Dinesh Kallahalli Interview: ರಮೇಶ್​ ಜಾರಕಿಹೊಳಿ ರಾಜೀನಾಮೆಗೆ ಕಾರಣರಾದ ದಿನೇಶ್ ಕಲ್ಲಹಳ್ಳಿ ಸಂದರ್ಶನ

Tv9 Kannada Digital Exclusive Interview: ಹಿಂದೆ ಕಾಂಗ್ರೆಸ್ ವಿರುದ್ಧ ಹೋರಾಡಿದಾಗ ಬಿಜೆಪಿ ಸಖ್ಯ ಇದೆ ಅಂತ, ಬಿಜೆಪಿ ವಿರುದ್ಧ ಹೋರಾಡಿದಾಗ ಕಾಂಗ್ರೆಸ್ ಬೆಂಬಲ ಇದೆ ಎಂದು ಹೇಳಿಕೊಳ್ಳುತ್ತಾರೆ. ನಾನು ಹೋರಾಟಗಾರ ಅಷ್ಟೇ. ಸಮಾಜದಲ್ಲಿ ಸಣ್ಣದಾಗಿಯಾದರೂ ಬದಲಾವಣೆ ತರಬೇಕು ಎಂದು ಕೆಲಸ ಮಾಡುತ್ತೇನೆ ಎನ್ನುತ್ತಾರೆ ದಿನೇಶ್ ಕಲ್ಲಹಳ್ಳಿ.

Dinesh Kallahalli Interview: ರಮೇಶ್​ ಜಾರಕಿಹೊಳಿ ರಾಜೀನಾಮೆಗೆ ಕಾರಣರಾದ ದಿನೇಶ್ ಕಲ್ಲಹಳ್ಳಿ ಸಂದರ್ಶನ
ದಿನೇಶ್ ಕಲ್ಲಹಳ್ಳಿ
Follow us
ganapathi bhat
| Updated By: guruganesh bhat

Updated on:Mar 04, 2021 | 10:16 AM

ರಮೇಶ್ ಜಾರಕಿಹೊಳಿ ಕಾಮಕಾಂಡದ ಸಿಡಿ ಬಿಡುಗಡೆಯಾದಾಗ ಮಾಧ್ಯಮಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡ ಹೆಸರು ದಿನೇಶ್​ ಕಲ್ಲಹಳ್ಳಿ ಅವರದು. ‘ಹಿಂದೊಮ್ಮೆ ಪತ್ರಕರ್ತನಾಗಿದ್ದೆ, ಈಗ ನಾನು ಕೃಷಿ ಕಾಯಕದೊಂದಿಗೆ ಸಾಮಾಜಿಕ ಹೋರಾಟಗಳನ್ನು ಮಾಡಿಕೊಂಡಿದ್ದೇನೆ’ ಎನ್ನುವ ದಿನೇಶ್ ಕಲ್ಲಹಳ್ಳಿ ‘ಟಿವಿ9 ಕನ್ನಡ ಡಿಜಿಟಲ್’​ಗೆ​ ನೀಡಿದ ವಿಶೇಷ ಸಂದರ್ಶನದ ಅಕ್ಷರ ರೂಪ ಇಲ್ಲಿದೆ. ‘ಕೆಲವರಿಗೆ ನೇರವಾಗಿ ಮುಂದೆ ಬಂದು ಹೋರಾಟ ನಡೆಸಲು ಹಿಂಜರಿಕೆ ಇರುತ್ತದೆ. ಅಂಥವರ ಪರವಾಗಿ ನಾನು ಮುಂದೆ ನಿಂತು ಹೋರಾಡುತ್ತೇನೆ. ಅಣ್ಣಾ ಹಜಾರೆ ನನಗೆ ಸ್ಫೂರ್ತಿ’ ಎನ್ನುತ್ತಾರೆ ಅವರು.

