Next Door : ಕೋಳಿ ಮೊದಲೋ ಮೊಟ್ಟೆ ಮೊದಲೋ?

Intellectual Power : ‘ಬುದ್ಧಿಕೇಂದ್ರಿತ ಉದ್ಯೋಗಗಳಿಗೆ ಬೆಲೆ ಈಗ. ಮುಂಚೆ ಮೈಕೈ ಸದೃಢವಾಗಿದ್ದವನು ಗೆಲ್ಲುವವನು, ಈಗ ಮೆದುಳು ಚುರುಕಾಗಿದ್ದವನು ಗೆಲ್ಲುವವನು. ವಿಕಾಸವಾದದ ಇತಿಹಾಸದಲ್ಲಿಯೇ ಇದು ಬಹು ದೊಡ್ಡ ಪಲ್ಲಟ. ಅದೂ ಪ್ರಚಂಡವಾದದ್ದು. ಇದಕ್ಕೆ ನಾವು ಮಾನಸಿಕವಾಗಿ, ದೈಹಿಕವಾಗಿ, ವೈಚಾರಿಕವಾಗಿ ಎಷ್ಟು ತಯಾರಾಗಿದ್ದೇವೆ ಎಂಬುದು ಬಹು ಮುಖ್ಯ ಅಂಶ.‘ ಸೌರಭಾ ಕಾರಿಂಜೆ

Next Door : ಕೋಳಿ ಮೊದಲೋ ಮೊಟ್ಟೆ ಮೊದಲೋ?
ಲೇಖಕಿ ಸೌರಭಾ ಕಾರಿಂಜೆ
Follow us
|

Updated on:Jul 10, 2021 | 2:27 PM

ವಾಟ್ಸಪ್ಪು, ಟ್ವಿಟರು, ಫೇಸ್​ಬುಕ್ಕು ಮತ್ತೀಗ ಕ್ಲಬ್​ಹೌಸಿನಲ್ಲೂ ಇಲ್ಲವಾ? ಉತ್ತರ ಇಲ್ಲವೆಂದಾದಲ್ಲಿ ಆನ್​ಲೈನ್​ ಸಂಸ್ಕೃತಿಯಲ್ಲಿ ನಾಗರಿಕ ಸಮಾಜ ಥಟ್ಟನೆ ನಮ್ಮನ್ನು ಒಂದು ಹಳೇ ಪಳಿಯುಳಿಕೆಯಂತೆ ಮೂಲೆಯಲ್ಲಿ ನಿಲ್ಲಿಸಿಬಿಡುತ್ತದೆ. ಉಸಿರಾಡಬೇಕೆಂದರೆ ಹರಿಯುವ ನೀರಿನೊಂದಿಗೆ ಹರಿಯಲೇಬೇಕು ಎಂಬ ತತ್ವದೊಂದಿಗೆ ನಮ್ಮ ನಮ್ಮ ವಯೋಮಾನ, ಆಸಕ್ತಿ, ಅನಿವಾರ್ಯಕ್ಕೆ ತಕ್ಕಂತೆ ನಮ್ಮ ಕಣ್ಣುಗಳನ್ನು ಬೆಳಕಿನಪರದೆಗಳಿಗೆ ಅಂಟಿಸುತ್ತ ಕಣ್ಣುಗಳನ್ನು ಅಗಲ ಮಾಡಿಕೊಳ್ಳುತ್ತ ಸಾಗುತ್ತಿದ್ದೇವೆ. ಗತಿಶೀಲ ಜಗತ್ತಿಗೆ ಕೊರೊನಾ ವೈರಾಣು ಮತ್ತಷ್ಟು ಚುರುಕು ನೀಡಿದ್ದೇ ಬೆಳಗಾಗುವುದರೊಳಗೆ ಕ್ಲಾಸುಗಳು, ಆಸ್ಪತ್ರೆಗಳು, ಅಂಗಡಿಗಳು, ಸಂತೆಗಳು-ಸಂತರುಗಳು, ಓಣಿಗಳು-ಕಟ್ಟೆಗಳು, ಗುಂಪುಗಳು, ಪರವಿರೋಧಗಳು, ಅಭಿವ್ಯಕ್ತಿಗಳು, ಸ್ವಾತಂತ್ರ್ಯ-ಸಂಸ್ಕೃತಿಗಳು, ಪರಂಪರೆ-ಪತಾಕೆಗಳು, ಗಾಳಿಪಟ-ಬಾಲಂಗೋಚಿಗಳ ಮೂಲಕ ಇಡೀ ಊರಿಗೆ ಊರನ್ನೇ ಜಾಲತಾಣಗಳ ಕೊಂಡಿಗೆ ಸಿಕ್ಕಿಸಿ ಕುಳಿತುಬಿಟ್ಟಿದ್ದೇವೆ.  

ಒಂದರ್ಥದಲ್ಲಿ ಈ ಅನಿವಾರ್ಯ ಬೇರೊಂದು ರೀತಿಯ ಪ್ರಯೋಗ, ಅವಿಷ್ಕಾರ, ಕ್ರಾಂತಿಗಳಿಗೆ ಸಂದರ್ಭಾನುಸಾರ ಕಾರಣವಾಯಿತು. ಆದರೆ ಆಳದಲ್ಲಿ? ಹಳ್ಳಿಗಳಿಗೂ, ನಗರ-ಮಹಾನಗರಗಳಿಗೂ ಅವುಗಳದ್ದೇ ಆದ ಸ್ವಭಾವ-ಸಂಸ್ಕೃತಿಗಳಿವೆ. ಅಲ್ಲೆಲ್ಲ ಜೀವಿಸುತ್ತಿರುವವರು ನಾವುನಾವುಗಳೇ. ತಂತ್ರಜ್ಞಾನ ಮತ್ತು ನಾಗರಿಕತೆಯ ಚೌಕಟ್ಟಿನಡಿ ನಮ್ಮನಮ್ಮ ಆಸೆ, ಆಶಯ, ನಿರ್ಧಾರಗಳನ್ನು ಬಂಧಿಸಿಡುತ್ತ, ಮಾನವ ಸಂಬಂಧಗಳನ್ನು ನಿಸ್ತಂತುಗೊಳಿಸುತ್ತ ಬರುತ್ತಿದ್ದೇವೆಯೇ? ಯಾವೆಲ್ಲ ಸಂದರ್ಭ, ಹಂತಗಳಲ್ಲಿ ಈ ಸಂಬಂಧಗಳು ಹೆಚ್ಚು ಆಪ್ತವಾಗಬೇಕಿತ್ತೋ ಅಲ್ಲೆಲ್ಲ ವ್ಯಾವಹಾರಿಕತೆಯ ಪರಿಧಿ ಆವರಿಸಿ ಭಾವಶೂನ್ಯರಾಗುತ್ತಿದ್ದೇವೆಯೇ? ಪರಸ್ಪರ ಸಹಕಾರ ತತ್ವ ಮರೆತ ಪರಿಣಾಮವಾಗಿ ಸಾಮುದಾಯಿಕ ಸ್ಪರ್ಶ, ಸೌಂದರ್ಯ, ಪ್ರಜ್ಞೆಯ ಬಿಸುಪನ್ನು ಕಳೆದುಕೊಳ್ಳುತ್ತ ಸಾಗುತ್ತಿದ್ದೇವೆಯೇ? ಇದೆಲ್ಲವೂ ನಮ್ಮ ಮುಂದಿನ ಪೀಳಿಗೆ ಅಥವಾ ಮಾನವವಿಕಾಸದ ಮೇಲೆ ಏನೆಲ್ಲ ಪರಿಣಾಮ ಬೀರಬಹುದು ಅದಕ್ಕೆ ನಾವು ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ?

ಹೀಗೆ ಯೋಚಿಸುತ್ತಲೇ ಹುಟ್ಟಿಕೊಂಡ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ನೆಕ್ಸ್ಟ್ ಡೋರ್ (Next Door)’ ನಿಮ್ಮ ಸ್ವಾನುಭಗಳೊಂದಿಗೆ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಪದಮಿತಿ ಸುಮಾರು 800. ಉತ್ತಮ ಗುಣಮಟ್ಟದ ನಿಮ್ಮ ಭಾವಚಿತ್ರವೂ ಇರಲಿ. ಈ ಸರಣಿ ಪ್ರತೀ ಶನಿವಾರಕ್ಕೊಮ್ಮೆ. ಇ-ಮೇಲ್ tv9kannadadigital@gmail.com

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಾಫ್ಟ್​ವೇರ್ ತಂತ್ರಜ್ಞೆ, ಲೇಖಕಿ ಸೌರಭಾ ಕಾರಿಂಜೆ ಅವರ ವಿಚಾರಪೂರ್ಣ ಬರಹ ನಿಮ್ಮ ಓದಿಗೆ. 

*

ಹಳೆಯದರ ಕುರಿತು ಒಂದು ನಾಸ್ಟಾಲ್ಜಿಕ್‍ ಭ್ರಮೆ ನಮ್ಮಲ್ಲಿ ಬಹಳ ಮಂದಿಯಲ್ಲಿರುತ್ತದೆ. ಓಹ್‍, ಆ ಕಾಲದಲ್ಲಿ ಎಲ್ಲ ಚಂದಿತ್ತು ಅಂತ. ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಸ್ನೇಹ-ಸೌಹಾರ್ದತೆಗಳೇ ತುಂಬಿದ್ದವು ಇತ್ಯಾದಿ. ಇದೆಲ್ಲ ನಿಜವಾಗಿದ್ದರೆ ಜಗತ್ತು ಕಂಡಂತಹ ಭೀಕರ ಯುದ್ಧಗಳೆಲ್ಲ ತಂತ್ರಜ್ಞಾನ-ಪೂರ್ವ ಯುಗದಲ್ಲಿ ನಡೆಯುತ್ತಲೇ ಇರಲಿಲ್ಲ. ಹಳ್ಳಿಯ ಜೀವನವೇ ಚಂದ, ನಗರವಾಸಿಗಳಲ್ಲಿ ಬರೇ ಪ್ರಾಪಂಚಿಕ ವಿಚಾರಗಳೇ ತುಂಬಿವೆ, ಇವೆಲ್ಲ ಇಂತದ್ದೇ ವಾದಗಳು. ಇವನ್ನು ನಾನು ವೈಯಕ್ತಿಕವಾಗಿ ಒಪ್ಪಲಾರೆ. ಹಾಗಂತ ಇವನ್ನು ತಳ್ಳಿಹಾಕಲಾರೆ ಕೂಡ. ಮನುಷ್ಯನ ಒಳಗು ಇಂತ ಸಾರಾಸಗಟಾದ ಹೇಳಿಕೆಗಳಿಗೆ ಅತೀತವಾದುದು, ಮತ್ತು ಬಹಳಷ್ಟು ಸಂಕೀರ್ಣವಾದುದು. ಮನುಷ್ಯನ ಒಳಗೆ ಬಹಳವೇ ಕೊಳಕಿದೆ, ಹುಳುಕಿದೆ, ಭಯವಿದೆ, ಕ್ರೌರ್ಯವಿದೆ, ಸೌಂದರ್ಯವಿದೆ, ಒಳ್ಳೆಯತನವೂ ಇದೆ. ಇವು ಆಯಾಯ ಕಾಲದ ಹೊರದಾರಿಗಳಿಗೆ ಅನುಗುಣವಾಗಿ ಅಭಿವ್ಯಕ್ತವಾಗುತ್ತದೆ.

ಆದ್ದರಿಂದ ತಂತ್ರಜ್ಞಾನ ಯುಗವನ್ನು ನಾನು ಆಸಕ್ತಿಯಿಂದ ಗಮನಿಸಲು ಬಯಸುತ್ತೇನೆ. ಕಂಪನಿಗಳ ಮುಂದೆ, ದೊಡ್ಡ ದೊಡ್ಡ ಬಂಗಲೆಗಳ ಮುಂದೆ, ಅಪಾರ್ಟ್‍ಮೆಂಟ್‍ಗಳ ಮುಂದೆ ಹಗಲೂ ರಾತ್ರಿ ಕಾದಿರುವ ಸೆಕ್ಯೂರಿಟಿ ಗಾರ್ಡ್‍ಗಳ ಬದುಕನ್ನು ನೆನಪಿಸಿಕೊಳ್ಳಿ. ಅವರ ಜೊತೆ ಮಾತಾಡುವವರು ಯಾರಿಲ್ಲ. ಅವರು ಕೆಲಸ ಮಾಡುವಲ್ಲಿ ಟಿವಿ ಇಲ್ಲ. ಒಬ್ಬರೇ ಕುಳಿತುಕೊಂಡು ಆಚೀಚೆ ಹೋಗಿ ಬರುವವರನ್ನು ಎಷ್ಟು ಅಂತ ನೋಡುತ್ತಿರುವುದು? ಈಗ ಅವರೆಲ್ಲರ ಕೈಲಿ ಮೊಬೈಲ್‍ ಇದೆ. ಒಂದು ವೀಡಿಯೋ ನೋಡುತ್ತಲೋ, ವಾಟ್ಸಾಪ್‍ ನೋಡುತ್ತಲೋ, ಕನಿಷ್ಠ ಒಂದು ಹಾಡು ಕೇಳುತ್ತಲೋ ಸಮಯ ಕಳೆಯುತ್ತದೆ.

next door

ಇಲ್ಲಸ್ಟ್ರೇಷನ್ : ಮದನ ಸಿ.ಪಿ.

ಮನೆಯಲ್ಲಿ ಒಬ್ಬಂಟಿಯಾಗಿರುವ ವೃದ್ಧರದೂ ಇದೇ ಸಮಸ್ಯೆ. ಎಷ್ಟು ಅಂತ ಮಕ್ಕಳು ಮೊಮ್ಮಕಳಿಗೆ ಕರೆ ಮಾಡಲು ಸಾಧ್ಯ? ಅದೂ ಸಂಗಾತಿಯನ್ನು ಕಳೆದುಕೊಂಡು ಒಂಟಿಯಾಗಿರುವವರಿಗೆ ಮತ್ತಷ್ಟು ಏಕಾಂಗಿತನ. ಯಾರನ್ನಾದರೂ ಅತಿಯಾಗಿ ಮಾತಾಡಿಸಲು ಹೋದರೆ ಅಯ್ಯೋ ಈ ತಾತ ಎಷ್ಟು ತಲೆ ತಿನ್ನತ್ತೆ ಅಂತ ಗೊಣಗಾಟ. ಆದರೆ ತಂತ್ರಜ್ಞಾನದ ಕಾಲದಲ್ಲಿ ಈಗ ಮಕ್ಕಳು ನೆಟ್‍ಫ್ಲಿಕ್ಸ್ ಹಾಕಿಕೊಡುತ್ತಾರೆ. ದಿನಾ ವೀಡಿಯೋ ಕಾಲ್‍. ಅಮೆರಿಕಾದಲ್ಲಿರುವ ಮಕ್ಕಳು ಮೊಮ್ಮಕ್ಕಳು ಎಲ್ಲ ಇಲ್ಲೇ ಎಲ್ಲೋ ಇದ್ದಾರೇನೋ ಅನ್ನುವಂತೆ. ಒಂದು ಪ್ರಸಿದ್ಧ ಗೇಮಿಂಗ್‍ ಕಂಪನಿಯ ಸಮೀಕ್ಷೆಯ ಪ್ರಕಾರ ಅವರ 150 ದಶಲಕ್ಷ ಗೇಮರ್ಸ್‍ಗಳಲ್ಲಿ ಶೇ. 47 ಮಂದಿ 50 ವರ್ಷ ಮೇಲ್ಪಟ್ಟವರೇ!

ಇವರೆಲ್ಲ ಸಂತೋಷವಾಗಿದ್ದಾರೆಯೇ ಎಂದರೆ ಅದು ಬಹಳ ಕಷ್ಟದ ಪ್ರಶ್ನೆ. ಸಂತೋಷವೆನ್ನುವುದಕ್ಕಿಂತಲೂ ಇದು ಆ ಗಳಿಗೆಯ ಅಗತ್ಯವಾಗಿರುವ ವಸ್ತುಸ್ಥಿತಿ. ಮನುಷ್ಯ ಒಂಟಿತನಕ್ಕೆ ಬೇಸತ್ತು ತಂತ್ರಜ್ಞಾನಕ್ಕೆ ಮೊರೆಹೋಗಿದ್ದಾನೋ ಅಥವಾ ತಂತ್ರಜ್ಞಾನದಿಂದಾಗಿ ಮತ್ತೆ ಮತ್ತೆ ಒಂಟಿಯಾಗಿದ್ದಾನೋ? ಇದು ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂದು ಕೇಳಿದ ಹಾಗೆ.

ಯಾರೋ ಮಾರಣಾಂತಿಕ ಕಾಯಿಲೆಯಿಂದ ಬಳಲುವವರು ಮಿಲಾಪ್‍ನಂತಹ ಜಾಲತಾಣದಲ್ಲೋ, ಫೇಸ್‍ಬುಕ್‍ನಲ್ಲೋ ಸಹಾಯ ಕೋರುತ್ತಾರೆ. ಜನ ಹೃದಯವಂತಿಕೆಯಿಂದ ಸಹಾಯ ಮಾಡುತ್ತಾರೆ. ಅನೇಕ ಬದುಕುಗಳು ಉಳಿಯುತ್ತವೆ. ಅದೇ ಪಕ್ಕದ ಮನೆಯವರ ಜೊತೆ ಮಾತನಾಡಲು ನಮಗೆ ವ್ಯವಧಾನವಿಲ್ಲ. ನಿಜ ಜೀವನದಲ್ಲಿ ಒಂದು ಅಪಘಾತವಾದಲ್ಲಿ ಅದನ್ನು ವಿಡಿಯೋ ಸೆರೆ ಹಿಡಿಯಲು ಮುಂದಾಗುತ್ತೇವೆಯೇ ಹೊರತು ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಹಿಂಜರಿತ ಕಂಡುಬರುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬದಲಾವಣೆಗೆ ಆಗ್ರಹಿಸುತ್ತೇವೆ. ಕೊರೊನಾ ಕಾಲದಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಅಲೆದಾಡುವವರಿಗೆ ತಂತ್ರಜ್ಞಾನದಿಂದ ಬಹಳವೇ ಸಹಾಯವಾಗಿದೆ. ನೂರಾರು ಸ್ವಯಂಸೇವಕರು ಹಗಲೂ ರಾತ್ರಿ ಆನ್‍ಲೈನ್‍ ಇದ್ದುಕೊಂಡು ಅಗತ್ಯ ಸೇವೆಗಳನ್ನು ಪೂರೈಸಿದ್ದಾರೆ. ಹಾಗಿದ್ದರೆ ತಂತ್ರಜ್ಞಾನ ನಮ್ಮನ್ನು ಒಂಟಿಯಾಗಿಸಿದೆಯೇ ಅಥವಾ ಬೆಸೆದಿದೆಯೇ? ಅಂದರೆ ಬದಲಾವಣೆಯ ಕಾಲದ ಈ ವಿದ್ಯಮಾನಗಳನ್ನು ಒಳ್ಳೆಯದು-ಕೆಟ್ಟದು ಎಂದು ಗೆರೆ ಎಳೆದಂತೆ ಜಿಜ್ಞಾಸುವುದು ಕಷ್ಟ.

ತಂತ್ರಜ್ಞಾನ ಬದುಕುಗಳನ್ನು ಬದಲಾಯಿಸಿದೆ ಅನ್ನುವುದಂತೂ ನಿಜ. ಅದಿಲ್ಲದಿದ್ದಲ್ಲಿ ಕೊರೊನಾ ಸಮಯದಲ್ಲಿ ನಡೆಯಬಹುದಾಗಿದ್ದ ಪಲ್ಲಟ ಬೇರೆಯೇ ಸ್ವರೂಪದ್ದಾಗಿದ್ದೀತು. ಮನೆಯಿಂದಲೇ ಕೆಲಸ ಮಾಡುವ ಅವಕಾಶಗಳು, ಮನೆಯಿಂದಲೇ ಶಾಲೆ, ಮನೆಯಲ್ಲೇ ಕುಳಿತು ಆನ್‍ಲೈನ್‍ ಆರ್ಡರ್ ಇತ್ಯಾದಿ ವ್ಯವಸ್ಥೆಗಳು ನಗರವಾಸಿಗಳ ಬದುಕನ್ನಂತೂ ರಾತೋರಾತ್ರಿ ಬದಲಾಯಿಸಿಬಿಟ್ಟಿವೆ. ಹಾಗೆಯೇ ಹಳ್ಳಿಯ ಮಕ್ಕಳು ಅಸಮಾನತೆಯಿಂದಾಗಿ, ಸೌಕರ್ಯಗಳ ಅಭಾವದಿಂದಾಗಿ ಮತ್ತಷ್ಟು ನಲುಗಿದ್ದಾರೆ. ತಂತ್ರಜ್ಞಾನದ ವೇಗಕ್ಕೆ ಹೊಂದಿಸಿಕೊಳ್ಳಲಾಗದವರು ಪೆದ್ದರೆನಿಸಿಕೊಂಡು ಒದ್ದಾಡುತ್ತಿದ್ದಾರೆ. ಹಾಗೆಯೇ ಶೋಷಿತ ಸ್ತರದಿಂದ ಬಂದ ಅನೇಕರು ಜಾತಿ-ವ್ಯವಸ್ಥೆ, ಲೈಂಗಿಕವೂ ಸೇರಿದಂತೆ ಅನೇಕ ಬಗೆಯ ಅಸಮಾನತೆಗಳ ಕುರಿತು ಪರಿಣಾಮಕಾರಿಯಾಗಿ ತಮ್ಮ ವಿರೋಧವನ್ನು ದಾಖಲಿಸಲೂ ತಂತ್ರಜ್ಞಾನ ಅವಕಾಶ ಮಾಡಿಕೊಟ್ಟಿದೆ.

ಮಾನವನ ವಿಕಾಸದ ದಾರಿಯಲ್ಲಿ ಅವನು ಯಾವತ್ತೂ ದೈಹಿಕ-ಕೇಂದ್ರಿತ ಕಾರ್ಯಗಳಲ್ಲೇ ತೊಡಗಿಸಿಕೊಂಡದ್ದು. ಬೇಟೆ ಇರಬಹುದು, ಪಶುಸಂಗೋಪನೆ ಇರಬಹುದು, ಕೃಷಿ ಇರಬಹುದು. ತೀರಾ ಒಂದೆರಡು ಶತಮಾನಗಳಿಂದೀಚೆಗೆ ಜಗತ್ತಿನ ಈ ನಿಲುವಿನಲ್ಲಿ ಬಿರುಸಿನ ಬದಲಾವಣೆ ನಡೆಯುತ್ತಿದೆ. ಬುದ್ಧಿಕೇಂದ್ರಿತ ಉದ್ಯೋಗಗಳಿಗೆ ಬೆಲೆ ಈಗ. ಮುಂಚೆ ಮೈಕೈ ಸದೃಢವಾಗಿದ್ದವನು ಗೆಲ್ಲುವವನು, ಈಗ ಮೆದುಳು ಚುರುಕಾಗಿದ್ದವನು ಗೆಲ್ಲುವವನು. ವಿಕಾಸವಾದದ ಇತಿಹಾಸದಲ್ಲಿಯೇ ಇದು ಬಹು ದೊಡ್ಡ ಪಲ್ಲಟ. ಅದೂ ಪ್ರಚಂಡವಾದದ್ದು. ಇದಕ್ಕೆ ನಾವು ಮಾನಸಿಕವಾಗಿ, ದೈಹಿಕವಾಗಿ, ವೈಚಾರಿಕವಾಗಿ ಎಷ್ಟು ತಯಾರಾಗಿದ್ದೇವೆ ಎಂಬುದು ಬಹು ಮುಖ್ಯ ಅಂಶ. ಕುಳಿತೇ ಕೆಲಸ ಮಾಡುವ ಮಾನವನ ಆಯುಷ್ಯ ಕುಂಠಿತವಾಗುತ್ತಿದೆ. ಮನುಷ್ಯ-ಮನುಷ್ಯನ ಸಾಂಗತ್ಯದ ಕೊರತೆ ಖಿನ್ನತೆಯನ್ನು ತರುತ್ತಿದೆ. ಅಂದರೆ ನಾವು ಕಾಲನಿಗಿಂತ ಬೇಗ ಓಡಿ ಗೋಜಲಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೇವೆಯೇ? ಇದೇ ಬದಲಾವಣೆ ನಿಧಾನವಾಗಿ ಆಗಿದ್ದಿದ್ದರೆ ನಾವು ಅದಕ್ಕೆ ಹೊಂದಿಕೊಳ್ಳುತ್ತಿದ್ದೆವೇ? ಇಂತಹದೊಂದು ಪಲ್ಲಟ ವಿಕಾಸವಾದದ ತತ್ವದಂತೆ ನಿಧಾನವಾಗಿ ಆಗಬೇಕಿತ್ತೇ ಅನ್ನುವ ಪ್ರಶ್ನೆಗಳೂ ನನ್ನನ್ನು ಬಹುವಾಗಿ ಕಾಡಿದೆ.

ರಾಜಕೀಯವಾದ ಆಲೋಚನೆಗಳನ್ನು, ಅಭಿಪ್ರಾಯಗಳನ್ನು ತಂತ್ರಜ್ಞಾನ ಬಹು ಪರಿಣಾಮಕಾರಿಯಾಗಿ ಮೂಡಿಸುತ್ತಿರುವುದು ನನಗೆ ಎಲ್ಲದಕ್ಕಿಂತ ಹೆಚ್ಚು ಆಸಕ್ತಿದಾಯಕವಾಗಿ ಕಾಣುತ್ತದೆ. ಅಜೆಂಡಾಗಳನ್ನು ವ್ಯವಸ್ಥಿತವಾಗಿ ಮನುಷ್ಯನ ಒಳಗೆ ಸ್ಥಾಪಿಸಲಾಗುತ್ತಿದೆ. ಆಳವಾದ ಓದು-ಅಧ್ಯಯನದ ಅಗತ್ಯವಿಲ್ಲದೆ ವಾಟ್ಸಾಪ್‍ ಫಾರ್ವರ್ಡ್‍ಗಳು, ಫೇಸ್‍ಬುಕ್‍ ವೀಡಿಯೋಗಳನ್ನೇ ನಂಬಿಕೊಂಡು ಇತಿಹಾಸ, ವಿಜ್ಞಾನದಂತಹ ವಿಸ್ತೃತ ವಿಷಯಗಳ ಕುರಿತು ತಂತಮ್ಮ ಪಟ್ಟಭದ್ರ ಹಿತಾಸಕ್ತಿಯನ್ನು ಪಂಡಿತರಂತೆ ಮಂಡಿಸುವ ಕೂಪಮಂಡೂಕಗಳು ತಂತ್ರಜ್ಞಾನದ ದುಷ್ಪರಿಣಾಮದ ನಿಜವಾದ ರಾಯಭಾರಿಗಳು. ಒಮ್ಮೊಮ್ಮೆ ಇವರೆಲ್ಲ ಸೇರಿ ನಾಗರಿಕತೆಯನ್ನೇ ಮುಳುಗಿಸಲು ಬಂದ ವಿನಾಶಿಗಳಂತೆ ಕಂಡು ಭಯವೂ ಆಗುತ್ತದೆ.

next door

ಇಲ್ಲಸ್ಟ್ರೇಷನ್ : ಮದನ ಸಿ.ಪಿ

ಬದಲಾಗುತ್ತಿರುವ ಬದುಕಿನ ಆಯಾಮಗಳ ಬಗ್ಗೆ ಚಿಂತಿಸಿದಾಗ ನನಗೆ ಬಹು ಮುಖ್ಯವೆನಿಸುವ ಇನ್ನೊಂದು ವಿಚಾರವೆಂದರೆ ನಮ್ಮ ಮಕ್ಕಳಿಗೆ ಅಗತ್ಯವಿರುವ ಒಂಟಿತನದ ಕೊರತೆ. ಮೇಲುನೋಟಕ್ಕೆ ವಿಚಿತ್ರವೆನಿಸಿದರೂ ಅನೇಕ ಸಂಶೋಧನೆಗಳ ಪ್ರಕಾರ ಸೃಜನಾತ್ಮಕತೆಗೆ ಒಂಟಿತನ ಅತ್ಯಗತ್ಯವಾದ ಅಂಶ. ಮಕ್ಕಳಿಗೆ ಮಾಡಲು ಕೆಲಸವಿಲ್ಲದೆ ಬೇಸತ್ತಾಗಲೇ ಹೊಸ ಹೊಸ ಅಲೋಚನೆಗಳು ಹುಟ್ಟುವುದು. ಮಾನವ ಪ್ರಭೇದದ ಅಸ್ತಿತ್ವದಲ್ಲಿ ಇದರ ಪಾತ್ರ ಮಹತ್ವದ್ದು. ಬದಲಾವಣೆಗೆ ಒಗ್ಗಿಕೊಂಡು, ಸಂಕಷ್ಟಗಳಿಗೆ ಪರಿಹಾರವನ್ನು ಹುಡುಕಿಕೊಂಡು, ಹೊಸ ಹೊಸ ರಚನಾತ್ಮಕ ಪ್ರಯೋಗಗಳನ್ನು ಮಾಡಿಕೊಂಡ ಕಾರಣ‍ಕ್ಕೆ ನಾವು ಯಶಸ್ವಿಯಾಗಿ ಬದುಕಿದ್ದೇವೆ. ಈ ಒಂಟಿತನಕ್ಕೆ, ತನ್ಮೂಲಕ ಹುಟ್ಟಿಕೊಳ್ಳುವ ಸೃಜನಶೀಲತೆಗೆ ತಂತ್ರಜ್ಞಾನ ಒಂದು ಬಗೆಯ ಅಡ್ಡಿಯೇನೋ ಅಂತ ಬಹಳ ಸಲ ಅನಿಸಿದೆ. ಆದರೆ ಮನುಷ್ಯ ಜಾತಿಯ ಈಸಿ ಜೈಸಬಲ್ಲ ಗುಣದ ಬಗ್ಗೆ ನನಗೆ ಅಪಾರ ನಂಬಿಕೆಯೂ ಇದೆ. ತಂತ್ರಜ್ಞಾನದ ಕವಲಾಗಿಯೇ ಬೆಳೆಯುವ ಬೇರೆಯದೇ ರೀತಿಯ ಸೃಜನಾತ್ಮಕತೆ ಮುಂಬರುವ ದಿನಗಳಲ್ಲಿ ಕಾಣಸಿಗಬಹುದೇನೋ ಎಂದು ನಾನು ಕುತೂಹಲಿಯಾಗಿ ಕಾದಿದ್ದೇನೆ.

ನಾನು-ನೀವು ಅದೆಷ್ಟು ಚರ್ಚಿಸಿದರೂ ಬದಲಾವಣೆಯನ್ನು, ತಂತ್ರಜ್ಞಾನ ಆವರಿಸುವುದನ್ನು ತಡೆಯಲು ಸಾಧ್ಯವಿಲ್ಲವೆನ್ನುವುದೂ ಸತ್ಯ. ಮತ್ತು ಅದು ಅಗತ್ಯವೂ ಇರಲಿಕ್ಕಿಲ್ಲ. ಹಾಗಿದ್ದಲ್ಲಿ ಇದನ್ನು ಪರಿಣಾಮಕಾರಿಯಾಗಿ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಹೇಗೆ ಬಳಸಬೇಕು? ಇದರೊಂದಿಗೆ ಆರೋಗ್ಯಪೂರ್ಣವಾದ ಸಂವಾದವನ್ನು ಸಾಧಿಸುವುದು ಹೇಗೆ? ಮನುಷ್ಯ ಟಿವಿ, ಫೇಸ್‍ಬುಕ್‍, ವಾಟ್ಸಾಪ್‍ಗಳ ಒಳಗೂ ಹೊರಗೂ ಸಮತೋಲನವನ್ನು ಸಾಧಿಸುವುದು ಹೇಗೆ? ಸಮಾಜದ ಅತಿ ಕೆಳಸ್ತರದ ವ್ಯಕ್ತಿಗೂ ಇದರ ಲಾಭವನ್ನು ತಲುಪಿಸುವುದು ಹೇಗೆ? ತಂತ್ರಜ್ಞಾನವನ್ನು ಮಾಹಿತಿ ಸಂಪಾದನೆಗೆ ಮಾತ್ರವಲ್ಲ ವಿವೇಕ ಸಂಪಾದನೆಗೂ ಬಳಸುವುದು ಹೇಗೆ? ಇವೆಲ್ಲ ನಿಜವಾಗಿ ನಡೆಯಬೇಕಾದ ಚರ್ಚೆಗಳು.

ಇದನ್ನೂ ಓದಿ : Next Door : ಮುಂದುವರೆಯುವುದೆಂದರೆ ತಂತ್ರಜ್ಞಾನದ ದಾಸರಾಗುವುದೆ?

Published On - 11:13 am, Sat, 10 July 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