New Book : ಅಚ್ಚಿಗೂ ಮೊದಲು ; ‘ಯಕ್ಷಗಾನ ಲೀಲಾವಳಿ’ ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ ನಿರೂಪಿಸಿದ ಲೀಲಾವತಿ ಬೈಪಾಡಿತ್ತಾಯ ಅವರ ಆತ್ಮಕಥನ ಬಿಡುಗಡೆ

Women in Yakshagana : ‘ಅಮೃತ ಎಂಬ ಪೀತಪತ್ರಿಕೆಯಲ್ಲಿ, ‘ಜನ ಹೆಂಗಸರನ್ನೂ ಕಟ್ಟಿಕೊಂಡು ಯಕ್ಷಗಾನ ಮಾಡಲು ಹೊರಟರು’ ಎಂದೆಲ್ಲ ನಕಾರಾತ್ಮಕವಾಗಿ ಬರೆದಿದ್ದರು. ಕೆಟ್ಟದ್ದು ಬಹುಕಾಲ ನಿಲ್ಲುವುದಿಲ್ಲ ಎಂಬುದಕ್ಕೆ ಅದೇ ಸಾಕ್ಷಿ. ವಿಚಿತ್ರವೆಂದರೆ ಆ ಪತ್ರಿಕೆ ಮಾಡಿದ, ನನ್ನ ಬಗ್ಗೆ ಕೀಳಾಗಿ ಬರೆದ `ಅಮೃತ` ಶಂಕರ ಭಟ್ಟರ ಮಗಳೇ ಯಕ್ಷರಂಗಕ್ಕೆ ಬಂದಳು, ವೇಷ ಹಾಕಿ ರಂಗಸ್ಥಳದಲ್ಲಿ ಕಾಣಿಸಿಕೊಂಡಳು!’ ಲೀಲಾವತಿ ಬೈಪಾಡಿತ್ತಾಯ

New Book : ಅಚ್ಚಿಗೂ ಮೊದಲು ; ‘ಯಕ್ಷಗಾನ ಲೀಲಾವಳಿ’ ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ ನಿರೂಪಿಸಿದ ಲೀಲಾವತಿ ಬೈಪಾಡಿತ್ತಾಯ ಅವರ ಆತ್ಮಕಥನ ಬಿಡುಗಡೆ
ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ
Follow us
|

Updated on:Nov 05, 2021 | 3:27 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಯಕ್ಷ ಗಾನ ಲೀಲಾವಳಿ (ಯಕ್ಷಗಾನ ರಂಗದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಆತ್ಮಕಥನ) ನಿರೂಪಣೆ : ವಿದ್ಯಾರಶ್ಮಿ ಪೆಲತ್ತಡ್ಕ  ಪುಟ : 156  ಬೆಲೆ : ರೂ. 150 ಮುಖಪುಟ ವಿನ್ಯಾಸ : ಸಂತೋಷ ಸಸಿಹಿತ್ಲು ಪ್ರಕಾಶನ : ಅಭಿನವ, ಬೆಂಗಳೂರು

*

ಗಂಡುಕಲೆಯೆಂದೇ ಪ್ರಸಿದ್ಧಿಯಾಗಿರುವ ಯಕ್ಷಗಾನ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ಭಾಗವತಿಕೆಯಲ್ಲಿ ತೊಡಗಿಕೊಂಡ ಮೊದಲ ವೃತ್ತಿಪರ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಅವರ ಆತ್ಮಕಥನವನ್ನು ನಿರೂಪಿಸಿದ್ದಾರೆ ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ. ಈ ಕೃತಿಯು ಇದೇ ಭಾನುವಾರ (ನ.7) ಮೂಡುಬಿದಿರೆಯ ಅಲಗಾರುವಿನ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಶ್ರೀಹರಿಲೀಲಾ-75’ ಅಭಿನಂದನಾ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ.

*

ಒಂದು ಯಕ್ಷಗಾನ ಆಟ ನೋಡಿದರೆ ಪ್ರಾಯಶ್ಚಿತ್ತವೆಂಬಂತೆ ಏಳು ರಂಗಪೂಜೆಗಳನ್ನು ನೋಡಬೇಕೆಂಬ ಕಾಲದಲ್ಲಿ ಯಕ್ಷರಂಗ ಪ್ರವೇಶ ಮಾಡಿದ ಲೀಲಮ್ಮ, ‘ರಂಗ-ಪೂಜೆ’ ಎಂಬ ಪರಿಕಲ್ಪನೆಯನ್ನೇ ಬದಲಿಸುವುದಕ್ಕೇ- ಯಕ್ಷ ವೇದಿಕೆಯಲ್ಲಿ ನಡೆಯುವ ಕಲಾ ವ್ಯವಹಾರವೂ ಪೂಜೆಯೇ ಎಂಬ ಭಾವನೆಯುಂಟಾಗುವುದಕ್ಕೆ -ಕಾರಣಕರ್ತರಾದವರಲ್ಲಿ ಓರ್ವರಾದವರು! ನಾಲಗೆ ಪರಿಶುದ್ಧವಾಯಿತೆಂಬ ಮಾತು ಇದನ್ನೇ ಧ್ವನಿಸುತ್ತದೆ. ಯಕ್ಷಮೇಳಗಳ ತಿರುಗಾಟದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಭಾಗವತರೆಂಬ ಇತಿಹಾಸವನ್ನು ಲೀಲಮ್ಮ ಸೃಷ್ಟಿಸಿದರು – ಹೀಗೊಂದು ಇತಿಹಾಸ ಸೃಷ್ಟಿಸುತ್ತಿದ್ದೇನೆ ಎಂಬ ಅರಿವಿಲ್ಲದೆ! ಹೊಸ ಮಾರ್ಗವೊಂದು ಉದ್ಘಾಟನೆಗೊಂಡಿತು ಎಂದು ಅರಿವಿಗೆ ಬಂದಾಗಲೂ ಲೀಲಮ್ಮನಿಗೆ ಉಂಟಾದದ್ದು ಕೂಡಾ ವಿನೀತ ಭಾವವೇ. ಲೋಕವನ್ನೇ ಕರಗಿಸುವ ಈ ವಿನಯ ಲೀಲಮ್ಮನವರದೇ ಸೊತ್ತು ಎನಿಸುತ್ತದೆ ನನಗೆ.

ಕಲೆಯ ಮೂಲ ಸಮಸ್ಯೆಗಳಲ್ಲಿ ಇದೂ ಒಂದು; ಅದೆಂದರೆ ತನ್ನ ಭಾವ ತಾದಾತ್ಮ್ಯ ಮತ್ತು ಎಚ್ಚರದ ಸಮತೋಲ. ಲೀಲಮ್ಮನಿಗೆ ಇದು ಸಹಜವಾಗಿ ಬಂದಂತಿದೆ. ಒಂದೆಡೆ ಸಂಸಾರ. ಇನ್ನೊಂದೆಡೆ ಯಕ್ಷವೇದಿಕೆ. ಒಂದೆಡೆ ಲೋಕಧರ್ಮಿ, ಇನ್ನೊಂದೆಡೆ ನಾಟ್ಯ ಧರ್ಮಿ. ಇವೆರಡನ್ನೂ ಕಲಾತ್ಮಕ ಹದದಿಂದ ಮುನ್ನಡೆಯಿಸಿದವರು ಅವರು. ಈ ಕಲಾ ಕಾಯಕದಲ್ಲಿ ಲೀಲಮ್ಮನವರ ಪತಿ ಶ್ರೀ ಹರಿನಾರಾಯಣ ಬೈಪಾಡಿತ್ತಾಯರ ಹಿಮ್ಮೇಳ, ಹಿನ್ನೆಲೆ, ಮಾರ್ಗದರ್ಶನ, ಪ್ರೋತ್ಸಾಹಗಳು- ತಾನು ಹಿನ್ನೆಲೆಯಲ್ಲಿ ನಿಂತು ಮಡದಿಯನ್ನು ಮುನ್ನೆಲೆಗೆ ತರುವಲ್ಲಿನ ಸಹೃದಯತೆ- ಸರ್ವಥಾ ಅಭಿನಂದನೀಯವಾಗಿದೆ. ಲಕ್ಷ್ಮೀಶ ತೋಳ್ಪಾಡಿ, ಹಿರಿಯ ಲೇಖಕರು

