ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ; ಸಂಜಯ್ ರಾಯ್ ಅಪರಾಧಿ ಎಂದು ಸಾಬೀತು
ಪಶ್ಚಿಮ ಬಂಗಾಳದ ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಸಂಜಯ್ ರಾಯ್ ಅಪರಾಧಿ ಎಂದು ಸಾಬೀತಾಗಿದೆ. ಕೊಲ್ಕತ್ತಾದ ಸ್ಥಳೀಯ ನ್ಯಾಯಾಲಯವು 33 ವರ್ಷದ ಸಂಜಯ್ ರಾಯ್ನನ್ನು ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಘೋಷಿಸಿದೆ. ಕಳೆದ ವರ್ಷ ದೇಶವನ್ನು ಬೆಚ್ಚಿಬೀಳಿಸಿದ್ದ ಈ ಕ್ರೂರ ಘಟನೆಗೆ ಸೋಮವಾರ ಶಿಕ್ಷೆ ವಿಧಿಸಲಾಗುವುದು.
ಕೊಲ್ಕತ್ತಾ: ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಳೆದ ವರ್ಷ 31 ವರ್ಷದ ಟ್ರೈನಿ ವೈದ್ಯೆ ಮೇಲೆ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂಜಯ್ ರಾಯ್ ತಪ್ಪಿತಸ್ಥನೆಂದು ನ್ಯಾಯಾಲಯ ಘೋಷಿಸಿದೆ. 2024ರ ಆಗಸ್ಟ್ 9ರಂದು ನಡೆದ ವೈದ್ಯೆಯ ದುರಂತ ಸಾವು ಇಡೀ ದೇಶವನ್ನು ತಲ್ಲಣಗೊಳಿಸಿತ್ತು. ಈ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ದೇಶಾದ್ಯಂತ ಜನರು ಪ್ರತಿಭಟನೆ ನಡೆಸಿದ್ದರು. ಈ ಘಟನೆಯು ಪಶ್ಚಿಮ ಬಂಗಾಳದ ಕಿರಿಯ ವೈದ್ಯರ ಸಾಮೂಹಿಕ ಪ್ರತಿಭಟನೆಗೆ ಕಾರಣವಾಯಿತು. ನ್ಯಾಯಕ್ಕಾಗಿ ಒತ್ತಾಯಿಸಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಹೆಚ್ಚಿನ ಭದ್ರತೆಯನ್ನು ನೀಡುವಂತೆ ಒತ್ತಾಯಿಸಲಾಗಿತ್ತು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಅಧ್ಯಕ್ಷತೆಯಲ್ಲಿ ಸೀಲ್ಡಾ ನ್ಯಾಯಾಲಯವು ಸಂಜಯ್ ರಾಯ್ ತಪ್ಪಿತಸ್ಥ ಎಂದು ತನ್ನ ತೀರ್ಪು ನೀಡಿತು. ಆತ ಅಪರಾಧಿ ಎಂದು ಘೋಷಿಸಲಾಗಿದ್ದರೂ ಶಿಕ್ಷೆಯ ಪ್ರಮಾಣವನ್ನು ಸೋಮವಾರ ಪ್ರಕಟಿಸಲಾಗುವುದು. ಆದರೆ, ಸಂಜಯ್ ರಾಯ್ ನ್ಯಾಯಾಲಯದಲ್ಲಿ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದರು. ನ್ಯಾಯಾಲಯದ ಕೋಣೆಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ಸುಮಾರು 300 ಸಿಬ್ಬಂದಿಯನ್ನು ಸುರಕ್ಷತೆಗಾಗಿ ನಿಯೋಜಿಸಲಾಗಿತ್ತು. ಇದು ಈ ಪ್ರಕರಣದ ಹೆಚ್ಚಿನ ಅಪಾಯದ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.
ಇದನ್ನೂ ಓದಿ: ಆರ್‌ಜಿ ಕರ್ ಹತ್ಯೆ; ತಿಲೋತ್ತಮ ಎದೆ ಮೇಲೆ ಕಚ್ಚಿದ ಗುರುತು, ಗುಪ್ತಾಂಗದಲ್ಲಿ ಇನ್ನೊಂದು ಮಹಿಳೆಯ ಡಿಎನ್ಎ ಪತ್ತೆ
ಆಗಸ್ಟ್ 9ರಂದು ಆರ್‌ಜಿ ಕರ್ ಆಸ್ಪತ್ರೆ ಟ್ರೈನಿ ವೈದ್ಯೆಯ ಶವವು ಸರ್ಕಾರಿ ಆಸ್ಪತ್ರೆಯ ಸೆಮಿನಾರ್ ಕೋಣೆಯಲ್ಲಿ ಪತ್ತೆಯಾಗಿತ್ತು. ಭೀಕರವಾಗಿ ಆಕೆಯನ್ನು ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ತನಿಖೆಯನ್ನು ಕೋಲ್ಕತ್ತಾ ಪೊಲೀಸರು ನಡೆಸಿದ್ದರು. ಆದರೆ ಕೊಲ್ಕತ್ತಾ ಹೈಕೋರ್ಟ್‌ನ ಹಸ್ತಕ್ಷೇಪದ ನಂತರ, ಈ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ)ಗೆ ವರ್ಗಾಯಿಸಲಾಯಿತು. ಸಿಬಿಐ ತನಿಖೆಯನ್ನು ಪೂರ್ಣಗೊಳಿಸಿ 45 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿತು. ಅಪರಾಧಿಯಾಗಿ ಸಂಜಯ್ ರಾಯ್ ಪಾತ್ರವನ್ನು ಗಟ್ಟಿಗೊಳಿಸಲು 11 ಪ್ರಮುಖ ಪುರಾವೆಗಳನ್ನು ಮಂಡಿಸುವ ಮೂಲಕ ಸಿಬಿಐ ಆತನಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