Nomads Education : ಅಪರಾಧ ಜಗತ್ತಿನೊಳಗೆ ಅಲೆಮಾರಿ ಮಕ್ಕಳ ಮುಖಗಳನ್ನು ಎದುರುಗೊಳ್ಳುವುದು ಬೇಡ ಅಲ್ಲವೆ?

Nomads Lifestyle Post Covid : ‘ಶಾಲೆಗೆ ಕಳಿಸಿದರೆ ಮಕ್ಕಳು ನಮ್ಮಿಂದ ದೂರವಾಗಿಬಿಡುತ್ತಾರೆ ಎಂಬ ಆತಂಕ ಅವರಲ್ಲಿತ್ತು. ಕೊನೆಗೆ ಅವರ ಹಾದಿಗೇ ನಾನು ಮರಳಬೇಕಾಯಿತು. ಪೋಷಕರು ಕೆಲಸ ಮುಗಿಸಿ ಮಧ್ಯಾಹ್ನ ಶೆಡ್ಡುಗಳಿಗೆ ಬಂದ ಮೇಲೆ ಅವರ ಮನವೊಲಿಸಿ 2 ರಿಂದ ಸಂಜೆ 6 ರ ತನಕ ಓದುಬರಹ ಹೇಳಿಕೊಡಲಾರಂಭಿಸಿದೆ. ಈಗ ಸುಮಾರು 30 ಮಕ್ಕಳು ಕಲಿಯುತ್ತಿದ್ದಾರೆ.’ ನಾಗೇಶ್ ಎನ್.ಜಿ.

Nomads Education : ಅಪರಾಧ ಜಗತ್ತಿನೊಳಗೆ ಅಲೆಮಾರಿ ಮಕ್ಕಳ ಮುಖಗಳನ್ನು ಎದುರುಗೊಳ್ಳುವುದು ಬೇಡ ಅಲ್ಲವೆ?
ನಾದಸ್ವರ ನುಡಿಸುವ ವೆಂಕಟರಮಣಪ್ಪ ಮತ್ತು ಅಲೆಮಾರಿ ಕುಟುಂಬದ ಮಕ್ಕಳಿಗೆ ಪಾಠ ಹೇಳಿಕೊಡುವ ನಾಗೇಶ್
Follow us
ಶ್ರೀದೇವಿ ಕಳಸದ
|

Updated on:Oct 03, 2021 | 9:01 AM

Nomads : ನಾನೊಂದು ತೀರಾ ನೀನೊಂದು ತೀರಾ, ಪವಡಿಸೋ ಪರಮಾತ್ಮಾ ಶ್ರೀ ವೆಂಕಟೇಶ, ಗುಡಿಯಲಿರುವ ಶಿಲೆಗಳೆಲ್ಲ ದೇವರಂತೆ, ಹಿಂದೂಸ್ತಾನವು ಎಂದೂ ಮರೆಯದ ಭಾರತರತ್ನವು ನೀನಾಗು… ಕೋಲೆಬಸವನೊಂದಿಗೆ ಅಲೆಯುತ್ತ ನಾದಸ್ವರ ನುಡಿಸುತ್ತ ಮನೆಯೆದುರು (ಬೆಂಗಳೂರು) ಬಂದು ನಿಂತ ವೆಂಕಟರಮಣಪ್ಪನವರನ್ನು ಜ್ಯೋತಿ ಎಸ್. ಮಾತಿಗೆಳೆದಿದ್ದಾರೆ. ನೀವು ನುಡಿಸುವ ಹಾಡುಗಳು ಯಾವುವು ಎಂದು ಕೇಳಿದಾಗ, ಗೊತ್ತಿಲ್ಲ ಎಂಬ ಉತ್ತರ ಸಿಕ್ಕಿದೆ. ಈ ಉತ್ತರದೊಂದಿಗೆ ಮತ್ತಷ್ಟು ಪ್ರಶ್ನೆಗಳು ಉದ್ಭವಿಸಿ ಅವರ ಶೆಡ್ಡುಗಳ ಜಾಡನ್ನು ಹಿಡಿದು ಕೊಡಿಗೆಹಳ್ಳಿ ತಲುಪಿದ್ದಾರೆ. ಸುಮಾರು ಮೂವತ್ತು ಅಲೆಮಾರಿ ಕುಟುಂಬಗಳು ವಾಸವಾಗಿರುವ ಶೆಡ್ಡುಗಳಲ್ಲಿರುವ ಜನರೊಂದಿಗೆ ಒಡನಾಡಿದಾಗ, ಕೊರೊನಾದ ಕತ್ತಲೆಯ ಮಧ್ಯೆಯೂ ಸಣ್ಣ ಬೆಳಕಿನ ಕುಡಿ ಮಿಸುಕಾಡುತ್ತಿರುವುದು ಜ್ಯೋತಿಯವರಿಗೆ ಕಂಡಿದೆ.  ಅದೇನೆಂದು ತಿಳಿದುಕೊಳ್ಳಬೇಕೆಂದರೆ ನೀವು ಈ ಬರಹವನ್ನು ಪೂರ್ತಿ ಓದಲೇಬೇಕು.   

ತಾತ ಮುತ್ತಾತರ ಕಾಲದಿಂದಲೂ ನಾದಸ್ವರ ನುಡಿಸುವುದೇ ಇವರ ಕುಲಕಸುಬು. ಹಸುಗಳಿಗೆ ಅಲಂಕಾರ ಮಾಡಿ ಹಳ್ಳಿ ಪಟ್ಟಣಗಳಿಗೆ ಕರೆದುಕೊಂಡು ಹೋಗಿ ಡೋಲು, ನಾದಸ್ವರ ನುಡಿಸುತ್ತಾ ಸೀತಾ-ರಾಮ, ಕೋಲೆ-ಬಸವ ಅಂತೆಲ್ಲಾ ಆಟವಾಡಿಸಿ ಜನರು ಕೊಟ್ಟಿದ್ದನ್ನು ತೆಗೆದುಕೊಂಡು ಬರುವುದು ವಾಡಿಕೆ. ಆದರೆ, ಈಗ ಇದೆಲ್ಲವನ್ನು ನಾವು ನೋಡುವುದು, ಕೇಳುವುದು ತೀರಾ ಕಡಿಮೆ. ಏಕೆಂದರೆ ನಾವು ಆಧುನಿಕರು! ಮೊಬೈಲ್, ಟಿವಿ, ಧಾರಾವಾಹಿ, ಸಿನೆಮಾ, ಆ್ಯಪ್​ಗಳ ದಾಸರಾಗಿರುವುದರಿಂದ, ಇಂಥವರು ಬಾಗಿಲಿಗೆ ಬಂದಾಗ ಕೂತಲ್ಲಿಂದ ಎದ್ದು, ಸ್ವಲ್ಪ ಹೊತ್ತು ಹೊರಬಂದು ಅವರ ಕಲೆಯನ್ನು ಆಸ್ವಾದಿಸುವ, ಅವರಿಗೆ ಬೇಕಾದ್ದನ್ನು ಕೊಟ್ಟು ಅವರೊಂದಿಗೆ ನಾಲ್ಕು ಮಾತು ಆಡುವ ಆಸಕ್ತಿ ತಾಳ್ಮೆಯನ್ನೂ ಕಳೆದುಕೊಂಡವರು.

ಆ ದಿನ ನಮ್ಮ ಮನೆ ಬಾಗಿಲಿಗೆ ನಾದಸ್ವರದ ವೆಂಕಟರಮಣಪ್ಪ ಬಂದಾಗ, ಅವರ ಸುಶ್ರಾವ್ಯ ನುಡಿಸಾಣಿಕೆ ಕೇಳಿ ಅವರೊಂದಿಗೆ ಮಾತನಾಡಬೇಕು ಎನ್ನಿಸಿತು. ‘ಸುಮಾರು ಹತ್ತು ವರ್ಷಗಳ ಹಿಂದೆ ಒಟ್ಟು ಮೂವತ್ತು ಕುಟುಂಬಗಳೊಂದಿಗೆ ನಾವು ಬೆಂಗಳೂರಿಗೆ ವಲಸೆ ಬಂದಿದ್ದೇವೆ. ಈತನಕವೂ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿದ್ದೇವೆ. ಕೊಡಿಗೇಹಳ್ಳಿ, ವಿರೂಪಾಕ್ಷಪುರದ ಹತ್ತಿರ ನಾವೆಲ್ಲಾ ವಾಸವಾಗಿದ್ಧೇವೆ. ಖಾಲಿ ಜಾಗದಲ್ಲಿ ಬಾಡಿಗೆ ಕೊಟ್ಟು, ಟಾರ್ಪಾಲ್ ಕಟ್ಟಿ ಶೆಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಕುಡಿಯುವ ನೀರಿಗೆ ಒಂದು ಕಿ. ಮೀ. ದೂರ ಹೋಗಬೇಕು. ಹೆಣ್ಣುಮಕ್ಕಳಿಗೆ ಸ್ನಾನಕ್ಕೆ, ಶೌಚಾಲಯಕ್ಕೆ ತುಂಬಾ ಕಷ್ಟದ ಸ್ಥಿತಿ. ಒಮ್ಮೊಮ್ಮೆ ಹಾವುಗಳು ಬರುತ್ತವೆ. ಮಕ್ಕಳೆಲ್ಲ ಇರುತ್ತಾರೆ ಅಪಾಯವಾಗದಿರಲೆಂದು ಸಂಜೆ ಹೊತ್ತಿಗೆ ಬೆಂಕಿ ಹಾಕುತ್ತೇವೆ.’ ಹೀಗೆ ಅವರು ತಮ್ಮ ಅಸಹಾಯಕತೆಯನ್ನು ಹೇಳಿಕೊಂಡರು.

