Dr. H. Girijamma Obituary : ‘ಆತ್ಮಕಥನದ ಮುಖಪುಟದಲ್ಲಿ ನನ್ನ ಫೋಟೋ ಮಸುಕಾಗಿಯೇ ಇರಲಿ’

Dr. H. Girijamma Obituary : ‘ಆತ್ಮಕಥನದ ಮುಖಪುಟದಲ್ಲಿ ನನ್ನ ಫೋಟೋ ಮಸುಕಾಗಿಯೇ ಇರಲಿ’
ಡಾ. ಎಚ್. ಗಿರಿಜಮ್ಮ ಅವರೊಂದಿಗೆ ಡಾ. ವಸುಂಧರಾ ಭೂಪತಿ.

Dr. H. Girijamma : ‘ಒಮ್ಮೆ ದಾವಣಗೆರೆಯಲ್ಲಿ ಗಿರಿಜಮ್ಮನವರ ಮನೆಗೆ ಹೋಗಿದ್ದೆ. ಮನೆ ಎಂದರೆ, ಒಂದೇ ಒಂದು ದೊಡ್ಡ ಹಾಲ್. ಅದರಲ್ಲೇ ಒಂದು ಕಡೆ ಅಡುಗೆಗೆ ಜಾಗ, ಒಂದು ಕಡೆ ಪಾತ್ರೆ, ಬಟ್ಟೆ, ಪುಸ್ತಕದ ರಾಶಿ ಹೀಗೆ... ಅಡುಗೆ ಮಾಡಿಕೊಳ್ಳುತ್ತಿದ್ದರೋ? ಗೊತ್ತಿಲ್ಲ.’ ಡಾ. ವಸುಂಧರಾ ಭೂಪತಿ

ಶ್ರೀದೇವಿ ಕಳಸದ | Shridevi Kalasad

|

Aug 17, 2021 | 8:49 PM

ಯಾವ ಜಾಗದಲ್ಲಿ ತನಗೆ ಗೌರವ ಸಿಗುತ್ತಿಲ್ಲ ಎಂದನ್ನಿಸುತ್ತದೆಯೋ ಆ ಜಾಗದಲ್ಲಿ ಒಂದು ಕ್ಷಣ ಅವರಿರುತ್ತಿರಲಿಲ್ಲ.  ಪ್ರೀತಿಸಿದರೆ ಅಪಾರ ಪ್ರೀತಿ. ಬೇಡ ಎಂದು ತೀರ್ಮಾನಿಸಿದರೆ ಸಂಪೂರ್ಣ ಅದರಿಂದ ದೂರ ಇರುವಂಥ ಸ್ವಭಾವ ಅವರದಾಗಿತ್ತು. ಅವರ ದುಡಿಮೆಯಲ್ಲಿ ಶೇ. 70ರಿಂದ 80 ರಷ್ಟು ಗಂಡ ಮಾಡಿದ ಸಾಲಕ್ಕೇ ಹೋಗುತ್ತಿತ್ತು. ನೋಡು ಕೈಗೆ ಬರುವುದಿಷ್ಟೇ ಎಂದು ಬೇಸರಿಸಿಕೊಳ್ಳುತ್ತಿದ್ದರು. ಗಂಡನಿಂದ ಎಲ್ಲಾ ರೀತಿಯ ವಂಚನೆಗೊಳಗಾಗಿ ವಿಚ್ಛೇದನ ಪಡೆದುಕೊಂಡು ಆ ಸಂಬಂಧದಿಂದ ಹೊರಬಂದರು. ಒಂಟಿತನ ಅವರನ್ನು ಮತ್ತಷ್ಟು ಕಷ್ಟಕ್ಕೆ ದೂಡಿತು. ಆ ಒಂಟಿತನವೇ ಅವರು ನಮ್ಮಿಂದ ಅಗಲುವಂತೆ ಮಾಡಿತು. ಡಾ. ವಸುಂಧರಾ ಭೂಪತಿ, ವೈದ್ಯೆ, ಸಾಹಿತಿ

‘Vasu, I wish you a happy friendship day and above all I feel you like, you are my daughter. Love all.’

