ಬೇರೆಯವರ ಬದುಕಿನಲ್ಲಿ ಹಣಕಿ ಹಾಕುವ ವಿಕೃತಿಯಿಂದ ನಾವು ಯಾವಾಗ ಹೊರಬರುತ್ತೇವೆ?

‘ಎಷ್ಟೋ ಎಳೇ ಹೃದಯಗಳಲ್ಲಿ ನವಿರು ಭಾವನೆಗಳೇ ನಶಿಸಿಹೋಗುತ್ತಿವೆ. ನಿಸರ್ಗಸಹಜ ಕ್ರಿಯೆಗಳಿಗೆ ತಪ್ಪು ಭಾವನೆಗಳನ್ನು ಆರೋಪಿಸುವ ಸಂಕುಚಿತ ಮನೋಭಾವವುಳ್ಳ ಧಾರ್ಮಿಕ ಸಂಸ್ಕೃತಿ ನಮ್ಮದಲ್ಲ. ಆದರೀಗ ನಡೆಯುತ್ತಿರುವುದೇನು? ಕೊಡುವ ಪಡೆಯುವ ಇಬ್ಬರಲ್ಲೂ, ಅದನ್ನು ನಿಯಂತ್ರಿಸುವ ಎಲ್ಲರಲ್ಲೂ ವ್ಯಾಪಾರೀ ಲಾಭಾಕಾಂಕ್ಷೆ. ಮತ್ತೊಂದೆಡೆ ಆಷಾಢಭೂತಿತನದ ಪರಮಾವಧಿ. ಹಾಸಿದ ಯೋಗಚಾಪೆಯ ಮೇಲೆ ಕುಳಿತು ಮೂಗು ಹಿಡಿದು ಬಗ್ಗಿ ಎದ್ದು ಮತ್ತೆ ಆ ಚಾಪೆಯಡಿಯಲ್ಲೇ ಮನಸ್ಸಿನ ಹೊಲಸನ್ನೆಲ್ಲಾ ಅಡಗಿಸಿಡುವ, ಮನಸ್ಸಿನಲ್ಲಿ ದುರ್ನಾತ ತುಂಬಿ ಉಚ್ಛ್ವಾಸ, ನಿಶ್ವಾಸದಲ್ಲಿ ಧ್ಯಾನಮಗ್ನರಾಗಬಲ್ಲ ಮಾರ್ಜಾಲ ಸನ್ಯಾಸಿಗಳಾಗಿದ್ದೇವೆ ನಾವು.' ಜಯಶ್ರೀ ಜಗನ್ನಾಥ

ಬೇರೆಯವರ ಬದುಕಿನಲ್ಲಿ ಹಣಕಿ ಹಾಕುವ ವಿಕೃತಿಯಿಂದ ನಾವು ಯಾವಾಗ ಹೊರಬರುತ್ತೇವೆ?
ಸೌಜನ್ಯ: ಅಂತರ್ಜಾಲ
Follow us
ಶ್ರೀದೇವಿ ಕಳಸದ
|

