Humanity; ನಾನೆಂಬ ಪರಿಮಳದ ಹಾದಿಯಲಿ: ಪಾತರದವರಂಗ ಹಾಡ್ಕೊಂತ ಕುಣಕೊಂತ ಹೋಗಬೇಕಂತಿಯೇನು?
‘ಕಾಲದ ಹರಿವಿನೊಂದಿಗೆ ಹಲವು ಭಾಷೆ, ಸಂಸ್ಕೃತಿಗೆ ತೆರೆದುಕೊಳ್ಳುತ್ತ ಅಪರಿಚಿತರನ್ನು ಆಪ್ತರಾಗಿಸುತ್ತ ನಡೆದ ಬದುಕು ತನ್ನದೇ ವಿಧದಲ್ಲಿ ರೂಪಾಂತರಗೊಳ್ಳುತ್ತಿತ್ತು, ನನ್ನನ್ನೂ ರೂಪಾಂತರಗೊಳಿಸುತ್ತಿತ್ತು. ಚರ್ಚಿನಲ್ಲಿ ಮದರ್ ಮೇರಿಯ ಮುಂದೆ ಯಾ ದೇವಿ ಸರ್ವಭೂತೇಷುವನ್ನೇ ಹೇಳಿಕೊಳ್ಳುತ್ತಿದ್ದೆ. ಆಂಗ್ಲೋ ಇಂಡಿಯನ್ ಪಾದ್ರಿಯನ್ನು ಮನೆಗೆ ಕರೆದು ಮಗುವಿಗೆ ಆಶೀರ್ವದಿಸೆಂದು ಪ್ರಾರ್ಥಿಸಿದ್ದೆ. ನನಗೆ ಯಾವತ್ತೂ ಈ ಜಾತಿ ಧರ್ಮ ರೀತಿ ರಿವಾಜುಗಳು ಮುಖ್ಯವೆನ್ನಿಸಲೇ ಇಲ್ಲ; ನಾನೊಬ್ಬ ಜಾತ್ಯಾತೀತಳು!‘ ರೇಣುಕಾ ನಿಡಗುಂದಿ
ಒಳಗಿರುವ ಜೀವಚೈತನ್ಯಕ್ಕೆ ಲಿಂಗಬೇಧವುಂಟೆ?; ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿ ಇದೀಗ ನಿಮ್ಮೆಲ್ಲರ ಆಪ್ತ ಒಳಗೊಳ್ಳುವಿಕೆಯಿಂದಾಗಿ ರೂಪಾಂತರದ ಹಂತಕ್ಕೆ ಬಂದು ನಿಂತಿದೆ. ನೂರಾರು ವರುಷಗಳಿಂದ ಸುತ್ತಿಕೊಂಡಿರುವ ಎಡರು ತೊಡರುಗಳನ್ನೆಲ್ಲ ಕಿತ್ತೊಗೆದರೇ ನನ್ನೊಳಗಿನ ನಾನು ಪೂರ್ತಿಯಾಗಿ ಅರಳುವುದು, ಹೆಜ್ಜೆ ಕಿತ್ತಿಟ್ಟರೆ ಮಾತ್ರ ಸಹಜ ಗತಿಯಲ್ಲಿ ಚಲಿಸಲು ಸಾಧ್ಯವಾಗುವುದು ಎನ್ನುತ್ತಿದ್ದಾರೆ ನಮ್ಮ ನಡುವಿನ ದಿಟ್ಟ ಮಹಿಳೆಯರು. ತಮ್ಮ ಧೀಶಕ್ತಿಯಿಂದ ಸಮಾಜಕ್ಕೆ ತಕ್ಕ ಉತ್ತರಗಳನ್ನು ಕೊಡುತ್ತ ಬಂದಿರುವ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳುತ್ತ ಸಾಗುತ್ತಿರುವ ಅವರವರ ಪರಿಯನ್ನು ನಿಮ್ಮ ಮುಂದೆ ಇಡುತ್ತಿದ್ದಾರೆ. ಈ ಸರಣಿಯಲ್ಲಿ ನೀವೂ ಒಳಗೊಳ್ಳಬೇಕೇ? ದಯವಿಟ್ಟು ಬರೆಯಿರಿ tv9kannadadigital@gmail.com ಪರಿಕಲ್ಪನೆ: ಶ್ರೀದೇವಿ ಕಳಸದ
ದೆಹಲಿಯಲ್ಲಿ ವಾಸಿಸುತ್ತಿರುವ ಲೇಖಕಿ, ಕವಿ ರೇಣುಕಾ ನಿಡಗುಂದಿ ಅವರು ತಮ್ಮ ಬದುಕಿನ ಪುಟಗಳ ಕಿವಿಯತುದಿಯಷ್ಟನ್ನೇ ಇಲ್ಲಿ ನಾಜೂಕಾಗಿ ಬಿಡಿಸಿಟ್ಟಿದ್ದಾರೆ.
ಸಂಜೆ ಕಡಲಬದಿಯಿಂದ ಒಣ ಉಪ್ಪುಗಾಳಿ ಬೀಸತೊಡಗಿದಾಗ ಮನೆಯೆಂಬ ಪುಟ್ಟ ಒಂಟಿಕೋಣೆಯಿಂದ ಹೊರಬೀಳುತ್ತಿದ್ದೆ ಮತ್ತು ನನ್ನ ಇಡೀ ದಿನದ ಕಾಯುವಿಕೆ, ಸಾರ್ಥಕತೆ ಈ ಒಂದು ಸಂಜೆಗಾಗಿಯೇ ಇದ್ದಂತೆ ಕ್ಷಣಗಳನ್ನು ಕಳೆಯುತ್ತಿದ್ದೆ. ಅಂಥ ಪ್ರತಿ ಸಂಜೆ ಹಿಂದಿನ ಬ್ಯಾಚ್ ಮುಗಿಯುವುದನ್ನೇ ಕಾಯುತ್ತ ನನ್ನದಲ್ಲದ ಊರಿನ ಅಪರಿಚಿತ ಬಾಲ್ಕನಿಯಲ್ಲಿ ನಿಂತಿರುತ್ತಿದ್ದೆ.
ಗೋವೆಯ ವಾಸ್ಕೋ-ಡಿ-ಗಾಮ ನಗರದ ಆಯಕಟ್ಟಿನ ಮಾರುಕಟ್ಟೆಯ ಮೊದಲಂತಸ್ತಿನಲ್ಲಿದ್ದ ‘ಫೆರೋ’ ಇನ್ಸ್ಟಿಟ್ಯೂಟಿನ ಬಾಲ್ಕನಿಯಲ್ಲಿ ಶತಮಾನಗಳಿಂದಲೂ ಹೀಗೇ ಕಲ್ಲಿನಂತೆ ನಿಂತುಬಿಟ್ಟಿದ್ದೇನೆ ಎನಿಸುತ್ತಿತ್ತು. ಅಪರಿಚಿತ ಊರು, ಅಪರಿಚಿತ ಜನರು, ಊರಿನ ಅಪರಿಚಿತ ಗಂಧದಲ್ಲಿ ನನ್ನ ದೇಹ ಮನಸ್ಸುಗಳನ್ನು ಹೊಂದಿಸಿಕೊಳ್ಳುತ್ತ ಹೊಸ ಗಾಳಿಯನ್ನು ಪುಪ್ಪುಸದಲ್ಲಿ ತುಂಬಿಕೊಳ್ಳುತ್ತಿದ್ದೆ. ನನಗೆ ಸಂಜೆಯ ನಾಲ್ಕರಿಂದ ಐದರ ಬ್ಯಾಚಿನ ಟೈಪಿಂಗ್ ಕ್ಲಾಸಿರುತ್ತಿತ್ತು. ಕೊಂಕಣಿ, ಕ್ರಿಶ್ಚಿಯನ್ ಹುಡುಗಿಯರೆಲ್ಲ ಅರ್ಥವಾಗದ ಕಿಣಿಕಿಣಿ ಭಾಷೆಯಲ್ಲಿ ಜೋರಾಗಿ ಮಾತಾಡುತ್ತ, ಛೇಡಿಸಿಕೊಳ್ಳುತ್ತ, ತುಂಟತನದ ನಗು ಉಕ್ಕಿಸುತ್ತ ತಮ್ಮ ಹರೆಯದ ಎಲ್ಲ ಬಿನ್ನಾಣಗಳನ್ನು ಸಂಜೆಯ ನಸುಕಿತ್ತಳೆ ಛಾಯೆಯ ಹಳದೀ ಬೆಳಕಲ್ಲಿ ಚೆಲ್ಲಾಡುತ್ತ, ಕಡಲ ಉಪ್ಪುಗಾಳಿಯಲ್ಲಿ ತೂರುತ್ತ ತುಂಡುಲಂಗದ ನೆರಿಗೆಗಳನ್ನು ಚಿಮ್ಮಿಸುತ್ತ ಲವಲವಿಕೆಯಲ್ಲಿ ಟೈಪ್ರೈಟರನ್ನು ಕುಟ್ಟುತ್ತಿದ್ದರೆ ಭಾಷೆ ಬಾರದ, ನರಪಿಳ್ಳೆಯೂ ಗೊತ್ತಿರದ ನಾನು ಹಳ್ಳಿ ಗುಗ್ಗುವಿನಂತೆ, ಅನಾಥೆಯಂತೆ ಟೈಪ್‍ರೈಟರಿನ ಅಭ್ಯಾಸ ಮುಗಿಸಿ ಟೈಪಿಸಿದ ಹಾಳೆಯನ್ನು ವಿಧೇಯತೆಯಿಂದ ಪರಿವೀಕ್ಷಕನಿಗೊಮ್ಮೆ ತೋರಿಸಿ ಸುರುಳಿಸುತ್ತಿ ಬೆವತ ಅಂಗೈಯಲ್ಲಿಟ್ಟುಕೊಂಡು ಹೊರಗೋಡುತ್ತಿದ್ದೆ.
