New Book : ಅಚ್ಚಿಗೂ ಮೊದಲು ; ಅಮರೇಶ ನುಗಡೋಣಿಯವರ ‘ಗೌರಿಯರು’ ಬಂದರು

Kannada Novel : ’ಮೂವರನ್ನು ನಾಯಕಿಯರನ್ನಾಗಿಸಿಕೊಂಡ ತಂತ್ರವೇ ಅಮರೇಶರ ಮಹತ್ವಾಕಾಂಕ್ಷೆಯನ್ನು, ಪಲ್ಲಟಗಳ ಬಹುಮುಖತೆಯನ್ನು ಧ್ವನಿಸುತ್ತದೆ. ಮಹಿಳಾ ಸಂಕಥನದ ರಾಜಕೀಯ ನೆಲೆಯಿಂದ ನೋಡುವುದಾದರೆ, ಈ ಹೋರಾಟದ ತುರ್ತು, ಐತಿಹಾಸಿಕ ಮಹತ್ವವನ್ನು ಲೇಖಕರು ಗ್ರಹಿಸಿರುವುದನ್ನೂ ಇದು ಹೇಳುತ್ತದೆ.’ ಡಾ. ಎಂ. ಎಸ್. ಆಶಾದೇವಿ

New Book : ಅಚ್ಚಿಗೂ ಮೊದಲು ; ಅಮರೇಶ ನುಗಡೋಣಿಯವರ ‘ಗೌರಿಯರು’ ಬಂದರು
ಡಾ. ಅಮರೇಶ ನುಗಡೋಣಿ
Follow us
ಶ್ರೀದೇವಿ ಕಳಸದ
|

Updated on:Jul 11, 2021 | 11:30 AM

ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕನ್ನಡದ ಹಿರಿಯ ಕತೆಗಾರ ಡಾ. ಅಮರೇಶ ನುಗಡೋಣಿ ಅವರ ಹೊಸ ಕಾದಂಬರಿ ‘ಗೌರಿಯರು’  ವಾರದೊಪ್ಪತ್ತಿನಲ್ಲಿ ರಾಜ್ಯದ ಎಲ್ಲಾ ಪುಸ್ತಕ ಮಳಿಗೆಗೆಳಲ್ಲಿಯೂ ಲಭ್ಯವಾಗಲಿದೆ. ಹಿರಿಯ ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ ಈ ಕಾದಂಬರಿಗೆ ಬರೆದಿರುವ ಮುನ್ನುಡಿ ಇಲ್ಲಿದೆ.

ಕೃತಿ : ಗೌರಿಯರು (ಕಾದಂಬರಿ) ಲೇಖಕರು : ಡಾ. ಅಮರೇಶ ನುಗಡೋಣಿ ಪುಟಗಳು : 176 ಬೆಲೆ : ರೂ. 160 ಮುಖಪುಟ ವಿನ್ಯಾಸ : ಸೌಮ್ಯ ಕಲ್ಯಾಣ್​ಕರ್ ಪ್ರಕಾಶನ : ಪಲ್ಲವ ಪ್ರಕಾಶನ, ಬಳ್ಳಾರಿ

*

ಅಮರೇಶ ನುಗಡೋಣಿಯವರ ಬರವಣಿಗೆಯ ಜೀವಂತಿಕೆಯ ಮೂಲವು ಅವರು ಸದಾ ಹುಡುಕುವ ಮತ್ತು ಪಲ್ಲಟಗಳನ್ನು ಕುರಿತಂತೆ ಹೊಂದಿರುವ ತೆರೆದ ಮನಸ್ಥಿತಿಯಲ್ಲಿ ಇದೆ. ಸಮಕಾಲೀನ ಬಿಕ್ಕಟ್ಟುಗಳು ಹೇಗಿವೆ ಎಂದರೆ, ನಮಗೆ ಗೊತ್ತಿಲ್ಲದೆಯೇ ನಾವು ವಿಘಟನಕಾರೀ ಶಕ್ತಿಗಳನ್ನು ಬೆಂಬಲಿಸುವ ಅನಿವಾರ್ಯ ಮತ್ತು ಅಮೂರ್ತ ಸನ್ನಿವೇಶಗಳು ನಮ್ಮನ್ನು ನಿಯಂತ್ರಿಸುತ್ತಿರುತ್ತವೆ. ಹೆಣ್ಣು ಮತ್ತು ಜಾತ್ಯಾಧಾರಿತ ವ್ಯವಸ್ಥೆಯನ್ನು ಅಧಿಕೃತಗೊಳಿಸುವ ಪ್ರಯತ್ನಗಳು ಹಿಂದೆಂದಿಗಿಂತಲೂ ಇಂದು ಶಕ್ತಿಶಾಲಿಯಾಗಿವೆ. ಹೆಣ್ಣು ಮತ್ತು ದಲಿತರ ವಿರುದ್ಧ ಇಂದು ಪ್ರಯೋಗಿಸಲಾಗುತ್ತಿರುವ ಅಸ್ತ್ರಗಳು ಅವರ ಹೋರಾಟವನ್ನು ದುರ್ಬಲಗೊಳಿಸುತ್ತಿರುವುದು ಮಾತ್ರವಲ್ಲ ಅದರ ಪ್ರಸ್ತುತತೆಯನ್ನೇ ಪ್ರಶ್ನಿಸುವ ವಾತಾವರಣವೂ ನಿರ್ಮಾಣವಾಗುತ್ತಿರುವುದು ಆತಂಕವನ್ನೂ ಹುಟ್ಟಿಸುತ್ತಿದೆ. ಪ್ರಭುತ್ವ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಾತಾವರಣವು ಈ ಎರಡು ವರ್ಗಗಳ ಪರವಾಗಿದೆ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತಲೇ ಒಳಗಿನಿಂದ ಅವುಗಳನ್ನು ನಾಶಗೊಳಿಸುವ ಹುನ್ನಾರವು ಇದರಲ್ಲಿ ಅಡಗಿರುವುದನ್ನು ಅರ್ಥಮಾಡಿಕೊಳ್ಳಬೇಕಾದ ಸವಾಲನ್ನು ಈ ಎರಡೂ ಹೋರಾಟಗಳು ಎದುರಿಸುತ್ತಿವೆ.

