮಾಡಿಕೊಳ್ಳುತ್ತಾರೆ. ಆದರೆ ಹೆಣ್ಣುಮಕ್ಕಳು ಲೋಕದ ಅಪವಾದಕ್ಕೆ ಅಂಜಿ ತಮ್ಮ ಬದುಕಿನ ಸಣ್ಣಸಣ್ಣ ಸುಖಗಳನ್ನೂ ತ್ಯಾಗ ಮಾಡಿಬಿಡುತ್ತಾರೆ. ಹಾಗಾಗಿ ಸಮಸ್ಯೆ ಒಂದೇ ಆದರೂ ಗಂಡಸರಿಗೆ ಅದು ಕಡ್ಡಿ, ನಮಗೆ ಗುಡ್ಡ. ನಾನು ಬೇರೆಯವರು ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವವಳಲ್ಲ. ಪುಟ್ಟ ಉದಾಹರಣೆ ಕೊಡಬೇಕೆಂದರೆ ಈ ಮದುವೆ, ನಿಶ್ಚಿತಾರ್ಥ, ನೆಂಟರೂಟದಂತಹ ಕಾರ್ಯಕ್ರಮಗಳಿಗೆ ಹೋಗುವುದು ನನಗೆ ಕೊಂಚವೂ ಇಷ್ಟವಿಲ್ಲ. ಅಪರೂಪಕ್ಕೆ ನನಗೆ ಹೋಗಬೇಕೆನಿಸಿದರೆ ಮಾತ್ರ ಹೋಗುತ್ತೇನೆ. ಇರುವ ಒಂದು ಭಾನುವಾರವನ್ನು ಮುಲಾಜಿಗೆ ಬಿದ್ದು ಹಾಳು ಮಾಡಿಕೊಳ್ಳುವ ಮೂರ್ಖಳು ನಾನಲ್ಲವೇ ಅಲ್ಲ. ಅಷ್ಟೇ ಅಲ್ಲ ಯಾವುದಾದರೂ ಕಾರ್ಯಕ್ರಮಕ್ಕೆ, ಭಾಷಣಕ್ಕೆ ಕರೆದರೆ ನನಗೆ ಹೋಗುವ ಇಷ್ಟವಿಲ್ಲದಿದ್ದರೆ ಹೋಗುವುದೇ ಇಲ್ಲ. ಹೋಗಬೇಕೆನಿಸಿದಾಗ ಬೀದರಿಗೂ ಹೋಗಿದ್ದೇನೆ, ಮುಂಬೈಗೂ ಹೋಗಿದ್ದೇನೆ. ಇನ್ನು ಕೆಲವರಿಗೆ ಗಂಟೆಗಟ್ಟಲೆ ಹರಟೆ ಹೊಡೆಯಲು ಇಷ್ಟ. ಆದರೆ ನನಗೆ ಅದು ಇಷ್ಟವಿಲ್ಲ. ಇವೆಲ್ಲವನ್ನೂ ಬೇರೆಯವರಿಗೆ ಬೇಸರವಾಗದಂತೆ ನಿಭಾಯಿಸುವ ಕಲೆಯನ್ನೂ ನಾನೇ ಸಂಶೋಧಿಸಿಕೊಂಡಿದ್ದೇನೆ. ನಾನು ಯಾರೊಂದಿಗೂ ಫೋನ್‍ನಲ್ಲಿ ದೀರ್ಘ ಸಂಭಾಷಣೆ ನಡೆಸುವುದಿಲ್ಲ, ಮೆಸೆಂಜರ್ನಲ್ಲಾಗಲೀ, ವ್ಯಾಟ್ಸಾಪ್‍ನಲ್ಲಾಗಲೀ ಅನಗತ್ಯ ಚಾಟ್ ಮಾಡುವುದಿಲ್ಲ. ನನ್ನ ತಂದೆತಾಯಿ, ತಂಗಿ ತಮ್ಮ ಯಾರಿಗೆ ಫೋನ್ ಮಾಡಿದರೂ ನಮ್ಮ ಸಂಭಾಷಣೆ ಒಂದೆರಡು ನಿಮಿಷಗಳಲ್ಲಿ ಮುಗಿದು ಮತ್ತೆ ಮತ್ತೆ ಎನ್ನಲು ಶುರು ಮಾಡುತ್ತೇವೆ! ಕಾರಣ ನಾವು ಬೇರೆಯವರ ಸುದ್ದಿ ಮಾತಾಡುವುದೇ ಇಲ್ಲ! ಹಾಗಂತ ನಾನು ಯಾರನ್ನೂ ಕೇರ್ ಮಾಡದೇ ರೆಬೆಲ್ ಆಗಿ ಖಂಡಿತ ಬದುಕುತ್ತಿಲ್ಲ. ನಮಗೇನು ಬೇಕು ಎಂಬ ಅರಿವು ಮತ್ತು ಅದನ್ನು ಪಡೆಯುವ ಗಟ್ಟಿ ನಿರ್ಧಾರ ಹೆಣ್ಣು ಮಕ್ಕಳಿಗೆ ಇರಬೇಕು. ಬಹುಶಃ ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವುದು ಇದಕ್ಕೆ ಪರಿಹಾರ. ಹೊರಗಡೆ ದುಡಿದು ಸಂಬಳ ತಂದೂ ಗುಲಾಮರಂತೆ ಬದುಕುವ, ಸಂಬಳ ತರದಿದ್ದರೂ ಸಂತಸದಿಂದಿರುವ ಹೆಣ್ಣುಮಕ್ಕಳಿದ್ದಾರೆ ಎಂದು ವಾದಿಸಬಹುದಾದರೂ ಆರ್ಥಿಕ ಸ್ವಾವಲಂಬನೆ ಹೆಣ್ಣುಮಕ್ಕಳ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಕುಟುಂಬದವರ ಅಭಿಪ್ರಾಯಗಳನ್ನು ಗೌರವಿಸುತ್ತಲೇ ನಮ್ಮತನವನ್ನೂ ಇಟ್ಟುಕೊಂಡು ಬದುಕುವುದು ಕಷ್ಟವಿರಬಹುದು ಆದರೆ ಪರಸ್ಪರ ಪ್ರೀತಿ, ಗೌರವ, ಹೊಂದಾಣಿಕೆ ಇದ್ದರೆ ಅಸಾಧ್ಯವಲ್ಲ. ಹಾಗಾಗಿ ಮದುವೆ ಮಕ್ಕಳು ಸಂಸಾರ ನನ್ನ ವೈಯಕ್ತಿಕ ಬರವಣಿಗೆಯ ಬದುಕಿನಲ್ಲಿ ಯಾವುದೇ ಅಡೆತಡೆಯನ್ನುಂಟು ಮಾಡಲಿಲ್ಲ. ನಾನು ಇದುವರೆಗೂ ಬರೆಯಬೇಕೆಂದುಕೊಂಡದ್ದನ್ನು ಬರೆಯದಿರಲು ಕಾರಣ ನನ್ನ ಸೋಮಾರಿತನವೇ ಹೊರತು ಬೇರೆ ಸಮಸ್ಯೆಯಲ್ಲ.
