‘ಕೆಜಿಎಫ್ 2’ ಜೋಡಿನ ಬಾಲಿವುಡ್ನಲ್ಲಿ ಒಟ್ಟಿಗೆ ತರಲು ನಡೆದಿತ್ತು ಪ್ಲ್ಯಾನ್; ಕಾಡಿತ್ತು ಆ ಒಂದು ಭಯ
‘ಕೆಜಿಎಫ್ 2’ ಚಿತ್ರದ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಬಾಲಿವುಡ್ ರಾಮಾಯಣದಲ್ಲಿ ಒಟ್ಟಿಗೆ ನಟಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಶ್ರೀನಿಧಿ ಅವರಿಗೆ ಸೀತೆಯ ಪಾತ್ರ ನೀಡುವ ಯೋಜನೆ ಇತ್ತು. ಆದರೆ ಅದು ಫಲಿಸಲಿಲ್ಲ. ಬಳಿಕ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀನಿಧಿ ಅವರು ಈಗ 'ಹಿಟ್ 3' ಚಿತ್ರದಲ್ಲಿ ನಟಿಸುತ್ತಿದ್ದಾರೆ.

‘ಕೆಜಿಎಫ್ 2’ ಚಿತ್ರದಲ್ಲಿ ಯಶ್ (Yash) ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ರಾಕಿಭಾಯ್ನ ಪತ್ನಿ ಪಾತ್ರದಲ್ಲಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದರು. ಈ ಜೋಡಿಯನ್ನು ಮತ್ತೆ ತೆರೆಮೇಲೆ ಒಂದು ಮಾಡುವ ಪ್ಲ್ಯಾನ್ ಬಾಲಿವುಡ್ನಲ್ಲಿ ನಡೆದಿತ್ತು. ಹಾಗಂತ ಅಲ್ಲಿಯೂ ಇವರನ್ನು ಹೀರೋ-ಹೀರೋಯಿನ್ ಆಗಿ ಮಾಡುವ ಆಲೋಚನೆ ಇರಲಿಲ್ಲ. ಯಶ್ ನೆಗೆಟಿವ್ ಶೇಡ್ನ ಪಾತ್ರದಲ್ಲಿ ಕಾಣಿಸಿಕೊಂಡರೆ, ಶ್ರೀನಿಧಿ ಅವರದ್ದು ಹೀರೋಯಿನ್ ಪಾತ್ರ. ಆದರೆ, ಪ್ಲ್ಯಾನ್ ಸಕ್ಸಸ್ ಆಗಲೇ ಇಲ್ಲ. ಹಾಗಾದರೆ ಯಾವುದು ಆ ಸಿನಿಮಾ? ‘ರಾಮಾಯಣ’.
ಶ್ರೀನಿಧಿ ಶೆಟ್ಟಿ ಅವರು ‘ಹಿಟ್ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಮೇ 1ರಂದು ಚಿತ್ರ ತೆರೆಗೆ ಬರಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಇದೆ. ಈ ಚಿತ್ರಕ್ಕೆ ನಾನಿ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ‘ರಾಮಾಯಣ’ ಸಿನಿಮಾದಲ್ಲಿ ಸೀತಾ ಮಾತೆಯ ಪಾತ್ರದ ಆಫರ್ ಮೊದಲು ಹೋಗಿದ್ದು ಶ್ರೀನಿಧಿ ಶೆಟ್ಟಿಗೆ ಅನ್ನೋದು ವಿಶೇಷ.
‘ಕೆಜಿಎಫ್ 2’ ಚಿತ್ರದಲ್ಲಿ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಅವರ ಪರ್ಫಾರ್ಮೆನ್ಸ್ನ ಬಾಲಿವುಡ್ ಮಂದಿ ನೋಡಿದ್ದಾರೆ. ಯಶ್ ಅವರು ರಾವಣನ ಪಾತ್ರ ಮಾಡುತ್ತಾರೆ ಎಂದಾಗ, ಶ್ರೀನಿಧಿ ಶೆಟ್ಟಿಗೆ ಸೀತೆಯ ಪಾತ್ರ ಕೊಡುವ ಬಗ್ಗೆ ಚರ್ಚೆ ನಡೆದಿದೆ. ಶ್ರೀನಿಧಿ ಶೆಟ್ಟಿ ಅವರು ಆಡಿಷನ್ ಕೊಟ್ಟು, ಸ್ಕ್ರೀನ್ ಟೆಸ್ಟ್ನಲ್ಲೂ ಭಾಗಿ ಆದರು. ಮೂರು ದೃಶ್ಯಗಳಿಗೆ ಅವರು ತಯಾರಿ ಮಾಡಿಕೊಂಡಿದ್ದರು. ಅವರ ಸ್ಕ್ರೀನ್ ಟೆಸ್ಟ್ ನೋಡಿ ತಂಡದವರು ಖುಷಿ ಆಗಿದ್ದರು. ಆದರೆ, ಅವರಿಗೆ ಒಂದು ಭಯ ಕಾಡಿತ್ತು.
‘ಕೆಜಿಎಫ್ 2’ ಚಿತ್ರದಲ್ಲಿ ನಟಿಸಿದ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಜೋಡಿ ಪ್ರೇಕ್ಷಕರಿಗೆ ಸಾಕಷ್ಟು ಇಷ್ಟ ಆಯಿತು. ಈಗ ‘ರಾಮಾಯಣ’ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ ನಿಜ. ಆದರೆ, ವೈರಿಗಳಾಗಿ. ಇದನ್ನು ತಂಡದವರು ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಹೀಗಾಗಿ, ಸಿನಿಮಾ ತಂಡದವರು ಈ ಆಲೋಚನೆಯನ್ನು ಕೈ ಬಿಟ್ಟರು ಎನ್ನಲಾಗಿದೆ.
ಇದನ್ನೂ ಓದಿ: ‘ಕೆಜಿಎಫ್ 2’ ಬಳಿಕ ಶ್ರೀನಿಧಿ ಶೆಟ್ಟಿ ಸೈಲೆಂಟ್; ಈಗ ಕನ್ನಡದ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ
ಆ ಬಳಿಕ ಸಿನಿಮಾ ತಂಡದವರು ಸಾಯಿ ಪಲ್ಲವಿ ಅವರನ್ನು ಅಪ್ರೋಚ್ ಮಾಡಿದರು. ಅವರ ಸ್ಕ್ರಿನ್ ಟೆಸ್ಟ್ನಲ್ಲಿ ಪಾಸ್ ಆದರು. ಶ್ರೀನಿಧಿ ಕೂಡ ಸಾಯಿ ಪಲ್ಲವಿ ಅವರ ಆಯ್ಕೆಯನ್ನು ಬಾಯ್ತುಂಬ ಹೊಗಳಿದ್ದಾರೆ. ‘ಹಿಟ್ 3’ ಮೂಲಕ ಶ್ರೀನಿಧಿ ಟಾಲಿವುಡ್ಗೆ ಕಾಲಿಟ್ಟಿದ್ದು ಗೆಲ್ಲುವ ಭರವಸೆಯಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