ಇಂಥ ವಿಷಮ ಸನ್ನಿವೇಶದಲ್ಲಿ ಪುರುಷ ಲೇಖಕರು ಹೆಣ್ಣನ್ನು, ದಲಿತೇತತರು ದಲಿತರನ್ನು ಒಳಗೊಳ್ಳುವ ಬರವಣಿಗೆಯನ್ನು ಮಾಡುವುದು, ಸಾಹಿತ್ಯದ ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿಯನ್ನು ನಿಭಾಯಿಸುವ ಕ್ರಮವೂ ಹೌದು. ಇದನ್ನು ನಿಭಾಯಿಸುವ ಕೃತಿಗಳನ್ನು ಕಲಾಪಠ್ಯಗಳೆಂದು ನೋಡುವುದರ ಆಯಾಮಕ್ಕಿಂತ ವಿಸ್ತಾರವಾದ ಆಯಾಮದಲ್ಲಿ ನೋಡುವುದು ಅಗತ್ಯವೆಂದು ನಾನು ತಿಳಿದಿದ್ದೇನೆ. ಸಾಹಿತ್ಯವನ್ನು ಮತ್ತು ಒಟ್ಟಾರೆಯಾಗಿ ಕಲಾಮಾಧ್ಯಮಗಳನ್ನು ಪರಿಭಾವಿಸುವ ಹಾಗೂ ಚರ್ಚಿಸುವ ಮೆಥಡಾಲಜಿಗಳೇ ಬದಲಾಗುತ್ತಿರುವ ಸಮಕಾಲೀನ ಸಂದರ್ಭಗಳಲ್ಲಿ ಅಮರೇಶರ ‘ಗೌರಿಯರು’ ಕಾದಂಬರಿಯನ್ನು ಈ ಬದಲಾದ ಪರಿಪ್ರೇಕ್ಷ್ಯದಲ್ಲಿ ಇಟ್ಟು ನೋಡುವುದು ಅಗತ್ಯ.

ಹೀಗೆ ಬದಲಾದ ಭಿತ್ತಿ ಎನ್ನುತ್ತಿರುವಾಗ ಹಲವು ಸವಾಲುಗಳು ಇರುತ್ತವೆ ಎನ್ನುವುದು ನಿಜ. ಕಲಾಪಠ್ಯದ ಮಾನದಂಡಗಳ ಪ್ರಶ್ನೆ ಇಲ್ಲಿ ಸಹಜವಾಗಿಯೇ ಎದುರಾಗುತ್ತದೆ. ಸಾಮಾಜಿಕ ಉತ್ತರದಾಯಿತ್ವವನ್ನು ಕಲಾಮೀಮಾಂಸೆಯ ಭಾಗವಾಗಿಸುವ ಸವಾಲು ಒಂದಾದರೆ, ಇನ್ನೊಂದು ಸಾಮಾಜಿಕತೆಯೆ ಕೃತಿಯೊಂದರ ಆಶಯವಾಗಿ ಬಿಟ್ಟಾಗ, ಅಂದರೆ ಅದೊಂದು ಬರೆಯಿಸಿಕೊಂಡ ಕೃತಿಯಾಗದೆ ಸೋದ್ದಿಶ್ಯವಾಗಿ ಬರೆದ ಕೃತಿಯೇ ಆಗಿ ಬಿಟ್ಟರೆ ಅಂಥ ಕೃತಿಗಳನ್ನು ನಾವು ಹೇಗೆ ಮೌಲ್ಯಮಾಪನ ಮಾಡಬೇಕು ಎನ್ನುವ ಪ್ರಶ್ನೆ. ಏಕೆಂದರೆ ಕಾಲದ ಅಗತ್ಯವಾಗಿರುವ ಕೃತಿಗಳನ್ನು ಒಪ್ಪುವುದು ತೀರಾ ಅನಿವಾರ್ಯ ಎನ್ನುವುದನ್ನು ಎಲ್ಲರೂ ಒಪ್ಪಿಯೇ ಒಪ್ಪುತ್ತೇವೆ. ಆದರೆ ಅದರ ಕಲಾತ್ಮಕತೆಯ ಸೋಲು ಅಥವಾ ತೊಡಕು ಆ ಕೃತಿಯನ್ನು ಪಕ್ಕಕ್ಕಿಡುವಂತೆ ಒತ್ತಾಯಿಸುತ್ತದೆಯೇ ಎನ್ನುವುದು. ತುಸು ಅತಿ ಎನ್ನುವಂತೆ ಕಂಡರೂ ಈ ಪ್ರಶ್ನೆಯನ್ನು ನೇರವಾಗಿಯೇ ಹಾಕಿಕೊಳ್ಳುವುದು ಅಗತ್ಯ. ಒಂದು ಮಹತ್ವದ ಪಲ್ಲಟದ ಪ್ರಕ್ರಿಯೆಯಲ್ಲಿ ಸೋದ್ದಿಶ್ಯವಾಗಿಯಾದರೂ ಪಾಲ್ಗೊಳ್ಳುವ ಕೃತಿಗಳನ್ನು ‘ವಿಶೇಷ ಜಾಗ’ದಲ್ಲಿ ಇಟ್ಟು ನೋಡುವುದನ್ನು ನಾನಂತೂ ಪ್ರತಿಪಾದಿಸುತ್ತೇನೆ. ಅದು ಸಹ ಜಾತಿ ಸಹಜವಾಗಿ, ಗಿಡದಲ್ಲಿ ಅರಳಿದ ಹೂವಿನಂತೆ ಬಂದರಂತೂ ಅದು ಸಕಾರಣವಾಗಿಯೇ ಸ್ವಾಗತಾರ್ಹ.