Updated on:Mar 05, 2021 | 12:31 PM

ನಾವು ನಿಜವಾಗಿ ವಿಕಾಸ ಹೊಂದಿದ ಪ್ರಾಣಿಗಳೋ, ಕೂರ ಮೃಗಗಳೋ ಕೀಳು ಜಂತುಗಳೋ ಅತೃಪ್ತ ಪಿಶಾಚಿಗಳೋ?; ಹಾಲಿಯಲ್ಲಿ ನಡೆಯುತ್ತಿರುವ ಸಿಡಿ ಹಗರಣ ಮತ್ತದಕ್ಕೆ ಮುತ್ತಿಚಪ್ಪರಿಸುತ್ತಿರುವ ನಾಲಗೆ ಕಣ್ಣುಕಿವಿಗಳನ್ನು ಗಮನಿಸಿದರೆ, ಇಂತಹ ಸಂದೇಹ ಖಂಡಿತವಾಗಿ ಮೂಡಿ ಬರುತ್ತದೆ.  ಮುಚ್ಚಿಟ್ಟಿದ್ದನ್ನು, ಮುಚ್ಚಿಡಬೇಕಾದ್ದನ್ನು ಕೆದಕಿ ಕದಡಿ ಬುಡಮೇಲೆತ್ತಿ ಅದರಡಿಗೆ ಇಣುಕುವ ಚಪಲತೆ ಪ್ರಾಯಶಃ ಮಂಗನಾಗಿದ್ದಾಗಿನಿಂದಲೇ ನರರಿಗೆ ಇದ್ದಿರಬೇಕು. ಆದರೆ ಅದು ಮಾನವ ಸಹಜವಾದ ಬಾಲಿಶ ಕುತೂಹಲ ಮಾತ್ರವಾಗಿದ್ದರೆ ಮನಃಸ್ಥಿಮಿತಕ್ಕೆ ಅವಕಾಶವಿರುತ್ತದೆ. ಅದರಿಂದ ಪ್ರಕೃತಿಸಹಜವಾದ ದೈಹಿಕ ಮಾನಸಿಕ ಪಾಠಗಳನ್ನು ಕಲಿಯುವುದೂ ಸಾಧ್ಯ. ಅದರ ಬದಲು ಪರರ ವೈಯಕ್ತಿಕ ಮಾಹಿತಿಗಳನ್ನು ಪಡೆದುಕೊಂಡು ಅದರಿಂದ ಲಾಭ ಗಳಿಸುವುದೋ ಅಥವಾ ವಿಕೃತ ಆನಂದ ಪಡೆಯುವುದೋ ಮಾಡುವುದಾದರೆ ಅದು ಪೈಶಾಚಿಕ ಮನೋಭಾವವೇ ಸರಿ.

ಜೈವಿಕ ವಿಕಾಸದ ಸಾವಿರಾರು ಮಿಲಿಯನ್ ವರ್ಷಗಳಲ್ಲಿ ಯಾವುದೋ ಘಟ್ಟದಲ್ಲಿ ಮಾನವ ಮಂದೆಗಳು, ಸಾಮಾಜಿಕವಾಗಿಯೂ ವಿಕಾಸಗೊಳ್ಳಲಾರಂಭಿಸಿತು. ತಾನು ಮತ್ತು ಪರರು ಎಂಬ ಸ್ವಪ್ರಜ್ಞೆಯನ್ನು ಪಡೆದುಕೊಂಡ ಮಾನವಜಾತಿ, ತನ್ನಿಂದ ಪರರಿಗೆ ನೋವಾಗಬಹುದೇನೋ ಎಂದು ಯೋಚಿಸುವ ಶಕ್ತಿಯನ್ನು ಗಳಿಸಿಕೊಳ್ಳುತ್ತಾ ಹೋಯಿತು. ಭಾವನಾತ್ಮಕ ವಿಕಸನದೊಂದಿಗೆ ಕಲೆ ಕಾವ್ಯಗಳೆಲ್ಲವೂ ಅರಳಿದವು. ಸಮಾಜದ ಒಳಿತಿಗಾಗಿ ಕಾಲಕಾಲಕ್ಕೆ ನಮಗೆ ನಾವೇ ನಿಯಮಗಳನ್ನು ಮಾಡಿಕೊಂಡು ಮಂದೆಯ ಒಳಿತಿಗಾಗಿ ವ್ಯಕ್ತಿಗೆ ನಿರ್ಬಂಧನೆಗಳನ್ನು ವಿಧಿಸುತ್ತಾ ಸಾಗಿದೆವು. ಆ ವಿಕಸನದ ಸಮುದ್ರಮಂಥನದಲ್ಲಿ ಸ್ವಂತ ಲಾಭ, ಸ್ವಜನರ ಲಾಭ ಎಂಬ ಹಾಲಾಹಲವನ್ನೂ ಹುಟ್ಟಿಸಿಬಿಟ್ಟೆವು. ಸಕಲಸನ್ಮಂಗಳಕ್ಕಾಗಿ, ಉಕ್ಕೇರಿ ಬರುವ ಹಾಲಾಹಲದ ಆ ವಿಷಪ್ರಾಶನ ಮಾಡಲು ಈಗ, ನಮ್ಮ ನಮ್ಮ ಮನಸ್ಸಿಗೆ ನಾವೇ ಕಟ್ಟುಪಾಡುಗಳನ್ನು ಹಾಕಿಕೊಳ್ಳಬೇಕಾದ ಶಿಷ್ಟಾಚಾರ, ಎಂಬ ನೀಲಕಂಠನನ್ನು ಬಿಟ್ಟರೆ ಇನ್ಯಾರೂ ಇಲ್ಲವೇಇಲ್ಲ.

