ಮಚ್ಚು ಹಿಡಿದು ರೀಲ್ಸ್, ಮಾಜಿ ಬಿಗ್ಬಾಸ್ ಸ್ಪರ್ಧಿ ರಜತ್ಗೆ ಜಾಮೀನು
Rajath Controversy: ಬಿಗ್ಬಾಸ್ ಮಾಜಿ ಸ್ಪರ್ಧಿ ರಜತ್, ಮಚ್ಚು ಬಳಸಿ ರೀಲ್ಸ್ ಮಾಡಿದ ಪ್ರಕರಣದಲ್ಲಿ ನಿನ್ನೆಯಷ್ಟೆ ಮತ್ತೆ ಬಂಧನಕ್ಕೆ ಒಳಗಾಗಿದ್ದರು. ಅವರಿಗೆ ಮತ್ತೊಮ್ಮೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆದರೆ ಒಂದೇ ದಿನಕ್ಕೆ ಅವರಿಗೆ ಜಾಮೀನು ದೊರೆತಿದೆ. 24 ನೇ ಎಸಿಜೆಎಂ ಕೋರ್ಟ್ ರಜತ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

ಮಾಜಿ ಬಿಗ್ಬಾಸ್ (Bigg Boss) ಸ್ಪರ್ಧಿ ರಜತ್ (Rajath) ಹಾಗೂ ವಿನಯ್ ಗೌಡ (Vinay Gowda) ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣದಲ್ಲಿ ಕೆಲ ದಿನಗಳ ಹಿಂದೆಯಷ್ಟೆ ಜೈಲು ಪಾಲಾಗಿದ್ದರು. ಆ ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಜಾಮೀನು ನೀಡುವ ಸಮಯದಲ್ಲಿ ಹೂಡಲಾಗಿದ್ದ ಷರತ್ತುಗಳನ್ನು ಪಾಲನೆ ಮಾಡಿಲ್ಲವೆಂದು ರಜತ್ ಅನ್ನು ನಿನ್ನೆಯಷ್ಟೆ (ಏಪ್ರಿಲ್ 16) ಪೊಲೀಸರು ಮತ್ತೆ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ರಜತ್ಗೆ ಏಪ್ರಿಲ್ 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ ಇಂದು ರಜತ್ಗೆ ಜಾಮೀನು ನೀಡಲಾಗಿದೆ.
ನಿನ್ನೆ ಬೆಂಗಳೂರಿನ 24ನೇ ಎಸಿಜೆಎಂ ನ್ಯಾಯಾಲಯದ ಮುಂದೆ ರಜತ್ ಅನ್ನು ಹಾಜರುಪಡಿಸಲಾಗಿತ್ತು. ಕೋರ್ಟ್ ನ ಆದೇಶ ಉಲ್ಲಂಘನೆ ಯನ್ನು ಮೊದಲ ದೇಟ್ ನಲ್ಲಿ ಮಾಡಿದ್ದಾರೆ ಇವರಿಗೆ ಬೇಲ್ ನೀಡುವಾಗ ಹಾಕಿದ್ದ ಕಂಡಿನ್ ಅನ್ನೆ ಉಲ್ಲಂಘನೆ ಮಾಡಿದ್ದಾರೆ, ನ್ಯಾಯಾಲಯಕ್ಕೆ ಹಾಜಾರಾಗಬೇಕು ಎಂದು ಷರತ್ತಿನಲ್ಲಿ ಇತ್ತು, ಅದನ್ನು ಪಾಲಿಸುವುದಾಗಿ ಹೇಳಿದ್ದರು. ಆದರೆ ಪಾಲಿಸಿಲ್ಲ ಎಂದು ಪೊಲೀಸರ ಪರ ವಕೀಲರು ನಿನ್ನೆ ವಾದ ಮಂಡಿಸಿದ್ದರು. ಇದೇ ಕಾರಣಕ್ಕೆ ಆರೋಪಿಗೆ ಏಪ್ರಿಲ್ 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಆದರೆ ಇಂದು (ಏಪ್ರಿಲ್ 17) 24 ನೇ ಎಸಿಜೆಎಂ ಕೋರ್ಟ್ನ ಮುಂದೆ ಅರ್ಜಿ ಹಾಕಿದ ರಜತ್ ಪರ ವಕೀಲರು, ವಾದ ಮಂಡಿಸಿ ರಜತ್ಗೆ ಜಾಮೀನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಜತ್, ಇಂದೇ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗುವ ಸಾಧ್ಯತೆ ಇದೆ. ಇಂದು ಬಿಡುಗಡೆ ಆಗದೇ ಇದ್ದರೆ ನಾಳೆ ಗುಡ್ಫ್ರೈಡೆ, ಆ ಬಳಿಕ ಶನಿವಾರ, ಭಾನುವಾರ ಇರುವ ಕಾರಣ ಬಿಡುಗಡೆ ತಡವಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ:ರಜತ್ ನನ್ನ ತಮ್ಮ, ನಾನು ಎಂದಿಗೂ ಬಿಟ್ಟುಕೊಡಲ್ಲ: ವಿನಯ್ ಗೌಡ ನೇರ ಮಾತು
ಬಿಗ್ಬಾಸ್ ಕನ್ನಡ ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಅವರುಗಳು ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಅಪ್ಲೋಡ್ ಮಾಡಿದ್ದರು. ರೀಲ್ಸ್ನಲ್ಲಿ ಮಚ್ಚು ಹಿಡಿದುಕೊಂಡು ರೌಡಿಗಳ ರೀತಿ ಫೋಸು ಕೊಟ್ಟಿದ್ದರು. ಇದನ್ನು ಗಮನಿಸಿದ್ದ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಇಬ್ಬರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ರೀಲ್ಸ್ನಲ್ಲಿ ಬಳಸಲಾಗಿರುವ ಮಚ್ಚಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂತು. ಕೆಲ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರೂ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಹೊಂದಿದರು.
ಆ ಬಳಿಕ ನಡೆದ ಪ್ರಕರಣದ ಮೊದಲ ವಿಚಾರಣೆಗೆ ರಜತ್ ಗೈರಾದರು. ವಿನಯ್ ಹಾಜರಾದರು. ವಿನಯ್ಗೆ 500 ರೂಪಾಯಿ ದಂಡ ಹಾಕಿದ ನ್ಯಾಯಾಧೀಶರು, ಷರತ್ತು ಉಲ್ಲಂಘಿಸಿದ ರಜತ್ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದರು. ಆದರೆ ಒಂದೇ ದಿನಕ್ಕೆ ಮತ್ತೆ ಅವರಿಗೆ ಜಾಮೀನು ದೊರೆತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