ಅಮರೇಶರ ‘ಗೌರಿಯರು’ ಕಾದಂಬರಿಯು ಈ ಎರಡರಲ್ಲಿ ಎರಡನೆಯ ವರ್ಗಕ್ಕೆ ಸೇರುತ್ತದೆ ಎನ್ನುವುದು ನಿಜಕ್ಕೂ ಸಂತೋಷದ ಸಂಗತಿ. ಕನ್ನಡ ಕಾದಂಬರಿ ಲೋಕಕ್ಕೆ ಇದೊಂದು ಆಹ್ಲಾದಕಾರಿಯಾದ ಸೇರ್ಪಡೆ. ಈ ಕಾದಂಬರಿಯ ಮೊದಲ ಕರಡನ್ನು ನೋಡಿದಾಗ ಇದು ಮೊದಲ ವರ್ಗಕ್ಕೆ ಸೇರುತ್ತದೆ ಎಂದೇ ನನಗನ್ನಿಸಿತ್ತು. ಅಮರೇಶರು ಆಮೇಲೆ ಮಾಡಿದ ಬದಲಾವಣೆಗಳು ಇದನ್ನು ಸಹಜ ಕೃತಿಯಾಗಿಸಿದೆ. ವಸ್ತು ಮತ್ತು ನಿರೂಪಣೆ ಎರಡರಲ್ಲಿಯೂ ಅಮರೇಶರು ಅವರ ಎಂದಿನ ಸರಾಗತೆಯನ್ನು ಮತ್ತು ತಾದಾತ್ಮ್ಯವನ್ನು ಸಾಧಿಸಿದ್ದಾರೆ.

ಗೌರಿ ಎನ್ನುವುದು ಲಕ್ಷಾಂತರ ಭಾರತೀಯ ಹೆಣ್ಣುಮಕ್ಕಳಿಗೆ ಇಡುವ ಹೆಸರು ಮಾತ್ರವಲ್ಲ, ಅದೊಂದು ಸ್ಥಾಪಿತ ಮತ್ತು ಒಪ್ಪಿತ ಸ್ತ್ರೀ ಮಾದರಿಯೂ ಆಗಿದೆ. ಈ ಪ್ರತಿಮೆಯು ಆದರ್ಶ ಮತ್ತು ಅಪೇಕ್ಷಿತ. ಅದು ನಿಸ್ಸಂಶಯವಾಗಿ ಗಂಡಿನ ಅಪೇಕ್ಷಿತ ಮಾದರಿ. ಗರತಿ ಗೌರಮ್ಮನೋ, ಗೌರಮ್ಮನೋ ಈ ಎಲ್ಲವೂ ‘ಅನುಕೂಲ ಸತಿ’ಯ ಚಿತ್ರವನ್ನೇ ಮತ್ತೆ ಮತ್ತೆ ಎತ್ತಿಹಿಡಿಯುತ್ತವೆ. ಕ್ವಚಿತ್ತಾಗಿ ಎನ್ನುವಂತೆ ಗೌರಿಯ ಹುಸಿಮುನಿಸೋ, ಅವಳ ಹುಡುಗಾಟಿಕೆಯೋ, ಗಂಡ ಶಿವನ ಜೊತೆ ಅವಳು ಹೂಡುವ ಪಂದ್ಯಗಳೋ ಊಟದ ಜೊತೆಗಿನ ಉಪ್ಪಿನಕಾಯಿಯಂತೆ ಕಾಣಿಸಿಕೊಳ್ಳುತ್ತವೆ. ಅದು ಬಿಟ್ಟರೆ ಅವಳ ಆದ್ಯತೆ, ಅವಳೇ ಕಟ್ಟಿಕೊಂಡ ಬದುಕು ಈ ಎಲ್ಲವೂ ಕಾಣಿಸಿಕೊಳ್ಳುವುದು ಕಡಿಮೆಯೇ. ವೈದೇಹಿಯವರ ‘ಶಿವನ ಮೀಸುವ ಹಾಡು’ ಕವಿತೆ ಗೌರಿಯ ಪುರಾಣ ಭಂಜನೆಯನ್ನು ಮಾಡಲು ಹವಣಿಸುವ ಶಕ್ತವಾದ ಕವಿತೆ. ಅವಳ ಆರ್ದ್ರಗರ್ವವನ್ನು ಈ ಕವಿತೆ ಘನವಾಗಿ ಎತ್ತಿಹಿಡಿಯುತ್ತದೆ, ಶಿವನ ಮಿತಿ, ದೌರ್ಬಲ್ಯ, ದ್ರೋಹ ಈ ಎಲ್ಲವನ್ನೂ ಅವಳು ಅಸಹಾಯಕತೆಯಿಂದಲ್ಲ, ಧೀರತೆಯಿಂದ, ಆತ್ಮವಿಶ್ವಾಸದಿಂದ ಎದುರಿಸುತ್ತಾಳೆ. ದಾಂಪತ್ಯವನ್ನು ತನಗೆ ಬೇಕಾಗಿ ಉಳಿಸಿಕೊಳ್ಳುತ್ತಾಳೆ. ಮಹತ್ವದ ಸಂಗತಿಯೆಂದರೆ ಶಿವನಿಗೆ ಅವನ ವಿವರಗಳೆಲ್ಲ ತನಗೆ ಗೊತ್ತಿದೆ ಎನ್ನುವುದನ್ನು ರೂಪಕಗಳಲ್ಲಿಯೇ ಗೊತ್ತು ಮಾಡುತ್ತಾಳೆ. ಹೀಗೆ ಮಾಡುವ ಮೂಲಕ ಶಿವನೇ ಪಾಪಪ್ರಜ್ಞೆಯಿಂದ ಒದ್ದಾಡುವಂತೆ ಮಾಡುತ್ತಾಳೆ. ಇದರಿಂದ ಅವಳ ಕೈಯೇ ಮೇಲಾಗುತ್ತದೆ. ‘ಗೌರಿ’ ಎನ್ನುವ ಹೆಸರನ್ನೇ ಆಧರಿಸಿ ಈ ಚರ್ಚೆಯನ್ನು ಮಾಡುತ್ತಿರುವುದನ್ನು ಸೀಮಿತ ಚೌಕಟ್ಟು ಎಂದು ತಿಳಿಯಬೇಕಾಗಿಲ್ಲ. ಶಕುಂತಲೆಯನ್ನು ಕುರಿತಂತೆ ಮಾಸ್ತಿಯವರ, ವೀಣಾ ಶಾಂತೇಶ್ವರ ಹಾಗೂ ವೈದೇಹಿಯವರ ಕತೆಗಳನ್ನು ಒಟ್ಟಿಗೇ ಇಟ್ಟು ನೋಡಿದಾಗ ಬದಲಾದ ಹೆಣ್ಣಿನ ಚಿತ್ರ ಸ್ಫುಟವಾಗುತ್ತದೆ. ಇದನ್ನು ಬದಲಾದ ಹೆಣ್ಣು ಎನ್ನುವುದಕ್ಕಿಂತ ಸ್ವಯಂ ಅನಾವರಣಗೊಂಡ ಹೆಣ್ಣು ಎನ್ನುವುದೇ ಹೆಚ್ಚು ಸರಿ. ‘ಗೌರಿಯರು’ ಕಾದಂಬರಿಯನ್ನೂ ಹೀಗೆ ನೋಡಲು ಸಾಧ್ಯವಿದೆ ಎನ್ನುವುದು ನನ್ನ ಪ್ರಯತ್ನ.