ಹಾ, ಈ ಅಡುಗೆಗೂ ನನಗೂ ಹೊಂದಾಣಿಕೆಯಾಗದಿರುವುದರ ಕಾರಣ ನನ್ನ ಬಾಲ್ಯ. ಅಡುಗೆಮನೆಗೆ ಕಾಲಿಡಲು ಬಿಡದೇ ಕೂತಲ್ಲಿಗೇ ಎಲ್ಲವನ್ನೂ ಸರಬರಾಜು ಮಾಡುವ ಅಪ್ಪ ಅಮ್ಮ ನನ್ನನ್ನು (ಕಥೆ)ಪುಸ್ತಕದ ಹುಳುವಾಗಿಸಿದ್ದರು. ಮಕ್ಕಳು ಓದಬೇಕು ಅಡುಗೆ ಎಲ್ಲ ಆಮೇಲೆ ನೋಡಿದರಾಯಿತು ಎಂಬ ಆಧುನಿಕ ಮನೋಭಾವದವರು ನನ್ನ ತಂದೆ ತಾಯಿ. ಶಿಕ್ಷಕರಾಗಿದ್ದ ಅವರು ನನಗೆ ಓದಲು ನೀಡಿದ ಪ್ರೋತ್ಸಾಹ ಎಲ್ಲ ಹೆಣ್ಣುಮಕ್ಕಳಿಗೂ ಸಿಗುವಂತಾಗಬೇಕು ಎಂದು ಅಂದುಕೊಳ್ಳುತ್ತಿರುತ್ತೇನೆ. ಹಾಗಾಗಿ ಬೇಗ ಮಾಡಿ ಮುಗಿಸಬಹುದಾದ ಕಸ ಗುಡಿಸುವ, ಪಾತ್ರೆ ತೊಳೆಯುವ ಕೆಲಸ ಮಾಡುತ್ತಿದ್ದೆನಾದರೂ ಗಂಟೆಗಟ್ಟಲೆ ಶ್ರಮ ಬೇಡುವ ಅಡುಗೆ ಮನೆಗೆ ನಾನು ಹೋಗಿಯೇ ಇರಲಿಲ್ಲ. ಇನ್ನು ಎಂಎ ಮಾಡುವಾಗ ಹಾಸ್ಟೆಲ್ಲು, ನಂತರ ಉದ್ಯೋಗ ಮಾಡುವಾಗ ಪಿಜಿ ಹೀಗೆ ಎಲ್ಲೂ ಅಡಿಗೆಮನೆಗೆ ಹೋಗುವ ಪ್ರಸಂಗವೇ ನನಗೆ ಬರಲಿಲ್ಲ. ಕಲಿಯುವ ಆಸಕ್ತಿ ನನಗೆ ಮೊದಲೇ ಇರಲಿಲ್ಲ. ಹತ್ತು ನಿಮಿಷ ಸಿಕ್ಕಿದರೂ ಕಥೆ ಪುಸ್ತಕ ಹಿಡಿದುಬಿಡುತ್ತಿದ್ದೆ. ನಮ್ಮ ತಾಯಿಗೆ ಯಾವಾಗಲೋ ಹುಶಾರಿಲ್ಲದಿದ್ದಾಗಲೋ, ತರಬೇತಿಗೆ ಹೋಗಿದ್ದಾಗಲೋ ನನ್ನ ತಮ್ಮ ಮತ್ತು ತಂದೆ ಸೇರಿ ಮೊಟ್ಟೆ ಸಾರು ಮಾಡಿ ನನ್ನನ್ನು ಊಟಕ್ಕೆ ಕರೆಯುತ್ತಿದ್ದದ್ದು ಚೆನ್ನಾಗಿ ನೆನಪಿದೆ.
ಇನ್ನು ಮದುವೆಯಾದ ಮೇಲೆ ಅತ್ತೆ ಜತೆಗಿದ್ದುದರಿಂದ ತೂಕಡಿಸುವವನಿಗೆ ಹಾಸಿಗೆ ಹಾಸಿಕೊಟ್ಟ ಹಾಗಾಗಿ ಅಡುಗೆ ಮಾಡುವ ಪ್ರಸಂಗವೇ ಬರಲಿಲ್ಲ. ನಮ್ಮತ್ತೆಗೋ ಬೇಕಾಗಿದ್ದನ್ನು ಮಾಡಿ ಹಾಕುವುದೆಂದರೆ ಖುಷಿ. ರೋಗಿ ಬಯಸಿದ್ದೇ ವೈದ್ಯ ಹೇಳಿದ್ದೂ ಆದಾಗ ಆಗುವ ಸಂತಸ ಎಂದರೆ ಇದೇ ಇರಬೇಕು. ಇವತ್ತಿಗೂ ನನಗೆ ಅಡಿಗೆ ಎಂದರೆ ಜೀವನಕ್ಕೆ ಅವಶ್ಯಕತೆ ಇರುವ ಒಂದು ಕೌಶಲ ಅಷ್ಟೇ, ಹಾಗಾಗಿ ಅದನ್ನು ಕಲಿತೆ. ಬದುಕಲು ಬೇಕಾದ ಅಡಿಗೆ ಬರುತ್ತದೆ. ಆದರೆ ನಮ್ಮತ್ತೆಗೆ ಅಡುಗೆ ಜೀವನದ ಪ್ರಮುಖ ಅಂಶ. ಒಮ್ಮೆ ಅವರಿಗೆ ಒಂದು ತಿಂಗಳ ಕಾಲ ಹುಷಾರಿಲ್ಲದಿದ್ದಾಗ ನಾನು ಬೆಳಗಿನ ತಿಂಡಿಯನ್ನು ದಿನವೂ ಹೊರಗಡೆಯಿಂದ ತರಿಸುತ್ತಿದ್ದೆ. ಅವರು ಹುಷಾರಾದ ಮೇಲೆಯೂ ಹೊರಗಡೆಯಿಂದಲೇ ತಿಂಡಿ ಬರುತ್ತಿತ್ತು. ಸಾರು ಪಲ್ಯ ನಾನೇ ಮಾಡುತ್ತಿದ್ದೆ. ಮನೆಗೆ ಬಂದು ಹೋಗುವವರನ್ನೆಲ್ಲ ಆತಿಥ್ಯ ಮಾಡುತ್ತ ಚುರುಕಾಗಿದ್ದ ನಮ್ಮತ್ತೆ ಇದ್ದಕ್ಕಿದ್ದಂತೆ ಮಂಕಾಗತೊಡಗಿದರು! ಅಡಿಗೆ ಮನೆಯ ಹೊರತಾದ ಬದುಕನ್ನು ಅವರಿಗೆ ಕಲ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ತಾನು ಅಪ್ರಸ್ತುತ ಎಂದು ಅವರಿಗೆ ಅನ್ನಿಸಿಬಿಟ್ಟಿತ್ತೋ ಏನೋ! ಬೆಳಗಿನ ತಿಂಡಿ ಅಡುಗೆ ಎಲ್ಲವನ್ನೂ ಮತ್ತೆ ಮಾಡಲು ಪ್ರಾರಂಭಿಸಿದ ಮೇಲೆ ಸುಧಾರಿಸಿಕೊಂಡರು. ವಿಶ್ರಾಂತಿಯೂ ಹೇಗೆ ಹಿಂಸೆಯಾಗಬಹುದು ಎಂದು ಅಚ್ಚರಿಪಟ್ಟೆ ಅಷ್ಟೇ ಅಲ್ಲ ವ್ಯಕ್ತಿಯಿಂದ ವ್ಯಕ್ತಿಗೆ ಒಂದೇ ಸಂಗತಿ ಹೇಗೆ ಬದಲಾಗುತ್ತದೆ ಎಂಬುದರ ಬಹುದೊಡ್ಡ ಉದಾಹರಣೆ ನನಗೆ ನಮ್ಮ ಮನೆಯಲ್ಲೇ ಸಿಕ್ಕಿತು. ನನ್ನ ಸಹೋದ್ಯೋಗಿಗಳು ನಾನು ಕಾಲೇಜಿಗೆ ಏನಾದರೂ ತಿಂಡಿ ತೆಗೆದುಕೊಂಡು ಹೋದರೆ ನಿಮ್ಮತ್ತೆಗೆ ಥ್ಯಾಂಕ್ಸ್ ಹೇಳಿ ಎನ್ನುತ್ತಾರೆ. ಮನೆಗೆ ಬಂದು ಊಟ ಮಾಡುವ ಸ್ನೇಹಿತರು “ಅಡುಗೆ ಮಾಡದಿದ್ದರೂ ಚೆನ್ನಾಗಿ ಬಡಿಸಿದಿರಿ” ಎಂದು ನನ್ನ ಕಾಲೆಳೆಯುತ್ತಾರೆ. ಯಾರೇನೇ ಅಂದರೂ ನನಗೇನೂ ಬೇಸರವಿಲ್ಲ, ನಮ್ಮ ಮನಸ್ಸಿಗೆ ಬಂದಾಗ ಅಡುಗೆ ಮಾಡುವುದು ಖುಷಿಯೇ, ಆಗ ಫೇಸ್‍ಬುಕ್ಕಿನಲ್ಲಿ ಪಟ ಹಾಕುವುದೂ ಸಂಭ್ರಮವೇ. ಆದರೆ ದಿನವೂ ಮೂರು ನಾಲ್ಕು ಸಲ ಅಡುಗೆ ಕಡ್ಡಾಯವಾದಾಗ ಅದರಂತಹ ಶಿಕ್ಷೆ ಬೇರೊಂದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ ಬಗೆಬಗೆಯ ಅಡುಗೆ ಮಾಡಿ ಖುಷಿಪಡುವ ಸ್ನೇಹಿತರನ್ನು ನೋಡಿದರೆ ಸಂತೋಷಪಡುತ್ತೇನೆ. ನನ್ನ ಮಗ ಮಗಳು ಇಬ್ಬರನ್ನೂ ಅಡುಗೆ ಕಲಿಯಲು, ಮನೆಗೆಲಸ ಮಾಡಲು ಪ್ರೋತ್ಸಾಹಿಸುತ್ತೇನೆ. ಅಡುಗೆಯೂ ಸೇರಿದಂತೆ ಮನೆಯ ಕೆಲಸಗಳನ್ನು ಗಂಡು ಹೆಣ್ಣುಮಕ್ಕಳಿಬ್ಬರೂ ಕಲಿಯಬೇಕು ಎಂದು ನಮ್ಮ ಕಾಲೇಜಿನ ಮಕ್ಕಳಿಗೂ ಆಗಾಗ್ಗ ಹೇಳುತ್ತಲೇ ಇರುತ್ತೇನೆ.
ಇಷ್ಟೆಲ್ಲ ಏಕೆ ಬರೆದೆ ಎಂದರೆ ಬಹಳಷ್ಟು ಲೇಖಕಿಯರು ಅಯ್ಯೋ ಈ ಅಡುಗೆ ಮನೆಯಿಂದ ಮುಕ್ತಿ ಸಿಕ್ಕಿದರೆ ಏನೆಲ್ಲ ಸಾಧಿಸುತ್ತಿದ್ದೆ ಎಂದು ಕನಸು ಕಾಣುತ್ತಿರುತ್ತಾರೆ. ಆದರೆ ಅಡುಗೆಯಂತಹ ಬಹುದೊಡ್ಡ ಕೆಲಸದಿಂದ ವಿನಾಯಿತಿ ಹೊಂದಿರುವ ನಾನು ಕಡಿದು ಕಟ್ಟೆ ಹಾಕಿರುವುದು ಅಷ್ಟರಲ್ಲೇ ಇದೆ. ಅಡುಗೆ, ಜವಾಬ್ದಾರಿಯುತ ಕೆಲಸದ ಒತ್ತಡಗಳ ನಡುವೆ ಮೌಲಿಕ ಕೃತಿಗಳನ್ನು ಕೊಟ್ಟಿರುವ ಲೇಖಕಿಯರು ನಮ್ಮ ನಡುವೆ ಬಹಳವಿದ್ದಾರೆ. ಹಾ, ಒಂದಂತೂ ನಿಜ, ಈ ಅಡುಗೆ ಮನೆಯ ಜವಾಬ್ದಾರಿ ಇಲ್ಲದಿರುವುದರಿಂದ ಪುಸ್ತಕ ಬಹಳ ಓದುತ್ತಿದ್ದೆ. ಈಗ ಸಿನಿಮಾ, ವೆಬ್ ಸರಣಿಗಳನ್ನು ಶೀಘ್ರವಾಗಿ ನೋಡಿ ಮುಗಿಸಿಬಿಡುತ್ತೇನೆ. “ಏನೂ ಬರೀತಿಲ್ಲ ಬರೀ ಇವೇ” ಎಂದರೆ ಸಾಹಿತ್ಯಿಕ ಮಿತ್ರರು ಅವೂ ಸಾಹಿತ್ಯ ರಚನೆಯ ಮೇಲೆ ಪ್ರಭಾವ ಬೀರುತ್ತವೆ ಎನ್ನುತ್ತಾರೆ. ಅದು ನಿಜವೆಂದು ನನ್ನನ್ನು ನಾನು ನಂಬಿಸಿಕೊಳ್ಳುತ್ತ ಮತ್ತೊಂದು ಹೊಸ ಸಿನಿಮಾ ನೋಡಲು ಶುರು ಮಾಡುತ್ತೇನೆ!
ಹಾಗಾಗಿ ಬರವಣಿಗೆಯ ವಿಚಾರದಲ್ಲಿ ನಾನು ಬಹು ಸೋಮಾರಿಯೇ. ಯಾರಾದರೂ ಬರೆಯಿರಿ ಎಂದು ಹೇಳಿ ಸಮಯದ ಗಡುವು ಕೊಟ್ಟರೆ ಪುಸ್ತಕವನ್ನೇ ಬರೆದು ಮುಗಿಸಬಲ್ಲೆ. ಯಾವ ಒತ್ತಡವೂ ಇಲ್ಲದಿದ್ದರೆ ಏನನ್ನೂ ಬರೆಯದೇ ಆರಾಮಾಗಿ ತಿಂಗಳುಗಟ್ಟಲೆ ಕಳೆದುಬಿಡುತ್ತೇನೆ. ಈ ಲೇಖನಗಳ ಬರವಣಿಗೆ ಅಭ್ಯಾಸವಾಗಿ ಕವನ ಬರೆಯುವುದೇ ನಿಂತು ಹೋಗಿತ್ತು. ಮತ್ತೆ ಈಗ ಶುರು ಮಾಡಿದ್ದೇನೆ. ಈ ಲೇಖನ ಬರೆಯುತ್ತಿರುವ ಹೊತ್ತು ನಾನೇನೂ ಬರೆಯುತ್ತಿಲ್ಲವೆಂಬ ತಪ್ಪಿತಸ್ಥ ಭಾವನೆ ಶುರುವಾಗಿ ಮತ್ತೀಗ…