ಆದರೆ ಆ ಹಾದಿಯಲ್ಲೆಲ್ಲೋ ಎಡವಿ ಮುಗ್ಗರಿಸಿ ಮತ್ತೆ ಸಹಸ್ರಾರು ವರ್ಷಗಳ ಹಿಂದಕ್ಕೆ ಜಾರಿಬಿಟ್ಟೆವೇ? ಅಥವಾ ಹಿಂದಿದ್ದ ಮುಗ್ಧ ಕುತೂಹಲಕ್ಕೆ ವಿಕಸನದ ವಿಷ ಸುರಿದು ಹೊಸ ರಕ್ತಪಿಪಾಸಿಗಳನ್ನು ಸೃಷ್ಟಿಸಿಬಿಟ್ಟೆವೇ?

ಹಾಗೇಕಾಗುತ್ತದೆ? ಮನುಷ್ಯರಿಗೆ ಇತರರ ಆಂತರಿಕ ಜೀವನದ ಚಿತ್ರಣಗಳನ್ನು ಪದೇಪದೆ ನೋಡುವ ಆಸೆ ಯಾಕಾಗುತ್ತದೆ? ಅಂಥ ವೀಕ್ಷಕರಿರುವುದರಿಂದಲೇ ಅಲ್ಲವೇ ಮಾಧ್ಯಮಗಳು ಅವುಗಳನ್ನೇ ಪದೇಪದೆ ತೋರಿಸುವುದು, ಅವರು ತೋರಿಸುವುದರಿಂದಲ್ಲವೇ ಅಂಥ ಅಭಿರುಚಿಯನ್ನು ಪ್ರೇಕ್ಷಕರು ಬೆಳೆಸಿಕೊಳ್ಳುವುದು? ಇದೊಂದು ವಿಷವೃತ್ತ. ಕೋಳಿ ಮೊದಲೋ ಮೊಟ್ಟೆ ಮೊದಲೋ ಎನ್ನದೆ ಪ್ರತಿಯೊಬ್ಬರೂ ಜಾಗರೂಕರಾಗಿ ಜವಾಬುದಾರಿಯಿಂದ ವರ್ತಿಸಬೇಕು. ಮಾನವರ ಮನಸ್ಸು ಸಾಧಾರಣವಾಗಿ ಸುಖವನ್ನೇ ಬಯಸುತ್ತಿರುತ್ತದೆ. ಕಷ್ಟಪಟ್ಟು ದುಡಿದು ಗಳಿಸುವ ಸುಖಕ್ಕೆ ಮನಸ್ಸನ್ನು ಒಗ್ಗಿಸಬೇಕು. ಇಲ್ಲದಿದ್ದರೆ ಇಳಿಜಾರಿನಲ್ಲಿ ಉರಳುವ ಚೆಂಡಿನಂತೆ ಮನಸ್ಸು ಹೊರಟುಬಿಡುತ್ತದೆ. ಅದಕ್ಕೇ ಅಲ್ಲವೇ ಸಮೃದ್ಧಿ ಹೆಚ್ಚಿದಂತೆಲ್ಲಾ ನಿಯಂತ್ರಣವಿಲ್ಲದ ಆಹಾರ ಸೇವನೆಯಿಂದ ಜನರು ಬೊಜ್ಜು ಬೆಳೆಸಿಕೊಳ್ಳುವುದು? ನಾಲಗೆಗೆ ಹೇಗೋ ಮನಸ್ಸಿಗೂ ಹಾಗೇ ನವಿರೇಳಿಸುವ ಚಕಿತಗೊಳಿಸುವ ದೃಶ್ಯಗಳನ್ನು ನೋಡುತ್ತಲೇ ಇರುವುದೊಂದು ಗೀಳಾಗುತ್ತದೆ. ಹಾಗಾದರೆ ಇಷ್ಟು ಸಾಕು ಎಂದು ಲಕ್ಷ್ಮಣರೇಖೆಯನ್ನು ಯಾರು ಎಳೆಯಬೇಕು? ಅದಕ್ಕೆ ಕಾಲ ದೇಶ ವರ್ತಮಾನಗಳಲ್ಲಿ ವಿವಿಧ ಸಮಾಜಗಳು ತಮ್ಮತಮ್ಮಧರ್ಮ ಸಂಸ್ಕೃತಿಗಳಿಗೆ ತಕ್ಕಂತೆ ನಿಯಮ ನಿರ್ಬಂಧನೆಗಳನ್ನು ಮಾಡಿಕೊಂಡಿರುತ್ತಾರೆ. ಅಮೆರಿಕದಲ್ಲಿ ಸಲ್ಲುವುದು ಇಲ್ಲಿ ಸಲ್ಲಲಾರದು. ಮುಂಬಯಿಯಲ್ಲಿ ಸಲ್ಲುವುದು ತೀರ್ಥಹಳ್ಳಿಯಲ್ಲಿ ವರ್ಜ್ಯವಾಗಿರಬಹುದು. ಒಂದು ಸಮಾಜದ ಸಾಮುದಾಯಿಕ ಮಾನಸಿಕ ಮನಸ್ಥಿತಿಯ ಆರೋಗ್ಯಕ್ಕೆ ಪ್ರತಿಯೊಬ್ಬರ ಕೊಡುಗೆಯೂ ಮುಖ್ಯವಾಗುತ್ತದೆ.

