Ramesh Jarkiholi | ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಾನೂನು ಸಾಧ್ಯಾಸಾಧ್ಯತೆಗಳು ಏನೇನು?

ಗೋಕಾಕ್ ಶಾಸಕ- ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ಸಿ.ಡಿ. ಪ್ರಕರಣದಲ್ಲಿ ಮುಂದಿನ ಕಾನೂನು ಮಾರ್ಗಗಳೇನು ಎಂಬ ಬಗ್ಗೆ ವಕೀಲರು, ನಿವೃತ್ತ ಪೊಲೀಸ್ ಅಧಿಕಾರಿಗಳ ಅಭಿಪ್ರಾಯಗಳೊಂದಿಗೆ ಇಲ್ಲಿದೆ ಸಮಗ್ರ ಮಾಹಿತಿ.

  • Srinivasa Mata
  • Published On - 12:45 PM, 4 Mar 2021
Ramesh Jarkiholi | ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಕಾನೂನು ಸಾಧ್ಯಾಸಾಧ್ಯತೆಗಳು ಏನೇನು?
ವಕೀಲ ಎಸ್. ಬಾಲನ್

ಬೆಂಗಳೂರು: ಮಾಜಿ ಸಚಿವ- ಗೋಕಾಕ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಸಿಡಿಯಲ್ಲಿ ಅಶ್ಲೀಲ ಭಂಗಿಗಳಲ್ಲಿ ಕಾಣಿಸಿಕೊಂಡಿದ್ದು ಈಗ ಹಳೇ ಸುದ್ದಿಯಾಗಿ ಹೋಯಿತು. ಸಿ.ಡಿ.ಯನ್ನು ಪೊಲೀಸರಿಗೆ ನೀಡಿದ ದಿನೇಶ್ ಕಲ್ಲಹಳ್ಳಿ ವಿರುದ್ಧ ಈಗ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣದ ತಾರ್ಕಿಕ ಅಂತ್ಯ ಏನಾಗಬಹುದು ಎಂಬ ಹುಳು ಬಹುತೇಕರ ತಲೆಯನ್ನು ಕೊರೆಯುತ್ತಿದೆ. ರಮೇಶ್ ಜಾರಕಿಹೊಳಿಯೇ ರಾಜೀನಾಮೆ ಕೊಟ್ಟಾಯಿತು, ಇನ್ನೇನು ಉಳಿದಿದೆ ಎಂಬ ಪ್ರಶ್ನೆಯೂ ಕೆಲವರಲ್ಲಿದೆ. ಈ ಬಗ್ಗೆ ವಕೀಲರಾದ ಎಸ್. ಬಾಲನ್ ಅವರನ್ನು ಟಿವಿ9 ಕನ್ನಡ ಡಿಜಿಟಲ್ ಮಾತನಾಡಿಸಿದ್ದು, ಕುತೂಹಲಕಾರಿ ಸಂಗತಿಗಳ ಬಗ್ಗೆ ಅವರು ಬೆಳಕು ಚೆಲ್ಲಿದ್ದಾರೆ.

“ಈ ಪ್ರಕರಣದಲ್ಲಿ ಸಿ.ಡಿ. ಸೆಕೆಂಡರಿ ಆಧಾರವಾಗುತ್ತದೆ. ಅಂದರೆ ಆ ದೃಶ್ಯಾವಳಿಗಳನ್ನು ಬೇರೆ ಡಿವೈಸ್​​ನಲ್ಲಿ ಸೆರೆ ಹಿಡಿದು, ಆ ನಂತರ ಸಿ.ಡಿ.ಗೆ ವರ್ಗಾವಣೆ ಮಾಡಲಾಗಿದೆ. ಅಲ್ಲಿಗೆ ಚಿತ್ರೀಕರಣ ಮಾಡಿದ ಸಲಕರಣೆ (ಡಿವೈಸ್) ಪ್ರಾಥಮಿಕ ಸಾಕ್ಷ್ಯ ಆಗುತ್ತದೆ. ಆ ಸಿ.ಡಿ.ಗೆ ದೃಶ್ಯಾವಳಿಗಳನ್ನು ಎಲ್ಲಿಂದ ರಿಟ್ರೀವ್ ಮಾಡಿಕೊಳ್ಳಲಾಯಿತು ಎಂಬುದು ಸಹ ಮುಖ್ಯವಾಗುತ್ತದೆ. ಈ ದೃಶ್ಯಾವಳಿಗಳನ್ನು ನೋಡಿದಾಗ ಇದು ಅನೈತಿಕ ಸಂಬಂಧ ಎಂಬುದು ಸ್ಪಷ್ಟವಾಗುತ್ತದೆ. ವಿವಾಹದ ಆಚೆಗಿನ ಲೈಂಗಿಕ ಸಂಬಂಧಗಳು ಅನೈತಿಕ ಎನಿಸಿಕೊಳ್ಳುತ್ತವೆ.

ಸಂತ್ರಸ್ತ ಮಹಿಳೆಯೇ ದೂರು ನೀಡಬೇಕು ಅಂತೇನೂ ಕಾನೂನು ಇಲ್ಲ:
“ಇನ್ನು ಸಂತ್ರಸ್ತ ಮಹಿಳೆಯೇ ದೂರು ನೀಡಬೇಕು ಅಂತೇನೂ ಕಾನೂನು ಇಲ್ಲ. ಈ ವಿಷಯದಲ್ಲಿ ಸಾಕ್ಷ್ಯವಾಗಿ ಸಿ.ಡಿ. ಇರುವುದರಿಂದ ಅದನ್ನೇ ಪರಿಗಣಿಸಬಹುದು. ಇನ್ನು ಈಗ ಹೇಳುತ್ತಿರುವಂತೆ ಕೆಲಸ ಕೊಡಿಸುವುದಾಗಿ ಹೇಳಿ, ಆ ಮಹಿಳೆಯನ್ನು ಸಚಿವರು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂಬ ಆರೋಪ ಬಂದಿದೆ. ಈ ರೀತಿ ಕೆಲಸ ಕೊಡಿಸ್ತೀನಿ, ನನ್ನ ಜತೆಗೆ ಸಹಕರಿಸು ಎಂದು ಒಬ್ಬ ವ್ಯಕ್ತಿ ಮತ್ತೊಬ್ಬರಿಂದ ಈ ರೀತಿಯ ಲೈಂಗಿಕ ಅನುಕೂಲ ಪಡೆದುಕೊಳ್ಳುವುದು ಭಾರತೀಯ ದಂಡ ಸಂಹಿತೆ (ಐಪಿಸಿ) 375ರ ಅಡಿಯಲ್ಲಿ ಅತ್ಯಾಚಾರಕ್ಕೆ ಸಮವಾಗುತ್ತದೆ.

“ಈ ಪ್ರಕರಣಕ್ಕೆ ಬೇಕಾದ ಶೇಕಡಾ 60ರಷ್ಟು ವಸ್ತು, ವಿಷಯ ಇದ್ದೇ ಇರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಇನ್ನು ಸಿಆರ್​ಪಿಸಿ 178ರ ಪ್ರಕಾರ, ಈ ದೃಶ್ಯಾವಳಿಗಳು ಎಲ್ಲಿ ನಡೆದವೋ ಆ ಸ್ಥಳಗಳಲ್ಲೆಲ್ಲ ದೂರು ದಾಖಲಿಸಬಹುದು. ಈ ವಿಡಿಯೋದಲ್ಲಿ ಇರುವಂತೆ ವಿವಿಧೆಡೆ ಘಟನೆ ನಡೆದಿದೆ. ಆದ್ದರಿಂದ ಈ ಪ್ರಕರಣ ಬಲವಾಗುತ್ತದೆ. ವಿಡಿಯೋದಲ್ಲಿ ಇರುವುದು ತಾವಲ್ಲ ಎನ್ನುವುದನ್ನು ವಾದಿಸಿದರೆ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸಾಚಾತನ ಪರಿಶೀಲನೆ ನಡೆಸಲಾಗುತ್ತದೆ. ಈ ಮೇಲಿನ ಎಲ್ಲ ಅಭಿಪ್ರಾಯ ಕೂಡ ಸಾಂದರ್ಭಿಕವಾಗಿ ಈಗ ಕಂಡು ಬರುತ್ತಿರುವ ಸಾಕ್ಷ್ಯಗಳಿಂದ ಹೇಳಬಹುದು,” ಎಂದು ಬಾಲನ್ ಮಾತು ಮುಗಿಸಿದರು.