ನಿಮ್ಮ ಹೋರಾಟದ ಆರಂಭ, ಸಾಮಾಜಿಕ ಕಾರ್ಯಕರ್ತನಾಗಿ ಜೀವನ ಹೇಗೆ ಆರಂಭವಾಯಿತು? ನನ್ನ ಹೋರಾಟಗಳಿಗೆ ಅಣ್ಣಾ ಹಜಾರೆ ಸ್ಫೂರ್ತಿ. ಸುಮಾರು 2012ರಿಂದ ಇಲ್ಲಿಯವರೆಗೆ ವಿವಿಧ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇನೆ. ಅದಕ್ಕೂ ಮೊದಲು ಕೃಷಿಕ ಮತ್ತು ಪತ್ರಕರ್ತನಾಗಿಯೂ (ಸ್ಟ್ರಿಂಜರ್) ಕೆಲಸ ಮಾಡುತ್ತಿದ್ದೆ. ನನ್ನ ಊರು ರಾಮನಗರ ಜಿಲ್ಲೆ ಕನಕಪುರ ತಾಲೂಕು ಕಲ್ಲಹಳ್ಳಿ. ಈಗ 42 ವರ್ಷ ವಯಸ್ಸು.

ಅಂದರೆ ನೀವು 30 ವರ್ಷದ ಬಳಿಕ ಹೋರಾಟಕ್ಕಿಳಿದವರು.. ಸಮಾಜಕ್ಕೆ ಏನಾದರೂ ಒಳಿತನ್ನು ಮಾಡಬೇಕು, ಕಿಂಚಿತ್ ಸೇವೆ ನೀಡಬೇಕು, ಸಮಾಜದ ಬದಲಾವಣೆಗೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂಬ ಒತ್ತಾಸೆಯಿಂದ ಇಂಥ ಹೋರಾಟಗಳನ್ನು ಮಾಡುತ್ತಾ ಬಂದಿದ್ದೇನೆ. ಹಿಂದೆ ಹಲವಾರು ಪ್ರಕರಣಗಳಲ್ಲಿ ಬೆದರಿಕೆ, ಒತ್ತಡ ಎದುರಾಗಿದೆ. ದೇಶದ ಕಾನೂನಿನ ಬಗ್ಗೆ ಅಪಾರವಾದ ನಂಬಿಕೆ ಇದೆ. ಹಾಗಾಗಿ, ಧೈರ್ಯವಾಗಿ ಇದ್ದೇನೆ. ನಮ್ಮದು ಕೃಷಿ ಅವಲಂಬಿತ ಕುಟುಂಬ. ಹೋರಾಟ ಅಂದರೆ ಮನೆಯಲ್ಲಿ ಸಹಜವಾಗಿ ಆತಂಕ ಇರುತ್ತೆ. ಅದನ್ನು ಕೂಡ ದೂರ ಮಾಡಿ ಕೆಲಸ ಮಾಡುತ್ತಿದ್ದೇನೆ.

ನಿಮ್ಮ ಹೋರಾಟಗಳಲ್ಲಿ ಯಶಸ್ಸಿನ ಪ್ರಮಾಣ ಇಂತಿಷ್ಟು ಅಂತ ಹೇಳುವುದಾದರೆ? ನಾನು ಕೈಗೊಂಡ  ಹೋರಾಟಗಳಲ್ಲಿ ಶೇ 80ರಷ್ಟು ಹೋರಾಟಗಳು ಯಶಸ್ವಿಯಾಗಿದೆ. ಕಾನೂನಾತ್ಮಕ ಅಥವಾ ದಾಖಲಾತಿ ಕೊರತೆಗಳಿರುವ ಮತ್ತು ಅಧಿಕಾರಿಗಳ ಒತ್ತಡದಿಂದ ಕೆಲವು ಪ್ರಕರಣಗಳು ಮಾತ್ರ ಖುಲಾಸೆ ಆಗಿವೆ.

