Future Journalists : ‘ಜನ ಗುರುತಿಸುವುದು ಸಾಧಕರನ್ನು ಮಾತ್ರ, ಕಷ್ಟದಲ್ಲಿ ಸಾಯುತ್ತಿರುವವರನ್ನಲ್ಲ!’

Caste Politics : ಅಪ್ಪ ಅಮ್ಮ ಇದ್ದರೂ ಶಶಿಕಲಾ ತಳವಾರ ಬಾಲ್ಯದಿಂದ ಈತನಕವೂ ಬಾಗಲಕೋಟೆಯ ಜಂಬಲದಿನ್ನಿ ಗ್ರಾಮವನ್ನು ತೊರೆದಿರುವುದು ಏಕೆ ಮತ್ತು ತಾನು ಪತ್ರಕರ್ತೆಯೇ ಆಗಬೇಕೆಂದು ಪಟ್ಟು ಹಿಡಿದಿರುವುದು ಏಕೆ? ಓದಿ. 

Future Journalists : ‘ಜನ ಗುರುತಿಸುವುದು ಸಾಧಕರನ್ನು ಮಾತ್ರ, ಕಷ್ಟದಲ್ಲಿ ಸಾಯುತ್ತಿರುವವರನ್ನಲ್ಲ!’
ಭವಿಷ್ಯದ ಪತ್ರಕರ್ತೆ ಶಶಿಕಲಾ ತಳವಾರ
Follow us
ಶ್ರೀದೇವಿ ಕಳಸದ
|

Updated on: Sep 29, 2021 | 7:20 PM

Future Journalists : ಜೀವನೋಪಾಯಕ್ಕೆಂದು ಮಾಡುವ ಕೆಲಸದ ವಿಧಾನ ಬೇರೆ. ಇಷ್ಟಪಟ್ಟು ತೊಡಗಿಕೊಳ್ಳುವ ಕೆಲಸದ ಗತಿಯೇ ಬೇರೆ. ಎರಡನೇ ಆಯ್ಕೆ ತುಸು ಕಷ್ಟದ್ದು, ನಿರಂತರ ಸವಾಲಿನದು. ಅಲ್ಲಿ ತನ್ನ ಹೊಟ್ಟೆ, ಬಟ್ಟೆ, ನೆತ್ತಿಗೂ ಮೀರಿದ ಆಲೋಚನೆಗಳು, ಆಶಯಗಳು ಸದಾ ಮಿಸುಕಾಡುತ್ತಿರುತ್ತವೆ. ಅಂಥ ಕ್ಷೇತ್ರಗಳಲ್ಲಿ ಪ್ರಮುಖವಾದುದು ಪತ್ರಿಕೋದ್ಯಮ. ಪತ್ರಕರ್ತರು ತಮ್ಮನ್ನು ಆವರಿಸುವ ಅಣುಅಣುವಿನ ಬಗ್ಗೆಯೂ ಸದಾ ಜಾಗೃತರಾಗಿರಲು ತಮ್ಮೊಳಗೊಂದು ತಿದಿಯನ್ನು ಹಗಲು ರಾತ್ರಿಯೂ ಒತ್ತಿಕೊಳ್ಳುತ್ತಲೇ ಇರಬೇಕಾಗುತ್ತದೆ. ಆಗುಹೋಗುಗಳನ್ನು ಯಾವೆಲ್ಲ ರೀತಿಯಲ್ಲಿ ತೆರೆದಿಡಬೇಕು, ಯಾವೆಲ್ಲ ದೃಷ್ಟಿಕೋನದಿಂದ ಗಮನಿಸಬೇಕು, ಹೇಗೆಲ್ಲ ಚಿಕಿತ್ಸಕ ನೋಟದಿಂದ ವಿಷಯವನ್ನು ಪರಾಮರ್ಶಿಸಬೇಕು ಮತ್ತು ಪ್ರಸ್ತುತಪಡಿಸಬೇಕು ಎಂಬ ತಯಾರಿಗೆ ಕೊನೆಮೊದಲಿಲ್ಲ. ಮುದ್ರಣ, ಎಲೆಕ್ಟ್ರಾನಿಕ್ ಜೊತೆಗೆ ಡಿಜಿಟಲ್ ಮಾಧ್ಯಮ​ ಇಂದು ಅತಿ ವೇಗದಲ್ಲಿ ಹಲವಾರು ಸಾಧ್ಯತೆಗಳ ಮೂಲಕ ಚಾಚಿಕೊಳ್ಳುತ್ತಿರುವಂಥ ಈ ಸಂದರ್ಭದಲ್ಲಿ ತಾಂತ್ರಿಕ ಸ್ವರೂಪದಲ್ಲಷ್ಟೇ ಬದಲಾವಣೆ, ಉಳಿದಂತೆ ಪತ್ರಕರ್ತರಿಗಿರಬೇಕಾದ ಒಳಗಣ್ಣು, ಆಸ್ಥೆ, ತುಡಿತ, ಪ್ರಾಮಾಣಿಕತೆ, ಸಾಮಾಜಿಕ ಕಾಳಜಿಯನ್ನೇ ಈ ಕ್ಷೇತ್ರ ಬೇಡುತ್ತದೆ. ಹಾಗಾಗಿ ಈ ವೃತ್ತಿ ಅಂಕಪಟ್ಟಿ, ಪದಕಗಳನ್ನು ಮೀರಿದ ಚಲನಶೀಲ, ವಿಶೇಷ ಪ್ರಜ್ಞೆಯುಳ್ಳ ವ್ಯಕ್ತಿತ್ವವನ್ನು ನಿರೀಕ್ಷಿಸುತ್ತದೆ. ಜೀವಪರತೆಯೇ ಇದಕ್ಕೆ ಮೂಲಾಧಾರ. 