ಆರಂಭ ಜಗವ ತೋಯಿಸಿ ಸುರಿದು ಉಕ್ಕುತ್ತಿದ್ದ ಬೆಳಕ ಕಡಲಿನಿಂದ ಒಂದೇ ಒಂದು ಮುಷ್ಠಿ ಬಾಚಿ ಸುರಂಗದೊಳಗೆ ಹೋದೆ ಎರಡೇ ಹೆಜ್ಜೆಗೆ ಸೋರಿಹೋದ ಬೆಳಕು ಎದುರುಗೊಂಡ ಕಡುಗಪ್ಪು ಕಗ್ಗತ್ತಲು ಓಹ್! ಊಹಿಸಿಯೂ ಇರಲಿಲ್ಲ ಮುಂದಡಿ ಇಡಲಾರೆ ಹಿಂದೆ ಹೋಗಲಾರೆ ಢವಗುಟ್ಟುವ ಎದೆಯ ಸಂಭಾಳಿಸುತ್ತ ಇದೊಂದೇ ಇನ್ನೊಂದೇ ಮತ್ತೊಂದೇ ಹೆಜ್ಜೆ ಎಂದುಕೊಳ್ಳುತ್ತ ತಡವರಿಸುತ್ತಲೇ ಮುನ್ನಡೆದೆ ಅದೋ ಅಲ್ಲಿ ಸುರಂಗದ ಕೊನೆಯಲ್ಲಿ ದಂಡಿಯಾಗಿ ಚೆಲ್ಲಿದ್ದವು ಬಿಸಿಲಕೋಲುಗಳು ಹತ್ತಿರ ಹೋಗಿ ಆಕ್ಷೇಪಿಸಿದೆ ನೀನು ತಣ್ಣನೆಯ ಕತ್ತಲೆಯ ಸುರಂಗ ದಾಟಿಬರಲಿ ಎಂದೇ ಕಾಯುತ್ತಿದ್ದೆ ಎಂಬಂತೆ ಹೊಳೆದವು ಬೆವರೊರೆಸಿಕೊಂಡು ಮುಗುಳ್ನಕ್ಕೆ ಮತ್ತೆ ಮುಷ್ಠಿ ತುಂಬ ಒಂದಿಷ್ಟು ಕಣ್ಣ ತುಂಬ ಹಾಗೇ ಕೊಂಚ ಎದೆಯ ತುಂಬ ಬೆಳಕ ತುಂಬಿಕೊಂಡು ಮುನ್ನಡೆದೆ ಇನ್ನು ಎಷ್ಟು ದೂರ ಬೇಕಾದರೂ ನಡೆಯಬಲ್ಲೆ ಯಾವ ಸುರಂಗ ಬೇಕಾದರೂ ದಾಟಬಲ್ಲೆ
ಒಟ್ಟಿನಲ್ಲಿ ಹೇಳಬೇಕೆಂದರೆ ಮದುವೆ ತಾಯ್ತನಗಳಿಂದ ನನ್ನ ವೈಯಕ್ತಿಕ ಬದುಕಾಗಲೀ, ಬರವಣಿಗೆಯಾಗಲೀ ಯಾವ ತೊಂದರೆಗೂ ಒಳಗಾಗಿಲ್ಲ. ಅದಕ್ಕೆ ನನ್ನ ತಂದೆತಾಯಿಗಳು, ಪತಿ, ಅತ್ತೆ, ಮಾವ ಎಲ್ಲರೂ ಕಾರಣ. ಆದರೆ ನಾವು ಸುಖವಾಗಿರಬೇಕೆಂದು ನಾವು ನಿರ್ಧರಿಸದ ಹೊರತು ಸುಖ ಮರೀಚಿಕೆಯೇ. ಬೇರೆಯವರನ್ನು ಖುಷಿಪಡಿಸುತ್ತ ಬದುಕು ಕಳೆದುಬಿಡುವ ಮಹಿಳೆಯರು ಇತರರ ಜತೆಗೆ ತಾವೂ ಖುಷಿಯಾಗಿರಬೇಕೆಂದು ನಿರ್ಧರಿಸಿದಾಗಲೇ ಬೆಳಗು.