‘ಗೌರಿಯರು’ ಕಾದಂಬರಿಯ ನಾಯಕಿಯರಾದ ಶಿವಲೀಲಾ, ಅಕ್ಕಮ್ಮ ಹಾಗೂ ಶ್ರೀದೇವಿಯರು ಸಂಕ್ರಮಣ ಘಟ್ಟದ ಧೀರೆಯರಂತೆ ಕಾಣುತ್ತಲೇ ಅದರ ಸಂಕಟಗಳನ್ನೂ ಎದುರಾಗುತ್ತಾರೆ. ಮೂವರನ್ನು ನಾಯಕಿಯರನ್ನಾಗಿಸಿಕೊಂಡ ತಂತ್ರವೇ ಅಮರೇಶರ ಮಹತ್ವಾಕಾಂಕ್ಷೆಯನ್ನು, ಪಲ್ಲಟಗಳ ಬಹುಮುಖತೆಯನ್ನು ಧ್ವನಿಸುತ್ತದೆ. ಮಹಿಳಾ ಸಂಕಥನದ ರಾಜಕೀಯ ನೆಲೆಯಿಂದ ಇದನ್ನು ನೋಡುವುದಾದರೆ, ಈ ಹೋರಾಟದ ತುರ್ತು ಮತ್ತು ಐತಿಹಾಸಿಕ ಮಹತ್ವವನ್ನು ಅಮರೇಶರು ಗ್ರಹಿಸಿರುವುದನ್ನೂ ಇದು ಹೇಳುತ್ತದೆ.

achchigoo modalu amaresh nugadoni

ಇಲ್ಲಸ್ಟ್ರೇಷನ್ : ಸೌಮ್ಯ ಕಲ್ಯಾಣ್​ಕರ್

ಈ ಮೂವರೂ ನಾಯಕಿಯರು ಅಗ್ನಿಕನ್ಯೆಯರಂತೆಯೇ ಕಾಣುತ್ತಾರೆ. ಬದುಕು ಒಡ್ಡುವ ನೂರಾರು ಬಿಕ್ಕಟ್ಟುಗಳನ್ನು ನೋವಿನಲ್ಲೂ ಕುಂದದ, ಮರೆಯಾಗದ ಆತ್ಮವಿಶ್ವಾಸದಲ್ಲಿ ಈ ಹುಡುಗಿಯರು ಎದುರಿಸುತ್ತಾರೆ. ಈ ಮೂವರಲ್ಲಿ ಯಾರದೂ ಸಾಂಪ್ರದಾಯಿಕ ಮನಸ್ಸು ಒಪ್ಪುವ ಯಶಸ್ಸಿನದಲ್ಲ. ಕಾದಂಬರಿಯ ಕೇಂದ್ರ ಇರುವುದೇ ಈ ಹುಡುಗಿಯರ ಬದುಕನ್ನು ಅಪ್ಪ, ಅಮ್ಮ, ಇತರ ಆಪ್ತೇಷ್ಟರು ಒಳಗಾಗಲು ನಡೆಸುವ ಪ್ರಯತ್ನದಲ್ಲಿ ಮತ್ತು ಅದಕ್ಕೆ ಈ ಹುಡುಗಿಯರು ತಮ್ಮನ್ನು ತಾವೇ ಅನುವಾಗಿಸಿಕೊಳ್ಳಲು ನಡೆಸುವ ಪರಿಯಲ್ಲಿ. ಹೆಣ್ಣು ಬದಲಾಗುತ್ತಿದ್ದಾಳೆ ಎನ್ನುವ ಸತ್ಯವನ್ನು ಸ್ವತಃ ಆ ಹೆಣ್ಣು ಮಕ್ಕಳು ಮತ್ತು ಅವರ ಪರಿಸರ ತುಸು ಬೆರಗಿನಲ್ಲಿ, ತುಸು ಸಂತೋಷದಲ್ಲಿ ಮತ್ತು ಆತಂಕದಲ್ಲಿ ಅರ್ಥ ಮಾಡಿಕೊಳ್ಳುತ್ತಾ ಹೋಗುವುದನ್ನು ಈ ಕಾದಂಬರಿ ಮಾನವೀಯ ನೆಲೆಯಲ್ಲಿ ಕಾಣಿಸುತ್ತಾ ಹೋಗುತ್ತದೆ. ಸಣ್ಣಪುಟ್ಟ ವಿವರಗಳನ್ನೂ ಅಪ್ಪ ಅಮ್ಮನೊಂದಿಗೆ, ಆಪ್ತವಲಯದೊಂದಿಗೆ ಪರೋಕ್ಷವಾಗಿಯಾದರೂ ಹಂಚಿಕೊಳ್ಳುವುದೇ ಅಭ್ಯಾಸವಾಗಿಬಿಟ್ಟ ತಲೆಮಾರುಗಳಿಗೆ ಹೋಲಿಸಿದರೆ ಈ ತೀನ್ ದೇವಿಯಾ ಎನ್ನಬಹುದಾದ ಈ ಹುಡುಗಿಯರು ತಮ್ಮ ತಲೆಗೆ ತಮ್ಮ ಕೈ ಎನ್ನುವುದನ್ನು ಆರಂಭದಿಂದಲೂ ಒಪ್ಪುವ ಹರಸಾಹಸ ಮಾಡುತ್ತಾ ಅದರಲ್ಲಿ ಬಹುಪಾಲು ಗೆಲ್ಲುತ್ತಾರೆ ಕೂಡ. ಅದಕ್ಕೆ ಅವರ ಮನಸ್ಥಿತಿ ಮಾತ್ರ ಕಾರಣವಲ್ಲ, ಬದಲಾಗುತ್ತಿರುವ ಪರಿಸರ, ಅವರೇ ಆರಿಸಿಕೊಂಡ ದಾರಿಗಳಾದ್ದರಿಂದ ಅದಕ್ಕೆ ತಾವೇ ಹೊಣೆ ಎನ್ನುವ ಅರಿವೂ ಕೂಡ ಕಾರಣ, ಅವರು ಪಡೆದ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸ್ವಾವಲಂಬನೆಗಳ ಪಾತ್ರವನ್ನು ನಾನು ನಿರಾಕರಿಸುತ್ತಿಲ್ಲ.