ವೆಂಕಟರಮಣಪ್ಪ ಅವರಿಗೆ ನಾಲ್ಕು ಗಂಡುಮಕ್ಕಳಿದ್ದಾರೆ. ಹೆಂಡತಿಗೆ ಹೃದಯರೋಗವಿದೆ. ಔಷಧಿಗೆ ಹೆಚ್ಚು ಖರ್ಚಾಗುತ್ತದೆ. ಕೊರೊನಾದ ಮೊದಲು ತುಮಕೂರು, ಹೆಬ್ಬೂರು, ನಾಗವಲ್ಲಿ, ಗುಬ್ಬಿ, ಮಂಡ್ಯ, ಮೈಸೂರು ಎಲ್ಲಾ ಕಡೆಗಳಲ್ಲೂ ಮದುವೆಗೆ ನಾದಸ್ವರ ನುಡಿಸಲು ಹೋಗುತ್ತಿದ್ದರು. ಈಗ ಕೊರೊನಾದಿಂದಾಗಿ ಮದುವೆಗಳಲ್ಲಿ ನಾದಸ್ವರ ನುಡಿಸುವುದು ನಿಂತುಹೋಗಿದೆ. ‘ಖಾಲಿ ಇದ್ದಾಗ ನನ್ನ ಹಸು ‘ಸೀತಾಲಕ್ಷ್ಮೀ’ಯೊಡನೆ ಹೀಗೆ ಬೀದಿ ಬೀದಿ ಸುತ್ತುತ್ತ ನಾದಸ್ವರ ನುಡಿಸುತ್ತೇನೆ. ಕೆಲವರು ಎರಡು, ಮೂರು, ಐದು ರೂಪಾಯಿ ಕೊಡುತ್ತಾರೆ. ಕೆಲವರು ಹಸುವಿಗೆ ಪೂಜೆ ಮಾಡಿ ಹಣ್ಣುಗಳನ್ನು ಕೊಡುತ್ತಾರೆ. ಮತ್ತೂ ಹಲವರು ನಿನಗೇನಾಗಿದೆ ಆ ಮೂಕ ಪ್ರಾಣಿಯನ್ನು ಇಟ್ಟುಕೊಂಡು ಹೀಗೆ ಯಾಕೆ ಬೀದಿ ಸುತ್ತೋದು. ಕೈಕಾಲು ಗಟ್ಟಿಯಾಗಿದೆಯಲ್ಲ ಹೋಗಿ ಏನಾದರೂ ಕೆಲಸ ಮಾಡಿಕೊಂಡು ದುಡಿದು ತಿನ್ನಬಾರದಾ ಎಂದು ಅವಮಾನ ಕೂಡ ಮಾಡುತ್ತಾರೆ. ಮತ್ತೊಂದಷ್ಟು ಜನರು ಅದೆಷ್ಟು ಸಲ ಬರುತ್ತೀ, ನಾಚಿಕೆಯಾಗುವುದಿಲ್ಲವಾ? ಅಂತ ಬೈದು ಕಳಿಸುತ್ತಾರೆ. ಏನು ಮಾಡೋದು? ನಾವು ಬಡವರು ಅವರ ಬೈಗುಳ ನಮಗೆ ಕೇಳಿಸುವುದಿಲ್ಲ. ನಮ್ಮ ಹೊಟ್ಟೆ ತುಂಬಬೇಕಷ್ಟೇ. ನಮಗೆ ಬೇರೆ ಯಾವ ಉದ್ಯೋಗವೂ ಗೊತ್ತಿಲ್ಲ. ಆದರೆ ನಮ್ಮ ಮಕ್ಕಳು ಇದೇ ಸ್ಥಿತಿಯಲ್ಲಿಯೇ ಮುಂದುವರಿಯಬೇಕೆ? ಎನ್ನಿಸುತ್ತದೆ.’ ಅಸಹಾಯಕತೆಯನ್ನು ತೋಡಿಕೊಂಡರು.

Nomads Lifestyle Post Covid

ವೆಂಕಟರಮಣಪ್ಪನವರ ಕುಟುಂಬ

ಈ ಕುಟುಂಬಗಳಲ್ಲಿ ಮಕ್ಕಳು ಹದಿನಾಲ್ಕು ತುಂಬುತ್ತಿದ್ದಂತೆ ಸ್ವತಂತ್ರವಾಗಿ ನಾದಸ್ವರ ನುಡಿಸುವ ಕಲೆಗೆ ತೆರೆದುಕೊಂಡುಬಿಟ್ಟಿರುತ್ತಾರೆ. ಯಾವ ಹಾಡು ನುಡಿಸಿದ್ರಿ? ಕೇಳೋಕೆ ತುಂಬಾ ಸೊಗಸಾಗಿತ್ತು ಅಂದರೆ ಅವರಿಂದ ಗೊತ್ತಿಲ್ಲ ಎನ್ನುವ ಉತ್ತರ ಬರುತ್ತದೆ! ಯಾವ ಹಾಡು ಎಂದು ಗೊತ್ತಿಲ್ಲದೆ ಹೇಗೆ ಇಷ್ಟೊಂದು ಸುಮಧುರವಾಗಿ ನುಡಿಸುತ್ತೀರಿ ಎಂದು ಕೇಳಿದಾಗ, ‘ಒಬ್ಬರನ್ನು ನೋಡಿ ಒಬ್ಬರು ನುಡಿಸಿ ನುಡಿಸಿ ಅಭ್ಯಾಸ ಮಾಡಿಕೊಂಡಿದ್ದೇವೆ. ಯಾವ ಭಾಷೆಯ ಭಕ್ತಿಗೀತೆ ಚಿತ್ರಗೀತೆ ನುಡಿಸುತ್ತೇವೆ ಎನ್ನುವುದನ್ನು ನೀವೇ ನಮಗೆ ಹೇಳಬೇಕು. ನಮಗೆ ಆ ಬಗ್ಗೆ ಗೊತ್ತೇ ಇಲ್ಲ. ಬರೀ ಶ್ರುತಿ ಮತ್ತು ಲಯಬದ್ಧವಾಗಿ ನುಡಿಸುವುದಷ್ಟೇ ಗೊತ್ತು’ ಎನ್ನುವ ಇವರು ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಹಳೆಯ ಮತ್ತು ಹೊಸ ಚಿತ್ರಗೀತೆಗಳನ್ನು ಭಕ್ತಿಗೀತೆಗಳನ್ನು ನುಡಿಸುತ್ತಿರುತ್ತಾರೆ. ಇವರದು ಕೇವಲ ನಾದದ ಜಾಡು. ಇದನ್ನು ಹಿಡಿದು ಇವರು ವಾಸಿಸುವ ಸ್ಥಳಕ್ಕೆ ಹೋದಾಗ ಮತ್ತೊಂದು ಅಚ್ಚರಿ ಕಾದಿತ್ತು. ಈ ನೂರಾರು ಜನರಲ್ಲಿ ಇಬ್ಬರೂ ಮೂವರನ್ನು ಹೊರತುಪಡಿಸಿದರೆ ಉಳಿದವರಿಗೆ ಶಾಲೆಯಮೆಟ್ಟಿಲಿನ ಪರಿಚಯವೇ ಇಲ್ಲ.

ನಾವು ಏನೂ ಓದಿಲ್ಲ. ನಮ್ಮಪ್ಪ ಅಮ್ಮ ಯಾರೂ ಓದಿಲ್ಲ. ನಮ್ಮನ್ನು ಓದಿಸಿಲ್ಲ. ಬಡವರು ಅಂತ ಯಾರು ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ನಮ್ಮ ಕುಲಕಸುಬು ಬಿಟ್ಟು ಬೇರೇನೂ ನಮಗೆ ಗೊತ್ತಿಲ್ಲ. ಹಾಗಾಗಿ, ಹೆಣ್ಣುಮಕ್ಕಳು, ಗಂಡು ಮಕ್ಕಳು ಎಲ್ಲರೂ ಬೆಳಗ್ಗೆ ಸುಮಾರು 6 ಗಂಟೆ ಹೊತ್ತಿಗೆ ಮನೆ ಬಿಟ್ಟು ಊರೂರು ಸುತ್ತುತ್ತ ಹೆಬ್ಬಾಳ, ಆಟೋನಗರ, ಯಶವಂತಪುರ, ಮಲ್ಲೇಶ್ವರ, ತಿಂಡ್ಲು ಹೀಗೆ ಎಲ್ಲ ಕಡೆಗೂ ಹೋಗಿ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಮನೆಗೆ ವಾಪಸ್ಸಾಗಿರುತ್ತೇವೆ. ಮನೆಗೆ ಬಂದ ನಂತರ ಹಸುಗಳನ್ನು ಕಟ್ಟಿ ದನ ಕರುಗಳಿಗೆ ಮೇವು ತರಲು ಹುಲ್ಲು ಹುಡುಕಿಕೊಂಡು ದೂರದೂರ ಹೋಗುತ್ತೇವೆ. ಯಾವ ಕಾಲದಲ್ಲೂ ಇದು ಹೀಗೇ ಇರುವುದರಿಂದ ನಮಗೆ ಆರಾಮ ಮತ್ತು ಭದ್ರವಾದ ಬದುಕು ಸಾಧ್ಯವಿಲ್ಲ ಎನ್ನುತ್ತಾರೆ ಇವರುಗಳು.

ಕುಲಕಸುಬು ಕೇವಲ ಹೊಟ್ಟೆಪಾಡಿಗಷ್ಟೇ ಸೀಮಿತವಾಗದೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತದೆ. ಹೀಗಾಗಿ ಗೊತ್ತಿರುವ ಕೆಲಸದಲ್ಲೇ ಒದ್ದಾಡಿಕೊಂಡು ಜೀವನ ಸವೆಸುವುದು ಅಭ್ಯಾಸವಾಗಿಹೋಗಿರುತ್ತದೆ. ಆದರೆ ಕೊರೊನಾದಿಂದಾಗಿ ಕೆಲಸವಿಲ್ಲದೆ ಬದುಕೇ ದುಸ್ತರವಾದಾಗ ಕೆಲ ಸ್ಥಳೀಯರು ಸ್ವಯಂಪ್ರೇರಿತರಾಗಿ ಅವರಿಗೆ ಸಹಾಯ ಮಾಡಿದರು. ಶ್ರೀನಿವಾಸ್ ಮತ್ತು ಅವರ ಸ್ನೇಹಿತರು ದಿನವೂ ದಿನಸಿ, ತರಕಾರಿ, ಬೆಡ್ಶೀಟ್ ಮತ್ತು ಹಸುವಿಗೆ ಬೂಸಾ, ಹುಲ್ಲು ಒದಗಿಸಿಕೊಟ್ಟರು. ಆದರೆ ಮುಂದೆ? ಸಮಸ್ಯೆಯ ಆಳಕ್ಕೆ ಪರಿಹಾರ ಕಂಡುಹಿಡಿಯಬೇಕು, ಇವರಂತೂ ಹೀಗಾದರು ಇವರ ಮಕ್ಕಳು ಹೀಗೆಲ್ಲ ಅಲೆಯುವಂತಾಗಬಾರದು ಎನ್ನಿಸಿದ್ದು ಸ್ಥಳೀಯರಾದ ನಾಗೇಶ್ ಎನ್​. ಜಿ. ಅವರಿಗೆ. ಹತ್ತು ವರ್ಷಗಳ ಕಾಲ ಒಂದು ಸ್ವಯಂ ಸೇವಾ ಸಂಸ್ಥೆಯಲ್ಲಿ ಸಂಗೀತ ಶಿಕ್ಷಕರಾಗಿ ಇವರು ಕೆಲಸ ಮಾಡಿದ್ದಾರೆ.

Nomads Lifestyle Post Covid

ಅಲೆದಲೆದು ಹೀಗೆ ಬೆಂಗಳೂರು ತಲುಪಿ…

ಅವರು ಈ ಸಮುದಾಯದ ಜನರ ಜೊತೆ ಒಡನಾಡಿ ಅವರ ಕಷ್ಟಸುಖಗಳನ್ನು ಆಲಿಸಿ, ಪೋಷಕರಿಗೆ ವಿದ್ಯೆಯ ಮಹತ್ವ ತಿಳಿಸಿ, ಅವರ ಮನವೊಲಿಸಿ ಸ್ವಯಂ ಪ್ರೇರಣೆಯಿಂದ ಮಕ್ಕಳಿಗೆ ಪಾಠ ಹೇಳಿಕೊಡುವ ಹರಸಾಹಸಕ್ಕೆ ಅಂತೂ ಹೆಜ್ಜೆ ಇಟ್ಟರು ಈ ನಾಗೇಶ್. ಸಹಕಾರನಗರ ನಿವಾಸಿಯಾಗಿರುವ ನಾಗೇಶ್, ‘ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಅವರು ನಮ್ಮಿಂದ ದೂರವಾಗಿಬಿಡುತ್ತಾರೆ. ಶಿಕ್ಷಕರು ಅವರನ್ನು ಮತ್ತೆ ನಮ್ಮೆಡೆ ಬರದಂತೆ ಮಾಡಿಬಿಡುತ್ತಾರೆ ಎಂಬ ಹುಸಿನಂಬಿಕೆಯಲ್ಲಿ ಈ ಪೋಷಕರು ಬದುಕುತ್ತಿದ್ದರು. ದಿನವೂ ಹೊಟ್ಟೆತುಂಬಿಸಿಕೊಳ್ಳುವುದಕ್ಕಾಗಿ ಅಲೆಯುವ ಇವರು, ತಮ್ಮ ಮಕ್ಕಳನ್ನು ಬೆಳಗ್ಗೆ ಎಬ್ಬಿಸಿ ಅವರನ್ನು ತಯಾರು ಮಾಡಿ ದೂರದ ಶಾಲೆಗಳಿಗೆ ಕಳಿಸಲು ಆಗುವುದೆ? ಅದಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಮಾಡಿದೆ. ಆದರೆ, ನಂತರ ಅವರ ಹಾದಿಗೇ ನಾನು ಮರಳಬೇಕಾಯಿತು. ಪೋಷಕರು ಕೆಲಸ ಮುಗಿಸಿ ಮಧ್ಯಾಹ್ನ ಶೆಡ್ಡುಗಳಿಗೆ ಮರಳಿದ ಮೇಲೆ ಅವರ ಮನವೊಲಿಸಿ ಅವರ ಅನುಮತಿಯ ಮೇರೆಗೆ 2 ರಿಂದ ಸಂಜೆ 6 ರ ತನಕ ಓದುಬರಹ ಹೇಳಿಕೊಡಲಾರಂಭಿಸಿದೆ. ಈಗ ಸುಮಾರು 30 ಮಕ್ಕಳು ಕಲಿಯುತ್ತಿದ್ದಾರೆ. ಆರಂಭದಲ್ಲಿ ಮರವೊಂದರ ಕೆಳಗೆ ಪಾಠ ಮಾಡುತ್ತಿದ್ದೆ. ಈಗ ಶ್ರೀನಿವಾಸ್ ಮತ್ತು ಅವರ ಸ್ನೇಹಿತರ ಸಹಾಯದಿಂದ ಶಾಲೆಗಾಗಿಯೇ ಒಂದು ಹೊಸ ಶೆಡ್ ನಿರ್ಮಾಣ ಮಾಡಿದ್ದೇವೆ. ಓದಿಗಾಗಿ ಪುಸ್ತಕಗಳಿವೆ. ಸಂಜೆ ಉಪಹಾರದೊಂದಿಗೆ ಹಾಲು, ಮೊಟ್ಟೆಯನ್ನೂ ಅವರು ಒದಗಿಸುತ್ತಿದ್ದಾರೆ.’ ಹೀಗೆ ಒಂದು ಶೆಡ್ಡಿನೊಳಗೆ ಶಾಲೆ ಶುರುವಾದ ವಾಸ್ತವವನ್ನು ಹಂಚಿಕೊಂಡರು.

ಜಪಾನಿನ ಶಿಹೋ ಸಾಕಾಗುಚಿ ಎಂಬ ಮಹಿಳೆ ಮತ್ತು ಮೇಕ್ ಹ್ಯಾಪಿ, ಬಾರ್ನ್ ಫ್ರೀ ಆರ್ಟ್, ಇಂಡಿಯನ್ ಫೋಕ್​ ಬ್ಯಾಂಡ್ ಸಂಸ್ಥೆಯವರು ಕೂಡ ಈ ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಮಾಡುತ್ತಿದ್ದಾರೆ. ‘ಶಾಲೆಯ ಪರಿಕಲ್ಪನೆಯೇ ಇಲ್ಲದ ಇವರಿಗೆ ಒಂದೆಡೆ ಕೂಡಿಸಿ ತಿಳಿಹೇಳಿ ಪಠ್ಯಪುಸ್ತಕಗಳ ಬಗ್ಗೆ ಅರಿವು ಕೊಟ್ಟು ಪಾಠ ಮಾಡುವುದು ದೊಡ್ಡ ಸವಾಲೇ. ಕೆಲ ಮಕ್ಕಳು ಅವರಷ್ಟಕ್ಕೆ ಅವರೇ ಓದುಬರಹದಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ ಹಲವರು ಸುಮ್ಮಸುಮ್ಮನೆ ಸಿಟ್ಟಿಗೆ ಏಳುವುದು, ಜಗಳ ಮಾಡುವುದು, ಕೀಟಲೆ ಮಾಡುವುದು, ಓದು ಬರಿ ಎಂದರೆ ಓಡಿ ಹೋಗುವುದು… ಹೀಗೆಲ್ಲ ಮಾಡುತ್ತಿದ್ದುದರಿಂದ ಇವರನ್ನು ಹೇಗೆ ನಿಭಾಯಿಸುವುದು ಎಂದು ಚಿಂತೆಯಾಗುತ್ತಿತ್ತು. ಆಗ ಹಾಡು, ನೃತ್ಯ,  ರಂಗಚಟುವಟಿಕೆ, ಕರಕುಶಲ, ದೈಹಿಕ ಚಟುವಟಿಕೆ, ಆಟಗಳಲ್ಲಿ ತೊಡಗಿಸುವುದರ ಮೂಲಕ ಅವರನ್ನು ಶಿಸ್ತಿಗೆ ಹೊರಳಿಸುತ್ತಾ ಬಂದೆವು. ಈಗ ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳನ್ನು ಗುರುತಿಸಲು ಕಲಿತಿದ್ಧಾರೆ. ಅಕ್ಷರಕ್ಕೆ ಅಕ್ಷರ ಸೇರಿಸಿ ಪದಗಳನ್ನು ಓದುತ್ತಾರೆ’ ಎನ್ನುತ್ತಾರೆ ನಾಗೇಶ್.

Nomads Lifestyle Post Covid

ನನ್ನೂ ಶಾಲೆಗೆ ಸೇರಿಸ್ಕೊಳ್ಳಿ…

ನಮ್ಮ ಕುಲಕಸುಬು ಬಿಡುವುದಿಲ್ಲ!

ನಾದಸ್ವರ ಕಲಿತರೆ ಮಾತ್ರ ಮಕ್ಕಳು ನಮ್ಮೊಂದಿಗೇ ಇರುತ್ತಾರೆ. ಓದುಬರಹ ಕಲಿತರೆ ನಮ್ಮನ್ನು ಬಿಟ್ಟು ಹೋಗಿಬಿಡುತ್ತಾರೆ ಎನ್ನುವ ಅವರ ತಪ್ಪು ಗ್ರಹಿಕೆಗೆ ಶಿಕ್ಷಣವೇ ಮದ್ದು. ಆದರೆ ಎಲ್ಲವೂ ಒಮ್ಮೆಲೇ ಅವರ ತಿಳಿವಿಗೆ ನಿಲುಕುವುದು ಹೇಗೆ? ಹಂತಹಂತವಾಗಿ ಪ್ರಾಯೋಗಿಕವಾಗಿ ತಿಳಿಸಿದಾಗಲೇ ಅವರ ನಿಲುವುಗಳು ಬದಲಾಗುವುದು. ಈಗವರು, ನಾವಂತೂ ಓದಲಿಲ್ಲ ನಮ್ಮ ಮಕ್ಕಳಾದರೂ ಓದಲಿ, ಜೊತೆಗೆ ನಾದಸ್ವರವನ್ನೂ ಕಲಿಯಲಿ. ಆದರೆ ದೂರದ ಶಾಲೆಗಂತೂ ಕಳಿಸುವುದಿಲ್ಲ ಎಂಂಬಲ್ಲಿಗೆ ಬಂದಿದ್ದಾರೆ ಎಂದರೆ, ಶಿಕ್ಷಣದ ಮಹತ್ವ ಅವರಿಗೆ ತಿಳಿಯುತ್ತಿದೆ. ಬಡತನ, ಕೀಳರಿಮೆ, ಶೈಕ್ಷಣಿಕವಾಗಿ ಹಿಂದುಳಿದಿರುವ ಅಸಹಾಯಕತೆ ಮತ್ತರಿಂದ ಎದುರಿಸುತ್ತಿರುವ ಸವಾಲು, ಸಮಸ್ಯೆಗಳು ತಮ್ಮ ಪೀಳಿಗೆಗೇ ಕೊನೆಯಾಗಲಿ ಎಂಬ ಆಶಯವೂ ಅವರಲ್ಲಿದೆ. ಆ ಕಾರಣದಿಂದಲೇ ನಾಗೇಶ್ ಅವರ ಬಳಿ ತಮ್ಮ ಮಕ್ಕಳನ್ನು ಪಾಠಕ್ಕಾಗಿ ಕಳಿಸುತ್ತಿರುವುದು ಒಂದು ಉತ್ತಮ ಬೆಳವಣಿಗೆ.

ಇಂಥ ಅಲೆಮಾರಿಗಳು ನಾವು ನೀವು ವಾಸಿಸುವ ಪ್ರದೇಶಗಳಲ್ಲಿ ಇದ್ದೇ ಇರುತ್ತಾರೆ. ಸ್ಥಿತಿವಂತರು, ವಿದ್ಯಾವಂತರಾದ ಯಾರೂ ಅವರಿಗೆ ಸಹಾಯ ಮಾಡಬಹುದು. ಸ್ವಯಂ ಸಂಘಟಿತರಾಗಿ ಅವರೊಂದಿಗೆ ಬೆರೆಯಬಹುದು. ಪರಸ್ಪರರು ಅರ್ಥವಾಗುವುದು ಒಡನಾಟದೊಂದಿಗೇ. ಅದಕ್ಕಾಗಿ ಮೈಚಳಿ ಬಿಟ್ಟು ಹೆಜ್ಜೆ ಇಡಬೇಕು. ಯಾವುದ್ಯಾವುದೋ ಕಾರಣಗಳಿಂದ ಉಂಟಾದ ನಮ್ಮೊಳಗಿನ ಖಾಲೀತನವನ್ನು ತುಂಬಿಕೊಳ್ಳಲು ಇಂಥ ಚಟುಚಟಿಕೆಗಳಲ್ಲಿ ತೊಡಗಿಕೊಳ್ಳುವುದು ಸೂಕ್ತ ಎನ್ನಿಸುವುದಿಲ್ಲವೆ? ಎಲ್ಲವೂ ಹಣಕಾಸಿನ ಮೂಲಕವೇ ಸಹಾಯ ಮಾಡಬೇಕೆಂದೇನೂ ಇಲ್ಲ. ನಮಗೆ ಗೊತ್ತಿರುವ ಕೌಶಲಗಳನ್ನು ಅವರಿಗೆ ಹೇಳಿಕೊಡಬಹುದು. ಸ್ವಚ್ಛತೆಯ ಬಗ್ಗೆ ಅರಿವು, ಶಿಕ್ಷಣದ ಬಗ್ಗೆ ತಿಳಿವಳಿಕೆ, ಸಾಮಾಜಿಕ ನಡೆನುಡಿ, ಕಾನೂನಿನ ಮಾಹಿತಿ, ಮಕ್ಕಳನ್ನು ಹೇಗೆ ಬೆಳೆಸಬೇಕು ಎಂದು ಜಾಗೃತಿ ಮೂಡಿಸುವುದು ಇತ್ಯಾದಿ ವಿಷಯಗಳ ಬಗ್ಗೆ ಅವರಿಗೆ ಅರ್ಥ ಮಾಡಿಸಬಹುದು. ಏಕೆಂದರೆ, ಅಗತ್ಯ ಸಮಯದಲ್ಲಿ ಮಕ್ಕಳಿಗೆ ಸಿಗಬೇಕಾದ ಶಿಕ್ಷಣ ಸಿಗದೇ ಹೋದಲ್ಲಿ ಅಪರಾಧ ಜಗತ್ತಿನೊಳಗೆ ಆ ಎಲ್ಲ ಮುಖಗಳನ್ನು ನಾವು ಎದುರುಗೊಳ್ಳಬೇಕಾಗುತ್ತದೆ! ಬೇಡ ಅಲ್ಲವೆ?

Nomads Lifestyle Post Coronaa

ಲೇಖಕಿ ಜ್ಯೋತಿ ಎಸ್. ಅಲೆಮಾರಿ ಕುಟುಂಬದೊಂದಿಗೆ

ಇದನ್ನೂ ಓದಿ : Journalism : ‘ನನ್ನ ಮೂರು ಮಕ್ಕಳೊಂದಿಗೆ ನಾನೂ ಓದುತ್ತ ಬರೆಯುತ್ತ ಬೆಳೆಯುತ್ತಿದ್ದೇನೆ’

ಇದನ್ನೂ ಓದಿ : Lotus : ಮಗುವಂತೂ ಬದುಕಲಿಲ್ಲ, ಮಾಡಿದ ಸಾಲಕ್ಕೆ ತಾವರೆಯೇ ಆಸರೆ

Published On - 4:30 pm, Thu, 30 September 21

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?