ಫ್ರೆಂಡ್​ಶಿಪ್​ ಡೇ ದಿನ (ಆಗಸ್ಟ್ 1) ಅವರು ಕಳಿಸಿದ ಮೆಸೇಜ್ ಇದು. ಕಳೆದ 30 ವರ್ಷಗಳ ಸ್ನೇಹ ನಮ್ಮದು. ಯಾವಾಗಲೂ ವಸು ಎಂತಲೇ ಕರೆಯುತ್ತಿದ್ದರು. ತುಂಬಾ ಜೀವನಪ್ರೀತಿಯ ವ್ಯಕ್ತಿತ್ವ. ಅವರ ಒಡನಾಟಕ್ಕೆ ಬಂದ ಎಲ್ಲರನ್ನೂ ತುಂಬಾ ಪ್ರೀತಿಸುತ್ತಿದ್ದರು. ತೀವ್ರ ಭಾವನಾಜೀವಿ. ಹಾಗಾಗಿ ಇಡೀ ಬದುಕನ್ನು ಭಾವುಕತೆಯಿಂದಲೇ ಸ್ವೀಕರಿಸುತ್ತ ಬಂದರು. ನಾನು ಕನ್ನಡ ವೈದ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆಯಾದ ಸಂದರ್ಭದಲ್ಲಿ ಅವರನ್ನು ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದೆ. ಆಗ ಅವರು ಕನಕಪುರ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದರು. ಕಾರ್ಯಕ್ರಮ ಮುಗಿಸಿದ ನಂತರ, ‘ಪಾಪ ಹೆಣ್ಣುಮಕ್ಕಳು ಮೂರು- ನಾಲ್ಕನೇ ಹೆರಿಗೆಗೆ ಒಬ್ಬೊಬ್ಬರೇ ಬರುತ್ತಾರೆ. ಅವರನ್ನು ವಾಪಾಸು ಕರೆದುಕೊಂಡು ಹೋಗಲೂ ಯಾರೂ ಬಂದಿರುವುದಿಲ್ಲ. ಬಹಳ ನೋವೆನ್ನಿಸುತ್ತದೆ. ಹೆರಿಗೆ ಮಾಡಿ, ಪೋಷಣೆ ಮಾಡಿ ಸ್ವಲ್ಪ ಹಣ ಕೊಟ್ಟು ಕಳಿಸಬೇಕಾಗುತ್ತದೆ.’ ಎಂದಿದ್ದರು. ಆಗಸ್ಟ್ ಒಂದರಂದು Friendship Day ಗೆ ಮೆಸೇಜ್ ಮಾಡಿದ್ದೇ ಕೊನೆ.

ಹಂಪಿಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಕಮ್ಮಟಕ್ಕೆ ದಾವಣಗೆರೆಯಿಂದ ಬಂದಿದ್ದರು. ತುಂಬಾ ವರ್ಷಗಳಿಂದ ಖಿನ್ನತೆಯಿಂದ ಬದುಕುತ್ತಿದ್ದರು, ಸಕ್ಕರೆ ಕಾಯಿಲೆಯೂ ಹೆಚ್ಚೂ ಕಡಿಮೆಯಾಗುತ್ತಿತ್ತು. ಹಾಗಾಗಿ ಖಿನ್ನತೆ ನಿವಾರಣೆಗೆ ಔಷಧಿ ಸೇವಿಸುತ್ತಲೇ ಇದ್ದರು. ಆ ಕಾರ್ಯಕ್ರಮಕ್ಕೆ ಬಂದಾಗಲೂ ಮಾತ್ರೆ ತೆಗೆದುಕೊಂಡೇ ಬಂದಿದ್ದರು. ಸಭಾಂಗಣ ಪ್ರವೇಶಿಸುತ್ತಿದ್ದಂತೆ ಜೋಲಿ ತಪ್ಪಿದಂತಾಯಿತು. ನಾನು ವೇದಿಕೆಯ ಮೇಲಿದ್ದೆ. ನನ್ನ ಪತಿ ಭೂಪತಿಯವರೇ ಅವರ ಕಾಳಜಿ ತೆಗೆದುಕೊಂಡರು. ಭೂಪತಿಯವರನ್ನು ಸಹೋದರನಂತೆ ಕಾಣುತ್ತಿದ್ದರು.

ಅನುಪಮಾ ನಿರಂಜನ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಬಂದಿದ್ದರು. ವಸತಿಗೆಲ್ಲಾ ಹಣ ಖರ್ಚು ಮಾಡುವುದು ಬೇಡ. ನಾನು ಕಾರಿನಲ್ಲೇ ಬಂದು ವಾಪಾಸು ಹೋಗುತ್ತೇನೆ. ಮುಖ ತೊಳೆಯೋಕೆ ಒಂದು ರೆಸ್ಟ್ ರೂಮ್ ಸಾಕು ನನಗೆ ಎಂದಿದ್ದರು. ಯಾವತ್ತೂ ರೇಷ್ಮೆ ಸೀರೆ, ಒಡವೆಯಲ್ಲಿ ಅವರನ್ನು ನೋಡಲೇ ಇಲ್ಲ. ನೋಡಲು ತುಸು ಕಪ್ಪಾಗಿದ್ದರೂ ಬಹಳ ಲಕ್ಷಣವಂತ ಹೆಣ್ಣುಮಗಳು. ಸದಾ ಸಾದಾ ಸೀರೆ ಉಟ್ಟುಕೊಂಡಿರುತ್ತಿದ್ದರು. ತಮ್ಮೊಳಗೆ ಎಷ್ಟೇ ನೋವಿರುತ್ತಿದ್ದರೂ ಎಲ್ಲರೊಂದಿಗೆ ನಗನಗುತ್ತಾ ಬೆರೆಯುತ್ತಿದ್ದರು. ಮತ್ತಿವರನ್ನು ಒಂದು ರೀತಿ ಸೆಲೆಬ್ರಿಟಿ ಡಾಕ್ಟರ್ ಎನ್ನಬಹುದು. ಸಾಕಷ್ಟು ಸಾಹಿತಿಗಳ ಕುಟುಂಬ ಸದಸ್ಯರುಗಳ ಹೆರಿಗೆ ಮಾಡಿಸಿದ್ದರು.

dr h girijamma dr vasundhara bhoopathi

ಡಾ. ವಸುಂಧರಾ ಭೂಪತಿಯವರು ಡಾ. ಎಚ್. ಗಿರಿಜಮ್ಮನವರನ್ನು ಸನ್ಮಾನಿಸುತ್ತಿರುವುದು.

ಅನುಪಮಾ ನಿರಂಜನ ಪ್ರಶಸ್ತಿ ಸ್ವೀಕರಿಸಿ ಆದಮೇಲೆ 25,000! ಇಷ್ಟೊಂದು ಹಣ ಕೊಡುತ್ತಿದ್ದೀರಾ? ಎಂದರು. ಅದು ಇನ್ನೂ ಕಡಿಮೆ ಎಂದು ಅವರಿಗೆ ಗೊತ್ತಿರಲಿಲ್ಲ. ಜೈವಿಕವಾಗಿ ಅವರು ತಾಯಿ ಆಗದಿದ್ದರೂ ತಾಯ್ತನದ ಗುಣಗಳು ಅವರ ಇಡೀ ವ್ಯಕ್ತಿತ್ವದಲ್ಲಿ ಅಡಕಗೊಂಡಿತ್ತು. ಜೈವಿಕವಾಗಿ ತಾಯಿ ಆದವರಿಗೆ ತಾಯ್ತನದ ಗುಣ ಇರುತ್ತದೆ ಎಂದು ಹೇಳಲಿಕ್ಕಾಗದು. ಮೂರು ವರ್ಷದ ಮಗುವನ್ನು ದತ್ತು ತೆಗೆದುಕೊಂಡರು. ಆ ಮಾನಸಪುತ್ರಿಯ ದೈಹಿಕ, ಮಾನಸಿಕ ಬೆಳವಣಿಗೆಯನ್ನು ಒಂದು ವರ್ಷದ ತನಕ ಅಧ್ಯಯನ ಮಾಡಿ ಡಿ.ಲಿಟ್ ಪ್ರಬಂಧ ಮಂಡಿಸಿದರು.

ಕೌಟುಂಬಿಕ ಬದುಕಿನಲ್ಲಿ ಪ್ರೀತಿ, ಅಂತಃಕರಣ ಸಿಗಲೇ ಇಲ್ಲ ಅವರಿಗೆ. ತಾಯಿಯಿಂದಲೂ ಸಿಗಲಿಲ್ಲ. ಮದುವೆಯಾದ ಗಂಡನಿಂದಲೂ ಸಿಗಲಿಲ್ಲ. ತನ್ನ ತಂಗಿಯ ಮೇಲೆ ಇದ್ದಷ್ಟು ಪ್ರೀತಿ ತನ್ನ ಮೇಲಿರಲಿಲ್ಲ ಎನ್ನುವುದನ್ನು ಆತ್ಮಕಥನದಲ್ಲಿ ಹೇಳಿಕೊಂಡಿದ್ದಾರೆ. ತಾಯಿಗಾಗಿಯೇ ದಾವಣಗೆರೆಗೆ ವಾಸ್ತವ್ಯ ಹೂಡಿ ಕೊನೇ ದಿನಗಳಲ್ಲಿ ಮಗುವಿನಂತೆ ನೋಡಿಕೊಂಡರು. ಒಮ್ಮೆ ದಾವಣಗೆರೆಗೆ ಹೋದಾಗ ಅವರ ಮನಗೆ ಹೋಗಿದ್ದೆ. ಹಲವಾರು ವರ್ಷಗಳಿಂದ ಖಿನ್ನತೆ ನಿವಾರಕ ಔಷಧಿ ತೆಗೆದುಕೊಳ್ಳುತ್ತಿರುವುದರಿಂದ ನಿದ್ರೆ ಬರುತ್ತದೆ, ಸಕ್ಕರೆ ಕಾಯಿಲೆಯೂ ನಿಯಂತ್ರಣದಲ್ಲುಳಿಯದೆ ನಿಶ್ಯಕ್ತಿ ಕಾಡುತ್ತದೆ ಎಂದಿದ್ದರು. ಮನೆ ಎಂದರೆ, ಒಂದೇ ಒಂದು ದೊಡ್ಡ ಹಾಲ್. ಅದರಲ್ಲೇ ಒಂದು ಕಡೆ ಅಡುಗೆ, ಒಂದು ಕಡೆ ಪಾತ್ರೆ, ಬಟ್ಟೆ, ಪುಸ್ತಕ ಹೀಗೆ. ಅಡುಗೆ ಮಾಡಿಕೊಳ್ಳುತ್ತಿದ್ದರೋ? ಗೊತ್ತಿಲ್ಲ. ಆದರೆ ನನಗಾಗಿ ರೊಟ್ಟಿ, ಶೇಂಗಾ ಚಟ್ನಿಪುಡಿ, ದಾವಣಗೆರೆ ಮಂಡಕ್ಕಿ ಎಲ್ಲಾ ತರಿಸಿಟ್ಟಿದ್ದರು. ಮಕ್ಕಳಿಗೆ ತೆಗೆದುಕೊಂಡು ಹೋಗು ಎಂದು ಒತ್ತಾಯಿಸಿದ್ದರು.

ಯಾವ ಜಾಗದಲ್ಲಿ ತನಗೆ ಗೌರವ ಸಿಗುತ್ತಿಲ್ಲ ಎಂದನ್ನಿಸುತ್ತದೆಯೋ ಆ ಜಾಗದಲ್ಲಿ ಒಂದು ಕ್ಷಣ ಅವರಿರುತ್ತಿರಲಿಲ್ಲ.  ಪ್ರೀತಿಸಿದರೆ ಅಪಾರ ಪ್ರೀತಿ. ಬೇಡ ಎಂದು ತೀರ್ಮಾನಿಸಿದರೆ ಸಂಪೂರ್ಣ ಅದರಿಂದ ದೂರ ಇರುವಂಥ ಸ್ವಭಾವ ಅವರದಾಗಿತ್ತು. ಅವರ ದುಡಿಮೆ, ಶೇ. 70ರಿಂದ 80 ರಷ್ಟು ಗಂಡ ಮಾಡಿದ ಸಾಲಕ್ಕೇ ಹೋಗುತ್ತಿತ್ತು. ನೋಡು ಕೈಗೆ ಇಷ್ಟೇ ಹಣ ಬರುವುದು ಎಂದು ಬೇಸರಿಸಿಕೊಳ್ಳುತ್ತಿದ್ದರು. ಗಂಡನಿಂದ ಎಲ್ಲಾ ರೀತಿಯ ವಂಚನೆಗೊಳಗಾಗಿ ವಿಚ್ಛೇದನ ಪಡೆದುಕೊಂಡು ಆ ಸಂಬಂಧದಿಂದ ಹೊರಬಂದರು. ಒಂಟಿತನ ಅವರನ್ನು ಮತ್ತಷ್ಟು ಕಷ್ಟಕ್ಕೆ ದೂಡಿತು. ಆ ಒಂಟಿತನವೇ ಅವರು ನಮ್ಮಿಂದ ಅಗಲುವಂತೆ ಮಾಡಿತು.

dr h girijamma dr vasundhara bhoopathi

ಗಿರಿಜಮ್ಮನವರ ಆತ್ಮಕಥನ

‘ಕಾಡುತಾವ ನೆನಪುಗಳು’ ಮುಖಪುಟ ವಿನ್ಯಾಸ ಕಳಿಸಿದ್ದರು. ಫೋಟೋ ಸ್ವಲ್ಪ ಬ್ರೈಟ್ ಆಗಿರಲಿ. ಇದು ಸರಿ ಇಲ್ಲ ಎಂದೆ. ‘ಬ್ರೈಟ್ ಆಗಿರುವ ಫೋಟೋ ಬೇಡ ಎಂದು ನಾನೇ ಹೇಳಿದ್ದು, ಬ್ಲರ್ ಆಗಿಯೇ ಇರಲಿ ಅದು’ ಎಂದಿದ್ದರು. ಬದುಕು ಅವರಿಗೆ ಸಂಪೂರ್ಣವಾಗಿ ಖುಷಿ ಕೊಡಲಿಲ್ಲ. ಅದನ್ನೆಷ್ಟು ಪ್ರೀತಿಸಿದರೂ ಅದು ಮೋಸ ಮಾಡುತ್ತಲೇ ಹೋಯಿತು. ಆ ಕಾರಣಕ್ಕಾಗಿ ಅವರಿಗೆ ಫೋಟೋ ಬ್ಲರ್ ಆಗಿಯೇ ಇರಲಿ ಎಂದಿನ್ನಿಸಿರಬೇಕು.

*

ಪರಿಚಯ : ಡಾ. ಎಚ್. ಗಿರಿಜಮ್ಮನವರು ಹುಟ್ಟಿದ್ದು ದಾವಣಗೆರೆಯಲ್ಲಿ. ಪಿಯುಸಿತನಕ ಅಲ್ಲಿಯೇ ಓದಿದರು. ಮುಂದೆ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದರು. ತಾಯಿಯ ಆಸೆಯಂತೆ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಕೊಂಡರು. ಹೈಸ್ಕೂಲು ಓದುವಾಗಲೇ ತ್ರಿವೇಣಿಯವರ ಕಾದಂಬರಿಗಳಿಂದ ಪ್ರಭಾವಿತರಾದರು. ಅವರ ಮೊದಲ ಕತೆ ‘ಹೂಬಳ್ಳಿಗೆ ಈ ಆಸರೆ’ ಸುಧಾದಲ್ಲಿ ಪ್ರಕಟವಾಯಿತು. ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳನ್ನು ಅವರು ಬರೆದರು.  ಸಾಕಷ್ಟು ನೀಳ್ಗತೆಗಳು ಮಯೂರದಲ್ಲಿ ಪ್ರಕಟವಾದವರು. ಒಟ್ಟು 50 ಕತೆಗಳನ್ನು ಬರೆದರು. ಐದು ಕಥಾಸಂಗ್ರಹಗಳನ್ನು ಪ್ರಕಟಿಸಿದರು. ಕೊನೆಯ ಕೃತಿ ಅವರ ಆತ್ಮಕಥನ ಕಾಡತಾವ ನೆನಪುಗಳು.

ಇದನ್ನೂ ಓದಿ :ಖ್ಯಾತ ಸ್ತ್ರೀರೋಗ ತಜ್ಞೆ, ವೈದ್ಯ ಸಾಹಿತಿ ಡಾ.ಗಿರಿಜಮ್ಮ ನಿಧನ

Follow us on

Most Read Stories

Click on your DTH Provider to Add TV9 Kannada