ಸಿನಿಮಾ ಸೆಟ್ನಲ್ಲಿ ಅನುಚಿತ ವರ್ತನೆ; ಶೈನ್ ಟಾಮ್ ಚಾಕೋ ಮೇಲೆ ಮತ್ತೋರ್ವ ನಟಿ ಆರೋಪ
ಖ್ಯಾತ ನಟ ಶೈನ್ ಟಾಮ್ ಚಾಕೋ ಅವರು ಮಾಡಿಕೊಂಡಿರುವ ಅವಾಂತರಗಳು ಒಂದೆರಡಲ್ಲ. ಅವರ ಮೇಲೆ ನಟಿಯರು ಗಂಭೀರ ಆರೋಪ ಹೊರಿಸುತ್ತಿದ್ದಾರೆ. ಇದರಿಂದ ಅವರಿಗೆ ಸಂಕಷ್ಟ ಎದುರಾಗುತ್ತಿದೆ. ನಟಿ ವಿನ್ಸಿ ಅಲೋಶಿಯಸ್ ಬಳಿಕ ನಟಿ ಅಪರ್ಣಾ ಜಾನ್ ಕೂಡ ಶೈನ್ ಟಾಮ್ ಚಾಕೋ ಅವರ ವರ್ತನೆ ಬಗ್ಗೆ ತಕರಾರು ತೆಗೆದಿದ್ದಾರೆ.

ಮಲಯಾಳಂ ಚಿತ್ರರಂಗದ ಹೆಸರಾಂತ ನಟ ಶೈನ್ ಟಾಮ್ ಚಾಕೋ (Shine Tom Chacko) ಮೇಲೆ ಸರಣಿ ಆರೋಪಗಳು ಕೇಳಿಬರುತ್ತಿವೆ. ಶೂಟಿಂಗ್ ವೇಳೆ ಅವರು ಮಾದಕ ವಸ್ತು ಸೇವನೆ ಮಾಡುತ್ತಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ, ಅವರು ಮಹಿಳೆಯರ ಜೊತೆ ಅನುಚಿತವಾಗಿ ನಡೆದುಕೊಳ್ಳುತ್ತಾರೆ ಎಂಬ ಆರೋಪ ಕೂಡ ಇದೆ. ಕೆಲವೇ ದಿನಗಳ ಹಿಂದೆ ನಟಿ ವಿನ್ಸಿ ಅಲೋಶಿಯಸ್ (Vincy Aloshious) ಅವರು ಈ ಬಗ್ಗೆ ಮಾತನಾಡಿದ್ದರು. ಈಗ ಮತ್ತೋರ್ವ ನಟಿ ಕೂಡ ಅದೇ ರೀತಿ ಹೇಳಿದ್ದಾರೆ. ಹೌದು, ನಟಿ ಅಪರ್ಣಾ ಜಾನ್ (Aparna John) ಅವರು ಶೈನ್ ಟಾಮ್ ಚಾಕೋ ಮೇಲೆ ಕೆಲವು ಆರೋಪ ಹೊರಿಸಿದ್ದಾರೆ.
ಅಪರ್ಣಾ ಜಾನ್ ಅವರು ಸದ್ಯ ಆಸ್ಟ್ರೇಲಿಯಾದಲ್ಲಿ ಇದ್ದಾರೆ. ಸುದ್ದಿ ವಾಹಿನಿಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಶೈನ್ ಟಾಮ್ ಚಾಕೋ ಬಗ್ಗೆ ವಿನ್ಸಿ ಅಲೋಶಿಯಸ್ ಹೇಳಿರುವುದು ಶೇಕಡ 100ರಷ್ಟು ನಿಜ. ಅವರು ತುಂಬ ಅಸಹಜವಾಗಿ ನಡೆದುಕೊಳ್ಳುತ್ತಾರೆ’ ಎಂದು ಅಪರ್ಣಾ ಜಾನ್ ಹೇಳಿದ್ದಾರೆ. ಈ ಹೇಳಿಕೆಯಿಂದ ಶೈನ್ ಟಾಮ್ ಚಾಕೋ ಮೇಲೆ ಜನರಿಗೆ ಇರುವ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ.
‘ನಾವು ಮ್ಯಾಚ್ ಮಾಡಲು ಸಾಧ್ಯವಾದಷ್ಟು ಎನರ್ಜಿಯನ್ನು ಅವರು ಪ್ರದರ್ಶಿಸುತ್ತಿದ್ದರು. ನಿರಂತರವಾಗಿ ಓಡಾಡುತ್ತ, ಚಡಪಡಿಸುತ್ತಿದ್ದರು. ಅವರ ನಡವಳಿಗೆ ಲಾಜಿಕ್ ಇರಲಿಲ್ಲ. ಮಹಿಳೆಯರು ಇದ್ದಾಗ ಅವರ ಮಾತುಗಳು ಅಸಭ್ಯವಾಗಿ ಇರುತ್ತಿದ್ದವು. ಅವರ ವರ್ತನೆಯಿಂದ ನನಗೆ ತೊಂದರೆ ಆಯಿತು. ಅದರ ಬಗ್ಗೆ ನಾನು ಆಂತರಿಕ ದೂರು ಸಮಿತಿಗೆ ಮಾಹಿತಿ ನೀಡಿದೆ’ ಎಂದು ಅಪರ್ಣಾ ಜಾನ್ ಅವರು ಹೇಳಿದ್ದಾರೆ.
ಸಿನಿಮಾದ ಶೂಟಿಂಗ್ ವೇಳೆ ಶೈನ್ ಟಾಮ್ ಚಾಕೋ ಅವರು ಮಾದಕ ದ್ರವ್ಯ ಸೇವಿಸುತ್ತಾರೆ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರು ಉಳಿದುಕೊಂಡಿದ್ದ ಹೋಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಆಗ ಶೈನ್ ಟಾಮ್ ಚಾಕೋ ಅವರು ತಪ್ಪಿಸಿಕೊಂಡು ಓಡಿ ಹೋಗಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ನಟ ಶೈನ್ ಟಾಮ್ ಚಾಕೋ ಬಂಧನ; ಕೆಲವೇ ಗಂಟೆಗಳಲ್ಲಿ ಸಿಕ್ತು ಜಾಮೀನು
ಶೈನ್ ಟಾಮ್ ಚಾಕೋ ಮಲಯಾಳಂ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಅವರಿಗೆ ತುಂಬ ಬೇಡಿಕೆ ಇದೆ. ಆದರೆ ದುರ್ನಡತೆಯ ಕಾರಣದಿಂದ ಅವರು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.