ಆದರೆ ಈ ಎಲ್ಲವೂ ಮಧ್ಯಮವರ್ಗದ ಹೆಣ್ಣುಮಕ್ಕಳನ್ನು ಸಬಲವಾಗಿಸುವಷ್ಟೇ ದುರ್ಬಲಗೊಳಿಸುತ್ತಾ ಬಂದಿರುವ ಅಪ್ರಿಯ ಸತ್ಯವನ್ನೂ ನಾವಿಲ್ಲಿ ಗಮನಿಸಬೇಕು. ಈ ದೃಷ್ಟಿಯಿಂದ ಈ ಹೆಣ್ಣುಮಕ್ಕಳ ಗ್ರಾಮೀಣ ಹಿನ್ನೆಲೆ ಕೂಡ ತುಂಬಾ ಮುಖ್ಯವಾದುದು. ಶಿಕ್ಷಿತ ಮಧ್ಯಮವರ್ಗದ ಹೆಣ್ಣುಮಕ್ಕಳು ಇಂದಿಗೂ ತ್ರಿವೇಣಿಯವರ ಕಾದಂಬರಿಗಳ ನಾಯಕಿಯರ ಅಕ್ಕತಂಗಿಯರಂತೆ ಕಾಣುವ ನೂರಾರು ಉದಾಹರಣೆಗಳನ್ನು ನಾವು ನೋಡಬಹುದು. ಆದ್ದರಿಂದಲೇ ನಾನು ಅನೇಕ ಕಡೆ ಪ್ರಸ್ತಾಪಿಸಿರುವಂತೆ, ಎಂ.ಕೆ. ಇಂದಿರಾ ಮತ್ತು ತ್ರಿವೇಣಿಯವರ ಕಾದಂಬರಿಗಳ ನಾಯಕಿಯರ ನಡುವಿರುವ ವ್ಯತ್ಯಾಸ ನಮ್ಮ ಸಾಮಾಜಿಕ ಮತ್ತು ಸಾಂಸ್ಕøತಿಕ ಸಂದರ್ಭಗಳ ವ್ಯತ್ಯಾಸ ಮತ್ತು ವೈರುಧ್ಯವನ್ನು ನಾವು ಇನ್ನೂ ಗಂಭೀರವಾಗಿ ಚರ್ಚಿಸಬೇಕು. ಅನಂತಮೂರ್ತಿ ಮತ್ತು ಲಂಕೇಶರ ನಾಯಕಿಯರನ್ನು ಗಮನಿಸಿದರೂ ಈ ಅಂಶ ಸ್ಪಷ್ಟವಾಗುತ್ತದೆ.

ಶಿವಲೀಲಾ ಗಂಡನಿಂದ ಡೈವೋರ್ಸ್ ಪಡೆಯುವ ನಿರ್ಧಾರವನ್ನು ಕುಟುಂಬದ ಸಲಹೆ, ನಿರ್ದೇಶನ, ಒತ್ತಾಸೆ ಯಾವುದೂ ಇಲ್ಲದೆಯೇ ತೆಗೆದುಕೊಳ್ಳುತ್ತಾಳೆ. ಅದನ್ನು ಸಾದ್ಯವಾದಷ್ಟು ಸಹಜತೆಯಲ್ಲಿಯೇ ಅಪ್ಪ ಅಮ್ಮನಿಗೆ ಹೇಳುತ್ತಾಳೆ. ಹೀಗೆ ಅವಳು ಹೇಳುವ ಕ್ರಮವೇ ಅವಳು ಅಪ್ಪ ಅಮ್ಮಂದಿರನ್ನು ಓರಿಯೆಂಟ್ ಮಾಡುವ ಬಗೆಯನ್ನು ಹೇಳುತ್ತದೆ. ಅದನ್ನೊಂದು ಗೋಳಾಟ ಮಾಡದೆ, ತಾನು ಮೋಸ ಹೋದ ಬಡಪಾಯಿ ಹೆಣ್ಣು ಎನ್ನುವ ಅತಿರೇಕವಿಲ್ಲದೆ, ಸರಿ ಬರಲಿಲ್ಲ ಆದ್ದರಿಂದ ಬೇರೆಯಾಗಬೇಕಾಯಿತು ಎನ್ನುವುದನ್ನು ಪ್ರಬುದ್ಧವಾಗಿ ಅವಳು ಅಪ್ಪ ಅಮ್ಮಂದಿರಿಗೆ ಮನದಟ್ಟು ಮಾಡುವ ರೀತಿಯು ಅವಳಲ್ಲಿನ ಹೊಸ ಹೆಣ್ಣನ್ನು ನಮಗೆ ಕಾಣಿಸುತ್ತದೆ. ಡೈವೋರ್ಸ್ ಎನ್ನುವುದು ಆಕಾಶ ಕಳಚಿ ಬಿದ್ದ ದುರಂತವಾಗದೆ, ಬದುಕಿನ ಸಣ್ಣ ಹಿನ್ನೆಡೆಯೋ ಅಥವಾ ಹೊಂದಾಣಿಕೆಯಿಲ್ಲದ ದಾಂಪತ್ಯದಿಂದ ಹೊರಬಂದದ್ದೇ ನಿಸೂರಾಯಿತು ಎನ್ನುವ ಪರಿಹಾರ ಭಾವದಲ್ಲಿಯೋ ಅಪ್ಪ ಅಮ್ಮ ಅದನ್ನು ಎದುರಾಗಲು ಬೇಕಾದ ಅವಕಾಶವನ್ನು ಶಿವಲೀಲಾ ಸೃಷ್ಟಿಸುತ್ತಾಳೆ.

ಅಕ್ಕಮ್ಮ ಗಂಡನ ದುರಾಸೆ, ಸ್ತ್ರೀಲೋಲುಪತೆಯನ್ನು ಆಘಾತದಿಂದಲೇ ಎದುರಿಸುತ್ತಾಳೆ. ನಂಬಿಕೆಯನ್ನು ಕಳೆದುಕೊಂಡ ಗಂಡನನ್ನು ಇವಳೂ ಶಿವಲೀಲಾಳಷ್ಟೇ ಮಾಗಿದ ಮನಸ್ಥಿತಿಯಲ್ಲಿ, ಅಪ್ರಿಯ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಯಲ್ಲಿ ಸ್ವೀಕರಿಸುತ್ತಾಳೆ. ಈ ಇಬ್ಬರಲ್ಲೂ ನಾವು ಗಮನಿಸಬೇಕಾದ ಒಂದು ಸಾಮಾನ್ಯ ಅಂಶವೆಂದರೆ, ಯಾವ ರಾಜಿ ಮನೋಭಾವ ಆ ದಾಂಪತ್ಯಗಳನ್ನು ಉಳಿಸ ಬಹುದಾಗಿತ್ತೋ ಆ ರಾಜಿ ಮನೋಭಾವದಿಂದ ಹೊರಬಂದಿರುವುದು. ದಾಂಪತ್ಯವನ್ನು ಉಳಿಸಿಕೊಳ್ಳುವುದೋ, ಆತ್ಮಘನತೆಯನ್ನು ಉಳಿಸಿಕೊಳ್ಳುವುದೋ ಎನ್ನುವ ಎರಡು ಆಯ್ಕೆಗಳಲ್ಲಿ ಇವರಿಬ್ಬರೂ ಎರಡನೆಯದನ್ನೇ ಆರಿಸಿಕೊಳ್ಳುತ್ತಾರೆ. ಜಾಣ ಕುರುಡು ಮತ್ತು ಕಿವುಡುಗಳು ದಾಂಪತ್ಯದ ಸಿದ್ಧಸೂತ್ರಗಳು ಎನ್ನುವುದನ್ನು ಹೆಣ್ಣಿಗೆ ಯಾವಾಗಲೂ ಹೇಳಿಕೊಡಲಾಗುತ್ತದೆ. ಆದರೆ ತಲೆಮಾರುಗಳಿಂದ ಹೆಣ್ಣು ಕಲಿಯುತ್ತಲೇ ಬಂದ ಈ ಪಾಠ(!)ವನ್ನು ಇವರಿಬ್ಬರೂ ಅದು ಪಾಠವಲ್ಲ, ಪಾಪ ಎನ್ನುವ ಸ್ಪಷ್ಟತೆಯಲ್ಲಿ ನಿರಾಕರಿಸುತ್ತಾರೆ.

ಅಕ್ಕಮ್ಮನ ಬದುಕಿನಲ್ಲಿ ಇನ್ನೊಬ್ಬ ಗಂಡಿನ ಅಸ್ತಿತ್ವವೂ ಇದೆ. ಮದುವೆಯಾಗಿರುವ ರಾಮಚಂದ್ರನ ಜೊತೆ ತನಗಿರುವ ಸಂಬಂಧವನ್ನು ಯಾವ ಸಂಕೋಚವಿಲ್ಲದೆ ಇವಳು ಸ್ವೀಕರಿಸಿದ್ದಾಳೆ. ಎರಡನೆಯ ಹೆಂಡತಿಯ, ಇಟ್ಟುಕೊಂಡವಳ, ಸಾಮಾಜಿಕ ಸ್ಥಾನಮಾನಗಳ ಕೊರತೆಯಿರುವ ಈ ಸಂಬಂಧದಲ್ಲಿ ಇವಳಿಗೆ ತನಗೆ ಅಂತಿಮವಾಗಿ ಸಿಗುವ ಪ್ರೀತಿ ಮತ್ತು ಗೌರವಗಳೇ ಮುಖ್ಯವಾಗಿ, ಲೋಕವೇ ಗೌಣವಾಗಿ ಬಿಡುತ್ತದೆ. ಇದೇ ಪಲ್ಲಟದ ನಿರ್ಣಾಯಕ ಅಂಶ. ಅತ್ತೆ ಮಾವರಿಗಂಜಿ ಸುತ್ತೇಳು ನೆರೆಗಂಜಿ ಬದುಕುವ ಆವರಣವನ್ನು ಇಲ್ಲಿನ ಮೂವರೂ ವಿಸರ್ಜಿಸಿದ್ದಾರೆ, ಸ್ವ-ಅಧಿಕೃತತೆಯನ್ನು, ಆಯ್ಕೆಯನ್ನು, ಇರುವುದೊಂದೇ ಬದುಕಿನಲ್ಲಿ ತನಗೆ ಬೇಕಾದ್ದನ್ನು ಪಡೆಯುವುದು ತನ್ನ ಹಕ್ಕು ಎನ್ನುವ ಪ್ರಾಕೃತಿಕ ಹಕ್ಕನ್ನು ಇವರು ತೆರೆದ ತೋಳುಗಳಿಂದ ಆಹ್ವಾನಿಸುತ್ತಾರೆ. ಶಿವಲೀಲಾ ತನ್ನ ಮಗ ಶಿವದರ್ಶನನನ್ನು ತಾನು ಗಂಡಿನ ಸಂಸರ್ಗವೇ ಇಲ್ಲದೇ ಪಡೆದೆನೇನೋ ಎನ್ನುವ ಧರ್ತಿಯಲ್ಲಿ ಸಾಕುತ್ತಿದ್ದಾಳೆ. ತಾಯ್ತನವು ತನ್ನಷ್ಟಕ್ಕೆ ತಾನು ಸ್ವಯಂಪೂರ್ಣ ಎನ್ನುವ ಘನತೆ ಅವಳನ್ನು ತುಂಬಿದೆ. ಅಯ್ಯೋ ಅಪ್ಪನೊಲ್ಲದ ಕೂಸು ಎನ್ನುವ ಪಾಪಪ್ರಜ್ಞೆ ಇವಳನ್ನು ಘಳಿಗೆಯಮಟ್ಟಿಗೂ ಕಾಡುವುದಿಲ್ಲ. ಇವೆಲ್ಲ ಬಹಳ ಸುಲಭ ಎಂದಲ್ಲ, ಆದರೆ ಯಾವಾಗ ಹೆಣ್ಣಿನಲ್ಲಿ ಸ್ವಪ್ರಜ್ಞೆ ಜಾಗೃತವಾಗುತ್ತದೋ ಆಗ ಅವಳು ಇದನ್ನು ಹಂತಹಂತವಾಗಿ ಸಾಧಿಸುತ್ತಾ ಹೋಗುತ್ತಾಳೆ. ಅವಳ ಮನಸ್ಸಿನಲ್ಲಿ ತುಮುಲಯುದ್ಧಗಳು ನಡೆದಿವೆ ಮತ್ತು ನಡೆಯುತ್ತಲೂ ಇರಬಹುದು. ಆದರೆ ಈ ತುಮುಲಗಳು ನಿಧಾನವಾಗಿ ಅವಳನ್ನು ಗಟ್ಟಿಯಾಗಿಸುತ್ತಾ ಹೋಗುತ್ತವೆ.

ಮೂರನೆಯವಳಾದ ಶ್ರೀದೇವಿ ಇಲ್ಲಿಂದ ಇನ್ನೂ ಒಂದು ಹೆಜ್ಜೆ ಮುಂದುಹೋಗುವ ದ್ವಂದ್ವದಲ್ಲಿದ್ದಾಳೆ. ಮದುವೆಯ ಹಂಗಿಲ್ಲದ ಸಖ್ಯವೊಂದಕ್ಕೆ ಹಂಬಲಿಸುತ್ತಿರುವ ಇವಳು ತನ್ನಲ್ಲಿಲ್ಲದ ಸ್ಪಷ್ಟತೆ ಮತ್ತು ಗಟ್ಟಿತನದ ಕಾರಣಕ್ಕಾಗಿ ಸವಾಲುಗಳನ್ನು ಎದುರಿಸುತ್ತಾಳೆ. ಬದುಕನ್ನು ಇನ್ನೂ ಗಂಭೀರವಾಗಿ ತೆಗೆದುಕೊಳ್ಳಲಾಗದ ಹುಡುಗಾಟಿಕೆಯೂ ಸೇರಿ ಅವಳಲ್ಲಿ ಇನ್ನೂ ಸಾಹಸಗಳನ್ನು ಮಾಡುವ ಉತ್ಸಾಹ ಉಳಿದಿದೆ.

ತಂದೆ ತಾಯಿಯರು ಇವರನ್ನು, ಇವರ ಲೋಕಕ್ಕೆ ವಿಚಿತ್ರವಾಗಿ, ತೊಡಕಿನದ್ದಾಗಿ, ತಪ್ಪಾಗಿ ಕಾಣಬಹುದಾದ ಬದುಕಿನ ವಿನ್ಯಾಸಗಳನ್ನು ಕಷ್ಟದಿಂದಲೇ ಎದುರಾಗುತ್ತಿದ್ದಾರೆ. ಆದರೆ ಮಿಕ್ಕ ತಂದೆ-ತಾಯಿಯರಂತೆ ಇವರು ವರ್ತಿಸದೇ ಇರುವುದಕ್ಕೆ ನಾಯಕಿಯರೇ ಕಾರಣ. ಅಪ್ಪ ಅಮ್ಮನಿಗೆ ಭಾರವಾಗದ, ಅವರನ್ನು ಹೊಣೆಯಾಗಿಸದ ಮಾತ್ರವಲ್ಲ ತಮ್ಮ ತಮ್ಮ ಬದುಕಿನಲ್ಲಿ ಅವರು ಸಂತೋಷವಾಗಿರುವ ಸತ್ಯದ ಎದುರಿಗೆ ಅವರನ್ನು ಪ್ರಶ್ನಿಸುವ ಅಥವಾ ಅದು ತಪ್ಪು ಎಂದು ಅಪ್ಪ ಅಮ್ಮಂದಿರ ಅಧಿಕಾರದಲ್ಲಿ ಮಾತನಾಡಲು ಅವರು ಸಂಪೂರ್ಣವಾಗಿ ಹಿಂಜರಿಯುವಷ್ಟು ಈ ಹೆಣ್ಣುಮಕ್ಕಳು ಗಟ್ಟಿಗಿತ್ತಿಯರಾಗಿದ್ದಾರೆ, ತಮಗೆ ಒಪ್ಪಿಗೆಯಾಗದೇ ಇರಬಹುದು, ಆದರೆ ಕೊನೆಗೂ ಇದು ಅವರ ಬದುಕು, ಅದರ ಮೇಲೆ ತಮಗೆ ಯಾವ ಅಧಿಕಾರವೂ ಇಲ್ಲ ಎನ್ನುವುದನ್ನು ಇವರಿಬ್ಬರೂ ಅರ್ಥಮಾಡಿಕೊಂಡವವರಂತೆ ಕಾಣುತ್ತಾರೆ. ಎಲ್ಲವೂ ಚಂದಮಾಮದ ಕತೆಯಷ್ಟು ಸರಳ, ಸುಸೂತ್ರ ಎಂದಲ್ಲ. ಆದರೆ ತಲೆಮಾರುಗಳ ಅಂತರವನ್ನು ಪರಸ್ಪರ ಪ್ರೀತಿ ಮತ್ತು ಗೌರವದಲ್ಲಿ ಹೇಗೆ ಎದುರಿಸಬಹುದು ಎನ್ನುವುದನ್ನು ಇಲ್ಲಿನ ಎಲ್ಲರೂ ಪ್ರಯತ್ನಿಸುತ್ತಿರುವಂತೆ ಕಾಣಿಸುತ್ತದೆ.

ಕಾದಂಬರಿಗೆ ಹಲವು ಮಿತಿಗಳಿವೆ ಎನ್ನುವುದು ನಿಜ. ಇನ್ನೂ ಸಂಕೀರ್ಣವಾಗಿರಬಹುದಿತ್ತು ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಆರಂಭದಲ್ಲಿ ಹೇಳಿದಂತೆ ಈ ಪ್ರಯೋಗವೇ ಅಮರೇಶರ ಮೇಲಿನ ನನ್ನ ಗೌರವ ಮತ್ತು ನಂಬಿಕೆಯನ್ನು ಹೆಚ್ಚಿಸಿದೆ. ಈ ಕಾಲವು ಕಾಯುತ್ತಿದ್ದ ಕೃತಿಯನ್ನು ಉತ್ಕಟವಾಗಿ ಕಟ್ಟಿಕೊಟ್ಟ ಅಮರೇಶರಿಗೆ ಪ್ರೀತಿ ಮತ್ತು ಕೃತಜ್ಞತೆ.

achchigoo modalu ashadevi

ಹಿರಿಯ ವಿಮರ್ಶಕಿ ಡಾ. ಎಂ. ಎಸ್. ಆಶಾದೇವಿ

*

ಪರಿಚಯ : ಡಾ. ಅಮರೇಶ ನುಗಡೋಣಿಯವರು ಜನಿಸಿದ್ದು ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು. ಇವರ ಕವನ ಸಂಕಲನಗಳು; ನೀನು, ಅವನು, ಪರಿಸರ. ಕಥಾ ಸಂಕಲನಗಳು; ಮಣ್ಣು ಸೇರಿತು ಬೀಜ, ಅರಿವು, ತಮಂಧದ ಕೇಡು, ಮುಸ್ಸಂಜೆಯ ಕಥಾನಕಗಳು, ಸವಾರಿ, ಬುತ್ತಿ, ಚುಕ್ಕಿಮದುವೆ ಪ್ರಸಂಗ, ದಡ ಸೇರಿಸು ತಂದೆ. ಕಾದಂಬರಿ : ದಂದುಗ,  ವ್ಯಕ್ತಿ ಪರಿಚಯ : ಶ್ರೀಕೃಷ್ಣ ಆಲನಹಳ್ಳಿ (ಬದುಕು ಬರಹ). ಸಂಪಾದಿತ ಕೃತಿಗಳು : ಬಿಸಿಲ ಹನಿಗಳು. ಕಲ್ಯಾಣ ಕರ್ನಾಟಕ, ಗ್ರಾಮಾಯಣ, ಹರಿಶ್ಚಂದ್ರ ಚಾರಿತ್ರ, ಪುರಂದರ ಸಾಹಿತ್ಯ ಅಧ್ಯಯನ, ಕಥೆ ಹುಟ್ಟುವ ಪರಿ, ಜೈಮಿನಿ ಭಾರತ, ಶೂನ್ಯ ಸಂಪಾದನೆಗಳು. ಪುರಸ್ಕಾರಗಳು : ಜಯತೀರ್ಥ ರಾಜಪುರೋಹಿತ ಸ್ಮಾರಕ ದತ್ತಿ ಕಥಾ ಪ್ರಶಸ್ತಿ, ಮಣ್ಣು ಸೇರಿತು ಬೀಜ ಕಥಾ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಬಹುಮಾನ ಮತ್ತು ಸರ್. ಎಂ.ವಿಶ್ವೇಶ್ವರಯ್ಯ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ.

ಪ್ರತಿಗಳಿಗಾಗಿ ಸಂಪರ್ಕಿಸಿ : ಪಲ್ಲವ ಪ್ರಕಾಶನ 9480353507

ಇದನ್ನೂ ಓದಿ New Book ; ಅಚ್ಚಿಗೂ ಮೊದಲು : ಒಂದೇ ಕೆಟಿಲಿಯಿಂದ ಸುರಿದರೂ ಎರಡೂ ಭಿನ್ನ ಭಿನ್ನ

Published On - 1:21 pm, Sat, 10 July 21

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