ಬೆಳಿಗ್ಗೆ ಗಂಡ ಆಫೀಸಿಗೆ ಹೋದರೆ ನನಗೆ ಇಡೀ ದಿನ ಮನೆಗೆಲಸ ಮತ್ತು ಖಾಲಿ ಹೊತ್ತುಗಳೆಯುವುದರ ಹೊರತು ಯಾವ ಕೆಲಸವೂ ಇರುತ್ತಿದ್ದಿಲ್ಲ. ಓದಲು ಪುಸ್ತಕಗಳೂ ಇದ್ದಿಲ್ಲ. ಅದು ಓದಿಸುತ್ತೇನೆ ಇದೂ ಓದಿಸುತ್ತೇನೆ ಎಂದು ನಂಬಿಸಿದ್ದ ದೊಡ್ದವರೆಲ್ಲ ತಮ್ಮ ಜವಾಬ್ದಾರಿ ಕಳೆಯಿತೆಂದು ಆ ವಿಷಯವನ್ನು ಮರೆತು ನಿಶ್ಚಿಂತರಾಗಿದ್ದರು. ಹಿಂದಿ ಸಿನೆಮಾಗಳಲ್ಲಿನ ತಾಯಂದಿರು ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತ ಮಗಳನ್ನು ಗಟ್ಟಿಯಾಗಿ ಆಲಂಗಿಸಿ ‘ಕೈಸಿ ಹೋ ಬೇಟಿ? ಹೇಗಿದ್ದೀ ಮಗಳೇ, ಖುಷಿಯಾಗಿದ್ದಿಯಾ?’ ಎನ್ನುವಂತೆ ನನ್ನವ್ವ ನನ್ನನ್ನು ಒಮ್ಮೆಯಾದರೂ ಕೇಳಲಿ ಅಂತ ಆಯುಷ್ಯವಿಡೀ ಬಯಸಿದ್ದೆ. ಅವಳ ಮಡಿಲಲ್ಲಿ ಮಲಗಿ ಒಂದಾಯುಷ್ಯದ ಅಳಲನ್ನೆಲ್ಲ ತೋಡಿಕೊಂಡು ಅತ್ತುಬಿಡಬೇಕು ಅಂತ ಹಂಬಲಿಸುತ್ತಿದ್ದೆ. ಇದುವರೆಗೂ ಆ ತಥಾಕಥಿತ ದೃಶ್ಯ ಸಿನೆಮಾಕ್ಕೆ ಸೀಮಿತಗೊಂಡಿದೆ.
ನಾವು ಸಾಲಾಗಿ ಮೂರು ಹೆಣ್ಣುಮಕ್ಕಳು ಹುಟ್ಟಿ ಕೊನೆಗೊಬ್ಬ ಸುಪುತ್ರ ಹುಟ್ಟಿದಾಗ ಎಲ್ಲಾ ತಂದೆ ತಾಯಿಯರು ಅನ್ನುವಂತೆ ನನ್ನ ಅವ್ವ ಅಪ್ಪನೂ ‘ನೀನು ಗಂಡಾಗಿದ್ದರೆ’ ನಮಗ್ಯಾವ ಚಿಂತಿನೂ ಇರ್ತಿದ್ದಿಲ್ಲ ಅಂದಿದ್ದರು. ಖರೇನ ನಾನೂ ಗಂಡು ಮಗನಂತೆಯೇ ದುಡಿದು ನನ್ನ ಅವ್ವ ಅಪ್ಪ, ತಮ್ಮ ತಂಗಿಯರನ್ನೆಲ್ಲ ಸಾಕಬೇಕು ಅಂದುಕೊಂಡಿದ್ದೆ. ಅವರು ಹೇಳುವ ಎಲ್ಲಾ ಭಾವುಕ ಮಾತುಗಳು ಖರೇ ಅಂದುಕೊಳ್ಳುವ ಮುಗ್ಧ ಪ್ರಾಯ. ಹಿರಿಯರ ಇಂಥ ಡಾಂಭಿಕ ಮಾತುಗಳು ವಾಸ್ತವಕ್ಕಿಂತ ಮೈಲು ದೂರವಿರುತ್ತವೆ. ಮಗಳು ಗಂಡುಮಗನಂತೆ ಸಶಕ್ತಳಾಗಬೇಕೆಂದರೆ ಆಕೆಗೆ ಶಿಕ್ಷಣವೇ ಮುಖ್ಯ ಎಂಬ ತಿಳಿವಳಿಕೆಯಿರದ ಹುಂಬರು. ಹೆಚ್ಚು ಓದದ ಲೋಕದ ವ್ಯವಹಾರ ಚಾಲಾಕಿತನ ಇರದ ಸಭ್ಯರು ನನ್ನ ತಂದೆತಾಯಿ. ಗಂಡುಮಗನಂತೆ ಓದಿಸುವ ಬದಲು ಮದುವೆಯ ವಯಸ್ಸಿಗೆ ಬಂದ ಮನೆಯಳಿಯನಿಗೆ ಹದಿನಾರರ ಪೋರಿಯನ್ನು ಕೊಟ್ಟು ಮದುವೆಮಾಡಿ ತಮ್ಮ ಭಾರವನ್ನು ಕಡಿಮೆಮಾಡಿಕೊಂಡಿದ್ದರು. ಭಾಷೆ ಬಾರದ ಊರಲ್ಲಿ ನನಗೆ ಕಾಲೇಜಿಗೆ ಕಳಿಸುವವರ್ಯಾರಿದ್ದರು? ನನ್ನೆಲ್ಲಾ ಗೆಳತಿಯರು ದೊಡ್ದದೊಡ್ದ ಕಾಲೇಜುಗಳಲ್ಲಿ ಓದುತ್ತಿದ್ದಾಗ ನಾನಿಲ್ಲಿ ಹೆಂಡತಿಯೆಂಬ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದವರಿಗೆಲ್ಲ ಚಹ ಅವಲಕ್ಕಿ ಮಾಡುತ್ತಾ, ಅಡುಗೆಮಾಡಿ ಬಡಿಸುತ್ತ ಕೂತಿದ್ದೆ.
ಐದಾರು ವರ್ಷದ ಮಗಳಿಗೆ ಹಾಡು ಹಾಡು, ಡ್ಯಾನ್ಸ ಮಾಡು ಅಂತ ಹಾಡಿಸಿ, ಕುಣಿಸಿ ಖುಶಿಪಡುತ್ತಿದ್ದ ಪೋಷಕರು ನಾನೊಮ್ಮೆ ಸಂಗೀತ ಕಲೀಬೇಕು ಎಂದು ಘೋಷಿಸಿದಾಗ ಕಿವಿಗೆ ಬಿದ್ದೇ ಇಲ್ಲವೆನ್ನುವಂತೆ ಸುಮ್ಮನಿದ್ದರು. ಆಗ ಹಿಂದಿ ಕ್ಲಾಸಿಗೆ ಹೋಗುತ್ತಿದ್ದೆ. ತಿಮ್ಮನಗೌಡರ್ ಟೀಚರ್ ತೆಗೆದುಕೊಳ್ತಿದ್ದ ಡ್ರಾಯಿಂಗ್ ಕ್ಲಾಸಿಗೂ ಹೋಗುತ್ತಿದ್ದೆ. ಈಗ ನನ್ನ ಓರಗೆಯವರು ಸಂಗೀತ ಕಲಿಯುತ್ತಿದ್ದಾಗ ನಾನೂ ಓಡಿಹೋಗಿ ರವಿವಾರ ಪೇಟೆಯಲ್ಲಿದ್ದ ಸಂಗೀತ ಶಾಲೆಯಲ್ಲಿ ವಿಚಾರಿಸಿಕೊಂಡು ಬಂದು ನಾನೂ ಕ್ಲಾಸಿಗೆ ಹೋಗ್ತೀನಿ ಅಂದರೆ – ‘ಹಾಡಾಕ ಬರ್ತೇತಲ್ಲಾ ಸಾಕು, ಕಲಿತೇನು ಮಾಡ್ತೀ? ಅಂತ ಒಬ್ಬರೆಂದರೆ, ಹೀಂಗ ಪಾತರದವರಂಗ ಹಾಡ್ಕೊಂತ ಕುಣಕೊಂತ ಹೋಗಬೇಕಂತಿಯೇನು?’ ಎಂದು ಬಾಯಿಮುಚ್ಚಿಸಿದ್ದರು. ಇಂಥವೇ ಮಾತುಗಳನ್ನು ಕುಟುಂಬದಲ್ಲಿ ಕೇಳಿದ್ದೆ. ಹಾಡುವವರೆಂದರೆ ನಾಟಕದಲ್ಲಿ ಪಾತ್ರ ಮಾಡುವವರೆಂದರೆ ಕೆಟ್ಟವರು ಎನ್ನುವ ಅರ್ಥವಿತ್ತು. ಅಜ್ಜನ ಮನೆಯಲ್ಲಿ ಮುರಿದ ಹಾರ್ಮೋನಿಯಂ ಇತ್ತು. ಕಾಕಾನ ಮನೆಯಲ್ಲಿ ಏಕತಾರಿ ಇತ್ತು. ಪಂಢರಾಪುರದ ವಿಠೋಬನ ಭಕ್ತರು, ವಾರಕರಿ ಪಂಥದ ಅನುಯಾಯಿಯಾಗಿದ್ದು ಅವರ ಮನೆಯಲ್ಲಿ ಭಜನೆ ಆರತಿ, ದಂಡಿಗೆ ಹೋಗುವುದು ಸಾಮಾನ್ಯವಾಗಿತ್ತು. ಕುಣ್ಕೊಂತ ಹೋಗೂ ಹೆಂಗಸಾಗುತ್ತೇನೆಂಬ ಕಾರಣಕ್ಕೆ ಸಂಗೀತದ ಕ್ಲಾಸಿಗೆ ಕಳಿಸಲಿಲ್ಲ.
ಗೋವೆಯ ನಿರರ್ಥಕವಾದ ಏಕಾಂಗಿತನದಲ್ಲಿ ಇದೆಲ್ಲ ನೆನಪಾದಾಗ ಹೊಟ್ಟೆಯಲ್ಲಿ ಕೆಂಡಹಾಕಿದಷ್ಟು ಸಿಟ್ಟುಬರುತ್ತಿತ್ತು. ಇಂಥಾ ನಿರಾಶೆಯ ಕತ್ತಲಿನಲ್ಲಿ ನನಗೆ ಕಾಣುತ್ತಿದ್ದುದು ಜಾನ್ ಡಿಕ್ರೂಜನ ಮನೆಯ ಬಾವಿ. ಬಾವಿಗೆ ಬಿದ್ದು ಸಾಯುವಂಥ ಹೇಡಿ ನಾನಾಗಿರಲಿಲ್ಲ. ಎಲ್ಲಾದರೂ ಓಡಿಹೋಗಬೇಕೆಂದರೆ ಎಲ್ಲಿಹೋಗುವುದು? ನನಗೆಂಥಾ ಬಿಡುಗಡೆ ಬೇಕೆಂದು ಗೊತ್ತಿದ್ದಿಲ್ಲ. ಅರ್ಥವಾಗುತ್ತಲೂ ಇದ್ದಿಲ್ಲ. ಹಾಗೆ ಹೋಗಬೇಕೆಂದರೆ ಒಬ್ಬ ರಾಜಕುಮಾರನಂಥವನು ತನ್ನ ಕುದುರೆಯ ಮೇಲೆ ಕೂರಿಸಿಕೊಂಡು ಹಾರಿಹೋಗುವನು ಸಿಗಬೇಕು. ಒಂದಿನ ಅಂಥ ಒಂದು ಕನಸೂ ಬಿತ್ತು ನನಗೆ. ತಕ್ಷಣ ಭಯವಾಯ್ತು. ನಾನು ಹಾಗೇನಾದರೂ ತಪ್ಪು ಹೆಜ್ಜೆ ಇಟ್ಟರೆ ತನ್ನ ತಂಗಿಯರನ್ನು ಮದುವೆಯಾಗುವವರಾರು? ನನ್ನ ತಂದೆ ತಾಯಿ ಸತ್ತೇ ಹೋಗುತ್ತಾರೆ. ಛೆ… ಇದೆಲ್ಲವನ್ನೂ ನನಗೆ ಯಾರೂ ಹೇಳಿಕೊಟ್ಟಿದ್ದಿಲ್ಲ ಆ ವಯಸ್ಸಿಗೆ. ತಾನೇತಾನಾಗಿ ಬರುತ್ತಿದ್ದ ಭಯಾನಕ ಖಯಾಲಿ. ಅನಿಶ್ಚಿಯತೆ, ಅಸಮಾಧಾನ, ಹತಾಶೆ… ಕಡಲಿನಂಥ ಸಂಕಟ!