ಈ ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿ ‘ಟಿವಿ9 ಕನ್ನಡ ಡಿಜಿಟಲ್ – ಭವಿಷ್ಯದ ಪತ್ರಕರ್ತರು’ ಇದರಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಪತ್ರಿಕೋದ್ಯಮದಲ್ಲಿ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿದ್ದಾರೆ. ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವರನ್ನು ಪ್ರೇರೇಪಿಸಿದ ವಿಚಾರಗಳು ಯಾವುವು ಎನ್ನುವುದನ್ನು ಆಗಾಗ ಇಲ್ಲಿ ಹಂಚಿಕೊಳ್ಳಲಿದ್ದಾರೆ. ಪ್ರತಿಕ್ರಿಯೆಗಾಗಿ : tv9kannadadigital@gmail.com

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮವನ್ನು ಓದುತ್ತಿರುವ ಶಶಿಕಲಾ ನಾಗಪ್ಪ ತಳವಾರ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಜಂಬಲದಿನ್ನಿಯವರು. ಅಪ್ಪ ಅಮ್ಮ ಇದ್ದರೂ ಇವರು ಬಾಲ್ಯದಿಂದ ಈತನಕ ಆ ಗ್ರಾಮವನ್ನು ತೊರೆದಿದ್ದು ಯಾಕೆ ಮತ್ತು ಪತ್ರಕರ್ತೆಯಾಗಬೇಕು ಎಂಬ ಗುರಿಯನ್ನು ಗಟ್ಟಿ ಮಾಡಿಕೊಂಡಿದ್ದು ಯಾಕೆ? ಓದಿ.

* ಜಂಬಲದಿನ್ನಿ ನಮ್ಮ ಪುಟ್ಟ ಗ್ರಾಮ. ಆ ಗ್ರಾಮದಲ್ಲಿ ನಮ್ಮದೊಂದು ಸಹಜ ಕುಟುಂಬ ನಾನು ಮತ್ತು ಅಪ್ಪ-ಅಮ್ಮ ಅಕ್ಕ-ತಂಗಿ ಅಣ್ಣ ಮಾತ್ರ. ನಮ್ಮ ತಂದೆ-ತಾಯಿಗಳು ಅನಕ್ಷರಸ್ಥರು. ತಮಗೆ ಅಕ್ಷರ ಜ್ಞಾನವಿಲ್ಲದಿದ್ದರೂ ನಮಗೆ ಶಿಕ್ಷಣವನ್ನು ಕೊಡಿಸಿದ್ದಾರೆ. ನಾಲ್ಕು ಮಕ್ಕಳಲ್ಲಿ ಅತಿ ಹೆಚ್ಚು ಓದಿದವಳು ನಾನೇ. ಪಿಯುಸಿ ಮತ್ತು ಪದವಿವರೆಗೂ ಸರ್ಕಾರಿ ಕಾಲೇಜುಗಳಲ್ಲಿ ಅಪ್ಪ ಅಮ್ಮನ ದುಡ್ಡಿನಲ್ಲಿಯೇ ಓದಿದೆ. ನಂತರ ಒಂದು ವರ್ಷ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಉದ್ಯೋಗವನ್ನು ಮಾಡಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರಿಸುತ್ತಾ ಇದ್ದೇನೆ.