ಈಗಂತೂ ರಾಜಕೀಯದಲ್ಲಿ ಬೇರೆಯವರ ಆಂತರಿಕ ವಿಷಯವನ್ನು ಹೇಗಾದರೂ ಅರಿತುಕೊಳ್ಳುವ ಕುಟಿಲ ವಿಧಾನ ನಿಮ್ಮ ಕೈಯಲ್ಲಿದ್ದರೆ, ಯಾರನ್ನಾಗಲೀ ಇಂದ್ರಪ್ರಸ್ಥದಿಂದ ಅರಣ್ಯಕ್ಕಟ್ಟಿಬಿಡಬಹುದಾದ ಶಕುನಿ ಕೈಯ ಪಗಡೆಯ ದಾಳಗಳು ನಿಮ್ಮ ವಶದಲ್ಲಿದ್ದಂತೆ. ಅಷ್ಟೊಂದು ವಿನಾಶ ಶಕ್ತಿ ನಿಮ್ಮಅಂಕೆಯಲ್ಲಿ.

ಲೈಂಗಿಕತೆ​ ಎನ್ನುವುದು ಪ್ರಕೃತಿದತ್ತಕ್ರಿಯೆ. ನೀವು ತಾರ್ಕಿಕ ಆಲೋಚನೆಯುಳ್ಳವರಾಗಿದ್ದರೂ, ಭೌತಿಕವಾಗಿ ಮಾತ್ರವೇ ಆಲೋಚಿಸುವವರಾಗಿದ್ದರಂತೂ ಸರಿಯೇ. ಅದು ಎರಡು ಜೀವಿಗಳ ನಡುವೆ ಪರಸ್ಪರ ಒಪ್ಪಂದದಿಂದ ನಡೆಯುವ ಒಂದು ಸಹಜ ಹರ್ಷದಕ್ರಿಯೆ ಮಾತ್ರ ಎಂದು ಭಾವಿಸಬಹುದು. ಲೈಂಗಿಕ ಕ್ರಿಯೆ ಮತ್ತದರ ಸುತ್ತಲಿನ ನಿಯಮಗಳು ಬಹಳಷ್ಟು ಧರ್ಮಗಳಲ್ಲಿ ಬಹಳಷ್ಟು ಬಗೆಯ ಕಟ್ಟುಪಾಡುಗಳಿಗೆ ಬದ್ಧವಾಗಿದೆ. ಆದರೆ ಲೈಂಗಿಕ ಪ್ರಕ್ರಿಯೆಯಿಂದಾಗಿ ಮಾನವಜಾತಿಯ ಮುಂದುವರಿಕೆಯಾಗುತ್ತದೆ. ನಂತರ ಅದು ಕೌಟುಂಬಿಕ ಆಸ್ತಿಪಾಸ್ತಿಗಳ, ಅಧಿಕಾರದ ಸಮಸ್ಯೆಗಳಿಗೆ ಈಡಾಗುತ್ತದೆ. ಹಾಗಾಗಿ ಮಾನವ ಸಮಾಜದಲ್ಲಿ ಕಾಲ ದೇಶ ವರ್ತಮಾನಗಳಿಗೆ ತಕ್ಕಂತೆ ಆ ಕ್ರಿಯೆಗೆ ಕೌಟುಂಬಿಕ ಸಮ್ಮತಿ, ಸಾಮಾಜಿಕ ಒಪ್ಪಿಗೆ ಮತ್ತು ಕಾನೂನಿನ ಗುರುತುಗಳು ಅವಶ್ಯಕವಾಗುತ್ತವೆ. ಆದರೆ, ಗೆರೆಗಳನ್ನು ಹಾಕಿದಾಗ ಅವು ಅಸಹಜ ಅನುಕೂಲಸಿಂಧುಗಳಾಗುತ್ತ ಬಂದವೇ ಹೊರತು ವ್ಯಕ್ತಿಗಳ ನಡುವಿನ ಆಕರ್ಷಣೆಗಳನ್ನು ತಡೆಯಲು ಎಂದಿಗೂ ಸಾಧ್ಯವಾಗಿಲ್ಲ.

social responisibility

ಸೌಜನ್ಯ: ಅಂತರ್ಜಾಲ

ರಾಜಕೀಯದಲ್ಲಿ ಮತ್ತು ಪ್ರಬಲ ಸ್ಥಾನಗಳಲ್ಲಿರುವವರಲ್ಲಿ ಅಧಿಕಾರದ ಹಣದ ದುರಾಸೆ ಅಂತರಿಕ್ಷದಷ್ಟಿರುತ್ತದೆ. ಅದಕ್ಕಾಗಿ ಜಯಗಳಿಸಲು ಒಬ್ಬರೊಡನೊಬ್ಬರ ಸ್ಪರ್ಧೆ ಅತ್ಯಂತ ತೀವ್ರವಾಗಿರುತ್ತದೆ. ಗೆಲ್ಲಲಾಗದವರ ಆತಂಕ, ಮಾನಸಿಕ ತೊಳಲಾಟ ಹೇಗಾದರೂ ಮಾಡಿ, ಏನನ್ನಾದರೂ ಮಾಡಿ ಗೆಲ್ಲಲೇಬೇಕೆಂಬ, ಆಗದಿದ್ದರೆ ಬೇರೆಯವರನ್ನು ಸೋಲಿಸಲೇಬೇಕೆಂಬ ಅತ್ಯಂತ ತೀಕ್ಷವಾದ ಗುರಿಯಾಗಿ ಮಾರ್ಪಡುತ್ತದೆ. ಅದಕ್ಕೆ ಈಗಿನ ತಂತ್ರಜ್ಞಾನದ ಬೆಂಬಲ ಬೇರೆ. ಇವೆಲ್ಲಾಒಟ್ಟಾಗಿ ಒಂದು ಮಾರಕ ಅಸ್ತ್ರವಾಗಬಹುದು. ಅಂಥ ಅಸ್ತ್ರವೊಂದು ಅಂಥ ಘಟನೆಗೆ ಸಂಬಂಧವೇ ಪಡದ ಆ ಕುಟುಂಬಗಳ ಮಿಕ್ಕ ಎಲ್ಲರನ್ನೂ ಘಾಸಿಪಡಿಸಬಹುದು. ಆ ಅಸ್ತ್ರವನ್ನು ಝಳಪಿಸುತ್ತಾ ಅದರಿಂದ ಲಾಭಪಡೆಯಬಹುದು, ಮಾನಹಾನಿ ಮಾಡಬಹುದು, ಮಾನಸಿಕ ಯಾತನೆ ಕೊಟ್ಟು ಕಾಡಿಸಬಹುದು, ಮುಗಿಸೇಬಿಡಬಹುದು. ಏಕೆಂದರೆ ಲೈಂಗಿಕ ಕ್ರಿಯೆಯನ್ನು ಮಾಡುವವರು ಕೆಲವರಾದರೆ ಅದನ್ನು ನೋಡಿ, ಕೇಳಿ ನಾಲಗೆ ಚಪ್ಪರಿಸುತ್ತಾ ವಿಕೃತವಾಗಿ ಸುಖಿಸುವವರು ಲೆಕ್ಕವಿಲ್ಲದಷ್ಟು ಮಂದಿ. ಆ ಚಪಲತೆಯ ಮುಂದೆ ಮಂದಿರಗಳೇನು, ರಾಷ್ಟ್ರೀಯತೆಯೇನು, ಸಿದ್ಧಾಂತಗಳೇನು ಎಲ್ಲವೂ ನಗಣ್ಯ.