ಆಗಲೇ ಕತ್ತಲ ಸುರಂಗದಾಚೆ ತೆರೆದುಕೊಂಡ ಬೆಳಕಿಂಡಿ ಎಂದರೆ ಈ ‘ಫೆರೋ’ ಇನ್ಸ್ಟಿಟ್ಯೂಟ್ ಮಾತ್ರ. ಯಾಕಂದರೆ ಅಂದು ನನ್ನೆದುರಿಗೆ ಯಾವ ಸಾಧ್ಯತೆಗಳೂ ಇದ್ದಿಲ್ಲ. ಯಾವ ಕಿಟಕಿಗಳೂ ಇದ್ದಿಲ್ಲ, ಯಾವ ಧೇಯೋದ್ದೇಶಗಳೂ ಇದ್ದಿಲ್ಲ. ಕನಸುಗಳಿಲ್ಲದ ಬಿಳಿ ಹಾಳೆ, ಕೋರಾ ಕಾಗಜ್ದಂತೆ ಬದುಕು ನಿರರ್ಥಕವಾಗಿತ್ತು. ನನ್ನ ಮತ್ತು ನನ್ನ ಭವಿಷ್ಯದ ಬಗ್ಗೆ ಯೋಚಿಸುವುದಾಗಲಿ, ಅದನ್ನು ನಿರ್ಧರಿಸುವುದಾಗಲಿ ನನ್ನ ಕೈಯಲ್ಲಿಲ್ಲವೆಂಬಂತೆ ನಾನಿದ್ದುಬಿಟ್ಟಿದ್ದೆ. ಬದುಕೆಂದರೆ ಹೀಗೇ ಹೇಗೋ ಸವೆದುಬಿಡುತ್ತದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮನಸ್ಸಿಗೆ ಗೋಚರಿಸದ, ಕೈಗೆಟುಕದ ಆ ಬದುಕನ್ನು ಮುಟ್ಟಲು, ಕೈಚಾಚಿ ಸೋಕಲು ಹಾತೊರೆಯುತ್ತಿದ್ದೆ. ಆಗೆಲ್ಲ ನನ್ನ ನೋವಿಗೆ, ಏಕಾಂಗಿತನಕ್ಕೆ, ದೈನಾಸಿತನಕ್ಕೆ ಜೊತೆಯಾಗಿದ್ದು ಕಡಲು. ಭಾರತದ ನಕಾಶೆಯಲ್ಲಿ ನೀಲಿ ಬಣ್ಣ ತುಂಬುತ್ತಿದ್ದ ಅರಬ್ಬೀ ಸಮುದ್ರ ನನ್ನೆದುರಿಗಿತ್ತು. ಕಡಲೆಂದರೆ ಅದೆಷ್ಟು ಅಶಾಂತ! ಅರೆಕ್ಷಣವೂ ಬಿಡದೇ ನಿರಂತರವಾಗಿ ಮೊರೆಯುವ, ಉರುಳುರುಳಿ ಬಿದ್ದು ಎದ್ದು ಬಿದ್ದು ಇಲ್ಲವಾಗಿ ಮತ್ತೆ ಉಕ್ಕಿ ಉರುಳುವ ನೊರೆನೊರೆಯಾದ ಅಲೆಗಳು. ಅವು ಸಾಯುವುದಿಲ್ಲ, ಹೆದ್ದೆರೆಗಳು ತೀರಕ್ಕೆ ಅಪ್ಪಳಿಸಿ ಸಾಯುವ ಮುನ್ನವೇ ಮತ್ತೊಂದಿಷ್ಟು ಕಿರಿಯಲೆಗಳು, ಮರಿಯಲೆ,ಕೂಸಲೆಗಳು, ದೂರದಲ್ಲಿ ಹುಟ್ಟಿ ಕಿನಾರೆಗೆ ಧಾವಿಸುತ್ತಿದ್ದವು ನಾಮುಂದೆ ತಾಮುಂದೆ ಎನ್ನುವಂತೆ. ಕಡಲ ನೀಲಿ, ಕಪ್ಪುನೀಲಿ, ಸೂರ್ಯೋದಯ, ಸೂರ್ಯಾಸ್ತಗಳ ಹೊಂಬಣ್ಣದ ಓಕುಳಿ ಯಾವ ಬಣ್ಣಗಳೂ ನನ್ನನ್ನು ಅರಳಿಸಲಿಲ್ಲ. ಅವು ಕವಿತೆಗಳಾದವು. ಕಡಲು ನನ್ನ ಸಂಗಾತಿಯಾಯ್ತು. ಕಡಲಿನ ಮೊರೆತವನ್ನೇ ಆಲಿಸುತ್ತ ಮಲಗಿರುತ್ತಿದ್ದೆ. ಕವಿತೆಗಳನ್ನು ಬಚ್ಚಿಡುತ್ತಿದ್ದೆ ಯಾರಿಗೂ ತೋರಿಸದ ರಹಸ್ಯವೆಂಬಂತೆ.
ಆಗಷ್ಟೇ ಅಪರಿಚಿತ ಊರು ಹಿಡಿಸತೊಡಗಿತ್ತಷ್ಟೇ ಮತ್ತೆ ಮನೆಯವರಿಗೆಲ್ಲ ವರುಷ ತುಂಬುವುದರೊಳಗೆ ನಾನೇಕೆ ಬಸಿರಾಗಲಿಲ್ಲವೆಂಬ ಚಿಂತೆ ಶುರುವಾಯ್ತು. ನನ್ನ ಅವ್ವನಿಗೆ ಎಲ್ಲದರಲ್ಲೂ ಗೆಲ್ಲಬೇಕೆನ್ನುವ ಆಸೆ. ನನಗೆ ಮಕ್ಕಳಾದರೆ ಆಕೆ ಗೆದ್ದಂತೆ! ಆಕೆಯ ತವರುಬಳ್ಳಿ ಹಬ್ಬುತ್ತದೆ. ಮಕ್ಕಳಾಗುವ ವಯಸ್ಸೇ ಮುಗಿದುಹೋದಂತೆ ನನ್ನವ್ವ ಫ್ಯಾಮಿಲಿ ಡಾಕ್ಟರ್ ತಾವರಗೇರಿ ದವಾಖಾನೆಗೆ ಎಡತಾಕಿಸಿದಳು. ನನ್ನ ಗಂಡನಿಗೆ ದೆಹಲಿಗೆ ವರ್ಗವಾಯ್ತು. ಅದೇ ಹೊತ್ತಿಗೆ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯಾಗಿತ್ತು. ಇತ್ತ ನಾನು ಯಾರದೋ ಮನೆಯಲ್ಲಿ ಟಿವಿ ನೋಡಲು ನನ್ನನು ಬಿಟ್ಟುಹೋಗಿದ್ದಕ್ಕೆ ನನ್ನ ತಮ್ಮನ ಜೊತೆ ಜಗಳಾಡುತ್ತಿದ್ದೆ. ನಂತರ ದಿಲ್ಲಿಯ ದಂಗೆ ಶಾಂತವಾಗಿ ನಾನು ಗೋವೆಯನ್ನು ಬಿಟ್ಟು ದಿಲ್ಲಿಗೆ ಕಾಲಿಟ್ಟಾಗ ಎಲಬು ಸೀಳುವ ಜನವರಿಯ ಕಡುಚಳಿ. ಒಂದೇ ಒಂದು ಸ್ವೆಟರಿನಲ್ಲಿ ಆರುನೂರ ಹದಿನೈದು ನಂಬರಿನ ಡಿಟಿಸಿ ಬಸ್ ಹತ್ತಿ ನಡುಗಿದ್ದು ನೆನೆದರೆ ಮೈಮೇಲೆ ಮುಳ್ಳೇಳುತ್ತವೆ.
ಗೋವೆಯ ಮೀನಿನಗಂಧ, ಸಮುದ್ರದ ಪಾಚಿಗಂಧ, ಉಪ್ಪುಗಾಳಿಯನ್ನು ಕುಡಿದವಳಿಗೆ ದಿಲ್ಲಿಯ ಮಂಜಿನ ತೆರೆಯ ಹೊಂಜು, ಗುಲಾಬಿ ಪರಿಮಳ, ಲುಟಿಯನ್ಸರು ಕಟ್ಟಿದ ಬ್ರಿಟಿಷ್ ವಾಸ್ತುವಿನ್ಯಾಸದ ಗಗನ ಚುಂಬಿ ಕಟ್ಟಡಗಳು, ಮೊಘಲ್ ಕಾಲದ ಕೆಂಪುಕಲ್ಲಿನ ಪರ್ಶಿಯನ್ ವಾಸ್ತುಶಿಲ್ಪದ ಗುಂಬಜುಗಳು, ಇಮಾರತ್ತುಗಳನ್ನು ಬೆರಗು ಹುಟ್ಟಿಸಿದವು. ಧಾರವಾಡದ ಕೆ.ಎನ್.ಕೆ ಶಾಲೆಯ ಕಾರ್ಕಳ ಟೀಚರ್ ಓದಿಸುತ್ತಿದ್ದ ಚರಿತ್ರೆಯ ಪುಟಗಳಲ್ಲಿ ಕಲಸಿಹೋದ ಅಸಂಖ್ಯ ಶಾಲಿವಾಹನ ಶಕೆ, ಇಸ್ವಿಗಳು, ಗುಪ್ತರು, ಮೊಘಲರು, ಪಾಣಿಪತ್ ಯುದ್ಧ, ಸಿಪಾಯಿ ದಂಗೆ ಇತ್ಯಾದಿಗಳು ನನ್ನ ಕಣ್ಣ ಮುಂದೆ ಹಾದುಹೋದಂತೆ ರೋಮಾಂಚನಗೊಂಡಿದ್ದೆ. ದೇಶದ ರಾಜಧಾನಿ ದಿಲ್ಲಿ.