ರಾಜ್ಯದ ವಿವಿಧೆಡೆಯ ಸಮಸ್ಯೆಗಳು ನಿಮ್ಮ ಬಳಿಗೆ ಬರುತ್ತವೆ. ಅದು ಹೇಗೆ ಸಾಧ್ಯ? ನಾನೊಬ್ಬ ಸಾಮಾಜಿಕ ಕಾರ್ಯಕರ್ತ. ಆಧುನಿಕ ವ್ಯವಸ್ಥೆಯಲ್ಲಿ ಸಂಪರ್ಕ ಕಷ್ಟವಲ್ಲ. ಮಾಹಿತಿ ಕ್ರೋಢೀಕರಣ ಮಾಡುವುದು ಕೂಡ ಸುಲಭ. ಜತೆಗೆ, ನಾನು ಪತ್ರಕರ್ತನಾಗಿಯೂ ಕೆಲಸ ಮಾಡಿದ್ದವ. ಯಾವುದೇ ವಿಚಾರಗಳನ್ನು ಕಾನೂನು ಬದ್ಧವೋ ಎಂದು ತಿಳಿದು ಬಳಿಕ ಹೋರಾಟ ನಡೆಸುತ್ತೇನೆ.

ಇಂತಹ ಹೋರಾಟಗಳನ್ನು ಸಾಮಾನ್ಯ ಜನರೂ ಮಾಡಬಹುದು. ಸಾಮಾಜಿಕ ಕಾರ್ಯಕರ್ತರು ಎನಿಸಿಕೊಂಡ ನಿಮ್ಮಂಥವರೇ ಯಾಕೆ ಬೇಕು? ಜನರಿಗೆ ಎಲ್ಲಾ ಸಂದರ್ಭದಲ್ಲಿ ಸಿಡಿದೇಳಲು ಆಗುವುದಿಲ್ಲ. ಆದರೆ, ನಾವು ವ್ಯವಸ್ಥೆಯ ಜತೆಗೆ ಹೊಂದಾಣಿಕೆ ಆಗುವುದಿಲ್ಲ. ನೇರಾನೇರ ಹೋರಾಟ ಮಾಡುತ್ತೇವೆ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲು ಪ್ರಯತ್ನಿಸುತ್ತೇವೆ. ಜನರಿಗೆ ಧ್ವನಿಯಾಗಿ ಮುನ್ನೆಲೆಯಲ್ಲಿ ಹೋರಾಡುತ್ತೇವೆ. ಕೆಲವು ವಿಚಾರಗಳಲ್ಲಿ ಹೋರಾಟ ಮಾಡಲು ಆಗುವುದಿಲ್ಲ. ಕೆಲವೊಮ್ಮೆ ನೊಂದವರು ಕೇವಲ ಮೌಖಿಕವಾಗಿ ದೂರು ನೀಡುತ್ತಾರೆ. ಹಾಗಾದಾಗ ಹೋರಾಟಕ್ಕಿಳಿಯಲು ಆಗುವುದಿಲ್ಲ. ದಾಖಲೆ ಇದ್ದರೆ ಮಾತ್ರ ಹೋರಾಟ ಮಾಡುತ್ತೇನೆ. ಇದರಲ್ಲಿ ಖುಷಿ ಇದೆ.

ಪ್ರಸ್ತುತ ಜಾರಕಿಹೊಳಿ ಪ್ರಕರಣ ಒಂದು ಹಂತವನ್ನು ತಲುಪಿದೆ. ಸಚಿವ ಸ್ಥಾನದಿಂದ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಏನನ್ನುವಿರಿ? ಒಂದು ಕಡೆ ಸಂತೋಷವಿದೆ. ಆದರೆ ಇಷ್ಟೇ ಆದರೆ ಸಾಲದು. ಜಾರಕಿಹೊಳಿ ರಾಜೀನಾಮೆಗಿಂತಲೂ ನೊಂದವರಿಗೆ ನ್ಯಾಯ ಸಿಗಬೇಕು. ನ್ಯಾಯ ಅಂದರೆ ಕಾನೂನಿನಲ್ಲಿ ಏನು ಅವಕಾಶ ಇದೆಯೋ ಅದು. ಕಾನೂನಾತ್ಮಕವಾಗಿ ಸಾಧ್ಯವಿರುವ ಪರಿಹಾರ ನೊಂದವರಿಗೆ ಸಿಗಬೇಕು. ಈ ನೆಲೆಯಲ್ಲಿ ಹೋರಾಟ ಮುಂದುವರಿಸುತ್ತೇನೆ.

