ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು

ಇಂದು ಮಧ್ಯಾಹ್ನ ರಾಜೀನಾಮೆ ಕೊಟ್ಟ ರಮೇಶ್ ಜಾರಕಿಹೊಳಿ ಅವರ ಮುಂದಿರುವ ಮೂರು ಆಯ್ಕೆ ಯಾವುದು? ಈ ಆಯ್ಕೆ ಮಾಡುವಾಗ ಕೂಡ ರಮೇಶ ಜಾರಕಿಹೊಳಿ ತಮ್ಮ ವೈಯಕ್ತಿಕ ಲಾಭ ಬಿಟ್ಟು ಪಕ್ಷ ಉಳಿಸುವ ಕುರಿತು ವಿಚಾರ ಮಾಡಲಿಕ್ಕಿಲ್ಲ

  • ಭಾಸ್ಕರ ಹೆಗಡೆ
  • Published On - 17:58 PM, 3 Mar 2021
ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು
ರಮೇಶ್ ಜಾರಕಿಹೊಳಿ ಮತ್ತು ಬಿ.ಎಸ್.ಯಡಿಯೂಪ್ಪ

ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟರೆ ಸರಕಾರವೇ ಬಿದ್ದು ಹೋಗುತ್ತೆ ಎಂದು ಹೇಳುವ ನೇತಿಗಳ ಮಾತನ್ನು ಬಿಜೆಪಿ ಹೈಕಮಾಂಡ್ ಸುಳ್ಳು ಮಾಡಿ ರಮೇಶ್ ಅವರ ರಾಜೀನಾಮೆ ಪಡೆದಿದೆ. ಗೋಕಾಕದ ಸಾಹುಕಾರ ಎಂದೇ ಕರೆಸಿಕೊಳ್ಳುವ ರಮೇಶ್ ಜಾರಕಿಹೊಳಿ ಸಾಮಾನ್ಯ ರಾಜಕಾರಣಿ ಅಲ್ಲ. ಅಣ್ಣ ಸತೀಶ್ ಕಾಂಗ್ರೆಸ್​ನಲ್ಲಿದ್ದರೆ ರಮೇಶ ಅವರ ತಮ್ಮ ಬಾಲಚಂದ್ರ ಬಿಜೆಪಿಯ ಶಾಸಕ ಮತ್ತು ಕರ್ನಾಟಕ ಹಾಲು ಮಹಾಮಂಡಳ (ಕೆಎಮ್​ಎಫ್​)ದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನನ್ನು ತೆಗೆದರೆ ಸರಕಾರವನ್ನೇ ತೆಗೀತೀನಿ ಎನ್ನುವ ರಮೇಶ ಜಾರಕಿಹೊಳಿ ಅವರ ಮಾತು ಎಷ್ಟು ಗಟ್ಟಿ ಅಥವಾ ಎಷ್ಟು ಜೊಳ್ಳು ಈಗ ನಿರ್ಧರಿಸಲಿಕ್ಕಾಗದು.

ಬೆಂಬಲಿಗರು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು ಅಂತ , ಓರ್ವ ರಾಜಕಾರಿಣಿ ಅಥವಾ ನಾಯಕ ಆ ರೀತಿ ಪ್ರತಿಕ್ರಿಯಿಸೋದಿಲ್ಲ. ಅವರು ಹೊರಗೆ ತಮ್ಮ ಪೊಗರನ್ನು ತೋರಿಸಿದಂತೆ ಒಳಗೆ ಹಾಗಿರುವುದಿಲ್ಲ. ಅವರು ಒಳಗೊಳಗೆ ಹೆದರುತ್ತಾರೆ, ತಮ್ಮ ಕುಟುಂಬ ರಾಜಕಾರಣಕ್ಕೆ ಏನು ಆಗದಿರಲಿ ಅಂತ ಬಹಳ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹಾಗಾದರೆ ಈಗಲೂ ಹಾಗೇ ಆಗುತ್ತದೆಯೇ? ರಾಜಕೀಯದ ಒಳಹೊರಗು ಬಲ್ಲವರ ಪ್ರಕಾರ ರಮೇಶ್ ಜಾರಕಿಹೊಳಿ ಎದುರು ಈಗ ಮೂರು ಆಯ್ಕೆಗಳಿವೆ.