ಕೊನೆಯಲ್ಲಿ ಹೇಳಲೇಬೇಕಾದ ಮಾತೊಂದಿದೆ. ಎಲ್ಲ ಸವಲತ್ತುಗಳನ್ನು ಹೊಂದಿರುವ ಮಹಿಳೆಯಾಗಿ ಇವೆಲ್ಲವನ್ನು ಬರೆಯುವಾಗಲೂ ನನ್ನನ್ನು ಮಗ್ಗುಲಮುಳ್ಳಿನಂತೆ ಸದಾ ಹಿಂಸಿಸುವ ಹಲವಾರು ಸಂಗತಿಗಳಿವೆ. ಗಾರ್ಮೆಂಟ್ ಕಾರ್ಖಾನೆಯಲ್ಲಿ ಸ್ನೇಹಿತೆಯ ಬದಲು ತಾನು ಹಾಜರಾತಿಗೆ ಪಂಚ್ ಮಾಡಿದ್ದಕ್ಕೆ ಸಿಕ್ಕಿಹಾಕಿಕೊಳ್ಳುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ನಿರ್ಭಾಗ್ಯ ಹೆಣ್ಣು ನನ್ನ ಕಣ್ಮುಂದಿದ್ದಾಳೆ. ಕುಡುಕ ತಂದೆ ಪುಸ್ತಕಗಳನ್ನು ಬೀದಿಗೆ ಎಸೆದಿದ್ದನ್ನು ಹೇಳಿ ಕಣ್ಣೀರಿಟ್ಟ ನನ್ನ ವಿದ್ಯಾರ್ಥಿನಿ ನೆನಪಾಗುತ್ತಾಳೆ. ಶೌಚಾಲಯಕ್ಕೆ ಹೋದಾಗ ಅತ್ಯಾಚಾರಕ್ಕೀಡಾಗಿ ಕೊಲೆಯಾದ ನಂತರವೂ ನ್ಯಾಯ ಮರೀಚಿಕೆಯಾಗಿರುವ ಹೆಣ್ಣು ಮಕ್ಕಳು, ಜೀವಂತ ದಹಿಸಲ್ಪಟ್ಟರೂ ಬದುಕುವ ಆಸೆಯಿಂದ ಸ್ಟವ್ ಸ್ಫೋಟವಾಗಿ ಸುಟ್ಟುಕೊಂಡೆ ಎಂದು ಪೊಲೀಸರೆದುರು ಹೇಳಿಕೆ ನೀಡುವ ನವವಿವಾಹಿತೆಯರು ನನ್ನನ್ನು ಸದಾ ಕಾಡುತ್ತಾರೆ. ತಾನು ಸತ್ತು ಗಂಡನಿಗೆ ಸ್ವಾತಂತ್ರ್ಯ ನೀಡಲು ಮೊನ್ನೆ ತಾನೇ ಸಬರಮತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಯೆಷಾಳಂತಹ ಅತಿಭಾವುಕ ಹೆಣ್ಣುಗಳು ನನ್ನಲ್ಲಿ ಸಂಕಟ ಹುಟ್ಟಿಸುತ್ತಾರೆ. ಇದೀಗ ಹದಿನೆಂಟೂ ತುಂಬದ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ವಿವಾಹಿತ ಸರ್ಕಾರಿ ನೌಕರನೊಬ್ಬನಿಗೆ ನೀನು ಬಾಲಕಿಯನ್ನು ಹದಿನೆಂಟು ತುಂಬಿದ ಮೇಲೆ ಮದುವೆಯಾಗುತ್ತೀ ಎಂದರೆ ಬಿಟ್ಟುಬಿಡುತ್ತೇವೆ ನೋಡು ಎಂದು ನಮ್ಮ ಘನ ಸರ್ವೋಚ್ಛ ನ್ಯಾಯಾಲಯವೇ ಹೇಳಿದ್ದನ್ನು ಕೇಳಿ ಮಾತಿಲ್ಲದೇ ಕೂತಿದ್ದೇನೆ.
ಇದನ್ನೂ ಓದಿ: Humanity; ನಾನೆಂಬ ಪರಿಮಳದ ಹಾದಿಯಲಿ: ಪಾತರದವರಂಗ ಹಾಡ್ಕೊಂತ ಕುಣಕೊಂತ ಹೋಗಬೇಕಂತಿಯೇನು?
Published On - 6:21 pm, Thu, 4 March 21