ಡ್ರಗ್ಸ್ ಬಳಕೆ, ನಟಿಗೆ ಕಿರುಕುಳ ಖ್ಯಾತ ನಟನ ಮೇಲೆ ನಿಷೇಧ ಹೇರುವ ಸಾಧ್ಯತೆ
Shine Tom Chako: ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಟ ಶೈನ್ ಟಾಮ್ ಚಾಕೊ. ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ ಇದೀಗ ಮಲಯಾಳಂ ಚಿತ್ರರಂಗದ ಶೈನ್ ಟಾಮ್ ಚಾಕೊ ಮೇಲೆ ನಿಷೇಧ ಹೇರಲು ಮುಂದಾಗಿದೆ. ನಟಿಯೊಬ್ಬರಿಗೆ ಕಿರುಕುಳ ಹಾಗೂ ಸಿನಿಮಾ ಸೆಟ್ನಲ್ಲಿ ಮಾದಕ ವಸ್ತು ಸೇವಿಸಿದ ಆರೋಪ ಅವರ ಮೇಲಿದೆ.

ಮಲಯಾಳಂ (Malayalam) ಚಿತ್ರರಂಗ ಹಲವು ಅತ್ಯುತ್ತಮ ಕಲಾವಿದರನ್ನು ಭಾರತೀಯ ಚಿತ್ರರಂಗಕ್ಕೆ ನೀಡಿದೆ. ಅದರಲ್ಲಿ ಶೈನ್ ಟಾಮ್ ಚಾಕೋ ಸಹ ಒಬ್ಬರು. ಆದರೆ ಇದೀಗ ಶೈನ್ ಟಾಮ್ ಚಾಕೊ ಮೇಲೆ ಮಲಯಾಳಂ ಚಿತ್ರರಂಗ ನಿಷೇಧ ಹೇರುವ ಸಾಧ್ಯತೆ ಇದೆ. ಹಲವಾರು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿರುವ ಶೈನ್ ಟಾಮ್ ಚಾಕೊ, ಇದೀಗ ನಿಜ ಜೀವನದಲ್ಲಿಯೂ ವಿಲನ್ಗಿರಿ ಮೆರೆದಿದ್ದಾರೆ. ಸಿನಿಮಾ ಸೆಟ್ನಲ್ಲಿ ಸಹ ನಟಿಗೆ ಕಿರುಕುಳ ನೀಡಿರುವ ಜೊತೆಗೆ ಸೆಟ್ನಲ್ಲಿಯೇ ಡ್ರಗ್ಸ್ ತೆಗೆದುಕೊಂಡಿರುವ ಬಗ್ಗೆ ದೂರು ದಾಖಲಾಗಿದೆ. ಪೊಲೀಸರು ಸಹ ಟಾಮ್ ಚಾಕೊ ಬಂಧನಕ್ಕೆ ಯತ್ನಿಸುತ್ತಿದ್ದಾರೆ.
ಮಲಯಾಳಂನ ‘ಸೂತ್ರವಾಕ್ಯಂ’ ಹೆಸರಿನ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು ಸಿನಿಮಾದಲ್ಲಿ ಶೈನ್ ಟಾಮ್ ಚಾಕೊ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ನಟಿ ವಿನ್ಶಿ ಅಲೋಷಿಯಸ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಇದೀಗ ನಟಿ ವಿನ್ಶಿ ಅಲೋಷಿಯಸ್, ಕೇರಳ ಫಿಲಂ ಛೇಂಬರ್, ಕೇರಳ ಸಿನಿಮಾ ಕಲಾವಿದರ ಸಂಘ ಮತ್ತು ಇನ್ನೂ ಕೆಲವು ಸಿನಿಮಾ ಸಂಬಂಧಿತ ಸಂಘ-ಸಂಸ್ಥೆಗಳಿಗೆ ದೂರು ನೀಡಿದ್ದಾರೆ. ಸಿನಿಮಾ ಸೆಟ್ನಲ್ಲಿ ಟಾಮ್ ಚಾಕೊ ತಮ್ಮೊಟ್ಟಿಗೆ ಅನುಚಿತವಾಗಿ ವರ್ತಿಸಿದ್ದಾರೆಂದು ಹಾಗೂ ಸೆಟ್ನಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆಂದು ನಟಿ ಆರೋಪ ಮಾಡಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ನಟಿ ವಿನ್ಶಿ ಅಲೋಷಿಯಸ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋನಲ್ಲಿ ಶೈನ್ ಟಾಮ್ ಚಾಕೊ ಹೆಸರು ಹೇಳದೆ ನಟರೊಬ್ಬರು ತಮ್ಮೊಟ್ಟಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದಿದ್ದರು. ನನಗೆ ಮತ್ತು ಸಹನಟಿಗೆ ಆ ನಟ ಕಿರುಕುಳ ನೀಡಿದ್ದಾರೆ. ನನ್ನ ಬಟ್ಟೆ ಸರಿಯಿಲ್ಲದರ ಬಗ್ಗೆ ನಾನು ವಾದ ಮಾಡುತ್ತಿದ್ದಾಗ ನಾನು ಅದನ್ನು ಸರಿ ಮಾಡುತ್ತೇನೆ ಎಂದು ಎಲ್ಲರ ಎದುರು ಕೆಟ್ಟದಾಗಿ ಮಾತನಾಡಿದರು ಎಂದು ಅವರು ಹೇಳಿದ್ದರು. ಅಲ್ಲದೆ, ಅವರು ಸಿನಿಮಾ ಸೆಟ್ನಲ್ಲಿ ಬಿಳಿ ಬಣ್ಣದ ಪೌಡರ್ ಅನ್ನು ಸೇವಿಸುವುದನ್ನು ನಾನು ನೋಡಿದ್ದೇನೆ ಎಂದು ಸಹ ಹೇಳಿದ್ದರು. ವಿಡಿಯೋನಲ್ಲಿ ಶೈನ್ ಟಾಮ್ ಚಾಕೊ ಅವರ ಹೆಸರನ್ನು ನಟಿ ಹೇಳಿರಲಿಲ್ಲ. ಆದರೆ ಆ ಬಳಿಕ ಟಾಮ್ ಚಾಕೊ ಅವರ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ:ನಟಿಗೆ ಕಿರುಕುಳ, ಡ್ರಗ್ಸ್ ಬಳಕೆ, ಪೊಲೀಸರ ದಾಳಿ ವೇಳೆ ಪರಾರಿಯಾದ ಜನಪ್ರಿಯ ನಟ
ಅದರ ಬೆನ್ನಲ್ಲೆ ಪೊಲೀಸರು ಟಾಮ್ ಚಾಕೊ ಉಳಿದುಕೊಂಡಿದ್ದ ಹೋಟೆಲ್ ಮೇಲೆ ದಾಳಿ ಮಾಡಿದಾಗ ಟಾಮ್ ಚಾಕೊ ಅಲ್ಲಿಂದ ಪರಾರಿ ಆಗಿದ್ದಾರೆ. ಟಾಮ್ ಚಾಕೊ ಕಿಟಕಿ ಹಾರಿ, ಮೆಟ್ಟಿಲು ಇಳಿದು ಓಡಿ ಹೋಗುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ. ಆ ಮೂಲಕ ಟಾಮ್ ಚಾಕೊ ಡ್ರಗ್ಸ್ ಸೇವನೆ ಆರೋಪ ಬಹುತೇಕ ಖಾತ್ರಿ ಆದಂತಾಗಿದ್ದು, ಇದೀಗ ಕೇರಳ ಚಿತ್ರರಂಗ ಟಾಮ್ ಚಾಕೊ ಅವರ ಮೇಲೆ ನಿಷೇಧ ಹೇರುವ ಸಾಧ್ಯತೆ ಇದೆ. ಕಳೆದ ವರ್ಷ ಮಲಯಾಳಂ ಚಿತ್ರರಂಗದ ಮೂವರು ನಟರ ಮೇಲೆ ಅಶಿಸ್ತು ಆರೋಪ ಹೊರಿಸಿ ನಿಷೇಧ ಹೇರಲಾಗಿತ್ತು. ಅವರಲ್ಲಿ ಕೆಲವರು ಸೆಟ್ನಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಆರೋಪವೇ ಪ್ರಧಾನವಾಗಿತ್ತು. ಇದೀಗ ಟಾಮ್ ಚಾಕೋಗೂ ಸಹ ನಿಷೇಧದ ಬಿಸಿ ತಟ್ಟುವ ಸಾಧ್ಯತೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