ನೊಂದ ಮಹಿಳೆ ಮಾಧ್ಯಮ ಮುಂದೆ ಬರುವುದು ತಪ್ಪು ಅನ್ನೋಣ. ಆದರೆ, ಪೊಲೀಸರ ಮುಂದೆ ಹಾಜರಾಗಬಹುದಿತ್ತಲ್ಲಾ? ಯಾಕೆ ಬರಲಿಲ್ಲ? ನಮಗೆ ಹೋರಾಟ ಮಾಡಲಾಗುವುದಿಲ್ಲ. ದಯಮಾಡಿ ಸಹಾಯ ಮಾಡಿ ಎಂದು ನೊಂದವರು ನನ್ನಲ್ಲಿ ಬಂದರು. ಅವರ ದೂರು ಹಾಗೂ ಮನವಿ ಮನ್ನಿಸಿ, ವಕೀಲರ ಸಲಹೆ ಪಡೆದು ಮುಂದಿನ ಹೆಜ್ಜೆಯಿಟ್ಟೆ. ಉನ್ನತ ಹುದ್ದೆಯಲ್ಲಿರುವವರು ಹೀಗೆ ಮಾಡಿದ್ದು ಅಕ್ರಮ. ಅದು ನನ್ನ ಗಮನಕ್ಕೆ ಬಂದ ನಂತರ ದೂರು ನೀಡಿದ್ದೇನೆ. ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಾರೆ. ಕೆಲವರಿಗೆ ನನ್ನ ಬಳಿ ಬರೋಕೂ ಭಯ ಇರುತ್ತೆ. ಇಲ್ಲಿ ಕುಟುಂಬದ ಒಬ್ಬ ಸದಸ್ಯರು ಕೂಡ ಆತಂಕ ವ್ಯಕ್ತಪಡಿಸಿದ್ದರು. ಇದೆಲ್ಲಾ ಗಮನಿಸಿ ವಿಳಂಬ ಮಾಡದೆ ದೂರು ನೀಡಿದ್ದೇನೆ.

ನೀವು ಹೀಗೆ ಮಾಡುವಲ್ಲಿ ರಾಜಕೀಯ ಕುಮ್ಮಕ್ಕು, ಷಡ್ಯಂತ್ರ ಇದೆ ಎಂದು ಹೇಳುತ್ತಿದ್ದಾರೆ.. ಹಿಂದೆ ಕಾಂಗ್ರೆಸ್ ವಿರುದ್ಧ ಹೋರಾಡಿದಾಗ ಬಿಜೆಪಿ ಸಖ್ಯ ಇದೆ ಅಂತ, ಬಿಜೆಪಿ ವಿರುದ್ಧ ಹೋರಾಡಿದಾಗ ಕಾಂಗ್ರೆಸ್ ಬೆಂಬಲ ಇದೆ ಎಂದು ಹೇಳಿಕೊಳ್ಳುತ್ತಾರೆ. ನಾನು ಈ ಹಿಂದೆ ಸಿದ್ದರಾಮಯ್ಯ ವಿರುದ್ಧವೂ ಹೋರಾಟ ಮಾಡಿದ್ದೇನೆ. ಸಿದ್ದರಾಮಯ್ಯ ಡಿನೋಟಿಫಿಕೇಷನ್ ಮಾಡಿ, ಅಕ್ರಮವಾಗಿ ಒಂದು ಜಮೀನು ಕೊಟ್ಟಿದ್ದರು. ಆ ಬಗ್ಗೆ ರಾಜ್ಯಪಾಲರ​ವರೆಗೂ ಹೋಗಿ ಹೋರಾಟ ಮಾಡಿದ್ದೇನೆ. ಎಲ್ಲಾ ಪಕ್ಷಗಳಲ್ಲೂ ಅಕ್ರಮ ಮಾಡುವವರು ಇರುತ್ತಾರೆ. ನನ್ನ ಗಮನಕ್ಕೆ ಬಂದ ವಿಷಯದ ಕುರಿತು ನಾನು ಹೋರಾಟ ಮಾಡುತ್ತೇನೆ. ನಾನು ಹೋರಾಟಗಾರ ಅಷ್ಟೆ. ವೈಯಕ್ತಿಕ ಲಾಭ ಏನೂ ಇಲ್ಲ. ಬಹಳಷ್ಟು ಜನರು ನಮಗ್ಯಾಕೆ ಉಸಾಬರಿ ಅಂತ ಇರುವಾಗ, ಸಮಾಜದಲ್ಲಿ ಸಣ್ಣದಾಗಿಯಾದರೂ ಬದಲಾವಣೆ ತರಬೇಕು ಎಂದು ಕೆಲಸ ಮಾಡುತ್ತೇನೆ.

ನೀವು ಕುಮಾರಸ್ವಾಮಿ ಅಥವಾ ಡಿ.ಕೆ. ಶಿವಕುಮಾರ್ ವಿರುದ್ಧ ಹೋರಾಟ ಮಾಡುವುದಿಲ್ಲ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತದೆ.. ಡಿ.ಕೆ. ಶಿವಕುಮಾರ್ ಮತ್ತು ಕುಮಾರಸ್ವಾಮಿ ವಿರುದ್ಧವೂ ಹೋರಾಡಿದ್ದೇನೆ. ಸೂಕ್ತ ಸಮಯ ಬಂದಾಗ ಅವುಗಳನ್ನು ತೆರೆದಿಡುತ್ತೇನೆ. ಸಂದರ್ಭ ಬಂದರೆ ಉಲ್ಲೇಖ ನೀಡುತ್ತೇನೆ. ಈಗ ಅದನ್ನು ಬಿಚ್ಚಿಡುವುದಿಲ್ಲ.

2012ರಿಂದ ಇಲ್ಲಿಯವರೆಗೆ ಯಾವೆಲ್ಲಾ ಹೋರಾಟ ಮಾಡಿದ್ದೀರಿ? ಮುಖ್ಯ ಹೋರಾಟಗಳನ್ನು ನೆನಪಿಸಿಕೊಳ್ತೀರಾ? ಉತ್ತರಹಳ್ಳಿ ಶಾಸಕರಾಗಿದ್ದ ಎಂ.ಶ್ರೀನಿವಾಸ್ ವಿರುದ್ಧ ಅಕ್ರಮ ಆಸ್ತಿ ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೆ.  ಅಂದಿನ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಎಸಿಬಿಯಲ್ಲಿ ಡಿನೋಟಿಫಿಕೇಷನ್ ಪ್ರಕರಣ ದಾಖಲಿಸಿ ಹೋರಾಟ ಮಾಡಿದ್ದೇನೆ. ಅಂದಿನ ಕಾನೂನು ಮಂತ್ರಿ ಸುರೇಶ್ ಕುಮಾರ್ ವಿರುದ್ಧ ಡಿನೋಟಿಫಿಕೇಷನ್ ದೂರು ದಾಖಲಿಸಿದ್ದೇನೆ. ಪಶ್ಚಿಮ ಘಟ್ಟದಲ್ಲಿ ಅರಣ್ಯ ಮತ್ತು ಪರಿಸರಕ್ಕೆ ಮಾರಕವಾಗಿರುವ ಕಿರುಜಲವಿದ್ಯುತ್ ಘಟಕಗಳನ್ನು ತೆರವು ಮಾಡಬೇಕು ಎಂದು ಸರ್ವೋಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ದಾಖಲು ಮಾಡಿದ್ದೇನೆ. ಆ ಕೇಸ್ ಈಗ ವಿಚಾರಣೆಯಲ್ಲಿದೆ. ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇನೆ.

ಪಿಎಪಿಎಲ್ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಸೂಚನೆಯಂತೆ ಸೆಬಿ (SEBI) ಮುಟ್ಟುಗೋಲು ಹಾಕಿಕೊಂಡಿದ್ದ ಜಮೀನನ್ನು ಕೆಲ ವಂಚಕರು ಕೆನರಾ ಬ್ಯಾಂಕ್​ಗೆ ಅಡಮಾನ ಮಾಡಿ, ಸಾಲ ಪಡೆದು ವಂಚಿಸಿದ್ದರು. ಸುಮಾರು 30 ಕೋಟಿ ರೂಪಾಯಿ ವಂಚನೆಯ ಈ ಪ್ರಕರಣದ ಬಗ್ಗೆ ಸಿಬಿಐ ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿ ಹೋರಾಡಿದ್ದೇನೆ. ಈ ಹಿಂದೆ ಗೃಹ ಸಚಿವರ ಸಲಹೆಗಾರರಾಗಿದ್ದ ಕೆಂಪಯ್ಯ ಅವರ ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ದೂರು ದಾಖಲಿಸಿ ಹೋರಾಡಿದ್ದೇನೆ. ಕೆಐಡಿಬಿಯ ಅಂದಿನ ಆಯುಕ್ತ, ಹಿರಿಯ ಅಧಿಕಾರಿ ಚಕ್ರವರ್ತಿ ಮೋಹನ್, ಕಾನೂನು ಬಾಹಿರವಾಗಿ ಸಂಸ್ಥೆಗೆ ನಷ್ಟ ಉಂಟುಮಾಡಿದ್ದಾರೆ ಎಂದು ಲೋಕಾಯುಕ್ತದಲ್ಲಿ ಎಫ್​ಐಆರ್ ದಾಖಲಿಸಿದ್ದೇನೆ.

ಬೆಲೆಕೇರಿ ಬಂದರು ಹಗರಣದ ಆರೋಪಿ ದಿನೇಶ್ ಎಂಬ ವ್ಯಕ್ತಿಗೆ ಅರಣ್ಯ ಮತ್ತು ಪರಿಸರ ರಕ್ಷಣೆ ವಿಚಾರದಲ್ಲಿ ಯಾವುದೇ ಅನುಭವ ಇಲ್ಲದೇ ಇದ್ದರೂ, ಆತನನ್ನು ಕಾನೂನು ಬಾಹಿರವಾಗಿ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ನೇಮಕ ಮಾಡಿದ್ದಾರೆ ಎಂದು ಅದರ ವಿರುದ್ಧ ಹೋರಾಟ ಮಾಡಿದ್ದೇನೆ. ಇತ್ತೀಚೆಗೆ, ಚಿಕ್ಕಮಗಳೂರಿನ ಅರಣ್ಯ ಪ್ರದೇಶದಲ್ಲಿ ಇರುವ ಸುಮಾರು 300 ಮರಗಳನ್ನು ಅಕ್ರಮವಾಗಿ ಕಡಿದು ಮಾರಾಟ ಮಾಡಿದ್ದರು. ಪಶ್ಚಿಮ ಘಟ್ಟದಲ್ಲಿ ನಡೆದ ಈ ಘಟನೆಯ ವಿರುದ್ಧ ಹೋರಾಟ ಮಾಡಿ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಮಾರು 8 ಅರಣ್ಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿಸಿದ್ದೇನೆ.

ಎಲ್ಲಾ ಹೋರಾಟ ನಡೆಸಲು ಭಗವಂತ ಶಕ್ತಿ ಕೊಟ್ಟಿದ್ದಾನೆ. ಎಲ್ಲವೂ ಕಾನೂನಾತ್ಮಕ ಹೋರಾಟವಾಗಿದೆ. ಯಾವ ಹೋರಾಟವನ್ನು ಕೂಡ ಅರ್ಧಕ್ಕೆ ಮೊಟಕುಗೊಳಿಸಲ್ಲ. ನಿಲ್ಲಿಸುವುದಿಲ್ಲ. ಧೈರ್ಯವಾಗಿ ಮುನ್ನುಗ್ಗಿ ತಾರ್ಕಿಕ ಅಂತ್ಯ ಕೊಡುತ್ತೇನೆ.

(ಸಂದರ್ಶನ: ಗಣಪತಿ ದಿವಾಣ)

ಇದನ್ನೂ ಓದಿ: ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು

ಇದನ್ನೂ ಓದಿ: ರಮೇಶ್ ಜಾರಕಿಹೊಳಿಯವರ ಇನ್ನೂ ಒಂದು ವಿಡಿಯೋ ಇದೆ; ಪ್ರಭಾವಿ ಹುದ್ದೆಯಲ್ಲಿರುವವರ ವಿಡಿಯೋ ಕೂಡ ಇದೆ -ದಿನೇಶ್ ಕಲ್ಲಹಳ್ಳಿ

Published On - 10:32 pm, Wed, 3 March 21