ನಮ್ಮ ಸಂಸ್ಕೃತಿಯನ್ನು ಗೇಲಿ ಮಾಡಿದರೆಂದು ಹುಸೇನ್​ ಅವರಂಥ ಕಲಾಕಾರರ ಮೇಲೆ ಅಪರಾಧವನ್ನು ಆರೋಪಿಸಿದ ನಾವು ಕೃಷ್ಣನ ರಾಸಲೀಲೆಯಂಥ ಸುಂದರ ಪದವನ್ನು ಮಾಧ್ಯಮಗಳು ಬಾಯಿಗೆ ಬಂದಂತೆ ಕೀಳು ಪದವಾಗಿ ಬಳಸಿದರೆ ಅದನ್ನು ಒಪ್ಪಿಕೊಂಡುಬಿಡುವುದು ಸರಿಯೇ? ಕಾಮನನ್ನು ಸುಟ್ಟು ಅನಂಗನಾಗಿ ಮಾಡಿ ಪ್ರತಿಜೀವಿಯಲ್ಲೂ ಪ್ರತಿಜೀವಕೋಶದಲ್ಲೂ ನೆಲಸಿ ಚಿರಂಜೀವಿಯಾಗಿರು ಎಂದು ವರವನ್ನಿತ್ತ ಮಹಾದೇವನನ್ನು ಪಡೆದಂಥಾ ಉನ್ನತವಾದ ಸಮೃದ್ಧ ಸುಂದರ ಸಂಸ್ಕೃತಿ ನಮ್ಮದು. ಕೊನಾರ್ಕ್ ಖಜುರಾಹೋಗಳಲ್ಲಿ ಕೆತ್ತಿ ಕಾಮಸೂತ್ರದಲ್ಲಿ ಬರೆದು ಅಸಂಖ್ಯ ದೇವಸ್ಥಾನಗಳಲ್ಲಿ ಚಿತ್ರಿಸಿದ ಉದಾತ್ತ ಇತಿಹಾಸ ನಮ್ಮದು. ನಿಸರ್ಗಸಹಜ ಕ್ರಿಯೆಗಳಿಗೆ ತಪ್ಪು ಭಾವನೆಗಳನ್ನು ಆರೋಪಿಸುವ ಸಂಕುಚಿತ ಮನೋಭಾವವುಳ್ಳ ಧಾರ್ಮಿಕ ಸಂಸ್ಕೃತಿ ನಮ್ಮದಲ್ಲ. ಆದರೀಗ ಎಷ್ಟೋ ಎಳೇ ಹೃದಯಗಳಲ್ಲಿ ನವಿರು ಭಾವನೆಗಳೇ ನಶಿಸಿಹೋಗುತ್ತಿವೆ. ಸದ್ಯ ನಡೆಯುತ್ತಿರುವುದೇನು? ಕೊಡುವ ಪಡೆಯುವ ಇಬ್ಬರಲ್ಲೂ, ಅದನ್ನು ನಿಯಂತ್ರಿಸುವ ಎಲ್ಲರಲ್ಲೂ ವ್ಯಾಪಾರೀ ಲಾಭಾಕಾಂಕ್ಷೆ. ಮತ್ತೊಂದೆಡೆ ಆಷಾಢಭೂತಿತನದ ಪರಮಾವಧಿ. ಹಾಸಿದ ಯೋಗಚಾಪೆಯ ಮೇಲೆ ಕುಳಿತು ಮೂಗು ಹಿಡಿದು ಬಗ್ಗಿ ಎದ್ದು ಮತ್ತೆ ಆ ಚಾಪೆಯಡಿಯಲ್ಲೇ ಮನಸ್ಸಿನ ಹೊಲಸನ್ನೆಲ್ಲಾ ಅಡಗಿಸಿಡುವ, ಮನಸ್ಸಿನಲ್ಲಿ ದುರ್ನಾತ ತುಂಬಿ ಉಚ್ಛ್ವಾಸ, ನಿಶ್ವಾಸದಲ್ಲಿ ಧ್ಯಾನಮಗ್ನರಾಗಬಲ್ಲ ಮಾರ್ಜಾಲ ಸನ್ಯಾಸಿಗಳಾಗಿದ್ದೇವೆ .

ನಾವು ಮುಂದಿನ ಪೀಳಿಗೆಗೆ ಮತ್ತೆ ಚೈತ್ರದ ಚಿಗುರಿಗೆ ಕೋಗಿಲೆ ಗಾನಕ್ಕೆ ಮನ ಅರಳಬೇಕಾದರೆ, ಮತ್ತೆ ಚಂದ್ರನ ಬೆಳಕಿಗೆ ಹೂವಿನ ಪರಿಮಳಕ್ಕೆ ಮಧುರ ಭಾವನೆಗಳು ಕೋಮಲವಾಗಿ ಸುಳಿದಾಡಬೇಕಾದರೆ, ಈ ವ್ಯಾಪಾರೀ ಭಾವನೆ ನಿಲ್ಲಬೇಕು. ರಾಜಕಾರಣಿಗಳು, ಮಾಧ್ಯಮಗಳು ಜವಾಬ್ದಾರಿಯುತವಾಗಬೇಕು. ಬೇರೆಯವರ ವೈಯಕ್ತಿಕ ಬದುಕಿನಲ್ಲಿ ಹಣಿಕಿ ನೋಡುವ ವಿಕೃತಿಯನ್ನು ಕಳಚಿಕೊಂಡು ಸಾರ್ಥಕ, ಸಮೃದ್ಧ, ಉದಾತ್ತ ಬದುಕಿಗೆ ಬೇಕಿರುವ ಗುರಿ ಆಲೋಚನೆಗಳನ್ನು ಹೊಂದಬೇಕು.

social awareness

ಜಯಶ್ರೀ ಜಗನ್ನಾಥ

ಇದನ್ನೂ ಓದಿ : ರಮೇಶ್​ ಜಾರಕಿಹೊಳಿ ರಾಜೀನಾಮೆಗೆ ಕಾರಣರಾದ ದಿನೇಶ್ ಕಲ್ಲಹಳ್ಳಿ ಸಂದರ್ಶನ

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಾನೂನು ಸಾಧ್ಯಾಸಾಧ್ಯತೆಗಳು ಏನೇನು?

Published On - 12:11 pm, Fri, 5 March 21

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು