Cinema : ಮೀಟುಗೋಲು ; ಮರ ಎಷ್ಟೇ ಬೆಳೆದರೂ ನೆಲವ ತಬ್ಬಿದ ಬೇರನ್ನು ಮರೆಯಬಾರದು ‘ಅಮೆರಿಕಾ ಅಮೆರಿಕಾ’
America America : ‘ಶೈಕ್ಷಣಿಕ ಗುಣಮಟ್ಟ ಹೇಗಿತ್ತೋ ಗೊತ್ತಿಲ್ಲ ಆದರೆ ಅಲ್ಲಿನ ಐಷಾರಾಮಿತನ ಈ ವರ್ಗದ ಜನರನ್ನು ಬಹುಬೇಗನೆ ತನ್ನ ಮುಷ್ಟಿಯಲ್ಲಿಟ್ಟುಕೊಂಡಿತು. ಅವರು ಅಲ್ಲಿನ ಡಾಲರ್ ಅನ್ನು ರೂಪಾಯಿಯೊಂದಿಗೆ, ಅಲ್ಲಿನ ಹೈವೇಗಳನ್ನು ಇಲ್ಲಿನ ಹೊಂಡದ ರಸ್ತೆಗಳಿಗೆ ಅಲ್ಲಿನ ಮಾಲ್‌ಗಳನ್ನು ಇಲ್ಲಿನ ಕಿರಾಣಿ ಅಂಗಡಿಗಳಿಗೆ ಒಮ್ಮೆಗೆ ಹೋಲಿಸಿಕೊಳ್ಳಲಾರಂಭಿಸಿದರು.’ ಪ್ರಕಾಶ್ ಪೊನ್ನಾಚಿ
Cinema : ಯಾರ ಲೀಲೆಗೋ ಯಾರೋ ಏನೋ ಗುರಿಯಿರದೆ ಬಿಟ್ಟ ಬಾಣಕ್ಕೆ ಓಡುತ್ತಲೇ ಇರುತ್ತೇವೆ, ಇದ್ದೇವೆ. ಆದರೂ ಬಿಡುವು ಮಾಡಿಕೊಂಡು ಒಂದು ಸಿನೆಮಾ ನೋಡುವ ಮನಸ್ಸು ಮಾಡುತ್ತೇವೆ; ಅರೆ! ಇಂಥದೇ ಒಂದು ಪಾತ್ರ, ಇಂಥದೇ ಒಂದು ಸನ್ನಿವೇಶ, ಇಂಥದೇ ಒಂದು ತಂತುವಿನೊಂದಿಗೆ ಜೀವಿಸುತ್ತಿದ್ದೇವಲ್ಲ ಎನ್ನಿಸಲಾರಂಭಿಸುತ್ತದೆ. ಎದುರಿನ ಪರದೆಯೊಳಗಿನ ಅಂತಃಸಾರ ಎದೆಮೆದುಳಿಗಿಳಿದು ಮೆಲ್ಲನೆ ಅಲೆಗಳನ್ನು ಹರಡುತ್ತದೆ. ಇಳಿದದ್ದು ಕಾಡದೇ ಇರದು, ಕಾಡುವುದು ಸುಮ್ಮನಿರಲು ಬಿಡದು. ಹಿಂಜಾಡಿ ಹಿಂಜಾಡಿ ಏನೇನೋ ನೆನಪುಗಳನ್ನುಕ್ಕಿಸುತ್ತದೆ, ಪ್ರಶ್ನೆಗಳನ್ನೆಬ್ಬಿಸುತ್ತದೆ. ಏಕೆಂದರೆ ಕಲೆ ಎನ್ನುವುದು ‘ರುಚಿಯವಿಚಾರ’, ನಮ್ಮ ಭಾವಭಿತ್ತಿಯನ್ನು ಮೀಟಿ, ಮೀರಿ ಪಾಕಗಟ್ಟುವ ಆತ್ಮಾವಲೋಕನದ ಪ್ರಕಾರ. ಈ ಪ್ರಕ್ರಿಯೆಯಲ್ಲಿ ನಿಮ್ಮನ್ನು ನೀವು ಕೆದಕಿಕೊಳ್ಳುತ್ತ ಅರಿವಿಲ್ಲದೆ ನೀವೇ ಒಂದು ಪಾತ್ರವಾಗಿಯೂ ನಿಂತುಬಿಡಬಹುದು! ಅಂತಹ ಅಭಿವ್ಯಕ್ತಿಗೊಂದು ವೇದಿಕೆಯಾಗಿ ‘ಟಿವಿ9 ಕನ್ನಡ ಡಿಜಿಟಲ್ : ಮೀಟುಗೋಲು’ ನೀವು ಬರೆದಾಗೆಲ್ಲ ಇದು ಪ್ರಕಟವಾಗುತ್ತದೆ.
ನೀವು ನೋಡಿದ ಯಾವುದೇ ಭಾಷೆಯ ಸಿನೆಮಾ/ವೆಬ್ ಸೀರೀಸ್ ಮತ್ತು ನಿಮ್ಮ ಬದುಕಿನ ಅನುಭವ ಪರಸ್ಪರ ಮಿಳಿತಗೊಂಡು ವಾಸ್ತವದ ಬಗ್ಗೆ ಯೋಚಿಸುವಂತೆ ಮಾಡಿದ ರೀತಿಯನ್ನು ಬರಹದ ಮೂಲಕ ಕಟ್ಟಿಕೊಡಬಹುದು. ಪದಮಿತಿ ಸುಮಾರು 600. ನಿಮ್ಮ ಸ್ಥೂಲ ಪರಿಚಯ, ಭಾವಚಿತ್ರವೂ ಇರಲಿ. ಮೇಲ್ : tv9kannadadigital@gmail.com
ಪ್ರಕಾಶ್ ಪೊನ್ನಾಚಿ (ಜಯಪ್ರಕಾಶ ಪಿ) ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪೊನ್ನಾಚಿ ಗ್ರಾಮದವರು. ಪ್ರಸ್ತುತ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಹನೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಿಸಿದ ಅಮೆರಿಕಾ ಅಮೆರಿಕಾ ಸಿನೆಮಾ ಅವರನ್ನು ಯಾವೆಲ್ಲ ವಿಷಯಗಳಿಂದ ಕಾಡಿದೆ ಎನ್ನುವುದನ್ನು ಓದಿ.
*
ಮನುಷ್ಯನಿಗೆ ರೆಕ್ಕೆಗಳಿರಬೇಕು, ಸಮುದ್ರದ ಮೇಲೆ ಹಕ್ಕಿ ತರ ಹಾರಬೇಕು, ಪ್ರಪಂಚ ನೋಡಬೇಕು ಎನ್ನುವವನೊಬ್ಬ. ಮನುಷ್ಯನಿಗೆ ಬೇಕಿರೋದು ರೆಕ್ಕೆಗಳಲ್ಲ ಬೇರು ಕಣೋ ಇದ್ದ ಜಾಗದಲ್ಲೇ ಬೇರುಬಿಟ್ಟು ಇಲ್ಲೇ ಬೆಳೀಬೇಕು. ನಮ್ಮ ಭೂಮಿಯ ರಸ ಹೀರಿ ಇಲ್ಲೇ ಫಲ ಕೊಡಬೇಕು ಎನ್ನುವ ಮತ್ತೊಬ್ಬ. ಮನುಷ್ಯನಿಗೆ ರೆಕ್ಕೆ ಬೇರು ಎರಡೂ ಇದ್ರೆ ಸರಿ ಅನಿಸುತ್ತೆ ಅನ್ನುವ ನಾಯಕಿ. ಈ ದೇಶದಲ್ಲಿ ಏನು ಸುಖ ಇದೆ? ಬೇಕು ಅನ್ನೋ ಕೆಲಸ ಸಿಗಲ್ಲ, ಬೇಕು ಅಂದ ಸುಖ ಸಿಗಲ್ಲ, ಆದರೆ ಅಮೇರಿಕಾ ಹಾಗಲ್ಲ ಇಟ್ಸ್ ಎ ಲ್ಯಾಂಡ್ ಆಫ್ ಆಪರ್ಚುನಿಟೀಸ್ ಅಲ್ಲಿ ಯಾವುದಕ್ಕೂ ಪರದಾಡೋ ಹಾಗಿಲ್ಲ ಎನ್ನುವವ ಒಬ್ಬ. ಅಮ್ಮ ಬಡವಳು ಅಂತ ಬೇರೆ ಯಾರನ್ನೋ ಅಮ್ಮ ಅನ್ನೋಕಾಗುತ್ತಾ ವಾಸ್ತವವನ್ನು ಒಪ್ಪಿಕೊಂಡೇ ನಮ್ಮ ದೇಶವನ್ನ ಪ್ರೀತಿ ಮಾಡಬೇಕು. ಈ ಮಣ್ಣಲ್ಲೇ ಏನಾದರೂ ಸಾಧಿಸಿ ಜಗತ್ತಿಗೆ ನನ್ನ ದೇಶದ ತಾಕತ್ತು ತೋರಿಸಬೇಕೆಂದು ಹಠ ಹಿಡಿವ ಒಬ್ಬ. ಸಾರಿ ನಾನು ಗಾಂಧಿ ಅಲ್ಲ ನನಗೆ ನನ್ನ ಸುಖನೇ ಮುಖ್ಯ ಎಂದು ದೇಶ ತೊರೆಯೋ ಮತ್ತೊಬ್ಬ. ಇದೊಂದು ಮನಮುಟ್ಟುವ ಒಂದು ತ್ರಿಕೋನ ಪ್ರೇಮಕಥೆ. ಭೂಮಿ, ಶಶಾಂಕ, ಸೂರ್ಯ ಎಂಬ ಪಾತ್ರಗಳು.
ಭೂಮಿ ಶಶಾಂಕನ ಸುತ್ತ ಸುತ್ತಿದರೆ ಭೂಮಿಯನ್ನ ಹರಸಿ ವಿರಹಿಯಾಗುವ ಸೂರ್ಯ. ಶಶಾಂಕನ ಜೊತೆ ಅಮೆರಿಕಾ ಪಾಲಾಗುವ ಭೂಮಿ. ಸೂರ್ಯನ ಹಿಡನ್ ಪ್ರೇಮದಿಂದ ಉಂಟಾಗುವ ಕೌಟುಂಬಿಕ ಕಲಹ, ಭಾವನೆಗಳಿಗೆ ಬೆಲೆ ಇಲ್ಲದ ಕೃತಕ ಜೀವನದೊಂದಿಗೆ ಹೊಂದಿಕೊಳ್ಳದೆ ಪ್ರತೀ ಭಾವನೆಗಳು ಭಾನುವಾರ ಬನ್ನಿ ಎಂದು ಹೇಳಲಾಗುತ್ತಾ ಎಂದು ನಾಯಕಿ ಪ್ರಶ್ನಿಸಿಕೊಳ್ಳುವ ಸನ್ನಿವೇಶ. ತನ್ನದೇ ಸುಖವನ್ನೇ ಹರಸಿ ಅಮೇರಿಕಾ ಸೇರಿಕೊಂಡವನ ಸಾವಿನೊಂದಿಗಿನ ಸೋಲು. ಸೂರ್ಯನನ್ನ ಸುತ್ತಲೊಲ್ಲದೆ ತನ್ನನ್ನೇ ತಾನು ಸುತ್ತಿಕೊಳ್ಳುವ ಭೂಮಿ. ನೆನಪೆಂದರೆ ಮಳೆಬಿಲ್ಲ ಛಾಯೆ ಎನಿಸುವ ಸೊಗಡು. ಕೊನೆಗೆ ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿದ ಜೀವನದ ಒಂದು ವಿದಾಯ ಗೀತೆ. ಇದಿಷ್ಟು ಸುಮಾರು ದಶಕಗಳ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶಿಸಿದ್ದ ಅಮೆರಿಕಾ ಅಮೆರಿಕಾ ಚಿತ್ರದ ಮನಮೋಹಕ ದೃಶ್ಯಸಾರ. ಜೀವನದಲ್ಲಿ ಅತೀ ಹೆಚ್ಚು ಕಾಡಿದ ಮತ್ತು ಮನಸ್ಸನ್ನು ಅಷ್ಟೇ ಮುದಗೊಳಿಸಿದ ಒಂದು ಪ್ರೇಮಕಾವ್ಯದ ನಡುವೆ ದೇಶಭಕ್ತಿಯ ಒಂದು ಸಣ್ಣ ಎಳೆಯನ್ನು ಸದ್ದಿಲ್ಲದೆ ಎಲ್ಲರಲ್ಲೂ ಮೂಡಿಸಿದ ಒಂದು ಭಾವನಾತ್ಮಕ ದೃಶ್ಯಕಾವ್ಯ ಅದಾಗಿತ್ತು.
ಜಗತ್ತು ಚಿಕ್ಕದಾಗುತ್ತಾ ಸಾಗಿದಂತೆ ದೇಶಗಳು ತಮ್ಮದೇ ಆದ ವೈಜ್ಞಾನಿಕತೆಯ ಮೆಟ್ಟಿಲುಗಳನ್ನ ಸೃಷ್ಟಿಸಿಕೊಂಡು ಉತ್ತುಂಗದ ಶಿಖರಕ್ಕೇರಿಕೊಂಡವು. ಬಲಾಢ್ಯ ದೇಶಗಳು ಸಣ್ಣಪುಟ್ಟ ದೇಶಗಳನ್ನ ಭೌಗೋಳಿಕ ಆಕ್ರಮಣವನ್ನಷ್ಟೇ ಮಾಡದೆ ಭೌತಿಕವಾದ ಆಕ್ರಮಣವನ್ನು ಸಾರಾಸಗಟಾಗಿ ಮಾಡಿಕೊಳ್ಳಲಾರಂಭಿಸಿದವು. ದೇಶ, ಭಾಷೆ, ಸಂಸ್ಕೃತಿ, ಕಟ್ಟಳೆ ಎಲ್ಲಾ ಕೇವಲ ಗೌಣವಾದವಂತಾಗಿ ಮನುಷ್ಯನ ದುರಾಸೆಗಳಿಗೆ ಅಥವಾ ಈ ದೇಶಗಳ ವ್ಯವಸ್ಥೆಯ ವೈಫಲ್ಯತೆಗೆ ನಮ್ಮ ದೇಶದ ಸೊಗಡು ನಿಧಾನಕ್ಕೆ ಕರಗಲಾರಂಭಿಸಿತು.
ನಮ್ಮ ದೇಶ ‘ಇಟ್ಸ್ ಎ ಲ್ಯಾಂಡ್ ಆಫ್ ಆಪರ್ಚುನಿಟೀಸ್’ ಎನ್ನುವ ಶೈನಿಂಗ್ ಬೋರ್ಡುಗಳನ್ನ ಈ ಬೃಹತ್ ದೇಶಗಳು ಆಕಾಶದಲ್ಲಿ ತೇಲಿಬಿಟ್ಟವು. ಬೌದ್ಧಿಕವಾಗಿ ಉನ್ನತಿಯಲ್ಲಿದ್ದ ಮೆದುಳುಗಳಿಗೆ ಡಾಲರ್, ಯೂರೋ ಲೆಕ್ಕದಲ್ಲಿ ಬೆಲೆ ಕಟ್ಟಲಾರಂಭಿಸಿದವು. ವೀಸಾ, ಪಾಸ್ಪೋರ್ಟ್ಗಳು ಸುಲಭಕ್ಕೆ ಸಿಗುವಂಥಾದವು. ಹಳ್ಳದ ರಸ್ತೆಗಳಲ್ಲಿ ಸೈಕಲನ್ನೋ, ಮೋಟಾರ್ ಬೈಕನ್ನೋ ತುಳಿಯುತ್ತಿದ್ದ ಮನಸುಗಳಿಗೆ ಐಷಾರಾಮಿ ಕಾರುಗಳು ಬಹುಬೇಗ ಆಕರ್ಷಿತವಾಗಿಬಿಟ್ಟವು. ಡಾಲರ್, ಯೂರೋಗಳ ಮುಂದೆ ರೂಪಾಯಿ, ಕಸದ ಬಿಲ್ಲೆಯಾಗಿ ಹೋಯಿತು. ಇಲ್ಲಿನ ವ್ಯವಸ್ಥೆಗಳು, ಇಲ್ಲಿನ ಕಾನೂನುಗಳು, ಇಲ್ಲಿನ ವಿಶೇಷ ಕಟ್ಟಳೆಗಳಿಂದ ರೋಸಿ ಹೋಗಿದ್ದ ಒಂದಷ್ಟು ಮಂದಿ ಅವಕಾಶದ ಬಾಗಿಲು ತೆರೆಯುತ್ತಿದ್ದಂತೆ ಪುರ‍್ರನೆ ಹಾರಿಬಿಟ್ಟರು. ಅದರಲ್ಲೂ ಭಾರತೀಯರಿಗೆ ಅಮೆರಿಕಾ, ಬ್ರಿಟನ್‌ನಂತಹ ದೇಶಗಳು ರೆಡ್ ಕಾರ್ಪೆಟ್ ಹಾಸಿ ಕೈಹಿಡಿದು ಎಳೆದುಕೊಂಡವು.
ಒಂದು ಮಾಹಿತಿಯ ಪ್ರಕಾರ ಭಾರತೀಯ ಡಾಕ್ಟರ್ಸ್ ಭಾರತೀಯ ಟೀಚರ್ಸ್ ಭಾರತೀಯ ನರ್ಸ್ಗಳಿಗಾಗಿ ಎಲ್ಲಿಲ್ಲದ ಬೇಡಿಕೆ ಈ ದೇಶಗಳಲ್ಲಿ ಸೃಷ್ಟಿಯಾಯಿತು. ಅಮೆರಿಕಾ ಇಂಗ್ಲಿಷ್ ಶಿಕ್ಷಕರಿಗಾಗಿ ಹೆಚ್ಚು ಭಾರತೀಯರಿಗೆ ಮನ್ನಣೆ ಕೊಡಲಾರಂಭಿಸಿತು. ಹೈಯರ್ ಎಜುಕೇಷನ್ ಎನ್ನುವ ಹೆಸರಿನಲ್ಲಿ ಇದೇ ಭಾರತೀಯ ಮಂದಿ ನಿಧಾನಕ್ಕೆ ವಿಮಾನ ಹತ್ತಲಾರಂಭಿಸಿದರು. ಕ್ವಾಲಿಟಿ ಆಫ್ ಎಜುಕೇಷನ್ ಹೇಗಿತ್ತೋ ಗೊತ್ತಿಲ್ಲ ಆದರೆ ಅಲ್ಲಿನ ಐಷಾರಾಮಿತನ ಈ ವರ್ಗದ ಜನರನ್ನ ಬಹುಬೇಗನೆ ತನ್ನ ಮುಷ್ಠಿಯಲ್ಲಿಟ್ಟುಕೊಂಡಿತು. ಹೀಗೆ ಹಾರಿ ಹೋದ ಐಷಾರಾಮಿತನಕ್ಕೆ ಮಾರುಹೋದ ಒಂದು ವರ್ಗದ ಜನ ಅಲ್ಲಿನ ಡಾಲರ್ ಅನ್ನು ರೂಪಾಯಿಯೊಂದಿಗೆ, ಅಲ್ಲಿನ ಹೈವೇಗಳನ್ನು ಇಲ್ಲಿನ ಹೊಂಡದ ರಸ್ತೆಗಳಿಗೆ ಅಲ್ಲಿನ ಮಾಲ್‌ಗಳನ್ನು ಇಲ್ಲಿನ ಕಿರಾಣಿ ಅಂಗಡಿಗಳಿಗೆ ಒಮ್ಮೆಗೆ ಹೋಲಿಸಿಕೊಳ್ಳಲಾರಂಭಿಸಿದರು. ಅಲ್ಲಿನ ಬೂಟು, ಟೈ, ಕೋಟುಗಳ ಮುಂದೆ ಇಲ್ಲಿನ ಪಂಚೆ ಶರ್ಟುಗಳು ನಿಕೃಷ್ಟವಾಗತೊಡಗಿದವು. ಅಷ್ಟಕ್ಕೇ ಆಗಿದ್ದರೆ ಸರಿ. ಆದರೆ ಬೇರು ಮರೆತು ಹೂವಿನಲ್ಲಿ ನಗುವ ಕಾಣುತ್ತಿದ್ದ ಈ ಜನ ಇದೇ ಮಣ್ಣಿನ, ಇದೇ ನೆಲದ ಅಸ್ಮಿತೆಯನ್ನ ಅಣಕಿಸಲಾರಂಭಿಸಿದರು. ಅದು ಒಂದು ದೇಶವಾ? ಅದು ಹಾವಾಡಿಗರ ದೇಶ ಎಂದು ಯಾವನೋ ಒಬ್ಬ ಕೊಂಕನಾಡುವಾಗ ಮೌನದಲ್ಲೇ ಇವರೂ ನಗಲಾರಂಭಿಸಿದರು. ಫಾರಿನ್ ಸೆಟಲ್ಡ್, ಫಾರಿನ್ ರಿಟರ್ನ್ ಎನ್ನುವ ಟ್ಯಾಗೊಂದು ಕೊರಳಿಗೆ ಬಿಗಿದುಕೊಂಡು ಇಲ್ಲೂ ಒಂದು ಘಮ್ಮತ್ತು ತೋರಿಸಿಕೊಂಡವರು ಅದೆಷ್ಟೋ, ಗೂಡು ಮರೆತ ಹಕ್ಕಿಯಂತೆ ದೇಶ ಸುತ್ತಿ ಗೂಡನ್ನೇ ಹೀಯಾಳಿಸಲಾರಂಭಿಸಿದರು. ಇಲ್ಲಿನ ಮಣ್ಣಿನ ವಾಸನೆ ಅವರ ಮೂಗಿಗೆ ರುಚಿಕಟ್ಟದಾಯಿತು. ಒಟ್ಟಿನಲ್ಲಿ ವಿದೇಶಿ ವ್ಯಾಮೋಹದಲ್ಲಿ ದೇಶದ ಸಂಸ್ಕೃತಿ ಮತ್ತು ದೇಶೀಯ ಆಗು-ಹೋಗುಗಳು ಅವರ ಪಾಲಿಗೆ ಬೇಡವಾಗಿ ಹೋದವು.
ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು ಎನ್ನುವ ಅಡಿಗರ ಸಾಲುಗಳನ್ನು ಇದೇ ಚಿತ್ರದಲ್ಲಿ ನಾಯಕನೊಬ್ಬ ವಿದೇಶಕ್ಕೆ ಹಾರುವ ಸನ್ನಿವೇಶದಲ್ಲಿ ಅಳವಡಿಸಿಕೊಳ್ಳಲಾಯಿತು. ಅದೇ ನಾಯಕನೊಬ್ಬನಿಗೆ ಮಡದಿಯಾಗುವ ನಾಯಕಿ ಇಲ್ಲಿನ ಸಂಸ್ಕೃತಿಗೆ, ಏನೇ ಲ್ಯಾಂಡ್ ಆಫ್ ಆಪರ್ಚುನಿಟೀಸ್ ಆದರೂ ತನ್ನ ನೆಲದ ಮುಂದೆ ಅವೆಲ್ಲಾ ಗೌಣವೆಂದು ಕಟ್ಟುಬೀಳುವ ಸನ್ನಿವೇಶ ಸೃಷ್ಟಿಸಲಾಗಿತ್ತು. ಅಲ್ಲೊಂದು ಭಾರತೀಯರೆ ಏರ್ಪಡಿಸಿಕೊಳ್ಳುವ ಔತಣಕೂಟ. ಅಲ್ಲಿಗೆ ಅನೌಚಾರಿಕವಾಗಿ ಭೇಟಿ ನೀಡುವ ಮತ್ತೊಬ್ಬ ನಾಯಕ. ಉದ್ದಕ್ಕೂ ಕೇವಲ ಭಾರತೀಯತೆಯನ್ನ ಅಣಕಿಸುವುದನ್ನೇ ಕಂಡು ಕೆಂಡವಾಗುವ ಅವನು ಕಪಾಳಮೋಕ್ಷ ಮಾಡಿ ವಾಪಸಾಗುವ ದೃಶ್ಯ ಇವೆಲ್ಲ ಕೇವಲ ಸಿನಿಮಾಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲೋ, ಹೇಗೋ ನಡೆದು ಹೋದ, ನಡೆಯುತ್ತಿರುವ, ಮುಂದೆ ನಡೆಯಲೂಬಹುದಾದ ಸನ್ನಿವೇಶಗಳೇ ಆಗಿದ್ದವು.
‘ನಿಮ್ಮ ದೇಶ ನಿಮಗೆ ಏನು ಮಾಡುತ್ತದೆ ಎಂದು ಕೇಳಬೇಡಿ ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬೇಕು ಎಂದು ಕೇಳಿ’ ಎಂದು ಜವಾಹರಲಾಲ್ ನೆಹರು ಹೇಳುತ್ತಾರೆ. ದೇಶ ನನ್ನನ್ನು ಹೇಗೆ ನಡೆಸಿಕೊಂಡಿತು. ಈ ದೇಶದಲ್ಲಿ ಅವಕಾಶಗಳ ಕೊರತೆ ಇದೆ. ಈ ದೇಶದಲ್ಲಿ ಬುದ್ಧಿವಂತಿಕೆಗೆ ಬೆಲೆ ಇಲ್ಲ. ಇಲ್ಲಿ ಏನನ್ನೂ ಸಾಧಿಸಲಾಗುವುದಿಲ್ಲ ಎಂದು ಈ ದೇಶದ ಬಗ್ಗೆ ಏನೆಲ್ಲಾ ಮಾತನಾಡಿಕೊಳ್ಳುವ ನಾವು, ದೇಶಕ್ಕಾಗಿ ನಮ್ಮದೇನಿದೆ ಕೊಡುಗೆ ಇದೆ ಎಂಬುದನ್ನು ಮರೆತುಬಿಟ್ಟೆವು.
ಹೀಗೆ ನನ್ನೊಟ್ಟಿಗೆ ಓದಿದ ಸ್ನೇಹಿತನೊಬ್ಬ ನರ್ಸಿಂಗ್ ಸೇರಿಕೊಂಡ. ಕೆಲಸವನ್ನು ಗಿಟ್ಟಿಸಿ ಕೈತುಂಬಾ ಸಂಬಳವನ್ನೂ ಪಡೆಯುತ್ತಿದ್ದ. ಯಾರೋ ಅವನ ಸ್ನೇಹಿತನ ಕಡೆಯಿಂದ ಅಮೇರಿಕಾದಲ್ಲಿ ಜಾಬ್ ಆಪರ್ಚುನಿಟಿಯೊಂದು ಹುಡುಕಿ ಬಂತು. ಇವನ ತಲೆಯಲ್ಲು ಡಾಲರ್ ಸಂಬಳ, ಐಷಾರಾಮಿ ಕಾರು ಎಲ್ಲವೂ ಸುರುಳಿ ಸುತ್ತಲಾರಂಭಿಸಿತು. ತಾನು ತನ್ನ ಹೆತ್ತವರಿಗೆ ಒಬ್ಬನೇ ಮಗ ಎಂಬುದನ್ನೂ ಮರೆತು ಅಮೆರಿಕಾಕ್ಕೆ ಹಾರಿಬಿಟ್ಟ. ಜೊತೆಯಲ್ಲಿ ತನ್ನ ಹೆಂಡತಿ ಹಾಗೂ ಮಗುವನ್ನು ಕರೆದುಕೊಂಡು ಹೊರಟವನ ಹೆತ್ತವರ ಕಣ್ಣಲ್ಲಿ ನೀರು. ಸುಮಾರು ಹತ್ತು ವರ್ಷಗಳಿಂದ ಆತ ಫಾರಿನ್ ಸೆಟಲ್ಡ್ ಇಂಡಿಯನ್. ಊರಿಗೆ ಬರುವುದಂತು ತೀರಾ ವಿರಳ. ಮೊನ್ನೆ ಅವರ ತಂದೆ ಕಾಯಿಲೆಯಿಂದ ತೀರಿಕೊಂಡರು ಆತ ಬರಲಾಗಲಿಲ್ಲ. ಯಾರೋ ಸಂಬಂಧಿಕರಿಗೆ ಒಂದಷ್ಟು ಹಣ ಕಳಿಸಿ ಕಾರ್ಯ ನೆರವೇರಿಸಲು ತಿಳಿಸಿದ್ದ. ಇಂತಹದ್ದೇ ಎಷ್ಟೋ ಘಟನೆಗಳು ನಿತ್ಯ ನಮ್ಮ ಕಣ್ಣ ಮುಂದೆ ಘಟಿಸುತ್ತಲೇ ಇರುತ್ತವೆ. ಅದು ದುರಂತ.
ಭಾರತ ಬೌದ್ಧಿಕತೆಯನ್ನು ಜಗತ್ತಿಗೆ ಸರಬರಾಜು ಮಾಡುವ ಕೇಂದ್ರ ಎಂದರೆ ತಪ್ಪಾಗಲಾರದು. ಇಲ್ಲಿನ ಶೈಕ್ಷಣಿಕ ವ್ಯವಸ್ಥೆ ಯಾವ ದೇಶಕ್ಕೂ ಕಡಿಮೆಯೇನಿಲ್ಲ ಎಂದು ಎಷ್ಟೋ ದೇಶಗಳಲ್ಲಿ ಅಲ್ಲಿನ ಬಹುದೊಡ್ಡ ಹುದ್ದೆಗಳನ್ನು ಅಲಂಕರಿಸಿರುವ ಭಾರತೀಯರನ್ನು ಕಂಡಾಗ ಅನಿಸದೇ ಇರದು. ಹಾಗಾಗಿ ಅವಕಾಶಗಳು ತಾನಾಗಿ ಹುಟ್ಟುವುದಿಲ್ಲ ಅದನ್ನು ಸೃಷ್ಟಿಸಿಕೊಂಡಾಗ ಮಾತ್ರ ಟಾಟಾ, ಇನ್ಫೋಸಿಸ್, ವಿಪ್ರೋ ಅಂತಹ ಕಂಪನಿಗಳು ಹುಟ್ಟಿಕೊಳ್ಳುತ್ತವೆ ಮತ್ತು ಜಗತ್ತಿಗೆ ಸೆಡ್ಡು ಹೊಡೆಯುತ್ತವೆ.
ಮರ ಎಷ್ಟು ದೊಡ್ಡದಾದರೇನು ನೆಲವ ತಬ್ಬಿ ಆಸರೆಯಾದ ಬೇರನ್ನು ಮರೆಯಬಾರದು. ಹಾಗಾಗಿ ಜೀವನಕ್ಕಾಗಿ, ಅವಕಾಶಗಳಿಗಾಗಿ ಎಲ್ಲಿಯೇ ಅಲೆದರು ಮೆಟ್ಟಿದ ಮಣ್ಣಿನ ಗುರುತು ಮರೆಯಬಾರದು. ಮಣ್ಣಲ್ಲಿ ಮಣ್ಣಾಗಿ ಹೋಗುವವರೆಗೆ ನಮ್ಮದೇ ಮಣ್ಣಿನ ಋಣ ಮಣ್ಣಾಗಬಾರದು. ಎಲ್ಲವನು ಅನುಭವಿಸಿ ಅವಕಾಶಗಳ ಹೆಸರಲ್ಲಿ ಇನ್ನೆಲ್ಲೋ ಕೂತು, ಇಲ್ಲಿನ ರಸ್ತೆಗಳು, ಇಲ್ಲಿನ ಅವಸ್ಥೆಗಳು, ಇಲ್ಲಿನ ಉಪಚಾರಗಳ ಬಗ್ಗೆ ಕುಹುಕವಾಡುವವರು ಕಂಡಾಗಲೆಲ್ಲಾ ಯಾಕೋ ಈ ಚಿತ್ರದ ನಾಯಕಿ ಅಮೆರಿಕಾ ಕುಂಡದಲ್ಲಿ ಭಾರತದ ಮಣ್ಣು ಹಾಕಿ ಕರಿಬೇವಿನ ಗಿಡ ಬೆಳೆಯುವ ಸನ್ನಿವೇಶ ಪಟ್ಟನೆ ಕಣ್ಣ ಮುಂದೆ ಬಂದು ಬಿಡುತ್ತದೆ.
ಇದನ್ನೂ ಓದಿ : Netflix : ಇದ್ದೂ ಇರದಂತಿರದ ಬಿಸಿಲಕೋಲ ಬೆಂಬತ್ತಿ; ‘ಮೇಡ್’
Published On - 3:28 pm, Fri, 19 November 21