*

ಈ ಕಾಲಘಟ್ಟಕ್ಕೂ ಎರಡು ದಶಕಗಳ ಮೊದಲು ಲೀಲಾವತಿ ಬೈಪಾಡಿತ್ತಾಯ ಎಂಬ ಈ ಮಹಾತಾಯಿ ಹಳ್ಳಿಮೂಲೆಯಲ್ಲಿ ನೈಟ್‍ಶಿಫ್ಟ್ ಮಾಡಿದ್ದರು. ಅವರು ಬೆಂಗಳೂರಿನ ಕಾಲ್‍ಸೆಂಟರಿನ ಹುಡುಗಿಯರಂತೆ ಒಂದು ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದ್ದೂ ಅಲ್ಲ. ಊರಿಂದೂರಿಗೆ ಹೋದವರು, ಎಲ್ಲೋ ಯಾರದೋ ಮನೆಯಲ್ಲಿ ಹಗಲು ಜಾಗ, ಸಮಯ ಸಿಕ್ಕಾಗ ನಿದ್ದೆ ಮಾಡಿದವರು. ನಾನು ಮತ್ತು ನನ್ನಂಥ ಪತ್ರಕರ್ತೆಯರು 24×7 ಡೇಕೇರ್​ಗಳು ಬೆಂಗಳೂರಿನಲ್ಲೂ ಇವೆ ಎಂದು 2010ರ ವೇಳೆಗೆ ಲೇಖನ ಬರೆದರೆ, ಇವರು ತಮ್ಮ ಎಳೆಯ ಮಕ್ಕಳನ್ನು ದಿನಗಟ್ಟಲೆ ನೋಡದೇ ರಾತ್ರಿಯ ಪಾಳಿಯಲ್ಲಿ ತಮ್ಮ ಕೆಲಸದಲ್ಲಿ ತೊಡಗಿದ್ದರು.

ತುಳು ಪ್ರಸಂಗಗಳ, ಡೇರೆ ಮೇಳಗಳ ಆಧಿಕ್ಯದ ಸಮಯದಲ್ಲೇ ತಮ್ಮ ಕಲಾರಂಗದಲ್ಲಿ ಅರಳಿದ ಲೀಲಮ್ಮ; ಆ ಕಾಲದಲ್ಲಿ ಕರಾವಳಿಯ ಮನೆಮನೆಯಲ್ಲೂ ‘ಹೆಣ್ಣುಮಗಳು ಭಾಗವತಿಕೆ ಮಾಡ್ತಾರಂತೆ’ ಎಂಬ ಸೆನ್ಸೇಷನ್ ಹುಟ್ಟುಹಾಕಿದ್ದರು. ವಿಶೇಷ ಆಕರ್ಷಣೆಯಾಗಿ ಅವರು ಯಕ್ಷಗಾನಾಭಿಮಾನಿಗಳನ್ನು ಎಷ್ಟರಮಟ್ಟಿಗೆ ಸೆಳೆಯಲು ಶಕ್ತರಾಗಿದ್ದರೆಂದರೆ ಹಲವಾರು ಬಾರಿ ಸೇರಿದ್ದ ಜನಸ್ತೋಮಕ್ಕೆ ಕೂರಲು ಜಾಗವಿಲ್ಲದೆ ಟೆಂಟ್ ಬಿಚ್ಚಿಸಿ ಜಾಗ ಮಾಡಿಕೊಡಬೇಕಾಗಿ ಬಂದುದೂ ಇತ್ತು! ಇಂದಿನ ಸೋಷಿಯಲ್ ಮೀಡಿಯಾ ಮೆರೆದಾಟದ ಈ ಕಾಲದಲ್ಲಿ ಇವರು ರಂಗವೇರುತ್ತಿದ್ದರೆ ಇನ್ನು ಅದೆಂತಹ ಜನಪ್ರಿಯತೆ ಪಡೆಯುತ್ತಿದ್ದರೋ, ಇವರ ಮಧುರ ಧ್ವನಿ ಅದೆಷ್ಟು ವೈರಲ್ ಆಗುತ್ತಿತ್ತೋ ಎಂದು ಕಲ್ಪಿಸಿಯೇ ಬೆರಗಾಗುತ್ತೇನೆ.

ಇಂತಹ ಸಾಧಕಿಯ ಜೀವನದ ಕಥೆಯನ್ನು ನಿರೂಪಣೆ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಭಾಗ್ಯವೇ ಸರಿ. 2017ರಲ್ಲಿ ಲೀಲಾವತಿ ಅಮ್ಮನ ಕುರಿತಾಗಿ ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ನಾನೊಂದು ಲೇಖನ ಬರೆದಿದ್ದೆ. ಅದುವೇ ನೆಪವಾಗಿ ಅವರ ಜೀವನದ ಕಥೆಯ ಬೆಂಬತ್ತುವಂತಾಯ್ತು. ವೃತ್ತಿ ಬದುಕಿನುದ್ದಕ್ಕೂ ತಾನಾಯ್ತು, ತನ್ನ ಜವಾಬ್ದಾರಿಯ ನಿಭಾವಣೆಯಾಯ್ತು ಎಂಬಂತಿದ್ದ ಲೀಲಮ್ಮ ತಮ್ಮ ಕಷ್ಟ, ಸುಖಗಳನ್ನು ಎಲ್ಲಿಯೂ ಅಷ್ಟಾಗಿ ಬಿಚ್ಚಿಟ್ಟವರೇ ಅಲ್ಲ. ಹೀಗಾಗಿ ಈ ಆತ್ಮಕಥನ ನಿರೂಪಣೆ ನನಗೂ ಅಷ್ಟು ಸುಲಭವಾದದ್ದೇನಾಗಲಿಲ್ಲ. ಮೊದಲು ಲೀಲಮ್ಮನ ಕಿರಿಯ ಮಗ ಅವಿನಾಶರ (ಪತ್ರಕರ್ತ) ಬೆಂಗಳೂರಿನ ಮನೆಯಲ್ಲಿ ಒಂದೆರಡು ಬಾರಿ ಭೇಟಿಯಾಗಿ ಮಾತನಾಡಿಸಿದೆ. ಎರಡು-ಮೂರು ಗಂಟೆಗಳ ಕಾಲ ಒಂದಷ್ಟು ಹೇಳಿ ಇನ್ನೇನೂ ಇಲ್ಲ ಎಂಬಂತೆ ಸುಮ್ಮನಾಗಿ ಬಿಡುತ್ತಿದ್ದರು. ಬಳಿಕ ಅವರ ತಲಕಳದ ಮನೆಗೂ ಹೋಗಿ ಅವರಲ್ಲಿಯೇ ವಾಸ್ತವ್ಯವಿದ್ದು ಲೀಲಮ್ಮನ ಮನದೊಳಗೆ ಹೊಗುವ ಪ್ರಯತ್ನವನ್ನೂ ಮಾಡಿದ್ದಾಯಿತು. ವಿದ್ಯಾರಶ್ಮಿ ಪೆಲತ್ತಡ್ಕ, ಪತ್ರಕರ್ತೆ 

*

ಗಂಡೋ ಹೆಣ್ಣೋ ನೋಡಬೇಕು!

Acchigoo Modhalu an excerpt of Yaksha Gaana Leelavali an autobiography of Leela Baipadittaya by Vidyarashmi Pelattadka

ಅಣ್ಣ ವಿಷ್ಣು ಹೆಬ್ಬಾರರೊಂದಿಗೆ ಲೀಲಾವತಿ ಬೈಪಾಡಿತ್ತಾಯ

ಮಹಿಳೆಯೊಬ್ಬಳು ಹೀಗೆ ಆಟದಲ್ಲಿ ಪದ ಹೇಳುವುದು ಜನರಿಗೆ ಹೊಸದು. ಮಹಿಳೆಯರು ಹೊರಗೆ ಕಚೇರಿ ಕೆಲಸಕ್ಕೆಂದು ಹೋಗುತ್ತಿದ್ದ ದಿನಗಳಾದರೆ ಜನರಿಗೆ ಅದೇನೂ ವಿಶೇಷ ಎನಿಸುತ್ತಿರಲಿಲ್ಲವೇನೋ. ಇನ್ನೂ ಮಹಿಳೆಯರು ಅಷ್ಟಾಗಿ ವಿದ್ಯಾಭ್ಯಾಸ ಪಡೆಯದ, ಕಾಲೇಜು ಮೆಟ್ಟಿಲು ಹತ್ತಿರದ ದಿನಗಳವು. ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು ಎಲ್ಲೋ ಅಪರೂಪಕ್ಕೆ ಕಾಣಿಸುತ್ತಿದ್ದರೂ, ಅವರು ಸಮಾಜದಲ್ಲಿ ಶೇ.1ರಷ್ಟೇ ಇದ್ದಿರಬಹುದು. ಹೀಗಾಗಿಯೇ ಸಾರ್ವಜನಿಕರಿಗೆ ಹೀಗೂ ಉಂಟೇ ಎನ್ನುವಷ್ಟು ಬೆರಗು. ಪದ ಹೇಳಿದ್ದು ಹೆಂಗಸಿನ ಧ್ವನಿ ಎಂಬುದು ಸ್ಪಷ್ಟವಾಗುವಷ್ಟರಲ್ಲಿ ಏನೋ ರೋಚಕ ಭಾವ. ಆರಂಭದಲ್ಲೇ ಹೇಳಿದಂತೆ, ಯಕ್ಷಗಾನ ಪ್ರದರ್ಶನದ ಜಾಗಕ್ಕೆ ಬಸ್‍ನಲ್ಲಿ ಹೋಗುವಾಗ ಅದೆಷ್ಟೋ ವಿಚಿತ್ರ ಮಾತುಗಳನ್ನು ಕೇಳಿದ್ದುಂಟು. ‘ಹೆಂಗಸು ಪದ ಹೇಳುವುದಂತೆ ಮಾರ್ರೆ! ನಿಜ ಇರ್ಲಿಕಿಲ್ವೇನೋ… ಗಂಡಸೇ ವೇಷ ಹಾಕಿ ಬರುವುದಿರ್ಬೇಕು, ಏನಂತ ನೋಡಿ ಬರುವ’ ಎನ್ನುತ್ತಿದ್ದವರು ಕೆಲವರು. ‘ಹೆಂಗಸು ಪದ ಹೇಳುವುದಂತೆ, ಅದೆಂತ ಹೇಳ್ಳಿಕಾಗ್ತದೆ, ಸುಮ್ಮನೆ ಅಲ್ವಾ? ನೋಡೇಬಿಡುವ’ ಅನ್ನುವವರು ಇನ್ನು ಹಲವರು.

ಅವಳ ಹೆಸರು ನೀಲಮ್ಮ ಅಂತ. ನಮ್ಮೂರಿನ ಪರಿಚಯದ ಹೆಂಗಸು. ಅವಳು ಒಂದು ದಿನ, ‘ಈ ಆಟದಕ್ಲು ಕಾಸ್ ಮಲ್ಪರೆ ಮಂಗೆ ಮಲ್ಪೆರ್. ಅವು ಪೊಣ್ಣೊ ಆಣೋ, ತೂವೊಡು’ ಎನ್ನುತ್ತಿದ್ದಳು. ಯಕ್ಷಗಾನವೆಂದರೆ ಗಂಡಸರೇ ವೇಷ ಹಾಕಿ ಕುಣಿಯುವುದು ಆ ಕಾಲಕ್ಕೆ ರೂಢಿ. ಅದರಂತೆ, ಭಾಗವತರ ಸ್ಥಾನದಲ್ಲಿಯೂ ಪುರುಷರೇ ಹೆಂಗಸಿನ ವೇಷ ಹಾಕಿ ಕೂರಬಹುದು ಎಂಬ ಸಂದೇಹ ಜನರಲ್ಲಿ. ವಿಚಿತ್ರವೆಂದರೆ ಆಟ ಮುಗಿಸಿ ಬರುವಾಗಲೂ ಬಸ್ಸಿನಲ್ಲಿದ್ದ ಜನರ ಪ್ರತಿಕ್ರಿಯೆ ಕೇಳಿದ್ದೇನೆ. ‘ಹೆಂಗಸು ಪದ ಹೇಳಿದ್ದು ನಿಜ, ಚೆನ್ನಾಗಿ ಹೇಳ್ತಾರೆ ಮಾರಾಯ್ರೆ, ಕಂಡ ಹಾಗಲ್ಲ’ ಎಂಬ ಮೆಚ್ಚುಗೆ ಸಿಕ್ಕಿದ್ದೇ ಬಹಳ.

ಎಂಬತ್ತರ ದಶಕದ ಆರಂಭದಲ್ಲಿ ನಾನು ಅತಿಥಿ ಭಾಗವತಳಾಗಿ ಹೋಗುತ್ತಿದ್ದಾಗ, ಮೇಳದ ಚೌಕಿಯಲ್ಲಿ ನಾನು ಇದ್ದೇನೆಂದು ತಿಳಿದವರಿಗೆಲ್ಲ ಒಳಹೋಗಿ ಅಮ್ಮನನ್ನು ಒಮ್ಮೆ ನೋಡಬೇಕು ಎಂಬ ಕಾತರವಿರುತ್ತಿತ್ತು. ಕೆಲವರಂತೂ ಚೌಕಿಗೆ ಬಂದು ಮುತ್ತಿಕೊಳ್ಳುತ್ತಿದ್ದರು. ಟೆಂಟ್‍ನ ಒಳಗೆ, ಹೊರಗೆ ಹೋಗುವಾಗಲೆಲ್ಲ ನಾನು ತಲೆಗೆ ಸೆರಗು ಹೊದ್ದು ನಡೆಯುತ್ತಿದ್ದೆ. ಆಗ ಜನ ಎಲ್ಲ ಇಣುಕಿ ನೋಡ್ತಿದ್ದರು. ವೇಷ ಹಾಕಿಕೊಂಡು ಬರೋದಾ ಎಂದು ಕೇಳ್ತಿದ್ದರು. ಕೆಲವರಂತೂ ಇದು ಹೆಣ್ಣುಮಗಳು ಅಲ್ಲವೇ ಅಲ್ಲ ಎಂದು ವಾದ ಮಾಡುತ್ತಿದ್ದರು. ವೇದಿಕೆಯಲ್ಲಿ ಹಾಡುವಾಗ ದುಡ್ಡು ಎಸೆಯುವಂತೆ ಅಭಿನಯಿಸುತ್ತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಬಳಿಕ ಬಸ್‍ನಲ್ಲಿ ಹೋಗುವಾಗ ಕೆಲವರು ಗುರುತು ಹಿಡಿದು ಮಾತಾಡಿ ಖುಷಿಪಡುತ್ತಿದ್ದರು. ಕಲಾಭಿಮಾನಿಗಳ ಇಂತಹ ಮೆಚ್ಚುಗೆಯೇ ನಮಗೆ ಪ್ರಶಸ್ತಿಯಂತೆ. ಇಂತಹ ನೆನಪುಗಳನ್ನು ನಾನು ಸದಾ ಕಾಪಿಟ್ಟುಕೊಳ್ಳುತ್ತೇನೆ.

Acchigoo Modhalu an excerpt of Yaksha Gaana Leelavali an autobiography of Leela Baipadittaya by Vidyarashmi Pelattadka

1984ರಲ್ಲಿ ಕಟೀಲಿನಲ್ಲಿ ನಡೆದ ಭಾಗವತಿಕೆಯ ರಾಗತಾಳ ಗೋಷ್ಠಿಯಲ್ಲಿ ಲೀಲಾವತಿ

ಎಲ್ಲ ಮೊದಲುಗಳಲ್ಲಿಯೂ ಹೊಸದಕ್ಕೆ ಹೊಂದಿಕೊಳ್ಳುವ ಕಷ್ಟ ಇದ್ದೇ ಇರುತ್ತದೆ. ನಾನು ಭಾಗವತಿಕೆಗೆ ತೊಡಗಿದಾಗಲೂ ಆದದ್ದು ಹೀಗೆಯೇ. ಅನೇಕರಿಗೆ ಹೆಣ್ಣೊಬ್ಬಳು ಹಾಡುವ ವಾಸ್ತವವನ್ನು ಒಪ್ಪಿಕೊಳ್ಳುವುದು ಕಷ್ಟವಾಯ್ತು. ಇನ್ನು ಕೆಲವರಿಗೆ ‘ಗಂಡುಕಲೆ’ ಎಂದೇ ಹೆಸರಾದ ಕಲೆಯಲ್ಲಿ ಹೆಣ್ಣುಧ್ವನಿಯೊಂದು ಕೇಳಿಬಂದಾಗ ಇರುಸು ಮುರುಸಾಯಿತು. ಪೆರುವೊಡಿ ನಾರಾಯಣ ಭಟ್ಟರು ಆ ಕಾಲಕ್ಕೇ ಬಹಳ ಖ್ಯಾತ ಕಲಾವಿದರು. `ಪಾಪಣ್ಣ ವಿಜಯ ಗುಣಸುಂದರಿ’ ಪ್ರಸಂಗದಲ್ಲಿ ಪಾಪಣ್ಣನ ಪಾತ್ರ ಮಾಡುತ್ತಿದ್ದರು. ಒಮ್ಮೆ ನನ್ನ ಭಾಗವತಿಕೆ ಇದ್ದ ಸಂದರ್ಭ. ಅವರೂ ಆ ದಿನ ಪಾತ್ರಧಾರಿಯಾಗಿದ್ದರು. ಅವರಿಗೆ ಬಹುಶಃ ಹೀಗೆ ಸ್ತ್ರೀಯೊಬ್ಬಳು ಭಾಗವತಿಕೆ ಮಾಡಿದುದಕ್ಕೆ ಕುಣಿದು ಅಭ್ಯಾಸವಿರಲಿಲ್ಲವೆನಿಸುತ್ತದೆ. ಅದಕ್ಕೇ, ‘ಇವರ ಪದ್ಯಕ್ಕೆ ನಾನು ಹೇಗೆ ಕುಣಿಯುವುದು’ ಎಂದರಂತೆ. ಆದರೆ, ನನ್ನಲ್ಲಿ ಅವರು ಏನೂ ನೇರವಾಗಿ ಹೇಳಲಿಲ್ಲ. ನಮ್ಮ ಬಂಧುವೂ, ತಿರುಗಾಟದಲ್ಲಿ ಸಹಕಲಾವಿದರೂ ಆಗಿದ್ದ ಲಕ್ಷ್ಮೀಶ ಅಮ್ಮಣ್ಣಾಯರು, ‘ನೀವು ಹಾಡಿ’ ಎಂದರು, ಬೇರೇನೂ ಹೇಳಲಿಲ್ಲ. ನಾನು ಹಾಡಿದೆ, ಪ್ರಸಂಗ ನಡೆಯಿತು. ಹಾಡುಗಳನ್ನು ಕೇಳಿದ ಬಳಿಕ ಪೆರುವೊಡಿಯವರೂ ನನ್ನ ಅಭಿಮಾನಿಯಾದರು, ಗೌರವದಿಂದಲೇ ನನ್ನ ಜೊತೆಗೆ ನಡೆದುಕೊಂಡರು.

ಯಕ್ಷಗಾನದ ಶ್ರುತಿಗೆ ಮಹಿಳೆಯರ ಧ್ವನಿ ಹೊಂದುತ್ತದೆಯೇ ಎಂಬ ಸಂದೇಹ ರಂಗಸ್ಥಳಕ್ಕೆ ಮಹಿಳೆಯ ಪ್ರವೇಶವಾದ ಮೊದಮೊದಲ ಆ ದಿನಗಳಲ್ಲಿ ಬರುತ್ತಿದ್ದುದು ಸಹಜವೇ. ಅರ್ಥಗಾರಿಕೆಯೇ ಆಗಲಿ, ಭಾಗವತಿಕೆಯೇ ಆಗಲಿ ಸಂದರ್ಭೋಚಿತ ಭಾವಗಳನ್ನು ಧ್ವನಿಯಲ್ಲಿ ತುಂಬುವ ಕಂಠಶಕ್ತಿ ಪುರುಷರಲ್ಲಾಗಲೀ ಮಹಿಳೆಯರಲ್ಲಾಗಲೀ ಇರಬೇಕು. ಮಹಿಳೆಯರ ಸ್ವರ ಸಹಜವಾಗಿಯೇ ಮೃದು. ಆದರೆ, ನಿರಂತರ ಅಭ್ಯಾಸದಿಂದ ಯಕ್ಷಗಾನದ ಸ್ಥಾಯಿಗೆ ಹೊಂದಿಕೊಳ್ಳುವುದು ಕಷ್ಟವೇನಲ್ಲ.

ಅನೇಕರಿಗೆ ಹೆಂಗಸು ಎನ್ನುವ ಕಾರಣಕ್ಕೇ ನನ್ನ ಭಾಗವತಿಕೆಯನ್ನು ಒಪ್ಪಿಕೊಳ್ಳಲು ಸ್ವಲ್ಪ ಮುಜುಗರವಾಗುತ್ತಿತ್ತು. ಧ್ವನಿಗೆ ಒಗ್ಗಿಕೊಳ್ಳಲಾಗುತ್ತಿರಲಿಲ್ಲ. ಹೆಂಗಸು ಹೇಳಿದ ಪದ ಪುರುಷ ವೇಷಗಳಿಗೆ ಹೊಂದಿಕೊಳ್ಳುವುದಿಲ್ಲ ಎನಿಸುತ್ತಿತ್ತು. ಸಾಮಾನ್ಯವಾಗಿ ಭಾಗವತರು ಹಾಡುವುದನ್ನು ನಿಲ್ಲಿಸಿದಾಗ ಯಾವ ಶ್ರುತಿ ಇರುತ್ತದೋ ಅದೇ ಶ್ರುತಿಯಲ್ಲಿ ಅರ್ಥವೂ ಬರಬೇಕು. ಆದರೆ, ನಾನು ಹಾಡುವ ಏರು ಕಪ್ಪು ಮೂರು ಶ್ರುತಿಯಲ್ಲಿ ಮಾತಾಡುವುದು ಅನೇಕ ಪುರುಷರಿಗೆ ತ್ರಾಸವಾಗುತ್ತಿತ್ತು. ಸ್ತ್ರೀಧ್ವನಿಯ ಕೋಳ್ಯೂರ- ರಂಥವರಿಗೆ ಇದು ಸಹಜವಾದ್ದರಿಂದ ಕಷ್ಟವಾಗುತ್ತಿರಲಿಲ್ಲ. ಉಳಿದ ಅನೇಕರಿಗೆ ಶ್ರುತಿಯ ಕಾರಣಕ್ಕೇ ನನ್ನ ಹಾಡು ಇಷ್ಟವಾಗುತ್ತ್ತಿರಲಿಲ್ಲ. ಆದರೆ, ಹಾಡು ಕೇಳುತ್ತ ಕೇಳುತ್ತ ಎಲ್ಲರೂ ನನ್ನ ಧ್ವನಿಗೆ ಒಗ್ಗಿಕೊಂಡರೆನ್ನಬೇಕು. ಪುರುಷರು ಸ್ತ್ರೀವೇಷ ಹಾಕುವುದನ್ನು ಪ್ರೇಕ್ಷಕರು ಹೇಗೆ ಒಪ್ಪಿಕೊಂಡಿದ್ದರೋ ಹಾಗೆಯೇ ಭಾಗವತಿಕೆಯಲ್ಲಿ ಸ್ತ್ರೀಧ್ವನಿಯನ್ನು ಆಲಿಸುವುದು, ಅದಕ್ಕೆ ಕುಣಿಯುವುದೂ ಕ್ರಮೇಣ ರೂಢಿಯಾಯಿತು.

Acchigoo Modhalu an excerpt of Yaksha Gaana Leelavali an autobiography of Leela Baipadittaya by Vidyarashmi Pelattadka

ಕುಟುಂಬದೊಂದಿಗೆ ಲೀಲಾವತಿ

ಇದಲ್ಲದೆ ನಾನು ಹಾಡುವಾಗಲೆಲ್ಲ ವೇಷಧಾರಿಗಳಿಗೆ ಭಾಗವತರ ಧ್ವನಿ ಕೇಳುವುದಿಲ್ಲ ಎಂಬ ಸಮಸ್ಯೆ ಎದುರಾಯಿತು. ಆ ಕಾಲದಲ್ಲಿ ಮೈಕ್ ಬಂದಿತ್ತಾದ್ದರಿಂದ ನಾನು ವಿಶೇಷ ಎತ್ತರದ ಧ್ವನಿಯಲ್ಲೇನೂ ಹಾಡಬೇಕಿರಲಿಲ್ಲ. ಮೈಕ್‍ನಲ್ಲಿ ನನ್ನ ಧ್ವನಿ ಚೆನ್ನಾಗಿ ಕೇಳುತ್ತದೆ ಎಂದವರೇ ಎಲ್ಲರೂ. ಪ್ರೇಕ್ಷಕರಿಗೆ, ಟೆಂಟ್‍ನ ಹೊರಗಿದ್ದವರಿಗೂ ನನ್ನ ಧ್ವನಿ ಸರಿಯಾಗಿ ಕೇಳಿಸುತ್ತಿತ್ತು. ಆದರೆ, ರಂಗಸ್ಥಳದಲ್ಲಿದ್ದ ವೇಷಧಾರಿಗಳಿಗೇ ಧ್ವನಿ ಕೇಳಿಸುತ್ತಿರಲಿಲ್ಲ… ಇದರಿಂದ ಅವರಿಗೆ ಅರ್ಥ ಹೇಳುವುದಕ್ಕೂ ಸಮಸ್ಯೆಯಾಗುತ್ತದೆ ಎಂಬ ದೂರೂ ಬಂತು. ಆದರೆ, ಕೆಲವೇ ದಿನಗಳಲ್ಲಿ ಮೇಳದ ಯಜಮಾನರು ಸಮಸ್ಯೆಯನ್ನು ಅರ್ಥ ಮಾಡಿಕೊಂಡು ರಂಗಸ್ಥಳದಲ್ಲಿಯೂ ಕೇಳಿಸಲು ಅನುಕೂಲ ಆಗುವಂತೆ ಬಾಕ್ಸ್‍ಗಳನ್ನು ಅಳವಡಿಸಿದರು. ಇದರಿಂದಾಗಿ ಆ ಸಮಸ್ಯೆ ಕರಗಿಹೋಯ್ತು.

*

ಪರಿಚಯ : ವಿದ್ಯಾರಶ್ಮಿ ಪೆಲತ್ತಡ್ಕ ದಕ್ಷಿಣ ಕನ್ನಡ-ಕಾಸರಗೋಡು ಗಡಿ ಭಾಗದ ಪೆಲತ್ತಡ್ಕದವರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಪ್ರಭ, ಸುವರ್ಣ ನ್ಯೂಸ್, ವಿಜಯ ನೆಕ್ಸ್ಟ್ ಪತ್ರಿಕೆಗಳಲ್ಲಿ ಕೆಲಸ ಮಾಡಿ ಸದ್ಯ ವಿಜಯ ಕರ್ನಾಟಕ ಪುರವಣಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಗೌರೀದುಃಖ’ ಇವರ ಪ್ರಕಟಿತ ಕವನ ಸಂಕಲನ.

(ಪುಸ್ತಕದ ಖರೀದಿಗೆ ಸಂಪರ್ಕಿಸಿ :  9448804905)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು : ‘ನೂರೊಂದು ರೂಮಿ ಹನಿಜೇನು’ ನಿಮ್ಮ ಕೈಗಿಡುತ್ತಿದ್ದಾರೆ ಡಾ. ಸಂಜೀವ ಕುಲಕರ್ಣಿ

Published On - 2:47 pm, Fri, 5 November 21