ಹೆಣ್ಣಿನ ಗೌರವ ಹಾಗೂ ವೈಯಕ್ತಿಕ ಘನತೆಗೆ ಸಂಬಂಧಪಟ್ಟ ಸಂಗತಿ:
ಆದರೆ, ಈ ಪ್ರಕರಣ ಅಷ್ಟು ಸಲೀಸಿಲ್ಲ. ಏಕೆಂದರೆ ಸಂತ್ರಸ್ತೆ ನೇರವಾಗಿ ಬಂದು ದೂರು ನೀಡಿಲ್ಲ. ಆದ್ದರಿಂದ ಪೊಲೀಸರು ಆಕೆಯ ಉದ್ದೇಶ ಏನಿದೆ ಎಂಬುದನ್ನು ಪ್ರಶ್ನೆ ಮಾಡಬೇಕಾಗುತ್ತದೆ. ಏಕೆಂದರೆ, ಇದು ಒಬ್ಬ ಹೆಣ್ಣಿನ ಗೌರವ ಹಾಗೂ ವೈಯಕ್ತಿಕ ಘನತೆಗೆ ಸಂಬಂಧಪಟ್ಟ ಸಂಗತಿಯಾದ್ದರಿಂದ ಆಕೆ ಏನು ಹೇಳುವುದಕ್ಕೆ ಬಯಸುತ್ತಾರೆ ಎಂಬುದು ಸಹ ಮುಖ್ಯವಾಗುತ್ತದೆ. ತನಗೆ ಜೀವ ಬೆದರಿಕೆ ಇದೆ. ಸೂಕ್ತ ರಕ್ಷಣೆ ಒದಗಿಸಬೇಕು ಅಥವಾ ಮಾನಸಿಕವಾಗಿ ಆಘಾತವಾಗಿದೆ ಎಂದು ತಿಳಿಸಿದಲ್ಲಿ ಪೂರಕವಾದ ವಾತಾವರಣದಲ್ಲೇ ವಿಚಾರಣೆ ನಡೆಸಬೇಕು ಹಾಗೂ ಆಕೆಯ ಮೂಲಕವೇ ದೂರನ್ನು ಪಡೆಯಬೇಕು. ಅಂಥ ಸಂದರ್ಭದಲ್ಲಿ ಪ್ರಕರಣದ ಇತರ ಮಗ್ಗುಲುಗಳನ್ನು ತಡಕಾಡಲು ಶುರು ಮಾಡುತ್ತಾರೆ ಪೊಲೀಸರು ಎನ್ನುತ್ತಾರೆ ತುಮಕೂರು ಮೂಲದ ವಕೀಲರೊಬ್ಬರು.

ಇನ್ನು ದೃಶ್ಯಾವಳಿಗಳು ಸಿ.ಡಿ.ಯಲ್ಲಿವೆ. ಅದರ ಚಿತ್ರೀಕರಣವಾದ ಮೊಬೈಲ್​​ಫೋನ್ ಅಥವಾ ಡಿವೈಸ್ ವಶಪಡಿಸಿಕೊಳ್ಳಬೇಕಾಗುತ್ತದೆ. ಅದರಲ್ಲೇ ವಿಡಿಯೋ ಚಿತ್ರೀಕರಿಸಲಾಗಿದೆ ಎಂಬುದನ್ನು ಸಾಬೀತು ಮಾಡಬೇಕಿರುತ್ತದೆ. ಅದಕ್ಕೂ ಮುಂಚೆ ಎಫ್​ಐಆರ್ ಆದ ನಂತರ ಕೋರ್ಟ್​ಗೆ ಆರೋಪ ಪಟ್ಟಿ ಸಲ್ಲಿಸಬೇಕು. ಅದರಲ್ಲಿನ ಸಾಕ್ಷ್ಯಾಧಾರಗಳು ಸ್ವೀಕರಿಸಲು ಅರ್ಹವಾಗಿವೆಯೇ ಎಂಬುದನ್ನು ನ್ಯಾಯಾಧೀಶರು ತೀರ್ಮಾನಿಸುತ್ತಾರೆ.

ಆರಂಭದಲ್ಲೇ ಹೇಳಿದಂತೆ, ರಮೇಶ್ ಜಾರಕಿಹೊಳಿ ಪ್ರಕರಣದಲ್ಲಿ ಶೇಕಡಾ 60ರಷ್ಟು ವಸ್ತು- ವಿಷಯಗಳು ಇವೆ. ಇನ್ನು ಇಬ್ಬರ ಮಧ್ಯೆ ಲೈಂಗಿಕ ಸಂಬಂಧ ಇದೆಯೇ ಎಂಬುದನ್ನು ದೃಢಪಡಿಸುವಂಥ ವೈದ್ಯಕೀಯ ಪರೀಕ್ಷೆಗಳನ್ನು ಮಾಡಲಾಗುತ್ತದೆ. ತನ್ನನ್ನು ಪುಸಲಾಯಿಸಿ, ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಯುವತಿ ಆರೋಪಿಸಿದಂತೆ ಅದು ಖಾತ್ರಿಯೂ ಆದಲ್ಲಿ ಅಲ್ಲಿಂದ ಮುಂದೆ ನ್ಯಾಯಾಂಗ ವ್ಯವಸ್ಥೆ ಅಡಿಯಲ್ಲಿ ಕ್ರಮಬದ್ಧವಾಗಿ ಕಲಾಪಗಳು ನಡೆಯುತ್ತವೆ.

ಕ್ಲೋಸ್ಡ್ ಕ್ಯಾಮೆರಾ ಹೇಳಿಕೆ:
ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ಟಿವಿ9 ವೆಬ್​​ಸೈಟ್ ಜತೆ ಮಾತನಾಡಿ, ರಮೇಶ್ ಜಾರಕಿಹೊಳಿ ಅವರ ಪ್ರಕರಣದಲ್ಲಿ ಪೊಲೀಸ್ ಠಾಣೆಯಲ್ಲಿ NCR (ನಾನ್ ಕಾಗ್ನಿಸಬಲ್ ರಿಪೋರ್ಟ್) ಆಗುತ್ತದೆ. ಆದರೆ ಸಂತ್ರಸ್ತ ಮಹಿಳೆಯೇ ಎಫ್​ಐಆರ್ ಮಾಡಿಸಬೇಕು. ಇನ್ನು ಕೋರ್ಟ್​​ನಲ್ಲಿ ನ್ಯಾಯಾಧೀಶರು, ಸಂತ್ರಸ್ತೆ, ಟೈಪಿಸ್ಟ್ ಮೂರೇ ಜನ ಇರುವಂತೆ ಕ್ಲೋಸ್ಡ್ ಕ್ಯಾಮೆರಾದಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಆ ವೇಳೆಯಲ್ಲಿ ಮಹಿಳೆ ಪರವಾದ ದೂರುದಾರರು, ಇನ್​​ಸ್ಪೆಕ್ಟರ್​ಗೆ ಸಹ ಪ್ರವೇಶ ಇರುವುದಿಲ್ಲ. ಮಹಿಳೆಯ ಒಪ್ಪಿಗೆ ಇಲ್ಲದೆ ಈ ಕೇಸ್ ಮುಂದುವರಿಸುವುದು ಅಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: Dinesh Kallahalli Interview: ರಮೇಶ್​ ಜಾರಕಿಹೊಳಿ ರಾಜೀನಾಮೆಗೆ ಕಾರಣರಾದ ದಿನೇಶ್ ಕಲ್ಲಹಳ್ಳಿ ಸಂದರ್ಶನ

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು