Motherhood; ನಾನೆಂಬ ಪರಿಮಳದ ಹಾದಿಯಲಿ: ನಡೆಯಬೇಕಾದ ಹಾದಿ ತುಂಬಾ ದೂರವಿದೆ, ಒಟ್ಟಿಗೇ ನಡೆಯುತ್ತಿದ್ದೇವೆ…

ADHD: ‘ಮಗಳನ್ನು ಬಸ್ಸಿಗೆ ಕರೆದುಕೊಂಡು ಹೋಗುವಾಗಲೆಲ್ಲ ಯೋಚಿಸುತ್ತಿದ್ದೆ, ನಾವೂ ಆರ್ಥಿಕವಾಗಿ ಗಟ್ಟಿಯಾಗಿದ್ದಿದ್ದರೆ ಕಾರೋ ಬೈಕೋ ತಗೋಬಹುದಿತ್ತು ಅಂತ. ಆದರೆ ಈಗ ಯೋಚಿಸುತ್ತಿದ್ದೇನೆ, ಆಗ ನಮಗೆ ದುಡ್ಡಿಲ್ಲದಿದ್ದದ್ದೇ ಒಳ್ಳೆದಾಯಿತು ಎಂದು. ಬಸ್ಸಿನಲ್ಲೇ ಓಡಾಡಿದ ಕಾರಣಕ್ಕಾಗಿಯೇ ಇಂದು ನನ್ನ ಮಗಳು ಬಸ್ಸಿನಲ್ಲಿ ನೆಟ್ಟಗೆ ನಿಲ್ಲುವುದನ್ನು, ಹ್ಯಾಂಡಲ್ ಹಿಡಿಯುವುದನ್ನು ಕಲಿತಳು. ಹತ್ತುವುದು, ಇಳಿಯುವುದು, ನಿಲ್ಲುವುದು ಅನಿವಾರ್ಯವಂತಾದಾಗ ಆ ಅಭ್ಯಾಸದದಿಂದಲೇ ಆಕೆಯಲ್ಲಿ ಬೆಳವಣಿಗೆ ಕಾಣುತ್ತ ಹೋಯಿತು.‘ ಜಯಮಾಲಾ ಅಶೋಕ್

Motherhood; ನಾನೆಂಬ ಪರಿಮಳದ ಹಾದಿಯಲಿ: ನಡೆಯಬೇಕಾದ ಹಾದಿ ತುಂಬಾ ದೂರವಿದೆ, ಒಟ್ಟಿಗೇ ನಡೆಯುತ್ತಿದ್ದೇವೆ...
ಮಗಳು ಐಶ್ವರ್ಯ ತಾಯಿ ಜಯಮಾಲಾ
Follow us
|

Updated on:Feb 10, 2021 | 6:26 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಬೆಂಗಳೂರಿನ ಜಯಮಾಲಾ ಅಶೋಕ್ ಅವರು ವಿಶೇಷ ಮಕ್ಕಳಿಗಾಗಿ ವೃತ್ತಿ ತರಬೇತಿ ಕೇಂದ್ರವನ್ನು ತೆರೆಯಬೇಕು ಮತ್ತದಕ್ಕೆ ಸಹಕಾರವೂ ಬೇಕು ಎಂದು ಹಂಬಲಿಸುತ್ತಿರುವುದರ ಹಿಂದೆ ಎಷ್ಟೊಂದು ಪರಿಶ್ರಮವಿದೆ, ಮನೋಬಲವಿದೆ ಎನ್ನುವುದನ್ನು ಅವರ ಬದುಕಿನ ಪುಟಗಳಿಂದ ತಿಳಿದುಕೊಳ್ಳಿ.

ಅಂದು ಅಮ್ಮ ಚೀನಿಕಾಯಿ ಅಂದರೆ ಕಡುಬು ಮಾಡಲು ತಯಾರಿ ಮಾಡಿಕೊಂಡಿದ್ದಳು. ಅವಳಿಗೆ ನಾವೆಲ್ಲ ಅವಳ ಮನೆಗೆ ಬಂದ ಸಂಭ್ರಮ. ಆದರೆ ನಾವು ಯಾವುದೇ ಸಂಭ್ರಮದಲ್ಲಿರಲಿಲ್ಲ. ಭದ್ರಾವತಿಯಲ್ಲಿದ್ದ ಅಮ್ಮನ ಮನೆಗೆ ನಾವು ಹೋಗಿದ್ದೇ ಬೇರೆ ಕಾರಣಕ್ಕಾಗಿತ್ತು. ನನ್ನ ಮಗಳು ಐಶ್ವರ್ಯಾ ಹುಟ್ಟಿ ಎರಡು ವರ್ಷಗಳ ಮೇಲಾಗಿತ್ತು. ಎರಡು ವರ್ಷಗಳಾದರೂ ಅವಳು ನಡೆಯುತ್ತಿರಲಿಲ್ಲ, ನೆಟ್ಟಗೆ ನಿಲ್ಲುತ್ತಿರಲಿಲ್ಲ, ಮಾತನಾಡಲು ಬರುತ್ತಿರಲಿಲ್ಲ. ಅಷ್ಟೊತ್ತಿಗಾಗಲೇ ಸಾಕಷ್ಟು ವೈದ್ಯರಿಗೆ ತೋರಿಸಿಯಾಗಿತ್ತು. ಯಾರೋ ಹೇಳಿದ್ದರು, ನರರೋಗ ತಜ್ಞರಿಗೆ ತೋರಿಸಿ ಎಂದು. ಆ ಕಾರಣಕ್ಕಾಗಿ ನಾವು ಶಿವಮೊಗ್ಗದಲ್ಲಿರುವ ನರರೋಗ ತಜ್ಞರಾದ ಡಾಕ್ಟರ್ ಶಿವರಾಂ ಕೃಷ್ಣ ಅವರ ಬಳಿ ಮಗಳು ಐಶ್ವರ್ಯಳನ್ನು ಕರೆದುಕೊಂಡು ಹೊರಟಿದ್ದೆವು.

ಎಲ್ಲಾ ತಪಾಸಣೆ ಪ್ರಶ್ನಾವಳಿಗಳು ಮುಗಿದ ಬಳಿಕ ಡಾಕ್ಟರ್ ಹೇಳಿದ್ದು, ಈ ಮಗುವಿನ ಮೆದುಳಿನ ಬೆಳವಣಿಗೆ ನಿಧಾನವಾಗಿದ್ದರಿಂದ ಎಲ್ಲಾ ಬೆಳವಣಿಗೆಗಳು ನಿಧಾನ. ಕಾಲಿಗೆ ವಿಶೇಷ ರೀತಿಯಲ್ಲಿ ಬೂಟು ಮಾಡಿಸಿ ಹಾಕಿದರೆ ನಡೆಯಲು ಸಹಾಯವಾಗುತ್ತದೆ ಅಂದರು. ಅಲ್ಲದೆ ಈ ಸ್ಥಿತಿಗೆ ಔಷಧಿ ಎಂಬುದಿಲ್ಲ. ಬೇರೆಲ್ಲೂ ತಪಾಸಣೆ ಚಿಕಿತ್ಸೆ ಅಂತ ಹೋಗಿ ಹಣ ಕಳೆದುಕೊಳ್ಳಬೇಡಿ ಎಂದೂ ಎಚ್ಚರಿಸಿದರು. ಅಲ್ಲಿಂದ ಅಮ್ಮನ ಮನೆ ಭದ್ರಾವತಿ ಸಮೀಪದ ಹಳ್ಳಿ ಗೋಪಾಲ ಕಾಲೋನಿಯ ಬಸ್ಸು ಹತ್ತಿದೆವು. ನನಗೂ ಡಾಕ್ಟರ್ ಏನು ಹೇಳಿದರು ಅದರ ಅರ್ಥ ಏನು? ಹಾಗಾಗಿರಬಹುದು ಹೀಗಾಗಿರಬಹುದು… ಎಂದೆಲ್ಲಾ ನೂರೆಂಟು ಯೋಚಿಸಿ ಬುದ್ಧಿಮಾಂದ್ಯ ಮಕ್ಕಳು ಎನ್ನುತ್ತಾರಲ್ಲ, ಅಂತಹ ಮಗೂನಾ ಇದು ಎಂಬ ಒಂದು ಸಣ್ಣ ಸುಳಿವು ಮನಸ್ಸಲ್ಲಿ ಹಾದುಹೋಯಿತು ಅಷ್ಟೇ. ನನ್ನ ಹಿಡಿತಕ್ಕೆ ಸಿಕ್ಕದಂತೆ ಕಣ್ಣೀರು ಜಾರಿ ಬಿಟ್ಟಿತು. ಮನೆ ತಲುಪುತ್ತಿದ್ದಂತೆ ಕಡುಬು ಮಾಡಿಟ್ಟುಕೊಂಡ ಅಮ್ಮನಿಗೆ ಬಡಿಸಿ ತಿನ್ನಿಸುವ ಸಂಭ್ರಮ. ನಾನು ಕತ್ತಲೆಗಾಗಿ ಕಾಯುತ್ತಿದ್ದೆ, ಮಲಗಿ ಒಂದಷ್ಟು ಅತ್ತುಬಿಡಬೇಕೆಂದು. ರಾತ್ರಿಯೆಲ್ಲಾ ಅಳುತ್ತಲೇ ಮಲಗಿದೆ. ಕೊನೆಗೆ ನನಗೆ ನಾನೇ ಸಮಾಧಾನ ಮಾಡಿಕೊಂಡೆ ಇಲ್ಲ, ಇದು ಹಾಗಾಗಿರಲಿಕ್ಕಿಲ್ಲ. ನಾನೇ ತಪ್ಪಾಗಿ ತಿಳಿದುಕೊಂಡಿರಬಹುದು. ಡಾಕ್ಟರ್ ಹೇಳಿದ್ದು ಎಲ್ಲಾ ನಿಧಾನವೆಂದು. ಆದರೇನಂತೆ ಎಲ್ಲರಿಗಿಂತ ಸ್ವಲ್ಪ ತಡವಾದರೂ ಪರವಾಗಿಲ್ಲ ಕೊನೆಗಾದರೂ ಎಲ್ಲರಂತೆ ಆಗುತ್ತಾಳಲ್ಲ’ ಎಂದು ಸಮಾಧಾನ ತಂದುಕೊಂಡೆ.

ಇದನ್ನೂ ಓದಿ: ನಾನೆಂಬ ಪರಿಮಳದ ಹಾದಿಯಲಿ: ಅಮ್ಮನೆಂಬ ಪಂಜರದ ಹಕ್ಕಿ ರೆಕ್ಕೆ ಬಿಚ್ಚಿ ಹಾರುವಾಗ

ಆನಂತರದಲ್ಲಿ ದಿನದಿಂದ ದಿನಕ್ಕೆ ತಿಳಿಯುತ್ತಾ ಹೋಯಿತು. ಇದು ನಿಧಾನಗತಿ ಅಲ್ಲ. ಇದು ಬೇರೆಯೇ ಥರ ಎಂದು. ಒಮ್ಮೆ ನನ್ನ ಅಕ್ಕನಿಗೆ ಪತ್ರ ಬರೆದಿದ್ದೆ, ನನ್ನ ಮಗಳಿಗೆ ಕಣ್ಣಿನ ತೊಂದರೆ ಇದೆ, ಕಾಲಿನ ತೊಂದರೆ ಇದೆ, ಮಾತಿನ ತೊಂದರೆ ಇದೆ. ದೇವರು ಎಲ್ಲಾ ತೊಂದರೆಗಳನ್ನು ನನ್ನ ಮಗಳಿಗೇ ನೀಡಿದ್ದಾನೆ ಅನಿಸುತ್ತದೆಂದು. ಆಗ ನನಗೆ ಇವೆಲ್ಲದಕ್ಕೂ ಮೆದುಳಿನ ಬೆಳವಣಿಗೆಗೆ ಮೂಲ ಕಾರಣ ಎಂದು ತಿಳಿದಿರಲಿಲ್ಲ. ನಿಜ, ನನ್ನ ಮಗಳು ಐಶ್ವರ್ಯಾ ಎಲ್ಲ ಮಕ್ಕಳಂತಲ್ಲ. ಅವಳು ಒಂದು ಸಿ.ಪಿ. ಮಗು. ಅಂದರೆ ಸರೆಬ್ರಲ್ ಪಾಲ್ಸಿ. ಅಂದರೆ ದೈಹಿಕ ತೊಂದರೆ ಇರುವ, ಬುದ್ಧಿಯಲ್ಲಿ ಮಾಂದ್ಯ ಆಗಿರುವ ಮಗು ಎಂದರ್ಥ; ADHD-Attention deficit hyperactivity disorder.

ಭದ್ರಾವತಿಯವಳಾದ ನಾನು ಮದುವೆಯಾಗಿ ಹೋಗಿದ್ದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾವಿನಬೀಳು ಎಂಬ ಗ್ರಾಮಕ್ಕೆ. ಪತಿ ಅಶೋಕ್ ಭಟ್ಟ ಬೆಂಗಳೂರಿನಲ್ಲಿ ನೌಕರಿಯಲ್ಲಿದ್ದರು. ಮೊದಲ ಬಸಿರಿನ ಸಂಭ್ರಮದಲ್ಲಿದ್ದ ನನಗೆ ಮುಂದೊಂದು ದಿನ ಇಂಥ ಮಗು ಹುಟ್ಟುತ್ತದೆಂಬ ಯಾವ ಕಲ್ಪನೆಯೂ ಇರಲಿಲ್ಲ. ಹುಟ್ಟಿದ ಮೇಲೂ ಮಗು ಹೀಗಿದ್ದಿರಬಹುದು ಎಂದು ಅರ್ಥಮಾಡಿಕೊಳ್ಳಲೇ ಸಾಕಷ್ಟು ವರ್ಷಗಳು ಬೇಕಾಯಿತು. ಮಗಳಿಗೆ ನಾಲ್ಕು ವರ್ಷ ಆಯ್ತು. ಶಾಲೆಗೆ ಸೇರಿಸುವ ವಯಸ್ಸು. ಇವಳಿಗೂ ನಡೆಯಲು ಬಾರದು. ಮಾತು ಬಾರದು. ಶೌಚಾಲಯಕ್ಕೆ ಹೋಗಲು ತಿಳಿಯದು. ಎಲ್ಲಿ ಹೇಗೆ ಎಂದು ದಿಕ್ಕು ತೋಚದಾದಾಗ ಸಿಬಿಆರ್ ನೆಟ್‍ವರ್ಕ್‍ನ ರೀಜಿನಲ್ ನಿರ್ದೇಶಕಿ ಇಂದುಮತಿ ರಾವ್ ಅವರ ಸಂಪರ್ಕವಾಯಿತು. ಅಲ್ಲಿ ಮೊದಲು ಮೂರು ದಿನಗಳ ತರಬೇತಿ ನನಗೆ ಆಯಿತು. ಸಜ್ಜನರಾವ್ ವಿದ್ಯಾಸಂಸ್ಥೆಯಲ್ಲಿ ವಿಶೇಷ ವಿಭಾಗ ಇದೆ. ಅಲ್ಲಿ ಸೇರಿಸಲು ಸೂಚಿಸಿದರು. ಓಹೋ ಇಂಥ ಮಕ್ಕಳಿಗೂ ಶಾಲೆ ಇದೆ. ಅವರು ವಿಶೇಷ ತರಬೇತಿ ಪಡೆದಿರುವ ಕಾರಣ ನಮ್ಮ ಮಗುವನ್ನು ಎಲ್ಲಾ ಸರಿ ಮಾಡುತ್ತಾರೆ. ಮಗಳು ಸರಿ ಹೋಗುತ್ತಾಳೆ ಎಂಬ ಹುಚ್ಚು ನಿರೀಕ್ಷೆ ನನ್ನೊಳಗೆ. ಆಗಲೂ ನನಗೆ ವಾಸ್ತವದ ಅರಿವಿರಲಿಲ್ಲ . ಅಲ್ಲಿನ ಎಚ್ಎಂ ಮಂಗಲ ನಾಗರಕಟ್ಟೆಯವರು ಹಣಕಾಸಿನ ತೊಂದರೆಯಿದ್ದರೆ ಐದಾರು ಕಂತುಗಳಲ್ಲಿ ಶುಲ್ಕ ಭರಿಸಿ. ಆದರೆ ಸಮಯ ಹಾಳು ಮಾಡದೆ ಈಗಲೇ ಸೇರಿಸಿ ಎಂದು ಹೇಳಿ ಅಡ್ಮಿಷನ್ ಮಾಡಿಸಿಕೊಂಡರು. ಅಲ್ಲಿನ ಶಿಕ್ಷಕಿಯರು ತುಂಬಾ ಪ್ರೋತ್ಸಾಹ ನೀಡಿ ನಮಗೂ ಕೂಡ ಕೆಲವು ತರಬೇತಿ ನೀಡಿದರು. ಅವೆಲ್ಲವನ್ನೂ ಚಾಚೂತಪ್ಪದೆ ಮನೆಯಲ್ಲಿ ಪಾಲಿಸುತ್ತಾ ಹೋದೆ.

Naanemba Parimaladha Haadhiyali

ಸಾಂದರ್ಭಿಕ ಚಿತ್ರ

ಅಲ್ಲಿಂದ ಶುರುವಾಯಿತು ಮಗಳಿಗೆ ಕಲಿಸುವ ಸಂಕಟ. ಫಿಸಿಯೋಥೆರಫಿ, ಸ್ಪೀಚ್ ತೆರಪಿ, ಆಕ್ಯುಪ್ರೆಶರ್, ರೇಖಿ ಚಿಕಿತ್ಸೆ ಜೊತೆಗೆ ವಿವಿಧ ರೀತಿಯ ತರಬೇತಿ ಸ್ವಸಹಾಯ, ಬುದ್ಧಿ ಚುರುಕುಗೊಳಿಸುವ ಬೇರೆಬೇರೆ ಚಟುವಟಿಕೆಗಳು, ಅದಕ್ಕಾಗಿ ಬೇಕಾಗುವ ಸಲಕರಣೆಗಳ ತಯಾರಿಕೆ, ಸಮಾಜದಲ್ಲಿ ಬೆರೆಯಲೆಂದು ಪಾರ್ಕು, ಅಲ್ಲಿ ಇಲ್ಲಿ ಸುತ್ತಾಡಿಸುವುದು. ಹೀಗೆ ಜೀವನ ಮಗಳಿಗಾಗಿ ಮೀಸಲಾಯಿತು. ಮಗಳು ಹೀಗೆ ಇರುವಳೆಂದು ಮನೆಯಲ್ಲೇ ಬಿಟ್ಟು ಹೋಗಲಿಲ್ಲ. ಎಲ್ಲಾ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗುತ್ತಿದ್ದೆವು. ಎಷ್ಟೋ ಬಾರಿ ಇವಳ ನಡವಳಿಕೆ ಇರಿಸುಮುರಿಸು ಆಗುವಂತೆ ಮಾಡಿದರೂ ಅವಳು ಕಲಿಯಬೇಕು ಬೆರೆಯಬೇಕು ಎಂಬ ಕಾರಣಕ್ಕೆ ಎಲ್ಲ ಕಡೆ ಕರೆದುಕೊಂಡು ಹೋಗುತ್ತಿದ್ದೆವು. ಯಾರು ಏನೇ ಹೇಳಿದರೂ ಅಲ್ಲಿಗೆ ಹೋಗುತ್ತಿದ್ದೆ. ಅದು ಪ್ರಯೋಜನವಾಗಲಿಕ್ಕಿಲ್ಲ ಎನಿಸಿದರೂ ಒಂದು ಸಣ್ಣ ಆಸೆ, ಅವಳು ಸರಿಹೋಗಿಬಿಡಬಹುದು ಎಂದು. ನಮ್ಮವರು ದುಡಿಮೆ ಕಡೆ ಗಮನ ಹರಿಸಿದರೆ ನಾನು ಮಗು-ಮನೆಗಾಗಿ ಮೀಸಲಾದೆ. ಎಲ್ಲಾ ಕಡೆ ಮಗುವನ್ನು ಕಂಕುಳಿಗೆ ಏರಿಸಿ ಅವಳಿಗಾಗಿ ಎರಡು ಮೂರು ಜೊತೆ ಬಟ್ಟೆ ತುಂಬಿದ ಚೀಲವನ್ನು ಬಗಲಿಗೆ ನೇತಾಕಿಕೊಂಡು ಬಸ್ಸು ಹಿಡಿದು ಹೋಗುತ್ತಿದ್ದೆ.

ಮಗಳು ಸ್ನಾನ ಮಾಡಿದಳು ಇದೇ ಅವಳ ಬಹುದೊಡ್ಡ ಸಾಧನೆಯಾಗಿತ್ತು ಆಗ. ಇಲ್ಲಿ ಪ್ರತಿಯೊಂದೂ ಕಲಿಕೆಯೇ ಆಗುತ್ತಿತ್ತು. ಯಾವ ಮುದ್ದು, ಪ್ರೀತಿ, ಕರುಣೆ ಎಲ್ಲವನ್ನೂ ತೊರೆದು ಇವಳನ್ನು ಕಡೇಪಕ್ಷ ಇವಳ ಕೆಲಸ ಮಾಡುವಷ್ಟಾದರೂ ತಯಾರು ಮಾಡಬೇಕೆಂದಷ್ಟೇ ನನ್ನ ತಲೆಯೊಳಗಿದ್ದದ್ದು. ಹಾಗಾಗಿ ಪ್ರತಿಯೊಂದನ್ನೂ ಅವಳಿಂದಲೇ ಮಾಡಿಸುತ್ತಿದ್ದೆ. ಅವಳಿಗೆ ಮೊದಲು ಚಮಚ ಹಿಡಿಯುವುದನ್ನು ಕಲಿಸಬೇಕಿತ್ತು. ನಂತರ ಲೋಟ, ಕಡೆಗೆ ಚೊಂಬು ಹಿಡಿದು ಅವಳು ಸ್ನಾನ ಮಾಡುವಷ್ಟು ತಯಾರಾದಳು. ಒಂದೊಂದನ್ನು ಕಲಿಸುವಾಗಲೂ ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿತ್ತು. ತಾಳ್ಮೆ ಒಂದು ಬಿಟ್ಟು ಬೇರೇನೂ ಕೆಲಸಕ್ಕೆ ಬರುತ್ತಿರಲಿಲ್ಲ. ಅವಳೇ ಊಟ ಮಾಡುವುದು ಕಲಿಯಬೇಕೆಂದು ಅವಳನ್ನು ಉಪವಾಸ ಕೆಡವಿದ್ದೂ ಇದೆ. ಹಸಿವಾದರೆ ತನ್ನಾರೆ ಊಟ ಮಾಡುತ್ತಾಳೆಂದು. ಆದರೆ ನಂತರ ತಿಳಿಯಿತು, ಇಂತಹ ಮಕ್ಕಳಿಗೆ ಹಂತಹಂತವಾಗಿ ಹೇಳಿಕೊಡಬೇಕೇ ಹೊರತು ತಕ್ಷಣ ಯಾವುದನ್ನೂ ಕಲಿಯುವುದಿಲ್ಲ ಎಂದು.

ಒಮ್ಮೆ ಶಾಲೆಗೆ ಹೋಗುವಾಗ ರಸ್ತೆಯಲ್ಲಿ ಬಿದ್ದುಬಿಟ್ಟಳು. ಕೂತಲ್ಲೇ ಅಳತೊಡಗಿದಳು ಎತ್ತಿಕೋ ಎಂದು. ನಾನು ಏಳು ಏಳು ಎನ್ನುತ್ತಿದ್ದೆ. ಆದರೆ ಮಗಳು ಅಳುತ್ತಿದ್ದಳೇ ಹೊರತು ಏಳಲಿಲ್ಲ. ಅಕ್ಕಪಕ್ಕ ಇದ್ದವರೆಲ್ಲ ನನ್ನ ಬಯ್ಯತೊಡಗಿದರು. ನೀನೆಂಥ ತಾಯಿ. ಮಗಳು ಅಷ್ಟು ಅಳುತ್ತಿದ್ದರೂ ಎತ್ತಿಕೊಳ್ಳಬೇಕೆಂದು ನಿನಗೆ ತಿಳಿಯುವುದಿಲ್ಲವಾ ಎಂದು. ಎಲ್ಲರ ಬೈಗುಳಗಳಿಗೂ ನಾನು ಕಿವುಡಿಯಾಗಿದ್ದೆ. ನನಗೆ ಮಗಳು ಸ್ವತಂತ್ರವಾಗಿ ಎದ್ದುನಿಲ್ಲಬೇಕಿತ್ತು. ಆ ಸಮಯದಲ್ಲಿ ಕರುಣೆ ತೋರಿಸಿದ್ದಾದಲ್ಲಿ ಮಗಳು ಎದ್ದು ನಿಲ್ಲುತ್ತಿರಲಿಲ್ಲ. ಇಂಥ ಘಟನೆಗಳು ನನ್ನ ಜೀವನದಲ್ಲಿ ನೂರಾರು ನಡೆದಿವೆ. ಎಲ್ಲದಕ್ಕೂ ಮನಸ್ಸು ಕಲ್ಲು ಮಾಡಿಕೊಂಡೇ ಮುಂದೆ ಸಾಗುತ್ತ ಬಂದಿದ್ದೇನೆ.