ತನಿಖೆ ಎದುರಿಸುವುದು
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರಿಗೆ ರಮೇಶ್ ಜಾರಕಿಹೊಳಿ ಯಾವ ಕಹಿ ಭಾವ ಇಲ್ಲ ಎಂದುಕೊಳ್ಳೋಣ. ಆಗ ಯಡಿಯೂರಪ್ಪ ದೊಡ್ಡ ಮನಸ್ಸು ಮಾಡಿ ರಮೇಶ್ ಜಾರಕಿಹೊಳಿಗೆ ಸಹಾಯ ಮಾಡಲು ಒಂದು ಅವಕಾಶ ಮಾಡಿಕೊಡಬಹುದು. ಮೊದಲನೇಯದಾಗಿ, ಸಿಐಡಿ ತನಿಖೆಗೆ ಆದೇಶಿಸುವುದು: ಯಾವ ಹುಡುಗಿ ಬಗ್ಗೆ ಜನ ಮಾತನಾಡುತ್ತಿದ್ದಾರೋ ಅವಳು ಸಿಐಡಿ ತನಿಖೆಯಲ್ಲಿ ಪಾಲ್ಗೊಳ್ಳದೇ ಇದ್ದರೆ, ಆಗ ಸಿಐಡಿ ಕೇಸು ಬಿದ್ದು ಹೋಗುವುದು ಗ್ಯಾರಂಟಿ. ಆಗ ಅವರು ತಿರುಗಿ ಮಂತ್ರಿ ಮಂಡಳದ ಒಳಗೆ ಬರಬಹುದು. ಅದೇ ರೀತಿ ಉಚ್ಚ ನ್ಯಾಯಾಲಯ ನಿವೃತ್ತ ನ್ಯಾಯಮೂರ್ತಿಯೊಬ್ಬರ ಮೂಲಕ ತನಿಖೆ ನಡೆಸಲು ಆದೇಶಿಸಬಹುದು. ಆ ತನಿಖೆಯಲ್ಲಿ ಅವರ ಮೇಲಿನ ಆರೋಪ ಒಮ್ಮೆ ಸಾಬೀತಾಗದಿದ್ದರೆ ಆಗ ಅವರು ತಿರುಗಿ ಸಂಪುಟಕ್ಕೆ ಹಿಂತಿರುಗಿಬರಬಹುದು.

ಸೋದರ ಸಂಪುಟಕ್ಕೆ ಸೇರುವುದು
ಕೆಎಮ್​ಎಫ್​ನ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರನ್ನು ಮಂತ್ರಿ ಮಂಡಳಕ್ಕೆ ಸೇರಿಸಿಕೊಳ್ಳುವುದು. ಆ ಮೂಲಕ ಜಾರಕಿಹೊಳಿ ಕುಟುಂಬಕ್ಕೆ ನ್ಯಾಯ ಕೊಡಬಹುದು. ಹಾಗೇ ಮಾಡಿದಾಗ ಯಡಿಯೂರಪ್ಪ ಸರಕಾರವನ್ನು ಉಳಿಸಿಕೊಳ್ಳಲು ಸಹಾಯ ಮಾಡಬಹುದು. ಅಥವಾ ಜಾರಕಿಹೊಳಿ ಕುಟುಂಬ ಯಡಿಯೂರಪ್ಪ ಅವರ ಸರಕಾರ ಇಳಿಸುವ ಪ್ರಯತ್ನ ಮಾಡುವ ದಾರಿಯನ್ನು ಮುಚ್ಚುಬಹುದಾಗಿದೆ. ಈ ಮೂಲಕ ಸರಕಾರವನ್ನು ಉಳಿಸಿಕೊಳ್ಳುವುದೊಂದೇ ಅಲ್ಲ, ತನ್ನ ಟೀಕಾಕಾರರನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ತಂತ್ರ ಮಾಡಬಹುದು.

ಬಲಗೈ ಬಂಟನಿಗೆ ಅವಕಾಶ
ರಮೇಶ್ ಜಾರಕಿಹೊಳಿ ಅವರ ಬಲಗೈ ಬಂಟ ಮಹೇಶ್ ಕುಮಟಳ್ಳಿ ಅವರನ್ನು ಮಂತ್ರಿಮಂಡಳಕ್ಕೆ ಸೇರಿಸುವುದು. ಆಗ ರಮೇಶ್ ಜಾರಕಿಹೊಳಿ ಅವರಿಗೆ ಸರಕಾರ ಬೀಳಿಸುವ ಗೋಜಿಗೆ ಹೋಗಲಿಕ್ಕಿಲ್ಲ. ಅಷ್ಟೇ ಅಲ್ಲ, ತಮ್ಮ ಮೇಲಿನ ಆರೋಪಕ್ಕೆ ಮುಕ್ತಿ ಸಿಗುವವರೆಗೆ ಹೊರಗಿದ್ದು ಕೇಸು ಮುಗಿದರೆ ಕುಮಟಳ್ಳಿ ಸ್ಥಾನಕ್ಕೆ ಅವರು ಬರಬಹುದು. ಆಗ ಆ ಖಾತೆ ಮತ್ತು ಸ್ಥಾನ ಅವರ ಕೈಯಿಂದ ತಪ್ಪಿದಂತಾಗುವುದಿಲ್ಲ. ಕುಮಟಳ್ಳಿ ರಮೇಶ್ ಜಾರಕಿಹೊಳಿ ಹಾಕಿದ ಗೆರೆ ದಾಟದ ಮನುಷ್ಯ. ಆದ್ದರಿಂದ ರಮೇಶ್ ಜಾರಕಿಹೊಳಿಯೇ ಭಾರೀ ಮತ್ತು ಮಧ್ಯಮ ನೀರಾವರಿ ಖಾತೆ ಇಟ್ಟುಕೊಂಡಂತಾಗುತ್ತದೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ-ಬಾಲಚಂದ್ರ ಜಾರಕಿಹೊಳಿ ಅಜ್ಞಾತ ಸ್ಥಳದಲ್ಲಿ ಚರ್ಚೆ; ಗೋಕಾಕ್​ನಲ್ಲಿ ಭುಗಿಲೆದ್ದ ಆಕ್ರೋಶ

ಇದನ್ನು ಓದಿ: ಸಚಿವ ಸ್ಥಾನಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆ; ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪಗೆ ಪತ್ರ ರವಾನೆ