ಅಂದಿನ 84ನೇ ಇಸ್ವಿಯ ಕರಾಳ ದಿನಗಳು ಕಳೆದು ಆಗಷ್ಟೇ ದಿಲ್ಲಿಯ ಬದುಕು ಸಾಮಾನ್ಯವಾಗುತ್ತಿದ್ದ ಕಾಲ. ಬಹುಭಾಷಿಕ, ಬಹುಸಂಸ್ಕೃತಿಯ, ದೇಶದ ಉದ್ದಗಲದ ಜನರು ಹೊಟ್ಟೆಪಾಡಿಗಾಗಿ ಬಂದು ನೆಲೆಸಿದ ಊರು ದಿಲ್ಲಿ. ಜಾಟ್ ಗುಜ್ಜರರಿರುವ ಮುನಿರ್ಕಾ ಯಥಾವತ್ ಒಂದು ಹಳ್ಳಿಯೇ ಆಗಿತ್ತು. ಎಮ್ಮೆ ಕಟ್ಟಿದ್ದ ಮನೆ ಮಾಲಕತಿಯೇ ನಮಗೆಲ್ಲ ಶುದ್ಧ ಎಮ್ಮೆ ಹಾಲು ಕರೆದ ತಕ್ಷಣ ಕೊಡುತ್ತಿದ್ದಳು. ಎಮ್ಮೆಗಳು, ಸಗಣಿಯಿಂದ ತಟ್ಟಿದ ಕುಳ್ಳು, ಕುಳ್ಳಿನ ಬಣವಿ, ಪಕ್ಕಾ ಹಳ್ಳಿಯಲ್ಲಿದ್ದಂತೆಯೇ ಇತ್ತು. ಚಾಳಿನ ಮೂಲೆಗೆ ಒಂದು ಬಾವಿಯೂ ಇತ್ತು. ಇಲ್ಲಿಂದ ಹೊರಬಂದರೆ ಔಟರ್ ರಿಂಗ್ ರೋಡ್. ಹಿಂಬದಿ ಜೆಎನ್ಯು, ವಸಂತವಿಹಾರ್ ಪಾಶ್ ಕಾಲೋನಿ. ವಸಂತ್ ವಿಹಾರ್ ಶಾಪಿಂಗ್ ಕಾಂಪ್ಲೆಕ್ಸ್. ನಾವಿರುವಲ್ಲಿ ಬಿಹಾರಿಗಳು, ಯೂಪಿಯ ಗುಪ್ತಾ, ಕಲತ್ತೆಯ ಬಂಗಾಲಿಗಳು, ಮದ್ರಾಸಿನ ಎರಡು ಕುಟುಂಬ, ಕೇರಳದ ಕುಟುಂಬ, ಕನ್ನಡದ ನಾವು ಹೀಗೆ ಮಿನಿ ಭಾರತವೇ ಅಲ್ಲಿತ್ತು. ನನಗೆ ಖುಶಿಯಾಗಿದ್ದು ಅಲ್ಲೊಬ್ಬ ಮಂಗಳೂರಿನ ಕ್ರಿಶ್ಚಿಯನ್ ಆಂಟಿ ಮತ್ತು ಗೋವೆಯ ಫಿಲೋಮಿನಾ ಸಿಕ್ಕಿದ್ದು. ಅವರಿಬ್ಬರೇ ನನಗೆ ಹತ್ತಿರದವರೆನಿಸಿದ್ದರು. ನೇಪಾಲಿಯೋ, ಚೀನಿಯನ್ನೋ ಮದುವೆಯಾಗಿದ್ದ ಪಾಪ ಫಿಲೋಮಿನಾಳೂ ನನ್ನ ಬಳಿ ಪತ್ರ ಬರೆಸಲು ಬರುತ್ತಿದ್ದಳು. ಮುನಿರ್ಕಾದಲ್ಲಿರುವಾಗಲೇ ನನ್ನ ಮೊದಲ ಮಗ ಹುಟ್ಟಿದ್ದು.
ಎಲ್ಲಿಂದ ಎಲ್ಲಿಗೆ ಬಂದೆ? ಬದುಕು ಎಲ್ಲಿ ತಂದು ಬಿಟ್ಟಿತು! ಹೇಗೆ ಕಾಲದ ಹರಿವಿನೊಂದಿಗೆ ಹಲವು ಭಾಷೆ, ಹಲವು ಸಂಸ್ಕೃತಿಗೆ ತೆರೆದುಕೊಳ್ಳುತ್ತ ಅಪರಿಚಿತರನ್ನು ಆಪ್ತರಾಗಿಸುತ್ತ ನಡೆದ ಬದುಕು ತನ್ನದೇ ವಿಧದಲ್ಲಿ ರೂಪಾಂತರಗೊಳ್ಳುತ್ತಿತ್ತು. ನನಗೂ ಬದುಕಿನ ಪಾಠ ಕಲಿಸುತ್ತಿತ್ತು. ನನ್ನನ್ನೂ ರೂಪಾಂತರಗೊಳಿಸುತ್ತಿತ್ತು. ಆ ಬಿಹಾರಿ ಹೆಂಗಸರು ಅದೆಷ್ಟು ಖುಶಿಯಲ್ಲಿರುತ್ತಿದ್ದರು. ಗಂಡಸರು ಕೆಲಸಕ್ಕೆ ಹೋದರೆ ಇವರು ತಮ್ಮ ಮನೆಗೆಲಸ ಮುಗಿಸಿ ಹರಟೆ, ಹಾಡು, ಚೇಷ್ಟೆಗಳಲ್ಲಿ ಮುಳುಗಿರುತ್ತಿದ್ದರು. ‘ಸಾವನ್ ಆಯೋ ರೇ ಸಖೀ, ಬಾಲಮ್ ಆಯೇನಾ, ಬರಸೇ ಹೋ ಬಬುವಾ ರಿಮಝಿಮ್ ಮೇಘವಾ’ ಮುಂತಾದ ಶ್ರಾವಣದ ವಿರಹದ ಗೀತೆಗಳನ್ನು ಜೋಕಾಲಿ ಹಾಡುಗಳನ್ನು ಹಾಡುತ್ತಿದ್ದರು, ಬಿಹಾರಿಗಳಲ್ಲಿ ಸಣ್ಣ ವಯಸ್ಸಿನಲ್ಲಿ ಮದುವೆಮಾಡಿ ಅವರು ವಯಸ್ಕರಾದಾಗ ಪುನಃ ‘ಗೌನಾ’ ಎಂದು ಸಂಭ್ರಮದಲ್ಲಿ ಹೆಣ್ಣನ್ನು ಮನೆತುಂಬಿಸಿಕೊಳ್ಳುವ ಪದ್ಧತಿ ಮಾಡುತ್ತಾರೆ. ಆ ಕಾರಣ ಮದುವೆಯಾದ ಮೈದುನ ಬಲರಾಮನನ್ನು ‘ನಿನ್ನ ಗೌನಾ ತರುತ್ತೇವೆ ಚಿಂತೆಮಾಡಬೇಡ ತಮ್ಮಾ’ ಎಂದು ಛೇಡಿಸಿ ಅವನನ್ನು ಗೋಳುಹೊಯ್ದುಕೊಳ್ಳುವ ಈ ನಲಿವಿನ ಅದಮ್ಯ ಜೀವನ ಚೈತನ್ಯದ ಈ ಬಿಹಾರಿ ಹೆಂಗಸರನ್ನು ನೋಡುವುದೇ ಒಂದು ಹಬ್ಬವೆನಿಸುತ್ತಿತ್ತು. ಅವರ ರಂಗುರಂಗಿನ ಸೀರೆ ಚೋಲಿಗಳು, ಬೈತಲೆಯಲ್ಲಿ ಕೇಸರಿ ಬಣ್ಣದ ಸಿಂಧೂರ, ಕಾಲಲ್ಲಿ ಪೈಜಣ. ಆಗೆಲ್ಲ ನನಗೆ ಬೇವಿನ ಮರದ ಕೆಳಗೆ ಅಮೃತಾ ಪ್ರೀತಮ್ ಕುರ್ಚಿ ಹಾಕಿಕೊಂಡು ಕೂತಂತೆ, ಅಂಗೂರಿಯ ಪಾತ್ರ, ಕಾಡಿನಬೇರು ಕತೆ ಹೀಗೆಯೇ ಬರೆದಿರಬಹುದು ಎಂದೆಲ್ಲ ಒಂದು ದೃಶ್ಯ ಕಣ್ಮುಂದೆ ಬರುತ್ತಿತ್ತು.
ನಾನು ಮಾತ್ರ ಅಲ್ಲಿದ್ದೂ ಇಲ್ಲದವಳಂತೆ ಅವರನ್ನೆಲ್ಲ ನೋಡುತ್ತ ಅಲ್ಲಿನ ಸೆಖೆ, ಅಸಹನೀಯ ಬಿರುಬಿಸಿಲಿಗೆ ಕಡಲನ್ನು ಧ್ಯಾನಿಸುತ್ತ ದಿನಗಳೆಯುತ್ತಿದ್ದೆ. ಅವರಂತೆ ನಗಲು ಬರುತ್ತಿದ್ದಿಲ್ಲ. ಖುಶಿಯಾಗಿರುವುದು ಹೇಗೆ ಅಂತಲೂ ಗೊತ್ತಿದ್ದಿಲ್ಲ. ಅವರಲ್ಲಿದ್ದ ಜೀವನೋತ್ಸಾಹದ ಯಾವ ಹಾಡುಗಳೂ ನನ್ನ ಬಳಿಯಿದ್ದಿಲ್ಲ. ವೈದ್ಯಕೀಯ ಕಾರಣಗಳಿಂದ ನನಗೆ ಹೆರಿಗೆಗೆಂದು ತವರಿಗೆ ಹೋಗಲಾಗಲಿಲ್ಲ. ದಿಲ್ಲಿಯಲ್ಲಿಯೇ ಉಳಿದೆ. ಮತ್ತದೇ ನನ್ನವರಲ್ಲದ, ನನ್ನ ಸುತ್ತಲೂ ಅಪರಿಚಿತ ಬಿಳಿ ಗೋಡೆಗಳು, ಅಪರಿಚಿತ ಮುಖಗಳಿರುವ ಆಸ್ಪತ್ರೆಯಲ್ಲಿ ಸುಸೂತ್ರವಾಗಿ ಹೆರಿಗೆ ಆಯ್ತು. ತವರಿನ ಉಪಚಾರ, ತಾಯಿಯ ಆರೈಕೆ, ಎಣ್ಣೆ ನೀರು ಸಾಂಬ್ರಾಣಿ ಹೊಗೆ ಘಮವಿಲ್ಲದ ಬಾಣಂತನ ನನ್ನದಾಗಿತ್ತು. ಮಗುವಿಗೆ ಮಾತ್ರ ಎಣ್ಣೆ ಹಚ್ಚಿ ಮಾಲಿಶ್ ಮಾಡಿ ಮಂಗಳೂರ್ ಅಜ್ಜಿಯೇ ಎರೆಯುತ್ತಿದ್ದಳು. ಆಕೆಯೇ ನನಗೂ ತಾಯಿಯಾದಳು ಆ ಹೊತ್ತಿನಲ್ಲಿ.
ಆಕೆಯೊಂದಿಗೆ ಚರ್ಚಿಗೆ ಹೋಗುತ್ತಿದ್ದೆ ಮದರ್ ಮೇರಿಗೆ ಕ್ಯಾಂಡಲ್ ಹಚ್ಚಿಬರಲು. ಮದರ್ ಮೇರಿ ಮುಂದೆಯೂ ಯಾ ದೇವಿ ಸರ್ವಭೂತೇಷುವನ್ನೇ ಹೇಳಿಕೊಳ್ತಿದ್ದೆ. ಒಂದಿನ ಆಂಗ್ಲೋ ಇಂಡಿಯನ್ ಪಾದ್ರಿಯನ್ನು ಮನೆಗೆ ಕರೆದು ಮಗುವಿಗೆ ಆಶೀರ್ವದಿಸಿ ಪ್ರಾರ್ಥಿಸಿದಾಗ ಖುಶಿಯೆನಿಸಿತ್ತು. ನನಗೆ ಯಾವತ್ತೂ ಈ ಜಾತಿ ಧರ್ಮ ರೀತಿ ರಿವಾಜುಗಳು ಮುಖ್ಯವೆನಿಸಿದ್ದೇ ಇಲ್ಲ. ನಾನೊಬ್ಬ ಜಾತ್ಯಾತೀತಳು! ಮನೆಯಲ್ಲಿ ನನ್ನ ಅಪ್ಪ ಅವ್ವ ದೈವಭಕ್ತಿಯುಳ್ಳವರು. ಪೂಜೆ ಪುನಸ್ಕಾರಗಳನ್ನು ವಿಧಿವತ್ತಾಗಿ ಮಾಡುತ್ತಿದ್ದರು. ಇಲ್ಲಿ ದೇವರ ಪಟಕ್ಕೆ ದೀಪ ಹಚ್ಚಿ ಕೈಮುಗಿದರೆ ಮುಗೀತು. ಅದುವರೆಗೂ ಯಾರೂ ಪರಿಚತರಾಗಿದ್ದಿಲ್ಲ. ಯಾರ ಸ್ನೇಹವೂ ಇದ್ದಿಲ್ಲ.
ಒಮ್ಮೆ ಮಂಗಳೂರ್ ಅಜ್ಜಿಯೊಂದಿಗೆ ಪೋಸ್ಟ್ ಆಫೀಸಿಗೆ ಹೊರಟಿದ್ದೆ. ನಮ್ಮ ಕನ್ನಡ ಮಾತು ಕೇಳಿಸಿಕೊಂಡ ಒಬ್ಬರು ಮಾತಾಡಿಸಿ ಮುಂದೆ ನನಗೆ ಆಪ್ತ ಗೆಳತಿಯಾದರು. ಅವರ ಮೂಲಕ ಅನೇಕ ಕನ್ನಡ ಕುಟುಂಬಗಳ ಪರಿಚಯವಾಯ್ತು. ಅವರ ಕಿಟ್ಟಿ ಪಾರ್ಟಿಗೆ ನನ್ನನ್ನೂ ಸೇರಿಸಿಕೊಂಡರು. ಅವರು ದೇವಸ್ಥಾನಕ್ಕೆ ಹೋದರೆ ದೇವಸ್ಥಾನಕ್ಕೂ ಹೋಗುತ್ತಿದ್ದೆ. ಇನ್ಯಾರೋ ನಿಜಾಮುದ್ದೀನ್ ದರಗಾದ ಬಗ್ಗೆ ಹೇಳಿದಾಗ ಹಜರತ್ ನಿಜಾಮುದ್ದೀನ್ ದರಗಾಕ್ಕೂ ಹೋದೆ. ಅದು ನನಗೆ ಅತ್ಯಂತ ಖುಷಿ ಕೊಡುವ ಜಾಗ. ಮುಂದೆ ಅಜಮೇರಿನ ಗರೀಬ್ ನವಾಜರ ಗದ್ದುಗೆಗೂ ಹೋಗಿ ಬಂದೆ. ಪಂಜಾಬಿ ಗೆಳತಿ ಸಿಕ್ಕು ಅವಳೊಂದಿಗೆ ಕುರುಕ್ಷೇತ್ರಕ್ಕೂ ಹೋಗಿದ್ದು ಬಂದೆ. ಸಿಖ್ಕರು, ಪಂಜಾಬಿಗಳು ಜಾಟ್, ಗುಜ್ಜರರು ಎಲ್ಲರ ಸಾಮಾಜಿಕ ರೀತಿ ರಿವಾಜುಗಳು ಮನುಷ್ಯಗುಣಗಳ ಪರಿಚಯವಾಯ್ತು. ಅಲ್ಲೊಂದು ರಾಮಾ ಸ್ಟೋರ್ ಇತ್ತು. ಅಲ್ಲಿ ಕನ್ನಡ ಪತ್ರಿಕೆಗೆಳು ಮಯೂರ ಸುಧಾ ದೊರೆಯುತ್ತಿದ್ದವು. ಪರಿಚಿತರಿಂದ ಕನ್ನಡ ಕಾದಂಬರಿಗಳು, ಹಿಂದಿ ಕಾದಂಬರಿಗಳು, ಉರ್ದು ಶಾಯರಿ, ಒಳ್ಳೊಳ್ಳೆ ಹಿಂದಿ ಕಾದಂಬರಿಗಳನ್ನೂ, ಅನುವಾದಿತ ಬಂಗಾಲಿ ಸಾಹಿತ್ಯವನ್ನು ಓದುವ ಸುಖವೂ ಸಿಕ್ಕಿತು. ಹೀಗೆ ನಿಧಾನಕ್ಕೆ ಕೋರಾ ಕಾಗಜಿನಲ್ಲಿ ಕಪ್ಪು ಅಕ್ಷರಗಳು ಮೂಡತೊಡಗಿದ್ದವು.
ನನ್ನ ಎರಡನೇ ಮಗ ಧಾರವಾಡದಲ್ಲಿ ಹುಟ್ಟಿದ. ಈ ಹೊತ್ತಿಗೆ ನಾನು ಸಾಕಷ್ಟು ಪ್ರಬುದ್ಧಳಾಗಿದ್ದೆ ಎನ್ನಬಹುದು. ಅಥವಾ ಈಗ ನನಗೆ ತಿಳುವಳಿಕೆ ಬಂದಿತ್ತು. ನಮ್ಮ ಸುತ್ತಲಿನ ಪರಿಸರ, ಸಮಾಜ, ನಮ್ಮನ್ನು ನಿರಂತರವಾಗಿ ರೂಪಿಸುತ್ತಿರುತ್ತದೆ. ಎಲ್ಲಿನ ಮಾತುಬಾರದ ಧಾರವಾಡದ ನಾನು. ಇಂದಿನ ನನ್ನನು ನನ್ನೊಳಗಿನ ಕನ್ನಡಿಯಲ್ಲಿ ನೋಡಿಕೊಂಡಾಗ ನನಗೇ ಅಚ್ಚರಿಯಾಗುತ್ತದೆ. ಜಗತ್ತಿನ ಎಲ್ಲಾ ಶಕ್ತಿ ಸಾಮರ್ಥ್ಯಗಳು, ಪುರಾಣಗಳು, ಯುದ್ಧಗಳು, ಕಾವ್ಯಗಳು, ಲಾಂಛನಗಳು, ಶಾಸನಗಳು, ಧರ್ಮ, ಕಾಮ, ಅರ್ಥ, ಮೋಕ್ಷ ಚತುರ್ವಿಧ ಪುರುಷಾರ್ಥಗಳ ಹೆಸರಿನಲ್ಲಿ ಪುರುಷಪ್ರಧಾನ ಸಮಾಜ ಹೆಣ್ಣನ್ನು ಮದುವೆಯಂಥ ಹೊಣೆಗಾರಿಕೆಯಲ್ಲಿ ಬಂಧಿಸಿ ಆಕೆಯನ್ನು ತನ್ನ ಅಧೀನದಲ್ಲಿಯೇ ಇಟ್ಟುಕೊಳ್ಳುತ್ತ ಬಂದಿದ್ದಾನೆ. ಸ್ತ್ರೀವಾದ ಎಂದರೇನು ಎಂಬುದಾಗಿ ನನಗೆ ಅರ್ಥವಾಗುವ ಕಾಲದಲ್ಲಿ ಸಿಮೋನ್ ದಿ ಬುವಾರ ‘ಹುಟ್ಟುತ್ತಲೇ ಯಾರೂ ಹೆಣ್ಣಾಗಿರುವುದಿಲ್ಲ, ಹೆಣ್ಣಾಗಿ ರೂಪಿಸಲ್ಪಟ್ಟವಳು. ಹೆಣ್ಣು ಅಂದರೆ ಹೀಗೇ ಇರಬೇಕು ಎಂಬ ಎಲ್ಲ ಧೋರಣೆಗಳಿಗೆ ವಿರುದ್ಧದ ದನಿಯೊಂದು ನನ್ನಂತರಂಗದಲ್ಲಿ ಭುಗಿಲೇಳುತ್ತಿತ್ತು. ವರ್ಜಿನಿಯಾ ವೂಲ್ಫ್ ಹೇಳುವ ‘A Room of One’s Own ‘(1929) ಲೇಖಕಿಯರಿಗೆ (ಹೆಣ್ಣಿಗೆ) ತಮ್ಮದೇ ಒಂದು’ ಕೋಣೆ’ ಮತ್ತು ಹಣ ಬೇಕು ಎನ್ನುವ ಮಾತು ನನ್ನೊಳಗೊಂದು ಕ್ರಾಂತಿಯನ್ನು ಹುಟ್ಟುಹಾಕಿತ್ತು.
ಅದೇ ಹೊತ್ತಿಗೆ ಮಿದ್ನಾಪುರಿನ ( ಪಶ್ಚಿಮ ಬಂಗಾಳ) ಒಬ್ಬ ದೀದಿ ನಮ್ಮ ನೆರೆಯಲ್ಲಿ ವಾಸಕ್ಕೆ ಬಂದಳು. ನಾವಾಗ ಇನ್ನೂ ಮುನಿರ್ಕಾದಲ್ಲಿಯೇ ಇದ್ದೆವು. ಹೆಚ್ಚು ವಿದ್ಯೆ ಇಲ್ಲದ ಆಕೆ ಒಂದು ಫ್ರೆಂಚ್ ರಾಯಭಾರಿಯಲ್ಲಿನ ಒಬ್ಬ ಅಧಿಕಾರಿಗಳ ಮನೆಯಲ್ಲಿ ಅವರ ಮಗುವನ್ನು ನೋಡಿಕೊಳ್ಳಲು ಬರುತ್ತಿದ್ದರು. ಹೆಸರು ಲಕ್ಷ್ಮೀ. ಆಕೆಗೆ ಓದಲು ಬರೆಯಲು ಬರುತ್ತಿದ್ದಿಲ್ಲ. ಇಂಗ್ಲಿಷ್ ಮತ್ತು ತನ್ನ ಮಾಲಕರೊಂದಿಗೆ ಹರಕು ಪರಕು ಫ್ರೆಂಚ್ ಮಾತಾಡಬಲ್ಲವಳಾಗಿದ್ದಳು. ಆ ಫ್ರೆಂಚ್ ಕುಟುಂಬ ತಮ್ಮ ಅಧಿಕಾರಾವಧಿ ಮುಗಿಸಿ ಫ್ರಾನ್ಸಿಗೆ ತೆರಳಿತು. ಅವರ ಮಗುವನ್ನು ಹಚ್ಚಿಕೊಂಡಿದ್ದ ದೀದಿಗೆ ಈ ಅಗಲುವಿಕೆ ಬಹಳ ದುಃಖವನ್ನು ನೀಡಿತ್ತು. ಆಗೆಲ್ಲ ದೀದಿ ವಾರಕ್ಕೆರಡು ಪತ್ರಗಳನ್ನು ನನ್ನಿಂದಲೇ ಬರೆಸುತ್ತಿದ್ದಳು, ಆಕೆಯ ಭಾವನೆಗಳನ್ನು ಅತ್ಯಂತ ಸುಂದರವಾಗಿ ಹೆಣೆದು ಪತ್ರ ಬರೆಯುತ್ತಿದ್ದೆ. ಅದಕ್ಕೆ ಆಕೆಯ ‘ಫ್ರೆಂಚ್ ಮೇಮಸಾಬ’ಳ ಉತ್ತರ ಓದುವಾಗೆಲ್ಲ ಅದೆಲ್ಲ ನನಗೇ ಎಂದು ನನಗನಿಸುತ್ತಿತ್ತು, ಬರೆದದ್ದು ನಾನು. ನಾನು ಕವಿತೆಯನ್ನಷ್ಟೇ ಅಲ್ಲ ಏನನ್ನಾದರೂ ಭಾವಪೂರ್ಣವಾಗಿ ಓದಿದವರಿಗೆ ಮನಮುಟ್ಟುವಂತೆ ಬರೆಯಬಲ್ಲೆ ಎಂಬ ಧೈರ್ಯ ಬಹುಶಃ ಅಲ್ಲಿಂದಲೇ ಬಂದಿರಬೇಕು. ಈಗ ಇದೇ ಲಕ್ಷ್ಮೀ ದೀದಿ ನನ್ನ ಬೆನ್ನು ಬಿದ್ದಳು, ರೇಣೂ, ನೀನೂ ಕಲಿತಿದ್ದಿಯ್ತಲ್ಲ, (IGNOU ದಿಂದ ನಾನಾಗ ಡಿಗ್ರಿಯನ್ನು ಓದುತ್ತಿದ್ದೆ), ಮನೆಯಲ್ಲಿ ಕೂತು ಏನು ಮಾಡ್ತೀ? ನಾಳೆ ಮಕ್ಕಳು ಸ್ಕೂಲಿಗೆ ಹೋದರೆ ನಿನಗೊಂದು ಕೆಲಸ ಬೇಡವೇ? ಯಾವುದಾದರೂ ಎಂಬಸಿಯಲ್ಲಿ ರಿಶೆಪ್ಷನಿಸ್ಟ್ ಆದ್ರೂ ಸಾಕೂ’ ಎಂದೆಲ್ಲ ನನ್ನನ್ನು ಹುರಿದುಂಬಿಸುತ್ತಿದ್ದಳು. ಆಕೆ ಎಂಬಸಿಗಳಲ್ಲಿ ಪ್ರಯತ್ನವನ್ನೂ ಮಾಡಿದಳು. ಆದರೆ ನನ್ನ ಇಂಗ್ಲೀಷ ಜ್ಞಾನ ಅದಕ್ಕೆ ಪೂರಕವಾಗಿದ್ದಿಲ್ಲ. ಬಹುಶಃ ಇಂದು ನಾನು ಈ ಉದೋಗಸ್ಥೆಯೆಂಬ ಸಂತೋಷವನ್ನು, ಆರ್ಥಿಕ ಬಲವನ್ನು ಪಡೆದಿದ್ದರೆ ಆ ಶ್ರೇಯ ಆ ದೀದಿಗೆ ಸಲ್ಲುತ್ತದೆ. ಹೀಗೆ ಕೊನೆಗೂ ಆಕೆ ನನ್ನನ್ನು ನಾಲ್ಕು ಗೋಡೆ ಮತ್ತು ಒಂದು ಹೊಸಿಲಿನಿಂದ ಹೊರಕ್ಕೆ ಎಳೆತಂದಳು.
ಎಷ್ಟು ವಿಚಿತ್ರವಲ್ಲವೇ? ಕಡಲಿನ ತಲ್ಲಣ ನಮಗ್ಯಾರಿಗೂ ಅರ್ಥವಾಗುವುದಿಲ್ಲ. ಕಡಲಿನ ಮೊರೆಯುವಿಕೆಯಲ್ಲಿ ಸಂಕಟವಿದೆಯೆಂದು ನನಗೇಕೆ ಅನಿಸುತ್ತಿತ್ತು? ಕಡಲನ್ನು ಸೇರುವ ನದಿಯ ತಳಮಳವೂ ನಮಗೇಕೆ ಅರ್ಥವಾಗುವುದಿಲ್ಲ? ಅಂಡಾಳ್, ಮೀರಾ, ಅಕ್ಕಮಹಾದೇವಿಯರು ನಿರಾಕರಿಸಿದ ಮದುವೆ ಮತ್ತು ಹಂಬಲಿಸಿದ ಬಿಡುಗಡೆಯ ಹಿಂದೆ ಈ ಗಂಡಾಳಿಕೆಯ ಸೊಕ್ಕನ್ನು ಬಗ್ಗುಬಡಿಯುವ ಆಶಯಕ್ಕಿಂತ ತಮ್ಮನ್ನು, ತಮ್ಮ ಅಸ್ತಿತ್ವವನ್ನು ಆ ಜಡತೆಯಾಚೆಗೆ ಹಿಗ್ಗಿಸಿಕೊಳ್ಳುವ, ವಿಸ್ತರಿಸಿಕೊಳ್ಳುವ ಹಂಬಲವೇ ಆಗಿತ್ತಲ್ಲವೇ? ಇಂಥದ್ದೇ ತಳಮಳ, ವ್ಯಾಕುಲತೆ ನನ್ನೊಳಗಿತ್ತು. ನಾನು ನಿಂತ ನೀರಾಗುವುದು ಇಷ್ಟವಿದ್ದಿಲ್ಲ. ಹಾಗೇ ಬದುಕಿ ಸತ್ತುಹೋಗುವುದೂ ಕೂಡ. ಎಲ್ಲ ಹಿಡಿತಗಳಿಂದ ಬಿಡಿಸಿಕೊಂಡು ಹಿಗ್ಗಿಸಿಕೊಳ್ಳುವ ಹಂಬಲ. ಮಕ್ಕಳನ್ನು ಕ್ರೀಚಿಗೆ ಹಾಕಿ ನಾನು ಕೆಲಸಕ್ಕೆ ಸೇರಿದೆ. ಆಗ ನನ್ನ ಬಳಿ ಇದ್ದದ್ದು ಬರಿ ಟೈಪರೈಟರಿನ ವಿದ್ಯೆ ಮತ್ತು IGNOU ಅಡ್ಮಿಶನ್ ಕಾರ್ಡ್. ಮುಂದೆ ಬಹುದೊಡ್ದ ಕಂಪನಿಯ ವೈಸ್ ಚೇರ್ಮನ್ನರ ಕಾರ್ಯದರ್ಶಿಯಾದಾಗ ಉದ್ಯೋಗ ಹುಡುಕುವುದನ್ನು ನಿಲ್ಲಿಸಿದೆ.
ಬದುಕು ಹೀಗೇ ಇರಬೇಕು, ನಾವು ಹೀಗೆಯೇ ನಡೆಯಬೇಕು, ಅದು ಅಲ್ಲಿಗೇ ಹೋಗಿ ತಲುಪಬೇಕು ಎನ್ನುವ ಯಾವ ಕಲ್ಪನೆಗಳೇ ಇದ್ದಿಲ್ಲ. ಯಾವ ಸಿದ್ಧಾಂತಗಳನ್ನೂ ಹೇರಿಕೊಂಡಿದ್ದಿಲ್ಲ. ಒಂದರ್ಥದಲ್ಲಿ ದಿಲ್ಲಿಯೇ ನನ್ನನ್ನು ಬೆಳೆಸಿತು. ತಂದೆ ತಾಯಿ ಪೆಟ್ಟುಹಾಕಿ ತಿದ್ದಿದಂತೆ ಆಗಾಗ ಪೆಟ್ಟು ಕೊಟ್ಟು ತಿದ್ದಿಕೊಳ್ಳುವ ಅವಕಾಶಗಳನ್ನು ನೀಡಿತು. ಅವಮಾನಗಳನ್ನು ನುಂಗಿ ನಗುವುದನ್ನು, ಬಿದ್ದರೆ ಎದ್ದು ತಲೆಯೆತ್ತಿ ನಿಲ್ಲುವುದನ್ನು ಕಲಿಸಿತು. ಯಾರಿಗೂ ಆಗದ ಈ ಕುಟಿಲ ಕುತ್ಸಿತ ದಿಲ್ಲಿಯೇ ನನ್ನ ಸ್ಪೂರ್ತಿ. ನನ್ನ ಅಂತಃಶಕ್ತಿ. ಸುಳ್ಳು ಮೋಸಗಾರರನ್ನು, ಅನ್ಯಾಯ ಮಾಡಿದವರನ್ನು ಕಂಡರಾಗುತ್ತಿದ್ದಿಲ್ಲ. ಎದುರೆದುರೇ ಹೇಳಿ ಅವರ ಮುಖವಾಡ ಕಳಿಚಿ ದೂರಾಗುತ್ತಿದ್ದೆ. ತುಳಿತಕ್ಕೊಳಗಾದವರಿಗಾಗಿ, ನ್ಯಾಯ ದೊರಕದೇ ಹೀನಾಯ ಸ್ಥಿತಿಯಲ್ಲಿರುವವರಿಗಾಗಿ ದನಿಯೆತ್ತುವುದನ್ನು ನನ್ನ ಕಚೇರಿಯ ವಾತಾವರಣದಲ್ಲಿಯೇ ಆರಂಭಿಸಿದೆ.
ಇಪ್ಪತ್ತು ವರ್ಷಗಳಿಂದ ನಮ್ಮ ಚೇರ್ಮನ್ನರ ಮನೆಯಲ್ಲಿ ಅಡುಗೆಯವನಾಗಿ ದುಡಿದ ಬಿಹಾರಿ ಶಿವನಿಗೆ ಕ್ಯಾನ್ಸರ್ ಆದಾಗ ಬಹಳ ದುಃಖವಾಗಿತ್ತು. ಅವನು ಸಾಯುತ್ತಾನೆಂದು ಗೊತ್ತಾಗಿ ಬಿಹಾರದಿಂದ ಅವನ ಅಣ್ಣನನ್ನು ಕರೆಸಿ ಅವನನ್ನು ಸಾಗಹಾಕಲು ನೋಡಿದ್ದರು. ಆಗ ನಾನೇ ದನಿಯೆತ್ತಿ, ಇಷ್ಟು ವರ್ಷ ನಿಮ್ಮ ಸೇವೆ ಮಾಡಿದ್ದಾನೆ ಅವನ ಕುಟುಂಬಕ್ಕೆ ಪ್ರತಿ ತಿಂಗಳು ಹಣ ಕಳಿಸುವ ವ್ಯವಸ್ಥೆ ಮಾಡಬಹುದಲ್ಲವೆ ಎಂದು ಕೇಳಿಕೊಂಡಿದ್ದೆ. ನಂತರ ಅವರ ಹೆಂಡತಿ ಪ್ರತೀ ತಿಂಗಳೂ ಅವನ ಕುಟುಂಬಕ್ಕೆ 2,500 ರೂಪಾಯಿಗಳನ್ನು ಮನಿಯಾರ್ಡರ್ ಕಳಿಸಲು ಆದೇಶಿಸಿದರು. ಹೀಗೇ ಕಾರ್ಖಾನೆಯಲ್ಲಿ ದುಡಿಯುವವರಿಗೆ ಕೆಮಿಕಲ್ಸ್ ಜೊತೆ ಒಡನಾಡುವವರಿಗೆ ಸುರಕ್ಷತೆಯ ಕವಚ, ಸೇಫ್ಟಿ ಶೂಸ್, ಗ್ಲವ್ಸ್, ಗೌನ್ ಇತ್ಯಾದಿ ವ್ಯವಸ್ಥೆ ಇಲ್ಲದಾದಾಗ ನಾನು ಅಂಥ ವಿಷಯಗಳನ್ನು ಅವರ ಗಮನಕ್ಕೆ ತಂದು ಅರ್ಥ ಮಾಡಲು ಪ್ರಯತ್ನಿಸುತ್ತಿದ್ದೆ.
ಎಲ್ಲಾ ಕಡೆ ಇರುವಂತೆ ಇಲ್ಲೂ ಭ್ರಷ್ಟರಿದ್ದಾರೆ. ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವ ಅಧಿಕಾರಿ ನೀಚರೊಂದಿಗೆ, ನುಂಗಪ್ಪ, ತಿನ್ನಪ್ಪಗಳೊಂದಿಗೆ ನನ್ನ ತಕರಾರು ಇದ್ದೇ ಇರುತ್ತದೆ. ಮನಸ್ಸು ಕೇಳುವುದಿಲ್ಲ ಬಂಡೇಳುತ್ತದೆ ಅನ್ಯಾಯವನ್ನು ಕಂಡಾಗ. ಮೋಸಗಾರ ಸುಲಿಗೆಕೋರರನ್ನು ಬಹಳ ಹತ್ತಿರದಿಂದ ಕಂಡಾಗಲೂ ಸಿಟ್ಟುಬರುತ್ತದೆ. ಅಂಥ ವ್ಯವಸ್ಥೆಯಲ್ಲಿ ನಾವೆಲ್ಲ ಹೋರಾಡುತ್ತಲೇ ಇರಬೇಕು ಎನ್ನುವ ಸತ್ಯದೊಂದಿಗೆ ನಾನು ಹೋರಾಡುತ್ತಿರುತ್ತೇನೆ.
ಬಹುಶಃ ಕಂಪನಿಗಳಿಗೆ ಪ್ರಾಮಾಣಿಕರು, ಸಮಾನತೆಯನ್ನು ಪ್ರತಿಪಾದಿಸುವವರು ಬೇಕಿರುವುದಿಲ್ಲ. ಅದರಲ್ಲೂ ಸಶಕ್ತಳಾದ ಹೆಣ್ಣುಮಕ್ಕಳ ಅಗತ್ಯ ‘ಸಲಾಮ್’ ಹೊಡೆಯುವ, ‘ಚಾಡಿಕೋರ’ ಬಾಬೂಗಳ ಆಫೀಸುಗಳಿಗೆ ಬೇಕಿರುವುದಿಲ್ಲ.ಈಗ ಆ ಟ್ರೆಂಡ್ ಬದಲಾಗಿದೆ. ಬಹುರಾಷ್ಟ್ರೀಯ ಕಂಪನಿಗಳು, ಐಟಿ ಸೆಕ್ಟರುಗಳು ಪದಾರ್ಪಣೆಯಾದ ನಂತರ ಎಷ್ಟೋ ಪರಿಸ್ಥಿತಿ ಸುಧಾರಿಸಿದೆ. ಹದಿನೆಂಟು ವರ್ಷದ ಬಳಿಕ ನನ್ನ ಬಾಸ್ –‘ಯೂ ಆರ್ ನಾಟ್ ಫಿಟ್ ಫಾರ್ ದಿಸ್ ಪೋಸ್ಟ್’ ಅಂದು ಬೇರೊಬ್ಬಳನ್ನು ನೇಮಿಸಿಕೊಂಡಿದ್ದ. ಆಕೆ ಬೇಗನೇ ಈ ಕೆಲಸ ಬಿಟ್ಟು ಹೋದಾಗ ಪುನಃ ನನ್ನನ್ನೇ ಕರೆಸಿಕೊಂಡ. ಇದು ಮೂರು ಸಲ ಪುನರಾವರ್ತನೆಯಾದಾಗ ನಾನೇ ನನಗಿಲ್ಲಿ ಕೆಲಸ ಮಾಡಲು ಇಷ್ಟವಿಲ್ಲ (ನನಗಿನ್ನೂ ನೆನಪಿದೆ- ನಿಮ್ಮ ಮುಖವನ್ನೂ ನೋಡಲು ಬರೋದಿಲ್ಲ ಎಂದಿದ್ದೆ ಸಿಟ್ಟಲ್ಲಿ) ನಮ್ಮದೇ ಫ್ಯಾಕ್ಟರಿಗೆ ಕಳಿಸಿ ಎಂದು ಕೇಳಿಕೊಂಡೆ. ಎತ್ತರದಿಂದ ಧೊಪ್ಪನೇ ಕೆಳಗೆ ಬಿದ್ದಷ್ಟು ನೋವಾಯ್ತು. ಎಲ್ಲರೂ ನನ್ನ ಬೆನ್ನ ಹಿಂದೆ ಏನು ಆಡಿಕೊಂಡರೋ ಗೊತ್ತಿಲ್ಲ, ಯಾಕೆಂದರೆ ನಾನು ಪ್ರಾಮಾಣಿಕವಾಗಿ, ಪರಿಶ್ರಮದಿಂದ ದುಡಿದಿದ್ದೆ. ಕಳ್ಳತನವನ್ನೇನು ಮಾಡಿದ್ದಿಲ್ಲ. ಕೆಲದಿನದ ಅವಮಾನ, ಕೀಳರಿಮೆ ಮರೆಯುವಂತೆ ನನ್ನ ಆಸಕ್ತಿಯ ಬರವಣಿಗೆಯನ್ನು ಹೆಚ್ಚಿಸಿಕೊಂಡೆ. ‘ಅಮೃತ ನೆನಪುಗಳು’ ಪ್ರಕಟವಾದಾಗ ‘ದಿ ಹಿಂದೂ’ ನಲ್ಲಿ ಆ ಕುರಿತು ಪ್ರಕಟವಾದ ಲೇಖನದ ಪ್ರಿಂಟಔಟ್ ಮತ್ತು ಎರಡು ಪುಸ್ತಕಗಳನ್ನು ಒಯ್ದು ಚೇರ್ಮನ್ ಮತ್ತು ವೀಸಿಗೆ ಕೊಟ್ಟು, ‘ಐ ಯಾಮ್ ಮೋರ್ ಕೇಪೆಬಲ್, ಮೋರ್ ಇಂಟಲಿಜೆಂಟ್ ದ್ಯಾನ್ ಎನಿ ಒನ್ ಎಲ್ಸ್ ಇನ್ ದಿಸ್ ಕಂಪನಿ’ ಎಂದು ಹೇಳಬೇಕೆನ್ನಿಸಿತು, ಹೇಳಲಿಲ್ಲ. 2019ರಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ನಾನು ಅನುವಾದಿಸಿದ ಅಮೃತಾ ಪ್ರೀತಮ್ ಅವರ ಆಯ್ದ ಕವಿತೆಗಳ ಕುರಿತು ಒಂದು ಲೇಖನ ಬಂದಾಗಲೂ ಅದನ್ನು ಚೇರ್‍ಮನ್, ವೀಸಿ ಇಬ್ಬರಿಗೂ ವಾಟ್ಸಪ್ ಕಳಿಸಿದೆ. ನೀವು ನನ್ನನ್ನು ನಿಮ್ಮ ಅಧಿಕಾರದಿಂದ ತುಳಿಯಬಹುದು ಆದರೆ ಬುದ್ಧಿಯಿಂದ ನನ್ನನ್ನು ಏನೂ ಮಾಡಲಾರರಿ; ಮಾಯಾ ಎಂಜೆಲೋಳ ‘ಸ್ಟಿಲ್ ಐ ರೈಸ್’ ಮತ್ತೆ ಮತ್ತೆ ಹೇಳಿಕೊಂಡೆ. ಒಂದಿನ ವೀಸಿ ಇದೇ ಕಾನ್ಫರೆನ್ಸ್ ಹಾಲ್ನಲ್ಲಿ ಎಲ್ಲರೆದುರು ನನ್ನನ್ನು ಪ್ರತಿಭಾವಂತೆ, ಬರಹಗಾರ್ತಿಯಾಗಿದ್ದೇನೆಂದು ಹೊಗಳಿದ.
ಈ ‘#ಮೀಟೂ’ ಅಭಿಯಾನ ಆರಂಭವಾಗುವ ನಾಲ್ಕು ವರ್ಷಗಳ ಮೊದಲೇ ಉದ್ಯೋಗಸ್ಥ ಮಹಿಳೆಯರ ಲೈಂಗಿಕ ದೌರ್ಜನ್ಯದ ದೂರುಗಳನ್ನು ಆಲಿಸುವ ಒಂದು ಘಟಕ ಕಡ್ಡಾಯವಾಗಬೇಕು ಎಂದು ನಮ್ಮ ಕಂಪನಿಯಲ್ಲಿ ಪಾಲಿಸಿ ಕಾರ್ಯರೂಪಕ್ಕೆ ಬಂದಿದ್ದೇ ನನ್ನಿಂದ. ಮೇಲೆ ವಿವರಿಸಿದಂತೆ ವೀಸಿ ಕಚೇರಿಯಿಂದ ನಾನು (ಡಿಮೋಶನ್ ಅಲ್ಲ) ಬೇರೊಂದು ಶಾಖೆಗೆ ಬರಬೇಕಾಯ್ತು. ಅದು ನನಗೆ ಮನೆ ಹತ್ತಿರವಿರುವ ಕಾರ್ಖಾನೆ. ಆಗ ಒಬ್ಬ ಮ್ಯಾನೇಜರ್ ಎಷ್ಟು ಲೈಂಗಿಕ ಕಿರುಕುಳ ಕೊಡಲು ಶುರು ಮಾಡಿದ. ಲಜ್ಜೆಬಿಟ್ಟು ತನ್ನ ಇಂಗಿತವನ್ನೂ ತಿಳಿಸಿದ. ಆದರೆ ನಾನು ಚೇರ್ಮನ್ನರಿಗೆ ದೂರು ಹೇಳಿ ನಂತರ ವಿಚಾರಣೆ ಇತ್ಯಾದಿಯೆಲ್ಲ ನಡೆಯಿತು. ಅವನು ಲಿಖಿತರೂಪದಲ್ಲಿ ಇನ್ನು ಮುಂದೆ ತಾನು ಯಾವುದೇ ರೀತಿಯ ಕಿರುಕುಳ ಕೊಡುವುದಿಲ್ಲ ಎಂದು ಬರೆದುಕೊಟ್ಟು ಆ ಪ್ರಕರಣ ಅಲ್ಲಿಗೆ ಮುಕ್ತಾಯವಾಗಲಿಲ್ಲ. ಬದಲಾಗಿ ಸೆಕ್ಷುವಲ್ ಹೆರಾಸ್ಮೆಂಟ್ ಸೆಲ್ ಸ್ಥಾಪಿತಗೊಳ್ಳುವುದಕ್ಕೂ ಕಾರಣವಾಯಿತು. ಎಷ್ಟೆಲ್ಲಾ ಧೈರ್ಯ ತೋರುತ್ತಿದ್ದ ನಾನು, ನಿರ್ಭೀತವಾಗಿದ್ದ ನಾನು ಹಿಡಿ ಪ್ರೀತಿಗಾಗಿ ಸೋತು ಹತಾಶಳಾದ ಸಂದರ್ಭ ನನ್ನನ್ನು ಬಹಳವಾಗಿ ನೋಯಿಸುತ್ತದೆ. ಅತಿಯಾದ ಪ್ರೀತಿಯ ಅಪೇಕ್ಷೆಯೂ ಬದುಕಿನಲ್ಲಿ ನಿರರ್ಥಕವಾದ ಭಾವವನ್ನು ಸೃಷ್ಟಿಸುತ್ತದೆ. ಖಿನ್ನತೆಯ ಅಂಚಿಗೂ ನೂಕುತ್ತದೆ.
ಮಕ್ಕಳನ್ನು ಹೆರುವುದು, ಸಂಸಾರದ ನೊಗವನ್ನು ಹೊರುವುದು, ಮಕ್ಕಳಿಗೆ ವಿದ್ಯೆ ನೀಡಿ ಅವರನ್ನು ಉತ್ತಮ ನಾಗರಿಕನ್ನಾಗಿಸುವುದರೊಂದಿಗೆ ನಾನೂ ಅವರೊಂದಿಗೆ ಬೆಳೆಯುತ್ತಿದ್ದೆ. ವರ್ಜಿನಿಯಾ ವೂಲ್ಫ್ ಪ್ರತಿಪಾದಿಸಿದ್ದ ‘ನನ್ನದೇ ಆದ ಕೋಣೆ, ಸ್ವಲ್ಪ ಹಣ’ ಈಗ ನನ್ನ ಬಳಿಯಿತ್ತು. ಆದರೆ ಈ ಎಲ್ಲದರಲ್ಲಿಯೂ ಒಂದು ಸಹಿಸಲಾರದ ಮೌನವಿತ್ತು. ಅರಗಿಸಿಕೊಳ್ಳಲಾರದ ಒಂಟಿತನವಿತ್ತು. ಹೇಳಿಕೊಳ್ಳಲಾಗದ ಅಂತರಂಗದ ಆಲಾಪನೆಯಿತ್ತು. ಅವೆಲ್ಲವನ್ನೂ ಕೇಳಿಸಿಕೊಳ್ಳುವ ನನ್ನ ತಳಮಳದ ನದಿಯನ್ನು ತೋಳು ಚಾಚಿ ಹಿಡಿದುಕೊಳ್ಳಬಲ್ಲ, ಕಡಲ ಸಂಕಟದ ಅಲೆಗಳನ್ನು ಬೊಗಸೆಯಲ್ಲಿ ಇಂಗಿಸಿಕೊಳ್ಳಬಲ್ಲ ಸಾಂಗತ್ಯಕ್ಕಾಗಿ ಕಾತರಿಸಿದ್ದೆ. ಆತ್ಮಕ್ಕೆ ಅಂಟಿಕೊಳ್ಳುವ ಸಖ್ಯದ ಬಗ್ಗೆ ನನಗೆ ಹಂಬಲವಿತ್ತು. ನಂಬಿಕೆಯಿತ್ತು. ಅಂಟಿಕೊಳ್ಳದ ಲೋಕಾಂತವಾಗದ ಆತ್ಮವನ್ನು ಬಗೆದು ನೋಡುವ ಧೈರ್ಯ ಬಹುಶಃ ಯಾರಿಗೂ ಇರಲಿಕ್ಕಿಲ್ಲ. ಆದರೆ ಈ ಲೋಕ ಇರುವುದೇ ಹೀಗೆ. ಹೆಣ್ಣು ತನ್ನ ದಾರಿಯನ್ನು ತಾನೇ ನಿರ್ಮಿಸುತ್ತ ಹೊರಟಾಗ ಎದುರಿಸುವ ಕಷ್ಟಕೋಟಲೆಗಳಿಗೆ ಲೆಕ್ಕವಿರುವುದಿಲ್ಲ. ಅವಳ ಹೆಜ್ಜೆಗಳ ಲೆಕ್ಕವಿಡುವ ಲೋಕ, ಅವಳ ನಗುವನ್ನೂ ದುರ್ಬೀನಿನಿಂದ ಶೋಧಿಸುವ ಲೋಕ ಅವಳ ಸಂಕಟದ ಅಕ್ಷರಗಳನ್ನು ಓದಲಾಗದು, ಸ್ವಾರ್ಥದ ಇಂಥ ಲೋಕದಲ್ಲಿ ಬಯಸಿದ ಎಲ್ಲವನ್ನೂ ಹೊಂದಲಾಗದು ಎನ್ನುವ ಸತ್ಯದ ದರ್ಶನ ನನಗಾಗಿತ್ತು.
ಆಗಲೇ ಹೇಳಿದೆನಲ್ಲ, ನಾನು ದಿಲ್ಲಿಯಲ್ಲಿ ಪಾದವೂರಿದಾಗ ಎಲಬು ಕಟಕಟಿಸುವ ಚಳಿ. ಇದು ನನ್ನ ಬದುಕಿನ ರೂಪಕವೂ ಹೌದು. ಆ ಚಳಿಗೆ ಮೈಯೊಡ್ದಿಕೊಂಡೇ ನಡೆದೆ, ಆಗಿನ್ನೂ ಹತ್ತೊಂಬತ್ತು ಇಪ್ಪತ್ತರ ಯುವತಿ! ಕಣ್ಣಲ್ಲಿ ಮೈಲುದ್ದದ ಮರುಭೂಮಿಯಂಥ ನಿರ್ವಾತವಿತ್ತು. ಯಾವ ಕನಸುಗಳಿಗೂ ಬಣ್ಣವಿದ್ದಿಲ್ಲ. ದಿಲ್ಲಿಯೇ ನನ್ನ ಜೀವಸಂಗಾತಿ, ಅದೇ ನನ್ನ ದೊಡ್ದ ಶತ್ರು, ಅದೇ ನನ್ನ ಹಿತೈಷಿ, ಬಂಧು ಬಳಗವೂ ಹೌದು. ದಿಲ್ಲಿಯನ್ನು ತೊರೆದು ಹೋಗುವ ಬಗ್ಗೆ ಯೋಚಿಸುವಾಗೆಲ್ಲ ಮನಸ್ಸು ಮಂಕಾಗುತ್ತದೆ. ಹೋಗುವುದಾದರೂ ಎಲ್ಲಿಗೆ? ಧಾರವಾಡದ ಮಣ್ಣಿಗೆ? ಗೋವೆಯ ಕಡಲಿಗೆ? ಗೊತ್ತಿಲ್ಲ.
ಇರಬೇಕು ನೀನು ಇರಬೇಕು ನೀನು ಹೀಗೇ ನನ್ನ ಛಿದ್ರಗೊಂಡ ಆತ್ಮದ ತುಣುಕುಗಳನ್ನ ಫಳ ಫಳ ಉಜ್ಜಿ ಕನ್ನಡಿಯಂತೆ ಆಗಾಗ ನನ್ನೆದುರು ನಿಲ್ಲಿಸಿ ಮತ್ತೆ ಮತ್ತೆ ಕತ್ತುಕೊಂಕಿಸಿ ನೋಡಿಕೊಳ್ಳಲು ಬೇಕು ನೀ ನನಗೆ.
ಸದ್ದಿಲ್ಲದ ಬಾಗಿಲಲ್ಲಿ ಗಾಳಿಯ ಸದ್ದಿಗೂ ಚಡಪಡಿಸುವ ಚಿಲಕದ ಕೊಂಡಿಗೇ ಸಿಕ್ಕಿಹೋದ ಹಳೇ ನಂಟುಗಳ ನೇವರಿಸಿ ಗಂಟು ಬಿಡಿಸಿ ತಾಳೆ ಹಾಕಲು ಹೀಗೇ ಇರಬೇಕು ನೀನು.
ಇರದ ಘಳಿಗೆಗಳ ಸಾಲದಲ್ಲೂ ಸಾಲದೇ ಮತ್ತೆ ಮತ್ತೆ ಸೋಲುವ ಬಯಕೆಗಳು ಹುತ್ತ ಕಟ್ಟಿಹೋದ ಕಾಲದ ಪದರಿನಲ್ಲೂ ಹಂಚಿಹೋದ ನರಳಿಕೆಗಳು ಅತ್ತಲೂ ಇತ್ತಲೂ ಸುಮ್ಮನೇ ಹರಡಿಕೊಂಡ ಬೇರುಗಳನ್ನು ಕೊಂಬೆಗಳ ಮೇಲಿನ ಗೂಡನ್ನೂ ನೋಡಲು ಇರಬೇಕು ನೀ ನನ್ನ ಬಳಿ ಹೀಗೇ…
ಪರಿಚಯ: ತವರೂರು ಧಾರವಾಡ. ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸ. ಖಾಸಗೀ ಕಂಪನಿಯೊಂದರಲ್ಲಿ ಉದ್ಯೋಗ. ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ ಜಂಟಿಕಾರ್ಯದರ್ಶಿಯಾಗಿಯೂ, ಸಂಘದ ಮುಖವಾಣಿ ‘ಅಭಿಮತ’ ದ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ ‘ರಾಜಧಾನಿಯಲ್ಲಿ ಕರ್ನಾಟಕ’ ಪುಸ್ತಕವನ್ನು ಸಂಪಾದಿಸಿದ್ದು ಅನೇಕ ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಮಾಸಿಕಗಳಲ್ಲಿ ಪ್ರಕಟಗೊಂಡಿವೆ. ಬಿಡುಗಡೆಯಾದ ಕೃತಿಗಳು; ‘ಕಣ್ಣ ಕಣಿವೆ’, ‘ದಿಲ್ಲಿ ಡೈರಿಯ ಪುಟಗಳು’, ‘ಅಮೃತ ನೆನಪುಗಳು’, ‘ನಮ್ಮಿಬ್ಬರ ನಡುವೆ’, ‘ಬಾ ಇಂದಾದರೂ ಮಾತಾಡೋಣ’ ಅಜೀತ್ ಕೌರ್ ಅವರ ಆತ್ಮಕಥನದ ಅನುವಾದ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’.
Published On - 4:13 pm, Tue, 2 March 21