Naanemba Parimaladha Haadhiyali

ಸಾಂದರ್ಭಿಕ ಚಿತ್ರ

ಅರುಣ ಚೇತನ ಮಗಳು ಐಶ್ವರ್ಯಳಿಗೆ ಆರೂವರೆ ವರ್ಷವಾದಾಗ ಆಕೆಗೆ ತಂಗಿಯ ಆಗಮನವಾಯಿತು. ಆ ಮಗುವಿನ ಲಾಲನೆ ಪಾಲನೆ, ಇಬ್ಬರಲ್ಲಿ ಹೊಂದಾಣಿಕೆ ಮೂಡಿಸುವ ಮತ್ತಷ್ಟು ಜವಾಬ್ದಾರಿ ನನ್ನ ಹೆಗಲಿಗೇರಿತು. ಐಶ್ವರ್ಯಳನ್ನು ಅಲಕ್ಷಿಸುವಂತಿಲ್ಲ. ತಂಗಿಯ ಕಡೆ ಗಮನ ಕಡಿಮೆ ಮಾಡುವಂತಿಲ್ಲ ಹೇಗೋ ಎಲ್ಲವನ್ನೂ ಸರಿದೂಗಿಸಿಕೊಂಡು ಬಂದೆ. ಮಗಳಿಗೆ ಎಂಟು ವರ್ಷ ಆದಾಗ ಮಲ್ಲೇಶ್ವರಂನಲ್ಲಿರುವ ಅರುಣ ಚೇತನ ವಿಶೇಷ ಶಾಲೆಗೆ ಸೇರಿಸಿದೆವು. ಅಲ್ಲಿ ಅವಳನ್ನು ಯುಕೆಜಿ ತರಗತಿಗೆ ಸೇರಿಸಿಕೊಂಡರು. ಅಲ್ಲಿ ಐದನೇ ತರಗತಿಯವರೆಗೆ ಓದಿ, ಈಗ ಅರುಣ ಚೇತನದ ವೃತ್ತಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಅರುಣ ಚೇತನ ಶಾಲೆಯಲ್ಲಿ ಪೋಷಕರಿಗೆ, ಮಕ್ಕಳಿಗೆ ಕಲಿಸಲು ಅವರಿಗೆ ತರಬೇತಿ ನೀಡಲು ಕೇರ್ ಗಿವರ್ಸ್ ಕೋರ್ಸ್ ಎಂದು ಆರು ತಿಂಗಳ ಕೋರ್ಸ್ ಮಾಡಿದರು. ಅದು ಮಗಳಿಗೆ ತರಬೇತಿ ನೀಡಲು ತುಂಬಾ ಸಹಾಯವಾಯಿತು .

ನನಗೆ ಮೊದಲಿನಿಂದಲೂ ಹೊರಗೆ ಹೋಗಿ ಕೆಲಸ ಮಾಡಬೇಕೆಂಬ ಹಂಬಲವಿತ್ತು . ಆದರೆ ಅದು ಅಸಾಧ್ಯ ಎಂದು ತಿಳಿದು ಆ ಕನಸಿಗೆ ಎಳ್ಳುನೀರು ಬಿಟ್ಟಿದ್ದೆ. ಮಗಳು ಸ್ವಲ್ಪಮಟ್ಟಿಗೆ ನಿಭಾಯಿಸುವಂತಾದಾಗ ನಮ್ಮವರು ಒತ್ತಾಯ ಮಾಡಿ ಕೆಸ್‍ಓಯು ನವರು ಕರೆಸ್ಪಾಂಡೆನ್ಸ್ ನಲ್ಲಿ ನಡೆಸುತ್ತಿದ್ದ ಸ್ಪೆಷಲ್ ಬಿ. ಎಡ್. ಗೆ ಸೇರಿಸಿದರು. ಈಗ ಎಂಟು ಹತ್ತು ವರ್ಷಗಳ ಹಿಂದೆ ಬಿ. ಎಡ್. ವಿಶೇಷ ಶಿಕ್ಷಣವನ್ನು ಡಿಸ್ಟಿಂಕ್ಷನ್​ನಲ್ಲಿ ಪಾಸು ಮಾಡಿದೆ. ಆಗ ಕೂಡ ನಮ್ಮವರು ಹೊರಗೆ ಹೋಗಿ ಕೆಲಸ ಮಾಡುವ ನನ್ನ ಹಂಬಲವನ್ನು ನೆನಪಿಸಿ ವಿಶೇಷ ಶಾಲೆಯಲ್ಲಿ ಕೆಲಸ ಮಾಡುವಂತೆ ಪ್ರೋತ್ಸಾಹಿಸಿದರು. ಅದೇ ಸಮಯದಲ್ಲಿ ಅರುಣ ಚೇತನ ಶಾಲೆಯವರು ಕೂಡ ನನಗೆ ಅಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದರು .

ಅರುಣ ಚೇತನ ವಿಶೇಷ ಶಾಲೆಯಲ್ಲಿ ಆರು ವರ್ಷಗಳ ಕಾಲ ವಿಶೇಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದೆ. ಅಲ್ಲಿ ಬೇರೆ ಮಕ್ಕಳ ತೊಂದರೆ ಬೇರೆ ಪೋಷಕರ ಕಷ್ಟಗಳನ್ನು ನೋಡಿ ನನ್ನ ಕಷ್ಟ ತೀರಾ ಚಿಕ್ಕದು ಎನಿಸತೊಡಗಿತು. ಈಗ ಐಶ್ವರ್ಯಾಳಿಗೆ ವಯಸ್ಸು 21. ಈಗ ಶೇ. 85ರಿಂದ 90ರಷ್ಟು ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಾಳೆ. ಹೇಳಿದ್ದನ್ನು ಅರ್ಥಮಾಡಿಕೊಂಡು ಸಮಯಕ್ಕೆ ಹೊಂದಿಕೊಳ್ಳುತ್ತಾಳೆ. ಸಣ್ಣಪುಟ್ಟ ಮನೆಕೆಲಸಗಳನ್ನೂ ಮಾಡುತ್ತಾಳೆ. ಕೈಹಿಡಿದುಕೊಂಡರೆ ಕ್ಯಾಲಿಪರ್ ಹಾಕಿಕೊಂಡು ಒಂದು ಕಿಲೋಮೀಟರ್​ವರೆಗೂ ನಡೆಯುತ್ತಾಳೆ. ಮೂರುನಾಲ್ಕು ತಾಸಿನವರೆಗೂ ಮನೆಯಲ್ಲಿ ಒಬ್ಬಳೇ ಇರುತ್ತಾಳೆ. ಒಂದರಿಂದ ಎರಡು ವಾಕ್ಯ ಓದುತ್ತಾಳೆ. ಕಂಪ್ಯೂಟರ್, ಮೊಬೈಲ್, ಟಿವಿ ಆಪರೇಟ್ ಮಾಡುತ್ತಾಳೆ. ಯಾರಿಗೂ ತೊಂದರೆಯಾಗದಂತೆ ಆಕೆ ಇರಬಲ್ಲಳಾದರೂ ಮುಂದೆ ಹೇಗೆ ಏನೋ ಎಂಬ ಚಿಂತೆ ಹೆತ್ತವರಾದ ನಮಗೆ ಇದ್ದೇ ಇರುತ್ತದೆ. ಅಂದರೆ ನಾವು ಸಾಧಿಸಬೇಕಾದ ಹಾದಿ ತುಂಬ ಉದ್ದವಿದೆ. ನಡೆಯುತ್ತಿದ್ದೇವೆ ಅಷ್ಟೆ. ಹಟ ತೊಟ್ಟು ಮಗಳನ್ನು ಇಷ್ಟು ಬೆಳೆಸಲು ನನಗೆ ನನ್ನ ತಾಯಿ, ಕುಟುಂಬ, ಬಂಧುಗಳು, ನೆರೆಹೊರೆಯವರು, ಸಜ್ಜನರ ವಿದ್ಯಾಸಂಸ್ಥೆ ಮತ್ತು ಅರುಣ ಚೇತನ ಶಾಲೆ ಎಲ್ಲರೂ ತುಂಬಾ ಸಹಕರಿಸಿದ್ದಾರೆ. ಅವರೆಲ್ಲರನ್ನೂ ಕೃತಜ್ಞತೆಯಿಂದ ನೆನೆಯುತ್ತೇವೆ.

ಎಷ್ಟೋ ಮನೆಗಳಲ್ಲಿ ಇಂಥ ಮಗು ಎಂದು ತಿಳಿದಾಗ ಹೆಂಡತಿಯನ್ನು ಬಿಟ್ಟಿರುವ ಅಥವಾ ಮಗುವಿನ ಜವಾಬ್ದಾರಿ ಪೂರ್ತಿ ತಾಯಿಯದು ಎಂದೂ, ಕೇವಲ ದುಡಿದು ತರುವುದು ತನ್ನ ಕೆಲಸವೆಂದು ತಿಳಿಯುವ ಗಂಡಸರನ್ನು ನೋಡಿದ್ದೇನೆ. ಆದರೆ ನಮ್ಮವರು ಮಗುವಿನ ಬೆಳವಣಿಗೆಯ ಪ್ರತೀ ಹಂತದಲ್ಲೂ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸಮಾಜದ ಎಲ್ಲಾ ಗಂಡಸರೂ ಮಗು ನಮ್ಮಿಬ್ಬರ ಜವಾಬ್ದಾರಿ ಎಂದು ತಿಳಿದರೆ ಆ ತಾಯಿಗೆ ಅರ್ಧ ಭಾರ ಕಡಿಮೆಯಾದಂತೆಯೇ ಸರಿ. ಮಗಳಿಗೆ ಹಾಡಿನಲ್ಲಿ ತುಂಬಾ ಆಸಕ್ತಿ ಇತ್ತು. ಅದಕ್ಕೆ ಖ್ಯಾತ ಸಂಗೀರಗಾರರೊಬ್ಬರ ಬಳಿ ಕರೆದುಕೊಂಡು ಹೋದೆ. ಮಗಳು ದೊಡ್ಡ ಗಾಯಕಿಯಾಗಿಬಿಡುತ್ತಾಳೆಂಬ ನಿರೀಕ್ಷೆಯಿಂದಲ್ಲ. ಇದರಿಂದ ಆಕೆಯ ಮಾತು, ನಡೆವಳಿಕೆ, ಏಕಾಗ್ರತೆಗೆ ಸಹಾಯವಾಗಬಹುದು ಎಂದು. ಆದರೆ ಅವರು ನಯವಾಗಿ ತಿರಸ್ಕರಿಸಿದರು. ಆಗ ನಮ್ಮನ್ನು ಕೈಚಾಚಿ ತಬ್ಬಿಕೊಂಡಿದ್ದು ಪಂಚಾಮೃತ ಸಂಗೀತ ಶಾಲೆಯ ಗಾಯತ್ರಿ ಕೇಶವ್ ಅವರು. ಅವರು ನಿಸ್ಪೃಹವಾಗಿ ಎಲ್ಲ ಮಕ್ಕಳಿಗೆ ಕಲಿಸುವಂತೆ ಐದಾರು ವರ್ಷಗಳ ಕಾಲ ಸಂಗೀತ ಕಲಿಸಿದರು.

Naanemba Parimaladha Haadhiyali

ಸಾಂದರ್ಭಿಕ ಚಿತ್ರ

ಬಸ್ಸಲ್ಲಿ ನಿಂತುಕೊಂಡಿದ್ದೊಂದು ಸಾಧನೆ ಮಗಳನ್ನು ಬಸ್ಸಿಗೆ ಕರೆದುಕೊಂಡು ಹೋಗುವಾಗಲೆಲ್ಲ ಯೋಚಿಸುತ್ತಿದ್ದೆ, ನಾವೂ ಆರ್ಥಿಕವಾಗಿ ಗಟ್ಟಿಯಾಗಿದ್ದಿದ್ದರೆ ನಾವೊಂದು ಕಾರೋ ಬೈಕೋ ತಗೋಬಹುದಿತ್ತು. ಆಗ ಈ ಬಸ್ಸಿಗೆ ಹೋಗುವ ಕಷ್ಟ ತಪ್ಪುತ್ತಿತ್ತು ಎಂದು. ಆದರೆ ಈಗ ಯೋಚಿಸುತ್ತೇನೆ. ಆಗ ನಮಗೆ ದುಡ್ಡಿಲ್ಲದಿದ್ದದ್ದೇ ಒಳ್ಳೆದಾಯಿತು ಎಂದು. ನಾವು ಬಸ್ಸಲ್ಲೇ ಓಡಾಡಿದ ಕಾರಣಕ್ಕಾಗಿಯೇ ಇಂದು ನನ್ನ ಮಗಳು ಬಸ್ಸಿನಲ್ಲಿ ನೆಟ್ಟಗೆ ನಿಲ್ಲುವುದನ್ನು, ಹ್ಯಾಂಡಲ್ ಹಿಡಿಯುವುದನ್ನು ಕಲಿತಳು. ಬಸ್ಸಿನಲ್ಲಿ ಬೇರೆಬೇರೆ ಜನರೊಂದಿಗೆ ಒಡನಾಡುವುದನ್ನು ಕಲಿತಳು. ಅದಕ್ಕೇ ಬಸ್ಸಿನಲ್ಲಿ ನಿಲ್ಲುವ ಪ್ರಸಂಗ ಬಂದಾಗ ಯಾರ ಬಳಿಯೂ ಸೀಟ್ ಕೊಡಿ ಎಂದೂ ಕೇಳುತ್ತಿರಲಿಲ್ಲ. ಹೀಗೆ ಹತ್ತುವ, ಇಳಿಯುವ, ನಡೆಯುವ, ಬಸ್ಸಿನಲ್ಲಿ ನಿಲ್ಲುವ ಅಭ್ಯಾಸ ಅನಿವಾರ್ಯ ಎಂಬಂತಾದಾಗಲೇ ಆಕೆಯಲ್ಲಿ ಬೆಳವಣಿಗೆ ಕಾಣುತ್ತ ಬಂದಿತು.

ಮೊದಲು ಆಕೆ ಇದ್ದ ಪರಿಸ್ಥಿತಿಯಲ್ಲಿ ಆಕೆಯಿಂದ ಯಾರಿಗೂ ಏನು ತೊಂದರೆಯಾಗದಿದ್ದರೆ ಸಾಕು ಎಂದು ಬಯಸುತ್ತಿದ್ದೆ. ನಂತರ ಆಕೆಯ ಕೆಲಸಗಳನ್ನು ಮಾಡಿಕೊಂಡರೆ ಸಾಕು ಅಂದುಕೊಂಡೆ . ಆನಂತರದಲ್ಲಿ ಆಕೆಯ ಕೈಲಾದ ಸಣ್ಣಪುಟ್ಟ ಕೆಲಸಗಳನ್ನು ಮಾಡಲಿ ಎಂದು ಆಶಿಸಿದೆ. ಈಗ ಅವಳಿಗೆ ತಿಳಿದ ಸಾಮರ್ಥ್ಯವಿರುವ ಕೆಲಸಗಳನ್ನು ಬೇಗ ಬೇಗ ಮಾಡಿ ಹೆಚ್ಚು ಹೆಚ್ಚು ಕೆಲಸ ಮಾಡಲಿ ಎಂದು ನಿರೀಕ್ಷಿಸುತ್ತಿದ್ದೇನೆ.

Women Empowerment; ನಾನೆಂಬ ಪರಿಮಳದ ಹಾದಿಯಲಿ: ಇದು ನಾನಲ್ಲ ಇನ್ನೇನೋ ಆಗುವುದಿದೆ ಆಗಬೇಕಿದೆ

Published On - 6:09 pm, Wed, 10 February 21

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