ನಾನು ಯಾಕೆ ಈ ವಿಷಯ ಆಯ್ಕೆ ಮಾಡಿಕೊಂಡೆ ಎನ್ನುವುದಕ್ಕೆ ನನಗೆ ನನ್ನದೇ ಆದ ಹಿನ್ನೆಲೆಯಿದೆ.  ಹುಟ್ಟಿನಿಂದಲೇ ಕಷ್ಟ ಅವಮಾನವನ್ನು ಅನುಭವಿಸಿದವಳು. ಚಿಕ್ಕವಳಿದ್ದಾಗ ನನ್ನ ತಂದೆ-ತಾಯಿ ದುಡಿಯಲು ಮೂರು ಮಕ್ಕಳನ್ನು ಕರೆದುಕೊಂಡು ಬೆಂಗಳೂರು ಮತ್ತು ಮಂಗಳೂರಿಗೆ ಹೋಗುತ್ತಿದ್ದರು. ನಾನು ಸ್ವಲ್ಪ ಸೂಕ್ಷ್ಮ ಸ್ವಭಾವದವಳಾಗಿದ್ದರಿಂದ ಅಜ್ಜಿಯ ಊರಾದ ಹಡಗಲಿಯಲ್ಲಿ ಬಿಡುತ್ತಿದ್ದರು. ಅಂದಿನಿಂದ ಇಂದಿನವರೆಗೂ ಅಪ್ಪ-ಅಮ್ಮ ಇದ್ದರೂ ಅವರಿಂದ ನಾನು ದೂರವೇ. ಏಕೆಂದರೆ, ನಾವುಗಳು ಶಿಕ್ಷಣದ ಹಸಿವನ್ನು ನೀಗಿಸಿಕೊಳ್ಳುವ ವಿಷಯವಾಗಿ ನಮ್ಮ ಗ್ರಾಮದಲ್ಲಿ ನಮ್ಮ ತಂದೆ-ತಾಯಿಯನ್ನು ಹೆಜ್ಜೆಹಜ್ಜೆಗೂ ಅವಮಾನಿಸುತ್ತ ಬಂದಿದ್ದಾರೆ, ನಾವು ದಲಿತರು ಮತ್ತು ಆದಾಯ ಇಲ್ಲದವರು ಎಂಬ ಕಾರಣಕ್ಕೆ.

ನಿಮ್ಮ ಮಕ್ಕಳಿಗೆ ಯಾಕೆ ಶಿಕ್ಷಣ ನೀಡುತ್ತೀರಿ? ವಯಸ್ಸಾಗಿದೆ, ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಬೇಕು ಎಂದು ಪದೇಪದೆ ಒತ್ತಡವನ್ನು ಗ್ರಾಮಸ್ಥರು ನನ್ನ ಅಮ್ಮನ ಮೇಲೆ ಹೇರುತ್ತಲೇ ಇರುತ್ತಾರೆ. ಇದರಿಂದ ಎಷ್ಟೇ ಅವಮಾನವಾದರೂ ಅಮ್ಮ, ನೀನು ಮಾತ್ರ ಎಲ್ಲಿಯವರೆಗೂ ಓದುತ್ತೀಯೋ ಓದು ಎಂದು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಇಂತಹ ತಂದೆ-ತಾಯಿಗಳಿಗೆ ಭಾರವಾಗಬಾರದು ಎಂದು ನಾನು ಒಂದು ವರ್ಷ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡಿದೆ. ಅಲ್ಲಿ ಸಂಬಳ ಕಡಿಮೆ ಎಂದು ಖಾಸಗಿ ಶಾಲೆಯಲ್ಲಿ ಕಂಪ್ಯೂಟರ್ ಟೀಚರ್ ಆಗಿಯೂ ಕೆಲಸ ಮಾಡಿದೆ. ಬೆಳಗ್ಗೆಯಿಂದ ಸಾಯಂಕಾಲದವರಿಗೂ ಶಾಲೆ, ಸಾಯಂಕಾಲ ಏಳರಿಂದ ಮೆಡಿಕಲ್ ಶಾಪ್​ನಲ್ಲಿ ಡೇಟಾ ಎಂಟ್ರಿ. ಎಷ್ಟೇ ದುಡಿದರೂ ಸಂಬಳ ಸಾಕಾಗುತ್ತಿದ್ದಿಲ್ಲ. ನನ್ನ ಒಳಗುದಿಗೆ ತಕ್ಕ ಕೆಲಸ ಯಾವುದು ಎಂದು ಯೋಚಿಸಿದಾಗ ಪತ್ರಿಕೋದ್ಯಮ ಎನ್ನಿಸಿತು. ಹೇಗಾದರೂ ಮಾಡಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲೇಬೇಕು ಎಂಬ ಹಟ ಬೆಳೆಯಿತು. ಎಲ್ಲಕ್ಕಿಂತ ಮುಖ್ಯವಾಗಿ ಯಾರ ಸಹಾಯವಿಲ್ಲದೆ ಬದುಕಬೇಕು ಎಂಬ ಹಂಬಲ.

ಗ್ರಾಮೀಣ ಭಾಗದಿಂದ ಬಂದ ನನಗೆ, ನನ್ನಂಥ ಅದೆಷ್ಟೋ ಹುಡುಗಿಯರು ಮತ್ತವರ ಮನೆಯಲ್ಲಿ ನಡೆಯುವ ದೃಶ್ಯಗಳು ಕಣ್ಣಮುಂದೆ ಬರುತ್ತವೆ. ಓದಬೇಕೆಂಬ ಅವರ ಕನಸು ಮುರುಟಿ, ಮನೆಯವರ ಒತ್ತಾಯಕ್ಕೆ ಮದುವೆಗೆ ಬಲಿಯಾಗುತ್ತ ಬಂದಿರುವ ಹೆಣ್ಣುಮಕ್ಕಳು ಲೆಕ್ಕವಿಲ್ಲದಷ್ಟು. ಚಿಕ್ಕ ವಯಸ್ಸಿಗೆ ಗಂಡನ ಮನೆಗೆ ಹೋಗಿ ನೋವು ಅನುಭವಿಸುವವರ ಧ್ವನಿಯನ್ನು ಹಿಡಿದಿಡಬೇಕು. ಆ ನಂತರವೂ ಅವರು ತಮ್ಮ ಅಸ್ತಿತ್ವದ ಬಗ್ಗೆ ಅರಿವು ಮೂಡಿಸಿಕೊಳ್ಳಲು ಸಹಾಯ ಮಾಡಬೇಕು ಎನ್ನುವ ಆಸೆ ನನ್ನದು. ಈಗಲೂ ಹಳ್ಳಿಯಲ್ಲಿ ಅದೆಷ್ಟೋ ಪ್ರತಿಭಾವಂತ ಹೆಣ್ಣುಮಕ್ಕಳಿದ್ದರೂ ಅವರ ಜೀವನ ಅರ್ಧಕ್ಕೇ ಮುಗಿಯುತ್ತಿದೆ. ಮದುವೆ ಎನ್ನುವ ಬಂಧನದಿಂದ ಅಂಥವರನ್ನು ಕಾಪಾಡಬೇಕು ಎಂದು ಬಲವಾಗಿ ಅನ್ನಿಸುತ್ತಿದೆ. ನಾನು ಸರ್ಕಾರಿ ಶಾಲಾ-ಕಾಲೇಜ್‌ಗಳಲ್ಲಿ ಓದಿರುವುದರಿಂದ ಅಲ್ಲಿ ನನ್ನ ಸ್ನೇಹಿತರು ಒಂದೊಂದು ರೂಪಾಯಿಗೂ ಕಷ್ಟಪಡುವುದನ್ನು ನೋಡಿದ್ದೇನೆ. ಹೇಗಾದರೂ ಅವರ ಓದಿಗೆ ಸಹಾಯ ಮಾಡಬೇಕು ಎನ್ನುವ ಆಸೆ ನನಗಿದೆ.

Future Journalists Shashikala Talavar

ಸೌಜನ್ಯ : ಅಂತರ್ಜಾಲ

ಸತ್ಯ ಏನು ಎಂದರೆ, ಜನ ಗುರುತಿಸುವುದು ಸಾಧಕರನ್ನು ಮಾತ್ರ. ಕಷ್ಟದಲ್ಲಿ ಸಾಯುತ್ತಿರುವವರನ್ನಲ್ಲ! ದಲಿತ ಹಿನ್ನೆಲೆ ಮತ್ತು ಬಡತನದಿಂದ ಬಂದವರು ಖಾಸಗಿ ಕೆಲಸಗಳನ್ನು ಹುಡುಕಿಕೊಂಡು ಮಾಡುವುದೂ ಒಂದು ಸಾಧನೆಯೇ. ಅಷ್ಟು ಕಷ್ಟಕರ ಪರಿಸ್ಥಿತಿ ಈಗಲೂ ಇದೆ. ಹೀಗಾಗಿ ನಿರುದ್ಯೋಗ ಯಾವಾಗಲೂ ಅವರನ್ನು ಬೆಂಬತ್ತಿರುತ್ತದೆ. ಇದರಿಂದಾಗಿ ಸಮಾಜದ ಕಣ್ಣಲ್ಲಿ ಆ ಯುವಪೀಳಿಗೆ ಅಡ್ಡದಾರಿ ಹಿಡಿದಿದೆ ಎಂದೇ ಗುರುತಿಸಲ್ಪಡುತ್ತದೆ. ಇನ್ನು ಹುಡುಗಿಯರು ಈತನಕವೂ ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದಾರೆ. ದೇವದಾಸಿ ಪದ್ದತಿಗೆ ಒಳಪಟ್ಟು ಅದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇದೆಲ್ಲವನ್ನೂ ಕಂಡ ನನಗೆ ಇದಕ್ಕಾಗಿ ಪತ್ರಿಕೋದ್ಯಮ ಸೇರುವುದೇ ಸರಿ ಎನ್ನಿಸಿದೆ.

ಈ ಪದವಿಗೆ ಸೇರಿದಾಗ ಕಣ್ಣಿಗೆ ಕಂಡವರೆಲ್ಲ ಸಿರಿವಂತ ಸ್ನೇಹಿತರೇ. ಇವರೊಂದಿಗೆ ಹೇಗೆ ಇರುವುದು ಎಂದೆನ್ನಿಸಿತು. ಆದರೆ ನಿಧಾನಕ್ಕೆ ಅವರೊಂದಿಗೆ ಸ್ನೇಹ ಬೆಳೆಸಿಕೊಂಡಾಗ, ನನ್ನ ಸಂಕೋಚ, ಅನುಮಾನಗಳು ಸುಳ್ಳಾದವು. ಸ್ನೇಹ ಮಧುರ ಎನ್ನಿಸಿತು. ಈಗಾಗಲೇ ಚಿಕ್ಕವಯಸ್ಸಿಗೇ ಮದುವೆಯಾಗಿ ಹೋದ ನನ್ನ ಗೆಳತಿಯರ ಸಂಕಷ್ಟಗಳನ್ನು ಕೇಳಿದಾಗ ಸ್ನೇಹದಲ್ಲೇ ನೆಮ್ಮದಿ ಇದೆ ಎನ್ನಿಸಿಬಿಟ್ಟಿದೆ. ಆದರೆ, ಪತ್ರಿಕೋದ್ಯಮದಲ್ಲಿ ಅಕ್ಕಪಕ್ಕದಲ್ಲಿಯೂ ಶತ್ರುಗಳಿರುತ್ತಾರೆ ಎಂದು ನಮ್ಮ ಸರ್ ಎಚ್ಚರಿಸಿದಾಗ ನನಗೆ ಅನಿಸಿದ್ದು, ‘ಕಾಲು ಎಳೆಯವವರ ಮಧ್ಯೆ ಕಾಯಕದ ಬಗ್ಗೆ ಮಾತ್ರ ಯೋಚಿಸಬೇಕು’ ಎಂದು. ತರಗತಿಯ ಪಾಠಗಳನ್ನು ಕೇಳುತ್ತ, ಪ್ರಾಯೋಗಿಕ ತರಗತಿಗಳೊಳಗೆ ಭಾಗಿಯಾಗುತ್ತ, ಪತ್ರಿಕೆ, ಟಿವಿ ಗಮನಿಸುತ್ತ, ಸಮಾಜದಲ್ಲಿ ನಡೆಯುವ ಘಟನೆಗಳು ಮತ್ತವುಗಳ ಹಿಂದಿನ ಉದ್ದೇಶದ ಬಗ್ಗೆ ಸಂಪೂರ್ಣ ಪರಿಚಯವಾಗುತ್ತಿದೆ. ನಮ್ಮ ದೇಶದಲ್ಲಿ ನಡೆಯುವ ಅನಾಚಾರ, ಅನ್ಯಾಯಗಳ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಬೇಕು ಎನ್ನುವುದು ಮನಸ್ಸಿಗೆ ದಟ್ಟವಾಗುತ್ತಿದೆ. ಹಳ್ಳಿಯ ಹೆಣ್ಣುಮಕ್ಕಳು ಭಯಬಿಟ್ಟು ಪತ್ರಿಕೋದ್ಯಮದಲ್ಲಿ ತೊಡಗಬೇಕು. ಅದಕ್ಕಾಗಿ ಅವರು ಹೆಚ್ಚು ಹೆಚ್ಚು ಶಿಕ್ಷಣದ ಕಡೆಗೆ ಮುಖ ಮಾಡುವಂತಾಗಬೇಕು, ಅದಕ್ಕಾಗಿ ನಾನು ಶ್ರಮಿಸಬೇಕು ಎಂದುಕೊಂಡಿದ್ದೇನೆ.

ಒಟ್ಟಾರೆಯಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಹಲವಾರು ಕಾರಣಗಳಿಂದ ನೆಮ್ಮದಿಯಂತೂ ಇಲ್ಲ ಎನ್ನುವುದನ್ನು ನನ್ನ ಜೀವನಾನುಭವಗಳಿಂದ ಕಂಡುಕೊಂಡಿದ್ದೇನೆ. ಬದುಕಿನ ಬಂಡಿ ದೂಡಲು ಕಷ್ಟಪಡಲೇಬೇಕು. ಕಷ್ಟವಾಗುತ್ತಿದೆ ಎಂದು ಯಾರೊಂದಿಗೂ ಹೇಳಿಕೊಳ್ಳದೆ ನಮ್ಮಷ್ಟಕ್ಕೆ ನಾವು ನೋವು ಅನುಭವಿಸಿ ಗಟ್ಟಿಯಾದರೆ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ ಎನ್ನಿಸಿದೆ. ಶ್ರೀಮಂತ-ಬಡವ, ಮೇಲು ಕೀಳು ಎಂಬ ಜಾತಿ ತಾರತಮ್ಯದಲ್ಲೇ ನರಳುತ್ತಿರುವ ನನ್ನ ಗ್ರಾಮಸ್ಥರಿಗೆ, ನನಗೂ ಒಂದು ಅಸ್ತಿತ್ವ ಇದೆ, ಮರ್ಯಾದೆ ಇದೆ ಎನ್ನುವುದನ್ನು ತೋರಿಸಲು ಇರುವ ಸಾಧನ ಪತ್ರಿಕೋದ್ಯಮವೊಂದೇ ಎನ್ನಿಸಿದೆ.

ನಾವು ನೆಮ್ಮದಿಯಿಂದ ಸಾಯಬೇಕೆಂದರೆ ನ್ಯಾಯ ಮತ್ತು ಸತ್ಯದ ಪರವಾಗಿ ಇರಬೇಕು. ಇದಕ್ಕಾಗಿ ಹೆಚ್ಚು ಧೈರ್ಯ ಬೇಕು. ಅದನ್ನು ಈ ವೃತ್ತಿಯು ಪರಿಚಯಿಸುತ್ತದೆ ಎಂಬ ವಿಶ್ವಾಸ ನನ್ನದು.

ಇದನ್ನೂ ಓದಿ : Journalism : ‘ನನ್ನ ಮೂರು ಮಕ್ಕಳೊಂದಿಗೆ ನಾನೂ ಓದುತ್ತ ಬರೆಯುತ್ತ ಬೆಳೆಯುತ್ತಿದ್ದೇನೆ’

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