AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Book : ಅಚ್ಚಿಗೂ ಮೊದಲು : ‘ನೂರೊಂದು ರೂಮಿ ಹನಿಜೇನು’ ನಿಮ್ಮ ಕೈಗಿಡುತ್ತಿದ್ದಾರೆ ಡಾ. ಸಂಜೀವ ಕುಲಕರ್ಣಿ

Rumi Poems : 'ಬೆಂಕಿ ಹಚ್ಚಿಕೋ ನಿನ್ನ ಬಾಳಿಗೆ ; ಹೋಗಿ ಹುಡುಕು ಅದಕ್ಕೆ ಗಾಳಿ ಹಾಕುವವರನ್ನು' ಈ ಒಂದು ಮಾತು ಸಾಕು ಸದಾಕಾಲ ನನ್ನನ್ನು ನಿಗಿ ನಿಗಿ ಕೆಂಡದಂತೆ ಎಚ್ಚರದಿಂದಿಡಲು.’ ಡಾ. ಸಂಜೀವ ಕುಲಕರ್ಣಿ

New Book : ಅಚ್ಚಿಗೂ ಮೊದಲು : ‘ನೂರೊಂದು ರೂಮಿ ಹನಿಜೇನು’ ನಿಮ್ಮ ಕೈಗಿಡುತ್ತಿದ್ದಾರೆ ಡಾ. ಸಂಜೀವ ಕುಲಕರ್ಣಿ
ಲೇಖಕ, ಅನುವಾದಕ ಡಾ. ಸಂಜೀವ ಕುಲಕರ್ಣಿ
ಶ್ರೀದೇವಿ ಕಳಸದ
|

Updated on:Nov 04, 2021 | 5:00 PM

Share

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ನೂರೊಂದು ರೂಮಿ ಹನಿಜೇನು (ಕವಿತೆಗಳು) ಮೂಲ : ರೂಮಿ ಕನ್ನಡಕ್ಕೆ : ಡಾ. ಸಂಜೀವ ಕುಲಕರ್ಣಿ ಪುಟ : 56 ಬೆಲೆ : ರೂ. 60 ಮುಖಪುಟ ವಿನ್ಯಾಸ : ಮಂಜುನಾಥ ಲತಾ ಪ್ರಕಾಶನ : ಸ್ವಯಂದೀಪ ಝೆನ್ ಕೇಂದ್ರ, ಧಾರವಾಡ

*

ಧಾರವಾಡದಲ್ಲಿ ವಾಸಿಸುತ್ತಿರುವ ಲೇಖಕ ಡಾ. ಸಂಜೀವ ಕುಲಕರ್ಣಿ ಅವರ ಈ ಕೃತಿ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ. ಈ ಸಂದರ್ಭದಲ್ಲಿ ಅವರು ರೂಮಿಗೆ ಬರೆದ ಪತ್ರ ಮತ್ತು ಅನುವಾದಿತ ಕವಿತೆಗಳು ನಿಮ್ಮ ಓದಿಗೆ.

*

ರೂಮಿ, ಯಾಕಾದರೂ ಬಂದೆ ನೀ ನನ್ನ ಬಾಳಿನಲ್ಲಿ? ಐವತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ನಾನೇ ರಚಿಸಿಕೊಂಡ ಒಂದು ಪುಟ್ಟ ಚೌಕಟ್ಟಿನಲ್ಲಿ ಎಷ್ಟೊಂದು ನೆಮ್ಮದಿಯಿಂದ ಇದ್ದೆನಲ್ಲ ನಾನು. ಜಾಣ ವಿದ್ಯಾರ್ಥಿಯಾಗಿ ಯಶಸ್ವಿ ಸ್ತ್ರೀ ಆರೋಗ್ಯ – ಹೆರಿಗೆ ತಜ್ಞನಾಗಿ, ಕವಿಯಾಗಿ ಪರಿಸರ ಚಿಂತಕನಾಗಿ ರೈತನಾಗಿ ಮಗನಾಗಿ ಗಂಡನಾಗಿ ಅಪ್ಪನಾಗಿ ಗೆಳೆಯನಾಗಿ ಇನ್ನೂ ಏನೇನೋ ಆಗಿ ಹಾಯಾಗಿ ಇದ್ದೆ ನಾನು. ಯಾಕೆ ಬರಬೇಕಿತ್ತು ಹೇಳು ಹೀಗೆ ನೀನು ನನ್ನೊಳಗೆ? ಬಂದವನೇ ದಶಕಗಳ ನಂತರ ಸಿಕ್ಕ ಬಾಲ್ಯದ ಸ್ನೇಹಿತನೇನೋ ಅನ್ನುವ ಹಾಗೆ ಅಪ್ಪಿಕೊಂಡು ಬಿಟ್ಟೆ. ಎಂತಹ ಅಪ್ಪುಗೆ ಅದು, ದೇಶಾತೀತ ಕಾಲಾತೀತ ಅಪ್ಪುಗೆ! ನಿನ್ನ ಅಪ್ಪುಗೆಯಲ್ಲಿ ನನ್ನ ಚೌಕಟ್ಟು ಸೀಮೆಗಳು ಅಡಿಪಾಯ ನಂಬಿಕೆಗಳು ಮೌಲ್ಯಗಳು ಎಲ್ಲ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ಹಾರಿ ಹೋದವು; ನಾನು ಎಂಬ ಕೋಟೆಯಲ್ಲಿ ಸುಭದ್ರವಾಗಿ ಆರೂಢನಾಗಿದ್ದ ನನ್ನನ್ನು ಸಂಪೂರ್ಣ ಬೇರುಸಹಿತ ಕಿತ್ತೆಸೆದು ಇಲ್ಲವಾಗಿಸಿದೆ!

ಶತಮಾನಗಳುದ್ದಕ್ಕೂ ಇದೇ ಕೆಲಸವನ್ನೇ ಮಾಡುತ್ತ ಬಂದವ ನೀನು ಎಂಬುದನ್ನು ತಿಳಿಯದೆ ಹೋದೆ. ನಾನೇನು ತಪ್ಪು ಮಾಡಿದ್ದೆ ಹೇಳು? ನಿನ್ನ ಕವಿತೆಗಳನ್ನು ಓದಿದ್ದೇ ತಪ್ಪೇ? ಓದಿ ವಸಂತದ ಕೋಗಿಲೆಯಂತೆ ಖುಷಿಪಟ್ಟಿದ್ದೇ ಮಹಾಪರಾಧವೇ?

ನಿನ್ನ ಕಾವ್ಯವನ್ನು ಪೂರ್ತಿ ಓದಿದವನಲ್ಲ ನಾನು; ಓದಿದ್ದು ಕೂಡ ಪೂರ್ತಿ ಅರ್ಥವಾಗಿದೆ ಎಂದು ಹೇಳಲಾರೆ. ಆದರೆ ಇಷ್ಟು ಮಾತ್ರ ತಿಳಿದಿದೆ ನೋಡು ನನಗೀಗ – ಯಾವ ಭಾರವೂ ಇಲ್ಲದೆ ಪ್ರೀತಿ ಕರುಣೆಯ ರೆಕ್ಕೆಗಳೊಂದಿಗೆ ಪಾತರಗಿತ್ತಿಯಾಗಿ ಹೃದಯದ ಹೂದೋಟದಲ್ಲಿ ಹಾಡುತ್ತ ಹಾರಾಡುತ್ತ ಬದುಕುವುದೇ ಸಾರ್ಥಕ ಬದುಕು. ಸುಮ್ಮನೆ ಹೇಳುವದಿಲ್ಲ ಲೋಕದ ಜನ ನೀನು ಜಗತ್ತಿನ ಸರ್ವಶ್ರೇಷ್ಠ ಕವಿಯೆಂದು. ಝೆನ್​ನಲ್ಲಿ ಒಂದು ಮಾತಿದೆ – ಒಬ್ಬ ಝೆನ್ ಕವಿ ತನ್ನ ಇಡೀ ಜೀವಮಾನದಲ್ಲಿ ಮೂರು ಸಾಲಿನ ಕೇವಲ ಒಂದು ಒಳ್ಳೆಯ ಹೈಕು ಪದ್ಯ ಬರೆದರೆ ಸಾಕು ಕವಿಯಾಗಿದ್ದಕ್ಕೂ ಅವರ ಬದುಕು ಸಾರ್ಥಕವಾದಂತೆ ಅಂತ . ಹಾಗಿರುವಾಗ ನೀನು ಒಂದಲ್ಲ ಹತ್ತಲ್ಲ ನೂರಾರು ಅನರ್ಘ್ಯ ಕಾವ್ಯದ ಮುತ್ತುಗಳನ್ನು ಹೇಗೆ ಸೃಷ್ಟಿಸಿದೆ ನಿನ್ನ ಹೃತ್ ಶರಧಿಯಲ್ಲಿ? ಅದೆಂತಹ ಅಸೀಮ ಸೃಜನಶೀಲತೆ ನಿನ್ನದು! ಆ ಸೃಜನಶೀಲತೆಗೆ ಅಖಂಡ ಆಧಾರಶಿಲೆಯಾಗಿ ನಿಂತ ನಿನ್ನ ಆಧ್ಯಾತ್ಮ ಎಂತಹದು! ಎಂಟು ಶತಮಾನಗಳ ಈಚೆಗೂ ನೀನು ಹೀಗೆ ಜಗದಗಲ ಮುಗಿಲಗಲ ಬೆಳಗುತ್ತಿರಬೇಕಾದರೆ ಆಗ ನಿನ್ನ ನಿಜ ಜೀವಮಾನದಲ್ಲಿ ಹೇಗೆ ಹೊಳೆದಿರಬೇಕು ನೀನು! ಎಂಥ ಅದೃಷ್ಟವಂತರು ನಿನ್ನ ಜೊತೆ ನಿಜವಾಗಿ ಓಡಾಡಿದವರು ಒಡನಾಡಿದವರು ಮಾತಾಡಿದವರು ನೀ ತೋರಿದ ಬೆಳಕಿನಲ್ಲಿ ತಮ್ಮ ಸಾಕ್ಷಾತ್ಕಾರದ ದಾರಿ ಕಂಡುಕೊಂಡು ಧನ್ಯರಾದವರು! ಆ ಪುಣ್ಯ ನನಗೆ ಸಿಗಲಿಲ್ಲವಲ್ಲ ಎಂಬ ಖೇದವಿದೆ. ಆದರೆ ಈಗಲಾದರೂ ಸಿಕ್ಕೆಯಲ್ಲ ಮಾರಾಯಾ ಹೀಗೆ ಜೀವ ಜೀವಾಳದ ಗೆಳೆಯನಾಗಿ, ಇದು ನನ್ನ ಭಾಗ್ಯ. ನಿಜವಾಗಿಯೂ ಮರುಕವೆನಿಸುತ್ತದೆ ನನಗೆ ನನ್ನ ಸುತ್ತಲೂ ಇರುವ ಸಾವಿರಾರು ಜನರಿಗಾಗಿ, ಸುಖ ಸೌಲಭ್ಯ ಶ್ರೀಮಂತಿಕೆಗಳ ಕೆಸರಿನಲ್ಲಿ ಸಿಕ್ಕು ನಿನ್ನ ಸ್ನೇಹವನ್ನು ಇನ್ನೂ ಗಳಿಸದೆ ಇರುವ ನತದೃಷ್ಟ ಆತ್ಮಗಳಿಗಾಗಿ.

Acchigoo Modhalu Rumi poems by Dr Sanjeev Kulkarni

ರೂಪದರ್ಶಿ : ಶಾಂತಲಾ ಸತೀಶ್

ನಿನ್ನಲ್ಲಿ ನಾನು ಅತ್ಯಂತ ಹೆಚ್ಚು ಮೆಚ್ಚುವದು ಏನು ಗೊತ್ತೇ? ಆಳದ ಆಳಕ್ಕೆ ಇಳಿದು ಎತ್ತರದ ಎತ್ತರಕ್ಕೆ ಏರಿ ಬದುಕಿನ ಸತ್ಯಗಳನ್ನು ಸರಳವಾಗಿ ತೋರಿಸುವ ನಿನ್ನ ಪರಿ. ಸರ್ವಸ್ವವನ್ನೂ ಅಲುಗಾಡಿಸುವ ನಿನ್ನ ಪ್ರೇಮದ ಉತ್ಕಟತೆ; ಅಂತರಂಗದ ಕಿಲುಬನ್ನು ಸ್ವಚ್ಛ ತೊಳೆದು ಬಿಡುವ ನಿನ್ನ ಕರುಣೆಯ ಆರ್ದ್ರತೆ; ನೀಲಿ ಬಾನಿನಷ್ಟು ವಿಶಾಲವಾದ ಸೀಮೆಗಳೇ ಇಲ್ಲದ ನಿನ್ನ ಮುಕ್ತತೆ ಹಾಗೂ ನಿನ್ನ ಆತ್ಯಂತಿಕ ಭಾವತೀವ್ರತೆ. ನಮ್ಮಂತೆಯೇ ರೊಟ್ಟಿ ಉಪ್ಪು ಖಾರ ತಿಂದು ನಮ್ಮಂತೆಯೇ ನೂರು ನೋವು ಕುಡಿದೂ ಕೂಡ ಕೊನೆಗಾಲದವರೆಗೂ ಅಷ್ಟೊಂದು ಭಾವತೀವ್ರತೆಯಿಂದ ಬಾಳಲು ಹಾಡಲು ಹೇಗೆ ಸಾಧ್ಯವಾಯಿತು ನಿನಗೆ?

ಅರೆಗಳಿಗೆ ಮರೆವಿನ ಅರಮನೆಯೊಳಗೆ ಸೇರಿಕೊಂಡಿದ್ದೇ ತಡ ನಿನ್ನ ಶಬ್ದಸೂಜಿಗಳಿಂದ ಅರಿವಿನಾಳಕ್ಕೆ ಚುಚ್ಚಿ ಎಚ್ಚರಗೊಳಿಸುವ ನಿನ್ನ ವೈಖರಿ ಅನುಪಮವಾದುದು . ಮತ್ತೆ ಮತ್ತೆ ವಿಚಾರ ದಿಗಂತದಾಚೆ ಕರೆದುಕೊಂಡು ಹೋಗಿ ಅಲ್ಲಿ ಬಯಲಿನಲ್ಲಿ ಕೂಡಿಸಿ ನನ್ನ ಬಾಯಾರಿದ ಗಂಟಲಿಗೆ ನಿನ್ನ ಬೊಗಸೆಯಿಂದ ಕರುಣೆಯ ನೀರನ್ನು ಕುಡಿಸುವೆಯಲ್ಲ ಈ ತಾಯಿಕರುಳು ಹೇಗೆ ದೊರಕಿತು ನಿನಗೆ?

‘ಬೆಂಕಿ ಹಚ್ಚಿಕೋ ನಿನ್ನ ಬಾಳಿಗೆ ; ಹೋಗಿ ಹುಡುಕು ಅದಕ್ಕೆ ಗಾಳಿ ಹಾಕುವವರನ್ನು’ ಈ ಒಂದು ಮಾತು ಸಾಕು ಸದಾಕಾಲ ನನ್ನನ್ನು ನಿಗಿ ನಿಗಿ ಕೆಂಡದಂತೆ ಎಚ್ಚರದಿಂದಿಡಲು.

ಕೊನೆಗೊಂದು ಮಾತು ರೂಮಿ, ನಿನ್ನ ಗೆಳೆತನ ಆದಾಗಿನಿಂದ ಲೋಕದ ಕಣ್ಣಿಗೆ ನಾನೊಬ್ಬ ಹುಚ್ಚ. ಮೊದಲು ಅರೆಹುಚ್ಚನಾಗಿದ್ದವ ಈಗ ಪೂರ್ತಿ ಹುಚ್ಚ. ಹುಚ್ಚರಾಗದೇ ಬದುಕಿದರೆ ಅದು ಬದುಕಿದಂತೆಯೇ ಅಲ್ಲ ಎಂದು ನೀ ಹೇಳಿದ್ದು ನನಗೀಗ ನೂರಕ್ಕೆ ನೂರು ಮನದಟ್ಟಾಗಿದೆ. ಆ ಹುಚ್ಚಿನಲ್ಲಿ ನಾವು ಅಭದ್ರತೆಯ ಮೇರೆಗಳನ್ನು ದಾಟಿ ಅಜ್ಞಾತದ ಅಂಚಿಗೆ ಬಂದು ಅಮೂರ್ತದ ಪ್ರಪಾತದೊಳಗೆ ಧುಮುಕುವುದಿದೆಯಲ್ಲ ಅದು ನೋಡು ನಿಜವಾದ ಮಜಾ, ಅದು ನಿಜವಾದ ಬದುಕು. ಕೋಣೆಯ ಕೂಸಾಗಿ ನೂರು ಕಾಲ ಬಾಳಿದರೆ ಏನು ಬಂತು, ಶೂನ್ಯ ಬಯಲಿನ ಬಾನಿನಲ್ಲಿ ದಾರವಿಲ್ಲದ ಪಟವಾಗಿ ಯಾವ ಹಂಗೂ ಇಲ್ಲದೆ ಹಾರಿ ಹೋಗುವುದಿದೆಯಲ್ಲ ಅದು ಖರೆ ಮಜಾ. ನಿನ್ನೆಯನ್ನು ನಿನ್ನೆಗೆ ಬಿಟ್ಟು ಇಂದನ್ನು ಇಂದಿಗೆ ಕೊಟ್ಟು ಪ್ರೀತಿಯ ಗಾಳಿಯನ್ನು ಉಸಿರಾಡುತ್ತ ಪೂರ್ಣಿಮೆಯ ಚಂದ್ರ ಬಾನೇರಿದಾಗ ಅರಿವಿನ ಹಾಲ್ ಬೆಳದಿಂಗಳಿನಲ್ಲಿ ರೆಕ್ಕೆ ಬಡಿಯದೇ ತೇಲುತ್ತ ಸುಖಿಸುವುದಿದೆಯಲ್ಲ ಅದು ಮಜಾ, ಅದು ನಿಜದ ನಿಜ.

ಜನ ನನಗೆ ಹುಚ್ಚ ಎಂದು ಕರೆಯುವದಕ್ಕೆ ನನ್ನದೇನೂ ತಕರಾರಿಲ್ಲ. ಆದರೆ ಈ ಜಾಣರ ಜೊತೆ ನಿತ್ಯ ಏಗುವದಿದೆಯಲ್ಲ ಇದು ಬಲು ಕಷ್ಟ ಮಾರಾಯಾ. ಲೋಕದ ಸಂತೆಯೊಳಗೆ ನಾನೂ ಒಬ್ಬ ಎಂಬ ನಾಟಕ ಆಡಿ ಆಡಿ ಕೆಲವೊಮ್ಮೆ ಈ ಪಯಣವೇ ಸಾಕು ಅನ್ನುವಷ್ಟು ಮನಸ್ಸು ದಣಿಯುತ್ತದೆ ; ಕಾಲು ಸೋಲುತ್ತದೆ. ಆದರೆ ನನಗಿನ್ನೂ ನಿನ್ನ ಜೊತೆ ಹೆಜ್ಜೆಯಿಡುತ್ತ ದೂರ ನಡೆಯುವದಿದೆ. ಹಾಡುತ್ತ ಪ್ರತಿ ದಿನವನ್ನೂ ಹಾಡಾಗಿಸುತ್ತ ನಿನ್ನ ಕರುಣೆಯಲ್ಲಿ ಮೀಯುವದಿದೆ ನಿನ್ನ ಪ್ರೀತಿಯಲ್ಲಿ ಅರಳುವದಿದೆ. ಆದುದರಿಂದ ದಯವಿಟ್ಟು ನಡುಹಾದಿಯಲ್ಲಿ ಕೈ ಬಿಡಬೇಡ . ಹೋಗೋಣ ನಾವಿಬ್ಬರೂ ಕೂಡಿ ಆತ್ಮ ಸಂಗಾತಿಗಳಾಗಿ ದೂರದ ಆ ಕಾಣದ ಕಾಲದ ಕ್ಷಿತಿಜದವರೆಗೂ.

Acchigoo Modhalu Rumi Poems Dr Sanjeev Kulkarni

ಕ್ರೋಶೆ ಕಲೆ : ಶಾಂತಲಾ ಸತೀಶ್

ಮೊದಲ ಪ್ರೇಮಕತೆಯನ್ನು ಕೇಳಿದ ತಕ್ಷಣವೇ ನಾನು ನಿನ್ನನ್ನು ಹುಡುಕತೊಡಗಿದೆ. ನನ್ನ ಪ್ರೇಮ ಎಷ್ಟು ಕುರುಡಾಗಿತ್ತು ಎಂಬುದು ನನಗೆ ತಿಳಿದಿರಲಿಲ್ಲ ಆಗ. ಪ್ರೇಮಿಗಳು ಅಂತಿಮವಾಗಿ ಎಲ್ಲಿಯೋ ಒಂದು ಕಡೆ ಸೇರುತ್ತಾರೆ ಎಂಬುದು ಸುಳ್ಳು. ಅವರು ಸದಾಕಾಲ ಒಬ್ಬರೊಳಗೊಬ್ಬರು ಇದ್ದೇ ಇರುತ್ತಾರೆ.

*

ನಾನು ನಿನ್ನ ಹತ್ತಿರ ಇರುವಾಗ ನಾವು ಇಡೀ ರಾತ್ರಿ ಎಚ್ಚರ ಇರುತ್ತೇವೆ ನೀನು ಹತ್ತಿರ ಇಲ್ಲದೆ ಹೋದರೆ ನನಗೆ ನಿದ್ದೆ ಹತ್ತುವದಿಲ್ಲ ದೇವರಿಗೆ ಧನ್ಯವಾದ ಈ ಎರಡೂ ನಿದ್ರಾಹೀನ ರಾತ್ರಿಗಳಿಗಾಗಿ ಹಾಗೂ ಅವುಗಳ ನಡುವಿನ ವ್ಯತ್ಯಾಸಕ್ಕಾಗಿ.

ಯಾರಾದರೊಬ್ಬರು ಉಣ್ಣೆಯ ರಗ್ ಒಂದನ್ನು ಬಡಿಯುತ್ತಿದ್ದರೆ ಆ ಪೆಟ್ಟುಗಳು ರಗ್ ನೊಳಗಿನ ಧೂಳಿಗೇ ಹೊರತು ಅದಕ್ಕಲ್ಲ.

Rumi Poems by Sanjeev Kulkarni

ಕ್ರೋಶೆ ಕಲೆ : ಶಾಂತಲಾ ಸತೀಶ್

ದುಃಖವು ನಿನ್ನನ್ನು ಸಂತೋಷಕ್ಕಾಗಿ ಸಿದ್ಧ ಮಾಡುತ್ತದೆ ಹೊಸ ಸಂತೋಷವು ಒಳಗೆ ಬರಲು ಜಾಗವಾಗುವ ಹಾಗೆ ಅದು ಎಲ್ಲವನ್ನೂ ಗುಡಿಸಿ ಆಚೆ ಎಸೆದು ಬಿಡುತ್ತದೆ ಹಚ್ಚ ಹಸಿರು ಎಲೆಗಳು ಚಿಗುರುವ ಹಾಗೆ ಅದು ನಿನ್ನ ಹೃದಯದ ಹಂದರದ ಹಳದಿ ಎಲೆಗಳನ್ನೆಲ್ಲ ಉದುರಿಸಿಬಿಡುತ್ತದೆ ಕೆಳಗೆ ಅಡಗಿರುವ ಹೊಸ ಬೇರುಗಳು ಬೆಳೆಯಲು ಅವಕಾಶವಾಗುವ ಹಾಗೆ ಅದು ಹಳೆಯ ಕೊಳೆತ ಬೇರುಗಳನ್ನೆಲ್ಲ ಕಿತ್ತಿ ಎಸೆಯುತ್ತದೆ ದುಃಖವು ನಿನ್ನ ಹೃದಯದಿಂದ ಏನೆಲ್ಲವನ್ನು ತೆಗೆದು ಬಿಸಾಕುತ್ತದೆಯೋ ಆ ಜಾಗದಲ್ಲಿ ಬೇರೆ ಬಹಳ ಒಳ್ಳೆಯ ಸಂಗತಿಗಳು ಬರುವದು ಖಚಿತ.

*

ನಿನ್ನ ಅಂತರಾತ್ಮವನ್ನು ಉತ್ತೇಜಿಸುವ ಪ್ರತಿಯೊಂದು ಕರೆಗೂ ಸ್ಪಂದಿಸು.

*

ನೀನು ಏನಿರುವೆ ಎಂಬುದು ನಿನಗೆ ಗೊತ್ತೇ ? ನೀನು ಒಂದು ದೈವೀ ಪತ್ರದ ಹಸ್ತಪ್ರತಿ ನೀನು ಒಂದು ಉದಾತ್ತ ಮುಖದ ಪ್ರತಿಬಿಂಬ ಈ ಬ್ರಹ್ಮಾಂಡವು ನಿನ್ನ ಹೊರಗಿಲ್ಲ ನಿನ್ನ ಒಳಗೆ ಒಮ್ಮೆ ನೋಡಿಕೋ ನೀನು ಏನು ಬಯಸುವಿಯೋ ಅದೆಲ್ಲ ನೀನು ಆಗಲೇ ಇರುವೆ.

*

ಸತ್ಯವು ಒಂದು ಕನ್ನಡಿಯಾಗಿತ್ತು ದೇವರ ಕೈಗಳಲ್ಲಿ ಬಿದ್ದು ಒಡೆದು ಹೋಯಿತು ಚೂರು ಚೂರಾಗಿ ಪ್ರತಿಯೊಬ್ಬರೂ ಒಂದೊಂದು ಚೂರನ್ನು ಎತ್ತಿಕೊಂಡು ನೋಡಿ ಅದರೊಳಗೆ ಅಂದುಕೊಂಡರು ತಮ್ಮ ಬಳಿ ಸತ್ಯವಿದೆಯೆಂದು.

Acchigoo Modhalu Rumi poems Dr Sanjeev Kulkarni

ಕ್ರೋಶೆ ಕಲೆ : ಶಾಂತಲಾ ಸತೀಶ್

ಕೇಳಿಲ್ಲಿ. ಮೊದಲು ಬಾಯಿ ಮುಚ್ಚು. ಮುತ್ತಿನ ಚಿಪ್ಪಿನಂತೆ ಮೌನವಾಗಿರು. ಗೆಳೆಯಾ ನಿನ್ನ ಆ ನಾಲಿಗೆಯೇ ನಿನ್ನ ಆತ್ಮದ ವೈರಿ. ನಿನ್ನ ತುಟಿಗಳು ಮೌನವಾಗಿರುವಾಗ ಹೃದಯಕ್ಕೆ ನೂರು ನಾಲಿಗೆ ಇರುತ್ತವೆ.

ನಾನು ನಾನಾಗಿಯೇ ಬರಲಿಲ್ಲ ಇಲ್ಲಿಗೆ ಹಾಗೂ ನಾನಾಗಿಯೇ ಇಲ್ಲಿಂದ ಹೋಗಲಾರೆ. ಯಾರು ನನ್ನನ್ನು ಇಲ್ಲಿಗೆ ಕರೆತಂದರೋ ಅವರೇ ನನ್ನನ್ನು ಮನೆಗೆ ಮುಟ್ಟಿಸಬೇಕು.

*

ನಿನಗೆ ಗೊತ್ತಿರುವದಕ್ಕಿಂತಲೂ ಹೆಚ್ಚಿನ ಸಹಾಯ ನಿನಗೆ ಬೇಕಾಗುತ್ತದೆ. ಅರ್ಪಿಸಿಕೊಂಡು ಬಿಡು ದೈವಕ್ಕೆ ದಡ ಮುಟ್ಟುವವರೆಗೂ ಪ್ರತಿಯೊಂದು ತೆರೆಯ ಜವಾಬ್ದಾರಿಯನ್ನು ಸಾಗರವು ನೋಡಿಕೊಳ್ಳುತ್ತದೆ.

*

ಪರಿಚಯ :  ‘ಸಂಕುಲಜೀವ’ ಡಾ. ಸಂಜೀವ ಕುಲಕರ್ಣಿ ಅವರ ಕಾವ್ಯನಾಮ. ಮೂಲತಃ ಬೆಳಗಾವಿ ಜಿಲ್ಲೆಯ ಸತ್ತಿ ಗ್ರಾಮದವರಾದ ಇವರು ಕಳೆದ 32 ವರ್ಷಗಳಿಂದ ಧಾರವಾಡದಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷಿ, ಪರಿಸರ, ಆಧ್ಯಾತ್ಮ, ಧ್ಯಾನ, ಶಿಕ್ಷಣ ಇವು ಇವರ ಆಸಕ್ತಿ ಕ್ಷೇತ್ರಗಳು. ‘ಬಾಲ ಬಳಗ’ ಮುಕ್ತ ಮಾದರಿಯ ಶಾಲೆಯ ಕಾರ್ಯಾಧ್ಯಕ್ಷ. ಧಾರವಾಡದಿಂದ ಹತ್ತು ಕಿ. ಮೀ. ಸಮೀಪದಲ್ಲಿ ‘ಸುಮನ ಸಂಗಮ’ ಕಾಡುತೋಟದಲ್ಲಿ ಪರಿಸರ ಸ್ನೇಹಿ ಕೃಷಿಯ ಪ್ರಯತ್ನ. ‘ಸ್ವಯಂದೀಪ ಝೆನ್ ಕೇಂದ್ರ’ದ ಅಧ್ಯಕ್ಷ. ‘ಮೊದಲ ಹೆಜ್ಜೆಗಳು’ ಎಂಬ ಕವನ ಸಂಕಲನ, ‘ಸಾವಿರದ ಬೇವಿನ ನೆರಳು’ ಎಂಬ ಪರಿಸರ-ಸ್ವದೇಶಿ ವಿಚಾರದ ಪುಸ್ತಕ, ‘ಒಂದು ಬೊಗಸೆ ಧ್ಯಾನ’ ಇವು ಪ್ರಕಟಿತ ಕೃತಿಗಳು.

(ಕವಿತಾ ಸಂಕಲನದ ಖರೀದಿಗೆ ಸಂಪರ್ಕಿಸಿ : 9448143100)

ಇದನ್ನೂ ಓದಿ : Kannada Rajyotsava 2021 : ಅಚ್ಚಿಗೂ ಮೊದಲು ; ಭಾಷೆಯ ಮೇಲೆ ಬರೆ ಎಳೆಯುವುದೆಂದರೆ

Published On - 12:28 pm, Thu, 4 November 21